October 1, 2023 8:47 am

ಸಾಮಾಜಿಕ ನ್ಯಾಯದ ಸುತ್ತ ವಿವಾದ ಸೃಷ್ಟಿ

2014ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ದಿಕ್ಸೂಚಿ ಕಾರ್ಯಕ್ರಮದ ಆಶಯ ಭಾಷಣದ ಲೇಖನ ರೂಪ

ನಾನು ಎಲ್ಲೇ ಮಾತನಾಡಿದರೂ ವಿವಾದ ಸೃಷ್ಟಿಯಾಗುತ್ತದೆ ಎನ್ನುವ ಸಾಮಾನ್ಯ ನಂಬಿಕೆಯಿಂದಾಗಿ ಸ್ವಲ್ಪ ಅಳುಕಿನೊಂದಿಗೇ ಮಾತು ಆರಂಭಿಸುತ್ತೇನೆ. ಇದು ಮಾನವ ಬಂಧುತ್ವ ವೇದಿಕೆಯ ದಿಕ್ಸೂಚಿ ಕಾಯರ್ಯಕ್ರಮ ಆಗಿರುವುದರಿಂದ, ಮಾಧ್ಯಮದ ಬದಲು ಪ್ರಗತಿಪರ ಪರಂಪರೆಯನ್ನು ಹೊಂದಿರುವ ನಾವು ಇಂದು ಯಾವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ ಮತ್ತು ಯಾವ ಸವಾಲನ್ನು ಹೇಗೆ ಎದುರಿಸಬೇಕಾಗಿದೆ ಎನ್ನುವುದಕ್ಕೆ ಭೂಮಿಕೆ ರೂಪದಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಇಂದು ನಾವೆಲ್ಲ ನಿರಾಶೆ, ಆತಂಕ, ಗೊಂದಲ ಜತೆಗೆ ಒಂದು ರೀತಿಯ ವಿಸ್ಮೃತಿಗೆ ಒಳಗಾಗಿದ್ದೇವೆ. ನಮ್ಮಲ್ಲಿ ವಿಸ್ಮೃತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಇಂದು ನಮ್ಮ ಮೇಲಿನ ವಿಶ್ವಾಸವನ್ನು ನಾವೇ ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದೇವೆ. ನಾಡಿನ ಅನೇಕಾನೇಕ ಚಿಂತಕರು, ಸಾಹಿತಿಗಳು, ಹಿರಿಯರು, ಸಾಮಾಜಿಕ ಸುಧಾರಕರ ಒಡನಾಟ, ಓದು, ಪ್ರಭಾವದಿಂದ ಜೀವನ ಮೌಲ್ಯ, ಬದುಕಿನ ನೋಟ ಮತ್ತು ಸೈದ್ಧಾಂತಿಕ ಸ್ಪಷ್ಟತೆಯನ್ನು ನಾವು ಗಳಿಸಿಕೊಂಡಿದ್ದೆವು. ಆದರೆ ಈಗ ಇದ್ದಕ್ಕಿದ್ದ ಹಾಗೆ ಇದೆಲ್ಲವೂ ಸುಳ್ಳು, ಪೊಳ್ಳು, ಹೀಗಲ್ಲವೇ ಅಲ್ಲ ಎನ್ನುವ ಅಭಿಪ್ರಾಯವನ್ನು ಇಡೀ ದೇಶದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ನಮಗೇ ನಾವಂದುಕೊಂಡದ್ದು ಸುಳ್ಳಿರಬಹುದಾ? ಎನ್ನಿಸುವಂತೆ ನಮ್ಮ ಆತ್ಮಸ್ಥೈರ್ಯವನ್ನು ಉಡುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಕಾರಣದಿಂದಾಗಿ ಪ್ರಸ್ತುತ ಯಾವ ರೀತಿ ಚಿಂತನೆ ಮಾಡಬೇಕು, ಈ ದ್ವಂದ್ವಗಳನ್ನು ಹೇಗೆ ಎದುರಿಸಬೇಕು ಎನ್ನುವ ದೊಡ್ಡ ಪ್ರಶ್ನೆಗಳು ನಮ್ಮೆಲ್ಲರ ಮುಂದೆ ಎದುರಾಗಿವೆ.

ಈ ನಿಟ್ಟಿನಲ್ಲಿ ಚಿಂತನೆ ಮಾಡುತ್ತಾ ಹೋದರೆ, 12ನೇ ಶತಮಾನದಲ್ಲಿ ಬಸವಣ್ಣನವರಿಂದ ಆರಂಭವಾದ ಪ್ರಗತಿಪರ ಚಿಂತನೆಯ ಒಂದು ಬಹುದೊಡ್ಡ ಪರಂಪರೆ ಕನಾರ್ನಾಟಕಕ್ಕಿದೆ. ಅವರ ನಂತರ ಸ್ವತಂತ್ರ ಭಾರತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು, ದೇವರಾಜ ಅರಸು ಅವರಿಂದ ಸಾಗಿ, ಈ ನೆಲದ ಚಳವಳಿಗಳು, ಕಾರಂತ, ಕುವೆಂಪು, ಲಂಕೇಶರಂತಹ ಪ್ರಗತಿಪರ ಸಾಹಿತಿಗಳ ಕೊಡುಗೆ ಕರ್ನಾಟಕದ ಪ್ರಗತಿಪರ ಪರಂಪರೆಯಲ್ಲಿ ಒಳಗೊಂಡಿದೆ. ಆದರೆ ಈಗ, ಇದ್ದಕ್ಕಿದ್ದ ಹಾಗೆ ಇತಿಹಾಸದ ಚಕ್ರ ಹಿಂದಕ್ಕೆ ಹೋಗುವಂತೆ ನಮಗೆ ಭಾಸವಾಗುತ್ತಿದೆ. ಹೀಗಾಗಿ ಪ್ರಗತಿಪರ ವಿಚಾರಹೊಂದಿರುವ ನಾವೆಲ್ಲ ಒಟ್ಟಿಗೆ ಕೂತು ಮಾಡನಾಡುವ ಅಗತ್ಯವಿದೆ.

ಸಾಮಾಜಿಕ ನ್ಯಾಯದ ಸುತ್ತ ವಿವಾದ ಸೃಷ್ಟಿ

ಇತ್ತೀಚಿನ ಚರ್ಚೆಗಳನ್ನು ಗಮನಿಸಿದರೆ, ಅತಿಹೆಚ್ಚು ನಿಂದನೆ, ದೂಷಣೆ, ಟೀಕೆಗೆ ಒಳಗಾಗಿರುವುದು ಸಾಮಾಜಿಕ ನ್ಯಾಯ ಸಿದ್ಧಾಂತ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಸುಳ್ಳು ಹೇಳುತ್ತಿದ್ದಾರೆಂದು ಬಿಂಬಿಸುವುದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರನ್ನು ಗೇಲಿ ಮಾಡುವುದು ನಡೆಯುತ್ತಿದೆ.

ಸಾಮಾಜಿಕ ನ್ಯಾಯದ ಒಂದು ಪ್ರಮುಖ ಅಸ್ತ್ರವಾಗಿರುವ ಮೀಸಲಾತಿ ಕರ್ನಾಟಕದಲ್ಲಿ ಒಂದು ಸುದೀರ್ಘ ಇತಿಹಾಸ ಪರಂಪರೆಯನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಮಿಲ್ಲರ್ ಕಮಿಷನ್, ನಾಗನಗೌಡ ಸಮಿತಿ, ಹಾವನೂರು ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಸಮಿತಿಗಳು ಕರ್ನಾಟಕವು ಮೀಸಲಾತಿ ಪರಂಪರೆಯಲ್ಲಿ ದೇಶದಲ್ಲೇ ಮುಂದಿನ ಸ್ಥಾನದಲ್ಲಿರುವುದಕ್ಕೆ ಉದಾಹರಣೆಗಳು.

ಭೂಸುಧಾರಣೆ ಸಾಮಾಜಿಕ ನ್ಯಾಯದ ಮತ್ತೊಂದು ಅಸ್ತ್ರ. ಈ ವಿಷಯದಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಜಾರಿಯಾಗಿರುವ ಭೂಸುಧಾರಣೆಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಭೂಸುಧಾರಣೆ ಕಾಯಿದೆ ಅತ್ಯಂತ ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಜಾರಿಯಾಗಿದೆ ಎನ್ನುವುದು ನನ್ನ ಅನಿಸಿಕೆ.

ಇಂತಹ ಉನ್ನತ ಪರಂಪರೆಯನ್ನು ಹೊಂದಿರುವ ಮೀಸಲಾತಿ, ಭೂಸುಧಾರಣೆಯ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಪ್ರಶ್ನಿಸುವ ವಾತಾವರಣ ಇಂದು ಇಲ್ಲಿ ಇದ್ದಕ್ಕಿದ್ದ ಹಾಗೆ ಸೃಷ್ಟಿಯಾಗಿದೆ. ಹಾಗೆಂದು ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯನ್ನು ಯಾರೂ ನೇರವಾಗಿ ಪ್ರಶ್ನಿಸುತ್ತಿಲ್ಲ. ಮಂಡಲ್ ವರದಿ ಜಾರಿಗೆ ಬಂದಾಗ ತೀವ್ರತರದಲ್ಲಿ ವಿರೋಧ ವ್ಯಕ್ತಪಡಿಸಿದವರೂ ಇಂದು ಇವುಗಳ ಬಗ್ಗೆ ನೇರವಾಗಿ ಪ್ರಶ್ನೆ ಮಾಡುತ್ತಿಲ್ಲ.

ಇದಕ್ಕೆ ಎರಡು ಕಾರಣಗಳನ್ನು ವಿವರಿಸಬಹುದು. ಇಂದು ಮೀಸಲಾತಿ ವಿಷಯದ ಸುತ್ತ ಬಹುದೊಡ್ಡ ವೋಟ್ ಬ್ಯಾಂಕ್ ಸೃಷ್ಟಿಯಾಗಿರುವುದು. ಹೀಗಾಗಿ ಯಾರಿಗೂ ಮೀಸಲಾತಿಯನ್ನು ಪ್ರಶ್ನಿಸುವ ಧೈರ್ಯವಿಲ್ಲ. ಇಂದಿನ ಬದಲಾದ ರಾಜಕೀಯ ಸನ್ನಿವೇಶಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂದು ಜಾತೀವಾದಿ, ಕೋಮುವಾದಿ ಎಂದು ಗುರುತಿಸಿಕೊಂಡಿರುವ ಬಿಜೆಪಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಸ್ವಲ್ಪ ಪ್ರಮಾಣದ ಹಿಂದುಳಿದ ಸಮುದಾಯದ ಶಾಸಕರು ಮತ್ತು ಸಂಸದರಿದ್ದಾರೆ.

ಮತ್ತೊಂದು ಕಾರಣವನ್ನು ಗುರುತಿಸುವುದಾದರೆ, ನಾವೆಲ್ಲ ಮುಖ್ಯವಾಗಿ ಸರಕಾರಿ ಸ್ವಾಮ್ಯದಲ್ಲಿರುವ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾತನಾಡುತ್ತೇವೆ. ಆದರೆ ಈ ಎರಡೂ ಕ್ಷೇತ್ರಗಳು ಅತ್ಯಂತ ವೇಗವಾಗಿ ಖಾಸಗೀಕರಣಗೊಳ್ಳುತ್ತಿರುವ ಕ್ಷೇತ್ರಗಳಾಗಿವೆ. ಇದರಿಂದಾಗಿ ಸರಕಾರಿ ಸ್ವಾಮ್ಯದ ಕ್ಷೇತ್ರಗಳಲ್ಲಿ ಉದ್ಯೋಗಗಳಿಲ್ಲ. ಹೀಗಾಗಿ ಇಲ್ಲಿ ಮೀಸಲಾತಿಯನ್ನು ವಿರೋಧಿಸುವ ಅವಶ್ಯಕತೆ ಅವರಿಗೆ ಇಲ್ಲ. ಶಿಕ್ಷಣ, ನೀರು, ಆರೋಗ್ಯ ವಸತಿ, ರಸ್ತೆ ನಿರ್ಮಾಣ ಸೇರಿದಂತೆ ಸರಕಾರ ಮಾಡಬೇಕಾದ ಎಲ್ಲ ಕೆಲಸಗಳನ್ನು ಇಂದು ಖಾಸಗಿಯವರಿಗೆ ಒಪ್ಪಿಸಲಾಗಿದೆ. ಇದರಿಂದಾಗಿ ಮೀಸಲಾತಿಯ ಕುರಿತು ಪ್ರಶ್ನೆ ಮಾಡುವ ಬದಲು ಇಂದು ಸರಸಂಘ ಚಾಲಕರೇ ಮೀಸಲಾತಿಯ ಪರ ಮಾತನಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಜಾತಿ ಇರುವವರೆಗೆ ಮೀಸಲಾತಿ ಇರಬೇಕು ಎನ್ನುವ ಹೇಳಿಕೆ ಕೊಡುವುದು ಅವರಿಗೆ ಸಾಧ್ಯವಾಗಿದೆ. ಇದೇ ಭಾಗವತ್ ಅವರನ್ನು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಕುರಿತು ಅಭಿಪ್ರಾಯ ಕೇಳಿದರೆ ಅವರಿಂದ ಏನು ಉತ್ತರ ಬರುತ್ತದೆ ಎಂದು ನೋಡಬೇಕು. ಆಗ ಅವರ ಬಣ್ಣ ಬಯಲಾಗುತ್ತದೆ.

ಹೀಗಾಗಿ ಮೀಸಲಾತಿಯನ್ನು ನೇರವಾಗಿ ವಿರೋಧಿಸಲಾಗದವರು ಅದರ ಸುತ್ತ ಒಂದು ವಿವಾದವನ್ನು ಸೃಷ್ಟಿಸಿ ಅದರ ಮೂಲಕ ಒಂದು ಸಾರ್ವಜನಿಕ ಚರ್ಚೆಯನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯನ್ನು ನೋಡುವುದಾದರೆ, ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಕೊಡುವ ಹಾಲಿಗೆ 2 ರೂ. ಸಬ್ಸಿಡಿ ಕೊಡಬೇಕು ಎಂದು ಸರಕಾರ ಘೋಷಣೆ ಮಾಡಿತು. ಆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ದನಗಳಿಗೂ ಜಾತಿ ತಂದ್ರಾ ಎಂದು ಎಲ್ಲರೂ ಹಾರಾಟ ನಡೆಸಿದರು. ಆಗ, ನಮ್ಮಲ್ಲೇ ಬಹಳಷ್ಟು ಮಂದಿ ಯಾರು ಮೀಸಲಾತಿಯ ಫಲಾನುಭವಿಗಳು ಮತ್ತು ಅದರ ಸಮರ್ಥಕರೂ ಸಣ್ಣಗೆ ಗೊಣಗಾಟ ಪ್ರಾರಂಭ ಮಾಡಿದರು. ಇದಕ್ಕೆಲ್ಲ ಮೀಸಲಾತಿ ತರುವ ಅಗತ್ಯವಿರಲಿಲ್ಲ ಎಂದು. ಹಿಂದುಳಿದ ಜಾತಿಗಳ ಮಕ್ಕಳಿಗೆ ಪ್ರವಾಸ ಹೋಗುವ ಯೋಜನೆಯೊಂದು ಜಾರಿಗೆ ಬಂತು. ಇದಕ್ಕೂ ಬಹಳಷ್ಟು ಜನ ಅದರ ಫಲಾನುಭವಿಗಳೇ ಇದೆಲ್ಲ ಅಗತ್ಯವಿರಲಿಲ್ಲ. ಮಕ್ಕಳಿಗೆಲ್ಲ ಜಾತಿ ತರುವುದಾ ಎಂದು ವಿರೋಧ ವ್ಯಕ್ತಪಡಿಸಿದರು. ಶಾದಿಭಾಗ್ಯದಂತಹ ಕಾರ್ಯಕ್ರಮ ತಂದಾಗಲೂ ಬಹಳಷ್ಟು ಜನ ಮುಸ್ಲಿಂ ಸಾಹಿತಿಗಳು, ಬುದ್ಧಿಜೀವಿಗಳೇ ಇದರಿಂದ ನೀವು ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡ್ತಿದ್ದೀರಿ ಎಂದು ಇದನ್ನು ವಿರೋಧಿಸಿದರು.

ಈ ಚರ್ಚೆಯನ್ನು ಹುಟ್ಟುಹಾಕಿದವರು ಯಾರು, ಯಾವ ಮಾಧ್ಯಮದಲ್ಲಿ ಅದು ಬರುತ್ತಿದೆ, ಎಲ್ಲಿ ಇದು ಚರ್ಚೆಗೆ ಒಳಗಾಗುತ್ತಿದೆ ಎಂದು ನೋಡಿ. ಈ ರೀತಿ ತಮ್ಮದೇ ಸಮುದಾಯಕ್ಕೆ ನೀಡಿದ ಸೌಲಭ್ಯ ಅಥವಾ ಮೀಸಲಾತಿಯನ್ನು ವಿರೋಧಿಸಿ ಮಾತನಾಡಿದವರ ಹೇಳಿಕೆಯನ್ನು ಪ್ರಕಟಿಸುವ ಟಿವಿ ಅಥವಾ ಪತ್ರಿಕಾ ಮಾಧ್ಯಮದವರು ನೀವು ಪ್ರತಿಪಾದಿಸುವ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಪ್ರಕಟಿಸುತ್ತಾರಾ ಎಂದು ಗಮನಿಸಿ. ಇದರ ಮೂಲಕ ಈ ಮೀಸಲಾತಿಯನ್ನು ಪಡೆದುಕೊಂಡವರಲ್ಲೂ ಒಂದು ಬಗೆಯಲ್ಲಿ ಕೀಳರಿಮೆಯನ್ನು ಹುಟ್ಟಿಸುವುದು, ಮೀಸಲಾತಿ ಪಡೆಯುವುದು ಅವಮಾನ ಎನ್ನುವಂತೆ ಬಿಂಬಿಸುವುದು ನಡೆಯುತ್ತಿದೆ.

ಅದಕ್ಕೇ ಇದನ್ನು, ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ಬದಲು ಅದರ ಸುತ್ತ ಒಂದು ವಿವಾದವನ್ನು ಸೃಷ್ಟಿಸುವುದು. ಅದರ ಮೂಲಕ ಮೀಸಲಾತಿಯನ್ನು ಮೂಲೆಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಅದರ ಬಗ್ಗೆ ನಾವೆಲ್ಲ ಎಚ್ಚರವಾಗಿರಬೇಕು.

ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಾದರೆ, ಸಮಾಜದಲ್ಲಿ ಬುದ್ಧಿಜೀವಿಗಳ ಬಗ್ಗೆ, ಸಾಹಿತಿಗಳ ಬಗ್ಗೆ, ಚಿಂತಕರ ಬಗ್ಗೆ ಒಂದು ರೀತಿಯ ಗೌರವ ಭಾವನೆ ಇತ್ತು. ಆದರೆ ಇತ್ತೀಚೆಗೆ ಜಾಲತಾಣಗಳಲ್ಲಿ ಇವರ ಮೇಲೆ ದಾಳಿಗಳು ನಡೆಯುತ್ತಿವೆ. ಬುದ್ಧಿಜೀವಿಗಳೆಂದರೆ ಲದ್ದಿಜೀವಿಗಳು, ಚಿಂತಕರೆಂದರೆ ಹಂತಕರು ಎನ್ನುವ ಫ್ರೇಸ್(ನುಡಿಗಟ್ಟು)ಗಳು ಸೃಷ್ಟಿಯಾಗುತ್ತಿವೆ. ಯಾರು ಅವರು ನಂಬಿದ ಸಿದ್ಧಾಂತ, ಚಿಂತನೆಗಳಿಗೆ ವಿರುದ್ಧವಾಗಿರುತ್ತಾರೋ ಅವರ ವಿರುದ್ಧ ನಿಂದಿಸುವ, ಹಂಗಿಸುವ ದೂಷಿಸುವ ಪ್ರಯತ್ನಗಳು ನಡೆಯುತ್ತಿವೆ. ಅದರ ಮೂಲಕ ಅವರ ಚಾರಿತ್ರ್ಯಹರಣ ಮಾಡಿ ಅವರ ಬಾಯಿ ಮುಚ್ಚಿಸುವುದು ನಡೆಯುತ್ತಿದೆ. ಇದಕ್ಕೆ ನಾನೂ ಹೊರತಲ್ಲ. ಆದರೆ ಇದಕ್ಕಿಂತ ಮುಖ್ಯವಾಗಿ, ನಮ್ಮ ಬುದ್ಧಿಜೀವಿವರ್ಗದಲ್ಲೇ ಒಂದು ಸಮಸ್ಯೆ ಹುಟ್ಟಿಕೊಂಡಿದೆ. ಇಲ್ಲಿ ಕೆಲವು ಸಾರಿ ನಮ್ಮ ಮಿತ್ರರು ಯಾರು, ಶತ್ರುಗಳು ಯಾರು ಎನ್ನುವ ಗೊಂದಲ ಸೃಷ್ಟಿಯಾಗಿದೆ. ಇತ್ತೀಚಿನ ರಾಜಕೀಯ ಬದಲಾವಣೆಯ ನಂತರ ಗಮನಿಸಬಹುದು.

ನಮ್ಮ ಬಹಳಷ್ಟು ಸೆಕ್ಯೂಲರ್ (ಜಾತ್ಯತೀತ) ಬುದ್ಧಿಜೀವಿಗಳೂ ಸಹ, ಇಲ್ಲಪ್ಪ ಬಿಜೆಪಿಯವರಿಗೆ ಒಂದು ಅವಕಾಶ ಕೊಟ್ಟುಬಿಡಬೇಕು. ಏನೋ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇವರೆಲ್ಲ ಬಹಳ ಸುಪರ್ ವಿಜಲ್ ಆಗಿಯೋ, ಮೇಲ್ಮಟ್ಟಕ್ಕೆ ನೋಡಿಯೋ ಅಥವಾ ಬೇರೆ ಏನಾದರೂ ಹುನ್ನಾರಗಳನ್ನು ಇಟ್ಟುಕೊಂಡೋ ಈ ರೀತಿಯ ಪ್ರತಿಕ್ರಿಯೆಗಳನ್ನು ಕೊಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸಮಾಜಕ್ಕೆ  ಸರಿಯಾದ ದಾರಿಯನ್ನು ತೋರಿಸಬೇಕಾದ ಈ ವರ್ಗದಲ್ಲೇ ಗೊಂದಲ ಸೃಷ್ಟಿಯಾಗುತ್ತಿರುವುದು ಉದ್ದೇಶಪೂರ್ವಕವೋ ಅಥವಾ ಅದನ್ನು ಸಹಜವಾಗಿ ನಂಬಿಯೇ ಈ ರೀತಿಯ ಅಭಿಪ್ರಾಯಗಳನ್ನು ಕೊಡುತ್ತಾರೋ ತಿಳಿಯುತ್ತಿಲ್ಲ.

ಉದಾ: ನಾನು ಬಹಳ ಅಭಿಮಾನ ಪಡುವ ಪತ್ರಕರ್ತ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಮಾಡುವ ವಿನೋದ್ ಮೆಹ್ತಾ ಅವರು ಇತ್ತೀಚೆಗೆ ಒಂದು ಲೇಖನ ಬರೆಯುತ್ತಾರೆ. ಆ ವಿವರಣೆಗಳಿಗೆ ಹೋಗದೆ ಲೇಖನದ ಕೊನೆಯಲ್ಲಿ ಅವರು ಬರೆದಿರುವುದನ್ನು ಇಲ್ಲಿ ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಅವರು ಹೀಗೆ ಬರೆಯುತ್ತಾರೆ, ದೇಶದ ಪ್ರಧಾನಿಗಳು ಮಾಧ್ಯಮದವರನ್ನು ದೂರ ಇಡಬಾರದು. ಇದರಿಂದ ವೈಯಕ್ತಿಕವಾಗಿ ಅವರಿಗೂ ನಷ್ಟ. ಪ್ರಜಾಪ್ರಭುತ್ವಕ್ಕೂ ನಷ್ಟ. ಅವರು ಮಾಧ್ಯಮದವರನ್ನು ಕರೆದು ಮಾತನಾಡಬೇಕು. ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಇದರಿಂದ ಮಾಧ್ಯಮದವರಿಗೂ ಬಹಳದೊಡ್ಡ ಹಾನಿ ಎಂಬರ್ಥದಲ್ಲಿ ಅವರು ಬರೆದಿದ್ದಾರೆ. ನನಗೆ ಇದನ್ನು ಓದಿ ನಗು ಬಂತು. ಯಾಕಂದ್ರೆ, ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ. ಸುದ್ದಿ ಯಾವುದು ಎಂದು ಕೇಳುವುದಾದರೆ, ಸರಕಾರ ಯಾವುದನ್ನು ಮುಚ್ಚಿಡುತ್ತದೋ ಅದು ಸುದ್ದಿ. ಉಳಿದದ್ದೆಲ್ಲವೂ ಜಾಹೀರಾತು ಎಂದು. ಈ ಮಾತನ್ನು ಇಲ್ಲಿ ಹೋಲಿಸಿ ನೋಡುವುದಾದರೆ, ವಿನೋದ್ ಮೆಹ್ತಾ ಅವರು ತಮ್ಮ ಲೇಖನದ ಕೊನೆಯ ಸಾಲುಗಳ ಮೂಲಕ ಜಾಹೀರಾತುಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಸುದ್ದಿಯನ್ನಲ್ಲ. ಇದೇ ವಿನೋದ್ ಮೆಹ್ತಾ ಅವರು ಔಟ್ ಲುಕ್ ಪತ್ರಿಕೆಯ ಸಂಪಾದಕರಾಗಿದ್ದಾಗ, ಆಗಿನ ಪ್ರಧಾನಿ ವಾಜಪೇಯಿ ಅವರ ದತ್ತುಪುತ್ರಿಯ ಗಂಡ ಪ್ರಧಾನಿ ಕಾರ್ಯಾಲಯದಲ್ಲಿ ಮಾಡಿದ ಭಾನಗಡಿಯನ್ನು ಎಕ್ಸ್ಪೋಸ್ ಮಾಡಿದವರು. ಇದಕ್ಕಾಗಿ ಅವರ ಪತ್ರಿಕೆಯ ಮಾಲೀಕರ ಮೇಲೆ ಐಟಿ ದಾಳಿ ನಡೆಯಿತು. ಇತ್ತೀಚಿನ ಉದಾಹರಣೆ ಹೇಳುವುದಾದರೆ, ರಾಡಿಯಾ ಟೇಪ್ ಹಗರಣವನ್ನು ಬಹಿರಂಗ ಮಾಡಿದವರು ವಿನೋದ್ ಮೆಹ್ತಾ. ನಾನು ಪತ್ರಿಕೋದ್ಯಮ ಪ್ರಾರಂಭಿಸಿದ ಮುಂಗಾರಿನ ದಿನಗಳಿಂದಲೂ ಅವರ ಇಂಡಿಯಾ ಪೋಸ್ಟ್, ಸಂಧ್ಯಾ ಅಬ್ಸರ್ವ್ ನಿಂದ ಹಿಡಿದು ಈಗಿನವರೆಗೂ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ಅಂಥವರು ಇವತ್ತು ಪ್ರಧಾನಿಯವರನ್ನು ಹೀಗೆ ಕೇಳ್ತಾರೆ, ದಯವಿಟ್ಟು ಏನಾದ್ರೂ ಸುದ್ದಿಕೊಡಿ. ಪತ್ರಕರ್ತರಿಗೆ ಕೆಲಸ ಇಲ್ಲ ಎಂದು.

ನೀವು ಇವತ್ತು ಬೊಫೋರ್ಸ್ ಹಗರಣ, ಶವಪೆಟ್ಟಿಗೆ ಖರೀದಿ ಹಗರಣ, ಪೆಟ್ರೋಲ್ ಬಂಕ್ ಹಗರಣ, 2ಜಿ ಹಗರಣ, ಕಾಮನ್ ವೆಲ್ತ್ ಹಗರಣಗಳೆಲ್ಲವನ್ನು ಗಮನಿಸಿದರೆ ತಿಳಿಯುತ್ತದೆ. ಈ ಎಲ್ಲ ಹಗರಣಗಳು ಸರಕಾರ ಪ್ರೆಸ್ ನೋಟ್ ತಂದು ಮೀಡಿಯಾದವರಿಗೆ ಕೊಟ್ಟದ್ದಲ್ಲ. ಮೀಡಿಯಾದವರು ಒಳಕ್ಕೆ ನುಗ್ಗಿ, ಆಳಕ್ಕೆ ಇಳಿದು, ಶೋಧಿಸಿ ಅದನ್ನು ತೆಗೆದು ಬಹಿರಂಗ ಮಾಡಿದ್ದಾರೆ. ಇಂದು ಪತ್ರಕರ್ತರು ಕೇಳುತ್ತಿದ್ದಾರೆ, ಸುದ್ದಿ ಕೊಡಿ ನಮಗೆ ಎಂದು. ಇದು ನಮ್ಮ ದುರಂತ.

ಇನ್ನೊಬ್ಬ ಪತ್ರಕರ್ತ, ವಾಷಿಂಗ್ಟನ್ ಪತ್ರಿಕೆಯ ಕರೆಸ್ಪಾಂಡೆಂಟ್, ಕನ್ನಡದವರೇ. ಅವರ ಹೆಸರನ್ನು ನಾನು ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದೆ. ಅವರು ನಮ್ಮ ದೇಶದ ಪ್ರಧಾನಿಯವರ ಅಮೆರಿಕದ ಭೇಟಿ ಬಗ್ಗೆ ಅಭಿಮಾನದಲ್ಲಿ ತೇಲಿ ಹೋದವರಂತೆ ಮಾತನಾಡುತ್ತಾರೆ. ಏನ್ ಸರ್ ಅದು. ಒಂಭತ್ತು ದಿನ ಬರೀ ಬಿಸಿನೀರು ಕುಡಿದು ಅಂಥದ್ದೊಂದು ಗ್ರೇಟ್ ಎನರ್ಜಿ! ಎಂದು ಮಾತನಾಡುತ್ತಾರೆ. ಇರಬಹುದು. ಅವರು ಒಂಭತ್ತು ದಿನ ಬರೀ ಬಿಸಿನೀರು ಕುಡಿದೇ ಅವರು ಇರಬಹುದು. ಆದರೆ ಪತ್ರಕರ್ತರಲ್ಲಿ ಒಂದು ಸಣ್ಣ ಸಂಶಯದ ಒಂದು ಸಣ್ಣ ಪ್ರಶ್ನೆ ಹುಟ್ಟಬಾರದಾ? ಅಂದರೆ, ಒಂಭತ್ತು ದಿನ ಬರೀ ಬಿಸಿನೀರನ್ನು ಕುಡಿದು ಬದುಕುವುದಕ್ಕೆ ಆಗುತ್ತಾ? ಕೇವಲ ದಿನ ಕಳೆಯುವುದಷ್ಟೇ ಅಲ್ಲ. ದಿನಾ ಹತ್ತಾರು ಸಭೆಗಳನ್ನು ನಡೆಸಿ, ಗಂಟೆಗಟ್ಟಲೇ ಮಾತನಾಡಿ ಕೇವಲ ಬಿಸಿನೀರು ಕುಡಿದು ಇರಲು ಸಾಧ್ಯವಿದೆಯಾ? ಇರಬಹುದೇನೋ ಗೊತ್ತಿಲ್ಲ. ಆದರೆ, ಇಂಥ ಅಸಾಮಾನ್ಯ ಸಂಗತಿಯ ಬಗ್ಗೆ ಪ್ರಶ್ನೆ ಹುಟ್ಟದಿದ್ದರೆ ಹೇಗೆ?

ಉಪವಾಸ ಹೇಗೆ ಮಾಡಬೇಕೆಂದು ಈ ದೇಶಕ್ಕೆ ತೋರಿಸಿಕೊಟ್ಟವರು ಗಾಂಧಿ. ಇಡೀ ಉಪವಾಸದ ಪರಂಪರೆಯಲ್ಲಿ ಪಾರದರ್ಶಕತೆಯನ್ನು ತೋರಿಸುವುದಕ್ಕಾಗಿಯೇ ಗಾಂಧೀಜಿ ತಮ್ಮ ಉಪವಾಸವನ್ನು ಸಾರ್ವಜನಿಕವಾಗಿ ಮಾಡುತ್ತಿದ್ದರು. ಉಪವಾಸ ಮಾಡುವವನು ಗುಟ್ಟಲ್ಲಿ ಏನು ಮಾಡುತ್ತಾನೆ ಎಂದು ಜನರಿಗೆ ಸಂಶಯ ಬರಬಾರದು. ಅದಕ್ಕಾಗಿ ಉಪವಾಸವನ್ನು ಬಹಿರಂಗವಾಗಿ ಮಾಡುತ್ತಾರೆ. ಆದರೆ ಈ ದೇಶದ ಪ್ರಧಾನಿಯವರು ಒಂಭತ್ತು ದಿನ ಬಿಸಿನೀರು ಕುಡಿದು, ಉಪವಾಸ ಮಾಡಿದರು ಎಂದು ಹಿರಿಯ ಪತ್ರಕರ್ತರು ನಂಬುತ್ತಾರೆ. ಇದು ನಮ್ಮ ಪತ್ರಕರ್ತರ ಸ್ಥಿತಿ.

ನೀವು ಮಾಧ್ಯಮದವರಿಗೆ ಇಂತಹ ಸುಮಾರು ಪ್ರಶ್ನೆಗಳನ್ನು ಕೇಳ್ತಾ ಹೋಗಬಹುದು. ಕಪ್ಪು ಹಣವನ್ನು ನೂರು ದಿನಗಳೊಳಗೆ ತರುತ್ತೇವೆ, ಒಬ್ಬೊಬ್ಬರ ತಲೆಗೆ 15 ಲಕ್ಷ ರೂ. ಬಂದು ಬೀಳುತ್ತೆ ಎಂದು ಭಾರತೀಯ ಜನತಾ ಪಕ್ಷ ತನ್ನ ಪ್ರಚಾರ ಸಭೆಗಳಲ್ಲಿ ಹೇಳಿತು. ಈಗ ನೂರಲ್ಲ 150 ದಿನಗಳು ಕಳೆಯಿತು. ಅದರ ಸ್ಥಿತಿ ಏನಾಗಿದೆ ಎಂದು ನಿಮಗೆ ತಿಳಿದಿದೆ. ಇವರು ಜನ್ ಧನ್ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಇದೇ ರಾಜ್ಯ ಅಥವಾ ಇದೇ ದೇಶದಲ್ಲಿ ಜನಾರ್ಧನ್ ಪೂಜಾರಿಯವರು ಸಾಲಮೇಳವನ್ನು ತಂದಾಗ ರಾಜಕೀಯ ಪ್ರತಿಕ್ರಿಯೆಗಳು ಹೇಗಿತ್ತು? ರಾಮಕೃಷ್ಣ ಹೆಗಡೆಯವರು ಆ ಕಾಲದಲ್ಲಿ ಪ್ರಕಟಿಸಿದ ಒಂದು ಪುಸ್ತಕ ನನ್ನ ಬಳಿ ಇದೆ. ಮೀಡಿಯಾ ಆ್ಯಂಡ್ ಮಾಂಡೇಟ್ ಅಂತ. ಅದು ಬರೀ ಸಾಲಮೇಳದ ಕುರಿತಾದದ್ದು. ಅದು ಆ ಸಾಲಮೇಳದ ವಿರುದ್ಧ ಆ ಕಾಲದ ಪತ್ರಿಕೆಗಳಲ್ಲಿ ಬಂದ ಲೇಖನಗಳ ಸಂಗ್ರಹವಾಗಿದೆ. ಅದರಲ್ಲಿ ರಾಮಕೃಷ್ಣ ಹೆಗಡೆಯವರು ಸಾಲಮೇಳವನ್ನು ವಿರೋಧಿಸಿ ಕೇಂದ್ರ ಸರಕಾರಕ್ಕೆ ನಾಲ್ಕು ಪತ್ರಗಳನ್ನು ಬರೆದಿರುವ ದಾಖಲೆಗಳು ಇವೆ. ಇದನ್ನು ಆಗಿನ ಜನತಾ ಪಕ್ಷ ಪ್ರಕಟಿಸಿದೆ. ಆದರೆ ಇವತ್ತು ಇದ್ದಕ್ಕಿದ್ದ ಹಾಗೆ, ಜನ್ ಧನ್ ಯೋಜನೆ ಬಗ್ಗೆ ಬ್ಯಾಂಕ್ ಗಳೇ ಮುಂದೆ ಬಂದು ಕೋಟಿಗಟ್ಟಲೇ ಖಾತೆಗಳನ್ನು ತೆರೆಯುತ್ತಿವೆ. ಈ ಖಾತೆಗಳಿಗೆ 5 ಸಾವಿರ ಓಡಿ ಕೊಡ್ತೀವಿ ಎನ್ನುತ್ತಾರೆ. ವ್ಯಕ್ತಿಯೊಬ್ಬನ ಕ್ರೆಡಿಬಿಲಿಟಿಯ ಮೇಲೆ, ಅವನ ಕ್ರೆಡಿಟ್ ವರ್ಕಿಂಗ್ನೆಸ್ ನ ಆಧಾರದ ಮೇಲೆ ಕೊಡುವ ಓಡಿಯನ್ನು ಇವರು ಹೇಗೆ ಕೊಡುತ್ತಾರೆ? ಲಕ್ಷ ರೂ. ಇನ್ಶೂರೆನ್ಸ್ ಹೇಗೆ ಕೊಡ್ತಾರೆ? ಇವುಗಳ ಬಗ್ಗೆ ನಮ್ಮ ಕಮ್ಯುನಿಸ್ಟ್ ಮಿತ್ರರನ್ನೂ ಸೇರಿ ಯಾರೂ ಪ್ರಶ್ನೆಯನ್ನು ಮಾಡುತ್ತಿಲ್ಲ.

ಒಂದು ಹುಡುಗಿ ಮನೆಗೆ ಲೇಟಾಗಿ ಬಂದರೆ ಪ್ರಶ್ನೆ ಮಾಡುವಂತೆ ಗಂಡು ಮಗುವನ್ನೂ ಪ್ರಶ್ನಿಸಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ ಪ್ರಧಾನಿಯವರ ಒಂದು ಮಾತು ಬಹಳ ಪ್ರಚಾರ ಪಡೆಯಿತು. ಅವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಒಬ್ಬ ತಂದೆ ಸಾಹೇಬರ (ಪ್ರಧಾನಿ) ಕೇಳಿದರಂತೆ, ನನ್ನ ಮಗಳಿಗೆ ಏನೋ ಅಪಾಯವಿದೆ. ನೀವು ಅವಳನ್ನು ರಕ್ಷಣೆ ಮಾಡಬೇಕು ಎಂದು. ಅದಕ್ಕಾಗಿ ಅವರು ಇಡೀ ಪೊಲೀಸ್ ಪಡೆಯನ್ನೇ ಆ ಹೆಣ್ಣುಮಗಳ ರಕ್ಷಣೆಗೆ ಹಿಂದೆ ಬಿಟ್ಟರಂತೆ. ಆಂಟಿ ಟೆರರಿಸ್ಟ್ ಸ್ಕ್ವಾಡ್ ನಿಂದ ಹಿಡಿದು, ಇಂಟೆಲಿಜೆಂಟ್ ವಿಂಗ್ ನಿಂದ ಹಿಡಿದು ಎಲ್ಲವೂ ಆಕೆಯ ರಕ್ಷಣೆಗೆ ಸಜ್ಜುಗೊಳಿಸಲಾಯಿತಂತೆ. ವಿಚಿತ್ರ ನೋಡಿ, ಹಾಗಿದ್ದರೆ ದೇಶದಲ್ಲಿ ಶೇ.50ರಷ್ಟು ಹೆಣ್ಣುಮಕ್ಕಳಿದ್ದಾರೆ, ನಿತ್ಯ ರೇಪುಗಳಾಗ್ತಿವೆ, ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿವೆ. ಇವರ ಹಿಂದೆಯೂ ಸಹ ಪೊಲೀಸರನ್ನು ಬಿಡಬೇಕಲ್ವಾ? ಎದುರಿಗೆ ಒಂದು ನಾಯಿ ಮರಿ ಬರುತ್ತೆ. ಕಾರಿನ ಅಡಿ ಅಡ್ಡಬಿದ್ದು ಸತ್ತರೆ ನಾನೇನು ಮಾಡಲಿ ಎನ್ನುವ ಉಡಾಫೆಯ ಮಾತುಗಳನ್ನು ಹೇಳುವವರು ಮಹಿಳೆಯರ ರಕ್ಷಣೆಯ ಮಾತುಗಳನ್ನಾಡುವಾಗ ನಮ್ಮಲ್ಲಿ ಒಂದು ಪ್ರಶ್ನೆ ಹುಟ್ಟಬೇಕಲ್ಲ. ಅದು ನಮ್ಮಲ್ಲಿ ಹುಟ್ಟುತ್ತಿಲ್ಲ.

ನಮಗೆ ಬಹಳ ಸರಳವಾಗಿ ಇರಲು ಹೇಳಿಕೊಟ್ಟವರು ಗಾಂಧೀಜಿ. ಅವರಿಂದ ನಾವೆಲ್ಲ ಹೊಂದಿದ್ದ ಸತ್ಯ, ಸರಳತೆ, ಪ್ರಾಮಾಣಿಕತೆಯಂತಹ ಒಳ್ಳೆಯ ಮೌಲ್ಯಗಳೆಲ್ಲ ಇಂದು ನಮ್ಮ ಕಣ್ಣೆದುರಿಗೆ ಉಲ್ಟಾಪಲ್ಟಾ ಆಗ್ತಾ ಇದೆ. ಈಗ ಇದ್ದಕ್ಕಿದ್ದ ಹಾಗೇ, ನೋಡ್ರಿ, ಪ್ರಧಾನಿ ಅಂದ್ರೆ ಹೀಗಿರಬೇಕು. ದಿನಕ್ಕೆ ನಾಲ್ಕು ಸಲ ಅವರು ಕುರ್ತಾ ಬದಲಿಸುತ್ತಾರೆ. ವಿದೇಶದಿಂದ ಟೇಲರ್ ಗಳು ಬರ್ತಾರಂತೆ, 50 ಲಕ್ಷ ಬೆಲೆ ಬಾಳುವ ಅವರ ವಾಚ್ ನೋಡಿ. ಕನ್ನಡಕ, ಪೆನ್ನು ಎಲ್ಲ ವಿದೇಶಿ. ಹಾಗಿರಬೇಕು ಪ್ರಧಾನಿ ಎಂದರೆ, ಹೀಗೆಲ್ಲ ಊಹಾಪೋಹಗಳ ಮೂಲಕ ಅವರು ಅಭಿಪ್ರಾಯಗಳನ್ನು ರೂಪಿಸುತ್ತಾರೆ.

ಯಾವ ದೇಶದಲ್ಲಿ ಗಾಂಧೀಜಿಯಂತವರು ಶ್ರೀಮಂತಿಕೆಯ ಅಸಹ್ಯ ಪ್ರದರ್ಶನವನ್ನು ಮಾಡಬಾರದು ಎಂದು ಹೇಳಿದ್ದರೋ, ಆ ದೇಶದಲ್ಲಿ ಮೋದಿಯವರು ಇಂತಹ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನಕ್ಕೆ ಇಳಿದಿದ್ದಾರೆ. ಆಗಿನ ನಾಯಕರಲ್ಲೇ ಸ್ವಲ್ಪ ಹೆಚ್ಚಿನ ಶೋಕಿ ಇದ್ದ ನೆಹರು ಅವರಿಂದ ಹಿಡಿದು ವಾಜಪೇಯಿ, ಅಡ್ವಾಣಿಯವರನ್ನು ನೋಡಿದರೂ ಇಂತಹ ಅಸಹ್ಯ ಪ್ರದರ್ಶನ ಯಾರೂ ಮಾಡುತ್ತಿರಲಿಲ್ಲ. ಕನಿಷ್ಠಪಕ್ಷ ಬಹಿರಂಗವಾಗಿ ಕಾಣಿಸಿಕೊಳ್ಳುವಾಗಲಾದರೂ ಸರಳವಾಗಿ ಇರಬೇಕು ಎಂಬ ಪ್ರಜ್ಞೆ ಇವರೆಲ್ಲರಿಗೂ ಇತ್ತು. ಈಗ ಇದ್ದಕ್ಕಿದ್ದ ಹಾಗೆ, ಇದೆಲ್ಲ ತಪ್ಪು.. ಇದ್ದರೆ ಹೀಗಿರಬೇಕು ಎನ್ನುವ ಅಭಿಪ್ರಾಯವನ್ನು ಮೂಡಿಸಿ ಯುವಜನಾಂಗವನ್ನು ಆಕರ್ಷಿಸಲಾಗುತ್ತಿದೆ. ಹಿಂದೆ ನಾವು ನಂಬಿದ್ದೆಲ್ಲ ಇಂದು ಅದಲುಬದಲಾಗುತ್ತಿದೆ. ಇದಕ್ಕಾಗಿ ಈ ಗೊಂದಲಗಳು ಹುಟ್ಟುತ್ತಿವೆ.

ಇಲ್ಲಿ ನನಗೆ ಮತ್ತೊಂದು ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕಾಗಿದೆ. ಅದು ಲೆಸ್ ಗೌರ್ನಮೆಂಟ್-ಮೋರ್ ಗೌವರ್ನೆನ್ಸ್. ಇದರ ಬಗ್ಗೆ ನಮ್ಮಲ್ಲೂ ಬಹಳ ಜನರಿಗೆ ಹೌದೌದು. ಎಲ್ಲದರಲ್ಲಿಯೂ ಸರಕಾರದ ಮೂಗುತೂರಿಸುವಿಕೆ ಜಾಸ್ತಿ ಆಗ್ತಿದೆ ಅನ್ನಿಸ್ತಿದೆ. ಆದರೆ, ಲೆಸ್ ಗೌರ್ನಮೆಂಟ್ ಎಂದು ಹೇಳಿದಾಗ ಆ ಗೌರ್ನೆಮೆಂಟ್ ಯಾವುದು? ಮೋರ್ ಗವರ್ನೆನ್ಸ್ ಎಂದು ಹೇಳುವಾಗ ಗವರ್ನೆನ್ಸ್ ನ ಸೂತ್ರ ಯಾರ ಕೈಯಲ್ಲಿ ಇದೆ? ಎನ್ನುವುದನ್ನು ಸ್ವಲ್ಪ ನಾವು ಯೋಚನೆ ಮಾಡಬೇಕಿದೆ. ಗೌರ್ನಮೆಂಟ್ ಎನ್ನುವುದು ನಮ್ಮದು. ಗೌರ್ನೆಂಟ್ ನ್ನು ಬಿಟ್ಟು ಗವರ್ನೆನ್ಸ್ ಮಾಡಲಿಕ್ಕೆ ಹೋಗುವವರು ಅವರು ಕಾರ್ಪೋರೇಟ್ ಗವರ್ನೆನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಾವು ಅರಿಯಬೇಕು. ಬಹಳ ಸಲ ಪತ್ರಿಕೆಗಳಲ್ಲೂ ಇಂತಹ ಚರ್ಚೆಗಳು ನಡೆಯುತ್ತವೆ. ಒಂದು ಕಾರ್ಪೊರೇಟ್ ಗವರ್ನೆನ್ಸ್ ಬರಬೇಕು. ನೋಡಿ ನಾರಾಯಣಮೂರ್ತಿ ಇನ್ಫೋಸಿಸ್ ನ್ನು ಎಷ್ಟು ಚನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅಂಥವರು ಬರಬೇಕು. ಅಂಥವರನ್ನು ಫೈನಾನ್ಸ್ ಮಿನಿಸ್ಟರ್ ಮಾಡ್ರಿ. ಇಂಡಸ್ಟ್ರೀ ಮಿನಿಸ್ಟರ್ ಮಾಡ್ರಿ ಎಂಬೆಲ್ಲ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಲಾಗುತ್ತಿದೆ. ಇದರ ಮೂಲಕ ಇದ್ದಕ್ಕಿದ್ದ ಹಾಗೆ ಅಧಿಕಾರಿಗಳು, ರಾಜಕಾರಣಿಗಳನ್ನೆಲ್ಲ ಭ್ರಷ್ಟರು, ದುಷ್ಟರು, ಜನವಿರೋಧಿಗಳು ಎಂದೆಲ್ಲ ಚಿತ್ರಿಸಲಾಗುತ್ತಿದೆ. ಇದನ್ನು ಅಣ್ಣಾ ಹಜಾರೆ ಚಳವಳಿಯಲ್ಲಿ ನಾವು ಸ್ಪಷ್ಟವಾಗಿ ನೋಡಬಹುದು. ಅವರು ಬಹಳ ದೊಡ್ಡ ಮಟ್ಟದಲ್ಲಿ ವಿರೋಧಿಸಿದ್ದು ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು. ಆದರೆ ಉದ್ಯಮಪತಿಗಳನ್ನಾಗಲೀ, ಇಡೀ ದೇಶವನ್ನು ಹಿಂಬಾಗಿಲಲ್ಲಿ ನಿಂತು ನಡೆಸುತ್ತಿರುವ ಧರ್ಮ ಗುರುಗಳನ್ನೇ ಆಗಲೀ ಅವರು ಪ್ರಶ್ನೆ ಮಾಡಲೇ ಇಲ್ಲ. ಇದಕ್ಕೆ ಕಾರಣ ಏನು? ಇಂದು ಅತ್ಯಂತ ವೇಗವಾಗಿ ಖಾಸಗೀಕರಣ ನಡೆಯುತ್ತಿರುವುದರಿಂದ ಜನರಿಗೆ ಸರಕಾರದ ಇರುವಿಕೆಯೇ ಅರಿವಿಗೆ ಬರುತ್ತಿಲ್ಲ.

ಪರಿಚಯದ ಒಬ್ಬರು ಹೇಳ್ತಾರೆ, ಇಂದು ನನಗೆ ಸರಕಾರ ಇದೆ ಎನ್ನುವುದು ಎರಡೇ ಕಡೆ ಅರಿವಿಗೆ ಬರುತ್ತಿದೆ. ಒಂದು ನಾನು ರಸ್ತೆ ನಿಯಮ ಉಲ್ಲಂಘಿಸಿದ ಸಮಯದಲ್ಲಿ ಫೈನ್ ನಿಗದಿಮಾಡುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನೋಡಿದಾಗ. ಮತ್ತೊಂದು ಆ ಟ್ರಾಫಿಕ್ ಪೊಲೀಸ್ ನನ್ನಿಂದ ಕಾನೂನು ಬಾಹಿರವಾಗಿ ಹಣ ಕೀಳುವಾಗ. ಆಗ ನನಗೆ ಸರಕಾರ ಭ್ರಷ್ಟವಾಗಿರುವ ಅರಿವು ಮೂಡುತ್ತದೆ ಎಂದಿದ್ದರು. ಇದೆಲ್ಲ ಪ್ರಶ್ನೆಗಳು ಅಣ್ಣಾ ಹಜಾರೆ ಅವರಿಗೆ ಬೇಡ.

ಹಿಂದೂ ಮೆಜಾರಿಟೇರಿಯನ್ ಗೌರ್ನಮೆಂಟ್ ನ ಗೀಳು

ಇವೆಲ್ಲಕ್ಕಿಂತ ಅಪಾಯಕಾರಿಯಾದ ಬೆಳವಣಿಗೆ ಕಳೆದ ಲೋಕಸಭಾ ಚುನಾವಣೆಯ ನಂತರ ನಮಗೆ ಕಾಣುತ್ತಿದೆ. ಅದು, ಈಗ ಒಂದು ಮೆಜಾರಿಟೇರಿಯನ್ ಗೌರ್ನಮೆಂಟ್ ಬರುತ್ತಿದೆ. ಅದೂ ಹಿಂದೂ ಮೆಜಾರಿಟೇರಿಯನ್ ಗೌರ್ನಮೆಂಟ್ ಬರ್ತಾ ಇದೆ. ಅಂಕಿ ಅಂಶದ ಪ್ರಕಾರ ಶೇ.80.65ರಷ್ಟು ಹಿಂದುಗಳಿದ್ದಾರೆ. ಶೇ.13.65ರಷ್ಟು ಮುಸ್ಲಿಮರಿದ್ದಾರೆ. ಶೇ.2.5ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಇವತ್ತು ಅಧಿಕಾರಕ್ಕೆ ಬಂದದ್ದು ಹಿಂದೂ ಮೆಜಾರಿಟಿ. ಇದು ಹಿಂದೂ ಬಹುಸಂಖ್ಯಾತರ ಅಭೀಪ್ಸೆ. ಹೀಗಾಗಿ ಇದು ಹಿಂದೂ ಬಹುಸಂಖ್ಯಾತರ ಜನಮತದಿಂದ ಸರಕಾರ ಬಂದಿದೆ ಎನ್ನುವ ಒಂದು ಅಭಿಪ್ರಾಯವನ್ನು ನಿಧಾನವಾಗಿ ಬಿತ್ತುತ್ತಿದ್ದಾರೆ.

ಆರ್.ಎಸ್.ಎಸ್. ಸರಸಂಘ ಚಾಲಕ ಮೋಹನ್ ಭಾಗವತ್ ಹೇಳುತ್ತಾರೆ, ಇದು ಹಿಂದೂಸ್ಥಾನ. ಇಲ್ಲಿ ಇರುವವರೆಲ್ಲ ಹಿಂದೂಗಳು. ಹೀಗೆ ಅವರ ಅನೇಕ ನಾಯಕರು ಹೇಳುತ್ತಾರೆ. ಇದು ಮುಂದಿನ ಅಪಾಯಗಳ ಸುಳಿವನ್ನು ನಮಗೆ ಕೊಡುತ್ತದೆ. ಯಾಕಂದ್ರೆ ಹಿಟ್ಲರ್ ಪ್ರವೇಶವಾಗುವ ಮೊದಲು ಜರ್ಮನಿಯಲ್ಲಿ ಇಂತಹುದೇ ಒಂದು ಅಭಿಪ್ರಾಯವನ್ನು ಮೂಡಿಸಲಾಗಿತ್ತು. ಇಸ್ರೇಲ್ ನಲ್ಲಿಯೂ ಕೂಡ ಇದೇ ರೀತಿಯ ಒಂದು ಮೆಜಾರಿಟೇರಿಯನ್ ಗೌರ್ನಮೆಂಟ್ ಇದೆ. ಅಲ್ಲಿ ಏನು ನಡೆಯುತ್ತಿದೆ ನಮಗೆಲ್ಲ ಗೊತ್ತಿದೆ. ನಮ್ಮ ಪಕ್ಕದ ಉದಾಹರಣೆ ಕೊಡುವುದಾದರೆ, ಶ್ರೀಲಂಕಾದಲ್ಲಿ ನೋಡಿ. ಶೇ.80ರಷ್ಟು ಸಿಂಹಳೀಯರಿದ್ದಾರೆ ಅಲ್ಲಿ. ಉಳಿದ ಶೇ.20 ರಷ್ಟು ಜನರಲ್ಲಿ ತಮಿಳರು ಮತ್ತು ಅದರಲ್ಲಿ ಹೆಚ್ಚಿನವರು ಮುಸ್ಲಿಮರು, ಹಿಂದುಗಳಿದ್ದಾರೆ. ಇವತ್ತು ಅಲ್ಲಿ ಮೆಜಾರಿಟೇರಿಯನ್ ಗೌರ್ನಮೆಂಟ್ ಬರುತ್ತಿದೆ. ಇದರಿಂದಾಗಿ ಇತ್ತೀಚೆಗೆ ಅಲ್ಲಿ ಬರುತ್ತಿರುವ ಕಾನೂನುಗಳನ್ನು ನೋಡಿ. ಇದು ಬಹಳ ಸೂಕ್ಷ್ಮವಾಗಿ, ಅಷ್ಟೇ ವ್ಯವಸ್ಥಿತವಾಗಿ ಒಂದು ಮೆಜಾರಿಟೇರಿಯನ್ ಗೌರ್ನಮೆಂಟ್ ನ ರೂಪ ನಮ್ಮ ಎದುರಿಗೆ ತೆರೆದುಕೊಳ್ಳುತ್ತಿದೆ. ಅದರಿಂದ ನಾವು ಧರ್ಮ ಅಂದ್ರೆ ಏನು? ಸಂಸ್ಕೃತಿ ಅಂದ್ರೆ ಏನು? ಎನ್ನುವುದನ್ನು ಚಿಂತಿಸಬೇಕಾಗಿದೆ.

ಯಾಕಂದ್ರೆ, ರಾಜಕೀಯ ಪಕ್ಷವೊಂದರ ಬದಲಾವಣೆಯನ್ನೇ ನಾವು ರಾಜಕೀಯ ಬದಲಾವಣೆಯ ಮುಖ್ಯ ಲಕ್ಷಣ ಎಂದು ತಿಳಿದುಕೊಂಡು ಬಿಟ್ಟಿದ್ದೇವೆ. ಆದರೆ ಅದು ಹಾಗಲ್ಲ. ರಾಜಕೀಯ ಬದಲಾವಣೆ ಇಂದು ಸಾಂಸ್ಕೃತಿಕ ರಂಗಕ್ಕೂ ವಿಸ್ತರಣೆಯಾಗಿದೆ.

ಒಮ್ಮೆ ವಾಜಪೇಯಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಕೇಳಿದರು, ಸ್ವಾಮಿ ವಿವೇಕಾನಂದ ಅವರು ಹಿಂದುತ್ವದ ಬಗ್ಗೆ ಮಾತನಾಡಿದಾಗ ಯಾರೂ ಅದನ್ನು ವಿರೋಧಿಸುವುದಿಲ್ಲ. ಚಪ್ಪಾಳೆ ತಟ್ಟುತ್ತಾರೆ. ಆದರೆ ನಾವು ಮಾತನಾಡಿದಾಗ ಮಾತ್ರ ಹೀಗೆ ವಿರೋಧ ಮಾಡ್ತಾರೆ? ಎಂದು. ಪ್ರಶ್ನೆ ಬಹಳ ಸಹಜವಾದುದ್ದು. ಸ್ವಾಮಿ ವಿವೇಕಾನಂದರು ಹೇಳುವಂತಹ ಹಿಂದುತ್ವದ ಬಗ್ಗೆ ವಾಜಪೇಯಿ ಅವರಿಗಾಗಲೀ ಅಥವಾ ಅವರ ಪರಿವಾರದವರಿಗೆ ಏನು ಅಭಿಪ್ರಾಯವಿದೆ? ಎನ್ನುವುದು ನಮ್ಮ ಪ್ರಶ್ನೆ. ಯಾಕಂದ್ರೆ ಇಡೀ ಹಿಂದುತ್ವವನ್ನು ಅವರು ಹಿಂದೂ ಎಂದು ಹೇಳುವುದೇ ಇಲ್ಲ. ನಮಗೆಲ್ಲ ಗೊತ್ತಿರುವ ಹಾಗೆ ಅದು ಸಿಂಧುವಿನ ಅಪಭ್ರಂಶ. ಪರ್ಶಿಯನ್ ನಲ್ಲಿ ಅಪಭ್ರಂಶ ನಡೆದಿದೆ. ಪರ್ಶಿಯನ್ ಭಾಷೆಯ ಡಿಕ್ಷನರಿಯನ್ನು ನೋಡಿದರೆ ಗೊತ್ತಾಗುತ್ತೆ ಹಿಂದೂ ಪದಕ್ಕೆ ಪರ್ಶಿಯನ್ ಭಾಷೆಯಲ್ಲಿ ಯಾವ ಕೆಟ್ಟ ಅರ್ಥವಿದೆ.

ವಿವೇಕಾನಂದರು ಹೀಗೆ ಹೇಳುತ್ತಾರೆ, ಹಿಂದುತ್ವ ಇದೆಯಲ್ಲ ಇದು ಹಿಂದೂ ಇಸ್ಲಾಮಿಕ್ ಪರಂಪರೆ. ಒಬ್ಬ ಮನುಷ್ಯನಿಗೆ ವೇದಾಂತ(ಹಿಂದೂ)ದ ತಲೆ ಮತ್ತು ಮುಸ್ಲಿಂ ದೇಹ ಇರಬೇಕು ಎಂದು. ವಿವೇಕಾನಂದರು ಎಂದಿಗೂ ಹಿಂದೂ ಎಂದಿದ್ದೇ ಇಲ್ಲ. ಅವರು ಇಡೀ ಹಿಂದೂ ಧರ್ಮವನ್ನು ವೇದಾಂತ ಎಂದೇ ಬಳಸಿದ್ದಾರೆ. ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಜ.ಹೊ.ನಾರಾಯಣಸ್ವಾಮಿ ಬಹಳ ಚನ್ನಾಗಿ ಬರೆದಿದ್ದಾರೆ. ನಮ್ಮಲ್ಲಿ ಕುವೆಂಪು ಅವರು ವಿವೇಕಾನಂದರನ್ನು ವೀರಸನ್ಯಾಸಿ ಎಂದು ಬರೆದಿದ್ದಾರೆ. ಆದರೆ ಅವರು, ಅವರು ಸನ್ಯಾಸಿಯಲ್ಲ. ಒಂದರ್ಥದಲ್ಲಿ ಹೇಳುವುದಾದರೆ ಅವರೊಬ್ಬ ಬಂಡುಕೋರ(ರೆಬೆಲ್) ಎಂದು ಹೇಳಬಹುದು. ನಾವು ಇಡೀ ಧಾರ್ಮಿಕ ಪರಂಪರೆಯನ್ನು ತೆಗೆದುಕೊಂಡು ನೋಡಿದರೆ, ಹಿಂದೂ ಧರ್ಮ ಇನ್ನೂ ಉಳಿದುಕೊಂಡಿದ್ದರೆ ಅದು ಶಂಕರಾಚಾರ್ಯ ಅಥವಾ ರಾಮಾನುಜಾಚಾರ್ಯರಿಂದ ಅಲ್ಲ. ಇದರ ಜತೆಗೆನೇ ಒಂದು ಪ್ರತಿಭಟನೆಯ ರೂಪದಲ್ಲಿ ಒಂದು ಚಳವಳಿ ಪ್ರಾರಂಭವಾಯಿತು. ಅದು ಬುದ್ಧ, ಬಸವಣ್ಣನವರಿಂದ ಪ್ರಾರಂಭವಾಗಿ ಪೆರಿಯಾರ್, ಜ್ಯೋತಿಬಾ ಫುಲೆ, ನಾರಾಯಣ ಗುರು, ಅಂಬೇಡ್ಕರ್, ಲೋಹಿಯಾ ಇವರೆಲ್ಲರೂ ಆ ಧರ್ಮವನ್ನು ಪ್ರಶ್ನೆ ಮಾಡುತ್ತಲೇ ಆ ಧರ್ಮಕ್ಕೆ ಒಂದು ವ್ಯಾಖ್ಯಾನ ಕೊಡಲು ಪ್ರಯತ್ನ ಮಾಡಿದರು. ಬಹುಶಃ ಅವರ ಕೊಡುಗೆ ಇಲ್ಲದೆ ಹೋಗಿದ್ದರೆ ಈಗ ಕೇವಲ ನೇಪಾಳ, ಭಾರತಕ್ಕೆ ಸೀಮಿತವಾಗಿರುವ ಹಿಂದೂ ಧರ್ಮ ಭಾರತದಲ್ಲಿಯೂ ಇರುತ್ತಿರಲಿಲ್ಲ. ಅವರ ಯೋಜನೆಗೆ ತಕ್ಕ ಹಾಗೆ ಹಿಂದೂ ಧರ್ಮವನ್ನು ಪುನಾರಚನೆ ಮಾಡಿದ್ದರೆ ಅದು ಇತರ ದೇಶಗಳಿಗೂ ಹರಡುತ್ತಿತ್ತು.

ಕೇರಳದ ತಿರುವಾಂಕೂರಿನಲ್ಲಿ ಹಿಂದುಳಿದ ಈಳವರಿಗೆ ಶಾಲೆಗಳಿಗೆ ಪ್ರವೇಶ ಇರುವುದಿಲ್ಲ. ಆಗ ದೊಡ್ಡ ವಿವಾದ ಆಗುತ್ತೆ. ಆಗ ರಾಜಗೋಪಾಲಾಚಾರಿ ಹೇಳುತ್ತಾರೆ, ನೋಡಿ, ಆ ನಾರಾಯಣಗುರು ಇಲ್ಲದಿದ್ದರೆ ಕೇರಳದ ಮುಕ್ಕಾಲು ಪಾಲು ಜನಸಂಖ್ಯೆ ಇಂದು ಕ್ರಿಶ್ಚಿಯಾನಿಟಿಗೆ ಹೋಗುತ್ತಿತ್ತು. ಆ ಮನುಷ್ಯನಿಂದಾಗಿ ಹಿಂದೂ ಧರ್ಮ ಉಳಿದುಕೊಂಡಿದೆ. ದಯವಿಟ್ಟು ಇಂಥದೆಲ್ಲ ಮಾಡಬೇಡಿ ಎಂದು.

ಆದರೆ ನಮಗೆ ಒಮ್ಮೊಮ್ಮೆ ಅನಿಸುತ್ತೆ, ಹಿಂದೂ ಧರ್ಮದ ಸುಧಾರಣೆಗೆ ಪ್ರತಿಭಟನೆ ನಡೆಸಿದ ಈ ಚಳುವಳಿಕಾರರಿಗೆ ಈ ಧರ್ಮ ಇಷ್ಟು ವಿಕಾರತೆಗೆ ತಿರುಗುತ್ತದೆ ಎನ್ನುವ ವಿಚಾರ ತಿಳಿವಿಗೆ ಬಂದಿರಲಿಲ್ಲ ಅನ್ನಿಸುತ್ತೆ. ಆದರೆ, ಈಗಲೂ ಧರ್ಮವನ್ನು ಬಹಳ ದೂರ ಇಟ್ಟು ಯಾವುದೇ ಬದಲಾವಣೆ ತರಲು ಆಗುವುದಿಲ್ಲ.

ಗಿರೀಶ ಕಾರ್ನಾಡರು ನಾಸ್ತಿಕರು ಎನ್ನುವ ಕಾರಣಕ್ಕೆ ಅವರನ್ನು ದಸರಾ ಉದ್ಘಾಟನೆಗೆ ಕರೆತರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಘಪರಿವಾರದವರು ಸಾವರ್ಕರ್ ನಾಸ್ತಿಕತೆಯ ಬಗ್ಗೆ ಏನು ಹೇಳುತ್ತಾರೆ? ನಾನೇಕೆ ನಾಸ್ತಿಕನಾದೆ ಎನ್ನುವ ಪುಸ್ತಕವನ್ನೇ ಬರೆದ ಭಗತ್ ಸಿಂಗ್ ಬಗ್ಗೆ ಇವರ ಅಭಿಪ್ರಾಯವೇನು? ಇದನ್ನು ಮರುಪ್ರಶ್ನೆ ಮಾಡುವ ಜಾಗೃತ ಸಮುದಾಯ ಯಾಕೆ ಶಸ್ತ್ರತ್ಯಾಗ ಮಾಡಿದವರಂತೆ ಮೌನ ವಹಿಸಿದ್ದಾರೆ? ನಮ್ಮಲ್ಲಿ ಸಜ್ಜನರ ಸಂಖ್ಯೆ ಜಾಸ್ತಿ ಇದೆ. ಆದರೆ ಅವರೆಲ್ಲ ಮೌನಿಗಳು. ಮಾತನಾಡುವುದಿಲ್ಲ. ಉಳಿದ ದುರ್ಜನರಿದ್ದಾರಲ್ಲ, ಅವರು ಕೂಗುಮಾರಿಗಳು. ಅವರು ಹೇಳಿದ್ದೇ ಸರಿ ಎಂದು ಜನಾಭಿಪ್ರಾಯ ರೂಪಿಸುತ್ತಾರೆ.

ನಾವೆಲ್ಲ ಇಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೇವೆ. ನಾವೆಲ್ಲರೂ ಅಪೇಕ್ಷಿಸಿದಂತೆ ಪತ್ರಿಕೆಗಳು ಈಗ ಬರುತ್ತಿಲ್ಲ ಎಂದು ನಮಗೆ ಅನ್ನಿಸಲಿಕ್ಕೆ ಶುರುವಾಗಿದೆ. ಆದರೆ ಪತ್ರಿಕೆಯಲ್ಲಿ, ಟಿವಿ ಚಾನಲ್ ಗಳಲ್ಲಿ ತಪ್ಪು ಬಿತ್ತರಿಸಿದಾಗ ಎಷ್ಟು ಜನ ರಿಯಾಕ್ಟ್ ಮಾಡುತ್ತೀರಿ? ನಾನು ವಿವೇಕಾನಂದರ ಬಗ್ಗೆ ಬರೆದಾಗ, ನನಗೆ ಬೈದು ಬರೆದದ್ದು ಶೇ.80 ರಷ್ಟು ಪತ್ರ. ನನ್ನನ್ನು ಸಮರ್ಥಿಸಿ ಬರೆದಿದ್ದು ಶೇ.20 ರಷ್ಟು ಪತ್ರ. ಆದರೆ ಹೊರಜಗತ್ತಿನಲ್ಲಿ ಆ ಪರಿಸ್ಥಿತಿ ಇಲ್ಲ. ಬಹುಸಂಖ್ಯೆಯ ಜನ ನಾನು ಬರೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ ರಿಯಾಕ್ಟ್ ಮಾಡಿಲ್ಲ. ಇದರಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಲಭವಾಗಿ ಹೇಳುವುದಾದರೆ, ಒಡೆದು ಹಾಕುವವರು ಒಂದಾಗ್ತಾರೆ. ಆದರೆ ಒಟ್ಟು ಮಾಡುವವರು ಬಹಳ ಬೇಗ ದೂರ ಆಗ್ತಾರೆ. ಇದು ನಮ್ಮ ಸಮಸ್ಯೆ ಆಗಿದೆ. ಹೀಗಾಗಿ, ನಾವು ಯಾವ ರಾಜಕಾರಣವನ್ನು ವಿರೋಧಿಸಲು ಹೊರಟಿದ್ದೀವೋ ಅದನ್ನು ಹೇಗೆ ಸಂಘಟನಾತ್ಮಕವಾಗಿ ವಿರೋಧಿಸಬೇಕು ಎನ್ನುವುದರ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು ಎಂದುಕೊಂಡಿದ್ದೇನೆ.

ಮೊದಲನೆಯದಾಗಿ, ನಮ್ಮಲ್ಲಿ ಇವತ್ತಿನ ಸಂಘಪರಿವಾರ ಪ್ರೇರಿತ ರಾಜಕಾರಣವನ್ನು ಕೇವಲ ಒಂದು ಕಾಂಗ್ರೆಸ್ ಪಕ್ಷದಿಂದ ವಿರೋಧಿಸಲು ಆಗುತ್ತದೆ ಎಂದರೆ ಅದು ನಮ್ಮ ಮೂರ್ಖತನ. ಅದರಿಂದ ಇದು ಸಾಧ್ಯವಿಲ್ಲ. ಯಾಕೆಂದರೆ, ಭಾರತೀಯ ಜನತಾ ಪಕ್ಷ ಇದೆಯಲ್ಲ ಅದು ಕೇವಲ ಮುಖವಾಡ ಅಷ್ಟೇ. ಅದರ ಅಸಲಿ ಮುಖ ಅದರ ಹಿಂದುಗಡೆ ಇರುವ ಅದರ ಸಂಘ ಪರಿವಾರದಲ್ಲಿದೆ. ಈ ಕಾಂಗ್ರೆಸ್ ಆ ಮುಖವಾಡದ ಜತೆಗೆ ಗುದ್ದಾಡುತ್ತಾ ಇರುತ್ತದೆ. ಅವರು ಆ ಮುಖವಾಡ ಕಳಚಿ ಬಿದ್ದ ಕೂಡಲೇ ಇನ್ನೊಂದು ಮುಖವಾಡ ತಂದು ಎದುರಿಗೆ ಬಿಟ್ಟು ಬಿಡುತ್ತಾರೆ. ಒಬ್ಬ ಯಡಿಯೂರಪ್ಪ ಹೋದ ಕೂಡಲೇ ಮತ್ತೊಬ್ಬ ಸದಾನಂದಗೌಡ ಬರ್ತಾರೆ, ಇನ್ನೊಬ್ಬ ಶೆಟ್ಟರ್ ಬರ್ತಾರೆ. ಆದರೆ ಅಸಲಿ ಮುಖ ಇದೆಯಲ್ಲ ಅದು ಹಾಗೇ ಇರುತ್ತೆ. ಅದು ಸಾಂಸ್ಕೃತಿಕ ರಾಜಕಾರಣದ ಮುಖ. ಅದರ ಅಸಲಿ ಮುಖದ ಜತೆಗೆ ನೀವು ಹೋರಾಟ ಮಾಡಬೇಕಾದರೆ, ಅಂಥದೇ ಒಂದು ಪರ್ಯಾಯ ಸಾಂಸ್ಕೃತಿಕ ರಾಜಕಾರಣವನ್ನು ಹುಟ್ಟುಹಾಕಬೇಕು. ಅದನ್ನು ಹುಟ್ಟು ಹಾಕಬೇಕಾದರೆ, ಆಗಲೇ ಹೇಳಿದ ಹಾಗೆ, ಮಾರ್ಕ್ಸ್ ವಾದಿಗಳು, ಸೋಷಿಯಲಿಸ್ಟ್, ಅಂಬೇಡ್ಕರ್ ವಾದಿಗಳು, ಗಾಂಧಿವಾದಿಗಳು, ರೈತ ನಾಯಕರು, ದಲಿತ ಚಿಂತಕರು ಇವರೆಲ್ಲ ಅದನ್ನೇ ಉದ್ದೇಶವಾಗಿಟ್ಟುಕೊಂಡಾಗ ಮಾತ್ರ ಸಾಧ್ಯ. ಆದರೆ ಇಂದು ಇವರೆಲ್ಲ ಒಂದು ಚಾವಣಿ ಅಡಿ ಬಂದು ಸೇರುತ್ತಿಲ್ಲ. ಇವರೆಲ್ಲರಲ್ಲಿ ಒಂದು ಕನೆಕ್ಟಿವಿಟಿಯೇ ಇಲ್ಲವಾಗಿದೆ. ನಮ್ಮ ದೊಡ್ಡ ಸಮುದಾಯವನ್ನು ಬಳಸಿ ಒಂದು ಸಾಂಸ್ಕೃತಿಕ ರಾಜಕೀಯ ಶಕ್ತಿಯನ್ನು ಬೆಳೆಸಬೇಕು, ಗಟ್ಟಿಮಾಡಬೇಕು. ಇದರ ಮೂಲಕ ಅವರು ಬಿತ್ತಲು ಹೊರಟಿರುವ ಅಪಾಯಕಾರಿ ಮೆಜಾರಿಟೇರಿಯನ್ ಗೌರ್ನಮೆಂಟ್ ಅನ್ನು ಹೊಡೆದು ಹಾಕಲು ಪ್ರಯತ್ನ ಮಾಡಬೇಕು. ಯಾಕಂದ್ರೆ ಹಿಂದೂ ಎನ್ನುವುದು ಒಂದು ಸಂಘಟಿತವಾದ, ಏಕರೂಪವಾದ ಸಮುದಾಯವಲ್ಲ ಅದು. ನಮಗೆಲ್ಲರಿಗೂ ಗೊತ್ತಿದೆ. ಅದು ಭಿನ್ನತೆಯ ತತ್ವದ ಅಡಿಪಾಯದಲ್ಲೇ ನಿರ್ಮಾಣವಾಗಿದೆ. ಅದು ಒಂದಾಗಲಿಕ್ಕೆ ಸಾಧ್ಯವೇ ಇಲ್ಲ. ಅದು ಯಾವಾಗ ಒಡೆದು ಹೋಗುತ್ತದೆ ಎಂದರೆ, ಜಾತಿಯ ಪ್ರಶ್ನೆಯನ್ನು ಎತ್ತಿದಾಗ. ಅಸಮಾನತೆಯ ಪ್ರಶ್ನೆಯನ್ನು ಎತ್ತಿದಾಗ. ಸಹಪಂಕ್ತಿ ಭೋಜನ, ದೇವಸ್ಥಾನ ಪ್ರವೇಶ, ಇಂತಹ ವಿಷಯಗಳನ್ನು ಎತ್ತಿದ ಕೂಡಲೇ ಅವರು ಜಾಗ ಖಾಲಿ ಮಾಡ್ತಾರೆ. ನಮ್ಮನ್ನು ಪ್ರಶ್ನೆ ಮಾಡುವವರಿಗೆ ಪೇಜಾವರ ಶ್ರೀಗಳಿಗೆ ಹೋಗಿ ಕೇಳಿ, ಇದೆಲ್ಲವನ್ನು ಒಪ್ಪುತ್ತಾರೆಯೇ ಅವರು ಎಂದು. ಮಠಗಳಿಗೆ ಪ್ರವೇಶ ಪಡೆದ ಕೂಡಲೇ ದಲಿತರಿಗೆ ಸ್ವರ್ಗ ಸಿಗುವುದಿಲ್ಲ. ಅದು ಗೊತ್ತಿದೆ. ಆದರೆ ಅದನ್ನು ಒಂದು ಸ್ಟ್ರಾಟಜಿಯಾಗಿ ಬಳಸಿಕೊಳ್ಳಬೇಕು. ಈ ಪ್ರಶ್ನೆಗಳನ್ನು ಎತ್ತಿದಾಗ ಅವರ ನಿಜ ಬಣ್ಣ ಬಯಲಾಗುತ್ತದೆ. ಅವರು ಇವತ್ತು ಜಾತಿಯ ಹುಣ್ಣನ್ನು ಒಳಗಿಟ್ಟು ಧರ್ಮದ ಮುಲಾಮನ್ನು ಅವರು ಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕು ಎಂದು ಹೇಳಿ, ಇದಕ್ಕೆ ಎದುರಾಗಿ ಅಲ್ಪಸಂಖ್ಯಾತರನ್ನು ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಭೂತವಾಗಿ ಇಟ್ಟು ರಾಜಕಾರಣ ಮಾಡುತ್ತಿದ್ದಾರೆ.

ಮತ್ತೊಂದು ನಮ್ಮಲ್ಲಿರುವ ತಪ್ಪು ತಿಳಿವಳಿಕೆಯ ಬಗ್ಗೆ ಮಾತನಾಡುವುದಾದರೆ, ಮುಸ್ಲಿಂಮರು, ಹಿಂದುಳಿದ ವರ್ಗದವರು, ದಲಿತರು ಹಿಂದುಳಿದಿರಲು ಕಾರಣ ಶಿಕ್ಷಣ ಇಲ್ಲದಿರುವುದು. ಶಿಕ್ಷಣ ನೀಡಿದರೆ ಎಲ್ಲ ಸರಿ ಹೋಗುತ್ತದೆ ಎಂದು ತಿಳಿದಿರುವುದು. ಇವತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಉರುಳಾಡುತ್ತಿರುವವರೆಲ್ಲ ಶಿಕ್ಷಣ ಕಲಿತವರೇ, ಸಿಟಿಗಳಲ್ಲಿ ಜ್ಯೋತಿಷಿಗಳ ಹತ್ತಿರ ಬಾಯಿ ಬಿಟ್ಟು ಕೂರುವವರೆಲ್ಲರೂ ಶಿಕ್ಷಿತರೇ. ಶಿಕ್ಷಣ ಎನ್ನುವುದು ನಿಮ್ಮನ್ನು ಬೌದ್ಧಿಕ ದಾಸ್ಯದಿಂದ ಬಿಡುಗಡೆ ಮಾಡಬೇಕು. ಮತ್ತು ನಿಮ್ಮಲ್ಲಿ ವಿವೇಕವನ್ನು ಹುಟ್ಟು ಹಾಕಬೇಕು. ಅದಕ್ಕೇ ಕುವೆಂಪು ಹೇಳಿದರು, ನೀವು ಪುರೋಹಿತಶಾಹಿಗೆ ಗುಂಡು ಹೊಡೆಯಬೇಕು ನಿಜ. ಅದಕ್ಕಿಂತ ಮೊದಲು ನಿಮ್ಮ ತಲೆಯೊಳಗಿನ ಅಜ್ಞಾನಕ್ಕೆ ಗುಂಡು ಹೊಡೆಯಿರಿ ಎಂದು. ಇದು ನಾವು ಮಾಡಬೇಕಾದ ಕೆಲಸ ಕೂಡ. ಬರೀ ಶಿಕ್ಷಿತರಾಗುವುದರಿಂದ ಬದಲಾವಣೆ ಸಾಧ್ಯವಿಲ್ಲ. ಅದು ನಮ್ಮಲ್ಲಿ ವಿವೇಕವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಮಾಡುತ್ತದೆ ಎನ್ನುವ ಆಶಯ ನನ್ನದು.

ಎಲ್ಲ ಚಳವಳಿಗಾರರಿಗೆ ಮತ್ತೊಂದು ಹೇಳಲು ಇಚ್ಛೆಪಡುತ್ತೇನೆ. ನಾವು ಯಾವ ಮಾಧ್ಯಮವನ್ನೂ ನಂಬಿ ಹೋರಾಟವನ್ನು ರೂಪಿಸಬಾರದು. ಯಾಕಂದ್ರೆ ಮಾಧ್ಯಮ ಇಂದು ಮಾಧ್ಯಮವಾಗಿ ಉಳಿದಿಲ್ಲ. ಉದ್ಯಮವಾಗಿ ಉಳಿದಿದೆ. ಈಗಿನ ಮಾಧ್ಯಮಗಳಿಗೆ ಯಾವ ಸಾಮಾಜಿಕ ಕಾಳಜಿಯೂ ಇಲ್ಲ. ನಾವು ಕೊಡುವ ಮೂರು-ನಾಲ್ಕು ರೂಪಾಯಿಯಲ್ಲಿ ಪತ್ರಿಕೆ ನಡೆಯುವುದಿಲ್ಲ. ಪತ್ರಿಕೆ ನಡೆಯುವುದು ಖಾಸಗಿಯವರು ಪುಟಗಟ್ಟಲೆ ಕೊಡುವ ಜಾಹೀರಾತಿನಿಂದ. ಅದಕ್ಕಾಗಿ ಅವರ ನಿಷ್ಟೆ ಜಾಹಿರಾತುದಾರರ ಪರವಾಗಿ ಇರುತ್ತದೆ. ಇದು ಶೇ.100ರಷ್ಟು ಸತ್ಯ. ಮುಂದಿನ ದಿನಗಳಲ್ಲಿ ಇದು ಎಲ್ಲರಿಗೂ ಗೊತ್ತಾಗಬೇಕು. ಹೀಗಾಗಿ ಪರ್ಯಾಯವಾಗಿ ಅಂತರ್ಜಾಲ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ನಾವು ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಅವಾಂತರಗಳ ಬಗ್ಗೆಯೂ ನಾವು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು.

ಈಗಾಗಲೇ ನಮ್ಮ ದೇಶ ಸೈಬರ್ ಬುಲ್ಲಿಂಗ್ (ಸೈಬರ್ ಗೂಂಡಾಗಿರಿ)ನಲ್ಲಿ ಜಗತ್ತಿನಲ್ಲೇ 3ನೇ ಸ್ಥಾನದಲ್ಲಿದ್ದೇವೆ. ಯಾಕಂದ್ರೆ ಸಾಮಾಜಿಕ ಜಾಲಾಣಗಳಿಗೆ ಬಹಳ ಮುಖ್ಯವಾಗಿ ಮಾಧ್ಯಮಕ್ಕೆ ಇರಬೇಕಾದ ಪಾರದರ್ಶಕತೆ ಇಲ್ಲ. ಉತ್ತರದಾಯಿತ್ವ ಇಲ್ಲ. ಹೀಗಾಗಿ ಇವುಗಳನ್ನು ಬಳಸುವಾಗ ಇದರ ಬಗ್ಗೆ ಎಚ್ಚರಿಕೆಯನ್ನೂ ಹೊಂದಿರಬೇಕು.

  • ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು