April 20, 2026 9:44 pm

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.

ಪ್ರಾಚೀನ ಭಾರತದಲ್ಲಿ ಒಂದು ರೀತಿಯ ವ್ಯವಸ್ಥಿತವಾದ ನ್ಯಾಯ ವಿತರಣಾ ಪದ್ಧತಿ ಇತ್ತು. 1) ರಾಜನೇ ಸ್ವತಃ ವ್ಯಾಜ್ಯಗಳನ್ನು ತೀರ್ಮಾನ ಮಾಡುವ ಶಿಷ್ಟ ನ್ಯಾಯಾಲಯಗಳು, 2) ರಾಜನ ಪರವಾಗಿ ರಾಜಮುದ್ರಿಕೆಯನ್ನು ಬಳಸಿ ವ್ಯಾಜ್ಯಗಳನ್ನು ತೀರ್ಮಾನ ಮಾಡುವ-ಮುದ್ರಿಕ ನ್ಯಾಯಾಲಯಗಳು 3) ಒಂದು ನಿರ್ದಿಷ್ಟ ಸ್ಥಳದಲ್ಲಿ ವ್ಯಾಜ್ಯಗಳನ್ನು ತೀರ್ಮಾನ ಮಾಡುವ ಪ್ರಶಿಷ್ಟ ನ್ಯಾಯಾಲಯಗಳು ಮತ್ತು 4) ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವ ಅಪ್ರಶಷ್ಟ ನ್ಯಾಯಲಯಗಳು. ಮೇಲ್ಮಟ್ಟದಲ್ಲಿ ಈ ರೀತಿಯ ನ್ಯಾಯ ವಿತರಣೆಯು ಜಾತಿ ಶ್ರೇಣಿಯನ್ನು, ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಆಧರಿಸಿದ ನ್ಯಾಯ ವಿತರಣಾ ಪದ್ಧತಿಯಾಗಿತ್ತು.

ಕೆಳಹಂತದಲ್ಲಿ ಗ್ರಾಮ ಪಂಚಾಯತ್‌ಗಳು ಮತ್ತು ಕುಲ ಪಂಚಾಯಿತಿಗಳು ವ್ಯಾಜ್ಯಗಳನ್ನು ತೀರ್ಮಾನ ಮಾಡುತ್ತಿದ್ದರು. ಈ ವ್ಯವಸ್ಥೆಯಲ್ಲಿ ಅನುಭವ, ವಾಸ್ತವಾಂಶ ಮತ್ತು ಸಮುದಾಯದ ಹಿತದ ಹಿನ್ನೆಲೆಯಲ್ಲಿ ವ್ಯಾಜ್ಯಗಳನ್ನು ಇತ್ಯರ್ಥ ಮಾಡುತ್ತಿದ್ದರು. ಈ ಪದ್ಧತಿ ಇನ್ನೂ ಅನೇಕ ಹಳ್ಳಿಗಳಲ್ಲಿ ಜೀವಂತವಾಗಿದೆ.

ಮುಸಲ್ಮಾನರ ಆಳ್ವಿಕೆಯಲ್ಲಿ ಖಾಜಿ ನ್ಯಾಯಾಲಯಗಳು, ಸುಬೇದಾರ್ ನ್ಯಾಯಾಲಯಗಳು, ರಾಜರ ಪ್ರತಿನಿಧಿಗಳ ನ್ಯಾಯಾಲಯಗಳು ಮತ್ತು ರಾಜ / ಚಕ್ರವರ್ತಿ ನ್ಯಾಯಾಲಯಗಳನ್ನು ಜಾರಿಗೆತಂದರು.

ಅದೇ ರೀತಿ ಬ್ರಿಟಿಷರು ಆಡಳಿತದಲ್ಲಿ ಭಾರತ ದೇಶದಲ್ಲಿ ಇಂಗ್ಲೆಂಡಿನ ಮಾದರಿಯ ನ್ಯಾಯಾಲಯಗಳನ್ನು ಸ್ಥಾಪಿಸಿದರು. ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ಬ್ರಿಟಿಷ್ ಮಾದರಿಯ ನ್ಯಾಯವಿತರಣ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ.

ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ಥಾಪನೆಗೆ ಅನುವು ಮಾಡಿಕೊಡಲಾಗಿದೆ. ನಮ್ಮ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಒಂದು ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಗಣರಾಜ್ಯ ಭಾರತದಲ್ಲಿ ಒಂದು ಬಲಿಷ್ಠವಾದ ನ್ಯಾಯಾಂಗ ಸಂಸ್ಥೆಯನ್ನು ಕಟ್ಟಿದ್ದೇವೆ. ನ್ಯಾಯಾಲಯಗಳ ಶ್ರೇಣೀಕರಣವೆಂದರೆ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು, ತಾಲ್ಲೂಕು ನ್ಯಾಯಾಲಯಗಳು ಮತ್ತು ಲಘು ವ್ಯಾಜ್ಯಗಳ ನ್ಯಾಯಾಲಯಗಳು.

ಇವುಗಳ ಜೊತೆಗೆ ಕುಟುಂಬ ನ್ಯಾಯಾಲಯಗಳು, ಬಾಲ ನ್ಯಾಯಮಂಡಳಿ, ಗ್ರಾಹಕ ಆಯೋಗಗಳು, ಮಾಹಿತಿ ಆಯೋಗ, ಕಾರ್ಮಿಕ ನ್ಯಾಯಾಲಯಗಳು, ಮೇಲ್ಮನವಿ ನ್ಯಾಯಾಧೀಕರಣ, ಆಡಳಿತ ನ್ಯಾಯಮಂಡಳಿ, ಮಾನವ ಹಕ್ಕುಗಳ ಆಯೋಗ, ಲೋಕಪಾಲ್ ಮತ್ತು ಲೋಕಾಯುಕ್ತಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಮಧ್ಯಸ್ಥಿಕೆ ಕೇಂದ್ರಗಳು, ವರಮಾನ ತೆರಿಗೆ ನ್ಯಾಯಮಂಡಳಿಗಳು, ಕಂಪನಿ ನ್ಯಾಯಮಂಡಳಿಗಳು ಇತ್ಯಾದಿಯಾಗಿ ಸಂಸ್ಥೆಗಳು ಕೂಡ ನ್ಯಾಯವಿತರಣೆ ಕಾರ್ಯದಲ್ಲಿ ತೊಡಗಿವೆ. ಇಂದು ನ್ಯಾಯಾಂಗವೆಂಬ ಬಹುದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಲಾಗಿದೆ.

ಸಾಧನೆಗಳು:ಪ್ರತಿ ವರ್ಷ ಸರಿಸುಮಾರು ಮೂರು ಕೋಟಿಯಷ್ಟು ಪ್ರಕರಣಗಳನ್ನು ನಮ್ಮ ದೇಶದ ನ್ಯಾಯಾಲಯಗಳು, ನ್ಯಾಯಮಂಡಳಿಗಳು, ಆಯೋಗಗಳು ಇತ್ಯಾದಿಗಳು ತೀರ್ಮಾನ ಮಾಡುತ್ತಿವೆ. ಜಗತ್ತಿನ ಇತರೆ ಯಾವುದೇ ದೇಶದ ನ್ಯಾಯಾಂಗವು ಇಷ್ಟೊಂದು ದೊಡ್ಡ ಪ್ರಮಾಣದ ವ್ಯಾಜ್ಯಗಳನ್ನು ಇತ್ಯರ್ಥ ಮಾಡುತ್ತಿಲ್ಲ. ಸಂವಿಧಾನವನ್ನು ಉಳಿಸಿದೆ, ಮೂಲತತ್ವಗಳಾದ ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಎತ್ತಿಹಿಡಿದಿದೆ. ಮಾನವ ಹಕ್ಕುಗಳನ್ನು ಮತ್ತು ಸಂವಿಧಾನದ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿದೆ. ಕಾಮನ್ ಲಾ ಜೂರಿಸ್ ಪ್ರೊಡೆನ್ಸ್‌ಗೆ ಮಹತ್ತರ ಕೊಡುಗೆಯನ್ನು ನೀಡಿದೆ. ನಮ್ಮದೇ ದೇಶೀಯ ಜೂರಿಸ್ ಪ್ರೊಡೆನ್ಸ್ ಕಟ್ಟಿ ಬೆಳೆಸಿದೆ.

ನ್ಯಾಯಾಲಯಗಳು ಎಲ್ಲಾ ತಾಂತ್ರಿಕ ನಿಯಮಗಳನ್ನು ಬದಿಗೊತ್ತಿ ನ್ಯಾಯಾಂಗ ಕ್ರಿಯಾಶೀಲತೆ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಗಳ ಹೊಸ ಪರ್ವವನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಅನೇಕ ಹಗರಣಗಳು ಬೆಳಕಿಗೆ ಬಂದವು. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರು ಮಾಡಿದ್ದ ಭ್ರಷ್ಟಾಚಾರ, ಅವ್ಯವಹಾರ ಮತ್ತು ಅತಿರೇಕಗಳ ಬಗ್ಗೆ ದೇಶದ ಜನರಿಗೆ ವಿವರಣೆ ನೀಡುವಂತೆ ಮಾಡಿತು. ಕೆಲವರನ್ನು ಜೈಲಿಗೆ ಕಳುಹಿಸಿತು.

ವನ್ಯಜೀವಿ ಮತ್ತು ಪರಿಸರ ರಕ್ಷಿಸುವಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಗಣನೀಯ ಪಾತ್ರವಹಿಸಿದೆ. ಬಡತನ, ಅನಕ್ಷರತೆ, ಅಜ್ಞಾನ ಹಾಗೂ ಸಾಮಾಜಿಕ ಹಿಂದುಳಿರುವಿಕೆ ಕಾರಣಗಳಿಂದ ಬಡ ಹಾಗೂ ಶೋಷಿತ ವರ್ಗಕ್ಕೆ ಮುಚ್ಚಿಕೊಂಡಿದ್ದ ನ್ಯಾಯಾಂಗದ ಬಾಗಿಲು ಈಗ ಮುಕ್ತವಾಗಿ ತೆರೆದಿದೆ.

ಶಾಸಕಾಂಗ ರಚಿಸಿರುವ ಶಾಸನಗಳನ್ನು ಜನಪರವಾಗಿ ವ್ಯಾಖ್ಯಾನ ಮಾಡಿದೆ. ಶಾಸನಗಳು ಸಂವಿಧಾನಕ್ಕೆ ವಿರುದ್ಧವಾಗಿ ಕಂಡುಬಂದರೆ ಅವುಗಳನ್ನು ಅಸಿಂಧು ಎಂದು ರದ್ದುಗೊಳಿಸಿದೆ. ಕಾರ್ಯಾಂಗದ ಆದೇಶಗಳು ಸಂವಿಧಾನಕ್ಕೆ, ಕಾಯ್ದೆಗಳಿಗೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ಕಂಡುಬಂದಲ್ಲಿ ರದ್ದುಗೊಳಿಸಿದೆ. ಅಧಿಕಾರಶಾಹಿಯ ಕಾನೂನಾತ್ಮಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾದಾಗ ಸೂಕ್ತ ಆದೇಶಗಳನ್ನು ನೀಡಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ತಾಕೀತು ಮಾಡಿದೆ.

ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವ ನ್ಯಾಯಾಂಗ ತಪ್ಪು ಸಹ ಮಾಡಿದೆ. ಇಂದು ಸಹ ತಪ್ಪು ಮಾಡುತ್ತಿದೆ. ಇನ್ನು ಮುಂದಕ್ಕೆ ತಪ್ಪು ಮಾಡುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಆದರೆ ಮಾಡಿದ ತಪ್ಪುಗಳು ಅರಿವಾದಾಗ ಸರಿ ತಿದ್ದಿಕೊಂಡು ಮುಂದುವರೆಯುವ ವಿವೇಚನೆಯನ್ನು ಪ್ರದರ್ಶಿಸಿದೆ.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]