ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

ಕನ್ನಡದ ಸಂವೇದನೆಯನ್ನು ಪತ್ರಕರ್ತರಾಗಿ, ಅನುವಾದಕರಾಗಿ, ಕತೆಗಾರರಾಗಿ ವಿಸ್ತರಿಸುವ ಕೆಲಸವನ್ನು ಎನ್.ಎಸ್.ಶಂಕರ್ ನಿರ್ವಹಿಸಿದ್ದಾರೆ. ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ಇವರು, ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಉಲ್ಟಾ ಪಲ್ಟಾ, ಜೂಜಾಟ, ರಾಂಗ್ ನಂಬರ್ ಇವರ ನಿರ್ದೇಶನದ ಚಿತ್ರಗಳಾಗಿವೆ. ‘ಈಗ’ ಅವರ ಇತ್ತೀಚಿನ ನಿರ್ದೇಶನದ ಚಿತ್ರವಾಗಿದ್ದು ತೆರೆಕಾಣಬೇಕಿದೆ. ಪ್ರಜಾವಾಣಿ, ಲಂಕೇಶ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿರುವ ಇವರು, ಅಂಬೇಡ್ಕರ್, ಗಾಂಧಿ ಕುರಿತ ಕೃತಿಗಳನ್ನು ನೀಡಿದ್ದಾರೆ. ರೂಢಿ ಮತ್ತು ಇತರ ಕತೆಗಳು (ಕಥಾ ಸಂಕಲನ), ಫೂಲನ್ ದೇವಿ (ಆತ್ಮ ಚರಿತ್ರೆ), ಮೇಲೋಗರ, ಸಮಕಾಲೀನ (ವಿಮರ್ಶಾ ಸಂಕಲನಗಳು) ಪ್ರಕಟವಾಗಿವೆ. ‘ಚಿತ್ರಕತೆ ಹಾಗಂದರೇನು?’ ಇವರ ಮತ್ತೊಂದು ಕೃತಿ.

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ ಸಿಗಲೆಂದು ನಾನು ‘ರಾಮ-ಕೃಷ್ಣ’ ಅನುವಾದಿಸಿದ್ದೆ. ಆಗ ಅದು ಸುದ್ದಿ ಸಂಗಾತಿ ಬಳಗದಿಂದ ಪ್ರಕಟವಾಗಿತ್ತು. ಮುದ್ರಿಸಿದ್ದ ಎರಡು ಸಾವಿರ ಪ್ರತಿಗಳು ಅನತಿ ಕಾಲದಲ್ಲೇ ಖರ್ಚಾಗಿದ್ದರೂ, ಈ ಮೂವತ್ತು ವರ್ಷಗಳು ಮರುಮುದ್ರಣವಾಗಿರಲೇ ಇಲ್ಲ. ಇದೀಗ ಲಡಾಯಿ ಪ್ರಕಾಶನದ ಗೆಳೆಯ ಬಸೂ ಮತ್ತೆ ಪ್ರಕಟಿಸಿದ್ದಾರೆ. ಈ ಹೊಸ ಮುದ್ರಣಕ್ಕೆ ನಾನು ಬರೆದ ಪ್ರಸ್ತಾವನೆಯ ಒಂದು ಭಾಗವನ್ನು ಇಲ್ಲಿ ಹಾಕುತ್ತಿದ್ದೇನೆ:

ಪ್ರಸಕ್ತ ರಾಮ-ಕೃಷ್ಣ (ಹಾಗೂ ಹಿಂದೂ ಧರ್ಮದ ಒಗಟುಗಳು ಎಂಬ ಇಡೀ ಸಂಪುಟ) ಅಂಬೇಡ್ಕರರ ಅನೇಕ ಬರಹಗಳ ಹಾಗೆ, ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ. ಹಾಗೆ ನೋಡಿದರೆ, ಅಂಬೇಡ್ಕರ್ ಸಮಗ್ರ ಬರಹಗಳ ಸಂಪಾದನೆ, ಪ್ರಕಟಣೆಯದೇ ಒಂದು ಕೌತುಕಮಯ ಹಾಗೂ ಗಾಢ ವಿಷಾದದ ಕಥೆ.

ಹಿಂದೂ ಕೋಡ್ ಬಿಲ್ ವಿಷಯದಲ್ಲಿ ಬೇಸತ್ತು ಅಂಬೇಡ್ಕರ್ 1951ರಲ್ಲಿ ನೆಹರೂ ಸಂಪುಟಕ್ಕೆ ರಾಜೀನಾಮೆ ಕೊಟ್ಟಾಗ ಅವರು ಮಂತ್ರಿ ಪದವಿಯೊಂದಿಗೆ ತಮ್ಮ ಆಪ್ತ ಸಿಬ್ಬಂದಿಯನ್ನೂ ಕಳೆದುಕೊಳ್ಳಬೇಕಾಯಿತು. ಹಾಗಾಗಿ ಅವರು ತಮ್ಮ ಓದು ಬರಹದ ಕೆಲಸಕ್ಕೆ ಸ್ವಂತದ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು. ಅವರ ಅಭಿಮಾನಿಯಾಗಿದ್ದ ನಾನಕ್ ಚಂದ್ ರತ್ತೂ ಎಂಬ ಪಂಜಾಬಿ, ಆ ಹಂತದಲ್ಲಿ ಅವರ ಸಹಾಯಕನಾಗಿ ಜೊತೆಯಾದರು. ದಲಿತ ಸಮುದಾಯಕ್ಕೆ ಸೇರಿದ ಈತ ಸರ್ಕಾರಿ ಇಲಾಖೆಯಲ್ಲಿ ದುಡಿಯುವ ಟೈಪಿಸ್ಟ್. ರತ್ತೂ, ನಿತ್ಯ ಕಚೇರಿ ಮುಗಿಸಿಕೊಂಡು ಸಂಜೆ ಅಂಬೇಡ್ಕರರ ದಿಲ್ಲಿ ನಿವಾಸಕ್ಕೆ ಬಂದವರು ನಡುರಾತ್ರಿವರೆಗೂ ಕೆಲಸ ಮಾಡುತ್ತಿದ್ದರು. ಹೀಗೆ 1951ರ ಅಕ್ಟೋಬರಿನಿಂದ ಆರಂಭಿಸಿ ಅಂಬೇಡ್ಕರ್ ಬದುಕಿರುವವರೆಗೆ, ಅಂದರೆ 1956ರ ಡಿಸೆಂಬರ್ ವರೆಗೆ ಅಂಬೇಡ್ಕರರ ಎಲ್ಲ ಪತ್ರಗಳು, ಬರಹಗಳನ್ನು ಟೈಪ್ ಮಾಡಿದವರು ಈ ರತ್ತೂ.

ಅಂಬೇಡ್ಕರರು ತಮ್ಮ ಕೊನೆ ವರ್ಷಗಳನ್ನು ಕಳೆದಿದ್ದು ದಿಲ್ಲಿಯ ಅಲೀಪುರ ರಸ್ತೆಯ ಬಂಗಲೆಯಲ್ಲಿ, ಪತ್ನಿ ಸವಿತಾರೊಂದಿಗೆ. ಹತ್ತು ಕೋಣೆಗಳ ಈ ಮನೆಯನ್ನು ಅವರು ದಕ್ಷಿಣ ರಾಜಾಸ್ತಾನದ ಸಿರೋಹಿ ಪ್ರಾಂತ್ಯದ ರಾಜನಿಂದ ಬಾಡಿಗೆಗೆ ಪಡೆದಿದ್ದರು. ಅಂಬೇಡ್ಕರ್ ಡಿಸೆಂಬರ್ 6ರಂದು ಪರಿನಿರ್ವಾಣ ಹೊಂದಿದ ಮೇಲೂ ಅವರ ಪತ್ನಿ ಅದೇ ಬಂಗಲೆಯಲ್ಲಿ ವಾಸ್ತವ್ಯ ಮುಂದುವರೆಸಿದರು. 1966ರಲ್ಲಿ ಮದನಲಾಲ್ ಜೈನ್ ಎಂಬುವವರೊಬ್ಬರು ಆ ಬಂಗಲೆಯನ್ನು ಕೊಂಡುಕೊಂಡರೂ, ಶ್ರೀಮತಿ ಅಂಬೇಡ್ಕರರ ವಾಸಕ್ಕೆ ಎರಡು ರೂಮುಗಳನ್ನೂ, ತಮ್ಮ ಅಳಿಯನಿಗೆ ಬಂಗಲೆಯ ಒಂದು ಭಾಗವನ್ನೂ, ಮತ್ತೊಬ್ಬ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಿಗೆ ಮತ್ತೊಂದು ಭಾಗವನ್ನೂ ಕೊಟ್ಟರು. ಆದರೆ ಕೆಲವೇ ದಿನಗಳಲ್ಲಿ ಸವಿತಾ ಅವರಿಗೆ ಮನೆ ಖಾಲಿ ಮಾಡಲು ಒತ್ತಡ ಹೇರತೊಡಗಿದರು. 1967ರ ಜನವರಿ 17ರಂದು ಅಡಿಷನಲ್ ಬಾಡಿಗೆ ನಿಯಂತ್ರಣಾಧಿಕಾರಿಯಿಂದ ಶ್ರೀಮತಿ ಅಂಬೇಡ್ಕರರಿಗೆ ನೋಟಿಸ್ ಕೂಡ ಜಾರಿಯಾಯಿತು. ಅದಾಗಿ ಮೂರೇ ದಿನಕ್ಕೆ ಅಂದರೆ ಜನವರಿ 20ರಂದು ಶ್ರೀಮತಿ ಸವಿತಾ ಕಾರ್ಯನಿಮಿತ್ತ ರಾಜಾಸ್ತಾನದ ಆಲ್ವರ್ ಗೆ ಹೊರಟರು. ತಾವಿಲ್ಲದಾಗ ಇಲ್ಲೇನಾದರೂ ತೊಂದರೆಯಾಗಬಹುದೆಂಬ ಕಲ್ಪನೆ ಅವರಿಗಿರಲಿಲ್ಲ.

ಆದರೆ ಅವರು ಅತ್ತ ಹೋಗುತ್ತಿದ್ದಂತೆಯೇ ಇತ್ತ ಮೂವರು ಕೋರ್ಟ್ ಸಿಬ್ಬಂದಿ ಮತ್ತು ಇಪ್ಪತ್ತು ಗೂಂಡಾಗಳೊಂದಿಗೆ ನುಗ್ಗಿದ ಮನೆ ಮಾಲೀಕ ಜೈನ್ ಮತ್ತವನ ಅಳಿಯ, ಸವಿತಾರ ಮನೆಯಾಳು ಮೋಹನ್ ಸಿಂಗ್ ನಿಂದ ಕೀಲಿಕೈ ಕಿತ್ತುಕೊಂಡು ಅವರ ಕೋಣೆಗಳನ್ನು ಅತಿಕ್ರಮಿಸಲು ಮುಂದಾದರು. ಅದು ಹೋಗಲಿ, ದೊಡ್ಡ ಕೊಠಡಿಯಲ್ಲಿ ಓರಣವಾಗಿ ಜೋಡಿಸಿಟ್ಟಿದ್ದ ಅಂಬೇಡ್ಕರರ ಕಾಗದ ಪತ್ರಗಳೆಲ್ಲವನ್ನೂ ಕಿತ್ತು ಚೆಲ್ಲಾಡಿ ಮನೆ ಹೊರಗಿನ ಬಯಲಿನಲ್ಲಿ ಬಿಸಾಕಿದರು! ಬೆಲೆ ಕಟ್ಟಲು ಸಾಧ್ಯವೇ ಆಗದ ಅತ್ಯಮೂಲ್ಯವಾದ ಕಾಗದಪತ್ರಗಳು ಮತ್ತು ಹಸ್ತಪ್ರತಿಗಳು. ದುರ್ದೈವ, ಅಂದೇ ರಾತ್ರಿ ಜೋರು ಮಳೆ ಸುರಿಯಿತು. ಸಹಜವಾಗಿಯೇ ಬಯಲಿನಲ್ಲಿ ಬಿದ್ದ ಅನೇಕ ಕಾಗದಪತ್ರಗಳು ಶಾಶ್ವತವಾಗಿ ನಷ್ಟವಾಗಿ ಹೋದವು. ಆ ವೇಳೆಗಾಗಲೇ ರಾಷ್ಟ್ರೀಯ ಸಂಗ್ರಹಾಗಾರದಲ್ಲಿ ಜತನವಾಗಿರಬೇಕಾಗಿದ್ದ ಆ ದಾಖಲೆಗಳು ಹತ್ತು ವರ್ಷ ಕಾಲ ಖಾಸಗಿಯಾಗಿ ಹೀಗೆ ದಿಕ್ಕಿಲ್ಲದಂತೆ ಯಾವುದೋ ಮೂಲೆಯಲ್ಲಿದ್ದಿದ್ದೇ ಒಂದು ದುರಂತ. ಅದರ ಮೇಲೆ ಇಡೀ ದೇಶಕ್ಕೆ ಭರಿಸಲಾಗದ ನಷ್ಟ ತಂದಿತ್ತ ಈ ಅಕ್ಷಮ್ಯ ಅಪಚಾರ…!

ಪ್ರವಾಸದಿಂದ ಮರಳಿದ ಶ್ರೀಮತಿ ಸವಿತಾರಿಗೆ, ಇದು ಆಘಾತಕಾರಿ ಬೆಳವಣಿಗೆ. ಈಗ ತಮ್ಮ ವಸ್ತುಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಅವರು ಕೇಂದ್ರ ಗೃಹಮಂತ್ರಿ ವೈ.ಬಿ.ಚವಾಣ್ ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಎ.ಎನ್.ಝಾ ಅವರ ಮೊರೆ ಹೊಕ್ಕರು. ಆನತಿ ಕಾಲದಲ್ಲಿ ಆ ಇಡೀ ಬಂಗಲೆಯನ್ನೇ ಕೆಡವಲಾಯಿತು. ಮತ್ತು ಆ ಆಸ್ತಿಯೂ ಬೇರೆಯವರ ಕೈ ಸೇರಿತು. ಅಲ್ಲಿಂದಾಚೆ ಏನಾಯಿತೋ ಅಷ್ಟು ಸ್ಪಷ್ಟವಿಲ್ಲವಾದರೂ, ಅಂಬೇಡ್ಕರರ ಕಾಗದಪತ್ರ/ ದಾಖಲೆಗಳಲ್ಲಿ ಉಳಿದುಕೊಂಡಷ್ಟನ್ನು ದಿಲ್ಲಿ ಹೈಕೋರ್ಟಿನ ಪರವಾಗಿ ಉಸ್ತುವಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ಇದಾದ ನಂತರ ಅಂಬೇಡ್ಕರರ ಅಪ್ರಕಟಿತ ಹಸ್ತಪ್ರತಿ ಮತ್ತಿತರ ಕಾಗದಪತ್ರಗಳೆಲ್ಲವೂ ಮಹಾರಾಷ್ಟ್ರದ ಅಡ್ಮಿನಿಸ್ಟ್ರೇಟರ್ ಜನರಲ್ ವಶಕ್ಕೆ ಬಂದವು. ಬಂದ ಮೇಲೂ ವರ್ಷಗಳ ಕಾಲ ಹಾಗೇ ಇದ್ದವು. ಈ ನಡುವೆ ನಾಗಪುರದ ದಲಿತ ವಕೀಲ ಜೆ.ಬಿ.ಬಾನ್ಸೋಡ್ ಎಂಬುವವರು ಹೈಕೋರ್ಟ್ ನಾಗಪುರ ಪೀಠದ ಮುಂದೆ ಒಂದು ಅಹವಾಲು ಸಲ್ಲಿಸಿದರು. ರಾಷ್ಟ್ರೀಯ ಮಹತ್ವದ ಅಂಬೇಡ್ಕರ್ ಕೃತಿಗಳನ್ನು ಪ್ರಕಟಿಸಲು ತಮಗೆ ಅನುಮತಿ ನೀಡಬೇಕು, ಇಲ್ಲವೇ ಮಹಾರಾಷ್ಟ್ರ ಸರ್ಕಾರವೇ ಅವುಗಳನ್ನು ಪ್ರಕಟಿಸಬೇಕು- ಇದು ಅವರ ಪ್ರಾರ್ಥನೆ. ಈ ಅಹವಾಲು ಕೂಡ ಹೈಕೋರ್ಟಿನಲ್ಲೇ ವರ್ಷಗಟ್ಟಳೆ ಕೊಳೆಯುತ್ತ ಬಿದ್ದಿತ್ತು. ಆದರೆ ಬಾನ್ಸೋಡ್ ದೇಶದ ಎಲ್ಲ ದಲಿತರ ಪರವಾಗಿ ಒಂದು ಮುಖ್ಯ ಪ್ರಶ್ನೆಯೆತ್ತಿದ್ದಂತೂ ನಿಜ; ಅಂಬೇಡ್ಕರ್ ಕೃತಿಗಳ ವಿಷಯದಲ್ಲಿ ಸರ್ಕಾರ ವರ್ಷಗಳ ಕಾಲ ನಿದ್ದೆ ಮಾಡುತ್ತಿರುವುದೇಕೆ…?

ಈ ನಡುವೆ ನಾಡಿನಾದ್ಯಂತ ದಲಿತ ಚಿಂತಕರು ಮತ್ತೆ ಮತ್ತೆ ಬಾಬಾಸಾಹೇಬರ ಪ್ರಕಟಿತ ಕೃತಿಗಳನ್ನು ಮುದ್ರಿಸಿ ಹಂಚುತ್ತಲೇ ಇದ್ದರು. ಆದರೆ ಸಾಯುವ ಘಳಿಗೆವರೆಗೆ ಹಿಂದೂಧರ್ಮ ಮತ್ತು ಬ್ರಾಹ್ಮಣ ಪರಂಪರೆಗಳ ಬುಡ ಅಲ್ಲಾಡಿಸುತ್ತ, ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಲೇ ಸಾಗಿದ ಆ ಧೀಮಂತ ಅಸ್ಪೃಶ್ಯನತ್ತ, ಸ್ಪೃಶ್ಯ ಭಾರತದ ಅಸಡ್ಡೆ ಮುಂದುವರೆದೇ ಇತ್ತು.

ಮಹಾರಾಷ್ಟ್ರ ಸರ್ಕಾರ 1976ರಲ್ಲಿ- ಅಂದರೆ ಅಂಬೇಡ್ಕರ್ ತೀರಿಕೊಂಡ ಇಪ್ಪತ್ತು ವರ್ಷಗಳ ನಂತರ ಡಾ. ಬಾಬಾಸಾಹೇಬ ಅಂಬೇಡ್ಕರ್ ಮೂಲ ಕೃತಿಗಳ ಪ್ರಕಟಣಾ ಸಮಿತಿ ರಚಿಸಿತು. 1979ರಲ್ಲಿ ಮೊದಲ ಸಂಪುಟ ಹೊರಬಂತು. ಮುಂದಕ್ಕೆ ಸಮಗ್ರ ಬರಹಗಳು, ಭಾಷಣಗಳ ಒಟ್ಟು 22 ಸಂಪುಟಗಳು ಬೆಳಕು ಕಂಡವು.

ರಾಮ-ಕೃಷ್ಣರ ಒಗಟು ಎಂಬ ಈ ಅಧ್ಯಾಯವನ್ನು ಒಳಗೊಂಡ ‘ಹಿಂದೂ ಧರ್ಮದ ಒಗಟುಗಳು’, ಅಂಬೇಡ್ಕರ್ ಕೃತಿ ಶ್ರೇಣಿಯಲ್ಲಿ ನಾಲ್ಕನೆಯ ಸಂಪುಟವಾಗಿ ಅಚ್ಚಾಗಿದೆ. ಈ ನಿರ್ದಿಷ್ಟ ಬರವಣಿಗೆಯನ್ನು ಅಂಬೇಡ್ಕರ್ 1954ರ ಜನವರಿಯಲ್ಲಿ ಆರಂಭಿಸಿ 1955ರ ನವೆಂಬರಿನಲ್ಲಿ ಪೂರ್ಣಗೊಳಿಸಿದರೆಂದು ನಾನಕ್ ಚಂದ್ ರತ್ತೂ ದಾಖಲಿಸುತ್ತಾರೆ. ಜೊತೆಗೆ ತಾವು ಈ ಕೃತಿಯ ಒಟ್ಟು ನಾಲ್ಕು ಪ್ರತಿಗಳನ್ನು ಟೈಪ್ ಮಾಡಬೇಕಾಗಿ ಬಂತು ಎನ್ನುತ್ತಾರೆ ರತ್ತೂ. ಅವರು ‘ಯಾಕೆ?’ ಎಂದು ಕೇಳಿದರೆ ಅಂಬೇಡ್ಕರ್ ಮುಗುಳ್ನಕ್ಕು ಹೇಳಿದರಂತೆ: ಈ ಪುಸ್ತಕದ ಹೆಸರೇನು? ಹಿಂದೂ ಧರ್ಮದ ಒಗಟುಗಳು. ನಿನ್ನ ಪ್ರಶ್ನೆಗೆ ಆ ಹೆಸರೇ ಉತ್ತರ. ನನಗೆ ನನ್ನದೇ ಮುದ್ರಣಾಲಯವಿಲ್ಲ. ಹಾಗಾಗಿ ನಾನು ಇದನ್ನು ಯಾವುದಾದರೂ ಹಿಂದೂ ಮುದ್ರಕರಿಗೇ ಕೊಡಬೇಕು. ಕೊಟ್ಟಾದ ಮೇಲೆ ಅದು ಕಳೆದು ಹೋಗಬಹುದು, ಸುಟ್ಟು ಹೋಗಬಹುದು ಅಥವಾ ಹಾಳಾಗಿ ಹೋಗಬಹುದು. ನನ್ನ ಹಲವು ವರ್ಷಗಳ ಕಠಿಣ ಶ್ರಮ, ಹಾಗೆ ನಷ್ಟವಾಗಿ ಬಿಡುತ್ತದೆ. ಅದಕ್ಕಾಗಿಯೇ, ಏನಾದರೂ ಆಗಲಿ, ಎಷ್ಟಾದರೂ ಖರ್ಚಾಗಲಿ, ಮತ್ತೊಂದು ಪ್ರತಿ ನನ್ನ ಬಳಿ ಇರಲೇಬೇಕು.

ಕೃತಿ ಸಂಪೂರ್ಣ ಸಿದ್ಧವಾಗಿದ್ದರೂ, ಅಂಬೇಡ್ಕರ್ ತಕ್ಷಣ ಮುದ್ರಣಕ್ಕೆ ಕಳಿಸಲಿಲ್ಲ. ಮುದ್ರಿಸುವ ಮುನ್ನ ಅದಕ್ಕೆ ಎರಡು ಛಾಯಾಚಿತ್ರಗಳು ಅಗತ್ಯವಿದ್ದವು ಎನ್ನುತ್ತಾರೆ ರತ್ತೂ. ಮೊದಲನೆಯದು, ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ 1951ರಲ್ಲಿ ಬನಾರಸ್ಸಿಗೆ ಭೇಟಿ ನೀಡಿದಾಗ ಬ್ರಾಹ್ಮಣರ ಕಾಲು ತೊಳೆದು ಪಾದೋದಕ ಕುಡಿದ ಫೋಟೋ. (ಈ ಘಟನೆಯನ್ನು ಲೋಹಿಯಾ ಕೂಡ ಪ್ರಸ್ತಾಪಿಸಿ ರಾಷ್ಟ್ರಪತಿಗಳನ್ನು ಕಟುವಾಗಿ ಟೀಕಿಸಿದ್ದರು.) ಎರಡನೆಯದು, ಬ್ರಾಹ್ಮಣರೊಬ್ಬರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾದರೆಂಬ ಸಂತೋಷಾಚರಣೆಗೆ 1947ರ ಆಗಸ್ಟ್ 15ರಂದು ಬನಾರಸ್ಸಿನ ಬ್ರಾಹ್ಮಣರು ನಡೆಸಿದ ಯಜ್ಞದಲ್ಲಿ, ಸ್ವತಃ ನೆಹರೂ ಭಾಗಿಯಾಗಿ ಬ್ರಾಹ್ಮಣರು ಉಡುಗೊರೆಯಾಗಿ ನೀಡಿದ ರಾಜದಂಡ ಸ್ವೀಕರಿಸಿ, ಅವರು ತಂದುಕೊಟ್ಟ ಗಂಗಾಜಲ ಸೇವಿಸಿದ ಪ್ರಸಂಗದ ಫೋಟೋ. ಈ ಪೈಕಿ ರಾಜೇಂದ್ರ ಪ್ರಸಾದರ ಫೋಟೋ ಸಿಕ್ಕಿದರೂ, ನೆಹರೂ ಫೋಟೋಗಾಗಿ ಅಂಬೇಡ್ಕರ್ ಹುಡುಕಾಟ ಮುಂದುವರೆಸಿದ್ದರೆಂದು ರತ್ತೂ ಬರೆದಿದ್ದಾರೆ.

ಈ ಎರಡು ಪ್ರಸಂಗಗಳ ಬಗ್ಗೆ ಸ್ವತಃ ಅಂಬೇಡ್ಕರ್ ತಮ್ಮ (ರಾಜ್ಯಗಳ ಭಾಷಾವಾರು ವಿಂಗಡಣೆಗಾಗಿ ನೇಮಕಗೊಂಡ ಆಯೋಗದ ವರದಿ ಕುರಿತ ಟೀಕೆ ಟಿಪ್ಪಣಿ) ಥಾಟ್ಸ್ ಆನ್ ಲಿಂಗ್ವಿಸ್ಟಿಕ್ ಸ್ಟೇಟ್ಸ್ ಕೃತಿಯಲ್ಲಿಯೂ ಪ್ರಸ್ತಾಪಿಸುತ್ತಾರೆ.

1950ರ ದಶಕದಲ್ಲಿ ಅಂಬೇಡ್ಕರ್ ಅಗಾಧ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರು. ಆರೋಗ್ಯವೂ ಕೈಕೊಡತೊಡಗಿತ್ತು. ಹಾಗಾಗಿ ಅವರು ಸಾಧ್ಯವಾದಷ್ಟು ಬೇಗ, ಸಾಧ್ಯವಾದಷ್ಟೂ ಕೃತಿಗಳನ್ನು ಪ್ರಕಟಿಸಬೇಕೆಂಬ ಪ್ರಯತ್ನದಲ್ಲಿ ತೊಡಗಿದ್ದರು. ಆಗ ಬುದ್ಧ ಮತ್ತು ಅವನ ಧಮ್ಮ ಪ್ರಕಟಿಸುವುದು ಅವರ ಮೊದಲ ಆದ್ಯತೆಯಾಗಿತ್ತು. ಪ್ರಕಟಣೆಗಾಗಿ ಆರ್ಥಿಕ ನೆರವು ಕೋರಿ ಅವರು ಟಾಟಾ ಉದ್ದಿಮೆಗಳ ಅಧ್ಯಕ್ಷ ಎ.ಆರ್.ಮಸಾನಿ ಸೇರಿದಂತೆ ಹಲವರಿಗೆ ಪತ್ರ ಬರೆದರು. ಅದಕ್ಕೆ ಉತ್ತರವಾಗಿ ದೊರಾಬ್ಜಿ ಟಾಟಾ ಟ್ರಸ್ಟ್ ಬುದ್ಧನ ಕುರಿತ ಕೃತಿಯಲ್ಲಿ ವಿವಾದಾತ್ಮಕವಾದದ್ದೇನೂ ಇರಲಾರದು ಎಂದು ಮನವರಿಕೆ ಮಾಡಿಕೊಂಡು 1956ರ ಮೇ 1ರಂದು ಮೂರು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಿತು. ಮುದ್ರಣಕ್ಕಾಗಿ ಇನ್ನೂ 20 ಸಾವಿರ ರೂಪಾಯಿ ಅಗತ್ಯವಿದ್ದುದರಿಂದ ಅಂಬೇಡ್ಕರ್ ಕೇಂದ್ರ ಸರ್ಕಾರದ ನೆರವು ಕೇಳಿ ಪತ್ರ ಬರೆದರು. ಅಂಬೇಡ್ಕರ್ ಕೇಳಿದ್ದಿಷ್ಟೇ; ಬುದ್ಧನ 2500ನೇ ಜನ್ಮ ದಿನಾಚರಣೆ ಸಂಬಂಧ ವಿವಿಧ ಗ್ರಂಥಾಲಯಗಳಿಗೆ ಹಂಚುವುದಕ್ಕೆ ಮತ್ತು ಭಾರತಕ್ಕೆ ಭೇಟಿ ನೀಡುವ ಗಣ್ಯರಿಗೆ ಉಡುಗೊರೆಯಾಗಿ ನೀಡುವ ಸಲುವಾಗಿ ಸರ್ಕಾರವು 500 ಪ್ರತಿಗಳನ್ನು ಕೊಳ್ಳಲು ಸಾಧ್ಯವೇ?… ಆದರೆ ನೆಹರೂ ನಯವಾಗಿ ನಿರಾಕರಿಸಿಬಿಟ್ಟರು!

ಬುದ್ಧ ಮತ್ತು ಅವನ ಧಮ್ಮ ಕೃತಿಯೇನೋ ಅಂಬೇಡ್ಕರ್ ನಿಧನರಾದ ಸ್ವಲ್ಪ ಕಾಲದಲ್ಲೇ ಅಚ್ಚಾಯಿತು. ಆದರೆ ಹಿಂದೂ ಧರ್ಮದ ಒಗಟುಗಳು ಇನ್ನೂ ಮೂರು ದಶಕ ಕಾಯಬೇಕಾಯಿತು!

ಮಹಾರಾಷ್ಟ್ರ ಸರ್ಕಾರ ಈ ಸಂಪುಟವನ್ನು ಅಚ್ಚು ಮಾಡಿದ್ದು 1987ರಲ್ಲಿ. ಅಂಬೇಡ್ಕರರು ಯೋಜಿಸಿದ್ದ ಮೂಲ ಪರಿವಿಡಿಯಲ್ಲಿ ರಾಮ-ಕೃಷ್ಣ ಅಧ್ಯಾಯವನ್ನು ನಮೂದಿಸಿರಲಿಲ್ಲವಾದ್ದರಿಂದ ಅದನ್ನು ಸಂಪುಟದ ಅನುಬಂಧವಾಗಿ ಪ್ರಕಟಿಸಲಾಯಿತು. ಪುಸ್ತಕ ಹೊರಬಂದ ಕೂಡಲೇ ಸಹಜವಾಗಿಯೇ ಕರ್ಮಠ ಹಿಂದೂ ಸಮಾಜದಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗತೊಡಗಿತು. 1988ರ ಜನವರಿಯಲ್ಲಿ ಅಮರಾವತಿಯಲ್ಲಿ ಮರಾಠ ಮಹಾಮಂಡಲದ ಸಭೆಯಲ್ಲಿ ಈ ಸಂಪುಟದ ಪ್ರತಿಗಳನ್ನು ಸುಟ್ಟು ಹಾಕಲಾಯಿತು. ಅದರಲ್ಲೂ ರಾಮ-ಕೃಷ್ಣ ಅಧ್ಯಾಯಕ್ಕಂತೂ ಅತ್ಯುಗ್ರ ಪ್ರತಿರೋಧ ಬಂತು. ಆ ಅಧ್ಯಾಯದ ವಿರುದ್ಧ ಶಿವಸೇನೆ ದೊಂಬಿ ಗದ್ದಲಗಳಲ್ಲಿ ತೊಡಗಿದಾಗ ಸರ್ಕಾರ ಅದನ್ನು ಹಿಂತೆಗೆದುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿತು. ಇದಕ್ಕೆ ಪ್ರತಿಯಾಗಿ ಸಾವಿರಾರು ದಲಿತರು ಮಹಾರಾಷ್ಟ್ರದಾದ್ಯಂತ ಪ್ರತಿಭಟನೆಗೆ ಇಳಿದಿದ್ದರಿಂದ ಸಂಪುಟದಲ್ಲಿ ರಾಮ-ಕೃಷ್ಣ ಮತ್ತೆ ಸೇರ್ಪಡೆಯಾಯಿತು; ಆದರೆ ಈ ಅಧ್ಯಾಯದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಸರ್ಕಾರದ ಸಹಮತವಿಲ್ಲ ಎಂಬ ಸಾಲೂ ಕಾಣಿಸಿಕೊಂಡಿತು! ಆ ಸಾಲು ಇಂದಿಗೂ ಇದೆ.!

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ