December 3, 2023 6:12 am

ಮಾನವ ಬಂಧುತ್ವ ವೇದಿಕೆ - ಕರ್ನಾಟಕ

ಮಾನವೀಯತೆಯೇ ನಮ್ಮ ಧರ್ಮ
ಸಂವಿಧಾನವೇ ನಮ್ಮ ಧರ್ಮಗ್ರಂಥ

ದ್ದೇಶಗಳು

ಮಾನವೀಯ ಮೌಲ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಜಾತಿ, ವರ್ಣ, ಲಿಂಗ ಮತ್ತು ವರ್ಗಗಳ ಭೇದವಿಲ್ಲದ ಸಮುದಾಯದ ಸಂಘಟನೆಯನ್ನು ಕಟ್ಟುವುದು, ಜನರನ್ನು ಜಾಗೃತಗೊಳಿಸುವುದು.

ಪ್ರಜಾಪ್ರಭುತ್ವದ ಎಲ್ಲಾ ಪ್ರಕ್ರಿಯೆಗಳಲ್ಲಿ ಶೋಷಿತ ಜನಸಮುದಾಯವು ಸಮಾನ ಹಕ್ಕು ಮತ್ತು ಅಧಿಕಾರವನ್ನು ಪಡೆಯುವಂತೆ ಮಾಡುವುದು.

ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸಮಾನತೆ ಹಾಗೂ ಶೋಷಣೆರಹಿತ ಸಮಾಜ ನಿರ್ಮಾಣ ಮಾಡಲು ಶ್ರಮಿಸುವುದು.

ಗುರಿ ಮತ್ತು ಆಶಯ

ಎಲ್ಲಾ ರೀತಿಯ ಮತೀಯ ಮೂಲಭೂತವಾದಿ ಶಕ್ತಿಗಳು ಸ್ಥಾಪಿತ ಹಿತಾಸಕ್ತಿಗಳ ವ್ಯವಸ್ಥಿತವಾದ ಹುನ್ನಾರಕ್ಕೆ ಬಲಿಯಾಗಿ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ತಳಸಮುದಾಗಳನ್ನು ಒಂದುಗೂಡಿಸಿ ಪ್ರಬಲವಾದ ರಾಜಕೀಯ ಶಕ್ತಿಯನ್ನು ರೂಪಿಸುವುದು ಮಾನವ ಬಂಧುತ್ವ ವೇದಿಕೆಯ ಪ್ರಮುಖ ಗುರಿಯಾಗಿದೆ. ಈ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ವೇದಿಕೆಯ ಆಶಯಗಳೊಂದಿಗೆ ಗುರುತಿಸಿಕೊಂಡು ಕೈ ಜೋಡಿಸಲು ಸಿದ್ಧರಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಪೂರಕ ಅವಕಾಶಗಳನ್ನು ಕಲ್ಪಿಸಲು ವೇದಿಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ. ಜನಸಮುದಾಯವನ್ನು ಆವರಿಸಿಕೊಂಡಿರುವ ಮೌಢ್ಯ, ಕಂದಾಚಾರಗಳು ಮತ್ತು ಜೀವವಿರೋಧಿ ನಂಬಿಕೆಗಳನ್ನು ತೊಡೆದು ಹಾಕಲು ಅಗತ್ಯವಿರುವ ಶಿಕ್ಷಣವನ್ನು ನೀಡುವ ಆಶಯ ನಮ್ಮದು. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಸಹ ಪರಿಸರ ಮತ್ತು ನೆಮ್ಮದಿಯ ಬದುಕನ್ನು ಉಳಿಸುವ ಹಾಗೂ ನೆಲ, ಜಲ, ನಾಡು, ನುಡಿ, ಸಂಸ್ಕೃತಿ ಆಧಾರಿತ ಸುಸ್ಥಿರ ಅಭಿವೃದ್ಧಿಯ ಸಾಧ್ಯತೆಗಳನ್ನು ಸಾಕಾರಗೊಳಿಸುವ ಬದ್ಧತೆಯನ್ನು ವೇದಿಕೆ ಹೊಂದಿದೆ.

ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ವೇದಿಕೆಯ ಆಶಯಗಳೊಂದಿಗೆ ಗುರುತಿಸಿಕೊಂಡು ಕೈ ಜೋಡಿಸಲು ಸಿದ್ಧರಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಪೂರಕ ಅವಕಾಶಗಳನ್ನು ಕಲ್ಪಿಸಲು ವೇದಿಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ

ಜನಸಮುದಾಯವನ್ನು ಆವರಿಸಿಕೊಂಡಿರುವ ಮೌಡ್ಯ, ಕಂದಾಚಾರಗಳು ಮತ್ತು ಜೀವವಿರೋಧಿ ನಂಬಿಕೆಗಳನ್ನು ತೊಡೆದು ಹಾಕಲು ಅಗತ್ಯವಿರುವ ಶಿಕ್ಷಣವನ್ನು ನೀಡುವ ಆಶಯ ನಮ್ಮದು. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಸಹ ಪರಿಸರ ಮತ್ತು ನೆಮ್ಮದಿಯ ಬದುಕನ್ನು ಉಳಿಸುವ ಹಾಗೂ ನೆಲ, ಜಲ, ನಾಡು, ನುಡಿ, ಸಂಸ್ಕೃತಿ ಆಧಾರಿತ ಸುಸ್ಥಿರ ಅಭಿವೃದ್ಧಿಯ ಸಾಧ್ಯತೆಗಳನ್ನು ಸಾಕಾರಗೊಳಿಸುವ ಬದ್ಧತೆಯನ್ನು ವೇದಿಕೆ ಹೊಂದಿದೆ.

ಕಾರ್ಯತಂತ್ರ 

ಮೇಲಿನ ಉದ್ಧೇಶ, ಗುರಿ ಮತ್ತು ಆಶಯಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ಕೆಳಗಿನ ಕಾರ್ಯತಂತ್ರವನ್ನು ನಾವು ಯೋಜಿಸಿದ್ದೇವೆ.

 1. ವೇದಿಕೆಯ ಧ್ಯೇಯೋದ್ಧೇಶಗಳಿಗೆ ಹತ್ತಿರವಾಗಿರುವ ಮತ್ತು ಈ ನಿಟ್ಟಿನಲ್ಲಿ ತಮ್ಮದೇ ಆದ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತೀಯ ಮೂಲಭೂತವಾದಿಶಕ್ತಿಗಳ ವಿರುದ್ಧ ಹೋರಾಟಕ್ಕೆ ಅಣಿಗೊಳಿಸುವುದು.
 2. ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಯ ಕೊರತೆಯಿಂದ ದಿಕ್ಕುತಪ್ಪಿರುವ ತಳಸಮುದಾಯಗಳ ಮತ್ತು ದುಡಿಯುವ ವರ್ಗದ ಜನರನ್ನು ಸಂಘಟಿಸಿ ಜಾಗೃತಿಗೊಳಿಸುವುದು. ಈ ಸಮುದಾಯಗಳ ಯುಜನರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಆಶೋತ್ತರಗಳಿಗೆ ಧ್ವನಿಯಾಗುವುದು.
 3. ಜನಸಮುದಾಯಗಳಲ್ಲಿ ಜನಪರ ರಾಜಕೀಯ ಜಾಗೃತಿಯನ್ನು ಮೂಡಿಸಲು ಅಗತ್ಯವಿರುವ ಚರ್ಚೆಗಳು, ವಿಚಾರಸಂಕಿರಣಗಳು, ಸಂವಾದ ಮತ್ತು ತರಬೇತಿಗಳನ್ನು ಆಯೋಜಿಸುವುದು.
 4. ಬಂಧುತ್ವ, ಸಮಾನತೆ, ಸಾಮಾಜಿಕ ನ್ಯಾಯದ ವಿಚಾರಗಳನ್ನು ಜನಮನಕ್ಕೆ ತಲುಪಿಸಲು ಕೆಲಸ ಮಾಡುವುದು. ಅದಕ್ಕಾಗಿ ತರಬೇತಿ ಹೊಂದಿದ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದು. ಆ ಮೂಲಕ ಭಾರತದ ಸಂವಿಧಾನದ ಮೌಲ್ಯವನ್ನು ಅರಿತುಕೊಂಡು ಅದರ ರಕ್ಷಣೆಗೆ ಜನತೆಯನ್ನು ಸಿದ್ಧಪಡಿಸುವುದು.
 5. ಜನರಲ್ಲಿ ಅರಿವು, ಜಾಗೃತಿ ಮತ್ತು ವೈಚಾರಿಕತೆಯನ್ನು ಮೂಡಿಸುವ ಕಾರ್ಯದಲ್ಲಿ ಮಾಧ್ಯಮದ ವಿವಿಧ ಪ್ರಕಾರಗಳನ್ನು ಸಮರ್ಥವಾಗಿ ತೊಡಗಿಸಿಕೊಳ್ಳುವುದು.

ವೇದಿಕೆಯ ಸಾಂಸ್ಥಿಕ ವ್ಯವಸ್ಥೆ 

ಮಾನವ ಬಂಧುತ್ವ ವೇದಿಕೆ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ವೇದಿಕೆಯನ್ನು ಭದ್ರವಾದ ಸೈದ್ಧಾಂತಿಕ ಬುನಾದಿಯ ಮೇಲೆ ನಿರ್ಮಾಣ ಮಾಡುವ ಅಗತ್ಯವಿದೆ. ಬಂಧುತ್ವ, ಸಮಾನತೆಯನ್ನು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ರಾಜಕೀಯ ಶಕ್ತಿಯನ್ನು ತುಂಬಬೇಕಾದ ಸನ್ನಿವೇಶದಲ್ಲಿ ಎಲ್ಲ ಸ್ತರಗಳ ಸಮಾನ ಮನಸ್ಕರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೆಸೆದು ಜೊತೆಗೂಡಿ ಕೆಲಸ ಮಾಡಬೇಕಿದೆ. ವೇದಿಕೆಯ ಉದ್ಧೇಶ, ಗುರಿ ಮತ್ತು ಆಶಯಗಳನ್ನು ತಮ್ಮ ಪರಿಸರದಲ್ಲಿ ವೇದಿಕೆಯ ಘಟಕವನ್ನು ಸಂಘಟಿಸಿ ಶಕ್ತಿ ತುಂಬುವ ಸದಾಶಯ ಹೊಂದಿದವರು ವೇದಿಕೆಯ ಸದಸ್ಯರಾಗುತ್ತಾರೆ.

ರಾಜ್ಯ ಕಾರ್ಯಕಾರಿ ಮಂಡಳಿಯ ವೇದಿಕೆಯನ್ನು ಸರಿಯಾದ ದಾರಿಯಲ್ಲಿ ಮುಂದೆ ಒಯ್ಯುವ ಸಾಮರ್ಥ್ಯ ಮತ್ತು ಬದ್ಧತೆ ಹೊಂದಿರುವ ನಿಗದಿತ ಸಂಖ್ಯೆಯ ಸದಸ್ಯರನ್ನೊಳಗೊಂಡ ಕ್ರಿಯಾಶೀಲ ತಂಡವಾಗಿರುತ್ತದೆ. ಈ ತಂಡವು ಕಾಲ-ಕಾಲಕ್ಕೆ ಮಾರ್ಗದರ್ಶಕ ಮಂಡಳಿಯ ಜೊತೆ ಸಮಾಲೋಚನೆ ನಡೆಸುತ್ತದೆ. ಕಾರ್ಯಕಾರಿ ಮಂಡಳಿಯ ನಿರ್ದೇಶನ ಮತ್ತು ಸಲಹೆಗೆ ಅನುಗುಣವಾಗಿ ಜಾಲ ಬಂಧದ ಎಲ್ಲ ಘಟಕಗಳು ಸ್ವತಂತ್ರವಾಗಿ ಮತ್ತು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತವೆ.

 1. ಸೈದ್ಧಾಂತಿಕ ವಿಭಾಗ

ರಾಜ್ಯ ಕಾರ್ಯಕಾರಿ ಮಂಡಳಿಯೇ ವೇದಿಕೆಯ ಸೈದ್ಧಾಂತಿಕ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಸೈದ್ಧಾಂತಿಕ ನಿಲುವುಗಳನ್ನು ಖಚಿತವಾಗಿ ನಿರ್ಧರಿಸುವ ಈ ತಂಡ ವೇದಿಕೆಯ ಕಾರ್ಯಕ್ರಮ, ಚಟುವಟಿಕೆಗಳು ಮತ್ತು ಅದರ ನಿರೀಕ್ಷಿತ ಪರಿಣಾಮಗಳ ಕುರಿತು ಯೋಚಿಸುತ್ತದೆ ಮತ್ತು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ಕಾರ್ಯತಂತ್ರವನ್ನು ರೂಪಿಸುತ್ತದೆ.

 1. ಸಂಘಟನಾ ವಿಭಾಗ

ಸಮುದಾಯದ ಎಲ್ಲಾ ಜನವಿಭಾಗಗಳನ್ನು ಜಾಗೃತಗೊಳಿಸಿ ಒಗ್ಗೂಡಿಸುವುದು ವೇದಿಕೆಯ ಉದ್ಧೇಶವಾಗಿದೆ. ಈ ನಿಟ್ಟಿನಿಲ್ಲಿ ಮೊದಲ ಹಂತದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರು ಮಾತ್ರವಲ್ಲದೆ ಶ್ರಮಿಕವರ್ಗ ಸಂಘಟನೆಯನ್ನು ಮಾಡುವುದು ವೇದಿಕೆಯ ಆದ್ಯತೆಯಾಗಿದ್ದು, ಸಂಘಟನಾ ವಿಭಾಗವು ಈ ಜವಾಬ್ಧಾರಿಯನ್ನು ನಿರ್ವಹಿಸುತ್ತದೆ. ಮಾನವ ಬಂಧುತ್ವ ವೇದಿಕೆಯು ಮೂಲ ಘಟಕವಾಗಿದ್ದು, ಮಹಿಳಾ ಬಂಧುತ್ವ ವೇದಿಕೆ ಮತ್ತು ವಿದ್ಯಾರ್ಥಿ ಬಂಧುತ್ವ ವೇದಿಕೆಗಳು ವೇದಿಕೆಯ ಆಶ್ರಯದ ಸಾಮೂಹಿಕ ಸಂಘಟನೆಗಳಾಗಿರುತ್ತವೆ. ಜೊತೆಗೆ ವೇದಿಕೆಯ ಕಾರ್ಯಕಾರಿ ಮಂಡಳಿಯು ನಿರ್ಧರಿಸಿದಲ್ಲಿ ಇದೇ ರೀತಿಯ ವಿವಿಧ ಸಂಘಟನೆಗಳನ್ನು ಮಾಡಲು ಅವಕಾಶವಿದೆ.

 1. ಸಾಂಸ್ಕೃತಿಕ ವಿಭಾಗ

ನಾವು ಬದುಕುತ್ತಿರುವ ಜನಸಮುದಾಯ ಅತ್ಯಂತ ಸಮೃದ್ಧವಾದ ವೈವಿಧ್ಯಮಯ ಜಾನಪದ ಸಂಸ್ಕೃತಿಯನ್ನು ಹೊಂದಿದೆ. ಅದರ ಒಡಲಲ್ಲಿ ಸುಖ, ದುಃಖ, ನೆಮ್ಮದಿ, ಸಮೃದ್ಧಿಗಳ ಜೊತೆಗೆ ಪ್ರತಿಭಟನೆ ಮತ್ತು ಹೋರಾಟದ ಧ್ವನಿಯೂ ಇದೆ. ಜನರನ್ನು ಜಾಗೃತಗೊಳಿಸುವ ಮತ್ತು ಒಂದುಗೂಡಿಸುವ ಅಗಾಧ ಸಾಮರ್ಥ್ಯ ಅದಕ್ಕಿದೆ. ಮಾನವ ಬಂಧುತ್ವ ವೇದಿಕೆಯು ಜನಪರವಾದ ಸಾಹಿತ್ಯ ಮತು ಜನಸಂಸ್ಕೃತಿಯ ಮೂಲಕ ಜನರನ್ನು ಮುಟ್ಟುವ, ತಟ್ಟುವ ಮತ್ತು ಕಟ್ಟುವ ಕಾರ್ಯವನ್ನು ಸಾಂಸ್ಕೃತಿಕ ವಿಭಾಗ ಮಾಡುತ್ತದೆ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಠಾನಗೊಳಿಸುತ್ತದೆ.

ಸಂಘಟನಾ ಜಾಲಬಂಧ

ವೇದಿಕೆಯ ಸಂಘಟನಾ ಜಾಲಬಂಧವನ್ನು ರಾಜ್ಯದ 30 ಜಿಲ್ಲೆಗಳಲ್ಲಿ ವಿಸ್ತರಿಸಲು ಸಾಧ್ಯವಾಗುವಂತೆ ಒಟ್ಟು ಆರು ವಿಭಾಗಗಳಾಗಿ ವಿಂಗಡಿಸಲಗಿದೆ. ಆರು ವಿಭಾಗಗಳಲ್ಲಿ ಬರುವ ಜಿಲ್ಲೆಗಳ ವಿವರ ಕೆಳಗಿನಂತಿದೆ.

ಮೈಸೂರು ವಿಭಾಗ  

 • ಮೈಸೂರು ಜಿಲ್ಲೆ
 • ಮಂಡ್ಯ ಜಿಲ್ಲೆ
 • ಚಾಮರಾಜನಗರ ಜಿಲ್ಲೆ
 • ಕೊಡಗು ಜಿಲ್ಲೆ
 • ಹಾಸನ ಜಿಲ್ಲೆ
 • ಚಿಕ್ಕಮಗಳೂರು ಜಿಲ್ಲೆ
 • ಉಡುಪಿ ಜಿಲ್ಲೆ
 • ಶಿವಮೊಗ್ಗ ಜಿಲ್ಲೆ
 • ದಕ್ಷಿಣ ಕನ್ನಡ

 

ಬೆಂಗಳೂರು ವಿಭಾಗ

 • ಬೆಂಗಳೂರು ನಗರ ಜಿಲ್ಲೆ
 • ಬೆಂಗಳೂರು ಗ್ರಾಮಾಂತರ ಜಿಲ್ಲೆ
 • ತುಮಕೂರು ಜಿಲ್ಲೆ
 • ಕೋಲಾರ ಜಿಲ್ಲೆ
 • ಚಿಕ್ಕಬಳ್ಳಾಪುರ ಜಿಲ್ಲೆ
 • ರಾಮನಗರ ಜಿಲ್ಲೆ
 • ದಾವಣಗೆರೆ ಜಿಲ್ಲೆ
 • ಚಿತ್ರದುರ್ಗ ಜಿಲ್ಲೆ

 

 

ಬೆಳಗಾವಿ ವಿಭಾಗ

 • ಬೆಳಗಾವಿ ಜಿಲ್ಲೆ
 • ಬಾಗಲಕೊಟೆ ಜಿಲ್ಲೆ
 • ವಿಜಯಪುರ ಜಿಲ್ಲೆ
 • ಉತ್ತರ ಕನ್ನಡ ಜಿಲ್ಲೆ
 • ಧಾರವಾಡಹುಬ್ಬಳ್ಳಿ
 • ಗದಗ
 • ಹಾವೇರಿ

 

 

 

ಕಲಬುರ್ಗಿ ವಿಭಾಗ

 • ಕಲಬುರ್ಗಿ ಜಿಲ್ಲೆ
 • ಬೀದರ್ ಜಿಲ್ಲೆ
 • ರಾಯಚೂರು ಜಿಲ್ಲೆ
 • ಯಾದಗಿರಿ ಜಿಲ್ಲೆ
 • ಬಳ್ಳಾರಿ ಜಿಲ್ಲೆ
 • ಕೊಪ್ಪಳ ಜಿಲ್ಲೆ

 

 

 

ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಆರು ವಿಭಾಗಗಳಾಗಿ ವಿಂಗಡಿಸುವ ಜೊತೆಗೆ ಪ್ರತಿ ವಿಭಾಗಕ್ಕೆ ಒಬ್ಬ ಸಂಚಾಲಕರನ್ನು ಆಯ್ಕೆ ಮಾಡಿ ಅವರಿಗೆ ಸಂಘಟನಾ ಜವಾಬ್ದಾರಿಯನ್ನು ವಹಿಸಲಾಗಿದೆ. ಅಲ್ಲದೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪೂರ್ಣಾವಧಿ ಹಾಗೂ ಅರೆಕಾಲಿಕ ಕಾರ್ಯಕರ್ತರು ವೇದಿಕೆಯನ್ನು ಸಂಘಟಿಸುವ, ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ನಡೆಸುವ ಕಾರ್ಯಭಾರವನ್ನು ನಿಭಾಯಿಸುತ್ತಾರೆ. ಒಟ್ಟು 6 ಹಂತಗಳ ಕಾರ್ಯನಿರ್ವಹಣಾ ವ್ಯವಸ್ಥೆಯ ಮೂಲಕ ವೇದಿಕೆಯು ಪರಿಣಾಮಕಾರಿಗಾಗಿ ಕಾರ್ಯನಿರ್ವಹಣೆಯನ್ನು ಮಾಡುತ್ತದೆ.

ಹಂತ 1: ರಾಜ್ಯ ಕಾರ್ಯಕಾರಿ ಮಂಡಳಿ

ಹಂತ 2: ವಿಭಾಗೀಯ ಸಂಚಾಲಕರು

ಹಂತ 3: ಜಿಲ್ಲಾ ಸಂಚಾಲಕರು ಮತ್ತು ಜಿಲ್ಲಾ ಸಮಿತಿ

ಹಂತ 4: ತಾಲೂಕು ಸಂಚಾಲಕರು ಮತ್ತು ತಾಲೂಕಾ ಸಮಿತಿ

ಹಂತ 5: ಗ್ರಾಮ ಘಟಕಗಳು

ಮಹಿಳಾ ಬಂಧುತ್ವ ವೇದಿಕೆ ಮತ್ತು ಮಹಿಳಾ ಬಂಧುತ್ವ ವೇದಿಕೆಗಳು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ಹೊಂದಿರುತ್ತವೆ. ರಾಜ್ಯ ಕಾರ್ಯಕಾರಿ ಮಂಡಳಿ ಮತ್ತು ರಾಜ್ಯ ಸಮಿತಿಯು ಎಲ್ಲಾ ಹಂತಗಳ ಸಮಿತಿಗಳು ಮತ್ತು ಪೂರ್ಣಾವಧಿ ಕಾರ್ಯಕರ್ತರು ನಿರ್ವಹಿಸಬೇಕಾದ ಹೊಣೆಗಾರಿಕೆಗಳ ಕುರಿತು ಕಾಲಕಾಲಕ್ಕೆ ಅಗತ್ಯವಿರುವ ಸೂಚನೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.

ಸಂಘಟನಾ ವಿಭಾಗವು ದೈನಂದಿನ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದಲ್ಲದೆ ಮೇಲ್ವಿಚಾರಣೆ ಮತ್ತು ಅನುಸರಣೆಯನ್ನೂ ಮಾಡುತ್ತದೆ. ಪ್ರಚಾರ ಮಾಧ್ಯಮಗಳನ್ನೆಲ್ಲ ಸಂಪನ್ಮೂಲಗಳನ್ನಾಗಿ ಬಳಸಿಕೊಂಡು ಸಂಘಟನೆಯ ಆಶಯ, ಉದ್ಧೇಶಗಳಿಗೆ ವ್ಯಾಪಕ ಪ್ರಚಾರವನ್ನು ನೀಡುತ್ತದೆ. ಜನಸಮುದಾಯದಲ್ಲಿ ವೇದಿಕೆಯ ಕುರಿತು ಆಸಕ್ತಿ ಮತ್ತು ಸದಾಶಯವನ್ನು ಮೂಡಿಸುವಲ್ಲಿ ವಿಭಾಗದ ಪಾತ್ರ ಮಹತ್ವದ್ದಾಗಿದೆ.

ಮೇಲಿನ ಎಲ್ಲಾ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯಕ್ಷಮತೆ, ದಕ್ಷತೆ ಮತ್ತು ಸೈದ್ದಾಂತಿಕ ಬದ್ಧತೆಯನ್ನು ತಂಡದ ಎಲ್ಲಾ ಹಂತಗಳ ಕಾರ್ಯಕರ್ತರಲ್ಲಿ ಮೂಡಿಸುವಲ್ಲಿನ ನಮ್ಮ ಯಶಸ್ಸು ಸಂಘಟನೆಯ ಯಶಸ್ಸಿಗೂ ಕಾರಣವಾಗುತ್ತದೆ. ಎಲ್ಲಾ ಹಂತಗಳ ಕಾರ್ಯಕರ್ತರು ಮತ್ತು ಸಮಿತಿಗಳ ಪದಾಧಿಕಾರಿಗಳು ಅವಕಾಶವನ್ನು ಒಂದು ವೃತ್ತಿಯಾಗಿ ಪರಿಗಣಿಸದೆ ಒಂದು ಹೊಣೆಗಾರಿಗೆಯಾಗಿ ನಿಭಾಯಿಸಬೇಕು. ಸಾಮಾಜಿಕ ಪರಿವರ್ತನೆ ಮತ್ತು ಮಾನವೀಯವಾದ ವೈಚಾರಿಕ ಸಮಾಜ ನಿರ್ಮಾಣ ಮಾಡಲು ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡುವ ಬದ್ಧತೆಯನ್ನು ತೋರಿಸಬೇಕು. ಇಂತಹ ಬದ್ಧತೆಯನ್ನು ಕಾರ್ಯಕರ್ತರಲ್ಲಿ ಮೂಡಿಸುವ ಸವಾಲು ನಮ್ಮ ಮುಂದಿದೆ. ಸವಾಲಿನಲ್ಲಿ ನಾವು ಗೆಲುವನ್ನು ಸಾಧಿಸಿದರೆ ಮಾತ್ರ ನಮ್ಮ ಮುಂದಿರುವ ಗುರಿಯನ್ನು ಈಡೇರಿಸಲು ಸಾಧ್ಯ ಎನ್ನುವ ಎಚ್ಚರಿಕೆ ನಮ್ಮಲ್ಲಿದೆ

ಹಿನ್ನಲೆಯಲ್ಲಿ ವೇದಿಕೆಯು ಪೂರ್ಣಾವಧಿ ಮತ್ತು ಅರೆಕಾಲಿಕ ಕಾರ್ಯಕರ್ತರ ದೊಡ್ಡ ಪಡೆಯನ್ನು ಸಜ್ಜುಗೊಳಿಸುತ್ತಿದೆ. ಕಾರ್ಯಕರ್ತರಿಗೆ ಕಾಲಕಾಲಕ್ಕೆ ಅಗತ್ಯವಿರುವ ತರಬೇತಿಗಳನ್ನು ನೀಡಿ ಅವರ ಸಾಮರ್ಥ್ಯವನ್ನು ಹೆಚ್ಚಿಸುವ, ಕಾರ್ಯಕ್ಷಮತೆಯನ್ನು ಮೊನಚುಗೊಳಿಸುವ ಕಾರ್ಯವನ್ನು ವೇದಿಕೆಯ ಕಾರ್ಯಕಾರಿ ಮಂಡಳಿಯು ರೂಪಿಸಿದೆ.

ಪ್ರಸ್ತುತ ನಮ್ಮ ರಾಜ್ಯ ಮತ್ತು ದೇಶದಲ್ಲಿ ಎದುರಾಗಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗಮಾನವ ಬಂಧುತ್ವ ವೇದಿಕೆಯು ನಮ್ಮ ಮುಂದಿರುವ ಚಾರಿತ್ರಿಕ ಅವಶ್ಯಕತೆಯಾಗಿದೆ. ಮತೀಯ ಮೂಲಭೂತವಾದಿಗಳು ಮತ್ತು ಲಾಭಕೋರ ಕಾರ್ಪೋರೇಟ್ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಜನಮನದಲ್ಲಿ ಸೃಷ್ಟಿಸಿರುವ ಭ್ರಮೆಗಳಿಂದ ಅವರನ್ನು ಹೊರತರಲು ಬೃಹತ್ತಾದ ವೈಚಾರಿಕ ಚಳುವಳಿಯನ್ನು ಕಟ್ಟದೆ ಬೇರೆ ದಾರಿ ಕಾಣುತ್ತಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ. 10ನ್ನು ಕೂಡಾ ದಾಟದ ಸ್ಥಾಪಿತ ಹಿತಾಸಕ್ತಿಗಳು ಜನರ ಒಲವುನಿಲುವುಗಳನ್ನು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಿ ಪ್ರಭುತ್ವವನ್ನೇ ಹಿಡಿತದಲ್ಲಿ ಇಟ್ಟುಕೊಂಡಿರುವ ಸಂದರ್ಭ ಬಹುಜನರ ಒಗ್ಗೂಡುವಿಕೆಯ ಅನಿವಾರ್ಯತೆಯನ್ನು ಸಾರಿ ಸಾರಿ ಹೇಳುತ್ತಿದೆ. ಆದರೆ ನಾವು ನಮ್ಮ ಸಂಘಟನೆಗಳು ಮತ್ತು ನಮ್ಮ ಜನರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಎನ್ನುವ ಹುಸಿವಾದದ ಬೆನ್ನು ಹತ್ತಿದ್ದಾರೆ. ಅಂಬೇಡ್ಕರವಾದಿಗಳು, ಗಾಂಧೀವಾದಿಗಳು, ಲೋಹಿಯವಾದಿಗಳು, ಮಾರ್ಕ್ಸ್ ವಾದಿಗಳು ಮತ್ತು ಮಾನವತಾವಾದಿಗಳು ತಮ್ಮ ತಮ್ಮ ಶ್ರೇಷ್ಠತೆಯ ವ್ಯಸನದಲ್ಲಿ ಕಳೆದುಹೋಗುತ್ತಿದ್ದಾರೆ. ದೌರ್ಬಲ್ಯವನ್ನು ಬಳಸಿಕೊಂಡು ಮತೀಯ ಮೂಲಭೂತವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಫ್ಯಾಸಿಸಮ್ ಅನ್ನು ಕರಾಳ ನೆರಳು ನಮ್ಮ ನಾಡನ್ನು ಆವರಿಸಿಕೊಳ್ಳುತ್ತಿದೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗಂಭೀರವಾದ ಅಪಾಯಕ್ಕೆ ಸಿಲುಕಿದೆ. ಈಗಲಾದರೂ ನಮ್ಮ ಜನರು ವಾಸ್ತವವಾಗಿ ಯೋಚಿಸಲು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಸಿದ್ಧರಾಗಬೇಕು. ವಿಶಾಲ ತಳಹದಿಯ ಪ್ರಜಾಪ್ರಭುತ್ವವಾದಿ ರಾಜಕೀಯ ಶಕ್ತಿಯನ್ನು ಕಟ್ಟುಲು ಸಾಧ್ಯವಾಗಬೇಕು. ನಮ್ಮ ಒಗ್ಗೂಡುವಿಕೆ ಇಂದು ಸಾಮಾಜಿಕ ಮತ್ತು ರಾಜಕೀಯ ಚಳುವಳಿಯಾಗಿ ಪರಿವರ್ತನೆಯಾಗಬೇಕು. ಇದು ಸಾಧ್ಯವಾದಾಗ ಮಾತ್ರ ಶೋಷಿತ ಜನಸಮುದಾಯದಗಳ ಹಿತಾಸಕ್ತಿಗಳು ಪ್ರಭುತ್ವದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.

ನಮ್ಮ ಮುಂದಿರುವುದು ಸುಲಭದ ದಾರಿಯಲ್ಲ. ಆದರೆ ಮುನ್ನಡೆಯಲೇಬೇಕು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಮಾರ್ಕಸ್, ಪೆರಿಯಾರ್, ನಾರಾಯಣಗುರು, ಕುವೆಂಪು ಮೊದಲಾದ ದಾರ್ಶನಿಕರು ಸೃಷ್ಟಿಸಿದ ದರ್ಶನಗಳ ಬೆಳಕಿನಲ್ಲಿ ನಮ್ಮ ಹೆಜ್ಜೆಗಳು ಸಾಗಬೇಕು. ಹೀಗೆ ಸಾಗುವ ನಮ್ಮ ಹೋರಾಟ ದಾರಿ ನಮ್ಮೆಲ್ಲರನ್ನೂ ಕಲ್ಯಾಣ ಕರ್ನಾಟಕದ ಸಾಕಾರದ ದಿಕ್ಕಿಗೆ ಒಯ್ಯಲಿದೆ. ಇಂತಹ ದೃಢವಿಶ್ವಾಸದಿಂದ ಮಾನವ ಬಂಧುತ್ವ ವೇದಿಕೆ ಹೆಜ್ಜೆ ಇಡಲಿದೆ.