ಕೋಮುವಾದದ ಮೂಲ ಬೇರುಗಳು

ಕೋಮು ಮಾನಸಿಕತೆ ಮತ್ತು ಕೋಮು ಹಿಂಸೆ ಇವೆರಡೂ ಭಿನ್ನ ಭಿನ್ನವಾದ ಅಂಶಗಳು. ಕೋಮು ಮಾನಸಿಕತೆಗೆ ಬಹಳ ದೊಡ್ಡ ಇತಿಹಾಸ ಇದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ಬ್ರಿಟಿಷ್ ಒಡೆದಾಳುವ ನೀತಿಯಿಂದ ಕೋಮು ಮಾನಸಿಕತೆ ಮೊಳಕೆಗೊಂಡು ನಂತರ ಬೆಳೆಯುತ್ತಲೇ ಹೋಯಿತು. ಅದರ ಇತಿಹಾಸದ ಸಾಕಷ್ಟು ಅಂಶಗಳು ಎಲ್ಲರಿಗೂ ತಿಳಿದಿದೆ. ಆದರೆ ಇದರ ತೀವ್ರತೆಯ ಮಟ್ಟಕ್ಕೆ ಕಾರಣ ಯಾರು ಅಥವಾ ಯಾವುದು, ಯಾವ ಪರಿಸ್ಥಿತಿಗಳು ಎನ್ನುವುದರ ಬಗ್ಗೆ ಒಂದು ಮೇಲ್ನೋಟದ ವಿಮರ್ಶೆಯನ್ನು ಮಾಡಲು ಪ್ರಯತ್ನ ಮಾಡುತ್ತೇನೆ.

1958ರ ಕಾಲಘಟ್ಟದಲ್ಲಿಯೇ ಬಾಬರಿ ಮಸೀದಿಯ ಮೂರು ಕಡೆ ಬೇಲಿ ಹಾಕಿ, ಈಶಾನ್ಯ ದಿಕ್ಕಿನಲ್ಲಿ ಮಾತ್ರ ಬರಬೇಕು ಎಂದು ನಿಯಮ ಮಾಡಿದರು. 1906ರಲ್ಲಿ ಮುಸ್ಲಿಂ ಲೀಗ್, ನಂತರ ಸ್ವಲ್ಪೇ ಸಮಯದಲ್ಲಿ ಹಿಂದೂ ಮಹಾಸಭಾ ಹುಟ್ಟಿಕೊಂಡಿತು. ಮೊದಲು ಸಣ್ಣ ರೂಪದಲ್ಲಿ ಇದ್ದ ಸಂಘರ್ಷ ಬೆಳೆಯುತ್ತಾ ಬಂದಿತು.

ಗಾಂಧೀಜಿ ಬಗ್ಗೆ ಅಪಾರ ಗೌರವ ನಮಗೆ ಇದೆ. ಆದರೆ ಸ್ವಾತಂತ್ರ್ಯ ಪೂರ್ವದ ಒಂದು ಘಟನೆಯನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಲು ಇಷ್ಟಪಡುತ್ತೇನೆ. ಅದೇನೆಂದರೆ, 30ರ ದಶಕದ ಆರಂಭದಲ್ಲಿ ಹುಟ್ಟಿಕೊಂಡ ಖಿಲಾಫತ್ ಚಳವಳಿ. ತುರ್ಕಿಸ್ತಾನದಲ್ಲಿ ಖಲೀಫನ ಆಡಳಿತ ಕೊನೆಗೊಂಡಿತು. ಬ್ರಿಟಿಷರು ತುರ್ಕಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆಗ ಭಾರತದಲ್ಲಿ ಮುಸ್ಲಿಮರು ಕಲೀಫನನ್ನು ಪುನಃ ಅಧಿಕಾರಕ್ಕೆ ತರಬೇಕು ಎಂದು ಖಿಲಾಫತ್ ಚಳವಳಿ ಆರಂಭಿಸಲು ಸಭೆ ನಡೆಸಿದರು. ಇದಕ್ಕೆ ಗಾಂಧೀಜಿಯೇ ದೊಡ್ಡ ಪ್ರೇರಣೆ. ಆ ಸಭೆಯಲ್ಲಿ ಮಹಮ್ಮದ್ ಅಲಿ ಜಿನ್ನಾ ಕೂಡ ಇದ್ದರು. ಗಾಂಧೀಜಿಯ ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಯಾಕಂದ್ರೆ, ಇವತ್ತಿಗೂ ನಾವೆಲ್ಲರೂ ಮಾತನಾಡುತ್ತಿರುವಂತೆ ರಾಜಕೀಯದಲ್ಲಿ ಮತಧರ್ಮವನ್ನು ಸೇರಿಸಕೂಡದು ಎನ್ನುವುದು. ಯಾಕೆಂದರೆ, ತುರ್ಕಿಸ್ತಾನದಲ್ಲಿ ಖಲೀಫನ ಸ್ಥಾನ ಹೋದರೆ ಭಾರತದ ಮುಸ್ಲಿಮರಿಗೆ ಇದರಿಂದ ಏನು ಪ್ರಯೋಜನ ಎಂದು ಬಹಳ ಖಂಡತುಂಡವಾಗಿ ಜಿನ್ನಾ ಅದನ್ನು ಖಂಡಿಸಿದರು. ಆಗ ಗಾಂಧೀಜಿ ಅವರತ್ತ ಇರುವ ಶೌಕತ್ ಅಲಿ, ಮೊಹಮ್ಮದ್ ಅಲಿ ಅವರು ಜಿನ್ನಾ ಅವರ ಕೊರಳ ಪಟ್ಟಿ ಹಿಡಿದು ಹಲ್ಲೆ ನಡೆಸಿದರು.

ಈ ಘಟನೆ ಏನನ್ನು ಸೂಚಿಸುತ್ತದೆ? ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಬಹಳ ಶುದ್ಧಾಂಗವಾಗಿದ್ದು, ಇಡೀ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಪಕ್ಷದ ಒಳಗಡೆಯೇ ಕೋಮು ಮಾನಸಿಕತೆಯನ್ನು ಬೆಳೆಸಿತು ಎನ್ನುವ ವಿಚಾರ ಅಲ್ಲಿ ನಾವು ಕಂಡುಕೊಳ್ಳಬಹುದು.

1948ರಲ್ಲಿ ತೀವ್ರ ಕೋಮು ಮಾನಸಿಕತೆ ಉಳ್ಳ ವ್ಯಕ್ತಿಯಿಂದ ಗಾಂಧಿ ಹತ್ಯೆ ಆಯಿತು. 1949ರಲ್ಲಿ ಬಾಬರಿ ಮಸೀದಿಯಲ್ಲಿ ಡಿ.22ರಂದು ಮಧ್ಯರಾತ್ರಿ ರಾಮ, ಸೀತೆ, ಲಕ್ಷ್ಮಣ, ಹನುಮಂತನ ಮೂರ್ತಿಗಳನ್ನು ಇಟ್ಟು ಬಹಳ ದೊಡ್ಡ ಹುಯಿಲು ಎಬ್ಬಿಸಲಾಯಿತು. ಮುಸ್ಲಿಂ ಪಂಗಡಗಳು ತಮಗೆ ನ್ಯಾಯ ಕೊಡಿಸಿ ಎಂದು ಜವಾಹರ ಲಾಲ್ ನೆಹರು ಬಳಿ ನಿಯೋಗ ತೆಗೆದುಕೊಂಡು ಹೋದರು. ಆಗ, ಅಲ್ಲಿರುವ ಮೂರ್ತಿಗಳನ್ನು ಕಿತ್ತು ಬಿಸಾಡಿ ನ್ಯಾಯ ಒದಗಿಸಬೇಕು ಎಂದು ಗೌವರ್ನರ್ ಗೋವಿಂದ ವಲ್ಲಭ ಪಂತ್ ಅವರಿಗೆ ನೆಹರು ಆದೇಶಿಸಿದರು. ಆದರೆ ಅದು ನೆರವೇರಲೇ ಇಲ್ಲ. ಯಾಕಂದ್ರೆ ಅಷ್ಟರೊಳಗೆ ನ್ಯಾಯಾಲಯ ತಡೆಯಾಜ್ಞೆಯನ್ನು ಕೊಟ್ಟಿತ್ತು. ಹಾಗಾಗಿ ಅದು ಹೈಜಾಮಾದ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಹಾಗೇ ಬಿದ್ದುಕೊಂಡಿತ್ತು. 1984ರ ನಂತರ ಗಲಭೆಯ ಸಮಯ, ಇಂದಿರಾಗಾಂಧಿ ಹತ್ಯೆ ಆದ ನಂತರ ರಾಜೀವ್ ಗಾಂಧಿಗೆ ಅತ್ಯಂತ ಹೆಚ್ಚಿನ ಬೆಂಬಲದೊಂದಿಗೆ ಪಾರ್ಲಿಮೆಂಟ್ ನಲ್ಲಿ ಅಧಿಕಾರಕ್ಕೆ ಬಂದ ಕಾಲಘಟ್ಟದಲ್ಲಿ ಕ್ರಮೇಣ ಕೋಮು ಸಾಮರಸ್ಯ ಕದಡುವ ಪ್ರಕರಣಗಳು ಹೆಚ್ಚಾಗತೊಡಗಿದವು. ಇದರಲ್ಲಿ ಶಾಬಾನು ಪ್ರಕರಣವೂ ಒಂದು.

ಮುಸ್ಲಿಂ ಹೆಣ್ಣುಮಗಳು ಶಾಬಾನು. ಅವಳ ಗಂಡ ತಲಾಕ್ ಕೊಟ್ಟು ಬೇರೊಂದು ಮದುವೆ ಆದ. ಆಕೆಗೂ ಹಲವು ಮಕ್ಕಳಿದ್ದವು. ಶಾಬಾನು ಜೀವನಾಂಶ ಕೇಳಿ ನ್ಯಾಯಾಲಯಕ್ಕೆ ಹೋದಳು. ನ್ಯಾಯಾಲಯ ಆಕೆಗೆ ಬಹಳ ಕಡಿಮೆ 25 ರೂ. ಪರಿಹಾರ ಕೊಡಿಸಿತು. ಆಕೆಯ ಗಂಡ ಒಬ್ಬ ವಕೀಲ. ಕೋರ್ಟ್ ನ ಮೇಲೆ ಕೋರ್ಟ್ ಗೆ ಹೋಗಿ ಕೊನೆಗೆ ಸುಪ್ರೀಂ ಕೋರ್ಟ್ 162.70 ರೂ. ಪರಿಹಾರ ಒದಗಿಸಿ ಕೊಟ್ಟಿತು. ಇದನ್ನು ಸಂಸತ್ತಿನಲ್ಲಿ ತೀವ್ರವಾಗಿ ವಿರೋಧಿಸಲಾಯಿತು. ಮುಸ್ಲಿಂ ಮತಾಂಧ ವ್ಯಕ್ತಿಗಳು ದೇಶದಲ್ಲಿ ಗಲಭೆ ಮಾಡಲು ಆರಂಭಿಸಿದರು.

ಆಗ ಸಂಸತ್ತಿನಲ್ಲಿ ಒಂದು ಹೊಸ ತಿದ್ದುಪಡಿಯನ್ನು ತರಲಿಕ್ಕೆ ಪ್ರಯತ್ನಪಟ್ಟು, ಕೊನೆಗೆ ಅದರಲ್ಲಿ ಯಶಸ್ವಿಯೂ ಆದರು. ತಿದ್ದುಪಡಿಯ ಮೂಲಕ ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಪ್ರತಿಯಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಶರಿಯತ್ ಪ್ರಕಾರವೇ ಮುಸ್ಲಿಂ ಸಮುದಾಯದ ಪ್ರಕರಣಗಳು ಇತ್ಯರ್ಥ ಆಗಬೇಕು ಎಂದು ಕಾನೂನು ರೂಪಿಸಲಾಯಿತು. ಇದರಿಂದ ಎಲ್ಲವೂ ಓಟು ಬ್ಯಾಂಕ್ ರಾಜಕೀಯ ಎನ್ನುವುದು ಸ್ಪಷ್ಟವಾಯಿತು.

ಆದರೆ ಇಷ್ಟಾಗುವಾಗ ಬಹುತೇಕ ಮುಸ್ಲಿಮೇತರ ಸಮುದಾಯ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ದೊಡ್ಡ ಗಲಾಟೆ ಮಾಡಿದರು. ಆ ಗಲಾಟೆಯನ್ನು ತಣಿಸಲು ಬಾಬರಿ ಮಸೀದಿಯ ಬೀಗವನ್ನು ತೆಗೆಸಲಾಯಿತು. ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನು ತೆಗೆಸುವುದು ಹೇಗೆ? 20-25 ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಅದನ್ನು ತೆರೆಯಲು ಹೇಗೆ ಸಾಧ್ಯ ಆಗುತ್ತೆ?

ಆದರೆ ಜಿಲ್ಲಾಧಿಕಾರಿಗೆ ಪಾಂಡೆ ಎನ್ನುವವನೊಬ್ಬ ನನಗೆ ಪೂಜೆ ಮಾಡಲು ಅನುಮತಿ ಕೊಡಬೇಕು ಎಂದು ಪತ್ರ ಬರೆಯುತ್ತಾನೆ. ಮತ್ತೊಬ್ಬ ರೆವಿನ್ಯೂ ಅಥಾರಿಟಿಯವನೊಬ್ಬ ಇವನು ಕೇಳುತ್ತಿರುವುದು ಸರಿ ಎಂದು ಹೇಳುತ್ತಾನೆ. ಡಿಸಿ ಬೀಗ ತೆಗೆಯಲು ಅಪ್ಪಣೆ ಕೊಟ್ಟು ಬಿಡುತ್ತಾನೆ. ಆಗ ಬೀಗ ತೆಗೆಯಲಾಗುತ್ತದೆ. ಟಿವಿಯಲ್ಲೆಲ್ಲ ಅದು ಪ್ರಸಾರ ಆಗುತ್ತೆ. ಮಂಗಳಾರತಿ ಆಗುತ್ತೆ. ಇದೆಲ್ಲದರ ಪರಿಣಾಮ ಏನಾಯ್ತು ಎಂದರೆ, 1984ರವರೆಗೆ ಕೇವಲ 2 ಇದ್ದ ಸಂಘಪರಿವಾರದಿಂದ ಟಿಕೆಟ್ ತೆಗೆದುಕೊಂಡು ಗೆದ್ದ ಎಂಪಿಗಳ ಸಂಖ್ಯೆ 1989ರ ಹೊತ್ತಿಗೆ 85ಕ್ಕೆ ಏರಿತು. 91ನೇ ಇಸವಿ ಆಗುವಾಗ 119ಕ್ಕೆ ಏರಿತು. ಆನಂತರ 1989ಕ್ಕೆ ಶಿಲಾನ್ಯಾಸ ಆಯಿತು. 1991ರಲ್ಲಿ ಅಡ್ವಾಣಿಯಿಂದ ರಥಯಾತ್ರೆ ನಡೆಯಿತು. 1992ರಲ್ಲಿ ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಉರುಳಿ ಬಿತ್ತು.

ಹೀಗಾಗಿ, ಕೋಮು ಮಾನಸಿಕತೆಯ ಪ್ರಕ್ರಿಯೆ ಎನ್ನುವುದು ಕೇವಲ ಇವರ ತಪ್ಪಿನಿಂದ ಆಯಿತು ಎನ್ನುವುದನ್ನು ಹೇಳುವುದು ಕಷ್ಟಸಾಧ್ಯ. ಯಾಕಂದ್ರೆ ಕಾಂಗ್ರೆಸ್ ಕೂಡ ಇದಕ್ಕೆ ತನ್ನ ಕೊಡುಗೆ ತೀವ್ರವಾಗಿ ನೀಡಿತ್ತು. ಬಾಬರಿ ಮಸೀದಿ ಧ್ವಂಸ ಆಗುವವರೆಗೂ ಕಾಂಗ್ರೆಸ್ ಕೂಡ ಇದಕ್ಕೆಲ್ಲ ಕಾರಣವಾಗಿಯೇ ಇತ್ತು. ಪಿ.ವಿ.ನರಸಿಂಹರಾಯರು ಮನೆಯೊಳಗೆ ದೇವರ ಕೋಣೆಯಲ್ಲಿದ್ದರು. ಕೊನೆಗೆ ಮಸೀದಿಯೆಲ್ಲ ಉರುಳಿ ಬಿದ್ದ ಮೇಲೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಎಂದು ಹೇಳಿಕೆ ಕೊಟ್ಟರು.

ಇನ್ನು ನಂತರದ ಕಾಲಘಟ್ಟದಲ್ಲಿ ಏನೇನು ನಡೆಯಿತು? ಇವುಗಳೆಲ್ಲ ಓಟುಗಳಾಗಿ ಹೇಗೆ ಪರಿವರ್ತನೆಗೊಂಡವು? ಆ ಕೋಮು ಸಂಘರ್ಷ ಹೇಗೆ ತೀವ್ರಗೊಂಡಿತು? ಎನ್ನುವುದನ್ನು ಅಲ್ಲಿಂದೀಚೆಗೆ ನಿರಂತರವಾಗಿ ನಾವು ನೋಡುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸರಸ್ವತಿ, ಸೀತೆಯ ನೆಪದಲ್ಲಿ ಚಿತ್ರಿಸಿದ್ದನ್ನು ನೆಪ ಮಾಡಿಕೊಂಡು ಎನ್.ಎಫ್.ಹುಸೇನ್ ರ ಸ್ಟುಡಿಯೋವನ್ನು ಹಾಳು ಮಾಡಿದ್ದು ನಿಮಗೆಲ್ಲ ಗೊತ್ತಿದೆ. ಆದರೆ ನಮ್ಮ ಸಂಸ್ಕೃತ ಸಾಹಿತ್ಯದಲ್ಲಿ ಈ ಆಧುನಿಕ ವ್ಯಾಲೆಂಟೈನ್ಸ್ ಡೇ ಗೂ ಮೀರಿದಂತೆ ಕದಂಬೋತ್ಸವ, ಮದನೋತ್ಸವ, ವಸಂತೋತ್ಸವಗಳು ನಡೆಯುತ್ತವೆ. ಇಡೀ ಜಗತ್ತಿಗೆ ಲೈಂಗಿಕ ಶಿಕ್ಷಣವನ್ನು ಕೊಟ್ಟವರೇ ಭಾರತೀಯರು. ವಾತ್ಸಾಯನ, ಕಾಮಸೂತ್ರಗಳ ಮೂಲಕ ಕೋನಾರ್ಕ್, ಖಜರಾಹು, ಬೇಲೂರು ಎಲ್ಲಿ ಹೋದರೂ ಕೂಡ ನಮಗೆ ನಗ್ನ ಮೂರ್ತಿಗಳೇ ಸಿಗುತ್ತವೆ. ಆದರೆ ಇವರ ಈ ನೈತಿಕತೆಯ ಮಾನದಂಡ ಯಾವುದು?

ರಾಜಕೀಯದ ಜೊತೆಗೆ ಮತಧರ್ಮವನ್ನು ಬೆರೆಸಬಾರದು ಎಂದು ಹೇಳಲಾಗುತ್ತದೆ. ಆದರೆ ಸಂವಿಧಾನದಲ್ಲಿ ಅದಕ್ಕೆ ತದ್ವಿರುದ್ಧವಾದ ಅಂಶಗಳು ಸಾಕಷ್ಟು ಇವೆ. ಮುಜರಾಯಿ ಇಲಾಖೆ ಇದೆ. ವಕ್ಫ್ ಮಂಡಳಿ ಇದೆ. ಅಮರನಾಥ, ಹಜ್ ಗೆ ಕಾಣಿಕೆ ಕೊಡಲಾಗುತ್ತೆ. ಹೀಗೆ ಮತಧರ್ಮ ವ್ಯಾಪಕವಾಗಿ ಸೇರಿಕೊಂಡಿರುವಾಗ ಅದನ್ನು ರಾಜಕೀಯದಿಂದ ಬೇರ್ಪಡಿಸುವುದು ಹೇಗೆ? ಯೂರೋಪಿನಲ್ಲಿ ಅದು ಸಾಧ್ಯವಾಯಿತು. ಅಲ್ಲಿ ರಾಜಕೀಯದಲ್ಲಿ ಮತಧರ್ಮವನ್ನು ಬೆರೆಸಕೂಡದು ಎಂದು ದೊಡ್ಡಮಟ್ಟದ ಜನಾಂದೋಲನ ನಡೆಯಿತು. ಮತಕ್ಕೂ ವಿಜ್ಞಾನಕ್ಕೂ ನಡುವೆ ದೊಡ್ಡ ಮಟ್ಟದಲ್ಲಿ ಸಂಘರ್ಷ ನಡೆದಿತ್ತು.

1851ರಲ್ಲಿ ಜಾರ್ಜ್ ಜಾಕೇಬ್ ಹೊಲ್ಯಾಕ್ ಎಂಬಾತ ಸೆಕ್ಯೂಲರ್ ಸೊಸೈಟಿಯನ್ನು ಸ್ಥಾಪಿಸುತ್ತಾನೆ. ಈ ಸೆಕ್ಯೂಲರ್ ಎನ್ನುವ ಪದ ಪ್ರಪ್ರಥಮ ಬಾರಿಗೆ ಬಳಸಿದ್ದೇ ಈ ಹೋಲ್ಯಾಕ್ ಅವರು. ಆತ ಸ್ಪಷ್ಟವಾಗಿ, ನಮ್ಮ ಭಾಗ್ಯವನ್ನು ನಿರ್ಣಯ ಮಾಡುವುದು ನಾವೇ. ಯಾವುದೇ ಧರ್ಮಗ್ರಂಥಗಳಲ್ಲ. ವಿಜ್ಞಾನ ಮಾತ್ರ ನಮ್ಮ ಜೀವನ, ಸಮಾಜವನ್ನು ನಿರೂಪಿಸುವ ಒಂದು ಸಾಧನ ಆಗಲಿ. ಯಾವುದೆಲ್ಲ ಇಹಸತ್ಯವೋ, ಯಾವುದೆಲ್ಲ ವಿಜ್ಞಾನದ ವೆರಿಫಿಕೇಶನ್, ಆಬ್ಸರ್ವೇಶನ್, ಎಕ್ಸಪೀರಿಮೆಂಟ್ ಇತ್ಯಾದಿಗಳ ಮೂಲಕ ಸಿದ್ಧವಾಗುವುದೋ ಅದು ಮಾತ್ರ ನಂಬಲು ಅರ್ಹವಾದುದಾಗಬೇಕು ಎಂದು ಹೇಳಿದ.

ಈ ಸೆಕ್ಯೂಲರ್ ಎಂಬ ಪದಕ್ಕೆ ಹಿಂದಿಯಲ್ಲಿ ಸಾಮಾನ್ಯವಾಗಿ ಧರ್ಮ ನಿರಪೇಕ್ಷತೆ ಎಂದು, ಕನ್ನಡದಲ್ಲಿ ಜಾತ್ಯತೀತತೆ ಎಂದು ಹೇಳಲಾಗುತ್ತದೆ. ಅವುಗಳನ್ನು ನಾನು ಇಲ್ಲಿ ಜಾತಿಯನ್ನು ಮೀರುವುದನ್ನು ವಿಶ್ಲೇಷಿಸುವ ಒಂದು ಅಂಶವನ್ನು ಸೆಕ್ಯೂಲರ್ ಎಂದು ಬಳಸಲು ಇಚ್ಛಿಸುತ್ತೇನೆ. ನಾನು ಇಲ್ಲಿ ಕೆಲವು ಚದುರಿ ಹೋದ ಅಂಶಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಇಂದು ಯಾರನ್ನು ಸೆಕ್ಯೂಲರ್ ಎಂದು ಕರೆಯಬೇಕು ಎನ್ನುವುದೇ ನನಗೆ ಗೊಂದಲದ ವಿಚಾರವಾಗಿದೆ. ಯಾಕಂದ್ರೆ ಸೆಕ್ಯೂಲರ್ ಎಂದು ಕರೆಸಿಕೊಳ್ಳುವವರಲ್ಲಿ ಒಂದಲ್ಲ ಒಂದು ದೃಷ್ಟಿಯಲ್ಲಿ ಅಪವ್ಯಾಖ್ಯಾನಗಳು ಇದ್ದೇ ಇವೆ. ಇಂಟಲೆಕ್ಚ್ಯೂವಲ್ ಹೈಟ್ಸ್ ಎಂದು ಕರೆಯುವಂತ ಉಪನಿಷತ್ತು, ಮೊದಲಾದ ಫಿಲಾಸಫಿಗಳು ಕೇವಲ ಫಿಲಾಸಫಿಕಲ್ ಶಬ್ದಗಳು. ಅವುಗಳನ್ನು ಶಂಕರಾಚಾರ್ಯ ಬರೆದಿದ್ದಾನೆ ಎನ್ನುವುದನ್ನೇ ಗುರಿ ಮಾಡಿಕೊಂಡು, ಶಂಕರಾಚಾರ್ಯ ಒಬ್ಬ ಗೂಂಡಾ, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎನ್ನುವ ಪುಸ್ತಕವನ್ನು ಬರೆದಂತಹ ಮಹಾನ್ ವಿಚಾರವಾದಿಗಳು ಎಷ್ಟು ಸೆಕ್ಯೂಲರ್ ಎಂದು ಚಿಂತಿಸಬೇಕಾಗಿದೆ.

ಭಗವದ್ಗೀತೆಯನ್ನು ಶಾಲೆಯಲ್ಲಿ ಇಂಟ್ರಡ್ಯೂಸ್ ಮಾಡುವುದು ತಪ್ಪು. ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥ ಅಲ್ಲ. ಮಕ್ಕಳಿಗೆ ಅದರ ಅಗತ್ಯ ಇಲ್ಲವೇ ಇಲ್ಲ. ಅದರ ಹಿಂದೆ ಬೇರೆ ಹುನ್ನಾರಗಳಿವೆ ಎನ್ನುವುದು ಅದು ಬೇರೆ ಪ್ರಶ್ನೆ. ಆದರೆ ಇದನ್ನು ಹೇಳುವುದರೊಟ್ಟಿಗೆ ಭಗವದ್ಗೀತೆಯನ್ನೇ ಧ್ವಂಸ ಮಾಡುವಂತೆ ವಿಮರ್ಶೆ ಮಾಡುವುದು ಎಷ್ಟು ಸರಿ? ಅದರಿಂದ ಏನಾಗುತ್ತೆ ಎನ್ನುವುದನ್ನು ಚಿಂತಿಸಬೇಕು.

ಭಗವದ್ಗೀತೆಯ ಬಗ್ಗೆ ಮಹಾತ್ಮಾ ಗಾಂಧಿಯವರೂ ವ್ಯಾಖ್ಯಾನ ನೀಡಿದ್ದಾರೆ, ತಿಲಕರು ಬರೆದಿದ್ದಾರೆ. ಯಾಕೆಂದರೆ ಅದೊಂದು ಫಿಲಾಸಫಿಕಲ್, ಇಂಟಲೆಕ್ಚ್ಯೂವಲ್ ವರ್ಕ್. ಅಂದರೆ ನಮ್ಮ ವಿರೋಧದ ಧಾಟಿ ಎನ್ನುವಂತದ್ದು, ಹೇಗೆ ಕೇವಲ ಒಂದು ಆಕ್ರೋಶ ಅಥವಾ ಯಾವುದೇ ಗ್ರಂಥವನ್ನು ಓದದೇ ಮಾಡಿರುವ ವಿಮರ್ಶೆ ಆಗಿರುವ ಸಾಧ್ಯತೆಗಳು ಬಹಳ ಹೆಚ್ಚು.

ಇನ್ನೊಂದು ಉದಾಹರಣೆ; ಇತ್ತೀಚೆಗೆ ತೀರಿ ಹೋದಂತಹ ಅನಂತಮೂರ್ತಿಯವರು ಮೋದಿ ಪ್ರಧಾನಿ ಆಗುವ ವಿಷಯಕ್ಕೆ ಹೇಳಿದ ಮಾತನ್ನು ತೆಗೆದುಕೊಳ್ಳೋಣ. ಮೋದಿ ಪ್ರಧಾನಿ ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎನ್ನುವ ಹೇಳಿಕೆಯನ್ನು ಕೊಟ್ಟರು. ಟಿವಿಯಲ್ಲಿ ಈ ಬಗ್ಗೆ ಚರ್ಚೆಯಾಯಿತು. ಆ ಚರ್ಚೆಯಲ್ಲಿ ಅವರು ಏನು ಹೇಳುತ್ತಾರೆ ಎಂದರೆ, ವಾಜಪೇಯಿಗೆ ಒಂದು ಆತ್ಮಸಾಕ್ಷಿ ಇತ್ತು. ಈ ಆತ್ಮಸಾಕ್ಷಿ ಈ ಮೋದಿಗೆ ಇಲ್ಲ ಎಂದು ಹೇಳುತ್ತಾರೆ. ಆದರೆ ವಾಜಪೇಯಿಗೆ ನಿಜಕ್ಕೂ ಅಂಥ ಒಂದು ಆತ್ಮಸಾಕ್ಷಿ ಇತ್ತಾ? ಅಟಲ್ ಬಿಹಾರಿ ವಾಜಪೇಯಿ 1998ರ ನಂತರ ಅವರ ಅಧಿಕಾರದ ಅವಧಿಯಲ್ಲಿ ಪೆಟ್ರೋಲ್ ದರವನ್ನು 35 ಬಾರಿ ಏರಿಸಿದರು. ಅದೇ 89 ರಿಂದ 98ರವರೆಗೆ ಕಾಂಗ್ರೆಸ್ ಸರಕಾರ ಪೆಟ್ರೋಲ್ ದರ ಏರಿಸಿದ್ದು ಬರೀ ಹತ್ತು ಬಾರಿ. ಅವಶ್ಯಕ ಬಡಬಗ್ಗರಿಗೆ ದವಸ ಧಾನ್ಯ ಇತ್ಯಾದಿ ಸಿಗುವ ಹಕ್ಕನ್ನು ನೀಡುತ್ತಿದ್ದ ವಸ್ತುಗಳ ಸಂಗ್ರಹಣಾ ಕಾಯ್ದೆಯನ್ನು ಪುಡಿ ಮಾಡಿದ್ದೇ ವಾಜಪೇಯಿ. ಆ ಕಾಯಿದೆಯ ಬೇರುಗಳನ್ನೇ ಕತ್ತರಿಸಿದ್ದು ವಾಜಪೇಯಿ.

ಗುಜರಾತ್ ನಲ್ಲಿ 2002ರಲ್ಲಿ ಅಂತಹ ನರಮೇಧ ಆದ ಸಂದರ್ಭದಲ್ಲಿ ವಾಜಪೇಯಿ, ತುಮ್ನೇ ರಾಜಧರ್ಮ ನಹಿ ನಿಭಾಯಾ. ರಾಜಧರ್ಮಕೋ ನಿಭಾವೋ.. ಎಂದು ಮೋದಿಗೆ ಹೇಳಿದರು. ಇದು ಅವರ ಅಧ್ಬುತ ವ್ಯಕ್ತಿತ್ವ ಎಂದು ಅನಂತಮೂರ್ತಿ ಅವರು ಬಣ್ಣಿಸಿದರು. ಆದರೆ ಹೀಗೆ ಹೇಳಿದ ಅಟಲ್ ಬಿಹಾರಿ ವಾಜಪೇಯಿ ಹದಿನೈದೇ ದಿನಕ್ಕೆ ಗೋವಾದ ಬಿಜೆಪಿ ಕಾರ್ಯಕಾರಿಣಿ ಮಂಡಳಿಯಲ್ಲಿ ಗುಜರಾತ್ ನಲ್ಲಿ ಏನು ನಡೆಯಿತೋ ಅದು ಸರಿಯಾಗಿಯೇ ಇದೆ. ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಮಾತನಾಡಿದರು. ಹಾಗಿದ್ದರೆ ಅನಂತಮೂರ್ತಿಯಂತವರಿಗೆ ಒಂದೇ ಸಿದ್ಧಾಂತದಡಿ, ಒಂದೇ ಪಕ್ಷದಡಿ ಕೆಲಸ ಮಾಡುತ್ತಿರುವಂತಹ ಈ ವ್ಯಕ್ತಿಗಳ ನಡುವೆ ವ್ಯತ್ಯಾಸ ಕಂಡರೆ, ಈ ಎಡಪಂಥೀಯ, ಸೆಕ್ಯೂಲರ್ ಆದಂತಹ ನಿಲುವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದು ನನ್ನ ಜಿಜ್ಞಾಸೆ.

ಈ ಎಲ್ಲ ಪರಿಸ್ಥಿತಿಗಳ ಫಲ ಏನಾಗಿದೆ ಎಂದರೆ, ಈ ಕೋಮು ಮಾನಸಿಕತೆ ಬೆಳೆಯುತ್ತಾ ಬೆಳೆಯುತ್ತಾ ಆಡಳಿತ ಯಂತ್ರದಲ್ಲಿಯೂ ತೀವ್ರವಾಗಿ ಸೇರಿಕೊಂಡಿದೆ. ಪೊಲೀಸ್ ವ್ಯವಸ್ಥೆಯಲ್ಲಿಯೂ ಸೇರಿಕೊಂಡಿದೆ. ಹಾಗಾಗಿ ಕೋಮು ಗಲಭೆ ಆದಾಗ ಅದು ಬಹಳ ತೀವ್ರ ಮಟ್ಟಕ್ಕೆ ಮುಟ್ಟಲು ಕಾರಣ ಆಗುತ್ತದೆ. ವಿಭೂತಿ ನಾರಾಯಣ ರಾಯ ಎನ್ನುವ ದೆಹಲಿಯ ಐಜಿ ಪೊಲೀಸ್ ಅಕಾಡೆಮಿಯ ಸ್ಕಾಲರ್ ಶಿಪ್ ನಿಂದ ಅವರು ಸಂಶೋಧನೆ ಮಾಡಿದ್ದಾರೆ. ಅವರು ಕಮ್ಯೂನಲಿಸಂ ಆ್ಯಂಡ್ ಇಂಡಿಯನ್ ಪೊಲೀಸ್ ಎಂಬ ಒಂದು ಗ್ರಂಥ ಬರೆದಿದ್ದಾರೆ. ಆ ಗ್ರಂಥದಲ್ಲಿ ಪೊಲೀಸ್ ಎಷ್ಟು ಭಯಾನಕವಾಗಿ ಕೋಮುವಾದಿಯಾಗಿ ಮಾರ್ಪಟ್ಟಿದ್ದಾರೆ ಎನ್ನುವ ಚಿತ್ರಣವನ್ನು ಕೊಟ್ಟಿದ್ದಾರೆ. ಯುರೋಪಿಯನ್ ದೇಶಗಳಲ್ಲಿ ಪೊಲೀಸ್ ಅಂದರೆ ಯಾವ ಭಯವಿಲ್ಲ. ಅವರೊಂದಿಗೆ ಜನ ಬಹಳ ಆತ್ಮೀಯತೆಯಿಂದ ಮಾತನಾಡಬಹುದಾಗಿದೆ. ಆದರೆ ಭಾರತದಲ್ಲಿ ಅಪಘಾತವೋ, ಕೊಲೆಯೋ ಮತ್ತೊಂದೋ ಆದರೆ ಸಾಕ್ಷಿ ಹೇಳಲು ಹೋಗುವ ವ್ಯಕ್ತಿಯ ಮೇಲೆಯೇ ನ್ಯಾಯಾಲಯ ಉಲ್ಟಾ ಹೊಡಿಯುತ್ತೆ. ಆದರೆ ಅಲ್ಲಿ ಎವಿಡೆನ್ಸ್ ಆಕ್ಟ್ ನ್ನೇ ಆ ರೀತಿ ತರಲಾಗಿದೆ. ನಮ್ಮಲ್ಲಿ ಕ್ರಿಮಿನಲ್ ಪ್ರೊಸಿಜರ್ ಕೋಡ್, ಎವಿಡೆನ್ಸ್ ಆ್ಯಕ್ಟ್ ಗಳು 1971-72ರಲ್ಲಿ ಬ್ರಿಟಿಷರು ಗುಲಾಮ ರಾಷ್ಟ್ರವನ್ನು ಆಳ್ವಿಕೆ ಮಾಡಲು ತಂದಂತ ಕಾನೂನುಗಳು. ಅವುಗಳಲ್ಲಿ ಯಾವುದೇ ರೀತಿಯಾದಂತಹ ಗಂಭೀರವಾದ ಬದಲಾವಣೆಗಳು ಆಗಲೇ ಇಲ್ಲ. ಹಾಗಾಗಿ ಈ ಪೊಲೀಸರು ರಾಕ್ಷಸರಾಗದೆ ಇನ್ನೇನಾಗಲು ಸಾಧ್ಯ? ಅವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ ಎನ್ನುವುದು ನನ್ನ ಪ್ರಶ್ನೆ.

ಮತ್ತೊಂದು ಕಡೆ ನ್ಯಾಯಾಂಗ ಕೂಡ ಅಷ್ಟೇ ಭಯಾನಕವಾದಂತದ್ದು. ಒಬ್ಬ ನಿವೃತ್ತ ನ್ಯಾಯಾಧೀಶ ಸೋಮಶೇಖರ ವರದಿಯನ್ನು ಈಗ ತಿರಸ್ಕರಿಸಲಾಗಿದೆ. ಆದರೆ ಆ ವರದಿ ಆವತ್ತಿನ ಬಿಜೆಪಿ ಸರಕಾರಕ್ಕೆ ಬೇಕಾಗುವ ಹಾಗೆ, ಅಪರಾಧಿಗಳನ್ನೆಲ್ಲ ರಕ್ಷಿಸಿ ಮಾಡಲ್ಪಟ್ಟಂತಹ ಒಂದು ವರದಿ. ಇಂದು ಪಕ್ಷಪಾತಿಯಾಗಿ ನಿರ್ಣಯಗಳನ್ನು ಕೊಡುವ ನ್ಯಾಯಾಧೀಶರನ್ನಾದರೂ ನಾವು ನಂಬುವುದು ಕಷ್ಟವಾಗಿದೆ. ಒಂದು ಪ್ರಕರಣದ ತೀರ್ಪಿಗೆ ವರ್ಷಾನುಗಟ್ಟಲೆ ಅಲೆಸುತ್ತಿರುವುದರಿಂದ ಪ್ರಸ್ತುತ ನ್ಯಾಯಾಲಯಗಳಲ್ಲಿ 3 ಸಾವಿರ ಕೋಟಿ ಪ್ರಕರಣಗಳು ಹಾಗೇ ಉಳಿದುಕೊಂಡಿವೆ. ಹೀಗಿದ್ದಾಗ ನ್ಯಾಯಾಂಗದ ಬಗ್ಗೆ ನಂಬಿಕೆ ಉಳಿಯುವುದು ಹೇಗೆ?

ನಮ್ಮಲ್ಲಿ ಸೆಲೆಕ್ಟಿವ್ ಇನ್ವೆಸ್ಟಿಗೇಶನ್ ಮತ್ತು ಸೆಲೆಕ್ಟಿವ್ ಜಡ್ಜಮೆಂಟ್ ಅಂತ ಆಗಿ ಹೋಗಿದೆ. ಹೀಗಿರುವಾಗ ಪೊಲೀಸ್, ನ್ಯಾಯಾಂಗ, ಆಡಳಿತ ಯಂತ್ರದ ಬಗ್ಗೆ ಜನ ನಂಬಿಕೆ ಇಡುವುದು ಕಷ್ಟವಾಗಿದೆ.

ಪ್ರೇಮಚಂದರು ತಮ್ಮ ಕವನದಲ್ಲಿ, ಈ ಸಂಪ್ರದಾಯ ಎನ್ನುವುದು ಸಂಸ್ಕೃತಿಯ ಹೆಸರು ಹೇಳಿ ಬರುತ್ತದೆ. ಹಿಂದೂಗಳು ಹಿಂದೂ ಸಂಸ್ಕೃತಿಯನ್ನು, ಮುಸ್ಲಿಮರು ಮುಸ್ಲಿಂ ಸಂಸ್ಕೃತಿಯನ್ನು ಇಲ್ಲಿ ಎತ್ತಿ ಹಿಡಿಯುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಂದು ಸಂಸ್ಕೃತಿಯನ್ನು ಅವರು ಮರೆತಿದ್ದಾರೆ, ಅದು ಆರ್ಥಿಕ ಸಂಸ್ಕೃತಿಯಾಗಿದೆ ಎಂದು ಅವರು ತಮ್ಮ ಕವನದಲ್ಲಿ ಉಲ್ಲೇಖಿಸುತ್ತಾರೆ.

ನಮ್ಮಲ್ಲಿ ಕೋಮುವಾದ, ಕೋಮು ಮಾನಸಿಕತೆಯನ್ನು ವಿರೋಧಿಸುವವರು ಸದಾ ಒಂದು ತಪ್ಪನ್ನು ಮಾಡುತ್ತಿರುತ್ತಾರೆ. ಅದೇನೆಂದರೆ ಅವರೆಲ್ಲ ಹಿಂದೂ ಮೂಲಭೂತವಾದವನ್ನು ಪ್ರಖರವಾಗಿ, ಆಕ್ರೋಶ ಭರಿತರಾಗಿ ವಿರೋಧಿಸುವಷ್ಟು ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸುವುದಿಲ್ಲ. ಇದರ ಪರಿಣಾಮ ಕೋಮುವಾದವನ್ನು ವಿರೋಧಿಸುವವರು ಯಾವ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿರುತ್ತಾರೋ ಅದು ವಿಫಲವಾಗುತ್ತದೆ. ಭಾರತದ ಮುಸಲ್ಮಾನರ ಸಂಸ್ಕೃತಿಯಾದ ದರ್ಗಾ ಮತ್ತು ಉರುಸ್ ಎಲ್ಲವೂ ತಪ್ಪು, ಅದನ್ನು ಅನುಸರಿಸುವವರು ಇಸ್ಲಾಂನಿಂದ ಚ್ಯುತರಾಗಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಅದಕ್ಕೆ ಪೂರಕವಾಗುವಂತೆ ಮುಸ್ಲಿಂ ಕೋಮುವಾದವೂ ಹೆಚ್ಚುತ್ತಿದೆ. ಹೀಗಾಗಿ ನಾವು ಎಲ್ಲ ಧರ್ಮದ ಕೋಮುವಾದಗಳು ಮನುಷ್ಯನ ಶತ್ರು. ಅದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಟೆರರಿಸಂನ್ನು ಕೂಡ ನಾವು ವಿರೋಧಿಸುವುದು ಸೂಕ್ತ. ಹೀಗಾಗಿ ನಮ್ಮ ದೃಷ್ಟಿ ಜಾಗತಿಕ, ರಾಷ್ಟ್ರೀಯ ಮಟ್ಟದಲ್ಲೂ, ಅತ್ಯಂತ ಅಧ್ಯಯನಶೀಲವೂ, ಸ್ಥೂಲವೂ, ಶುದ್ಧವೂ, ಅತ್ಯಂತ ಅರ್ಥಪೂರ್ಣವೂ ಆಗಬೇಕು. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯ ಪ್ರಯತ್ನ ಸಫಲವಾಗಬೇಕು. 

  • ಭಾಸ್ಕರ್ ಮಯ್ಯಾ, ಅನುವಾದಕರು

(ದಿನಾಂಕ 25/10/2014 ಮತ್ತು 26/10/2014ರಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ದಿಕ್ಸೂಚಿ ಸಮಾವೇಶದಲ್ಲಿ ಮಾಡಿದ ಭಾಷಣದ ಲೇಖನ ರೂಪ)

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ