October 1, 2023 8:12 am

ಜಾತಿ ಗಣತಿಯಿಂದ ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಬಹಿರಂಗವಾಗಬಲ್ಲದು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಜನಗಣತಿ ಸರ್ಕಾರಕ್ಕೆ ಅಗತ್ಯ ಮಾಹಿತಿಯನ್ನು ಜಒದಗಿಸುತ್ತದೆ. ಇದರಿಂದ ಸರ್ಕಾರ ತನ್ನ ನೀತಿ ಮತ್ತು ಕಾರ್ಯಯೋಜನೆಗಳನ್ನು ತದನಂತರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಇವುಗಳು ಯಾವ ಮಟ್ಟಿಗೆ ಜಾರಿಯಾಗಿವೆ, ಯಾಕೆ ಜಾರಿಯಾಗಿವೆ, ಯಾರು ಯಾರಿಗೆ ತಲುಪಿವೆ ಇತ್ಯಾದಿಯಾಗಿ ಮೌಲ್ಯಮಾಪನ ಮಾಡಲು ಜನಗಣತಿ ನೆರವಾಗುತ್ತದೆ. ಇಂದು ಜಗತ್ತಿನಾದ್ಯಂತ ಬಹುಪಾಲು ದೇಶಗಳು ಜನಗಣತಿಯನ್ನು ನಡೆಸಿ ತಮ್ಮ ನಿರೂಪಣೆ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತವೆ.

ಋಗ್ವೇದದಲ್ಲಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, ಅಕ್ಬರ್ ಬಾದ್‌ಶಾಹನ ಅನ್-ಇ-ಅಭಾರಿಯಲ್ಲಿ ಜನಗಣತಿಯ ಬಗ್ಗೆ ಪ್ರಸ್ತಾಪವಿದೆ. ಬ್ರಿಟಿಷರ ಆಡಳಿತದಲ್ಲಿ 1881ರಿಂದ 1931ರವರೆಗೆ ಜನಗಣತಿ ಹಾಗೂ ಜಾತಿಗಣತಿಯನ್ನು ನಡೆಸಲಾಯಿತು. ಸ್ವಾತಂತ್ರ್ಯ ಬಂದ ನಂತರ ಭಾರತ ಸರ್ಕಾರ 1948ರಲ್ಲಿ ಜನಗಣತಿ ಕಾಯ್ದೆಯನ್ನು ಜಾರಿಗೆ ತಂದಿತು. ನಮ್ಮ ಸಂವಿಧಾನದ ಅನುಚ್ಛೇದ 246ರಲ್ಲಿ ಜನಗಣತಿ ನಡೆಸುವುದನ್ನು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇಂದು ಕೇಂದ್ರ ಸರ್ಕಾರ ಮಾತ್ರ ಜನಗಣತಿಯನ್ನು ನಡೆಸಬಹುದೇ ಹೊರತು ರಾಜ್ಯ ಸರ್ಕಾರಗಳಲ್ಲಿ ಜನಗಣತಿ ನಡೆಸುವ ಅಧಿಕಾರವಿಲ್ಲ.

ಪತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಮ್ಮ ದೇಶದಲ್ಲಿ ನಡೆಯುತ್ತದೆ. 1951ರಿಂದ 2011ರವರೆಗೆ ನಡೆದಿರುವ ಜನಗಣತಿಯ ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜಾತಿಗಣತಿ ನಡೆಸಲಾಗಿದೆ.

1992ರಲ್ಲಿ ಮಂಡಲ್ ವರದಿ ಜಾರಿಗೆ ಬಂದು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲಾಯಿತು. ನಂತರದ ದಿನಗಳಲ್ಲಿ ಹಿಂದುಳಿದ ವರ್ಗಗಳ ಜಾತಿಗಣತಿ ನಡೆಸಬೇಕೆಂಬ ಧ್ವನಿ ಕೇಳಿ ಬಂದಿತು. ಆದರೆ ಕೇಂದ್ರ ಸರ್ಕಾರ ಒಂದಲ್ಲಾ ಒಂದು ನೆಪ ಒಡ್ಡಿ ಜಾತಿಗಣತಿ ನಡೆಸಲಿಲ್ಲ. ಆದರೆ 1968ರಲ್ಲಿ ಕೇರಳ ಸರ್ಕಾರ ಜಾತಿ ಸಮೀಕ್ಷೆ ನಡೆಸಿ ಲಭ್ಯವಾದ ಮಾಹಿತಿಯನ್ನು ಬಳಸಿ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿರುವುದು ಇಂದು ಇತಿಹಾಸ. ಅದೇ ರೀತಿ ನ್ಯಾಷನಲ್ ಸ್ಯಾಂಪಲ್ ಸರ್ವೇ, ನ್ಯಾಷನಲ್ ಬಾಮಿಲೆಪ್ ಹೆಲ್ತ್‌ ಸರ್ವೇ ಮತ್ತು ಅಮೆಂಡ್‌ಮೆಂಟ್ ಆಫ್ ಅಗ್ರಿಕಲ್ಬರಲ್ ಹೋಮ್ ಹೋಲ್ಡ್ ಕೂಡ ಜಾತಿ ಸಮೀಕ್ಷೆಯನ್ನು ನಡೆಸಿವೆ.

2011ರಲ್ಲಿ ಕೇಂದ್ರ ಸರ್ಕಾರ ಸುಮಾರು 5000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿದೆ. ಆದರೆ ಕೇಂದ್ರ ಸರ್ಕಾರ ಹಲವು ನೆಪಗಳನ್ನು ನೀಡಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಸುಮಾರು 170 ಕೋಟಿ ರೂಪಾಯಿಗಳ ನೆರವಿನಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಜಾತಿ ಸಮೀಕ್ಷೆಯನ್ನು ನಡೆಸಿದೆ. ಆದರೆ ಕರ್ನಾಟಕ ಸರ್ಕಾರ ಈ ಸಮೀಕ್ಷೆಯ ವರದಿಯನ್ನು ಪಡೆಯಲು ಹಿಂದೆ ಸರಿಯುತ್ತಿದೆ. ಈ ವಿಷಯ ಇಂದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಭಾರತದ ಮಾನವ ಶಾಸ್ತ್ರ ಸರ್ವೇಕ್ಷಣಾ ಇಲಾಖೆಯ ಅಧ್ಯಯನದ ಪ್ರಕಾರ ದೇಶದಲ್ಲಿ 4,635 ವಿವಿಧ ಜಾತಿಗಳು ಮತ್ತು ಉಪಜಾತಿಗಳಿವೆ. ಜಾತಿ ಆಧಾರಿತ ಅಸಮಾನತೆ ಎಲ್ಲ ಕ್ಷೇತ್ರಗಳಿಗೂ ಹಬ್ಬಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಅಸಮಾನತೆಯನ್ನು ಕಾಣಬಹುದು. ನಮ್ಮ ಸಂವಿಧಾನ ಜಾರಿಗೆ ಬಂದ ನಂತರ ಕೆಳಜಾತಿಗಳು ಒಂದಷ್ಟು ಪ್ರಗತಿಯನ್ನು ಸಾಧಿಸಿಕೊಂಡಿವೆ. ಈ ವರ್ಗದ ಜನ ರಾಜಕೀಯ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಅವಕಾಶ ಪಡೆದುಕೊಂಡು ಮುಖ್ಯವಾಹಿನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಇಷ್ಟೆಲ್ಲ ಸಾಧನೆಯಾಗಿದ್ದರೂ ಅಲೆಮಾರಿಗಳಿಗೆ, ಅರೆ ಅಲೆಮಾರಿಗಳಿಗೆ, ಆದಿವಾಸಿಗಳಿಗೆ, ದೇವದಾಸಿಯರಿಗೆ, ಕೊಳಚೆ ನಿವಾಸಿಗಳಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಹಾಗೂ ಅನೇಕ ಸಣ್ಣಸಣ್ಣ ಹಿಂದುಳಿದ ಜಾತಿಗಳಿಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಾಗಲೀ, ಕಲ್ಯಾಣ ಕಾರ್ಯಕ್ರಮಗಳಾಗಲೀ, ಮೀಸಲಾತಿಯ ಸೌಲಭ್ಯಗಳಾಗಲೀ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಇಂದಿಗೂ ಅನೇಕರು ಭಿಕ್ಷಾಟನೆ ಮೂಲಕ ಬದುಕನ್ನು ಸಾಗಿಸುತ್ತಿರುವ ದುಃಸ್ಥಿತಿಯೂ ಇದೆ.

ದೇಶದ ಪರಿಸ್ಥಿತಿ ಹೀಗಿರುವಾಗ ಜಾತಿಗಣತಿ ನಡೆಸುವುದರಿಂದ ಯಾವಯಾವ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ, ಅವರ ಶೈಕ್ಷಣಿಕ, ಉದ್ಯೋಗ, ವಸತಿ, ರಾಜಕೀಯ ಪ್ರಾತಿನಿಧ್ಯ ಇಷ್ಟಲ್ಲದೇ ಆರ್ಥಿಕ ಮತ್ತು ಮಾನವ ಅಭಿವೃದ್ಧಿ ಸ್ಥಿತಿಗತಿಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ಸರ್ಕಾರಗಳು ಸರಿಯಾದ ನೀತಿಯನ್ನು ರೂಪಿಸಿ ಈ ವರ್ಗದ ಜನರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಾಯವಾಗುತ್ತದೆ. ಆದ ಕಾರಣ ಜಾತಿಗಣತಿ ಅತ್ಯಂತ ಅಗತ್ಯವಾಗಿ ಬೇಕೇಬೇಕು.

ಜಾತಿ ಗಣತಿ ನಡೆಸಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣಗಳು ಸಕಾರಣಗಳಲ್ಲ. ಇದು ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಜಾತಿಗಣತಿಯಿಂದ ಜಾತಿ ತಾರತಮ್ಯ ಹೆಚ್ಚಾಗುತ್ತದೆ ಎಂದು ಕೆಲವರ ವಾದವಾಗಿದೆ. ಕಳೆದ 90 ವರ್ಷಗಳಿಂದ ನಮ್ಮ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಆದರೆ ಜಾತೀಯತೆ ಹೆಚ್ಚಾಗಿದೆ. ಇದಕ್ಕೆ ಕಾರಣ ರಾಜಕೀಯ ಸ್ವಾರ್ಥ ಮತ್ತು ಚುನಾವಣಾ ಕಣದಲ್ಲಿ ಜಾತಿಯನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು.

ಕರ್ನಾಟಕ ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷೆ ವರದಿಯನ್ನು ಪಡೆದು ಬಹಿರಂಗಗೊಳಿಸಬೇಕು. ಇದರಿಂದ ಲಭ್ಯವಾಗುವ ಮಾಹಿತಿಯನ್ನು ಬಳಸಿ ನೀತಿಯನ್ನು ಮತ್ತು ಯೋಜನೆಗಳನ್ನು ಮುಖ್ಯವಾಗಿ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ವಂಚಿತರ ನೆರವಿಗೆ ಮುಂದಾಗಬೇಕೆಂಬುದು ನನ್ನ ಆಶಯ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು