October 1, 2023 8:25 am

ಎಂತಹ ಸಂದರ್ಭ ಬಂದರು ಸಮಾಜವನ್ನು ಕಟ್ಟುತ್ತೇವೆ

ಡಿಸೆಂಬರ್ 6, 2015ರಂದು ಬೆಳಗಾವಿಯ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ನಡೆದ, ಡಾ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಪ್ರಯುಕ್ತ ಪರಿವರ್ತನಾ ದಿನಾಚರಣೆ, ಮೂಢನಂಬಿಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಅಥಣಿಯ ಮುರುಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿಯವರ ಭಾಷಣ.  

ಇವತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣದ ಪ್ರಯುಕ್ತ, ಈ ಸಮಾರಂಭದ ಸಂಜೆಯ ಭಾಷಣ ಮಾಡಲು ಕನ್ನಡದ ಕುಲ ಗುರುಗಳು, ಭಾವೈಕ್ಯತೆಯ ತವರೂರು ಎಂದೆಲ್ಲ ನಮ್ಮೆಲ್ಲ ಅಭಿಮಾನಕ್ಕೆ ಗೌರವಕ್ಕೆ ಪಾತ್ರರಾದ ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮಿಯವರು, ವೇದಿಕೆಯ ಮೇಲೆ ಆಸೀನರಾದ ನಾಡಿನ ಎಲ್ಲ ಗೌರವಾನ್ವಿತ ಮಹಾ ಸ್ವಾಮೀಜಿಯವರಿಗೆ, ಸಮಾರಂಭದ ಅಧ್ಯಕ್ಷತೆ ವಹಿಸಿ, ತಮಗೆಲ್ಲ ಹೊಸ ಕ್ರಾಂತಿಯ ಹರಿಕಾರರಾಗಿ ನಮ್ಮ ಮುಂದೆ ಕಾಣುತ್ತಿರುವ ಸತೀಶ್ ಜಾರಕಿಹೊಳಿಯವರಿಗೆ, ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ತಮ್ಮ ಅದ್ಭುತ ವಿಚಾರ ಕ್ರಾಂತಿಗಳನ್ನು ನಮ್ಮೊಂದಿಗೆ ಹಂಚಿಕೊಂಡ ದಿನೇಶ್ ಅಮೀನ್ ಮಟ್ಟು ಅವರೆ ಹಾಗು ಗೌರವಾನ್ವಿತ ಅತಿಥಿಗಳೆ, ನಾಡಿನ ಮೂಲೆಮೂಲೆಯಿಂದ ಆಗಮಿಸಿದ ಬೆಳಿಗ್ಗೆಯಿಂದಲೂ ಬಹಳ ಸಹನಾಭೂತಿಯಿಂದ ಇಲ್ಲಿಯವರೆಗೆ ನಮ್ಮೊಟ್ಟಿಗೆ ಶಕ್ತಿಯಾಗಿ ನಿಂತಿರುವಂತಹ ಎಲ್ಲ ಮಾನವತಾವಾದಿಗಳಲ್ಲಿ ಶರಣು ಶರಣಾರ್ಥಿಗಳು.

ಈ ಸಮಾರಂಭದಲ್ಲಿ ಇಲ್ಲಿಯವರೆಗೂ ಅತ್ಯಂತ ಗಂಭೀರವಾಗಿ ಕುಳಿತ ಗಟ್ಟಿಕಾಳುಗಳನ್ನು ನೋಡುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ. ಈ ಗಟ್ಟಿ ಕಾಳುಗಳು ರಾತ್ರಿಯವರೆಗೂ ಇನ್ನು ಮುಂದೆಯೂ ಇರುತ್ತಾರೆಂದು ಅನ್ನಿಸುತ್ತದೆ. ಇಂತಹ ಕೆಲಸಗಳಿಗೆ ಶಕ್ತಿ ತುಂಬುವುದು ಗಟ್ಟಿಕಾಳುಗಳಿಂದ. ನಮ್ಮ ಜಯಘೋಷ, ನಮ್ಮ ಚಪ್ಪಾಳೆ, ನಮ್ಮ ಶಕ್ತಿಯನ್ನು ಗಟ್ಟಿಗೊಳಿಸುತ್ತದೆ.

ಕುವೆಂಪು ಅವರು ಹೇಳುತ್ತಾರೆ:

“ಸತ್ತಂತಿಹರನು ಬಡಿದೆಚ್ಚರಿಸು

ಕಿತ್ತಾಡುವರನು ಕೂಡಿಸಿ ಒಲಿಸು”

ಸತ್ತಂತಿರುವುದು ಬೇಡ. ಇರುವುದು ನಾಲ್ಕು ಜನ. ಎಂತಹ ಸಂದರ್ಭಗಳು, ಎಂತಹ ಸವಾಲುಗಳು ಬಂದರೂ ಕೂಡ, ಎಂತಹ ಸಂಘರ್ಷಮಯವಾದ ಈ ನಾಡಿನ ವಾತಾವರಣದಲ್ಲೂ ಕೂಡ ಈ ಜಗತ್ತಿನ ಪರಿವರ್ತನೆಗಾಗಿ ಲಕ್ಷ ಲಕ್ಷ ಬುದ್ಧರುಗಳು ಬರಬೇಕಿಲ್ಲ. ಒಬ್ಬ ಬುದ್ದ, ಒಬ್ಬ ಬಸವಣ್ಣ, ಒಬ್ಬ ಅಂಬೇಡ್ಕರ್ ಅವರು ಬಂದು ಇಡೀ ಜಗತ್ತಿನ ಚಾರಿತ್ರಿಕ ಇತಿಹಾಸವನ್ನು ಹೇಗೆ ಬರೆದರೋ ಎಂತಹ ಒಬ್ಬ ಬುದ್ಧ, ಒಬ್ಬ ಬಸವಣ್ಣ, ಒಬ್ಬ ಅಂಬೇಡ್ಕರ್ ಪರಿವರ್ತನೆ ದಿನದಲ್ಲಿ ಹುಟ್ಟಿಕೊಂಡರೆ ನಮ್ಮ ಜನ್ಮ, ಜೀವನದ ಸೇವೆ ಸಾರ್ಥಕ ಎಂದು ನಾವು ಭಾವಿಸುತ್ತೇವೆ. ಮಾನವ ಬಂಧುತ್ವ ವೇದಿಕೆಗೆ ಜಯವಾಗಲಿ, ಪರಿವರ್ತನಾ ದಿನಾಚರಣೆಗೆ ಜಯವಾಗಲೀ, ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಜಯವಾಗಲೀ.

ಬೆಳಿಗ್ಗೆಯಿಂದಲೂ ನಾನು ನಿಮ್ಮನ್ನೆಲ್ಲ ಗಮನಿಸುತ್ತಿರುವೆ. ನಿಮ್ಮೆಲ್ಲರನ್ನು ಕುರಿತಾಗಿ ಏನು, ಯಾವ ವಿಚಾರವಾಗಿ ಮಾತನಾಡಬೇಕೆಂದು ಆಲೋಚಿಸುತ್ತಿದ್ದೇನೆ. ಸಂಕ್ರಮಣದ ಕಾಲ, ಸಂಘರ್ಷದ ಕಾಲ, ಸವಾಲುಗಳ ಕಾಲ ಅಷ್ಟೇ ಸೂಕ್ಷ್ಮವಾಗಿರುವಂತಹ ಕಾಲವಿದು. ಎಲ್ಲಿ ಏನನ್ನು ಮಾತನಾಡಿದರೆ ಏನಾಗಿ ಬಿಡುತ್ತದೋ ಎಂಬ ಭಯಂಕರವಾದ ಕಾಲವಿದು. ಏನಾದರೂ ಒಂದು ಹೆಚ್ಚು ಕಡಿಮೆ ಮಾತನಾಡಿದರೆ ಭವಿಷ್ಯವೇ ಇಲ್ಲ ಎಂಬುದನ್ನು ಮಾಡುವುದಕ್ಕೆ ಮತ್ತೊಂದು ವರ್ಗ ಕಾಯುತ್ತಾ ನಿಂತಿದೆ.

ಇವತ್ತು ಪರಿವರ್ತನೆಯ ದಿನಾಚರಣೆಗೆಂದು ನಾವೆಲ್ಲ ಬೆಳಗಾವಿಯಲ್ಲಿ ಕೂಡಿದ್ದೇವೆ, ಆದರೆ ಇಲ್ಲಿ ನೆರೆದಿರುವಂತಹ ಜನ ಸಮೂಹದ ಹೊರತಾಗಿ ದೂರದಿಂದ ನೋಡುತ್ತಿರುವ ಜನ ವರ್ಗ ನಾವು ಏನು ಮಾತನಾಡುತ್ತೇವೆಂದು ಗಮನಿಸುತ್ತಿದ್ದಾಗ ಇದಕ್ಕೆಲ್ಲ ನಾವು ಉತ್ತರ ಕೊಡಬೇಕಾದುದ್ದು ಒಂದೇ ಒಂದು ನಮ್ಮ ಸಂಘಟನೆ, ನಮ್ಮ ಶಕ್ತಿ, ನಮ್ಮ ಇಚ್ಛಾಶಕ್ತಿ ಇದೆಲ್ಲದರ ಮೂಲಕ ನಾವು ಸಮಾಜಕ್ಕೆ ಎಂತಹ ಸಂದರ್ಭ ಬಂದರು ಸಮಾಜವನ್ನು ಕಟ್ಟುತ್ತೇವೆ, ಸಮತಾವಾದವನ್ನು ನಿರ್ಮಿಸುತ್ತೇವೆಂದು ಸಂದೇಶವನ್ನು ಕೊಡಬೇಕಾಗಿದೆ. ಮೊದಲು ಇದನ್ನು ನಾವು ಪಾಲಿಸುತ್ತೇವೆಂದು ಸಂಕಲ್ಪ ಮಾಡಿಕೊಳ್ಳಬೇಕು. ದೇವರುಗಳನ್ನು ಪೂಜಿಸಿದ್ದು ಸಾಕು. ಧರ್ಮಗಳ ಕಡೆಗೆ ಚಿಂತನೆ ಮಾಡುವುದು ಅರ್ಥವಿಲ್ಲದಿರುವಂತದ್ದು, ಉತ್ತರವೇ ಸಿಗುವುದಿಲ್ಲ.

ಧರ್ಮಗಳ ಬಗ್ಗೆ “ರಾಮ ಜನ್ಮ ಭೂಮಿಯಲ್ಲಿ ರಕ್ತ ಹರಿಯುವುದ ಕಂಡು ರಾಮ ಬೊಬಡ ಬಡೆಯುತ್ತಿದ್ದಾನೆ. ಮಹಮ್ಮದ್ದೀಯರ ಹೆಸರಿನಲ್ಲಿ ದೇಶ ಘಾಸಿಯಾಗುವುದನ್ನು ಕಂಡು ಮಹಮ್ಮದ್ದೀಯ ಎದೆ ಎದೆ ಬಡೆದುಕೊಳ್ಳುತ್ತಿದ್ದಾನೆ. ಇವರಿಬ್ಬರಿಗೂ ನಾವು ಧರ್ಮವನ್ನು ಸಾಧಿಸಿದ್ದೇವೆ ಎಂದು ಸಂತೋಷ. ಇದೆಂತ ದುರ್ವಿಲಾಸ ನೋಡ.” ಎಂದು ಕವಿ ಬರೆಯುತ್ತಾನೆ. ಎಲ್ಲರಿಗೂ ಅವರವರ ಧರ್ಮಗಳ ಸಂಘರ್ಷಗಳೇ, ಅವರವರ ಪಂಥಗಳ ಸಂಘರ್ಷಗಳು. ಯಾವುದು ಧರ್ಮ ಸಂಘರ್ಷ, ಮಠಗಳ ಸಂಘರ್ಷ, ಮತಗಳ ಸಂಘರ್ಷ, ಈ ಹೊಸ ತಲೆಮಾರಿನ ಸಂಘರ್ಷಗಳು ನಮಗೆ ಯಾವುದೂ ಬೇಕಿಲ್ಲ.

ಮಾನವ ಬಂಧುತ್ವ ವೇದಿಕೆಯ ಸತೀಶ್ ಜಾರಕಿಹೊಳಿಯವರು ಕರೆದಿದ್ದಾರೆಂದು ನಾವೆಲ್ಲರೂ ಸೇರಬೇಕೆಂದುಕೊಳ್ಳಬಾರದು. ಅವರ ಈ ಸೈದ್ಧಾಂತಿಕ ನಿಲುವಿನ ಜೊತೆಗೆ ನಮ್ಮೆಲ್ಲರ ತುಡಿತ, ಮಿಡಿತಗಳು, ನಮ್ಮೆಲ್ಲ ಆಸೆ, ನಮ್ಮೆಲ್ಲರ ಹಂಬಲ ಈ ನಾಡಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಆಗಬೇಕಿವೆ. ಕೆಲವು ವರ್ಷಗಳ ಹಿಂದೆ ತೋಂಟದಾರಾಧ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟವನ್ನು ಮಾಡಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗು ಪ್ರತಿಭಟನೆ ನಡೆಯಿತು. ಸಂಜೆ ಬಂದು ನಮ್ಮ ಮನವಿಯನ್ನು ಸ್ವೀಕರಿಸಿದರು. ಆಗ ಅವರ ಮೇಲೆ ನಮಗೆ ಭರವಸೆ ಮೂಡಿತಾದರೂ ನಂತರ ಸರ್ಕಾರ ನಮ್ಮ ಆಶಯಗಳನ್ನು ಈಡೇರಿಸಲು ವಿಫಲಗೊಂಡಿತು.

ಏಕೆಂದರೆ ಮುಖ್ಯಮಂತ್ರಿ ಮತ್ತು ಇನ್ನು ಕೆಲವರನ್ನು ಹೊರತು ಪಡಿಸಿ, ಸರ್ಕಾರದ ಹಲವು ಸಚಿವರುಗಳಿಗೆ ಮೌಢ್ಯ ಮುಕ್ತ ಕಾನೂನನ್ನು ಜಾರಿಗೆ ತರಲು ಇಚ್ಛೆ ಇರಲಿಲ್ಲ. ಇದು ಆಶಾವಾದಕ್ಕೆ ಧಕ್ಕೆ ಉಟು ಮಾಡುವ ನೋವಿನ ಸಂಗತಿಯಾಗಿದೆ. ಇಂತಹ ಸಂಘರ್ಷದ, ಸೂಕ್ಷ್ಮ ಕಾಲದಲ್ಲಿ ತಮ್ಮ ಅಧಿಕಾರ ಹೋದರೂ ಚಿಂತೆಯಿಲ್ಲ, ರಾಜಕೀಯವನ್ನೂ ಮೀರಿ, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಲುಪಿಸುತ್ತಿರುವ ಸತೀಶ್ ಜಾರಕಿಹೊಳಿಯವರ ಸಂಕಲ್ಪವು ಸಮಾಜದ ದಿಟ್ಟತನದ ಭಾಗ್ಯೋದಯದ ಕಾಲವೆಂದು ನಾನು ಭಾವಿಸುತ್ತೇನೆ.

ಸಮಾಜದ ಈ ಭಾಗ್ಯೋದಯ ಕಾಲದಲ್ಲಿ ನಾವೆಲ್ಲ ಅರ್ಥಪೂರ್ಣವಾಗಿ ಯೋಚಿಸುತ್ತಿದ್ದೇವೆ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು. ರಾಬಿಯ ಬಸ್ರಿಯವರು, ಒಂಬತ್ತನೆ ಶತಮಾನದ ಆ ಸಂತೆಯಲ್ಲಿ ಕೈಯಲ್ಲಿ ಪಂಜು ಹಿಡಿದುಕೊಂಡಿದ್ದು, ಒಂದು ಕೈಯಲ್ಲಿ ನೀರಿನ ಪಾತ್ರೆಯನ್ನು ಹಿಡಿದುಕೊಂಡು ನಗರದೊಳಗೆ ಹುಚ್ಚರಂತೆ ಹೋಗುತ್ತಿದ್ದಾಗ ಒಬ್ಬರು ಕೇಳಿದರಂತೆ. ಅಮ್ಮಾ ಈ ಉರಿ ಬಿಸಿಲಿನಲ್ಲಿ ಕೈಯಲ್ಲಿ ಪಂಜು, ಇನ್ನೊಂದು ಕೈಯಲ್ಲಿ ನೀರಿನ ಪಾತ್ರೆಯನ್ನು ಹಿಡಿದುಕೊಂಡಿದ್ದೀರಲ್ಲ. ಏಕೆ..?”

ಆಗ ರಾಬಿಯ ಬಸ್ರಿಯವರು ಹೇಳುತ್ತಾರೆ: “ನಾನು ಕೈಯಲ್ಲಿ ಪಂಜನ್ನು ಏಕೆ ಹಿಡಿದುಕೊಂಡಿದ್ದೇನೆಂದರೇ, ಈ ದೇಶದಲ್ಲಿ ಜನ ಧರ್ಮ, ದೇವರುಗಳ ಹೆಸರಿನಲ್ಲಿ, ಪುಣ್ಯ-ಪಾಪಗಳ ಕೆಸರಿನಲ್ಲಿ ತಮಗೆ ಹೇಗೆ ಬೇಕೋ ಹಾಗೆ ಹುಚ್ಚರಂತೆ ಭೂಮಿಯನ್ನು ಅಶಾಂತಿ ಮಾಡಿ, ಜ್ಞಾನದ ಜನರನ್ನು, ಜನಾಂಗವನ್ನು ಕತ್ತಲೆಗೆ ತಳ್ಳುತ್ತಲಿದ್ದಾರೆ. ಅಂತಹ ಅನಿಷ್ಟ ವ್ಯವಸ್ಥೆಯನ್ನು ನಾನು ಪಂಜಿನಿಂದ ಬೆಂಕಿ ಹಚ್ಚುತ್ತೇನೆ. ಮತ್ತು ನೀರು ಹಿಡಿದುಕೊಂಡಿದ್ದು ಯಾವ ಹೃದಯವು ಪ್ರೀತಿ ಬಯಸುತ್ತಿದೆ, ಯಾವ ಹೃದಯಗಳು ಒಲವ ಬಯಸುತ್ತಿದೆ, ಯಾವ ಹೃದಯವು ಮಾವವೀಯತೆಯನ್ನು ಕಟ್ಟಬೇಕೆಂದು ಬಯಸುತ್ತಿದೆಯೋ ಅಂತಹ ಒಲವಿನ ಹೃದಯಗಳಿಗೆ ಪ್ರೀತಿಯ ಪನ್ನೀರನ್ನು ಎರೆಯುತ್ತೇನೆಂದು ಹೇಳಿ ಆ ತಾಯಿಯು ನೀರನ್ನು ಹಿಡಿದುಕೊಂಡಿದ್ದಳು. ಅಂತಹ ನೀರನ್ನು ಎರೆಯುವ ಸನ್ನಿವೇಶ ಇದೆಂದು ನಾನು ಭಾವಿಸುತ್ತೇನೆ.

ಏಕೆಂದರೆ ಅಂತಹ ಎಲ್ಲ ಹುಚ್ಚು ಕನಸುಗಳಿಗೆ ನಾವು ಬೆಂಕಿಯನ್ನು ಹಚ್ಚಿ, ಹೊಸ ತಲೆಮಾರಿನ ಜನಾಂಗಕ್ಕೆ ಆ ಪ್ರೀತಿಯ ಜಲಧಾರೆಯನ್ನು ಎರೆಯಬೇಕಾಗಿದೆ. ನಮ್ಮ ಜನ ಸಂತರನ್ನು ಕೇಳಿದರಂತೆ ಜನ ಮಲಗಿರಬೇಕೋ? ಅಥವಾ ಎಚ್ಚರವಾಗಿರಬೇಕೋ? ಎಂದು. ಆಗ ಸಂತರು ಇಬ್ಬರೂ ಆಗಿರಬೇಕೆಂದು ಹೇಳಿದರಂತೆ. ಏಕೆ ಹಾಗಿರಲು ಸಾಧ್ಯ! ಒಂದು ಜನ ಮಲಗಿರಬೇಕು. ಇಲ್ಲವೆ ಎಚ್ಚರವಾಗಿರಬೇಕು. ಇಲ್ಲ ಎರಡೂ ನಡೆಯಬೇಕು. ಏಕೆಂದರೆ ಯಾವಾಗಲೂ ಜನರಲ್ಲಿ ಭಯವನ್ನು ಯಾರು ಹುಟ್ಟಿಸುತ್ತಾರೋ. ಯಾವಾಗಲೂ ಯಾರು ಜನರಲ್ಲಿ ದ್ವೇಷವನ್ನು ಹುಟ್ಟಿಸುತ್ತಾರೋ ಅವರು ಮಲಗಿರಬೇಕು. ಯಾರು ಸಮಾಜದಲ್ಲಿ ಸಾಮ್ಯತೆಯನ್ನು ಬಯಸುತ್ತಾರೋ ಅಂತವರು ಜಾಗೃತರಾಗಿರಬೇಕು, ಎಚ್ಚರವಾಗಿರಬೇಕೆಂದು ಸಂತರು ಹೇಳಿದರಂತೆ. ಅದೇ ರೀತಿ ಈ ಕಾರ್ಯಕ್ರಮವೂ ಕೂಡ ನಿಮ್ಮನ್ನು ಎಚ್ಚರಗೊಳಿಸುವಂತಹ ಕಾರ್ಯಕ್ರಮವಾಗಿದೆ. ನಿಮ್ಮೊಳಗೆ ಅರಿವಿನ ದೀಪವನ್ನು ಹಚ್ಚುತ್ತಿರುವಂತಹ ಕಾರ್ಯಕ್ರಮವಿದು. ಸಾಮಾನ್ಯವಾದುದ್ದೇನಲ್ಲ.

ಹಳೆಮತದ ಕೊಳೆಯೆಲ್ಲ ಕೊಚ್ಚಿ ಹೋಗಲಿ, ಬರಲಿ ಸುಜ್ಞಾನದ ಬುದ್ಧಿ. ವೇದ ಪ್ರಮಾಣತೆಯ ಮರುವು ಮರೀಚಿಕೆಯಲ್ಲಿ ನೀರೆರಚಿ ಕೆಡದಿರಲಿ ಸ್ವಾತಂತ್ರ್ಯದ ಸಿದ್ದಿ ಎಂದು ಕುವೆಂಪು ಅವರು ಹೇಳುತ್ತಾರೆ. ನಾವೆಲ್ಲ ಹೊಸ ತಲೆಮಾರಿನ ಜನಾಂಗ, ಹೊಸ ಆಶಾವಾದದೊಂದಿಗೆ ಹೊಸ ಹೊಸ ಸಮಾಜವನ್ನು ಕಟ್ಟಬೇಕೆಂದು ಹೊರಟಿದ್ದೇವೆಯೋ ಈ ಸಮಾಜವನ್ನು ಕಟ್ಟುವ ಕಾಲದೊಳಗೆ, ಒಟ್ಟಾಗಿ, ಒಗ್ಗಟ್ಟಾಗಿ ಇಂತಹ ವಿಚಾರಗಳ ಮೂಲಕ ಬಸವಾದಿಪ್ರಮಥರ ವಿಚಾರಗಳನ್ನು ನಾವೆಲ್ಲರೂ ಕೇಳಿದ್ದೇವೆ, ಯಾವ ಧರ್ಮದ ಗೊಡವೆಗೂ ಹೋಗಲಿಲ್ಲ, ಯಾರ ಮಧ್ಯಸ್ತಿಕೆಯನ್ನೂ ವಹಿಸಲಿಲ್ಲ. ಅವರಿಗೆ ಜನಾಂಗವೊಂದೇ ದೊಡ್ಡದಾಗಿ ಕಂಡಿತು. ಶರಣರು ದೊಡ್ಡವರಾಗಿ ಕಂಡರು. ಶರಣರೆಂದರೆ ವಿಭೂತಿಯನ್ನು ಹಚ್ಚಿದವರಲ್ಲ.

ಶರಣರೆಂದರೆ ಬಹಳ ಜನರಲ್ಲಿ ಗೊಂದಲಗಳಿವೆ. ಇವತ್ತು ಅಂಬೇಡ್ಕರ್ ಅವರ ಪರಿವರ್ತನೆಯ ಮಹಾಪೂರದೊಳಗೆ ಬಹಳ ಜನರಿಗೆ ಸಂಶಯವಿರುತ್ತದೆ. ಕಾವಿಯೇ ಬೇಡವೆಂದು ಹೇಳುತ್ತಿರುವಾಗ ಮತ್ತೆ ಇವರೆಲ್ಲ ಕಾವಿ ಹಾಕುವುದೇನಿರುತ್ತದೆ? ನಾವು ಸರ್ಕಸ್ ಮಾಡುವ ಸ್ವಾಮಿಗಳಲ್ಲ. ಅಂತಹ ಸರ್ಕಸ್ ಮಾಡುವ ಸ್ವಾಮಿಗಳ ಒಂದು ಮಹಾಪೂರವೇ ಇದೆ. ಯೋಗದ ಮೇಲೆ, ಮದ್ಯದ ಮೇಲೆ, ಹೊಸ ತಲೆಮಾರಿನ ಜನಾಂಗವನ್ನು ಎಳೆದು ನಡೆಸುವಂತಹ ಜನಾಂಗದ ಸ್ವಾಮಿಗಳಿದ್ದಾರೆ. ನಿಮಗೆಲ್ಲ ಗೊತ್ತಿರಲಿ ಬಾಬಾ ಸಾಹೇಬರ ವಚನ, ಪುರಾಣಗಳನ್ನು ತಮ್ಮ ಮಠದೊಳಗೆ ಬರೆಸುವುದರ ಮೂಲಕ, ಅದನ್ನು ಹಚ್ಚಿಸಿ ಜನಮಾನಸಕ್ಕೆ ಸಂವಿಧಾನವೇ ಶ್ರೇಷ್ಠವೆಂದು ಹೇಳಿರುವ ಕನ್ನಡದ, ಕರ್ನಾಟಕದ ಏಕೈಕ ಲಿಂಗಾಯತ ಮಠವೆಂದರೇ ಅದು ಗದುಗಿನ ತೋಂಟದಾರ್ಯ ಮಠವಾಗಿದೆ ಎಂದು ನಿಮಗೆಲ್ಲರಿಗೂ ನೆನಪಿರಲಿ. ಅಲ್ಲಿನ ಸಿದ್ದಲಿಂಗ ಸ್ವಾಮೀಜಿಗಳು ಜನರಿಗೆ ಸಂವಿಧಾನದ ಪ್ರವಚನವನ್ನು ನೀಡುವುದರ ಮೂಲಕ, ಭಗವದ್ಗೀತೆ ಮುಖ್ಯವಲ್ಲ, ಮಾನವೀಯತೆಯ ಏಳ್ಗೆಗೆ ಬಾಬಾ ಸಾಹೇಬರು ಬರೆದ ಸಂವಿಧಾನವೇ ಶ್ರೇಷ್ಠವೆಂದು ಹೇಳುತ್ತಾ, ತಲೆಯ ಮೇಲೆ ಆ ಸಂವಿಧಾನವನ್ನು ಹೊತ್ತುಕೊಂಡು ನಡೆಯಬೇಕೆಂದು ಹೇಳುತ್ತಾರೆ. ಆ ಪರಂಪರೆಯನ್ನೆಲ್ಲ ನಮಗೆ ಹೇಳಿದಂತಹ ಸ್ವಾಮೀಜಿಗಳವರು. ನಮ್ಮ ನಮ್ಮ ಧರ್ಮಗಳ ಗ್ರಂಥಗಳಿಗಿಂತ ಸಂವಿಧಾನವೇ ನಮ್ಮ ನಿಜವಾದ ಧರ್ಮಗ್ರಂಥವೆಂದು ತಿಳಿದುಕೊಂಡಿರುವ ಸ್ವಾಮಿಗಳು.

ಆತ್ಮೀಯರೆ, ಮದರ್ ಥೇರೆಸಾ ಅವರಿಗೆ ಯಾರೋ “1963 ಜುಲೈ 20 ಮಾನವ ಮೊದಲ ಬಾರಿಗೆ ಆಕಾಶದ ಅಂಗಳದಲ್ಲಿ ಕಾಲಿಸಿರಿದ ದಿನ ನೀವೇನಾದರೂ ಅಲ್ಲಿಗೆ ಹೋಗಲು ಪ್ರಯತ್ನಿಸುತ್ತೀರ”ಎಂದು ಕೇಳಿದರಂತೆ. ಆಗ ಆ ತಾಯಿ ಹೆಳುತ್ತಾರೆ. “ಖಂಡಿತವಾಗಿಯೂ ನಾನೂ ಆಕಾಶದ ಅಂಗಳಕ್ಕೆ ಹೋಗುತ್ತೇನೆ. ಆದರೆ ಒಂದು ತಿಳಿದಿರಲಿ ದೀನರು, ದರಿದ್ರರು, ದುರ್ಬಲರು, ನೊಂದವರು ಅಲ್ಲಿ ಇರುವವರಾದರೆ ನಾನು ಹೋಗುತ್ತೇನೆ. ಆದರೆ ಅಲ್ಲಿ ಇಲ್ಲವಾದರೇ ಅಲ್ಲಿಗೆ ಹೋಗಿ ಮಾಡುವ ಕೆಲಸವೇನಾದರೂ ಏನಿದೆ ನನಗೆ?” ಎಂದು. ಈ ಮಾತು ನಿಮಗೆಲ್ಲ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಕೆಲಸವಿರುವುದು ಮಠ, ಮಂದಿರಗಳಲ್ಲಿ ಅಲ್ಲ. ನಮ್ಮ ಕೆಲಸವಿರುವುದು, ದುರ್ಬಲರಲ್ಲಿ, ನೊಂದವರಲ್ಲಿ. ನಾವು ಬೆಳಿಗ್ಗೆಯಷ್ಟೆ ನೋಡುತ್ತಿದ್ದೆವು, ಯಮಕನಮರಡಿ ಮೂಲೆಯಿಂದ ಬಂದಿರುವಂತಹ ನಮ್ಮ ತಾಯಂದಿರೆಲ್ಲರೂ ಕೂತು ಮಾತನಾಡುತ್ತಲಿದ್ದರು. ಅವರಿಗೆ ಬೇರೇನೂ ಬೇಕಿರಲಿಲ್ಲ. ಒಂದೊಂದು ಸಮತೆಯ ವಾದಗಳನ್ನು ಕೇಳಿದಾಗ ಆ ಜನಪದ ಗರತಿಯರು ಹೇಳುತ್ತಾರೆ, “ಕಾಶಿಗೆ ಹೋಗಾಕ ಏಸೊಂದು ದಿನ ಬೇಕು. ಕಾಸಿ ಕುಂತಾಳ ಹಡೆದವ್ವ ಮನೆಯೊಳಗ. ಕಣ್ಮುಂದ ಐತಿ ಕೈಲಾಸ” ಎಂದು ಹೇಳಿದ್ದಾರೆ.

ನಾವು ಹಿಂದುಳಿದವರೆಂದು ನಮ್ಮನ್ನು ಕರೆಯುತ್ತಿದ್ದಾರಲ್ಲ ನಾವು ದೊಡ್ಡ ದೊಡ್ಡ ಸ್ಥಳಗಳಲ್ಲಿ ಕೈಲಾಸ ಕಾಣಲಿಲ್ಲ. ತಾಯಿ ಸಾನಿಧ್ಯದಲ್ಲಿ ನಾವು ಕೈಲಾಸವನ್ನು ಕಂಡಿದ್ದೇವೆ ಎನ್ನುವ ಸತ್ಯ ನಿಮಗೆಲ್ಲ ಅರಿವಾಗಲಿ. ನಮ್ಮ ಗುಡಿಸಲವೇ ನಮಗೆಲ್ಲ ಆನಂದದ ಕಾಶಿ. ಕಾಶಿಯ ಗಂಗಾ ತೀರ್ಥಕ್ಕಿಂತ ನಮ್ಮ ಮನೆಯಲ್ಲಿರುವ ನೀರೇ ಮೇಲು. ಗೋಕರ್ಣದ ಸಿಹಿ ಪ್ರಸಾದಕ್ಕಿಂತ ಅಮ್ಮನ ಕೈತ್ತುತ್ತೇ ಮೇಲು, ತಿರುಪತಿಯ ಲಾಡುವಿಗಿಂತ ನಮ್ಮಲ್ಲಿನ ಉಂಡೆಯೇ ಮೇಲು, ಶಬರಿ ಮಲೆಯ ಜ್ಯೋತಿಗಿಂತಲೂ ನಮ್ಮ ಗುಡಿಸಲಿನ ದೀಪವೇ ಮೇಲು, ಸಿಕ್ಕಿದ್ದನ್ನೆಲ್ಲ ಬಯಸಿ ಬಯಸಿ ಬೇಕೆಂದು ಬಯಸುವುದಕ್ಕಿಂತ ಪರಿವರ್ತನೆಯ ದಿನದ ದಿನಾಚರಣೆಯೇ ಮೇಲೆಂದು ಭಾವಿಸುವುದಾದರೆ ವಿಚಾರ ಕ್ರಾಂತಿಗೆ ಸನ್ನದರಾಗಿದ್ದೇವೆಂದು ನಾವು ಭಾವಿಸಿಕೊಳ್ಳುತ್ತೇನೆ.

ಆದರೆ ಆಗಲೇ ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಸ್ವಾಮೀಜಿ ನೀವೆಲ್ಲ ಪ್ರತಿ ವರ್ಷವೂ ಬರುತ್ತೀರಿ. ತುಂಬಾ ಅದ್ಭುತವಾದ ಮಾತುಗಳನ್ನು ಮತ್ತು ವಿಚಾರಗಳನ್ನು ಆಡುತ್ತೀರಿ. ಅವೆಲ್ಲವನ್ನೂ ನಾವು ಕೇಳಿಸಿಕೊಳ್ಳುತ್ತೇವೆ. ಮತ್ತೆ ನಮ್ಮ ನಮ್ಮ ಮನೆಗಳಿಗೆ ಹೋಗುತ್ತೇವೆ. ಆದರೆ ಯಾವುದಾದರೂ ದೇವರ ಜಾತ್ರೆ ಬಂದಾಗ ಗಾಡಿಗಳು, ಎತ್ತಿನ ಗಾಡಿಗಳನ್ನು ಮಾಡಿಕೊಂಡು ಉಧೋ ಉಧೋ ಎನ್ಮುತ್ತಾ ನೂರಾರು ಮೈಲಿಗಳನ್ನು ದಾಟಿ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಹೋಗುವವರು ನಾವೇ ಆಗಿರುತ್ತೇವೆ. ಆದರೆ ಎಸಿ ರೂಮಿನಲ್ಲಿ ಕೂತಿರುವವರಾರೂ ಕೂಡ ನಮ್ಮ ಹಾಗೆ ಗುಡಿ-ಗುಂಡಾರ, ಪೂಜೆ-ಪುನಸ್ಕಾರವೆಂದು ಸಮಯ-ಹಣ ವ್ಯರ್ಥ ಮಾಡುವುದಿಲ್ಲ. ಇದರಿಂದ ನಮ್ಮ ಜನ ಹಾಳಾಗಿ ಹೋಗುತ್ತಿದ್ದಾರೆಂಬ ಈ ವಿಚಾರವನ್ನು ಮೊದಲು ನಮ್ಮ ಜನರಿಗೆ ತಿಳಿಸಿ ಹೇಳಿ. ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.

ನೂರು ದೇವರುಗಳನ್ನು ನೂಕಾಚೆ ದೂರ ಎಂದು ಕುವೆಂಪುರವರು ಹೇಳಿದ್ದಾರೆ. ಗುಡ್ಡ ಸುತ್ತಿ ನಿಮ್ಮ ಹಣ, ಸಮಯ, ಶ್ರದ್ಧೆ, ಶ್ರಮವನ್ನು ದಯವಿಟ್ಟು ಹಾಳು ಮಾಡಿಕೊಳ್ಳಬೇಡಿ. ನಿಮ್ಮೊಳಗೆ ಹೃದಯವಂತಿಕೆಯ ದೇವರಿದ್ದಾನೆ. ಆತ ನಾಟಕಕಾರನಲ್ಲ, ಕಪಟನಲ್ಲ, ಸುಲಿಗೆವಂತನಲ್ಲ, ಸನ್ಯಾಸಿಯಲ್ಲ, ನಿನ್ನ ನೀ ಅರಿತರೇ ನೀನೇ ದೇವರು ಕೂಡಲಸಂಗಮ ದೇವ ಎಂದು ಬಸವಣ್ಣನವರು ಹೇಳಿದ್ದಾರೆ. ಇದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ನೀವು ದೇವರಾಗಿ. ಯಾವ ದೇವರುಗಳು ನಮಗೇನೂ ಮಾಡುವುದಿಲ್ಲ. ನೀವೇ ಭಗವಂತರು. ಕಾಡುವುದಿಲ್ಲ, ಬೇಡುವುದಿಲ್ಲ. ಯಾವ ಭೂತಗಳು ನಿಮ್ಮನ್ನು ಕಾಡುವುದಿಲ್ಲ. ಯಾವುದಾದರೂ ಸ್ವಾಮೀಜಿಗಳ ಹತ್ತಿರ ಹೋಗಿ ನೀವು ತಾಯ್ತ ಕಟ್ಟಿಸಿಕೊಳ್ಳಲು, ಮಂತ್ರ ಹೇಳಿಸಿಕೊಳ್ಳಲು, ಪೂಜೆ ಮಾಡಿಸಲು ಹೋಗಬೇಡಿ. ಅವರ ಬೆನ್ನು ಹತ್ತಬೇಡಿ. ಮನಸ್ಸು ತೊಳೆದುಕೊಂಡು ಸಂಕಲ್ಪ ತೊಡಿ.

ನಮ್ಮ ಸಂಖ್ಯೆ ಕಡಿಮೆಯಾಗಬಾರದು. ಈ ಸಂಖ್ಯೆ ಹೆಚ್ಚಾಗಬೇಕು. ಈ ಸಂತತಿ ಹೆಚ್ಚಾಗಬೇಕು. ಇದು ಒಂದು ನಿಮಿಷದ ಜಾತ್ರೆಯಲ್ಲ. ಇದು ಪರಿವರ್ತನೆಯ ಕಾಲ. ಇಂತಹ ವಿಚಾರವನ್ನು ಹೇಳಿದ ಪನ್ಸಾರೆ, ಕಲಬುರ್ಗಿಯವನ್ನು ಹತ್ಯೆಗೈದರು. ಇವತ್ತು ಇಂತಹ ವಿಚಾರಗಳನ್ನು ಬಿತ್ತುವಂತಹ, ಹೋರಾಟವನ್ನು ಮಾಡುವಂತಹ ಸಂಘರ್ಷದ ಕಾಲ ಬಂದಿದೆ. ಇದನ್ನು ಮುಗಿಸಿಬಿಡಲು ಒಂದು ಗುಂಪು ತಯಾರಾಗಿದೆ. ಮತ್ತೊಂದೆಡೆ ವೈಜ್ಞಾನಿಕವಾಗಿ ವಿಚಾರ ಮಾಡುವಂತಹ, ಸತ್ಯದ ನಡಿಗೆಯಲ್ಲಿ ನಡೆಯುವಂತಹ ವಿಚಾರವಾದಿಗಳ ಶಕ್ತಿ, ನೀವೆಲ್ಲರೂ ತಯಾರಾಗುತ್ತಿದ್ದೀರಿ.

ಆತ್ಮೀಯರೆ, ನಮ್ಮ ಭರವಸೆ ಇರುವುದು ಮಂತ್ರಿ, ಮಹೋದಯರು, ಯಾವ ರಾಜಕಾರಣ, ಪಕ್ಷದ ಮೇಲಲ್ಲ. ಸಂದರ್ಭ ಬಂದಾಗ ಅವರೆಲ್ಲ ಬದಲಾಗುತ್ತಿರುತ್ತಾರೆ. ನಮಗೆ ಇದನ್ನೆಲ್ಲ ಹೊತ್ತುಕೊಂಡಿರುವುದರಿಂದ ಅನಿವಾರ್ಯವಾಗಿದೆ. ಅದಕ್ಕಾಗಿ ಯಾವ ಪನ್ಸಾರೆ, ಕಲಬುರ್ಗಿ, ಹಿರಿಯರು ಸಮಾಜಕ್ಕಾಗಿ ತಮ್ಮ ಬದುಕನ್ನು ಪಣವಾಗಿಟ್ಟರೋ, ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿಯವರು, ಸತೀಶ್ ಜಾರಕಿಹೊಳಿಯವರು, ವಿಚಾರವಾದಿಗಳು ನಮ್ಮಂತ ಎಲ್ಲ ಸಮಾನ ಮನಸ್ಕರೆಲ್ಲರು ಈ ಕ್ರಾಂತಿಯ ನಡಿಗೆಯೊಂದಿಗೆ, ಒಟ್ಟೊಟ್ಟಿಗೆ ನಡೆದುಕೊಂಡು ಹೋಗೋಣ ಎಂದು ಹೇಳುತ್ತಾ, ಇಂತಹ ಸಂದರ್ಭದೊಳಗೆ ಬೆಳಿಗ್ಗೆಯಿಂದಲು ಎಲ್ಲ ಮಾತುಗಳನ್ನು ಕೇಳಿದ್ದೀರಿ, ಅವೆಲ್ಲ ಮಾತುಗಳು ನಿಮ್ಮ ಪರಿವರ್ತನೆಗಾಗಿ, ನಿಮ್ಮ ಮನಸ್ಸಿನ ಬಾಗಿಲನ್ನು ತೆರೆಸುವುದಕ್ಕಾಗಿ. ದಯವಿಟ್ಟು ಈ ವೇದಿಕೆಯ ನಿರ್ಮಾಣ ಮಾಡಿರುವುದು ಯಾರನ್ನೋ ಬೈಯಲು, ನಿರ್ನಾಮ ಮಾಡಲು, ಸಣ್ಣವರನ್ನಾಗಿಸಲು ಅಲ್ಲ. ನಾವು ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ. ನಮ್ಮ ಮಾನವತಾವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದೇವೆಯೇ ಹೊರತು, ಇನ್ನ್ಯಾರನ್ನೋ ನೋಯಿಸುವ ಉದ್ದೇಶ ನಮ್ಮದಲ್ಲ. ಆತ್ಮೀಯರೇ ಇನ್ನೂ ಹಲವಾರು ಅತಿಥಿಗಳ ಮಾತುಗಳಿವೆ. ಅವರಿಗೆ ವೇದಿಕೆಯನ್ನು ಬಿಟ್ಟುಕೊಡುತ್ತ, ನಿಮ್ಮೆಲ್ಲರಿಗೂ ಶರುಣು ಹೇಳಿ ವಂದಿಸುತ್ತ ನನ್ನ ಮಾತುಗಳನ್ನ ಮುಗಿಸುತ್ತೇನೆ.

  • ಪ್ರಭು ಚನ್ನಬಸವ ಸ್ವಾಮಿ, ಮುರುಗಿಮಠ, ಅಥಣಿ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು