ಕಳೆದ 75 ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿದೆ. ಆದರೆ ಈ ವರ್ಗದ ಮಹಿಳೆಯರು, ಆದಿವಾಸಿಗಳು ಮತ್ತು ಅಲೆಮಾರಿಗಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇದರ ಜೊತೆಗೆ ದೇವದಾಸಿಯರು, ಸಫಾಯಿ ಕರ್ಮಚಾರಿಗಳು ಮತ್ತು ಕೊಳಚೆ ಪ್ರದೇಶ ನಿವಾಸಿಗಳ ಜೀವನ ಇನ್ನೂ ಹೀನಾಯವಾಗಿದೆ. ಇವರ ಮತ್ತು ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ತತ್ಪಪರಿಣಾಮವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಅಪ್ಪಿತಪ್ಪಿ ಕೆಲವರು ಉನ್ನತ ಶಿಕ್ಷಣ ಪಡೆದಿದ್ದರೂ ಸಹ ಈ ವರ್ಗದ ಬಲಿಷ್ಠರ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ 75 ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿ ಇದ್ದರೂ ಸಹ ಈ ಸವಲತ್ತು ಈ ಜನವರ್ಗಗಳಿಗೆ ತಲುಪಲೇ ಇಲ್ಲ. ಆದ್ದರಿಂದ ಈ ವರ್ಗದ ತಳ ಸಮುದಾಯಗಳಿಂದ ನಮ್ಮ ಪಾಲನ್ನು ನಮಗೆ ನೀಡಿ ಎಂಬ ಕೂಗು ಕೇಳಿಬರುತ್ತಿದೆ.
ಚಾರಿತ್ರಿಕ ಹಿನ್ನೆಲೆ
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯ ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಶೇ. 75ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಆದರೆ ಯಾವ ಜಾತಿ/ಪಂಗಡಗಳಿಗೆ ಎಷ್ಟು ಎಂದು ವರ್ಗೀಕರಣ ಮಾಡಿರಲಿಲ್ಲ. ಸ್ವಾತಂತ್ರ್ಯಾ ನಂತರ 1950ರಲ್ಲಿ ಸಂವಿಧಾನವು ಜಾರಿಗೆ ಬಂದಾಗ ಪ.ಜಾ, ಮತ್ತು ಪ.ಪಂ.ಗಳನ್ನು ಒಟ್ಟಿಗೆ ಸೇರಿಸಿ ಶೇ.18ರಷ್ಟು ಮೀಸಲಾತಿಯನ್ನು ನೀಡಲಾಯಿತು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಮರು ಎಂಗಡಣೆಯ ನಂತರ ಪ.ಜಾ.ಗೆ ಶೇ.15ರಷ್ಟು ಮತ್ತು ಪ.ಪಂ.ಕ್ಕೆ ಶೇ.3ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು. ಮುಂದುವರೆದು ಹಿಂದುಳಿದ ವರ್ಗಗಳಿಗೆ 1958ರಿಂದ ರಾಜ್ಯದಲ್ಲಿ ಮೀಸಲಾತಿಯನ್ನು ನೀಡಲಾಯಿತು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಪ್ರವರ್ಗ-1ಕ್ಕೆ ಶೇ. 2, ಪ್ರವರ್ಗ-2ಎಗೆ ಶೇ. 16, ಪ್ರವರ್ಗ-2ಬಿಗೆ ಶೇ. 5, ಪ್ರವರ್ಗ-3ಎಗೆ ಶೇ. 4 ಮತ್ತು ಪ್ರವರ್ಗ-3ಬಿಗೆ ಶೇ. 5 ಎಂಬುದಾಗಿ ಮೀಸಲಾತಿ ನೀಡಲಾಗಿದೆ. ಹೀಗೆ ಕಾಲಕಾಲಕ್ಕೆ ರಾಜ್ಯದಲ್ಲಿ ಒಂದು ರೀತಿಯ ಒಳಮೀಸಲಾತಿಯನ್ನು ನೀಡುತ್ತಲೇ ಬರಲಾಗಿದೆ.
ಪಂಜಾಬ್, ಹರಿಯಾಣ, ಮಹಾರಾಷ್ಟ್ರ ತಮಿಳುನಾಡು ಇತ್ಯಾದಿ ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರವು ನ್ಯಾ. ರೋಹಿಣಿ ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿಯನ್ನು ನೀಡುವ ಬಗ್ಗೆ ವರದಿಯನ್ನು ಕೇಳಿದೆ. ಈ ಆಯೋಗವು ಕಾರ್ಯನಿರತವಾಗಿದೆ. ಸರ್ವೋಚ್ಛ ನ್ಯಾಯಾಲಯವು ಒಳಮೀಸಲಾತಿ ನೀಡುವ ವಿಷಯವನ್ನು 7 ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ. ಈಗ ವಿಚಾರಣಾ ಹಂತದಲ್ಲಿದೆ. ಈ ರೀತಿಯಾಗಿ ದೇಶದಲ್ಲಿ ಒಳಮೀಸಲಾತಿಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದೆ ಮತ್ತು ಅದು ಅನಿವಾರ್ಯವೂ ಹೌದು.
ಒಂದು ಕ್ರಾಂತಿಕಾರಕ ಆಂದೋಲನದಲ್ಲಿ ಪ್ರಜ್ಞಾವಂತ ಮತ್ತು ಸಮರ್ಥರಾದವರು ತೊಂದರೆ, ಸಂಕಷ್ಟಗಳನ್ನು ಸಹಿಸಿಕೊಳ್ಳಲು ಮುಂದೆ ಬರಬೇಕು ಮತ್ತು ಕಷ್ಟಗಳನ್ನು ಸ್ವೀಕರಿಸಲು ಹಾಗೂ ತ್ಯಾಗಗಳನ್ನು ಮಾಡಲು ಅವರೇ ಮೊದಲಾಗಬೇಕು. ಇಂಥ ಸಂಕಷ್ಟಗಳು ಹಾಗೂ ಆಂದೋಲನಗಳಿಂದ ಸಿಕ್ಕಂಥ ಪ್ರತಿಫಲವನ್ನು ತಮ್ಮಲ್ಲಿ ಯಾರು ಅತ್ಯಂತ ದುರ್ಬಲರೋ ಅಂಥವರಿಗೆ ಮೊದಲು ಕೊಡಬೇಕು. ಹಸಿದವರಿಗೆ ಮೊದಲು ಉಣಲು ಕೊಡಬೇಕು. ಚೆನ್ನಾಗಿ ಉಂಡವರು ಇನ್ನಷ್ಟು ಕಾಲ ಕಾಯಬಹುದಾಗಿದೆ. ಭಾರತದ ಸ್ವಾತಂತ್ರ್ಯ ಆಂದೋಲನದ ಧ್ಯೇಯವು ಇದೇ ಆಗಿತ್ತು. ಈ ಸಮಸ್ಯೆಯ ಬಗ್ಗೆ ಸರ್ಕಾರವು ಕೂಲಂಕಶವಾಗಿ ಚಿಂತಿಸಿ ಮತ್ತು ಚರ್ಚಿಸಿ ಒಂದು ಆರೋಗ್ಯಕರ ತೀರ್ಮಾನವನ್ನು ತೆಗೆದುಕೊಳ್ಳುವ ಅಗತ್ಯವಿದೆ.
ಸರ್ಕಾರದ ಮೀಸಲಾತಿಯ ಸೌಲಭ್ಯವನ್ನು ಪ.ಜಾ./ಪ.ಪಂ. ಮತ್ತು ಹಿಂದುಳಿದ ವರ್ಗದ ಹೆಸರಿನಲ್ಲಿ ಕೆಲವೇ ಜಾತಿಗಳವರು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಸಹಸ್ರಾರು ಜನರು ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿ ಭಿಕ್ಷೆಬೇಡಿ ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಈ ಮೀಸಲಾತಿ ನೀತಿಯಿಂದ ತಮಗೆ ನಿರಂತರವಾದ ಬಡತನವನ್ನು ಬಿಟ್ಟು ಬೇರೇನೂ ಸಿಕ್ಕುವುದಿಲ್ಲ ಎಂಬ ಆತಂಕ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿ ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾದದ್ದು. ಇದರಿಂದ ಈ ಜಾತಿಗಳಲ್ಲಿ ಆಂತರಿಕ ಘರ್ಷಣೆಗೆ ಕಾರಣವಾಗಬಹುದು. ಇವರಲ್ಲಿ ಹುಟ್ಟಿಕೊಂಡಿರುವ ಅಸಮಧಾನದತ್ತ ಗಮನಹರಿಸದಿದ್ದರೆ ಇವರ ಒಗ್ಗಟ್ಟಿಗೆ ಧಕ್ಕೆಯಾಗುವುದರಲ್ಲಿ ಸಂದೇಹವಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ವರ್ಗದ ಉತ್ತಮ ಸ್ಥಿತಿಯಲ್ಲಿ ಇರುವವರು, ತಮಗಿಂತ ಹೆಚ್ಚು ವಂಚಿತರಾದವರ ಬೇಡಿಕೆಯು ನ್ಯಾಯಯುತವಾದುದೆಂದು ಒಪ್ಪಿಕೊಂಡು ತಮ್ಮ ಸಮ್ಮತಿಯನ್ನು ನೀಡುವ ಮುಖಾಂತರ ಈ ಸಮುದಾಯಗಳ ಒಗ್ಗಟ್ಟನ್ನು ರಕ್ಷಿಸಬೇಕು.
2012ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರಕ್ಕೆ ವರದಿ ಮಂಡಿಸಿದೆ. 9 ವರ್ಷ ಕಳೆದ ನಂತರವೂ ಸರ್ಕಾರ ಇದನ್ನು ಪರಿಶೀಲನೆ ಮಾಡಿಲ್ಲ.