ಸಂವಿಧಾನಕ್ಕೆ 103ನೇ ತಿದ್ದುಪಡಿಯ ಮುಖಾಂತರ 2019ರಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಶೇ. 10ರಷ್ಟು ಮೀಸಲಾತಿ ಪಡೆಯಲು ಮಾನದಂಡವೆಂದರೆ ವಾರ್ಷಿಕ ವರಮಾನ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು ಅಥವಾ 5 ಎಕರೆಗಿಂತ ಕಡಿಮೆ ಜಮೀನು ಇರಬೇಕು ಅಥವಾ 1000 ಚದರ ಅಡಿಗಿಂತ ಕಡಿಮೆ ಮನೆ ಇರಬೇಕು. ಭಾರತ ದೇಶದಲ್ಲಿ ರೂ. 8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಕುಟುಂಬಗಳು ಶೇ.95, 5 ಎಕರೆಗಿಂತ ಕಡಿಮೆ ಜಮೀನು ಇರುವ ಕುಟುಂಬಗಳು ಶೇ. 86 ಮತ್ತು 1000 ಚದರ ಅಡಿಗಿಂತ ಕಡಿಮೆ ವಸತಿ ಮನೆ ಇರುವವರು ಶೇ. 80 ಕುಟುಂಬಗಳು. ಈ ಮಾನದಂಡಗಳ ಪ್ರಕಾರ ಶೇ. 90ರಷ್ಟು ಮೇಲ್ದಾತಿಯ ಜನರು ಒಳಪಡುತ್ತಾರೆ. ಪ್ರಸ್ತುತ ಶೇ. 10ರಷ್ಟು ಮೀಸಲಾತಿ ಪಡೆಯಲು ಸ್ಪರ್ಧೆ ಹೆಚ್ಚುತ್ತದೆ. ಹೊರತು ನಿಜವಾದ ಬಡವರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುವುದಿಲ್ಲ.
ಸಾಮಾಜಿಕ ನ್ಯಾಯವನ್ನು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಂದುವರಿದು ಅನುಚ್ಛೇದ 15, 16, 17 ಮತ್ತು 340ರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಶಿಕ್ಷಣದಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವಿಕೆ, ಮೀಸಲಾತಿಯನ್ನು ನೀಡಲು ಮಾನದಂಡವಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು, ಸಮಾನತೆಯ ಸಾಧನೆ, ವಂಚಿತರಿಗೆ ಒಂದು ಪ್ರಾತಿನಿಧ್ಯ ಮತ್ತು ಎಲ್ಲಾ ರೀತಿಯ ಪಕ್ಷಪಾತ ಮತ್ತು ಬಹಿಷ್ಕಾರದ ವಿರುದ್ಧ ಸಾಧನೆ, ಶೇ. 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೆ ನೀಡಿರುವುದು ಸಂವಿಧಾನ ಮತ್ತು ಅದರ ಅಶಯವಾದ ಸಾಮಾಜಿಕ ನ್ಯಾಯದ ಮೂಲ ತತ್ವಕ್ಕೆ ವಿರುದ್ಧವಾದದ್ದು.
ಉನ್ನತ ಶಿಕ್ಷಣವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರ ದಿನೇದಿನೇ ಈ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿರುವ ಆರ್ಥಿಕ ನೆರವನ್ನು ಕಡಿತಗೊಳಿಸುತ್ತಿದೆ. ಕೇಂದ್ರ ಸರ್ಕಾರ ಈ ಸಂಸ್ಥೆಗಳಿಗೆ ಹೆಚ್ಚುವರಿ ಅನುದಾನವನ್ನು ನೀಡಿ ಶೇ. 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಪ್ರಯತ್ನಿಸಬಹುದು. ಆದರೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ಯಾರು ನೀಡುತ್ತಾರೆ? ಪ್ರವೇಶ ಅವಕಾಶಗಳನ್ನು ಹೆಚ್ಚಿಸಬಹುದು. ಆದರೆ ಅದರ ಪರಿಣಾಮವಾಗಿ ಹೆಚ್ಚುವರಿ ಶಿಕ್ಷಕರು, ಮೂಲಸೌಕರ್ಯಗಳು, ಗ್ರಂಥಾಲಯಗಳು ಇತ್ಯಾದಿಗಳು ಬೇಕಾಗುತ್ತವೆ. ಇವುಗಳ ವೆಚ್ಚವನ್ನು ಯಾರು ಭರಿಸುತ್ತಾರೆ? ಈಗಾಗಲೇ ನಮ್ಮ ದೇಶದ ಉನ್ನತ ಶಿಕ್ಷಣ ಗುಣಾತ್ಮಕತೆಯ ಕೊರತೆಯಿಂದ ನರಳುತ್ತಿದೆ. ಶೇ. 10ರಷ್ಟು ಮೀಸಲಾತಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ. ಇದರಿಂದ ನಿಜವಾದ ಮೇಲ್ಜಾತಿಯ ಬಡವರಿಗೆ ಸಹಾಯವಾಗುತ್ತದೆಂಬುದು ಕೇವಲ ಒಂದು ಭ್ರಮೆ.
ದೇಶದಲ್ಲಿ ಇಂದು ಶೇ. 26ರಷ್ಟು ಅರ್ಹ ಯುವಜನತೆ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಉಳಿದ ಶೇ. 74ರಷ್ಟು ಯುವಜನತೆಗೆ ಉನ್ನತ ಶಿಕ್ಷಣ ಸಿಗುತ್ತಿಲ್ಲ. ಈ ಪರಿಸ್ಥಿತಿಗೆ ಅನೇಕ ಕಾರಣಗಳಿವೆ. ಪ್ರಮುಖವಾದ ಕಾರಣವೆಂದರೆ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಇರುವುದು. ಇದರ ಪರಿಣಾಮವಾಗಿ ದೊಡ್ಡ ಪ್ರಮಾಣದ ಸೀಟುಗಳು ಉನ್ನತ ಶಿಕ್ಷಣದಲ್ಲಿ ಖಾಲಿ ಇರುವಾಗ ಶೇ. 10ರಷ್ಟು ಮೀಸಲಾತಿ ನೀಡಿದರೂ ಮೇಲ್ಜಾತಿಯ ಬಡವರು ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವೇ. ಆದ್ದರಿಂದ ಶೇ. 10ರಷ್ಟು ಮೀಸಲಾತಿ ಯಾವ ಮತ್ತು ಯಾರ ಪ್ರಯೋಜನಕ್ಕೆ?
ದೇಶದ ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಶೇ. 2ರಷ್ಟು ಸರ್ಕಾರಿ ಕ್ಷೇತ್ರ. ಉಳಿದ ಶೇ. 98ರಷ್ಟು ಖಾಸಗಿ ಕ್ಷೇತ್ರದ್ದು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ. ಮಿಲಿಟರಿ, ಸಂವಿಧಾನಾತ್ಮಕ ನ್ಯಾಯಾಲಯಗಳು, ರಾಜ್ಯಸಭೆ, ವಿಧಾನ ಪರಿಷತ್ತು, ಮಂತ್ರಿಮಂಡಳ, ನಿಗಮಗಳು, ಪ್ರಾಧಿಕಾರಗಳು, ಸಂಶೋಧನೆ, ಇತ್ಯಾದಿಗಳಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಲಕ್ಷಗಟ್ಟಲೆ ಮಂಜೂರಾದ ಉದ್ಯೋಗಗಳು ಖಾಲಿ ಬಿದ್ದಿವೆ. ಗುತ್ತಿಗೆ ಕಾರ್ಮಿಕ ಪದ್ಧತಿ ಮತ್ತು ಹೊರಗುತ್ತಿಗೆ ಪದ್ಧತಿ ಜಾರಿಗೆ ತಂದು ಮೀಸಲಾತಿಯ ಅವಕಾಶಗಳನ್ನು ಕಡಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಜಾತಿ ಬಡವರಿಗೆ ಶೇ. 10ರಷ್ಟು ಮೀಸಲಾತಿ ಎಷ್ಟು ಮಾತ್ರ ಉಪಯೋಗವಾಗುತ್ತದೆ?
ಪ್ರತಿವರ್ಷ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಸುಮಾರು 7 ಲಕ್ಷ ಉದ್ಯೋಗಿಗಳು ನಿವೃತ್ತಿಯಾಗುತ್ತಾರೆ. ಖಾಲಿಯಾದ ಸ್ಥಾನಗಳ ಪೈಕಿ ಶೇ. 50ರಷ್ಟು ಅಂದರೆ 3 ಲಕ್ಷ 50 ಸಾವಿರ ಉದ್ಯೋಗಗಳು ಸಾಮಾನ್ಯ ವರ್ಗದ ಪಾಲಿಗೆ ಬರುತ್ತವೆ. ಈ 3 ಲಕ್ಷ 50 ಸಾವಿರದಲ್ಲಿ ಶೇ. 10ರಷ್ಟು ಅಂದರೆ 35 ಸಾವಿರ ಉದ್ಯೋಗ ಅವಕಾಶಗಳು ಮೇಲ್ಜಾತಿಯ ಬಡವರಿಗೆ ಲಭ್ಯವಾಗುತ್ತವೆ ಮತ್ತು ಇವುಗಳನ್ನು ಇಡೀ ದೇಶದ ಜನರಿಗೆ ನೀಡಲಾಗುತ್ತದೆ. ಆದರೆ ದೇಶದಲ್ಲಿ ಇಂದು ಸುಮಾರು 7 ಕೋಟಿ ನಿರುದ್ಯೋಗಿಗಳು ಇದ್ದಾರೆ. ಪ್ರತಿ ತಿಂಗಳು ಸುಮಾರು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕು. ಆದರೆ ಕಳೆದ 3 ವರ್ಷಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಶೇ. 10ರಷ್ಟು ಮೀಸಲಾತಿ ಮೇಲ್ಜಾತಿಯ ಬಡವರ ಸಮಸ್ಯೆಗಳಿಗೆ ಪರಿಹಾರವೆನ್ನಬಹುದೆ?
ಸಂವಿಧಾನದ 103ನೇ ತಿದ್ದುಪಡಿ ತರುವುದಕ್ಕೆ ಮುಂಚೆ ಸರ್ಕಾರ ಯಾವುದೇ ಅಧ್ಯಯನವನ್ನು ನಡೆಸಲಿಲ್ಲ ಮತ್ತು ಮಾಹಿತಿಯನ್ನು ಸಂಗ್ರಹಿಸಲಿಲ್ಲ. ಪಾರ್ಲಿಮೆಂಟಿನ ಎಲ್ಲಾ ಸತ್‌ಸಂಪ್ರದಾಯಗಳನ್ನು ಬದಿಗೊತ್ತಿ ಒಂದೇ ದಿವಸದಲ್ಲಿ ಲೋಕಸಭೆಯಲ್ಲಿ ಮತ್ತು ಮರುದಿವಸವೇ ರಾಜ್ಯಸಭೆಯಲ್ಲಿ ತಿದ್ದುಪಡಿಯನ್ನು ಅಂಗೀಕರಿಸಲಾಯಿತು. ಮೂರನೇ ದಿವಸವೇ ರಾಷ್ಟ್ರಪತಿಗಳು ಈ ತಿದ್ದುಪಡಿಗೆ ತಮ್ಮ ಅಂಕಿತವನ್ನು ಹಾಕಿದರು. ಬಹುಪಾಲು ವಿರೋಧ ಪಕ್ಷಗಳೂ ಸಮರ್ಥ ಚರ್ಚೆಯನ್ನು ನಡೆಸಲಿಲ್ಲ ಮತ್ತು ಸಮಸ್ಯೆಗೆ ವೈಜ್ಞಾನಿಕ ಪರಿಹಾರಗಳನ್ನು ಸೂಚಿಸುವಲ್ಲಿ ವಿಫಲವಾದವು. ಒಟ್ಟಾರೆ ಈ ತಿದ್ದುಪಡಿಯ ಪ್ರಕ್ರಿಯೆ ಪಾರ್ಲಿಮೆಂಟರಿ ಪದ್ಧತಿಗೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಆರೋಗ್ಯಕರ ಬೆಳವಣಿಗೆಯಲ್ಲ.
ನನ್ನ ವಿದ್ಯಾರ್ಥಿ ಜೀವನದಿಂದಲೂ ನಾನು ಎಲ್ಲಾ ಜಾತಿಯ ಬಡವರ ಪರವಾಗಿ ಧ್ವನಿ ಎತ್ತಿದವನು. ಮೀಸಲಾತಿ ಬಡತನ ನಿವಾರಣಾ ಕಾರ್ಯಕ್ರಮವಲ್ಲ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸುಮಾರು ಶೇ. 70ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದರು. ಆದರೆ ಇಂದು ಬಡವರ ಸಂಖ್ಯೆಯನ್ನು ಶೇ. 21ಕ್ಕೆ ಇಳಿಸಿದ್ದೇವೆ. ಇದು ಸಾಧ್ಯವಾಗಿದ್ದು ಸರ್ಕಾರಗಳು ಜಾರಿಗೆ ತಂದ ಅನೇಕ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮವಾಗಿ. ಎಲ್ಲಾ ಜಾತಿಯ ಬಡವರ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಸರ್ಕಾರ ತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಹೆಚ್ಚು ಶಿಕ್ಷಣದ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಅವು ಎಲ್ಲ ಬಡವರಿಗೆ ಸಿಗುವಂತೆ ಮಾಡುವುದು.