ಮೀಸಲಾತಿಗೆ ಸಂಬಂಧಿಸಿದ ಕೆಲವು ಪ್ರಶೋತ್ತರಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಸಂವಿಧಾನದ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ – ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ – ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವರಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.

() ಎಲ್ಲರೂ ಸಮಾನರು ಎಂದು ನಮ್ಮ ಸಂವಿಧಾನವು ಸಾರುತ್ತದೆ. ಆದರೆ ಜಾತಿ ಆಧಾರಿತ ಮೀಸಲಾತಿ ಸಮಾನತೆಯ ವಿರೋಧಿಯಲ್ಲವೇ?

ಶ್ರಮ ವಿಭಜನೆಯಿಂದ ಪ್ರಾರಂಭದ ಮೊದಲ ಮೂರು ವರ್ಣಗಳು ಆಳುವವರಾಗಿ, ನಾಲ್ಕನೆಯವರು ಆಳಿಸಿಕೊಳ್ಳುವವರಾಗಿ ರೂಪುಗೊಂಡವು. ಈ ಚಾತುವರ್ಣದ ಹೊರಗೆ ಮತ್ತೊಂದು ಸಾಮಾಜಿಕ ವರ್ಗವನ್ನು ನಿರ್ಮಿಸಲಾಯಿತು. ಇವುಗಳೆಂದರೆ ಬುಡಕಟ್ಟು, ಆದಿವಾಸಿ ಬುಡಕಟ್ಟು ಹಾಗೂ ಅಸ್ಪಶ್ಯರು. ಇವರಿಗೆ ಕೊಳಕು ಕೆಲಸಗಳನ್ನು ಹಚ್ಚಿ ಅವುಗಳನ್ನು ಮಾಡುವ ವ್ಯಕ್ತಿಗೆ ಮೈಲಿಗೆಯನ್ನಂಟಿಸಿ, ಅವರನ್ನು ಮುಟ್ಟುವುದರಿಂದಲೇ ಮೈಲಿಗೆಯಾಗುತ್ತದೆ ಎನ್ನುವ ಪದ್ಧತಿಯನ್ನು ಹುಟ್ಟು ಹಾಕಲಾಯಿತು.

ಈ ಜಾತಿ ಪದ್ಧತಿಯಿಂದ ಲಾಭವನ್ನು ಕಂಡ ಜನರು, ಜಾತಿಗಳ ಮಧ್ಯೆ ಕೋಟೆಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ಯಶಸ್ವಿಯಾದರು. ಜಾತಿ ಪದ್ಧತಿಯನ್ನು ಕಡ್ಡಾಯಗೊಳಿಸಲಾಯಿತು. ವಂಶ ಪಾರಂಪರ್ಯ ಮಾಡಲಾಯಿತು. ಶೋಷಣಾ ವ್ಯವಸ್ಥೆಯಾದ ಜಾತಿಪದ್ಧತಿಯನ್ನು ಧರ್ಮದೊಂದಿಗೆ ಬೆಸುಗೆಗೊಳಿಸಿ ಭಾರತದಲ್ಲಿ ಶಾಶ್ವತಗೊಳಿಸಲಾಯಿತು.

ಈ ರೀತಿಯ ಚಾರಿತ್ರಿಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ತರುವ ಪ್ರಯತ್ನವನ್ನು ನಮ್ಮ ಸಂವಿಧಾನದಲ್ಲಿ ಮಾಡಲಾಗಿದೆ. ಭಾರತ ಸಂವಿಧಾನದ ಮೂಲತತ್ವಗಳಲ್ಲಿ ಒಂದು ಸಾಮಾಜಿಕ ನ್ಯಾಯ, ಸಮಾಜದ ದುರ್ಬಲ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಿ ಅವರು ಸಮಾನವಾಗಿ ಬಾಳುವ ಅವಕಾಶ ಮಾಡಿಕೊಡುವುದೇ ಸಾಮಾಜಿಕ ನ್ಯಾಯ, ಎಲ್ಲಾ ರೀತಿಯ ಅಸಮಾನತೆಯನ್ನು ನಿವಾರಿಸಿ ಸಮಸಮಾಜದ ನಿರ್ಮಾಣವೇ ಸಾಮಾಜಿಕ ನ್ಯಾಯದ ಅಂತಿಮ ಗುರಿ.

ನೂರಾರು ವರ್ಷಗಳಿಗೂ ಹೆಚ್ಚಿನ ಕಾಲ ಭಾರತ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಕ್ಕೆ ಸೇರಿದ ಜನರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದರು. ಈ ರೀತಿಯ ಅಸಮಾನತೆಯನ್ನು ಹೋಗಲಾಡಿಸಲು ಮೀಸಲಾತಿಯನ್ನು ಜಾರಿಗೆ ತರಲಾಯಿತು. ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗವಷ್ಟೆ. ಮೀಸಲಾತಿ ಬಡತನವನ್ನು ನಿರ್ಮೂಲನೆ ಮಾಡುವ ಸರ್ಕಾರದ ಕಾರ್ಯಕ್ರಮವೂ ಅಲ್ಲ ಅಥವಾ ಅದೊಂದು ದಾನವೂ ಅಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು, ಸಮಾನತೆಯ ಸಾಧನೆ, ಸರ್ಕಾರದ ಆಡಳಿತದಲ್ಲಿ ಒಂದು ಪ್ರಾತಿನಿಧ್ಯ ಮತ್ತು ಎಲ್ಲಾ ರೀತಿಯ ಪಕ್ಷಪಾತ ಮತ್ತು ಬಹಿಷ್ಕರಣೆಯ ವಿರುದ್ಧ ಒಂದು ಸಾಧನ.

“Differential treatment among equals amounts to discrimination. But differential treatment among unequal’s will not amount to discrimination”

“ಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತ. ಆದರೆ ಅಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತವಲ್ಲ.”

(ಬಿ) ಸಂವಿಧಾನ ಜಾರಿಗೆ ಬಂದ 70 ವರ್ಷಗಳ ನಂತರವೂ ಮೀಸಲಾತಿ ಮುಂದುವರಿಸಿರುವುದು ಎಷ್ಟು ಸಮಂಜಸ?

ಪ್ರತಿಯೊಂದು ಸಾಮಾಜಿಕ, ಆರ್ಥಿಕ ಸೂಚ್ಯಂಕಗಳು ಹಿಂದುಳಿದ ಮತ್ತು ಅಸ್ಪಶ್ಯರ ಸ್ಥಿತಿಯು ತೀರಾ ಅತೃಪ್ತಿಕರವಾಗಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಇದು ಶೋಚನೀಯವಾಗಿದೆಯೆಂದು ತೋರಿಸುತ್ತವೆ. ಇವರು ಎರಡು ರೀತಿಯ ಶೋಷಣೆಗೆ ಬಲಿಯಾಗಿದ್ದಾರೆ. ದುಡಿಯುವ ವರ್ಗವಾಗಿ ವರ್ಗ ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಅದೇ ಸಮಯದಲ್ಲಿ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿದ್ದು ಜಾತಿ ದಮನವನ್ನು ಅನುಭವಿಸುತ್ತಿದ್ದಾರೆ.

ಅಸ್ಪೃಶ್ಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಸಾಕ್ಷರತೆ ಮತ್ತು ಶಿಕ್ಷಣದ ಪ್ರಮಾಣವು ಬಹಳ ಕೆಳಮಟ್ಟದಲ್ಲಿದೆ. ಇನ್ನೂ ಶೇ. 30ರಷ್ಟು ಅಸ್ಪೃಶ್ಯರು ಅನಕ್ಷರಸ್ಥರಾಗಿದ್ದಾರೆ. ಪ್ರತಿ 100 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು 12ನೇ ತರಗತಿಯನ್ನು ಪಾಸು ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳನ್ನು ಶಾಲೆಯ ಕಟ್ಟಕಡೆಯ ಬೆಂಚುಗಳಲ್ಲಿ ಕೂರಿಸಲಾಗುತ್ತಿದೆ. ಅನೇಕ ಶಾಲೆಗಳಲ್ಲಿ ಸಹಭೋಜನ ನಿರಾಕರಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಅಸ್ಪೃಶ್ಯರ ಪ್ರಮಾಣ ಬಹಳ ಕಡಿಮೆ. ಅಸ್ಪೃಶ್ಯ ಮಹಿಳೆಯರ ಸಾಕ್ಷರತೆ ಪುರುಷರಿಗಿಂತ ಹೆಚ್ಚು ಶೋಚನೀಯವಾಗಿದೆ.

2011 ಮಾರ್ಚ್ ತಿಂಗಳಲ್ಲಿ ಅಂದಿನ ಕೇಂದ್ರ ಸಚಿವರಾದ ವಿ.ನಾರಾಯಣ ಸ್ವಾಮಿಯವರು ಸದನದಲ್ಲಿ ತಮ್ಮ ಲಿಖಿತ ಉತ್ತರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿಯ ಸ್ಥಿತಿಯನ್ನು ತಿಳಿಸಿದ್ದಾರೆ. ಅದರ ಮುಖ್ಯಾಂಶಗಳೆಂದರೆ:

1. ಕೇಂದ್ರ ಸರ್ಕಾರದ ಮೇಲ್ ಸ್ತರದ 149 ಕಾರ್ಯದರ್ಶಿಗಳ ಪೈಕಿ ಪರಿಶಿಷ್ಟ ಜಾತಿಯವರು ಯಾರೂ ಇಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದವರು 4 ಮಾತ್ರ

2. 108 ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯವರು 1 ಮತ್ತು ಪರಿಶಿಷ್ಟ ಪಂಗಡದವರು 2 ಮಾತ್ರ.

3. 477 ಜಂಟಿ ಕಾರ್ಯದರ್ಶಿಗಳ ಪೈಕಿ 31 ಪರಿಶಿಷ್ಟ ಜಾತಿಯವರು ಮತ್ತು 15 ಪರಿಶಿಷ್ಟ ಪಂಗಡದವರು.

4. 590 ನಿರ್ದೇಶಕರ ಪೈಕಿ 17 ಪರಿಶಿಷ್ಟ ಜಾತಿ ಮತ್ತು 7 ಪರಿಶಿಷ್ಟ ಪಂಗಡಕ್ಕೆ ಸೇರಿದವರು.

5. ಐಎಎಸ್, ಐಪಿಎಸ್, ಐಎಫ್‌ಎಸ್‌, ಐಆರ್‌ಎಸ್ ಇತ್ಯಾದಿಗಳಲ್ಲಿ ಶೇ. 13.5ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.3ರಷ್ಟು ಪರಿಶಿಷ್ಟ ಪಂಗಡದವರು.

6. ಗ್ರೂಪ್ ‘ಎ’ ಅಧಿಕಾರಿಗಳಲ್ಲಿ ಶೇ. 11.1ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 4.6ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಬಿ’ ಅಧಿಕಾರಿಗಳಲ್ಲಿ ಶೇ. 14.3ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 5.5ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಸಿ’ನಲ್ಲಿ ಶೇ. 16ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.8ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಡಿ’ನಲ್ಲಿ ಶೇ. 19.3ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಡಿ’ನಲ್ಲಿ ಈ ವರ್ಗಕ್ಕೆ ಸೇರಿದವರು ಯಾಕೆ ಹೆಚ್ಚಾಗಿದ್ದಾರೆಂದರೆ, ಶೇ. 40ರಷ್ಟು ಉದ್ಯೋಗಿಗಳು ಸಫಾಯಿ ಕರ್ಮಚಾರಿಗಳು.

7. ಸಮಯಕ್ಕೆ ಸರಿಯಾಗಿ ನೇಮಕಾತಿ ಮಾಡದಿರುವುದರಿಂದ ಮತ್ತು ಮಾಡಿದರೆ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ ಸಾವಿರಾರು ಉದ್ಯೋಗಗಳು ಬ್ಯಾಕ್‌ಲಾಗ್‌ನಲ್ಲಿ ಇವೆ.

2011ರಲ್ಲಿ ಎಂತಹ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ. ಕಳೆದ 72 ವರ್ಷಗಳಲ್ಲಿ ಒಂದಷ್ಟು ಸಾಧನೆಯಾಗಿದೆ. ಮೀಸಲಾತಿಯ ಸವಲತ್ತನ್ನು ಪಡೆದುಕೊಂಡು ಹಿಂದುಳಿದ, ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಕೆಲವರಾದರೂ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಂಡಿದ್ದಾರೆ. ಆದರೆ ಸಾಧಿಸಬೇಕಾದ್ದು ಬೆಟ್ಟದಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲಾತಿ ಮುಂದುವರೆಯಬೇಕಾಗಿದೆ. ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು.

(ಸಿ) ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?

ಪ.ಜಾ. ಮತ್ತು ಪ.ಪಂ.ದವರು 1955ರಿಂದ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಾ ಬಂದಿದ್ದಾರೆ. 16-11-1992ರಂದು ಸರ್ವೋಚ್ಛ ನ್ಯಾಯಾಲಯವು ‘ಇಂದಿರಾ ಸಹಾನಿ’ ಪ್ರಕರಣದಲ್ಲಿ ತೀರ್ಪನ್ನು ನೀಡಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಶೇ.27ರಷ್ಟು ನೀಡಿದ್ದ ಮೀಸಲಾತಿಯನ್ನು ಎತ್ತಿ ಹಿಡಿದು ಕೆಲವು ಷರತ್ತುಗಳನ್ನು ವಿಧಿಸಿತು. ಅವುಗಳೆಂದರೆ:

1. ಸರ್ಕಾರಿ ಸೇವೆಗೆ ಪ್ರವೇಶಿಸುವ ಪ್ರಾಥಮಿಕ ಹಂತದಲ್ಲಿ ಮಾತ್ರ ಮೀಸಲಾತಿ ಇರಬೇಕು.

2. ಸೇವೆಗೆ ಸೇರಿದ ನಂತರ ಬಡ್ತಿ ವಿಚಾರದಲ್ಲಿ ಮೀಸಲಾತಿ ಇರಕೂಡದು.

3. ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದು.

4. ಕೆನೆಪದರದ ನೀತಿ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸಬೇಕು.

5. ಕೆನೆಪದರದ ನೀತಿ ಪ.ಜಾ. ಮತ್ತು ಪ.ಪಂ.ಕ್ಕೆ ಅನ್ವಯವಾಗುವುದಿಲ್ಲ.

ಸರ್ವೋಚ್ಛ ನ್ಯಾಯಾಲಯದ ಈ ತೀರ್ಪಿನ ಪರಿಣಾಮವಾಗಿ ದೇಶದ ಪ.ಜಾ. ಮತ್ತು ಪ.ಪಂ.ದವರ ಹಿತಕ್ಕೆ ಧಕ್ಕೆ ಆಗಿದೆ ಎಂದು ಈ ತೀರ್ಪನ್ನು ಶೂನ್ಯೀಕರಿಸಲು 1995ರಲ್ಲಿ ಸಂವಿಧಾನಕ್ಕೆ 77ನೇ ತಿದ್ದುಪಡಿ ತಂದು ಅನುಚ್ಛೇದ 16(4ಎ)ನ್ನು ಸೇರಿಸುವುದರ ಮುಖಾಂತರ ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿತು. 2000ರಲ್ಲಿ ಸಂವಿಧಾನದ 81ನೇ ತಿದ್ದುಪಡಿ ಮೂಲಕ ಅನುಚ್ಛೇದ 16(4ಬಿ)ಯನ್ನು ಸೇರಿ ಮೀಸಲಾತಿ ಮಿತಿ ಬ್ಯಾಕ್‌ ಲಾಗ್‌ ಹುದ್ದೆಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದೆ. ಮುಂದುವರೆದು 2000ರಲ್ಲಿ ಸಂವಿಧಾನದ 82ನೇ ತಿದ್ದುಪಡಿ ತಂದು ಅನುಚ್ಛೇದ 335ಕ್ಕೆ ಒಂದು Proviso ಸೇರಿಸಿ ಸರ್ಕಾರವು ಪ.ಜಾ. ಮತ್ತು ಪ.ಪಂ.ದವರಿಗೆ ಬಡ್ತಿ ನೀಡುವ ವಿಚಾರದಲ್ಲಿ ರಿಯಾಯಿತಿಗಳನ್ನು ನೀಡಬಹುದೆಂದು ತಿಳಿಸಿತು. ನಂತರ 2011ರಲ್ಲಿ ಸಂವಿಧಾನದ 85ನೇ ತಿದ್ದುಪಡಿ ತಂದು ಮೀಸಲಾತಿಯಿಂದ ಬಡ್ತಿ ಪಡೆದವರು ತತ್ಪರಿಣಾಮ ಸೇವಾ ಜೇಷ್ಠತೆಗೂ ಅರ್ಹರೆಂದು ಹೇಳಿತು.

ಸಂವಿಧಾನದ 77, 81, 82 ಹಾಗೂ 85ನೇ ತಿದ್ದುಪಡಿಗಳನ್ನು ಎಂ.ನಾಗರಾಜ್‌ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 2006ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿ ಸಂವಿಧಾನದ ಈ ನಾಲ್ಕೂ ತಿದ್ದುಪಡಿಗಳನ್ನು ಊರ್ಜಿತವೆಂದು ಎತ್ತಿ ಹಿಡಿಯಿತು. ಆದರೆ, ಕೆಳಗಿನ ಕೆಲವು ನಿಬಂಧನೆಗಳನ್ನು ಸೂಚಿಸಿತು:

1. ಸರ್ಕಾರ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂಬುದು ಕಡ್ಡಾಯವಿಲ್ಲ.

2. ಒಂದು ವೇಳೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂದಾದರೆ ಕೊಡಲೇಬೇಕಾದ ಅನಿವಾರ್ಯತೆಯನ್ನು ಪ್ರತಿಯೊಂದು ಪ್ರಕರಣದಲ್ಲಿ ತೋರಿಸಬೇಕು.

3. ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ ಎಂದು ಖಾತರಿ ಪಡಿಸಿಕೊಳ್ಳಬೇಕು.

4. ಈ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕದಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು.

5. ಈ ರೀತಿ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವುದರಿಂದ ಆಡಳಿತದ ಕಾರ್ಯ ದಕ್ಷತೆಗೆ ಧಕ್ಕೆ ಆಗಬಾರದು.

6. ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು.

ಕರ್ನಾಟಕ ಸರ್ಕಾರವು 2002ರಲ್ಲಿ ಕಾಯ್ದೆಯೊಂದನ್ನು ತಂದು ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಮತ್ತು ತತ್‌ಪರಿಣಾಮವಾಗಿ ಸೇವಾ ಜೇಷ್ಠತೆಯನ್ನು ಒದಗಿಸಿತು. ಈ ಕಾಯಿದೆಯ ಸಿಂಧುತ್ವವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಎಂ.ನಾಗರಾಜ್‌ ಪ್ರಕರಣದಲ್ಲಿ ಪ್ರಶ್ನಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯ 2011ರಲ್ಲಿ ತೀರ್ಪನ್ನು ನೀಡಿ ಕರ್ನಾಟಕ ಸರ್ಕಾರ ತಂದಿರುವ ಕಾಯಿದೆಯು ಸಂವಿಧಾನ ಬದ್ಧವಾಗಿದೆ ಎಂದು ಎತ್ತಿ ಹಿಡಿಯಿತು. ಆದರೆ ಸರ್ವೋಚ್ಛ ನ್ಯಾಯಾಲಯವು 2017ರಲ್ಲಿ ಬಿ.ಕೆ.ಪವಿತ್ರ-I ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತಂದ ಕಾಯಿದೆಯನ್ನು ಅಸಿಂಧು ಎಂದು ರದ್ದುಪಡಿಸಿತು.

ನಂತರ ಕರ್ನಾಟಕ ಸರ್ಕಾರವು 2017ರಲ್ಲಿ ಕೆ.ರತ್ನಪ್ರಭ ಸಮಿತಿಯನ್ನು ರಚಿಸಿ ಪ.ಜಾ. ಮತ್ತು ಪ.ಪಂ.ಗಳ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಪಡೆದು 2018ರಲ್ಲಿ ಹೊಸದಾದ ಕಾನೂನು ತಂದು ಬಡ್ತಿಯಲ್ಲಿ ಮೀಸಲಾತಿಯನ್ನು ಒದಗಿಸಿತು. 2019ರಲ್ಲಿ ಸರ್ವೋಚ್ಛ ನ್ಯಾಯಾಲಯವು ಬಿ.ಕೆ.ಪವಿತ್ರ-II ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತಂದ ಕಾನೂನಿನ ಸಿಂಧುತ್ವವನ್ನು ಎತ್ತಿ ಹಿಡಿಯಿತು.

ಬಡ್ತಿಯಲ್ಲಿ ಮೀಸಲಾತಿ ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ. ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳ ಪರಿಣಾಮವಾಗಿ ಇಂದು ದೇಶದ ಇತರೆ ರಾಜ್ಯಗಳಲ್ಲಿ ಪ.ಜಾ. ಮತ್ತು ಪ.ಪಂ.ಗಳು ಬಡ್ತಿ ಮೀಸಲಾತಿಯ ವಿಚಾರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯ ವಿಧಿಸಿರುವ ನಿಬಂಧನೆಗಳನ್ನು ಶೂನ್ಯೀಕರಿಸಲು ಕೇಂದ್ರ ಸರ್ಕಾರ ಸಂವಿಧಾನದ 117ನೇ ತಿದ್ದುಪಡಿಯನ್ನು 2012ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿತು. ಆದರೆ ಕಾರಣಾಂತರಗಳಿಂದ ಲೋಕಸಭೆಯಲ್ಲಿ ಇನ್ನೂ ಪಾಸ್‌ ಮಾಡಿಲ್ಲ. ಸರ್ಕಾರವು ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿ, ಸಂವಿಧಾನದ 117ನೇ ತಿದ್ದುಪಡಿ ತರುವುದರ ಮುಖಾಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

ಪ.ಜಾ. ಮತ್ತು ಪ.ಪಂ.ದ ಜನರು ಬಡವರಾಗಿ ವರ್ಗ ಅಸಮಾನತೆಯನ್ನು ಮತ್ತು ಜಾತಿ ವ್ಯವಸ್ಥೆಯ ತಳಸಮುದಾಯಗಳಾಗಿ ಸಾಮಾಜಿಕ ಅಸಮಾನತೆಯನ್ನು ಅನುಭವಿಸುತ್ತಿದ್ದಾರೆ. ಸುಮಾರು 2000 ವರ್ಷಗಳ ಕಾಲ ಈ ಸಮುದಾಯಗಳಿಗೆ ಶಿಕ್ಷಣ, ಆಸ್ತಿಯ ಹಕ್ಕು, ಆಡಳಿತದಲ್ಲಿ ಭಾಗವಹಿಸುವಿಕೆ, ಸೈನ್ಯದಲ್ಲಿ ಸ್ಥಾನಮಾನ ಇತ್ಯಾದಿಗಳಿಂದ ವಂಚಿಸಲಾಯಿತು. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಹೀನರಾಗಿರುವ ಈ ಸಮುದಾಯಗಳು ಸ್ವಾಭಾವಿಕವಾಗಿ ಗುಲಾಮರಾಗಿ ಬಾಳಬೇಕಾಯಿತು. ಇಂತಹ ಸಮುದಾಯಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಮೀಸಲಾತಿ ಕೇವಲ ಸಮಾನತೆಯ ಸಾಧನ ಮಾತ್ರವಲ್ಲ ಅದೊಂದು ಸಮಾನ ಅಧಿಕಾರವನ್ನು ಪಡೆಯುವ ಸಾಧನವೂ ಆಗಿದೆ. ನ್ಯಾಯಮೂರ್ತಿ ಓ.ಚಿನ್ನಪ್ಪ ರೆಡ್ಡಿಯವರು 1985ರಲ್ಲಿ ವಸಂತ ಕುಮಾರ್ ಪ್ರಕರಣದಲ್ಲಿ ಬಡ್ತಿಯಲ್ಲಿ ಯಾಕೆ ಮೀಸಲಾತಿ ಬೇಕು ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಈ ಸ್ಪಷ್ಟೀಕರಣ ಇಂದಿಗೂ ಪ್ರಸ್ತುತ ಮತ್ತು ಅದು ಹೀಗಿದೆ:

“36. ಮೀಸಲಾತಿಯ ಮಾತು ಬಂದಾಗಲೆಲ್ಲ, ಸವಲತ್ತು ಪಡೆದವರು, ದಕ್ಷತೆ ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಒಟ್ಟು ಮೀಸಲಾತಿಯು ಶೇ.50ರ ಮಿತಿಯನ್ನು ಮೀರಿದರೆ ದಕ್ಷತೆಯು ಏರುಪೇರಾಗಿ ಬಿಡುತ್ತದೆ. ಮುಂದುವರೆಸುವ (ಕ್ಯಾರಿಫಾವರ್ಡ್) ನಿಯಮವನ್ನು ಅಳವಡಿಸಿಕೊಂಡರೆ ದಕ್ಷತೆಯು ನಷ್ಟವಾಗಿಬಿಡುತ್ತದೆ. ಬಡ್ತಿಯ ಹುದ್ದೆಗಳಿಗೆ ಮೀಸಲಾತಿಯ ನಿಯಮವನ್ನು ಅನ್ವಯಿಸಿದರೆ ದಕ್ಷತೆಗೆ ಧಕ್ಕೆಯಾಗಿಬಿಡುತ್ತದೆ ಎಂಬುದು ಅವರ ಅಂಬೋಣ. ಹೀಗೆ ಶೇ.50 ಮೀರಿದ ಮೀಸಲಾತಿಗೆ ಸಂಬಂಧಿಸಿದಂತೆ ಅಥವಾ ಮೀಸಲಾತಿಯನ್ನು ಬಡ್ತಿಯ ಹುದ್ದೆಗಳಿಗೂ ನೀಡುವುದಕ್ಕೆ ಸಂಬಂಧಿಸಿದಂತೆ ಅಥವಾ ಮುಂದುವರೆಸುವುದನ್ನು ಅಳವಡಿಸಿಕೊಳ್ಳುವ ನಿಯಮಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ವಿರೋಧಗಳನ್ನು ನೋಡಿದಾಗ, ಸಿವಿಲ್ ಸರ್ವೀಸ್ ಎಂಬುದು ಒಂದು ಸ್ವರ್ಗ ಲೋಕವೇನೋ, ಅಲ್ಲಿಗೆ ದೇವದೂತರು, ಆಯ್ದ ಗಣ್ಯವರ್ಗದವರು, ಅತ್ಯುತ್ತಮರಾದವರಿಗೆ ಮಾತ್ರ ಪ್ರವೇಶ, ಅವರು ಮಾತ್ರ ಏಣಿಯ ಮೇಲೇರಿ ಹೋಗಬಹುದು ಎಂಬ ಭಾವನೆ ಉಂಟು ಮಾಡುವಂತಿರುತ್ತದೆ. ಆದರೆ, ಸತ್ಯ ಸಂಗತಿ ಬೇರೆಯೇ ಆಗಿದೆ. ಇಲ್ಲಿನ ಸತ್ಯ ಸಂಗತಿ ಏನೆಂದರೆ, ಸಿವಿಲ್ ಸರ್ವೀಸ್ ಎನ್ನುವುದು ಸ್ವರ್ಗ ಲೋಕವೇನಲ್ಲ ಮತ್ತು ಆಯ್ದ ಕೆಲವೇ ವರ್ಗಗಳಿಗೆ ಸೇರಿದ ಮೇಲಂತಸ್ತಿನವರ ದಕ್ಷತೆಯ ಮಾದರಿಯೂ ಅಲ್ಲ. ಇದರಲ್ಲಿರುವ ಪೂರ್ವಗ್ರಹಿಕೆ ಏನೆಂದರೆ ಮೀಸಲಾತಿ ರಹಿತ ಹುದ್ದೆಗಳಿಗೆ ಆಯ್ಕೆಯಾದಂಥ ಮೇಲು ಜಾತಿ ಮತ್ತು ಮೇಲು ವರ್ಗಗಳಿಗೆ ಸೇರಿದವರು ತಮಗೆ ಮಾತ್ರವೇ ಇದೆ ಎಂಬ ಅರ್ಹತೆಯ ಸೊಕ್ಕಿನ ಕಾರಣದಿಂದಾಗಿ ಸಹಜವಾಗಿಯೇ ಮೀಸಲಾತಿ ಹುದ್ದೆಗಳಿಗೆ ಆಯ್ಕೆಯಾದವರಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಇಂತಹ ಪವಿತ್ರ ಆವರಣದೊಳಗೆ ಇತರರ ಪ್ರವೇಶದಿಂದ ದಕ್ಷತೆ ಎಂಬ ತಿಳಿನೀರಿನ ಧಾರೆ ಕಲುಷಿತವಾಗಿಬಿಡುತ್ತದೆ ಎಂಬುದು ಒಂದು ಕುತ್ಸಿತ ಗ್ರಹಿಕೆ. ಇದು ಗಣ್ಯ ವರ್ಗಗಳ ತಾವೇ ಶ್ರೇಷ್ಠ ಎಂಬ ಧೋರಣೆಯಲ್ಲಿ ಸಹಜವಾಗಿಯೇ ಇರುವಂಥದ್ದು. ಆದರೆ, ಮೀಸಲಾತಿಯು ಶೇ 50%ನ್ನು ಮೀರಿದರೆ, ಮೀಸಲಾತಿಯನ್ನು ಮುಂದುವರೆಸಿದರೆ ಅಥವಾ ಬಡ್ತಿಯ ಹುದ್ದೆಗಳಿಗೆ ಮೀಸಲಾತಿಯನ್ನು ನೀಡಿದರೆ ದಕ್ಷತೆಯು ಏರುಪೇರಾಗಿ ಬಿಡುತ್ತದೆ ಎಂಬ ಗ್ರಹಿಕೆಯನ್ನು ಬೆಂಬಲಿಸುವಂಥ ಯಾವುದೇ ಅಂಕಿ ಅಂಶಗಳ ಆಧಾರವಾಗಲೀ ತಜ್ಞ ಸಾಕ್ಷ್ಯವಾಗಲೀ ಇಲ್ಲ. ಸಂಪೂರ್ಣವಾಗಿ ಒಂದು ತಾತ್ಕಾಲಿಕ ಪೂರ್ವಗ್ರಹಿಕೆಯ ಆಧಾರದ ಮೇಲೆ ವಾದಗಳನ್ನು ಮುಂದಿಡಲಾಗುತ್ತಿದೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಬಹಳ ಹಿಂದಿನ ಕಾಲದಿಂದಲೂ “ಉಚ್ಚ” ಅಥವಾ ಮುಂದುವರೆದ ವರ್ಗದವರು ಯಾವ ಅಸಹನೆಯಿಂದ “ನೀಚ” ಅಥವಾ “ಹಿಂದುಳಿದ’ ಜಾತಿಗಳವರನ್ನು ನಡೆಸಿಕೊಳ್ಳುತ್ತ ಬಂದಿದ್ದಾರೋ ಅದು ಈಗ ಒಂದು ಕೆಟ್ಟ ಪೂರ್ವಾಗ್ರಹವಾಗಿ ಪರಿವರ್ತನೆಯಾಗುತ್ತಿದೆ ಮತ್ತು ಹರಳುಗಟ್ಟುತ್ತಿದೆ. ಇದು ಪ್ರಜ್ಞಾಪೂರ್ವಕ ಮತ್ತು ಸುಪ್ತ ಪ್ರಜ್ಞೆಯಲ್ಲಿ ಇರುವಂಥದಾಗಿದ್ದು, ಯಾವಾಗ “ಕೆಳ” ಜಾತಿಗಳವರು ಮತ್ತು ವರ್ಗಗಳವರು ರೊಟ್ಟಿಯಲ್ಲಿ ತಮ್ಮ ನ್ಯಾಯಯುತವಾದ ಪಾಲನ್ನು ಆಗ್ರಹಿಸಲು ಪ್ರಾರಂಭಿಸಿದರೋ ಆಗ “ಮೇಲು” ಜಾತಿಗಳವರು ತಮ್ಮದರಲ್ಲಿ ಸ್ವಲ್ಪ ಪಾಲನ್ನು ಬಿಟ್ಟು ಕೊಡಬೇಕಾಗುತ್ತದೆ ಎಂದು ಅರ್ಥ.

ವಾಸ್ತವವಾಗಿ ಗಣ್ಯ ವೃತ್ತಿ ಮತ್ತು ಹುದ್ದೆಗಳ ಮೇಲೆ ಅವರ ಏಕಸ್ವಾಮ್ಯತೆಯ ಯಾವ ಅಂಶವೂ ಕಳೆದು ಹೋಗುವ ಭಯವಿಲ್ಲ. ಆದರೂ ಸಹ ಮುಂದುವರಿದ ಜಾತಿಗಳವರಿಗೆ ಸರ್ಕಾರದ ಸೇವೆ ಮತ್ತು ವೃತ್ತಿಗಳ ಉನ್ನತ ಶ್ರೇಣಿಗಳ ಮೇಲೆ ತಮಗಿರುವ ಏಕಸ್ವಾಮ್ಯ ಕಳೆದು ಹೋಗಿಬಿಡುವುದು ಎಂಬ ಭಯ ದಿನೇದಿನೇ ಹೆಚ್ಚಾಗುತ್ತಿದೆ. ಮೇಲು ಜಾತಿಗಳವರಿಗೆ ತಮ್ಮ ಪೂರ್ವಾಗ್ರಹಗಳನ್ನು ಮೀರುವುದಾಗಲೀ, ಅರ್ಥಮಾಡಿಕೊಳ್ಳುವುದಾಗಲೀ ಬಹಳ ಕಷ್ಟವಾಗತೊಡಗಿದೆ. ಅದೇ ರೀತಿ “ಕೆಳ” ಜಾತಿ ಮತ್ತು ವರ್ಗಗಳವರಿಗೆ ಪ್ರತಿಯೊಂದು ಹಂತದಲ್ಲಿಯೂ ತಾವು ಎದುರಿಸಬೇಕಾದ ಈ ಅಪ್ರಿಯ ಪೂರ್ವಾಗ್ರಹವನ್ನು ಹಾಗೂ ವಿರೋಧವನ್ನು ಮೀರುವುದು ಕಷ್ಟಕರವಾಗಿದೆ. ದಕ್ಷತೆ ಎನ್ನುವುದನ್ನು ಅದೇನೋ ಒಂದು ಪರಮ ಪವಿತ್ರವಾದುದು ಮತ್ತು ಈ ಪವಿತ್ರ ಸ್ಥಾನವನ್ನು ಬಹಳ ಜೋಪಾನದಿಂದ ಕಾಪಾಡಿಕೊಳ್ಳಬೇಕು ಎಂಬಂತೆ ಬಳಸುವುದನ್ನು ನೋಡುತ್ತೇವೆ. ದಕ್ಷತೆ ಎಂಬುದು ಗುರುವು ತನ್ನ ಶಿಷ್ಯನ ಕಿವಿಯಲ್ಲಿ ಊದಿದ ಮಂತ್ರವೇನಲ್ಲ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮಾತ್ರಕ್ಕೆ ವ್ಯಕ್ತಿಯು ಒಳ್ಳೆಯ ಆಡಳಿತಗಾರನಾಗುವುದಿಲ್ಲ. ಯಾರು ಇತರೆ ಗುಣಗಳೊಂದಿಗೆ ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೋ ಮತ್ತು ಈ ಗುಣವಿರುವ ಕಾರಣದಿಂದಲೇ ಒಂದು ಜನ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದುರ್ಬಲ ವರ್ಗಗಳ ಸಮಸ್ಯೆಗಳನ್ನು ದಿಟ್ಟವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೋ ಅಂಥವರು ಮಾತ್ರ ದಕ್ಷ ಆಡಳಿತಗಾರರೆನಿಸುತ್ತಾರೆ. ಹಾಗಿದ್ದ ಮೇಲೆ ಇಂಥ ವರ್ಗಗಳಿಗೇ ಸೇರಿದವರಿಗಿಂತ ಇನ್ನಾರು ಉತ್ತಮವಾಗಿರಲು ಸಾಧ್ಯ? ಸ್ವಾತಂತ್ರ್ಯ ಬಂದು 35 ವರ್ಷಗಳಾದ ನಂತರವೂ ಪ.ಜಾ.ಗಳ ಸ್ಥಿತಿಯಲ್ಲಿ ಬಹಳ ಸುಧಾರಣೆಯೇನೂ ಆಗಿಲ್ಲ ಎಂಬ ಪ್ರಶ್ನೆಯನ್ನು ಯಾಕೆ ನಮಗೆ ನಾವೇ ಕೇಳಿಕೊಳ್ಳಬಾರದು? ಈ ವರ್ಗಗಳಿಂದ ಬಂದವರನ್ನೇ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲಾ ಆಡಳಿತಗಾರರನ್ನಾಗಿ ಹಾಗೂ ರಾಜ್ಯದ ಮತ್ತು ಕೇಂದ್ರದ ಜಿಲ್ಲಾ ಬ್ಯುರೋಕ್ರಾಟ್‌ಗಳನ್ನಾಗಿ ನೇಮಕ ಮಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂಬ ಪ್ರಶ್ನೆ ನ್ಯಾಯಸಮ್ಮತವಲ್ಲವೇ? ಇಂಥ ಪ್ರಶ್ನೆಗಳಿಗೆ ಉತ್ತರಿಸಲು ನ್ಯಾಯಾಲಯಗಳು ಸಜ್ಜುಗೊಂಡಿಲ್ಲ. ಆದರೆ ಈ ಸಮಸ್ಯೆಗಳಿಗೆ ಉತ್ತರಗಳನ್ನು ಹಾಗೂ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರಗಳು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡದೇ ಇರಬಹುದಲ್ಲವೇ? ಸಿವಿಲ್‌ ಸೇವೆಗಳಲ್ಲಿ ದಕ್ಷತೆ ಅನಗತ್ಯ ಅಥವಾ ಅದೊಂದು ಮಿಥ್ಯ ಎಂಬುದು ನಮ್ಮ ಮಾತಿನ ಅರ್ಥವಲ್ಲ. ಆದರೆ, ಇದನ್ನು ಒಂದು ಅತಿ ಸೂಕ್ಷ್ಮವಾದ ಅಂಧ ಶ್ರದ್ಧೆಯನ್ನಾಗಿ ಮಾಡಬಾರದು ಎಂಬುದಷ್ಟೇ ನಮ್ಮ ಮಾತಿನ ಅರ್ಥ. ಕೆಲವೊಂದು ಹುದ್ದೆಗಳಿಗೆ ಅತ್ಯುತ್ತಮರಾದವರನ್ನು ನೇಮಕ ಮಾಡಬೇಕಾಗುತ್ತದೆ. ಕೆಲವೊಂದು ಅಧ್ಯಯನದ ವಿಷಯಗಳಿಗೆ ಅತ್ಯುತ್ತಮರಾದವರಿಗೆ ಮಾತ್ರವೇ ಪ್ರವೇಶ ನೀಡಬೇಕು ಎಂದಿರಬಹುದು. ಹಾಗಿದ್ದಲ್ಲಿ ಅಂತಹ ಹುದ್ದೆಗಳ ನೇಮಕಾತಿಗೆ ಮತ್ತು ಅಂತಹ ಅಧ್ಯಯನ ವಿಷಯಗಳ ಪ್ರವೇಶಕ್ಕೆ ಮೀಸಲಾತಿಗಾಗಿ ನಿಯಮಗಳಲ್ಲಿ ಅವಕಾಶ ಮಾಡಿಕೊಡಬಹುದು. ಆಯ್ಕೆಗೆ ಸರಿಯಾದ ವಿಧಾನಗಳಿಲ್ಲದಿದ್ದರೆ ನಿಯಮಗಳನ್ನು ಮಾಡಬಹುದು. ಕೆಲವೊಂದು ಹುದ್ದೆಗಳಿಗೆ ಅತಿ ಹೆಚ್ಚಿನ ದಕ್ಷತೆ ಅಥವಾ ಕುಶಲತೆ ಅಗತ್ಯವಾಗಬಹುದು ಮತ್ತು ಕೆಲವೊಂದು ಅಧ್ಯಯನ ವಿಷಯಗಳಿಗೆ ಅತಿ ಹೆಚ್ಚಿನ ಪರಿಶ್ರಮ ಮತ್ತು ಬುದ್ಧಿಮತ್ತೆ ಅಗತ್ಯವಾಗಬಹುದು. ಹಾಗಿದ್ದಾಗ ಉನ್ನತವಾದ ಕನಿಷ್ಠ ಅರ್ಹತಾ ಮಾನದಂಡಗಳನ್ನು ಹಾಗೂ ಸೂಕ್ತ ಆಯ್ಕೆ ವಿಧಾನ ನಿಯಮಗಳನ್ನು ನಿಗದಿಪಡಿಸಬಹುದಾಗಿದೆ. ಹುದ್ದೆಗಳ ಹಾಗೂ ಅಧ್ಯಯನದ ವಿಷಯಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಹುದ್ದೆಗಳಿಗೆ ಹಾಗೂ ವಿವಿಧ ಅಧ್ಯಯನ ವಿಷಯಗಳ ಪ್ರವೇಶಕ್ಕೆ ಬೇರೆಬೇರೆಯ ಕನಿಷ್ಠ ಅರ್ಹತೆಗಳನ್ನು ಹಾಗೂ ಬೇರೆಬೇರೆ ರೀತಿಯ ಆಯ್ಕೆಯ ವಿಧಾನಗಳನ್ನು ನಿಗದಿಪಡಿಸಬಹುದು. ಒಬ್ಬ ನ್ಯೂರೋ ಸರ್ಜನ್‌ಗಾಗಲೀ, ಕಾರ್ಡಿಯಾಕ್ ಸರ್ಜನ್‌ಗಾಗಲೀ ಒಬ್ಬ ಸಾಮಾನ್ಯ ವೈದ್ಯರಿಗೆ ಇರುವಷ್ಟೇ ಮಟ್ಟದ ದಕ್ಷತೆ ಇದ್ದರೆ ಸಾಕು ಎಂದು ಯಾರೂ ಹೇಳಲಾರರು. ಅದೇ ರೀತಿ ಸಂಶೋಧನಾ ಅಧ್ಯಯನಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಯಲ್ಲಿ ನಿರೀಕ್ಷಿಸಲಾಗುವ ಪರಿಶ್ರಮ ಹಾಗೂ ಬುದ್ಧಿಮತ್ತೆಗಳು ಒಬ್ಬ ಸಾಮಾನ್ಯ ಕಲಾ ಪದವಿ ಶಿಕ್ಷಣಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗೆ ಇರುವಷ್ಟೇ ಇದ್ದರೆ ಸಾಕು ಎಂದು ಯಾರೂ ಹೇಳಲಾರರು. ಆದ್ದರಿಂದ ದಕ್ಷತೆಯ ವಿಷಯದಲ್ಲಿ ವಿನಾಯಿತಿ ನೀಡಬೇಕು ಎಂಬುದು ನಮ್ಮ ಮಾತಿನ ಅರ್ಥವಲ್ಲ. ಒಟ್ಟಾರೆ ನಾವು ಹೇಳಬಯಸುವುದೇನೆಂದರೆ ದಕ್ಷತೆ ಎಂಬ ಪದದ ಮರೆಯಲ್ಲಿ ಉಚ್ಚವರ್ಗದವರು ಹಿಂದುಳಿದ ವರ್ಗದವರನ್ನು ಪಕ್ಕಕ್ಕೆ ಸರಿಸಿ ತಾವೇ ಎಲ್ಲಾ ನೌಕರಿಗಳಲ್ಲಿ, ಅದರಲ್ಲಿಯೂ ಉನ್ನತ ಹುದ್ದೆಗಳಲ್ಲಿ ಹಾಗೂ ವೃತ್ತಿಪರ ಸಂಸ್ಥೆಗಳಲ್ಲಿ ಏಕಸ್ವಾಮ್ಯ ಸ್ಥಾಪಿಸುವಂತಾಗಬಾರದು ಎಂಬುದು. ನಾವು ಈ ಸಮಸ್ಯೆಯ ಮೂಲಕ್ಕೆ ಇಳಿಯುವ ಮೊದಲು ನಮ್ಮ ತಲೆಯಲ್ಲಿ ತುಂಬಿರುವ ಜೇಡರ ಬಲೆಗಳನ್ನು ಕೊಡವಿಕೊಂಡರೆ ಒಳ್ಳೆಯದು ಎಂಬುದು ನಮ್ಮ ಅನಿಸಿಕೆ. ಸಮಾನತೆಯ ಅನ್ವೇಷಣೆಯು ತಾನಾಗೇ ಕೈಗೆ ಸಿಗುವಂಥದಲ್ಲ. ನಾವು ನಮ್ಮ ವಿಶ್ವಾಸವನ್ನು ಕಳೆದುಕೊಳ್ಳದಿದ್ದರೂ ಸರಿ, ಆದರೆ ಭ್ರಮೆಗಳನ್ನಂತೂ ಕಳಚಿಕೊಳ್ಳಬೇಕು.”

ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರು ನೀಡಿದ ಈ ಮೇಲಿನ ತೀರ್ಪು ಇಂದಿಗೂ ಪ್ರಸ್ತುತ ಆದ ಕಾರಣ ಪ.ಜಾ. ಮತ್ತು ಪ.ಪಂ.ದವರಿಗೆ ಬಡ್ತಿಯಲ್ಲಿ ಮೀಸಲಾತಿಯ ಅಗತ್ಯವಿದೆ. ಇಂತಹದೇ ಸೌಲಭ್ಯವನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ.

(ಡಿ) ಕೆನೆಪದರ ನೀತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಯಾಕೆ ಅನ್ವಯಿಸಬಾರದು?

ಸ್ವಾತಂತ್ರ್ಯ ಬಂದು 75ಕ್ಕೂ ಹೆಚ್ಚು ವರ್ಷಗಳಾದರೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಹುಸಂಖ್ಯಾತ ಜನರ ಬದುಕು ಇನ್ನೂ ಹಸನಾಗಿಲ್ಲದಿರುವುದರಿಂದ ಹಾಗೂ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಜನವರ್ಗವನ್ನು ಇನ್ನೂ ಕೆಳಸ್ತರದ ಜನರನ್ನಾಗಿ ನೋಡುವುದರಿಂದ ಕೆನೆಪದರ ಎನ್ನುವುದನ್ನು ಈ ವರ್ಗಗಳಿಗೆ ಅನ್ವಯಿಸಲು ಇನ್ನೂ ಕಾಲ ಪಕ್ವವಾಗಿಲ್ಲ.

ಈ ವರ್ಗಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕೆ? ಅಥವಾ ಬೇಡವೇ? ಎನ್ನುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ, ಪ್ರಯತ್ನ, ನ್ಯಾಯಾಂಗದ ಮಧ್ಯಪ್ರವೇಶ ನಡೆದಿದ್ದು, ಆ ಇತಿಹಾಸ ಕುರಿತ ಮಾಹಿತಿ ಹೀಗಿದೆ:

1971ರಲ್ಲಿ ತಮಿಳುನಾಡು ಸರ್ಕಾರ ‘ಶ್ರೀ ಸಟ್ಟನಾಥನ್ ಆಯೋಗ’ವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕೊಡುವ ವಿಚಾರದಲ್ಲಿ ವರದಿಯನ್ನು ಪಡೆಯಿತು. ವರದಿಯಲ್ಲಿ ಮೊದಲನೇ ಬಾರಿಗೆ ಕೆನೆಪದರ ಪದ ಬಳಕೆಯಾಗಿ ಹಿಂದುಳಿದ ವರ್ಗದ ಜನರಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಜನರು ಮೀಸಲಾತಿಗೆ ಅರ್ಹರಲ್ಲವೆಂದು ಹೇಳಿತು. ಇದನ್ನು ಅನುಸರಿಸಿ ವಾರ್ಷಿಕ ಆದಾಯ 2 ಲಕ್ಷ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಇದ್ದವರಿಗೆ ಮೀಸಲಾತಿ ಸೌಲಭ್ಯವನ್ನು ನಿರಾಕರಿಸಲಾಯಿತು. ಕ್ರಮೇಣ ಹಂತಹಂತವಾಗಿ ವಾರ್ಷಿಕ ವರಮಾನ ಹೆಚ್ಚಿಸಿ 2017ರಲ್ಲಿ 8 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಹೀಗೆ ಕೆನೆಪದರ ನೀತಿಯನ್ನು ಹಿಂದುಳಿದ ವರ್ಗಗಳಿಗೆ ಅನ್ವಯಿಸಲಾಗಿದೆ.

1977ರಲ್ಲಿ ಕೇಂದ್ರ ಸರ್ಕಾರ ಬಿ.ಪಿ.ಮಂಡಲ್‌ರವರನ್ನು ಎರಡನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. 1990ರಲ್ಲಿ ಮಂಡಲ್‌ರವರು ತಮ್ಮ ವರದಿಯನ್ನು ಸಲ್ಲಿಸಿದರು. ಕೇಂದ್ರ ಸರ್ಕಾರ ಮಂಡಲ್ ವರದಿಯ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೂ ಸಹ ಶೇ. 27ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಕೇಂದ್ರ ಸರ್ಕಾರದ ಆದೇಶವನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮುಖಾಂತರ ಇಂದಿರಾ ಸಹಾನಿ ಎಂಬ ಪ್ರಕರಣದಲ್ಲಿ ಪ್ರಶ್ನಿಸಲಾಯಿತು. 9 ಜನ ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ವಿಚಾರಣೆಯನ್ನು ನಡೆಸಿ 1992ರಲ್ಲಿ ತನ್ನ ತೀರ್ಪಿನಲ್ಲಿ ಕೆನೆಪದರದ ಬಗ್ಗೆ ಈ ರೀತಿ ಹೇಳಿದೆ: “ಕೆನೆಪದರ ಎಂಬ ನೀತಿ ಕೇವಲ ಹಿಂದುಳಿದ ಜಾತಿಗಳಿಗೆ ಅನ್ವಯವಾಗುತ್ತದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲ.”

ನ್ಯಾಯಾಲಯ ಮುಂದುವರೆದು “ವೃತ್ತಿ ಕೆಳಮಟ್ಟದ್ದಾದಂತೆ, ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳೂ ಕೆಳಮಟ್ಟದಲ್ಲಿರುತ್ತವೆ. ಗ್ರಾಮೀಣ ಭಾರತದಲ್ಲಿ, ವೃತ್ತಿ ಮತ್ತು ಜಾತಿಯ ನಂಟು ಇವತ್ತಿಗೂ ವಾಸ್ತವವೇ. ಕೆಲವು ಸದಸ್ಯರು ನಗರಗಳಿಗೆ ಅಥವಾ ವಿದೇಶಗಳಿಗೂ ಹೋಗಿರಬಹುದು. ಆದರೆ ಅವರು ಹಿಂದಕ್ಕೆ ಬಂದಾಗ ಕೆಲವರನ್ನು ಹೊರತುಪಡಿಸಿ – ಮತ್ತದೇ ಹಿಡಿತಕ್ಕೆ ಒಳಗಾಗುತ್ತಾರೆ. ಅವರು ಹಣ ಗಳಿಸಿರುವುದು ಮುಖ್ಯವಾಗುವುದಿಲ್ಲ. ಅವರು ನಿರ್ದಿಷ್ಟ ವೃತ್ತಿಯನ್ನು ಪಾಲಿಸದಿರಬಹುದು. ಅದಾಗ್ಯೂ ಅವರ ಹಣೆಪಟ್ಟಿ ಹಾಗೆಯೇ ಇರುತ್ತದೆ. ಮದುವೆ, ಸಾವು, ಮತ್ತಿತರ ಸಾಮಾಜಿಕ ಸಮಾರಂಭಗಳಲ್ಲಿ ಅವರ ಅಸ್ಮಿತೆ ಬದಲಾಗುವುದಿಲ್ಲ. ಅವರ ಸಾಮಾಜಿಕ ವರ್ಗ, ಜಾತಿ ಪ್ರಸ್ತುತವಾಗುತ್ತದೆ. ಈ ಕಾರಣಗಳಿಗಾಗಿ ಕೆನೆಪದರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲವೆಂದು” ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಇಂದಿರಾ ಸಹಾನಿ ತೀರ್ಪು ಬಂದು 30 ವರ್ಷಗಳಾಗುತ್ತಿವೆ. ಇಂದು ಈ ವರ್ಗದ ಜನರ ಪರಿಸ್ಥಿತಿ ಏನಾದರೂ ಬದಲಾಗಿದೆಯೆ ಎಂಬ ವಿಚಾರದಲ್ಲಿ ನಮ್ಮ ಮುಂದೆ ಯಾವುದೇ ಅಧ್ಯಯನದ ವರದಿ ಇಲ್ಲ. ಅಂಕಿ ಅಂಶಗಳು ಕೂಡಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ದುಡುಕಿನ ತೀರ್ಮಾನ ಸೂಕ್ತವಲ್ಲ. ಆರೋಗ್ಯಕರ ಚರ್ಚೆಗಳು ನಡೆದು ಸರಿ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.

() ಮೀಸಲಾತಿಯು ಪ್ರತಿಭೆಯ ವಿರೋಧಿ ಅಲ್ಲವೆ? ಅಭಿವೃದ್ಧಿಗೆ ಹಿನ್ನಡೆ ಅಲ್ಲವೇ?

ಒಂದು ಉದಾಹರಣೆಯೊಂದಿಗೆ ಇದಕ್ಕೆ ಉತ್ತರಿಸಬಹುದು. ನಾನು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಎಂಬ ಗಡಿಗ್ರಾಮದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿರುವುದು. ನಾನು ನನ್ನ ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದೇನೆ. ಎಸ್‌ಎಸ್‌ಎಲ್‌ ಸಿ, ಪಿಯುಸಿ, ಡಿಗ್ರಿ ಮತ್ತು ಎಲ್‌ಎಲ್‌ಬಿ ಪದವಿಯನ್ನು ಮೂರನೇ ದರ್ಜೆಯಲ್ಲಿ ಪಾಸ್ ಮಾಡಿದೆ. ನಂತರ ನಾನು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದೆ. ನನ್ನ ಜೊತೆ ರ್ಯಾಂಕ್ ಪಡೆದವರು, ಚಿನ್ನದ ಪದಕಗಳನ್ನು ಗಳಿಸಿದವರು, ಹೆಚ್ಚು ಅಂಕಗಳನ್ನು ಗಳಿಸಿದವರು ಸಹ ವಕೀಲಿ ವೃತ್ತಿಗೆ ಬಂದರು. ಆದರೆ 3-4 ವರ್ಷಗಳಲ್ಲಿ ಇವರೆಲ್ಲರೂ ವೃತ್ತಿಯನ್ನು ಬಿಟ್ಟು ಬೇರೆಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋದರು. ಕಡಿಮೆ ಅಂಕಗಳನ್ನು ಗಳಿಸಿದ ನನ್ನಂಥವರು ವಕೀಲಿ ವೃತ್ತಿಯಲ್ಲಿ ಮುಂದುವರಿದೆವು. ಸೀನಿಯರ್ ಹತ್ತಿರ, ಜಡ್ಜ್ ಹತ್ತಿರ, ಎದುರಾಳಿ ವಕೀಲರ ಹತ್ತಿರ ಮತ್ತು ಕಕ್ಷಿಗಾರರ ಹತ್ತಿರ ಬೈಸಿಕೊಂಡೆವು. ಕಷ್ಟಪಟ್ಟು, ಪ್ರಾಮಾಣಿಕವಾಗಿ ಕೆಲಸ ಮಾಡಿದೆವು. ಒಳ್ಳೆಯ ಕೆಲಸಗಾರನೆಂದು ಹೆಚ್ಚು ಕೇಸುಗಳು ಬಂದವು. ಜೊತೆಯಲ್ಲಿ ಹೆಚ್ಚು ಹಣವೂ ಬಂತು. ನಾನೊಬ್ಬ ಪ್ರಾಮಾಣಿಕ ಕೆಲಸಗಾರನೆಂದು 2004ರಲ್ಲಿ ನನ್ನನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದರು. 10 ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿ ನಿವೃತ್ತಿಯ ನಂತರ ಕೂಡ ಹೀಗೆ ನಿಮ್ಮೊಂದಿಗೆ ನಿಂತು ಸಂವಿಧಾನದ ಕುರಿತು ಸಂವಾದ ಮಾಡುತ್ತಿದ್ದೇನೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವರನ್ನು ಗಮನಿಸಬಹುದು.

ಕೇವಲ ಹೆಚ್ಚು ಅಂಕಗಳನ್ನು ಪಡೆದವರೆಲ್ಲ ಪ್ರತಿಭಾವಂತರಲ್ಲ. ಹೆಚ್ಚು ಅಂಕಗಳ ಜೊತೆಗೆ ಬದುಕಿನ ಬಗ್ಗೆ ತಿಳಿವಳಿಕೆ ಇರಬೇಕು, ಪ್ರಾಮಾಣಿಕತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಇರಬೇಕು. ಪ್ರತಿಭೆ ಎಂಬುದು ಯಾವುದೇ ಜಾತಿಯ ಅಥವಾ ವರ್ಗದ ಗುತ್ತಿಗೆಯಲ್ಲ. ಬಡವರಲ್ಲೂ, ದುರ್ಬಲ, ಹಿಂದುಳಿದ ಮತ್ತು ಹಳ್ಳಿಗಳಲ್ಲೂ ಪ್ರತಿಭೆಗಳಿವೆ. ಅವರಿಗೆ ಅವಕಾಶ ಸಿಕ್ಕಿದರೆ, ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ.

ಕಡಿಮೆ ಅಂಕಗಳನ್ನು ಪಡೆದು ಲಕ್ಷಗಟ್ಟಲೇ ರೂಪಾಯಿಗಳನ್ನು ಡೊನೇಷನ್ ನೀಡಿ ವೃತ್ತಿ ಶಿಕ್ಷಣದಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆದರೆ ಪ್ರತಿಭೆಗೆ ಮಾರಕವಾಗುವುದಿಲ್ಲವೇ? ಆದರೆ ವಿದ್ಯಾರ್ಥಿ – ಯುವಜನರು ಇದರ ಬಗ್ಗೆ ಪ್ರಶ್ನಿಸುವುದಿಲ್ಲ, ಮೌನವಾಗಿರುತ್ತಾರೆ.

ಮೀಸಲಾತಿಯು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಎಲ್ಲಿಯವರೆಗೆ ಸರ್ಕಾರ ಹೆಚ್ಚುಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದಿಲ್ಲವೋ, ದುಡಿಮೆಗೆ ಸಮನಾದ ಪ್ರತಿಫಲವನ್ನು ಮತ್ತು ಉದ್ಯೋಗದ ಭದ್ರತೆಯನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ, ಒಳಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ, ಬೇರೆ ಬೇರೆ ಜಾತಿಯವರಿಗೆ ಮೀಸಲಾತಿ ಎಂಬ ಬೇಡಿಕೆಗಳು ಮುಂದುವರಿಯುತ್ತವೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಸರ್ಕಾರ ತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಹೆಚ್ಚುಹೆಚ್ಚು ಶಿಕ್ಷಣದ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಸರ್ಕಾರ ಈ ಕೆಲಸವನ್ನು ಮಾಡಿದಾಗ ಮೀಸಲಾತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಹಿಂದಕ್ಕೆ ಸರಿಯುತ್ತವೆ. ಸರ್ಕಾರ ಕಡ್ಡಾಯವಾಗಿ ಈ ಕೆಲಸ ಮಾಡಬೇಕಾದರೆ, ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಬೇಕು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ