ಅನೇಕ ದೇಶಗಳಲ್ಲಿ ದುರ್ಬಲ ವರ್ಗಗಳಿಗೆ (ಉದಾ: ಅಮೆರಿಕಾದಲ್ಲಿ ನೀಗೊಗಳು, ದಕ್ಷಿಣ ಆಫ್ರಿಕದಲ್ಲಿ ಕಪ್ಪು ಜನರು, ಭಾರತದಲ್ಲಿ ಪ.ಜಾ. ಮತ್ತು ಪ.ಪಂ.ಗಳು, ಆಸ್ಟ್ರೇಲಿಯದಲ್ಲಿ ಮೂಲ ನಿವಾಸಿಗಳು ಇತ್ಯಾದಿ) ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ವಿಶೇಷ ಅವಕಾಶಗಳನ್ನು ನೀಡುವ ಕ್ರಮಗಳು ಜಾರಿಯಲ್ಲಿವೆ. ಸಮುದಾಯ – ಸಮುದಾಯಗಳ ನಡುವಿನ ತಾರತಮ್ಯವನ್ನು ತೆಗೆದು ಹಾಕಲು ಜಗತ್ತಿನಾದ್ಯಂತ ದೇಶಗಳು ಪ್ರಯತ್ನ ನಡೆಸುತ್ತಿವೆ. ವಿವಿಧ ದೇಶಗಳಲ್ಲಿ ಇಂತಹ ಕ್ರಮಗಳನ್ನು ವಿವಿಧ ಹೆಸರುಗಳಲ್ಲಿ ಕರೆಯುವುದು ರೂಢಿಯಲ್ಲಿದೆ. ನಮ್ಮಲ್ಲಿ ಇದನ್ನು ಮೀಸಲಾತಿ ಎಂದರೆ ಕೆಲವು ದೇಶಗಳಲ್ಲಿ ಇದನ್ನು ಸಕಾರಾತ್ಮಕ ತಾರತಮ್ಯ ಕ್ರಮಗಳು (ಪಾಸಿಟಿವ್ ಡಿಸ್‌ಕ್ರಿಮಿನೇಶನ್) ಎಂದು ಕರೆಯುತ್ತಾರೆ. ಕೆಲವೊಂದು ದೇಶಗಳಲ್ಲಿ ಇದಕ್ಕೆ ‘ನಾನ್ ಡಿಸ್ಕ್ರಿಮಿನೇಶನ್ ಕಾನೂನುಗಳು’ ಎಂಬ ಹೆಸರಿದೆ. ಈ ಬಗೆಯ ಕ್ರಮಗಳನ್ನು ‘ಅಫರ್‌ಮೆಟಿವ್ ಆಕ್ಷನ್’ ಎಂದು ಕರೆಯಬಹುದು.
ದಕ್ಷಿಣ ಆಫ್ರಿಕಾ ದೇಶದ ಸಂವಿಧಾನದ ಅನುಚ್ಛೇದ 9 ಮತ್ತು 36ರಲ್ಲಿ ಸಾಮಾಜಿಕ ತಾರತಮ್ಯಗಳನ್ನು ತೊಡೆದು ಹಾಕಲು ಸರ್ಕಾರವು ವಿಶೇಷ ಕಾನೂನುಗಳನ್ನು ರಚಿಸಬೇಕೆಂದು ಸೂಚಿಸಿದೆ. ಈ ಬಗ್ಗೆ ಅಲ್ಲಿನ ಸರ್ಕಾರ ಎರಡು ಕಾನೂನುಗಳನ್ನು ತಂದಿದೆ. 1. ದಿ ಎಂಪ್ಲಾಯ್‌ಮೆಂಟ್ ಈಕ್ವಾಲಿಟಿ ಆ್ಯಕ್ಸ್ 2. ದಿ ಪ್ರಮೋಷನ್ ಆಫ್ ಈಕ್ವಾಲಿಟಿ ಆಂಡ್ ಪ್ರಿವೆನ್‌ಶನ್ ಆಫ್ ಅನ್‌ಫೇರ್ ಡಿಸ್ಕ್ರಿಮಿನೇಶನ್ 2000. ಇದರ ಪ್ರಕಾರ ಜನಾಂಗ ಮತ್ತು ಹುಟ್ಟಿನ ಆಧಾರದ ಮೇಲೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರನ್ನು ಯಾವುದೇ ರೀತಿಯ ತಾರತಮ್ಯ, ಕಿರುಕುಳ, ದ್ವೇಷ ಕಾರುವ ಮಾತುಗಳಿಂದ ಶೋಷಣೆಗೆ ಒಳಪಡಿಸುವಂತಿಲ್ಲ. ಇದಲ್ಲದೆ ದಕ್ಷಿಣ ಆಫ್ರಿಕ ಸರ್ಕಾರವು ಅಲ್ಲಿನ ಮೂಲ ನಿವಾಸಿಗಳ ಒಳಿತಿಗಾಗಿ ಉದ್ಯೋಗದಲ್ಲಿ ಸಮಾನ ಅವಕಾಶ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ವಂಚಿತರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ‘ದಿ ಎಂಪ್ಲಾಯ್‌ಮೆಂಟ್ ಈಕ್ವಾಲಿಟಿ ಆ್ಯಕ್ಟ್’ ತಂದಿದೆ.
ಅಮೆರಿಕದಲ್ಲಿ ಸಿವಿಲ್ ರೈಟ್ಸ್ ಆಕ್ಟ್ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ, ಗುತ್ತಿಗೆ ನೀಡುವ ಸಂದರ್ಭದಲ್ಲಿ ಹಾಗೂ ಬಡ್ತಿ, ರಜೆ, ನಿವೃತ್ತಿ ವೇತನ ಮುಂತಾದ ವಿಷಯಗಳಲ್ಲಿ ಜನಾಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
ಈಗಾಗಲೇ ಹಿಂದಿನ ಭಾಗದಲ್ಲಿ ಹೇಳಿರುವಂತೆ ನಮ್ಮ ದೇಶದಲ್ಲಿ ಲಭ್ಯವಿರುವ ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಗೆ ದೊರೆಯುವ ಉದ್ಯೋಗಗಳ ಪ್ರಮಾಣ ಅತ್ಯಲ್ಪ. ಅವೂ ಕ್ಷೀಣಿಸುತ್ತಿವೆ. ಉದಾರವಾದ ಮತ್ತು ಖಾಸಗೀಕರಣ ಪ್ರಕ್ರಿಯೆಗಳಿಂದಾಗಿ ಉದ್ಯೋಗಗಳು ಹೆಚ್ಚು ಹೆಚ್ಚು ಸೃಷ್ಟಿಯಾಗುತ್ತಿವೆ. ಸರಿಸುಮಾರು ಶೇ.98ರಷ್ಟು ಉದ್ಯೋಗಗಳು ಖಾಸಗಿ ಕ್ಷೇತ್ರಗಳಲ್ಲಿವೆ. ಆದರೆ ಖಾಸಗಿ ವಲಯದ ಉದ್ದಿಮೆಗಳು ಸಕಾರಾತ್ಮಕ ತಾರತಮ್ಯ ನೀತಿಗಳನ್ನು ಸ್ವಯಂ ಪಾಲಿಸುತ್ತಿಲ್ಲ ಮತ್ತು ಇಲ್ಲಿ ಮೀಸಲಾತಿ ನೀಡುವ ಬಗ್ಗೆ ಯಾವುದೇ ಶಾಸನವೂ ಇಲ್ಲ. ಅನೇಕ ಅಧ್ಯಯನಗಳು ತೋರಿಸುತ್ತಿರುವಂತೆ ಖಾಸಗಿ ಕ್ಷೇತ್ರದ ಉದ್ದಿಮೆಗಳಲ್ಲಿ, ಕಚೇರಿಗಳಲ್ಲಿ, ವಾಣಿಜ್ಯೋದ್ಯಮಗಳಲ್ಲಿ, ಖಾಸಗಿ ಬ್ಯಾಂಕುಗಳ ಕಾರ್ಮಿಕ ವರ್ಗದಲ್ಲಿ ಹಾಗೂ ಉನ್ನತ ಹುದ್ದೆಗಳಲ್ಲಿ ಮೇಲ್ವರ್ಗದ ಜಾತಿಯ ಜನರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಉದಾ: ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆಯು 2019ರಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಂತೆ ಸಮೀಕ್ಷೆ ಮಾಡಿದ ಖಾಸಗಿ ಸುದ್ದಿ ಸಂಸ್ಥೆಗಳಲ್ಲಿನ ಒಟ್ಟು 121 ಉನ್ನತ ಹುದ್ದೆಗಳ ಪೈಕಿ 106 (ಶೇ.87.6)ಹುದ್ದೆಗಳನ್ನು ಉನ್ನತ ಜಾತಿ ವರ್ಗದವರು ಆಕ್ರಮಿಸಿಕೊಂಡಿದ್ದಾರೆ. ಇದೇ ರೀತಿಯ ಫಲಿತಗಳು ನ್ಯೂಸ್‌ಲಾಂಡ್ರಿ ಸಂಸ್ಥೆಯು ಸುದ್ದಿ ಸಂಸ್ಥೆಗಳು ಜಾತಿವರ್ಗ ಸ್ವರೂಪದ ಬಗ್ಗೆ ನಡೆಸಿದ ಅಧ್ಯಯನದಲ್ಲಿಯೂ ಎಲ್ಲ ಉನ್ನತ ಹುದ್ದೆಗಳು ಉನ್ನತ ಜಾತಿ ವರ್ಗಗಳಿಗೆ ಸೇರಿರುವುದು ಕಂಡುಬಂದಿದೆ (ನೋಡಿ: ‘ಹೂ ಟೆಲ್ಸ್ ಸ್ಟೋರೀಸ್ ಮ್ಯಾಟರ್’ ರೆಪ್ರೆಸೆಂಟೇಶನ್ ಆಫ್ ಮಾರ್ಜಿನಲೈಸ್ಡ್ ಗ್ರೂಪ್ಸ್ ಇನ್ ಇಂಡಿಯನ್ ನ್ಯೂಸ್ ರೂಮ್ಸ್, ಆಕ್ಸ್‌ಫಾಮ್ 2019). ಖಾಸಗಿ ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನದ ಬೃಹತ್ ಕಂಪನಿಗಳು, ವಾಣಿಜ್ಯೋದ್ಯಮ, ಬ್ಯಾಂಕಿಂಗ್, ಪ್ರವಾಸೋದ್ಯಮ, ಹೋಟೆಲ್ ಮುಂತಾದ ಕ್ಷೇತ್ರಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಉದ್ಯೋಗಗಳ ಚಿತ್ರವು ಇದಕ್ಕಿಂತ ಭಿನ್ನವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ.
ಸಾಮಾಜಿಕ ನ್ಯಾಯವು ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಖಾಸಗಿ ವಲಯಕ್ಕೂ ಇದರ ಜವಾಬ್ದಾರಿಯಿದೆ. ಸಾರ್ವಜನಿಕ ವಲಯವಿಲ್ಲದೆ ಖಾಸಗಿ ವಲಯ ಅಭಿವೃದ್ಧಿಯಾಗುವುದು ಸಾಧ್ಯವಿಲ್ಲ. ಸಮಾಜದ ಬೆಂಬಲವಿಲ್ಲದೆ ಅವುಗಳ ಅಭಿವೃದ್ಧಿ ಸಾಧ್ಯವಿಲ್ಲ. ಗಾಳಿ, ಬೆಳಕು, ನೀರು, ಭೂಮಿ, ಮರ-ಗಿಡ, ಶ್ರಮ, ರಕ್ಷಣೆ, ಭದ್ರತೆ ಮುಂತಾದವು. ಇವುಗಳಿಗೆ ಸಮಾಜದಿಂದ ಮತ್ತು ಸರ್ಕಾರದಿಂದ ದೊರೆಯುತ್ತವೆ. ಖಾಸಗಿ ವಲಯವು ನಿರ್ವಾತದಲ್ಲಿ ಬದುಕುವುದು ಸಾಧ್ಯವಿಲ್ಲ. ದುಡಿಯುವ ವರ್ಗವು ಖಾಸಗಿ ಕೈಗಾರಿಕೆಗಳು ಉತ್ಪಾದಿಸುವ ಸರಕು-ಸರಂಜಾಮುಗಳನ್ನು ಖರೀದಿಸದಿದ್ದರೆ ಅವು ಹೇಗೆ ಉಳಿಯುತ್ತವೆ? ಈ ಉತ್ಪನ್ನಗಳನ್ನು ಖರೀದಿಸಲು ಜನರ ಕೈಯಲ್ಲಿ ಹಣ ಬೇಕು. ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ ಅಷ್ಟರಮಟ್ಟಿಗೆ ಮಾರುಕಟ್ಟೆಯ ವ್ಯಾಪ್ತಿಯು ಸೀಮಿತವಾಗುತ್ತದೆ. ಅಭಿವೃದ್ಧಿಯ ಮೂಲ ಬಂಡವಾಳ ಮಾತ್ರವಲ್ಲ. ಅದರಷ್ಟೇ ಅಥವಾ ಅದಕ್ಕಿಂತ ಮುಖ್ಯವಾಗಿ ಇಲ್ಲಿ ಶ್ರಮಶಕ್ತಿಯ ಪಾತ್ರವೂ ಇದೆ. ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ಬಗ್ಗೆ ನಾವು ಗಂಭೀರವಾಗಿ ಚಿಂತಿಸುವ ಕಾಲ ಈಗ ಬಂದಿದೆ.
ದೇಶದಲ್ಲಿ ನಾಗರಿಕರು ಕೊಡುವ ಕೋಟ್ಯಾಂತರ ರೂಪಾಯಿಗಳ ತೆರಿಗೆ ಹಣವನ್ನು ಸರ್ಕಾರವು ಖಾಸಗಿ ಉದ್ಯಮಗಳ ಪ್ರೋತ್ಸಾಹಕ್ಕೆ ಬಳಸುತ್ತಿದೆ. ಇಲ್ಲಿನ ನೆಲ, ಜಲ, ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಗಣಿ ಸಂಪನ್ಮೂಲಗಳು, ಅರಣ್ಯ ಸಂಪನ್ಮೂಲ ಮುಂತಾದವುಗಳನ್ನು ಬಳಸಿಕೊಂಡೇ ಖಾಸಗಿ ಕ್ಷೇತ್ರವು ಬೆಳೆದಿದೆ. ಇದಲ್ಲದೆ ಸರ್ಕಾರವು ನೀಡುವ ಅನುದಾನ, ಸಬ್ಸಿಡಿ, ವಿಶೇಷ ತೆರಿಗೆ ರಿಯಾಯಿತಿ, ರಸ್ತೆ, ರೈಲು, ಸಾರಿಗೆ ಸೌಲಭ್ಯ ಮುಂತಾದವುಗಳ ಅನುಕೂಲಗಳನ್ನೂ ಅದು ಪಡೆಯುತ್ತದೆ. ಆದ್ದರಿಂದ ಖಾಸಗಿ ಕ್ಷೇತ್ರಕ್ಕೂ ಸಾಮಾಜಿಕ ಜವಾಬ್ದಾರಿಯಿದೆ. ಸಂವಿಧಾನದತ್ತ ಸಾಮಾಜಿಕ ನ್ಯಾಯದ ಆಶಯಗಳನ್ನು ಈಡೇರಿಸುವ ಕರ್ತವ್ಯವನ್ನು ಖಾಸಗಿ ಕ್ಷೇತ್ರ ನಿರ್ವಹಿಸಬೇಕಾಗಿದೆ ಎಂಬ ಧ್ವನಿ ದೇಶದಲ್ಲಿ ಕೇಳಿಬರುತ್ತಿದೆ.
ಖಾಸಗಿ ವಲಯಕ್ಕೆ ಮೀಸಲಾತಿ ಕಾರ್ಯಕ್ರಮವನ್ನು ವಿಸ್ತರಿಸುವ ಬಗ್ಗೆ ಅನೇಕ ಸಮಸ್ಯೆಗಳಿವೆ. ಮೊದಲನೆಯದಾಗಿ ಇಲ್ಲಿ ಕಾನೂನುಗಳ ತೊಡಕುಗಳಿವೆ. ಬಂಡವಾಳ ಹೂಡಿಕೆ ಪ್ರವೃತ್ತಿ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬ ಪ್ರಶ್ನೆಯಿದೆ. ಮಾರುಕಟ್ಟೆ ಸ್ಪರ್ಧೆಯ ಸಮಸ್ಯೆಯಿದೆ. ರಾಜ್ಯಮಟ್ಟದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಒಂದು ರಾಜ್ಯವು ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಿಸಿದರೆ ಅಲ್ಲಿಂದ ಬಂಡವಾಳ ಬೇರೆ ರಾಜ್ಯಗಳಿಗೆ ಪಲ್ಲಟವಾಗಬಹುದು. ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಣೆ ಪ್ರಶ್ನೆಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ಧರಿಸಬೇಕು. ಈ ಎಲ್ಲ ಸಮಸ್ಯೆಗಳನ್ನು, ತೊಡಕುಗಳನ್ನು, ಸಂವಿಧಾನದ ಪ್ರಶ್ನೆಯನ್ನು ಕುರಿತಂತೆ ಅಧ್ಯಯನ ಮಾಡಿ ವರದಿ ನೀಡುವಂತೆ ಸರ್ಕಾರವು ತಜ್ಞರ ಸಮಿತಿಯನ್ನು ನೇಮಿಸಬಹುದು. ಈ ಬಗ್ಗೆ ದೇಶದಲ್ಲಿ ಪಾರದರ್ಶಕ ರೀತಿಯಲ್ಲಿ ಚರ್ಚೆ ನಡೆಯಬೇಕು. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ನಿರ್ಣಯ ತೆಗೆದುಕೊಳ್ಳಬೇಕೆಂಬುದು ನನ್ನ ಆಶಯ.