April 24, 2024 4:54 pm

ಮಾನವ ಬಂಧುತ್ವ ನಮ್ಮಲ್ಲಿ ಕಳೆದು ಹೋಗಿದ್ದು ಎಲ್ಲಿ?

ಮಾನವ ಬಂಧುತ್ವ ನಮ್ಮಲ್ಲಿ ಕಳೆದು ಹೋಗಿದ್ದು ಎಲ್ಲಿ? ಮಾನವ ಬಂಧುತ್ವ ಎನ್ನುವುದು ಬಹುಶಃ ಕಳೆದು ಹೋಗಿರುವುದು ಜಾತೀಯತೆ ಪ್ರಾರಂಭವಾದ ಮೇಲೆ. ಜಾತೀಯತೆ ಪ್ರಾರಂಭ ಆಗಿದ್ದು ಸಾಮಾನ್ಯವಾಗಿ ವೇದಗಳ ಕಾಲದ ಚಾತುರ್ವರ್ಣ ಪದ್ಧತಿಯಲ್ಲಿ. ವಿಶೇಷವಾಗಿ ಋಗ್ವೇದದ 10ನೇ ಮಂಡಲದಲ್ಲಿ ಪ್ರಾರಂಭವಾದ ಈ ಚಾತುರ್ವರ್ಣ ಪದ್ಧತಿ ಮನುಷ್ಯನನ್ನು ಮನುಷ್ಯನ್ನಾಗಿ ನೋಡದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು.

ಭಗವಾನ್ ಬುದ್ಧರು ಈ ಜಾತೀಯತೆಯ ವಿರುದ್ಧವೇ ಸಿಡಿದೆದ್ದವರು. ಅವರು ದೇಶದಲ್ಲಿ ಮಾನವೀಯತೆಯ ಪ್ರಸಾರಕ್ಕೆ ಸತತ 40 ವರ್ಷಗಳ ಕಾಲ ಪ್ರಯತ್ನ ಮಾಡಿದರು. ಅವರು ಅರಹಂತರಾದ ಮೇಲೆ ಐದು ಜನ ಅರಹಂತರನ್ನು ಸೃಷ್ಟಿ ಮಾಡಿದರು. ಆನಂತರದಲ್ಲಿ 55 ಜನ ಅರಹಂತರನ್ನು ಸೃಷ್ಟಿಮಾಡಿ ಒಟ್ಟು 60 ಜನ ಭಿಕ್ಕುಗಳನ್ನು ತಯಾರು ಮಾಡಿದರು. ಆ ಮೂಲಕ ಕೇವಲ ಮೂರು ತಿಂಗಳಲ್ಲಿ 10 ಸಾವಿರ ಭಿಕ್ಕುಗಳನ್ನು ಸೃಷ್ಟಿ ಮಾಡಿ, ಅವರನ್ನು ಭಾರತ ದೇಶದ ಎಲ್ಲ ಮೂಲೆಗಳಿಗೆ ತಲುಪುವಂತೆ ಮಾಡಿ ಮಾನವೀಯತೆಯನ್ನು ಪಸರಿಸಿದರು.

ಮೌರ್ಯ ಸಾಮ್ರಾಜ್ಯದ 150 ವರ್ಷಗಳಲ್ಲಿ ಈ ಜಾತೀಯತೆ ಇರಲಿಲ್ಲ ಎನ್ನುವ ಭಾವನೆ ಎಲ್ಲ ವಿದೇಶಿ ಲೇಖಕರ ಸಾಮಾನ್ಯ ಅಭಿಪ್ರಾಯವಾಗಿದೆ. ಭಗವಾನ್ ಬುದ್ಧರ ನಂತರ ಮೌರ್ಯ ಸಾಮ್ರಾಜ್ಯದ 10ನೇ ದೊರೆ ಬೃಹದ್ರತ ಮೌರ್ಯನ ಹತ್ಯೆ ಮಾಡಿದ ಪುಷ್ಯಮಿತ್ರ ಶೃಂಗನ ಸಾಮ್ರಾಜ್ಯ ಪ್ರಾರಂಭ ಆದ ನಂತರ ಜನರ ಮೇಲೆ ಮನುಸ್ಮೃತಿ ಹೇರಿದ ಪರಿಣಾಮವಾಗಿ ಮತ್ತೆ ಈ ದೇಶದಲ್ಲಿ ಜಾತೀಯ ಕಳಂಕ ಪ್ರಾರಂಭವಾಯಿತು.

ಇಂದು ಮಂಡಲ್ ಕಮಿಷನ್ ವರದಿಯ ಪ್ರಕಾರ ದೇಶದಲ್ಲಿ 6000 ಜಾತಿಗಳಿವೆ. ಅವುಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಲ್ಲಿ 1600, ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ 1100, ಹಿಂದುಳಿದ ವರ್ಗಗಳಲ್ಲಿ 3478 ಜಾತಿಗಳಿವೆ. ಮನುಷ್ಯನಲ್ಲಿ ಜಾತಿಗಳಿಲ್ಲ ಎನ್ನುವುದನ್ನು ಮೊಟ್ಟ ಮೊದಲು ವ್ಯಾಖ್ಯಾನ ಮಾಡಿದ್ದು ಭಗವಾನ್ ಬುದ್ಧರು.

ಪ್ರಾಣಿಗಳಲ್ಲಿ ಜಾತಿ ಇದೆ. ಪ್ರಾಣಿಗಳನ್ನು ನೋಡಿದ ತಕ್ಷಣ ಇಂಥದೇ ಜಾತಿ ಅಂತ ಹೇಳಬಹುದು. ಅದರ ಚಹರೆ, ಹೆಜ್ಜೆ ಗುರುತು ಅಥವಾ ಅದು ಹಾಕಿದ ಸಗಣಿಯನ್ನು ನೋಡಿದ ಕೂಡಲೇ ಈ ಪ್ರಾಣಿ ಇಂಥದೇ ಜಾತಿಗೆ ಸೇರಿದೆ ಎಂದು ಹೇಳಬಹುದು.

ನಂತರ ಮರಗಳಲ್ಲಿ ಜಾತಿ ಇದೆ ಎಂದು ಅವರು ವ್ಯಾಖ್ಯಾನ ಮಾಡಿದರು. ಮರಗಳ ಎಲೆ, ಕೆಲವು ಸಾರಿ ಮರದ ಕಾಂಡವನ್ನು ನೋಡಿದಾಗ, ಮರದಿಂದ ಬಿಡುವ ಫಸಲನ್ನು ನೋಡಿದಾಗ ಇಂಥದೇ ಜಾತಿಯ ಮರ ಎಂದು ಹೇಳಬಹುದು. ಇನ್ನು ಪಕ್ಷಿಗಳ ಬಣ್ಣ, ಆಕಾರ ನೋಡಿದ ತಕ್ಷಣ ಇಂಥದೇ ಪಕ್ಷಿ ಎಂದು ಗುರುತಿಸಬಹುದು. ಆದರೆ, ಮನುಷ್ಯನ ಹೆಜ್ಜೆ ಗುರುತನ್ನು ನೋಡಿದ ತಕ್ಷಣ ಇಂಥದೇ ಜಾತಿಯ ಮನುಷ್ಯ ಇಲ್ಲಿಗೆ ಬಂದಿದ್ದ ಎಂದು ಹೇಳಲು ಸಾಧ್ಯವಿಲ್ಲ.

ಇಂದಿನ ಯುಗದಲ್ಲಿ ಮನುಷ್ಯನ ರಕ್ತ ಪರೀಕ್ಷೆ ಮಾಡಿ ವಿಜ್ಞಾನಿಗಳು ಅನೇಕ ಕಾಯಿಲೆಗಳನ್ನು ಕಂಡು ಹಿಡಿಯುತ್ತಿದ್ದಾರೆ. ಆದರೆ ಮನುಷ್ಯನ ರಕ್ತ ಪರೀಕ್ಷೆ ಮಾಡಿ ಇಂಥದೇ ಜಾತಿಯ ಮನುಷ್ಯ ಎಂದು ಹೇಳಲು ಬರುವುದಿಲ್ಲ. ಇದರ ಮೂಲಕ ಮನುಷ್ಯ ಜೀವಿಯಲ್ಲಿ ಜಾತಿ ಇಲ್ಲ ಎಂದು ಖಾತ್ರಿ ಆಯ್ತು.

ಆದರೂ ಕೂಡ ಭಾರತ ದೇಶದಲ್ಲಿ ಈ ಜಾತಿಯ ವಿರುದ್ಧ ಯಾರೂ ಕೂಡ ಸರಿಯಾದ ಹೋರಾಟ ಮಾಡಿಲ್ಲ. ಮಹಾತ್ಮಾ ಗಾಂಧಿಯವರು ಉಪವಾಸ ಮಾಡ್ತಾರೆ, ಯಾಕಾಗಿ ಮಾಡ್ತಾರೆ? ಪೂನಾ ಒಪ್ಪಂದ ನಡೆದಂತ ಸಂದರ್ಭದಲ್ಲಿ ಅವರು ಕೆಲವು ಜಾತಿಗಳಿಗೆ ವಿಶೇಷ ಸವಲತ್ತುಗಳನ್ನು ಕೊಡಬಾರದು ಎಂದು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿಶೇಷವಾಗಿ ಪ್ರತ್ಯೇಕ ಮತದಾನವನ್ನು ಕೊಡಬಾರದು ಎನ್ನುವುದು ಅವರ ಉದ್ದೇಶ. ಹೀಗಾಗಿ ಮಹಾತ್ಮ ಗಾಂಧಿಯವರು ಅರ್ಧಂಬರ್ಧ ಜಾತಿ ವಿರೋಧಿ ಆಗಿದ್ದರು. ಅವರು ಪೂರ್ತಿಯಾಗಿ ಜಾತಿಯನ್ನು ವಿರೋಧ ಮಾಡುತ್ತಿರಲಿಲ್ಲ.

ಅಂಬೇಡ್ಕರ್ ಅವರು ಅಲ್ಲಿ ಹೇಳ್ತಾರೆ, ಸಿಖ್ಖರಿಗೆ, ಮುಸಲ್ಮಾನರಿಗೆ ಲಖ್ನೋ ಪ್ಯಾಕ್ಟ್ ನಲ್ಲೇ ಪ್ರತ್ಯೇಕ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಇವರು ಎಸ್ಸಿ, ಎಸ್ಟಿಗಳಿಗೆ ಮೀಸಲಾತಿಯನ್ನೇ ಕೊಡಬಾರದು ಎನ್ನುವುದು ಸರಿಯಲ್ಲ ಎಂದಿದ್ದಾರೆ. ಇವರ ಈ ಮೀಸಲಾತಿ ವಿರೋಧಿ ನಡೆ ಸುಮಾರು ಶೇ.30 ರಷ್ಟು ದೇಶವಾಸಿಗಳಿಗೆ ಅನುಮಾನ ಬರುತ್ತೆ.

ಒಂದು ಬಾರಿ, ಗಾಂಧೀಜಿಯವರು ಮದರಾಸಿನ ಒಂದು ಸ್ಲಂಗೆ ಹೋಗಿ ಅಲ್ಲಿ ಒಂದು ಗುಡಿಸಲು ನಿರ್ಮಿಸಿಕೊಂಡು ಚಾಪೆ ಮೇಲೆ ತಂಗಿ ಬರುತ್ತಾರೆ. ಅವರು ಹೋಗಿ ಎಂಟು ದಿನಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಚನ್ನೈನ ಲೀಮರ್ಡಿಯನ್ ಫೈವ್ ಸ್ಟಾರ್ ಹೋಟಲ್ ನಲ್ಲಿ ಉಳಿದುಕೊಳ್ಳುತ್ತಾರೆ. ಪತ್ರಕರ್ತರು ಕೇಳುತ್ತಾರೆ. Mr. Ambedkar you are staying in five star hotel where has Gandhi stayed in a slum? ಆಗ ಅಂಬೇಡ್ಕರ್ ಉತ್ತರ ಹೇಳ್ತಾರೆ, ಆತ ಯಥಾಸ್ಥಿತಿವಾದಿ. ಅಂದರೆ ಬಟ್ಟೆ ಇಲ್ಲದ ಮನುಷ್ಯನನ್ನು ನೀನು ಬಟ್ಟೆ ಇಲ್ಲದಂತೆಯೇ ಇರುತ್ತೇನೆ. ನಾನೂ ಬಟ್ಟೆ ಇಲ್ಲದಂತೆಯೇ ಇರುತ್ತೇನೆ ಎಂದು ಹೇಳುತ್ತಾನೆ. ಆದರೆ ನನ್ನನ್ನು ನೋಡಿ.. ನನ್ನ ಜನ ಸ್ಲಂ ನಲ್ಲಿ ಇರುವಂತವರು.. ಅವರು ನನ್ನ ಹಾಗೆ ಫೈವ್ ಸ್ಟಾರ್ ಹೋಟಲ್ ಗಳಲ್ಲಿ ಇರಬೇಕು ಎನ್ನುವುದು ನನ್ನ ವಾದ ಎಂದರು.

ಹಾಗಾಗಿ ನೆಹರು, ಗಾಂಧಿ ಅಥವಾ ಈಗಿನ ಕಾಲಕ್ಕೆ ಬಂದರೆ ಅಣ್ಣಾ ಹಜಾರೆ ಅವರಾಗಲೀ ಯಾರೂ ಜಾತಿ ವಿರೋಧಿಗಳಾಗಿರಲಿಲ್ಲ. ಲೋಹಿಯಾ ತಮ್ಮದೇ ಆದ ವಿಧದಲ್ಲಿ ಜಾತಿಯನ್ನು ವಿರೋಧಿಸುತ್ತಿದ್ದರು. ಭಾರತದ ಭ‍್ರಷ್ಟತೆಯಲ್ಲಿ ನಂ. 1 ಎನ್ನುವುದು ಯಾವುದಾದರೂ ಇದ್ದರೆ ಅದು ಜಾತಿ ಎನ್ನಬಹುದು. ಆದರೆ ಆಮ್ ಆದ್ಮಿ ಪಕ್ಷದವರು ಯಾವ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ? ಆದರೆ, 2600 ವರ್ಷಗಳಿಂದ ಅಸ್ತಿತ್ವದಲ್ಲಿ ಇರುವಂತಹ ಜಾತಿಯ ಬೇರುಗಳನ್ನು ಹೊಡೆಯುವ ಸಲುವಾಗಿ ಭಾರತದಲ್ಲಿ ಹೋರಾಟ ಮಾಡಿರುವವರು ವಿರಳ. ಭಗವಾನ್ ಬುದ್ಧರ ನಂತರ ಬಸವಣ್ಣ, ನಂತರ ಫುಲೆ ದಂಪತಿ, ಶಾಹು ಮಹಾರಾಜ, ನಾರಾಯಣ ಗುರುಗಳು ಜಾತಿ ವಿರುದ್ಧ ಹೋರಾಟ ಮಾಡಿದರು. ಅದು ಪ್ರಾದೇಶಿಕವಾಗಿತ್ತು. ಅವರೆಲ್ಲರ ನಂತರ ಅಖಿಲ ಭಾರತ ಮಟ್ಟದಲ್ಲಿ ಜಾತಿ ನಿರ್ಮೂಲನೆಗಾಗಿ ಹೋರಾಟ ಮಾಡಿದವರು ಬಾಬಾ ಸಾಹೇಬ ಅಂಬೇಡ್ಕರ್ ಅವರು.

Southborough ಆಯೋಗ ಬಂದಾಗ ಕೇವಲ ಎಸ್ಸಿಗಳ ಬಗ್ಗೆ ಮಾತ್ರ ಚರ್ಚೆ ಆಗಿತ್ತು. ಅದರಲ್ಲಿ ಈ ಮೂಲನಿವಾಸಿ, ಆದಿವಾಸಿ ಗಿರಿಜನರನ್ನು ಒಳಗೊಂಡ ಎಸ್ಟಿಗಳ ಬಗ್ಗೆ ಚರ್ಚೆನೇ ಆಗಿರಲಿಲ್ಲ. ಹಾಗಾಗಿ ಮತ್ತೊಂದು ಆಯೋಗ ರಚನೆ ಮಾಡಬೇಕು ಎಂದು ಅಂಬೇಡ್ಕರ್ ಅವರು ಬ್ರಿಟಿಷ್ ಸರಕಾರವನ್ನು ಒತ್ತಾಯ ಮಾಡಿದರು. ಆ ಸೌತ್ ಬರೋ ಆಯೋಗಕ್ಕೆ ಮನವಿಯನ್ನು ಕೊಟ್ಟು, ಜನ ಲಕ್ಷಾಂತರ ಕಾಡು ಮೇಡುಗಳಲ್ಲಿ ನಾಯಿ ನರಿಗಳ ರೀತಿ ಬದುಕುತ್ತಿದ್ದಾರೆ. ಹೀಗಾಗಿ ಅವರನ್ನು ಮೇಲೆತ್ತಲು ಇನ್ನೊಂದು ಆಯೋಗವನ್ನು ಕಳಿಸಬೇಕು ಎಂದು ಒತ್ತಾಯ ಮಾಡಿದ ಮೇಲೆ ಸ್ಟಾರ್ಟೆ ಆಯೋಗ ಬಂತು. ಈ ಆಯೋಗ ಮತ್ತು ಸೌತ್ ಬರೋ ಆಯೋಗದ ವರದಿಯ ನಂತರ ಸೈಮನ್ ಕಮಿಷನ್ ಮುಂದೆ ಅವರು ತೋರಿಸಿದ ಸಾಕ್ಷಿಗಳು, ಮಾನವೀಯತೆಯನ್ನು ಮೆರೆದಾಡುವಂತವಾಗಿವೆ. ಕಾಲನಿಗಳು, ವಿಶೇಷವಾಗಿ ಎಸ್ಸಿ, ಎಸ್ಟಿ ಕಾಲನಿಗಳು ಯಾವ ರೀತಿ ಕಟ್ಟಲ್ಪಟ್ಟಿವೆ ಎನ್ನುವುದನ್ನು ತಿಳಿಸಿದರು. ಪೇಶ್ವೆ, ಬಾಜೀರಾಯನ ಕಾಲದಲ್ಲಿ ಮೇಲ್ಜಾತಿಯವರ ಮೇಲೆ ಎಸ್ಸಿ, ಎಸ್ಟಿ ಸಮುದಾಯದವರ ನೆರಳು ಬಿದ್ದರೆ ಮೈಲಿಗೆ ಆಗುತ್ತದೆ ಎಂದು ಕೆಳ ಸಮುದಾಯದವರು 12 ಗಂಟೆ ಒಳಗೆ ಮಾತ್ರ ಓಡಾಡಬೇಕು ಎನ್ನುವ ನಿಬಂಧನೆ ಇತ್ತು. ಇದರನ್ವಯ ಉತ್ತರ ಮತ್ತು ದಕ್ಷಿಣಾಭಿಮುಖವಾಗಿ ಕಟ್ಟಲ್ಪಟ್ಟಿದ್ದ ಎಸ್ಸಿ, ಎಸ್ಟಿ ಸಮುದಾಯದವರ ಕಾಲನಿಗಳ ಆ ಕುರಿತು ಸಾಕ್ಷಿ ನೀಡಿದರು. ಇದಕ್ಕೆ ಆ ಸಮಯದಲ್ಲಿ ಕಾಂಗ್ರೆಸ್ ನವರು ಸೈಮನ್ ಗೋ ಬ್ಯಾಕ್ ಎಂದು ಗುಲ್ಲೆಬ್ಬಿಸಿದರು.

ಆದರೆ ದೇಶದಲ್ಲಿ ಪೆರಿಯಾರ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಇಬ್ಬರೇ ಇಬ್ಬರು ಮಾತ್ರ ವೆಲ್ಕಮ್ ಸೈಮನ್ ಎಂದು ಕರೆದರು. ಹೀಗೆ ವಿರೋಧದ ನಡುವೆಯೂ ಬಂದ ಸೈಮನ್ ರಿಗೆ ಅಂಬೇಡ್ಕರ್ ಅವರು ದೇಶದಲ್ಲಿ ಜಾತಿಯ ಆಧಾರದ ಮೇಲೆ ಕೆರೆ ನೀರಿಗೂ ಪ್ರವೇಶ ಇರದ ಕುರಿತು ಸಾಕ್ಷಿ ಸಮೇತ ತೋರಿಸಿದರು. ಅವರು ಕೋಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಅದನ್ನು ಹೇಳಿದರು, ನನ್ನ ದೇಶದಲ್ಲಿ ಇಲಿಯನ್ನು ವಾಹನ ಮಾಡಿಕೊಂಡ ಗಣೇಶನನ್ನು ದೇವರು ಎಂದು ಪೂಜೆ ಮಾಡುತ್ತಾರೆ, ಕತ್ತೆ ಕುದುರೆಯನ್ನು ಲಕ್ಷ್ಮೀ ಎಂದು ಪೂಜೆ ಮಾಡುತ್ತಾರೆ, ಎಮ್ಮೆಯನ್ನು ಯಮಧರ್ಮರಾಜ ಎಂದು ಪೂಜೆ ಮಾಡುತ್ತಾರೆ, ಹಂದಿಯನ್ನು ವರಾಹ ಎಂದು ಪೂಜೆ ಮಾಡುತ್ತಾರೆ. ಈ ಇಲಿ, ಕತ್ತೆ, ಕುದುರೆ, ಎಮ್ಮೆ, ಹಂದಿಗೆ ಕೆರೆಯಲ್ಲಿ ನೀರು ಕುಡಿಯಲು ಸ್ವತಂತ್ರ ಅವಕಾಶ ಹೊಂದಿವೆ. ಆದರೆ ನನ್ನ ಜನಕ್ಕೆ ಕೆರೆ ನೀರಿಗೆ ಪ್ರವೇಶ ಇಲ್ಲ ಎಂದು ನೊಂದುಕೊಂಡಿದ್ದರು.

ಹೀಗಾಗಿ ಮಾನವ ಬಂಧುತ್ವ ಎನ್ನುವ ಕಲ್ಪನೆ ನನ್ನ ಪ್ರಕಾರ, ಈ ದೇಶದಲ್ಲಿ ಜಾತೀಯತೆ ನಿರ್ಮೂಲನೆ ಮಾಡುವ ಸಾಧನ ಆಗಬೇಕು. ಒಬ್ಬ ಅನರ್ಹ ಪ್ರಧಾನ ಮಂತ್ರಿ ಸ್ಥಾನಕ್ಕೆ ಹೋಗಿರುವುದಕ್ಕೆ ಕಾರಣ ನಮ್ಮಲ್ಲಿ ಒಡಕುಗಳು ಹುಟ್ಟಿರುವುದು. ಇಲ್ಲಿ ಒಂದು ವೇಳೆ ಜಾತಿ ಇಲ್ಲ ಎಂದಿದ್ದರೆ, ಭಾರತ ಜನತಾ ಪಕ್ಷ ಈ ದೇಶದಲ್ಲೇ ಇರುತ್ತಿರಲಿಲ್ಲ. ಆದರೆ, ನಾವು ಇಂದು ಒಂದು ಜಾತಿಯನ್ನು ಕಂಡರೆ ಇನ್ನೊಂದು ಜಾತಿಗೆ ಆಗದಿರುವ ಸ್ಥಿತಿಯಲ್ಲಿದ್ದೇವೆ.

ಇವತ್ತು ದೇಶದಲ್ಲಿ 42,000 ಸಂಘಟನೆಗಳು ನೋಂದಣಿಯಾಗಿವೆ. ಬಹುಶಃ 70-80ರ ದಶಕದಲ್ಲಿ 12 ಸಾವಿರ ಸಂಘಟನೆಗಳು ನೋಂದಣಿಯಾಗಿರುವುದು ದಾಖಲೆಯಾಗಿತ್ತು. ಇವತ್ತು 42 ಸಾವಿರ ಸಂಘಟನೆಗಳು, ಚುನಾವಣಾ ಆಯೋಗದಲ್ಲಿ 1400 ರಾಜಕೀಯ ಪಕ್ಷಗಳು ನೋಂದಣಿ ಆಗಿವೆ. ಕರ್ನಾಟಕದಲ್ಲಿ ಮಾತ್ರ 989 ದಲಿತ ಸಂಘಟನೆಗಳು ನೋಂದಣಿಯಾಗಿವೆ. ಬಹುಶಃ ಈ ಸಂಘಟನೆಗಳಲ್ಲಿ ಒಂದು ಕೋಆರ್ಡಿನೇಶನ್ (ಮಾನವ ಬಂಧುತ್ವ)ವೇ ಇಲ್ಲ. ಹೀಗಾಗಿ ನಾವೆಲ್ಲ ಛಿದ್ರಛಿದ್ರವಾಗಿದ್ದೇವೆ. ವಿಶೇಷವಾಗಿ ರಾಜಕಾರಣಿಗಳೇ ಈ ಸಮಾಜವನ್ನು ಒಡೆದು ಹಾಕಿದ್ದಾರೆ. ಕರ್ನಾಟಕದಲ್ಲಿ ಬಹುಶಃ ರಾಜಕೀಯ ಪಕ್ಷಗಳ ತೆವಲಿಗಾಗಿ ದಲಿತರನ್ನು, ಎಸ್ಸಿ, ಎಸ್ಟಿಗಳನ್ನು ಒಡೆದು ಹಾಕಿ ಅವರ ಚಮಚಾಗಳನ್ನಾಗಿ ಮಾಡಿಕೊಂಡು ಅಧಿಕಾರವನ್ನು ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಇವತ್ತು ಭ್ರಷ್ಟಾಚಾರಗಳಲ್ಲಿ ಮೊದಲನೇ ಭ್ರಷ್ಟಾಚಾರ ಜಾತಿ ಆಗಬೇಕು. 2ನೇ ಭ್ರಷ್ಟಾಚಾರ ದೇವದಾಸಿ ಪದ್ಧತಿ. 3ನೇಯದು ವ್ಯಕ್ತಿಯ ವೈಭವೀಕರಣ (ಒಬ್ಬ ವ್ಯಕ್ತಿಯನ್ನು ಹೊಗಳಿ ಅಟ್ಟಕ್ಕೇರಿಸುವುದೂ ಭ್ರಷ್ಟಾಚಾರ). ಇನ್ನು ಕೊನೆಯದಾಗಿ ಉಳಿದಿರುವುದು ಹಣದ ಭ್ರಷ್ಟಾಚಾರ.

ಜಾತಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜಾರೆ, ಆರ್ ಎಸ್ ಎಸ್ ಮುಖ್ಯಸ್ಥರಿಗೆಲ್ಲ ಗೊತ್ತಿದೆ. ಆದರೆ ಅವರಿಗೆ ಈ ಜಾತಿ ವ್ಯವಸ್ಥೆಯಿಂದ ಲಾಭ ಇರುವುದರಿಂದ ಈ ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡುವುದಿಲ್ಲ. ನಾವು ಒಂದಾದರೆ ಅವರಿಗೆ ಲಾಭ ಇಲ್ಲ. ಹೀಗಾಗಿ ಅವರು ಅದನ್ನು ಪೋಷಣೆ ಮಾಡುತ್ತಾರೆ. ಇದರಿಂದ ನಷ್ಟ ಆಗುವುದು, ಕಷ್ಟ ಅನುಭವಿಸುವುದು ನಾವುಗಳು ಮಾತ್ರ. ಹೀಗಾಗಿ ಈ ಮಾನವ ಬಂಧುತ್ವ ವೇದಿಕೆ ಕೇವಲ ಎಸ್ಸಿ, ಎಸ್ಟಿ ಒಗ್ಗಟ್ಟಿನ ಬಗ್ಗೆ ಮಾತ್ರ ಗಮನ ಹರಿಸದೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ ಎಲ್ಲ ಸಮುದಾಯಗಳ ಒಗ್ಗಟ್ಟಿಗಾಗಿ ಶ್ರಮ ವಹಿಸಬೇಕು. ಇದರಿಂದ ಸಮಾಜದಲ್ಲಿ ಮಾನವ ಬಂಧುತ್ವ ಮರುಸ್ಥಾಪನೆಯಾಗಲು ಶ್ರಮಿಸಬೇಕಾಗಿದೆ.

ಕರ್ನಾಟಕದಲ್ಲಿ ಮಿಲ್ಲರ್ ಕಮಿಷನ್ ಬಂದಿರುವುದು ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರವಲ್ಲ. ಇದು ಒಕ್ಕಲಿಗರಿಗೂ ಸೇರಿ ಬಂದಿದೆ. ದೇಶದಲ್ಲಿ ಮೊಟ್ಟ ಮೊದಲಿಗೆ ಮೀಸಲಾತಿಯನ್ನು ಕೊಟ್ಟಂತ ಶಾಹು ಮಹಾರಾಜರು ಎಸ್ಸಿ, ಎಸ್ಟಿ, ಮುಸ್ಲಿಂ ಮತ್ತು ಲಿಂಗಾಯತರಿಗೂ ಸೇರಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರು. ಇಲ್ಲಿ ಲಿಂಗಾಯತರು ಕೂಡ ಭೂಮಾಲೀಕರಾಗಿರಲಿಲ್ಲ. ಒಕ್ಕಲಿಗರೂ ಕೂಡ ಭೂಮಾಲೀಕರಾಗಿರಲಿಲ್ಲ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಪುಸ್ತಕ ಓದಿದರೆ ಒಕ್ಕಲಿಗರೂ ಗೇಣಿದಾರರಾಗಿದ್ದರು ಎಂದೇ ತಿಳಿದು ಬರುತ್ತದೆ. ಆದರೆ ಇತ್ತೀಚೆಗೆ ಒಕ್ಕಲಿಗರು ಮತ್ತು ಲಿಂಗಾಯತರು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಮೇಲ್ಮಟ್ಟಕ್ಕೆ ಬಂದಿದ್ದಾರೆ.

ಜಾತಿ ತೊಲಗಿಸುವುದು ಹೇಗೆ ಎಂಬುದರ ಬಗ್ಗೆ ಅಂಬೇಡ್ಕರ್ ಅವರು ಹೇಳುತ್ತಾರೆ, ಈ ದೇಶಕ್ಕೆ ದನಗಳನ್ನು ಮೇಯಿಸಿಕೊಂಡು ಗುಂಪುಗುಂಪಾಗಿ ಬಂದ ಆರ್ಯರು ಈ ದೇಶದ ಅಧಿಕಾರವನ್ನು ಹಿಡಿದುಕೊಂಡರು. ಆ ನಂತರ ಮೊಗಲರು, ನಂತರ ಬ್ರಿಟಿಷರು ಈ ದೇಶಕ್ಕೆ ಬಂದರು. ಬಂದವರ ಸಂಖ್ಯೆ ಕಡಿಮೆ ಇತ್ತು. ಆದರೆ ಇವರ್ಯಾರ ಮೇಲೆಯೂ ನಮ್ಮ ದೇಶದಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆಯಲಿಲ್ಲ. ಯಾಕೆಂದರೆ ಅವರೆಲ್ಲ ನಮ್ಮ ದೇಶದಲ್ಲಿ ಆಳುವ ವರ್ಗವಾಗಿ ಪರಿವರ್ತನೆ ಹೊಂದಿದರು. ಆದರೆ ಇಲ್ಲಿ ಬಹುಸಂಖ್ಯಾತರಾಗಿರುವ ದಲಿತರು, ಅಸ್ಪೃಶ್ಯರು, ಹಿಂದುಳಿದ ವರ್ಗದವರ ಮೇಲೆ 2500 ವರ್ಷಗಳಿಂದ ದೌರ್ಜನ್ಯ ದಬ್ಬಾಳಿಕೆ ನಡಿಯುತ್ತಿದೆ. ಇದಕ್ಕೆ ಕಾರಣ ಆ ಕಡಿಮೆ ಸಂಖ್ಯೆಯ ಜನರಿಂದ ನಾವು ಆಳಿಸಿಕೊಳ್ಳುವವರು.

ಹೀಗಾಗಿ ನಮ್ಮ ವರ್ಗ ಆಳುವ ವರ್ಗವಾದಾಗ ನಮ್ಮ ಮೇಲೆ ದೌರ್ಜನ್ಯ, ದಬ್ಬಾಳಿಕೆ ಕಡಿಮೆಯಾಗುತ್ತದೆ. ಆದರೂ, ನಿಜವಾದ ಪೂನಾ ಒಪ್ಪಂದ ಜಾರಿಗೆ ಬರಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಒಂದು ವೇಳೆ ಪ್ರತ್ಯೇಕ ಮತದಾನ ಜಾರಿಯಾಗಿದ್ದಿದ್ದರೆ ಈ ದೇಶದಲ್ಲಿ ನಾಯಕತ್ವ ಹುಟ್ಟಿಕೊಳ್ಳುತ್ತಿತ್ತು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಇಂದು ಅಂಬೇಡ್ಕರ್ ಅವರ ಆಶಯದಂತೆ ಜಾತಿ ನಿರ್ಮೂಲನೆ ಆಗಬೇಕೆಂದರೆ ಉಪಜಾತಿಗಳ ನಡುವೆ ಜಾತಿ ತೋಡೋ ಚಳವಳಿ ಆರಂಭವಾಗಬೇಕು. ಸಮಾಜದ ಎಲ್ಲರೂ ಜಾತಿ ಬಿಟ್ಟು ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಆಗ ಮಾನವ ಬಂಧುತ್ವ ಎನ್ನುವ ಪದಕ್ಕೆ ಒಂದು ನಿಖರವಾದ, ಸರಿಯಾದ ಅರ್ಥ ಸಿಗಬಹುದು ಎನ್ನುವುದು ನನ್ನ ಅಭಿಪ್ರಾಯ.

ಬಿ.ಗೋಪಾಲ್, ಸಾಮಾಜಿಕ ಹೋರಾಟಗಾರ

(ದಿನಾಂಕ 25/10/2014 ಮತ್ತು 26/10/201ರಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ದಿಕ್ಸೂಚಿ ಸಮಾವೇಶದಲ್ಲಿ ಮಾಡಿದ ಭಾಷಣದ ಲೇಖನ ರೂಪ)

Share:

One Response

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ