October 1, 2023 6:30 am

ಸ್ಮಶಾನ ಮನುಷ್ಯನಿಗೆ ಸತ್ಯದ ದರ್ಶನ ಮಾಡುವ ಜಾಗ

ಡಿಸೆಂಬರ್ 6, 2016ರಂದು ಬೆಳಗಾವಿಯ ಬುದ್ಧ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ ನಡೆದ, ಡಾ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಪ್ರಯುಕ್ತ ಪರಿವರ್ತನಾ ದಿನಾಚರಣೆ, ಮೂಢನಂಬಿಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಭಾಷಣ.  

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮೂಢನಂಬಿಕೆ ವಿರೋಧಿ ಪರಿವರ್ತನ ದಿನಚರಣೆಯ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಶಾಸಕರು, ಮಾಜಿ ಸಚಿವರು, ವಿಚಾರವಾದಿಗಳು ಆಗಿರುವ ಶ್ರೀ ಸತೀಶ್ ಜಾರಕಿಹೋಳಿಯವರೆ, ವೇದಿಕೆಯ ಮೇಲಿರುವ ಪೂಜ್ಯ ಸ್ವಾಮಿಜಿಗಳೆ ಮತ್ತು ಇಲ್ಲಿ ಸೇರಿರುವ ಬಂಧುಗಳೆ. ನಾನು ಬೆಳಿಗ್ಗೆಯಿಂದಲು ಇಲ್ಲಿ ಕೂತಿದ್ದೇನೆ, ಎಲ್ಲರೂ ಆಡಿದ ಮಾತುಗಳನ್ನು ಕೇಳಿದ ನಂತರ ನಾನು ಮಾತನಾಡುವುದು ಏನೂ ಇಲ್ಲ ಅಂತ ನನಗೆ ಅನ್ನಿಸಿತು. ಆದರೂ ಮಾತನಾಡಲೇಬೇಕಾದ ಅನಿವಾರ್ಯತೆ ಇದೆ. ನನಗೆ ಬಹಳ ಆಶ್ಚರ್ಯ ಅನ್ನಿಸಿರುವುದು ಇಲ್ಲಿ ಸೇರಿರುವ ಜನ.

ಸ್ಮಶಾನ ಅನ್ನುವುದು ಮನುಷ್ಯನಿಗೆ ಸತ್ಯದ ದರ್ಶನ ಮಾಡುವ ಜಾಗವಾಗಿದೆ. ಸಾಮಾನ್ಯವಾಗಿ ಸ್ಮಶಾನಕ್ಕೆ ಬಂದುಹೋಗುವವರು ವೈರಾಗ್ಯದ ಬಗ್ಗೆ ಮಾತನಾಡುತ್ತಾರೆ. ಅವರಲ್ಲಿರುವ ಕೋಪ, ದ್ವೇಷ, ಅಸೂಯೆ, ಸೇಡು ಇವೆಲ್ಲವನ್ನು ಮರೆತು ಏನು ಮಾಡಿದರೇನು ಕೊನೆಗೆ ಶ್ಮಶಾನದಲ್ಲೆ ನಮ್ಮ ಅಂತ್ಯವಾಗುತ್ತೆ. ಆದ್ದರಿಂದ ಮನುಷ್ಯ ದೇವಸ್ಥಾನಕ್ಕೆ ಹೋಗುವ ಬದಲು ಸ್ಮಶಾನಕ್ಕೆ ಹೋಗುತ್ತಿದ್ದಿದ್ದರೆ, ಅವನು ಬಹುಶಃ ಮಾನವೀಯ ಆಗುತ್ತಿದ್ದನೇನೋ ಅಂತ ನನ್ನ ಅಭಿಪ್ರಾಯ. ಅಂತಹುದೊಂದು ಸತ್ಯದ ದರ್ಶನ ನನಗೆ ಇಲ್ಲಿ ಆಯಿತು.

ನನಗೆ ಇನ್ನೊಂದು ಆಶ್ಚರ್ಯ ಇಲ್ಲಿ ಸ್ವಾಮೀಜಿಗಳು, ವಿಚಾರವಾದಿಗಳು, ಸಾಹಿತಿಗಳು ಮಾತನಾಡುತ್ತಿರುವಾಗ ಜನ ಅದಕ್ಕೆ ಪ್ರತಿಕ್ರಿಯಿಸಿದ ರೀತಿ, ಅದೊಂದು ನಮ್ಮ ಬದುಕಿನಲ್ಲಿ ಭರವಸೆಯ ಬೆಳಕು ಎಂದು ನಾನಂದುಕೊಂಡಿರುವೆ. ಅವರು ದೇವರಿಗೆ ಬೈದಾಗ, ಧರ್ಮಸ್ಥಳಕ್ಕೆ ಬೈದಾಗ ಇವೆಲ್ಲ ಕಂದಾಚಾರಗಳನ್ನು ಸ್ವಾಮೀಜಿಗಳು ಟೀಕಿಸಿದಾಗ ಜನ ಅದಕ್ಕೆ ಪ್ರತಿಕ್ರಿಯಿಸಿದ ರೀತಿ ಅದು ನಿಜವಾದ ನಮ್ಮ ಭವಿಷ್ಯವಾಗಿದೆ. ಇಲ್ಲಿ ಸೇರಿರುವುದು ಜನಸಾಮಾನ್ಯರಾಗಿದ್ದೀರಿ. ಅವರೆಲ್ಲರಿಗೂ ನನ್ನ ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇವತ್ತಿನ ಚಿಂತಕರು, ಪ್ರಗತಿಪರರೆಲ್ಲರು ಬಹಳ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಇವರು ಎದುರಿಸುತ್ತಿರುವ ಸವಾಲುಗಳೇನಿವೆಯೋ ಅದು ಕೋಪರ್ನಿಕಸ್, ಗೆಲಿಲಿಯೊ, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರು ಇವರೆಲ್ಲರೂ ಎದುರಿಸಿರುವುದಕ್ಕಿಂತ ದೊಡ್ಡ ಸವಾಲೆಂದು ನನಗೆ ಅನ್ನಿಸುತ್ತಿದೆ. ಏಕಂದರೆ, ನಿಮಗೆ ಗೊತ್ತಿದೆ ಕೋಪರ್ನಿಕಸ್ ಸೂರ್ಯನೆ ಸೌರವ್ಯೂಹದ ಕೇಂದ್ರವೆಂದು ಹೇಳಿದಾಗ ಅವನಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡುತ್ತಾರೆ. ಇದೇ ರೀತಿ ಸಮಾಜ ಸುಧಾರಕರು ತಮ್ಮ ಕೆಲಸವನ್ನು ಪ್ರಾರಂಭಿಸಿದಾಗ ಅವರಿಗೆ ನಾಲ್ಕು ಕಡೆಗಳಿಂದ ವಿರೋಧಗಳು ವ್ಯಕ್ತವಾಗುತ್ತವೆ. ಅವರಿಗೆ ಎದುರಿಗೆ ಇದ್ದದ್ದು ಒಂದು ದೊಡ್ಡ ಅನಕ್ಷರಸ್ತರ ಸಮೂಹ. ಶಿಕ್ಷಣ, ಸಂಪರ್ಕ, ಸಮೂಹದ ಮಾಧ್ಯಮಗಳಿರಲಿಲ್ಲ. ಅವರೊಂದು ಕೂಪ ಮಂಟಪದ ಹಾಗಿದ್ದರು. ಅವರನ್ನು ಎಚ್ಚರಿಸುವುದು, ಅವರಲ್ಲಿ ಜಾಗೃತಿ ಮೂಡಿಸುವುದು ಆಗಿನ ಒಂದು ದೊಡ್ಡ ಸವಾಲಾಗಿತ್ತು. ಅದರಲ್ಲಿ ಅವರು ಯಶಸ್ಸನ್ನೂ ಕೂಡ ಕಂಡರು.

ಆದರಿವತ್ತು ಸಾಕ್ಷರತೆ ಹೆಚ್ಚುತ್ತಿದೆ, ಸಂಪರ್ಕ ವಿಸ್ತಾರವಾಗಿದೆ, ಸಮೂಹ ಮಾಧ್ಯಮಗಳು ಬೆಳೆದಿವೆ, ಇಡೀ ಜ್ಞಾನ ಜಗತ್ತು ನಮ್ಮ ಬೆರಳ ತುದಿಯಲ್ಲಿವೆ. ಹಾಗಿದ್ದರೂ ಕೂಡ ಮೂಢನಂಬಿಕೆಗಳು, ಕಂದಾಚಾರಗಳು, ಅಂಧಶ್ರದ್ದೆ ಬೆಳೆಯುತ್ತಿವೆ ಏಕೆ? ಇದು ಇನ್ನೊಂದು ಪ್ರಶ್ನೆಯನ್ನು ನಮ್ಮಲ್ಲಿ ಹುಟ್ಟು ಹಾಕುತ್ತವೆ. ನಾವೆಲ್ಲ ಏನೆಂದು ತಿಳಿದುಕೊಂಡಿದ್ದೇವೆಂದರೇ ಮೂಢನಂಬಿಕೆ, ಅಸ್ಪೃಶ್ಯತೆ, ಅಂಧಶ್ರದ್ಧೆ, ಜಾತೀಯತೆ ಇವೆಲ್ಲವನ್ನು ಹೊಡೆದೋಡಿಸುವುದಕ್ಕೆ ಶಿಕ್ಷಣ ಒಂದು ಔಷಧಿ ಎಂದು ನಾವಂದುಕೊಂಡಿದ್ದೇವೆ.

ಮನುಷ್ಯನಿಗೆ ಶಿಕ್ಷಣವೊಂದನ್ನು ಕೊಟ್ಟರೇ ಇವೆಲ್ಲವೂ ಕಡಿಮೆಯಾಗಿ ಜನ ಜಾಗೃತರಾಗುತ್ತಾರೆ, ಬೇರೇನು ಕೊಡುವುದು ಬೇಡ ಶಿಕ್ಷಣವೊಂದನ್ನು ಕೊಡಿ ಎಂದು, ನಮ್ಮ ಸಮಾಜ ಸುಧಾರಕರೆಲ್ಲರೂ ಕೂಡ ಶಿಕ್ಷಣಕ್ಕೆ ಒತ್ತು ಕೊಟ್ಟರು. ಅಂದರೆ ಅವರ ಅರಿವಿನ ಬೆಳಕು ಒಳಗಿನಿಂದ ಹುಟ್ಟುವುದೆಂದು. ಆದರೆ ಕುಕ್ಕೆ ಸುಬ್ರಮಣ್ಯದಲ್ಲಿ ಅವರನ್ನು ಪರಿಚಯ ಮಾಡಿ ಕೊಡುವಾಗ ಅಲ್ಲಿ ಇಂಜಿನೀಯರ್‍ಗಳಿದ್ದಾರೆ, ಡಾಕ್ಟರ್‍ಗಳಿದ್ದಾರೆ, ಲೆಕ್ಚರರ್‍ಗಳಿದ್ದಾರೆ ಅಂತ. ನೀವು ಬೆಳಿಗ್ಗೆ ಟಿ.ವಿಗಳಲ್ಲಿ ಜ್ಯೋತಿಷಿಗಳು ಬರುವಾಗ ನಿಮಗೆಲ್ಲ ಅಷ್ಟೊಂದು ಬದ್ದತೆ ಇಲ್ಲ, ನೀವೆಲ್ಲ ಕಾಯಕ ಜೀವಿಗಳು. ಆದರೆ ಇತರರು ಬಾಯ್ಬಿಟ್ಟು ನೋಡುತ್ತಿರುವವರೆಲ್ಲ ಶಿಕ್ಷಕರೇ ಆಗಿರುತ್ತಾರೆ. ಆ ಜ್ಯೋತಿಷಿ ವಾಸ್ತು ಪ್ರಚಾರದಲ್ಲಿರುವಾಗ ಸಾಲ ತೆಗೆದುಕೊಂಡ ವಿದ್ಯಾರ್ಥಿಗಳನ್ನು ಕೇಳಿದರೆ ಅವರೆಲ್ಲರೂ ಕೂಡ ಡಾಕ್ಟರ್, ಇಂಜಿನೀಯರ್, ಕನಿಷ್ಠ  ಗ್ಯ್ರಾಜುಯೇಟ್‍ಗಳಾಗಿರುತ್ತಾರೆ. ಅಂದರೆ ಏನು ಅರ್ಥವಿದು? ಇದು ನಮಗೆ ಇವತ್ತಿನ ದೊಡ್ಡ ಆತಂಕವಾಗಿದೆ.

ಏಕೆಂದರೆ ನಮಗೆ ಇದ್ದದ್ದು ಒಂದೇ ದಾರಿ. ಶಿಕ್ಷಣ ಒಂದನ್ನು ಪಡೆದುಕೊಂಡುಬಿಟ್ಟರೆ ಎಲ್ಲವನ್ನು ಹೊಡೆದೋಡಿಸಬಹುದು ಎನ್ನುವುದು. ಇವತ್ತು ಆ ಶಿಕ್ಷಿತ ಜನರಿಂದ ಹೆಚ್ಚು ಮೂಢನಂಬಿಕೆಯಾಗುತ್ತಿದೆಯೇ ಹೊರತು ಶಿಕ್ಷಿತ ಜನರಾಗುತ್ತಿಲ್ಲ. ಇದಕ್ಕೇನು ಔಷಧಿ ಇದೆ? ಇದಕ್ಕೆ ಕಾರಣಗಳು ಇಲ್ಲವೆಂದು ನಾನು ಹೇಳಲಾರೆ. ಮೊದಲಿಗೆ ನಾವು ಇವತ್ತಿನ ಜನಾಂಗಕ್ಕೆ ಕೊಡುವ ಶಿಕ್ಷಣ, ಅದರಲ್ಲೂ ಕೂಡ ದೋಷವಿದೆ. ಆ ಶಿಕ್ಷಣ ವ್ಯವಸ್ಥೆಯನ್ನು ನಾವು ಸರಿಪಡಿಸುವುದಕ್ಕೆ ಆಗದೇ ಇದ್ದರೆ, ಬಹುಶಃ ಆ ಶಿಕ್ಷಣದಿಂದ ಶಿಕ್ಷಣದ ಮೂಲ ಉದ್ದೇಶ ಏನಿದೆ, ನಿಮಗೆ ಶಿಕ್ಷಣ ಸತ್ಯವನ್ನು ಹೇಳುವ ಶಕ್ತಿಯನ್ನು ಕೊಡಬೇಕು. ತರ್ಕವನ್ನು ಮಾಡುವ ಬಲವನ್ನು ಕೊಡಬೇಕು, ನಿಮ್ಮಲ್ಲಿ ವೈಚಾರಿಕತೆಯನ್ನು, ವೈಜ್ಞಾನಿಕತೆಯನ್ನು ಬೆಳೆಸಬೇಕು ಇದು ಅದರ ಉದ್ದೇಶ. ವಿದ್ಯೆಯಿಂದ ಸಂತ ನಾರಾಯಣ ಗುರುಗಳು ಕೇರಳದಲ್ಲಿ ಒಂದು ಘೋಷಣೆಯನ್ನು ನೀಡಿದರು. ವಿದ್ಯೆಯಿಂದ ಸ್ವತಂತ್ರರಾಗಿ ಎಂದು. ಅವರು ಕೇವಲ ವಿದ್ಯಾವಂತರಾಗಿ ಎಂದು ಹೇಳುವುದಿಲ್ಲ.

ಏಕೆಂದರೆ ನೀವು ವಿದ್ಯಾಭ್ಯಾಸವನ್ನು ಪಡೆದುಕೊಂಡು ಭೌತಿಕ ದಾಸ್ಯದಿಂದ ಬಿಡುಗಡೆಯಾಗಿರೆಂದು ಹೇಳುತ್ತಾರೆ. ನೀವು ವಿದ್ಯೆಯನ್ನು ಪಡೆದುಕೊಂಡು ಅದೇ ಮೂಢನಂಬಿಕೆಗಳಲ್ಲಿ ದಾಸರಾಗಿದ್ದರೆ ನೀವು ಕಲಿತ ಶಿಕ್ಷಣಕ್ಕೆ ಏನೂ ಬೆಲೆಯಿಲ್ಲದಂತಾಗುತ್ತದೆ. ಆದ್ದರಿಂದ ಇವತ್ತಿನ ಮೂಢನಂಬಿಕೆ, ಕಂದಾಚಾರಗಳ ಮೂಲ ಎಲ್ಲಿದೆ ಎಂದು ನಾವು ಗುರುತಿಸಬೇಕಿದೆ. ನಾನು ಬಹಳ ವಿವರಗಳಿಗೆ ಹೋಗಲಾರೆ. ಈ ಮೂಢನಂಬಿಕೆಗಳು, ಕಂದಾಚಾರಗಳು ಇವತ್ತು ಬೆಳೆಯುವುದಕ್ಕೆ ಮೂರು ಕಾರಣಗಳಿವೆ.

1. ರಾಜಕೀಯದಲ್ಲಿ ಮೂಢನಂಬಿಕೆ ಇದೆ. 

2. ಧರ್ಮ ಸೇರಿದೆ.

3. ವ್ಯಾಪಾರ ಸೇರಿದೆ.

ನೀವು ಧರ್ಮ ಹೇಗೆ ಸೇರಿದೆ ಎಂದು ಕೇಳಬಹುದು. ನೀವು ಒಂದು ಯಥಾಸ್ಥಿತಿವಾದಿಗಳಾಗಿದ್ದರೆ, ಇವತ್ತಿನ ಈ ಪಟ್ಟಭದ್ರ ವ್ಯವಸ್ಥೆಯನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕು ಎನ್ನುವುದು. ಅವರು ನೇರಾನೇರವಾಗಿ ನಿಮ್ಮನ್ನು ಪ್ರಶ್ನಿಸಲು ಹೋಗುವುದಿಲ್ಲ. ಉದಾಹರಣೆಗೆ ಒಂದು ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡಿದರೆ ತಡೆಯುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರಿಗೆ ಕಾನೂನಿನ ಬಲವಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಬಲವಿದೆ. ಅದರಿಂದ ಅವರಿಗೆ ತಡೆಯುವುದಕ್ಕೆ ಆಗುವುದಿಲ್ಲ. ಆದರೆ ಅದೇ ದಲಿತರಿಗೆ ನೀವು ದೇವಸ್ಥಾನದ ಒಳಗಡೆ ಹೋದರೆ ರಕ್ತಕಾರಿ ಸಾಯುತ್ತಾನೆ ಅನ್ನುವ ಒಂದು ಮೂಢನಂಬಿಕೆಯನ್ನು ಹುಟ್ಟಿಸುತ್ತಾನೆ. ಆಗ ಆ ದಲಿತ ಅಲ್ಲಿಗೆ ಹೋಗಲಾರ. ಆಗಲೆ ಯಾರೋ ಒಬ್ಬ ಹೆಣ್ಣುಮಗಳು ಹೇಳುತ್ತಿದ್ದರು. ಮಂಗಳಮುಖಿಯರಿಗೆ ಬಹಳ ದೊಡ್ಡ ಸಮಸ್ಯೆ ಎಂದು. ಹೌದು ನಾನು ಒಪ್ಪುತ್ತೇನೆ. ಆದರೆ ಏಕೆ ನೀವು ಅವರ ಬಗ್ಗೆ ಯೋಚಿಸುವುದಿಲ್ಲ. ಮಂಗಳಮುಖಿಯರು ಈಕಡೆಗೆ ಗಂಡು ಅಲ್ಲ, ಹೆಣ್ಣು ಅಲ್ಲ ನಡುವಿನಲ್ಲಿ ಅಲೆದಾಡುತ್ತಿದ್ದಾರೆ. ನೀವು ಯಾರೂ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬಂದು ಮದುವೆ ಮನೆಯಲ್ಲಿ ನಿಮಗೆ ಹತ್ತು, ಐವತ್ತು ರೂಪಾಯಿಗಳನ್ನು ಕೇಳಿದರೆ ನಿಮಗೆ ಬಹಳ ದೊಡ್ಡದು ಅನ್ನಿಸುತ್ತದೆ. ಅದೇ ಮದುವೆ ಮನೆಯಲ್ಲಿ ಬ್ರಾಹ್ಮಣನಿಗೆ ನೀವು ಲಕ್ಷಾಂತರ ರೂಪಾಯಿ ದಕ್ಷಿಣೆ ಕೊಟ್ಟು ಮದುವೆ ಮಾಡಿಸುತ್ತೀರಿ, ಆಗ ನಿಮಗೆ ಏನೂ ಅನ್ನಿಸುವುದಿಲ್ಲ. ಇದು ನಮ್ಮ ಸಮಾಜದ ವ್ಯವಸ್ಥೆ. ನಮಗೆ ಗೊತ್ತಿಲ್ಲದೆ ನಾವದರಲ್ಲಿ ಅಳವಡಿಸಿಕೊಂಡಿರುತ್ತೇವೆ. ಯಾರು ಬಂದರೂ ಕೂಡ ದಕ್ಷಿಣೆ ಕೊಡುವುದು ತಪ್ಪು. ಆದರೆ ಬಹಳ ನಯವಾಗಿ ಬಂದು ಹಣ ದೋಚಿಕೊಂಡು ಹೋದರೆ ನಿಮಗೆ ಏನೂ ಅನ್ನಿಸುವುದಿಲ್ಲ. ನೀವು ಮದುವೆಯಲ್ಲಿ ಆ ಅರ್ಚಕರು ಹೇಳುವ ಮಂತ್ರವನ್ನು ತಿಳಿದುಕೊಳ್ಳಿ.

ಭಗವಾನ್ ಅವರು ಒಂದು ಪುಸ್ತಕ ಬರೆದಿದ್ದಾರೆ. ಶಂಕರಾಚಾರ್ಯರು ಮತ್ತು ಗೂಂಡಾಗಿರಿ ಅಂತ ಮೊದಲ ಹೆಸರು. ನಂತರ ಅದನ್ನು ಶಂಕರಾಚಾರ್ಯರು ಮತ್ತು ಪ್ರತಿಗಾಮಿತನ ಅಂತ ಬದಲಾವಣೆ ಮಾಡಿದರು. ನಾನು ಅಲೆದಾಟಕ್ಕೆ ಹೊರಟಾಗ ಯಾರೋ ಒಬ್ಬರು ಈ ಪುಸ್ತಕವನ್ನು ಕೊಟ್ಟರು. ಆ ಪುಸ್ತಕದಲ್ಲಿ ಮದುವೆ ಸಂದರ್ಭದಲ್ಲಿ ಮಂತ್ರಗಳು ಏನು ಹೇಳುತ್ತವೆಂದರೆ: ನೀನು ಮದುವೆಯಾಗುವ ಹುಡುಗಿಯನ್ನು ಮೊದಲು ಇಂದ್ರನಿಗೆ ಅರ್ಪಿಸಿ, ಆತ ಭೋಗಿಸಿ ನಂತರ ನಿನಗೆ ಕೊಡುತ್ತಲಿದ್ದೇನೆ. ನಾವು ಅದನ್ನು ನಂಬಿ, ಕೈಮುಗಿದು ಆ ಮಂತ್ರವನ್ನೇ ಹೇಳುತ್ತೇವೆ. ಇವತ್ತಿಗೂ ನಡೆಯುತ್ತಲಿದೆ. ಇವತ್ತು ಯಾರಾದರೂ ಮದುವೆ ಸಮಾರಂಭಗಳಿಗೆ ಹೋದರೆ ಅಲ್ಲಿ ಅರ್ಚಕರು ಹೇಳುವ ಮಂತ್ರಗಳನ್ನು ನಾವು ಹೇಳುತ್ತೇವೆ. ಈ ಮೂಢನಂಬಿಕೆಗಳನ್ನು ಉಳಿಸಿಕೊಳ್ಳುವುದಕ್ಕೆ ಬಹಳ ದೊಡ್ಡ ಪಾತ್ರವನ್ನು ವಹಿಸಿಕೊಳ್ಳುತ್ತಿರುವುದು ಧರ್ಮ. ನೀವು ಮೂಢನಂಬಿಕೆಯನ್ನು ವಿರೋಧಿಸಿದಾಗ ಜಾತಿ ವ್ಯವಸ್ಥೆಯನ್ನು ಕೂಡ ವಿರೋಧಿಸಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಾಗ ಅದು ಕಟ್ಟಿಕೊಂಡ ದೊಡ್ಡದೊಂದು ಪಟ್ಟಭದ್ರ ವ್ಯವಸ್ಥೆ ಏನಿದೆ ಅದು ಕುಸಿದು ಬೀಳುತ್ತದೆ. ಅದಕ್ಕಾಗಿಯೇ ನಾನು ಬಹಳ ಸಂದರ್ಭದಲ್ಲಿ ಹೇಳಿದ್ದೇನೆ. ಜಾತಿಯ ಹುಣ್ಣನ್ನು ಒಳಗೆ ಬೆಳೆಯುವುದಕ್ಕೆ ಬಿಟ್ಟು ಮೇಲೆ ಮುಲಾಮನ್ನು ಹಚ್ಚುವುದಕ್ಕೆ ಹೊರಡುತ್ತಾರೆ. ಹಿಂದೂ ಧರ್ಮದ ಬಗ್ಗೆ, ಹಿಂದುತ್ವದ ಬಗ್ಗೆ ಮಾತಾಡುತ್ತಾರೆ. ಇನ್ನೂ ನಮಗೆ ಉತ್ತೇಜನೆಗೊಳಿಸುವುದಕ್ಕೆ ಮುಸಲ್ಮಾನರ ಬಗ್ಗೆ ಮಾತನಾಡುತ್ತಾರೆ. ಆಗ ನಮಗೆ ರೋಮಾಂಚನವಾಗುತ್ತದೆ. ಭಾರತದ ದೇವಸ್ಥಾನಗಳಲ್ಲಿ ಲೂಟಿ ಮಾಡುವುದು ಪಾಕಿಸ್ತಾನದವರು ದಾಳಿ ಮಾಡಿದರು. ಆಗ ನಮಗೆ ನಮ್ಮ ಅಕ್ಕಪಕ್ಕದಲ್ಲಿರುವ ಮುಸ್ಲಿಮರು ಕಾಣುತ್ತಾರೆ. ನಮ್ಮಲ್ಲಿರುವ ಹಿಂದುತ್ವ ಜಾಗೃತಗೊಳ್ಳುತ್ತದೆ. ಈ ಮೂಢನಂಬಿಕೆಗಳಿಗೆ ಬೇರೆಬೇರೆ ಮುಖಗಳಿವೆ. ಅದರಲ್ಲಿ ಧರ್ಮ ಒಂದು. ಇನ್ನೊಂದು ರಾಜಕೀಯ ಕೂಡ ಇದೆ. ಕೆಲವರು ಅದರ ಬಗ್ಗೆ ಮಾತನಾಡಿದರು. ರಾಜಕೀಯದಲ್ಲಿ ಧರ್ಮ ಹೇಗೆ ಬಳಕೆಯಾಗುತ್ತಿದೆ ಎಂದು.

ಇವತ್ತು ಡಿಸೆಂಬರ್ 6. 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿರುವುದು ಕೂಡ ಇದೇ ಧರ್ಮ ಆಧಾರಿತ ರಜಕೀಯದ ಒಂದು ಭಾಗವಾಗಿದೆ. ಮೂಲ ಎಲ್ಲಿ ಪ್ರಾರಂಭವಾಯಿತು ಎನ್ನುವುದನ್ನು ನಾವು ಹುಡುಕುವುದಕ್ಕೆ ಹೊರಟರೆ, ಬಹಳ ದೊಡ್ಡ, ವ್ಯಾಪಕವಾಗಿ ಕೋಮು ಶಕ್ತಿಗಳು ಬೆಳೆಯುವುದಕ್ಕೆ ಕಾರಣವಾಗಿದ್ದು ಡಿಸೆಂಬರ್ 6 ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಕಾಲದಲ್ಲಿ. ಅದರಿಂದ ಇವತ್ತು ಧರ್ಮವನ್ನು ಬಳಸಿಕೊಂಡು ರಾಜಕೀಯದ ಕೋಟೆಯನ್ನು ಕಟ್ಟುವುದಕ್ಕೆ ಹೊರಟಿದ್ದಾರೆ. ಅದರಲ್ಲಿ ಒಂದಷ್ಟು ಮಂದಿ ಯಶಸ್ವಿಯಾಗಿದ್ದಾರೆ. ದೇಶದ 31% ಜನ ಅದನ್ನು ಒಪ್ಪಿಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಮತಗಳ ಪ್ರಮಾಣ 31%. ಅದರ ಜೊತೆಗೆ 69% ಜನ ವಿರೋಧಿಸುವವರು ಇದ್ದಾರೆಂದು ನಾವು ತಿಳಿದುಕೊಳ್ಳಬೇಕಾಗಿದೆ. ಅದರಿಂದ ರಾಜಕೀಯದಲ್ಲೂ ಕೂಡ ಧರ್ಮದ ಬಳಕೆಯಾಗುತ್ತಲಿದೆ. ಮೂಢನಂಬಿಕೆ ಬೆಳೆಯುವುದಕ್ಕೆ ಮತ್ತೊಂದು ಕಾರಣವೇನೆಂದರೆ ಅದು ವ್ಯಾಪಾರ. ಗಿಣಿ ಶಾಸ್ತ್ರ, ಕವಡೆ ಶಾಸ್ತ್ರ ಹೇಳುವುದರಿಂದ ನಮಗೆ ಯಾವ ತೊಂದರೆಗಳೂ ಆಗುವುದಿಲ್ಲ. ಆದರೆ ಇದರಿಂದ ಸ್ವಾಮಿಗಳು, ಬಾಬಾಗಳು, ಅರ್ಚಕರು ಹುಟ್ಟಿಕೊಂಡಿದ್ದಾರೆ. ನೀವು ಬಾಬಾ ರಾಮ್ ಜಿಯಿಂದ ಹಿಡಿದು ರವಿಶಂಕರ್ ಗುರೂಜಿಯವರೆಗೆ ಬಹಳ ದೊಡ್ಡ ಸೆಲೆಬ್ರೆಟೀಸ್ ಸ್ವಾಮಿಗಳೆಲ್ಲ ಹುಟ್ಟಿಕೊಂಡಿದ್ದಾರೆ. ಇವರೆಲ್ಲರೂ ಕೂಡ ಮನುಷ್ಯನ ಮೂಲಭೂತವಾದ ದೌರ್ಬಲ್ಯಗಳು, ಅವನ ಅಸಹಾಯಕತೆ, ದುರಾಸೆ, ಅವನ ಆತಂಕಗಳನ್ನೆಲ್ಲ ಬಳಸಿಕೊಂಡು ಅವರು ತಮ್ಮ ವ್ಯಾಪಾರದ ಜಗತ್ತನ್ನು ವಿಸ್ತಾರಗೊಳಿಸಿಕೊಂಡಿದ್ದಾರೆ. ಅವರೀಗ ದೊಡ್ಡ ಬಂಡವಾಶಾಹಿಗಳಾಗಿದ್ದಾರೆ. ಅವರ ಮೂಲ ಆಧಾರ ಮನುಷ್ಯನಲ್ಲಿರುವ ಮೂಢತ್ವ. ಇದನ್ನು ಇಟ್ಟುಕೊಂಡು ಅವರು ಬೆಳೆಯುತ್ತಲಿದ್ದಾರೆ. ಇದರಿಂದ ಇವತ್ತು ಮೂಢನಂಬಿಕೆ ರಾಜಕೀಯದ ಮೂಲಕ ಬೆಳೆಯುತ್ತಲಿದೆ. ಧರ್ಮದ ಮೂಲಕ ಬೆಳೆಯುತ್ತಲಿದೆ.

ನೀವು ಧರ್ಮದ ಮೂಲಕ ಮಾತನಾಡಲು ಹೊರಟರೆ ನಾನು ಮಂಗಳೂರಿನ ಕಡೆಯಿಂದ ಬಂದವನು. ನಮ್ಮಲ್ಲಿ ಭೂತದ ಕೋಲಗಳಿವೆ. ಈ ಭೂತಗಳೆಂದರೆ ಒಂದು ಕಾಲದ ಸಾಮಾಜಿಕ ಕಾರ್ಯಕರ್ತರು ಅಂತ ನನಗೆ ಅನ್ನಿಸುತ್ತದೆ. ಸಮಾಜ ಸುಧಾರಕರೆಂದು ಅನ್ನಿಸುತ್ತದೆ. ಹೆಚ್ಚಿನ ಒಂದು ದಲಿತ ಸಮುದಾಯದಿಂದ ಬಂದವರು. ಆ ಕಾಲದ ವ್ಯವಸ್ಥೆಯನ್ನು ಪ್ರಶ್ನೆ ಮಾಡಿ, ಅದರಿಂದ ವಿರೋಧವನ್ನು ತೆಗೆದುಕೊಂಡವರು. ಹೆಚ್ಚಿನವರು ಅದರ ಮೂಲಕವೇ ಹುತಾತ್ಮರಾದವರು. ಅವರನ್ನು ನಂಬಿದ ಜನ ಪಾಡ್ದನಗಳನ್ನು ಕಟ್ಟುವರು. ಇದು ಅದರ ಮೂಲ. ಆದರೆ ಇಂದಿಗೂ ಕೂಡ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಕೋಮುವಾದದ ಹಿಂದುತ್ವದ ಪ್ರಯೋಗಶಾಲೆ ಎಂದು ಕರೆಯುತ್ತಾರೆ. ಏಕೆಂದರೆ ಅದೇ ನಂಬಿಕೆಯನ್ನು ಬಳಸಿಕೊಂಡು ಸಂಘಪರಿವಾರ ತನ್ನ ಕೋಟೆಯನ್ನು ವಿಸ್ತರಿಸುತ್ತಿದೆ. ಇವತ್ತೊಂದು ಭೂತದ ಕೋಲ ಆಗುತ್ತಿದೆ. ಅಲ್ಲಿ ಇದ್ದಕ್ಕಿದ್ದಂತೆ ಅದಕ್ಕೊಂದು ಪ್ರಾಯೋಜಕರು ಹುಟ್ಟಿಕೊಳ್ಳುತ್ತಾರೆ. ಅಲ್ಲೊಂದು ಭಗವಾಧ್ವಜ ಹುಟ್ಟಿಕೊಳ್ಳುತ್ತದೆ. ಅವರು ಪ್ರೋತ್ಸಾಹ ಮತ್ತು ಹಣ ಕೊಡುತ್ತಾರೆ. ಜನ ಅವರ ಹಿಂದೆ ಹೋಗುತ್ತಿದ್ದಾರೆ. ನಮ್ಮ ಎಲ್ಲಾ ಸಾಂಸ್ಕೃತಿಕ ವಿಚಾರಗಳೆಲ್ಲವೂ ಬಳಕೆಯಾಗುತ್ತಲಿವೆ. ಬಹಳ ಮುಖ್ಯವಾಗಿ ಸಾಂಸ್ಕೃತಿಕ ರಾಜಕಾರಣಕ್ಕೆ ಇವೆಲ್ಲವೂ ಬಳಕೆಯಾಗುತ್ತಲಿವೆ. ಈ ಸಾಂಸ್ಕೃತಿಕ ರಾಜಕಾರಣಕ್ಕೆ ಧರ್ಮ ಬಳಕೆಯಾಗುತ್ತಲಿದೆ, ಯೋಗ ಬಳಕೆಯಾಗುತ್ತಲಿದೆ. ಶಿಲ್ಪಕಲೆಗಳು ಬಳಕೆಯಾಗುತ್ತಲಿವೆ.

ನಿಮಗೆ ನೇರವಾಗಿ ಸಾಂಸ್ಕೃತಿಕ ರಾಜಕಾರಣದ ಅಪಾಯಗಳು ಕಾಣುವುದಿಲ್ಲ. ಏಕೆಂದರೆ ನಾವು ಇವತ್ತು ಚುನಾವಣಾ ರಾಜಕಾರಣದ ಬಗ್ಗೆ ಮಾತನಾಡುತ್ತೇವೆ. ಚುನಾವಣಾ ರಾಜಕಾರಣದ ಪ್ರತಿಸ್ಪರ್ಧಿ ನಿಮ್ಮ ಎದುರಿಗೆ ಕಾಣುತ್ತಾನೆ. ಆದರೆ ಸಾಂಸ್ಕೃತಿಕ ರಾಜಕಾರಣದಲ್ಲಿ ನಿಮ್ಮ ವಿರೋಧಿಗಳು, ಶತ್ರುಗಳು ನಿಮ್ಮ ಎದುರಿಗೆ ಕಾಣುವುದಿಲ್ಲ. ಅವರು ನಿಮ್ಮ ಪಕ್ಕಕ್ಕಿರುವವರು. ಸಾಂಸ್ಕೃತಿಕ ರಾಜಕಾರಣವನ್ನು ನೀವು ಚುನಾವಣೆಯ ಮೂಲಕ ಎದುರಿಸಲು ಆಗುವುದಿಲ್ಲ. ಸಾಂಸ್ಕೃತಿಕ ರಾಜಕಾರಣವನ್ನು ಎದುರಿಸಬೇಕಾದರೆ ಇಂತಹ ಸಮಾವೇಶಗಳು, ವಿಚಾರಗಳು ನಡೆಯುತ್ತಿರಬೇಕು. ಹಾಗಿದ್ದಾಗ ಮಾತ್ರ ಸಾಂಸ್ಕೃತಿಕ ರಾಜಕಾರಣವನ್ನು ಎದುರಿಸುವುದಕ್ಕೆ ಸಾಧ್ಯ. ಏಕೆಂದರೆ ಬಹಳ ಸೂಕ್ಷ್ಮವಾದುದ್ದು. ನಾನು ಪ್ರಾರಂಭದಲ್ಲಿ ಧರ್ಮದ ಬಗ್ಗೆ ಮಾತನಾಡಿದೆ. ಮೂಲತಃ ನಾವೆಲ್ಲರೂ ಧಾರ್ಮಿಕ ವ್ಯಕ್ತಿಗಳು. ರೈತರಿಗಿಂತ ದೊಡ್ಡ ಧಾರ್ಮಿಕ ವ್ಯಕ್ತಿಗಳು ಬೇರೆ ಯಾರು ಇಲ್ಲ. ಆದ್ದರಿಂದ ನಿಜವಾದ ಧರ್ಮವನ್ನು ಹೊರಗೆ ಇಟ್ಟು, ನೀವು ಜಾತ್ಯತೀತತೆಯನ್ನು ಬೆಳೆಸುವುದಕ್ಕೆ ಸಾಧ್ಯವಿಲ್ಲ ಎನ್ನುವ ಅರಿವು ಕೂಡ ನಮಗೆ ಇರಬೇಕು.

ನಾವು ರಾಮ, ಕೃಷ್ಣ, ಶಿವನಿಗೆ ಬೈಯುತ್ತಾ ಹೋದರೆ ಬಹಳಷ್ಟು ಸಂದರ್ಭದಲ್ಲಿ ನಮ್ಮನ್ನೇ ನಮ್ಮ ಮನೆಯೊಳಗೆ ಬಿಡುವುದಿಲ್ಲ. ಇದು ಕೂಡ ಸತ್ಯವೆ. ಆದರೆ ಆ ಧರ್ಮ ಯಾವುದು ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ನೀವು ವಿವೇಕಾನಂದರು, ನಾರಾಯಣ ಗುರುಗಳು, ಹೇಳಿದ ಧರ್ಮವನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮಗೇನು ತಕರಾರಿಲ್ಲ. ಆದರೆ ಮೋಹನ್ ಭಾಗವತ್ ಹೇಳಿರುವ, ಕಲ್ಲಡ್ಕ ಪ್ರಭಾಕರ್ ಭಟ್ಟರು ಹೇಳಿರುವ, ಆರ್.ಎಸ್.ಎಸ್ ನಾಯಕರುಗಳು ಹೇಳಿರುವ, ನರೇಂದ್ರ ಮೋದಿಯವರು ಪ್ರಭಾವಿಸುತ್ತಿರುವ ಹಿಂದೂ ಧರ್ಮದ ಬಗ್ಗೆ ಪತ್ರಿಯಾಗಿ ಆಕ್ಷೇಪವಿದೆ. ಆದ್ದರಿಂದ ದೇವರು ಇದ್ದಾನೆ ಎಂಬುದೊಂದು ಬಹಳ ದೊಡ್ಡ ಚರ್ಚೆ. ಅದರೊಳಗೆ ನಾವು ಹೋದರೆ, ಆ ಟ್ರ್ಯಾಕ್ನಲ್ಲಿ ನಾವು ಬೀಳುತ್ತೇವೆ. ಅದರಲ್ಲಿ ದೇವರು ಎನ್ನುವವರು ಇದ್ದಾನೆ ಎನ್ನುವುದಾದರೆ, ಬಹಳ ಮಂದಿ ಆಗಲೇ ಹೇಳಿದ ಹಾಗೆ ದೇವರು ನಮ್ಮ ಜೊತೆಯಲ್ಲಿ ಇರುತ್ತಿದ್ದನು. ಈ ಸಮಾರಂಭದ ಅಧ್ಯಕ್ಷತೆಯನ್ನು ಅವನು ವಹಿಸಿಕೊಳ್ಳುತ್ತಿದ್ದನು. ಏಕೆಂದರೆ ನಾವು ದೇವರಿಂದ ಏನನ್ನೂ ಬಯಸುವುದಿಲ್ಲ. ಒಬ್ಬ ನಾಸ್ತಿಕನಾದವನು ದೇವರಿಂದ ಏನನ್ನೂ ಬಯಸುವುದಿಲ್ಲ. ಆದರೆ ಆಸ್ತಿಕನಾಗಿ ಹೋಗಿ ಅವನು ದೇವರ ಮುಂದೆ ದೊಡ್ಡ ಬಯಕೆಗಳ ಪಟ್ಟಿಯನ್ನೇ ಇಡುತ್ತಾನೆ. ನೀವು ಸಾಮಾನ್ಯ ಮನುಷ್ಯನಾಗಿ ಯೋಚನೆ ಮಾಡಿ. ನಮ್ಮ ಬಳಿ ಬಂದ ವ್ಯಕ್ತಿ, ನಮ್ಮನ್ನು ಏನನ್ನೂ ಕೇಳದೆ, ನಮ್ಮನ್ನು ಪ್ರೀತಿಸುವವನಾಗಿದ್ದರೆ ಅವನ ಬಗ್ಗೆ ಪ್ರೀತಿ ಹುಟ್ಟುತ್ತದೆ ನಮಗೆ. ಆದರೆ ನಮ್ಮ ಬಳಿಗೆ ಬಂದು, ನಮ್ಮಲ್ಲಿ ನೂರೆಂಟು ಬೇಡಿಕೆಗಳನ್ನು ನಮ್ಮಲ್ಲಿ ಇಟ್ಟು, ನಮ್ಮನ್ನು ಪ್ರೀತಿಸಲು ತೊಡಗಿದಾಗ ಅದು ನಾಟಕೀಯವೆನ್ನಿಸುತ್ತದೆ. ಬಹಳ ಸೂಕ್ಷ್ಮವಾದುದ್ದಿದು. ಅದರಿಂದ ದೇವರು ಮತ್ತು ಧರ್ಮ ನಾವು ನೋಡುವ ನೋಟದ ಮೇಲೆ ನಿಂತಿರುತ್ತದೆ. ಅದನ್ನು ನಮ್ಮ ಸನಾತನವಾದಿಗಳು ಕಲಿಸಿಕೊಟ್ಟಂತಹ ನೋಟದಲ್ಲಿ ನೋಡಿದರೆ ಅದು ಅಂಧಶ್ರದ್ಧೆಯಾಗುತ್ತದೆ. ಅದನ್ನು ವಿವೇಕಾನಂದರು, ಬಸವಣ್ಣನವರು, ನಾರಾಯಣ ಗುರುಗಳು ನೋಡಿದ ಹಾಗೆ ನೋಡಿದರೆ ಅದು ನಮ್ಮ ಧರ್ಮ, ನಮ್ಮ ಬದುಕಿನ ಬಾಳ್ವೆಯಾಗಿರುತ್ತದೆ. ಅದೇ ಜೀವನದ ಧರ್ಮವಾಗಿರುತ್ತದೆ. ಅದರಿಂದ ನೀವು ಅದನ್ನು ಹೇಗೆ ನೋಡುತ್ತೀರಿ ಎನ್ನುವುದರ ಮೇಲೆ ನಿಂತಿರುತ್ತದೆ. ಏಕೆಂದರೆ ನಾಸ್ತಿಕರ ಸಂಖ್ಯೆ ಇಡೀ ಜಗತ್ತಿನ ಜನಸಂಖ್ಯೆಯಲ್ಲಿ ಒಂದು ಪರ್ಸೆಂಟ್ ಇದೆಯೋ? ಇಲ್ಲವೋ? ಗೊತ್ತಿಲ್ಲ. ಉಳಿದದ್ದೆಲ್ಲರೂ ನಿಜವಾದ ಆಸ್ತಿಕರು. ಆದರೆ ಎಲ್ಲರೂ ರಾಮ, ಕೃಷ್ಣ, ಶಿವನನ್ನು ನಂಬುತ್ತಾರೆಂದು ಅಲ್ಲ. ಕಾಳಮ್ಮನನ್ನು ನಂಬಬಹುದು, ಮಂಟೆಸ್ವಾಮಿಯನ್ನು ನಂಬಬಹುದು, ಕರಾವಳಿ ಭಾಗಕ್ಕೆ ಹೋದರೆ ಭೂತಯ್ಯನನ್ನು ನಂಬಬಹುದು. ಅದರಲ್ಲಿ ನಂಬಿಕೆ ಇದೆ ಅವರವರಿಗೆ. ಆದರೆ ನೀವು ರಾಮನ ಮಂದಿರ ಕಟ್ಟಬೇಕೆಂದರೆ ನಮಗೆ ಆಕ್ಷೇಪವಿದೆ. ಮಂಟೆಸ್ವಾಮಿಯ ಜಾತ್ರೆಗೆ ಹೋಗುವುದಕ್ಕೆ ನಮಗೇನು ಆಕ್ಷೇಪವಿಲ್ಲ. ಅದು ಜಾನಪದ ಸಂಸ್ಕೃತಿಯ ಭಾಗವೂ ಆಗಿದೆ. ಆದ್ದರಿಂದ ದೇವರು, ಧರ್ಮವನ್ನು ಸಂಪೂರ್ಣವಾಗಿ ಬಿಟ್ಟು, ಜಾತ್ಯತೀತತೆಯನ್ನು ಕಟ್ಟಲಿಕ್ಕಾಗದು. ಆದರೆ, ದೇವರು ಧರ್ಮವನ್ನು ಬಂಡವಾಳವಾಗಿ ಮಾಡಿಕೊಂಡು, ಧರ್ಮದ ವ್ಯಾಪಾರವನ್ನು ಮಾಡುತ್ತಿದ್ದಾರೆ. ಇವತ್ತು ಹಿಂದುತ್ವದ ಬ್ಯ್ರಾಂಡ್ ಅಂಬಾಸಿಡರ್‍ಗಳು ಯಾರೆಂದರೆ, ಇದೇ ಹಿಂದೂಗಳ ಬಾಬಾಗಳು, ಅರ್ಚಕರಾಗಿದ್ದಾರೆ. ಇದೇ ಧರ್ಮಸ್ಥಳದ ಕೆಲವರು ಈ ದಾಸಯ್ಯ, ಕುಡುಕರ ಕಾಲೋನಿಗಳಲೆಲ್ಲ ಬರುತ್ತಾರೆ. ಅವರು ಬಂದದ್ದು ಮಂಜುನಾಥಸ್ವಾಮಿಯ ವರ್ಣನೆ ಮಾಡುವುದಕ್ಕೆ. ಮಂಜುನಾಥಸ್ವಾಮಿಯ ವರ್ಣನೆ ಮಾಡುತ್ತ ನಿಮ್ಮಲ್ಲಿ ಮಂಜುನಾಥ ಸ್ವಾಮಿಯ ಭಕ್ತಿಯನ್ನು ಹುಟ್ಟಿಸುತ್ತಾರೆ. ನನಗೆ ತಿಳಿದ ಹಾಗೆ ಈ ಸ್ವಾಮಿಜಿಗಳೆಲ್ಲರು ಪಿ.ಆರ್‍ಗಳು. ಅವರಿಗೆ ಅದರಿಂದ ಸ್ವಲ್ಪ ಆದಾಯ ಸಿಗುತ್ತದೆ. ಅವರ ಮೂಲಕ ಈ ಧರ್ಮಸ್ಥಳದ ಪ್ರಚಾರದ ಆಗುತ್ತಿದೆ. ನೀವು ಈ ರಾಜ್ಯದಲ್ಲಿ ಯಾವುದೇ ಒಂದು ತಾಲೂಕಿನಿಂದಲೂ ಕೂಡ ಧರ್ಮಸ್ಥಳಕ್ಕೆ ಸರ್ಕಾರಿ ಬಸ್ ಇದೆ. ಅಂತಹ ಒಂದು ಸಂಪರ್ಕ ಜಾಲವನ್ನು ಅವರು ಮಾಡಿಕೊಂಡಿದ್ದಾರೆ.

ಬಹಳ ಸಂದರ್ಭದಲ್ಲಿ ನಾನು ಹೇಳಿದ್ದೇನೆ. ನಮ್ಮಲ್ಲಿ ಎರಡು ಬಗೆಯ ಸರ್ಕಾರಗಳಿವೆ ಎಂದು. ಒಂದು ಘೋಷಿತವಾದ ಸರ್ಕಾರ. ಇನ್ನೊಂದು ಅಘೋಷಿತವಾದ ಸರ್ಕಾರ. ಘೋಷಿತ ಸರ್ಕಾರ ನಮ್ಮ ಕಣ್ಣಿಗೆ ಕಾಣುತ್ತದೆ. ಅದರಲ್ಲಿ ಸಿದ್ಧರಾಮಯ್ಯ, ನರೇಂದ್ರ ಮೋದಿ, ಸಚಿವರುಗಳು ಕಾಣುತ್ತಾರೆ. ಆದರೆ ಇನ್ನೊಂದು ಅಘೋಷಿತವಾದ ಸರ್ಕಾರ ಇದೆ. ಅದರಲ್ಲಿ ಮಠಗಳು, ಉದ್ಯಮಗಳು ಇವೆ. ಅವು ಕಣ್ಣಿಗೆ ಕಾಣುವುದಿಲ್ಲ. ಆದರೆ ಈ ಘೋಷಿತ ಸರ್ಕಾರವನ್ನು ಈ ಅಘೋಷಿತ ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದರಿಂದ ಸರ್ಕಾರಗಳು ಬದಲಾಗಬಹುದು. ಆದರೆ ಅವರ ಹಿಡಿತ ಸಡಿಲಾಗುವುದಿಲ್ಲ. ಧರ್ಮಸ್ಥಳದವರು ಬಿ.ಜೆ.ಪಿಯವರಿದ್ದಾಗಲು ಕೆಲಸ ಮಾಡುತ್ತಾರೆ. ಕಾಂಗ್ರೆಸಿನವರಿದ್ದಾಗಲೂ ಕೆಲಸ ಮಾಡುತ್ತಾರೆ. ಆದ್ದರಿಂದ ಅವರ ಯಜಮಾನಿಕೆಗೆ ಯಾವ ಸವಾಲುಗಳು ಇರುವುದಿಲ್ಲ. ಇದಕ್ಕೆ ಕಾರಣ ಅವರು ಬೆಳೆಸಿಕೊಂಡು ಬಂದಿರುವಂತಹ ಕೆಲವು ಮೂಢನಂಬಿಕೆಗಳು. ನಮ್ಮಲ್ಲಿ ಬಹಶಃ ಈ ಕಡೆಯೂ ಇರಬೇಕು. ಕುಟುಂಬಗಳಲ್ಲಿ ಜಗಳ ಆದ ಕೂಡಲೆ, ನಿನ್ನನ್ನು ಮಂಜುನಾಥ ಸ್ವಾಮಿ ನೋಡಿಕೊಳ್ಳಲಿ ಎಂದು ಶಾಪ ಹಾಕುತ್ತಾರೆ. ಹಾಗೆ ಶಾಪ ಹಾಕಿದ ಕೂಡಲೆ ಅವರು ಅಣ್ಣತಮ್ಮಂದಿರೇ ಆಗಲಿ ಅವರಲ್ಲಿ ಪರಸ್ಪರ ಸಂಪರ್ಕ ಇರುವುದಿಲ್ಲ. ಅಂದರೆ ಒಬ್ಬರ ಮನೆಯಿಂದ ಒಬ್ಬರು ನೀರು, ಅನ್ನವನ್ನು ಕೂಡ ಮುಟ್ಟುವುದಿಲ್ಲ. ಕೊನೆಯಲ್ಲಿ ಅವರಿಗೆ ಯಾವುದೋ ಕಾರಣಕ್ಕಾಗಿ ಕಷ್ಟಗಳು ಬರುತ್ತವೆ. ಅವು ಸಾಮಾನ್ಯವಾಗಿ, ಅವರು ಅದೇ ಜೋತಿಷಿಗಳ ಮನೆಗೆ ಹೋಗುತ್ತಾರೆ. ಜೋತಿಷಿಗಳು ಹೇಳುತ್ತಾರೆ. ನೀವು ಮಂಜುನಾಥ ಸ್ವಾಮಿಯ ಮೇಲೆ ಆಣೆ ಹಾಕಿದ್ದೀರಿ. ಅದರಿಂದ ಬಿಡುಗಡೆ ಪಡೆಯದೆ, ನಿಮಗೆ ಮುಕ್ತಿ ಇರುವುದಿಲ್ಲ. ಅದನ್ನು ಹೇಳಿದ ನಂತರ ಆ ಎರಡೂ ಕುಟುಂಬಗಳು ಒಂದಾಗಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಅಲ್ಲೊಂದು ನ್ಯಾಯ ಪಂಚಾಯ್ತಿ ನಡೆಯುತ್ತದೆ. ಅದರಲ್ಲಿ ನ್ಯಾಯಾಧೀಶರು ನಡೆದಾಡುವ ಮಂಜುನಾಥ ಸ್ವಾಮಿಗಳು ಆಗಿರುತ್ತಾರೆ. ಅವರ ನ್ಯಾಯ ತೀರ್ಪು ಹೇಗೆಂದರೆ ನಿಮ್ಮದಿಬ್ಬರದ್ದೂ ತಪ್ಪಾಗಿದೆ. ಹಾಗಾಗಿ ನೀವಿಬ್ಬರೂ 500, 500 ರೂಪಾಯಿಗಳನ್ನು ಕೊಡಿ ಎನ್ನುವುದಾಗಿರುತ್ತದೆ. ಇಬ್ಬರಿಂದಲೂ ಒಂದು ಸಾವಿರ ರೂಪಾಯಿಗಳು ಅವನ ಬೊಕ್ಕಸಕ್ಕೆ ಬೀಳುತ್ತದೆ. ಅಲ್ಲಿಗೆ ನ್ಯಾಯ ಇತ್ಯರ್ಥವಾಯ್ತು. ಮನುಷ್ಯನ ಮೂಢನಂಬಿಕೆಗಳನ್ನು ಬಳಸಿಕೊಂಡು, ಯಾವ ರೀತಿ ಅವನನ್ನು ಶೋಷಣೆ ಮಾಡಲಾಗುತ್ತದೆ ಎಂಬುದನ್ನು ಇದರಲ್ಲಿ ಕಾಣಬಹುದು. ಇದು ದೇವರಲ್ಲಿ ಅಲ್ಲ. ನಮ್ಮಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಮೂಲವಾಗಿ ಭಯವಿರುತ್ತದೆ.

ಆಗಲೆ ಒಬ್ಬರು ಹೇಳಿದರು. ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಿ ಎಂದು. ಆ ಭಯದ ನಿವಾರಣೆ ಹೇಗೆಂದರೆ, ಅದಕ್ಕೊಂದು ವೈಚಾರಿಕವಾದ ನಿಲುವು ಇರಬೇಕು. ಅದಕ್ಕೆ ನಾನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ. ಭಾರತದಲ್ಲಿ ಶೇಕಡಾ 65ರಷ್ಟು ಜನಸಂಖ್ಯೆ 35 ವರ್ಷದ ಒಳಗಿರುವ ಯುವ ಸಮುದಾಯವು ಭಾರತದ ಇವತ್ತಿನ ಸಮಾಜದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಅವರನ್ನು ಓದಬೇಕು, ಲೋಹಿಯಾ ಅವರನ್ನು ಓದಬೇಕು. ಕರ್ನಾಟಕದ ಮಟ್ಟಕ್ಕೆ ತಿಳಿದುಕೊಳ್ಳಬೇಕಾದರೆ ಬಸವಣ್ಣನವರನ್ನು ಓದಬೇಕು. ಹಾಗೆಯೇ ಪೆರಿಯಾರ್, ನಾರಾಯಣ ಗುರು ಅವರನ್ನು ಓದಬೇಕು. ಅವರನ್ನು ಓದಿದಾಗ ಮಾತ್ರ ಸಮಾಜದ ಈ ಎಲ್ಲ ನ್ಯೂನ್ಯತೆಗಳು, ಮೂಢನಂಬಿಕೆಗಳು, ನಮ್ಮ ವಿರುದ್ಧವೇ ವ್ಯವಸ್ಥಿತ ಸಂಚುಗಳೆಲ್ಲವು ಅರ್ಥವಾದಲ್ಲಿ ಮಾತ್ರ ನಾವು ಯಾವ ಚಕ್ರದಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದೇವೆಂದು ಅರ್ಥವಾಗುತ್ತದೆ. ಅವು ಅರ್ಥವಾಗಬೇಕಾದರೆ ಇಂತಹ ಜ್ಞಾನಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗುತ್ತದೆ. ಇವತ್ತು ಇದರಿಂದ ಏನಾಗುತ್ತದೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ಮಂದಿ ಇದ್ದಕ್ಕಿದ್ದ ಹಾಗೆ ಒಂದು ರೀತಿಯ ವಿಸ್ಮೃತಿಗೆ ಒಳಗಾಗಿ ಬಿಟ್ಟರು. ಎಂತಹ ವಿಸ್ಮೃತಿ ಎಂದರೆ, ಏನೋ ಒಳ್ಳೆಯದಾಗುತ್ತದೆ. ಈ ದೇಶಕ್ಕೆ ಎಂದು. ಅದಕ್ಕೆ ಆಧಾರಗಳೇ ಇರಲಿಲ್ಲ.

ಏಕೆಂದರೆ, 20% ಮತಗಳು ಭಾರತೀಯ ಜನತಾ ಪಕ್ಷದ್ದು. ಸ್ವಲ್ಪ ಯೋಚನೆ ಮಾಡಿ ನೋಡುವುದಾದರೆ ಅದರಲ್ಲಿ 11% ಮತಗಳು ಹೊಸ ಮತದಾರರಾದ ಯುವ ಸಮುದಾಯದಿಂದ ಬಂದಿರುವಂತವು. ಇವತ್ತಿನ ಯುವ ಸಮುದಾಯದ ಸಮಸ್ಯೆ ಏನೆಂದರೆ, ಇವರಿಗೆ ಇತಿಹಾಸದ ಬಗೆಗೆ ತಿಳಿದಿರುವುದಿಲ್ಲ. ನಾನು ಗುಜರಾತಿನ ಗಲಭೆಯನ್ನು ಒಬ್ಬ ವರದಿಗಾರನಾಗಿ ವರದಿ ಮಾಡುತ್ತ ಹೋಗಿದ್ದೇನೆ, ಒಂದೆರಡು ಚುನಾವಣೆಗಳ ವರದಿಗಾಗಿ ಹೋಗಿದ್ದೆ. ನನಗೆ ಗೊತ್ತಿದೆ ಈ ಮನುಷ್ಯ ಅಧಿಕಾರಕ್ಕೆ ಬಂದರೆ ಏನು ಮಾಡಬಹುದೆಂದು. ಆದರೆ ಬಹಳ ಮಂದಿಗೆ ಇದು ಗೊತ್ತಾಗುವುದಿಲ್ಲ. ಈ ಮ್ಯಾಜಿಕ್ ಮಾಡುವವರು ಹೇಗೆ ಇರುತ್ತಾರೆಂದರೆ, ಇದೊಂದು ರೀತಿಯ ಮೂಢನಂಬಿಕೆ. ಒಂದು ವೇದಿಕೆಯಲ್ಲಿ ಒಂದು ಬಸ್ ಇರುತ್ತದೆ. ಅದರ ಮೇಲೊಂದು ಬಟ್ಟೆ ಹಾಕಿರುತ್ತಾರೆ. ನೀವು ನೋಡುತ್ತಿದ್ದಂತೆ ಅಲ್ಲಿ ಆ ಬಸ್ ಇರುವುದಿಲ್ಲ. ಇದು ನಮಗೆ ಗೊತ್ತಿರುತ್ತದೆ. ಅವನು ನಮಗೆ ಮೋಸ ಮಾಡಿದ್ದಾನೆಂದು. ಆದರೆ ಅದನ್ನು ನಮಗೆ ಹೇಳುವುದಕ್ಕೆ ಆಗುವುದಿಲ್ಲ. ಅದನ್ನು ಸಾಧಿಸಿ ತೋರಿಸುವುದಕ್ಕೆ ಆಗುವುದಿಲ್ಲ. ಇಂತಹ ಒಂದು ವಿಸ್ಮೃತಿಗೆ ನಾವೆಲ್ಲರೂ ಒಳಗಾಗಿ ಬಿಡುತ್ತೇವೆ. ಏನೋ ಆಗುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಭ್ರಮೆಯಲ್ಲಿ ಇರುತ್ತೇವೆ. ಆದರೆ ಇತಿಹಾಸದ ಅರಿವು ಇರುವುದಿಲ್ಲ. ಅದರಿಂದಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹಳ ಚನ್ನಾಗಿ ಹೇಳಿದ್ದಾರೆ. ಇತಿಹಾಸವನ್ನು ಓದದವರು ಇತಿಹಾಸ ಸೃಷ್ಟಿಸಲಾಗುವುದಿಲ್ಲ. ಆದ್ದರಿಂದಲೇ ನಾವು ಆ ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ.  ಈ ಜನ ಸಮೂಹವನ್ನು ನೋಡುತ್ತಿದ್ದರೆ ನನಗೆ ಇನ್ನೂ ಒಂದು ಆಶ್ಚರ್ಯವೆನ್ನಿಸುತ್ತಿದೆ. ಆಗಿನ ಸರ್ಕಾರ ಹೇಳಿದ್ದು, ನೋಟುಗಳ ರದ್ಧತಿಯ ನಂತರ ರಾಜಕೀಯ ಕಾರ್ಯಕ್ರಮಗಳಲ್ಲಿ ಜನರನ್ನು ಸೇರಿಸುವುದು ಬಹಳ ಕಷ್ಟವಿದೆ ಎಂದು. ಅದರಿಂದ ಇದು ಸೆಟಲ್ ಆಗುವವರೆಗೂ ಯಾವ ರೀತಿಯ ಸಭೆಗಳನ್ನು ನಡೆಸಬೇಡಿ ಎಂದು. ಏಕೆಂದರೆ ಅಂತಹ ರಾಜಕೀಯ ಸಭೆಗಳಿಗೆ ಸಾಮಾನ್ಯವಾಗಿ ಜನರನ್ನು ದುಡ್ಡು ಕೊಟ್ಟು ಕರೆದುಕೊಂಡು ಬರುತ್ತಾರೆ. ಇವತ್ತು ಅವರಿಗೆ ಕೊಡುವುದಕ್ಕೆ ಚಿಲ್ಲರೆ ದುಡ್ಡು ಇರುವುದಿಲ್ಲ. ಇದು ಇವತ್ತು ಇಲ್ಲಿ ಸೇರಿರುವ ಜನ ಸಮೂಹವನ್ನು ನೋಡಿದರೆ, ನೀವು ನಿಮ್ಮ ಸ್ವಇಚ್ಛೆಯಿಂದ ಇಲ್ಲಿ ಸೇರಿದ್ದೀರೆಂದು ತೋರುತ್ತಿದೆ. ಇದು ಬಹಳ ಮುಖ್ಯವಾಗಿ ಆಗಬೇಕಿರುವುದು. ಒಂದು ವಿಚಾರವನ್ನು ಒಪ್ಪಿಕೊಂಡು, ಸತೀಶ್ ಜಾರಕಿಹೊಳಿಯವರು ಮಾಡಿದ ಕಾರ್ಯಕ್ರಮ ಒಂದು ಉದ್ದೇಶದ ಈಡೇರಿಕೆಗಾಗಿ ನೀವಿಲ್ಲಿ ಸೇರಿದ್ದೀರಿ ಎನ್ನುವುದಾರೇ ಆ ಉದ್ದೇಶಕ್ಕೆ ನಿಮ್ಮ ಸಹಮತ ಇದೆ ಎಂದು ಅನ್ನಿಸುತ್ತದೆ. ಇದರಿಂದ ಇಲ್ಲಿ ಮಾತನಾಡಿರುವುದನ್ನು ನೀವು ತೆಗೆದುಕೊಂಡು ಮನೆಗೆ ಹೋಗುತ್ತೀರಿ. ನಾನು ಎಲ್ಲವನ್ನೂ ನೀವು ಅರಗಿಸಿಕೊಂಡಿದ್ದೀರಿ, ಎಲ್ಲವನ್ನೂ ನೀವು ಜಾರಿಗೆ ತರುತ್ತೀರಿ ಎಂದು ಹೇಳುವುದಕ್ಕೆ ಹೋಗುವುದಿಲ್ಲ. ಒಮ್ಮೆಲೆ ಎಲ್ಲವನ್ನೂ ನಿಮ್ಮ ಮೆದುಳಿಗೆ ತುಂಬಿದರೆ ನಿಮಗೆ ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಬಹುದು. ಏಕೆಂದರೆ ಬಹಳ ಪ್ರಮುಖವಾಗಿ ಈ ಅಂಧಶ್ರದ್ಧೆಗಳು ಹೇಗಿರುತ್ತವೆಂದರೆ, ನೀವು ನಿಮ್ಮ ಅಂಗಾಂಗಗಳಲ್ಲಿ ಏನೇನಿವೆ ಎಂದು ನಿಧಾನವಾಗಿ ತಿಳಿದುಕೊಳ್ಳುತ್ತಾ ಹೋದ ಹಾಗೆ, ನೀವು ಮೂಢನಂಬಿಕೆಯಿಂದ ಹೊರಗೆ ಬರಬಹುದು. ಆದರೆ, ಇದಕ್ಕೆಲ್ಲದಕ್ಕಿಂತಲೂ ಮೊದಲು ಮಾಡಬೇಕಿರುವ ಕೆಲಸ, ನೀವು ದೇವರನ್ನು ನಂಬುವುದು ಬಿಡುವುದು ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ. ಆದರೆ ದೇವರು ಮತ್ತು ನಿಮ್ಮ ನಡುವೆ ಇರುವ ಏಜಂಟರು, ಅರ್ಚಕರಿರುತ್ತಾರೆ, ಅವರನ್ನು ಮೊದಲು ಬಹಿಷ್ಕರಿಸಿ. ಅವರ ಅಗತ್ಯವಿಲ್ಲ. ಅವರಿಂದ ನೀವು ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳನ್ನು ಮಾಡುವಾಗ ದಯವಿಟ್ಟು ಅಂತಹ ಅರ್ಚಕರನ್ನು ಕರೆಯಬೇಡಿ. ಏಕೆಂದರೆ ಹಿಂದೂಗಳ ಶೋಷಣೆ ಅದು ಈ ಹಿಂದೂಗಳೇ ಮಾಡುತ್ತಾರೆ. ಆದರೆ ಇವತ್ತು ಹಿಂದುತ್ವದ ಬಗ್ಗೆ ಮಾತನಾಡುವವರು ಹಿಂದುತ್ವದ ಬಹಳ ದೊಡ್ಡ ಶತ್ರು ಮುಸ್ಲಿಮರೆಂದು ತೋರಿಸಿಕೊಡುತ್ತಾರೆ. ನಮ್ಮ ಪ್ರಕಾರ ಅವರಲ್ಲ. ನಮ್ಮ ಹಿಂದೂಗಳ ಶೋಷಣೆಯನ್ನು ಹಿಂದೂಗಳೇ ಮಾಡುತ್ತಾರೆ. ಈ ರೀತಿಯಾಗಿ ಅರ್ಚಕರ ಹೆಸರಲ್ಲಿ ಏಜಂಟರು ಹುಟ್ಟುತ್ತಾರೆ. ಹಾಗಾಗಿ ಮೊದಲು ಈ ರೀತಿಯ ಅರ್ಚಕರನ್ನು ಕರೆಸುವುದನ್ನು, ಜೋತಿಷಿಗಳನ್ನು ಮೊದಲು ಬಹಿಷ್ಕರಿಸಿ. ನಿಮಗೆ ಕಂಡಂತಹ ನಿಜವಾದ ಧರ್ಮವನ್ನು ನೀವು ಆಚರಿಸಿಕೊಳ್ಳುತ್ತಾ ಹೋಗಿ. ಇಂತಹ ಸಮಾರಂಭಗಳ ಮೂಲಕ, ಇದು ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲದೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಆಗ ಬಹುಶಃ ಮೂಢನಂಬಿಕೆಯ ನಿಜವಾದ ಪರಿವರ್ತನೆಯ ದಿನವಾಗಲು ಸಾಧ್ಯವಾಗುತ್ತದೆ.

ನನಗೆ ಆಗಲೆ ಒಬ್ಬರು ಟಿವಿಯವರು ಕೇಳುತ್ತಿದ್ದರು. ರಾಜ್ಯ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಏಕೆ ಜಾರಿಗೆ ತರುತ್ತಿಲ್ಲವೆಂದು. ನಾನು ಬಹಳ ಸಂದರ್ಭದಲ್ಲಿ ಹೇಳಿದ್ದೇನೆ. ಸರ್ಕಾರದ ಒಳಗಡೆ ಇದಕ್ಕೆ ಸಾಮರ್ಥ್ಯ ಇದೆ ಎಂದು ಹೇಳಿದರೆ ಅದು ನಾನು ಸುಳ್ಳು ಹೇಳಿದಂತಾಗುತ್ತದೆ. ಆದರೆ ಮುಖ್ಯಮಂತ್ರಿಗಳಲ್ಲಿ ಈ ಸಾಮರ್ಥ್ಯವಿದೆ, ಅವರನ್ನು ಬಿಟ್ಟರೆ ಸತೀಶ್ ಜಾರಕಿಹೊಳಿಯವರಿಗೆ ಸಾಮರ್ಥ್ಯವಿದೆ. ಅದು ಬಿಟ್ಟರೆ ಬೆರಳೆಣಿಕೆಯಲ್ಲಿ ಇನ್ನು ಮೂರು-ನಾಲ್ಕು ಜನ ಸಚಿವರ ಸಾಮರ್ಥ್ಯವಿರಬಹುದು. ಆದರೆ ಉಳಿದೆಲ್ಲ ಸಚಿವರ ಸಾಮರ್ಥ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ.

ಅದೇ ರೀತಿ ನಮ್ಮ ಬಹಳಷ್ಟು ಅಧಿಕಾರಿಗಳಿಗಿಂತ ಮೂಢನಂಬಿಕೆಗಳು ಯಾರೂ ಇಲ್ಲ. ನೀವು ಅವರ ಕಛೇರಿಗಳಿಗೆ ಹೋದಾಗ ಅವರ ಡ್ರಾಗಳಲ್ಲಿ ದೇವರ ಫೋಟೋಗಳಿರುತ್ತವೆ, ಅಲ್ಲಿ ಕುಂಕುಮ ಅರಿಶಿಣ ಇರುತ್ತದೆ. ಹೊರಗಡೆ ವಿರೋಧಿಗಳು ಹೇಗೋ ಇರುತ್ತಾರೆ. ಆದರೆ ಒಳಗಡೆಯೇ ಇಂತಹ ವಿರೋಧಿಗಳು ತುಂಬಿದಾಗ ಇಂತಹ ಕಾಯ್ದೆ, ಮಸೂದೆಗಳನ್ನು ತರುವುದು ಬಹಳ ಕಷ್ಟದ ಕೆಲಸ. ಯಾವಾಗಲೂ ಒಂದು ಸರ್ಕಾರ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಅದು ಸಾರ್ವಜನಿಕರಿಂದ ಒತ್ತಡ ನಿರ್ಮಾಣವಾಗಬೇಕು.

ಇವತ್ತು ಬೆಳಗಾವಿಯಲ್ಲಿ ಇಂತಹ ಸಾರ್ವಜನಿಕರ ಒತ್ತಡ ನಿರ್ಮಾಣವಾದಂತೆ, ಅದು ಎಲ್ಲಾ ಜಿಲ್ಲೆಗಳಲ್ಲಿಯೂ ಆಗಬೇಕಿದೆ. ಆಗ ಮಾತ್ರ ಎಲ್ಲ ಪ್ರತಿನಿಧಿಗಳು ಜನರ ಒತ್ತಡಕ್ಕೆ ಮಣಿದು ಬೆಂಬಲ ನೀಡುತ್ತಾರೆ. ಆಗ ಸರ್ಕಾರಕ್ಕೆ ಒಂದು ಅಭಿಪ್ರಾಯವನ್ನು ರೂಪಿಸಲು ಸಾಧ್ಯವಾಗುತ್ತದೆ. ನಂತರ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ತರುತ್ತದೆ. ಅದಕ್ಕೆ ಈ ರೀತಿಯ ಮೂಢನಂಬಿಕೆ ವಿರುದ್ಧದ ಕಾರ್ಯಕ್ರಮಗಳು ಎಲ್ಲಾ ಜಿಲ್ಲೆಗಳಲ್ಲಿ ನಡೆಯಬೇಕು. ಸತೀಶ್ ಜಾರಕಿಹೊಳಿಯಂತವರ ಮಾರ್ಗದರ್ಶನದಲ್ಲಿ ಅದು ನಡೆಯಲಿ ಎಂದು ನನ್ನ ಮಾತುಗಳನ್ನು ಮುಗಿಸುತ್ತೇನೆ.

– ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು