ದೇಶದ ಜನರಿಗೆ ಉದ್ಯೋಗವನ್ನು ಒದಗಿಸುವುದು ಸರ್ಕಾರದ ನೀತಿಯಾಗಿ ಉಳಿದಿಲ್ಲ. ಮೀಸಲಾತಿಯನ್ನು ಅಪ್ರಸ್ತುತಗೊಳಿಸುವ ಕ್ರಮಗಳನ್ನು ಸರ್ಕಾರ ಅನುಸರಿಸುತ್ತಿದೆ. ನಮ್ಮ ಸಂವಿಧಾನದ ಮೂಲತತ್ವಗಳಾದ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯವೆಂಬ ಮೌಲ್ಯಗಳಿಗೆ ವಿರುದ್ಧವಾಗಿ ನಮ್ಮ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಎಲ್ಲಾ ಸಮಸ್ಯೆಗಳಿಗೆ ಖಾಸಗೀಕರಣವೇ ಮದ್ದು ಎಂದು ದಿನಕ್ಕೊಂದು ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿದೆ. ಮೀಸಲಾತಿ ನೀತಿಯನ್ನು ಸರ್ಕಾರಗಳೇ ಉಲ್ಲಂಘಿಸುತ್ತಿವೆ. ಇದರ ಪರಿಣಾಮವಾಗಿ ಮೀಸಲಾತಿಗೆ ಲಭ್ಯವಿದ್ದ ಶಿಕ್ಷಣದ ಮತ್ತು ಉದ್ಯೋಗದ ಅವಕಾಶಗಳು ಕುಸಿಯುತ್ತಿವೆ.
ಸರ್ಕಾರಿ ವಲಯದಲ್ಲಿ ಭರ್ತಿ ಮಾಡದೆ ಖಾಲಿಯಿರುವ ಹುದ್ದೆಗಳು
ಈಗಾಗಲೇ ಹೇಳಿದಂತೆ ದೇಶದಲ್ಲಿನ ಒಟ್ಟು ಉದ್ಯೋಗಗಳಲ್ಲಿ ಶೇ.1ರಷ್ಟು ಮಾತ್ರ ಮೀಸಲಾತಿಯ ವ್ಯಾಪ್ತಿಗೆ ಬರುತ್ತವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯಗಳಲ್ಲಿ ಸರಿಸುಮಾರು 60 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಉಳಿದಿವೆ. ಇದರ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.
ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಭರ್ತಿ ಮಾಡದೆ ಖಾಲಿಯಿರುವ ಹುದ್ದೆಗಳು
ವಲಯಗಳು / ವಿಭಾಗಗಳು | ಇಲಾಖೆಗಳು | ಖಾಲಿಯಿರುವ ಹುದ್ದೆಗಳು |
ಕೇಂದ್ರ ಸರ್ಕಾರ ಮತ್ತು ಇತರೆ ಇಲಾಖೆಗಳು ಮತ್ತು ಮಂಡಳಿಗಳು | ಕೇಂದ್ರ ಸರ್ಕಾರ 1. ಅಂಚೆ ಮತ್ತು ದೂರ ಸಂಪರ್ಕ 2. ರೈಲ್ವೇ ಪತ್ರಾಂಕಿತವಲ್ಲದ ಹುದ್ದೆಗಳು 3. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು | 412752 57574 245204 6135 |
ಉನ್ನತ ಶಿಕ್ಷಣ | 1. ಕೇಂದ್ರ ವಿಶ್ವವಿದ್ಯಾಲಯಗಳ ಬೋಧಕರು 2. ಕೇಂದ್ರ ವಿಶ್ವವಿದ್ಯಾಲಯಗಳ ಬೋಧಕೇತರರು 3. ಐಐಟಿ, ಐಐಎಂ, ಎನ್.ಐಟಿ 4. ಗ್ರಾಮೀಣ ಕಾಲೇಜುಗಳು | 5606 11429 6355 137298 |
ಶಾಲಾ ಶಿಕ್ಷಣ | 1. ಪ್ರೈಮರಿ ಶಾಲೆಗಳು 2. ಪ್ರೌಢ ಶಾಲೆಗಳು | 900316 107689 |
ಆರೋಗ್ಯ | 1. ಪ್ರಾಥಮಿಕ ಆರೋಗ್ಯ 2. ಅಂಗನವಾಡಿಗಳು | 223327 222348 |
ಪೊಲೀಸ್ ಮತ್ತು ಸೈನ್ಯ | 1. ಸೈನ್ಯ 2. ಕೇಂದ್ರ ಪೊಲೀಸ್ ಪಡೆಗಳು 3. ರಾಜ್ಯ ಪೊಲೀಸ್ ಪಡೆಗಳು | 29063 166876 538237 |
ನ್ಯಾಯಾಂಗ | 1. ಜಿಲ್ಲಾ ನ್ಯಾಯಾಲಯಗಳು 2. ಉಚ್ಚ ನ್ಯಾಯಾಲಯಗಳು 3. ಸರ್ವೋಚ್ಚ ನ್ಯಾಯಾಲಯ | 5135 387 3 |
ಒಟ್ಟು | 3075754 |
ಮೂಲ: ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ವಿವಿಧ ಮಂತ್ರಿಗಳು ನೀಡಿರುವ ಉತ್ತರಗಳು/ ಸಿ.ಸಿ.ಇ.ಜಿ.ಎಫ್., ಎ.ಐ.ಎಸ್.ಜಿ.ಇ.ಎಫ್, ಆರ್.ಎಚ್‌ಎಸ್- 2018/ಬಿ.ಪಿ.ಆರ್.ಡಿ.
ಮೇಲಿನ ಕೋಷ್ಟಕದಲ್ಲಿ ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆ 30.75 ಲಕ್ಷ. ಕರ್ನಾಟಕದಲ್ಲಿ 2021ರಲ್ಲಿ ಖಾಲಿಯಿರುವ ಉದ್ಯೋಗಗಳ ಸಂಖ್ಯೆಯು 2.50 ಲಕ್ಷವಾಗಿದೆ. ಉಳಿದ 29 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳನ್ನು ಲೆಕ್ಕಕ್ಕೆ ಹಿಡಿದರೆ ಅವುಗಳ ಸಂಖ್ಯೆ ಸುಮಾರು 30 ಲಕ್ಷ ಮೀರುತ್ತದೆ. ಒಟ್ಟಾರೆ ದೇಶದಲ್ಲಿ ಭರ್ತಿಯಾಗದೆ ಇರುವ ಖಾಲಿ ಹುದ್ದೆಗಳ ಸಂಖ್ಯೆ ಸುಮಾರು 60 ಲಕ್ಷ. ಈ ಎಲ್ಲ ಹುದ್ದೆಗಳನ್ನು ತುಂಬಿದರೆ ಪ.ಜಾ.ಮತ್ತು ಪ.ಪಂ. ಮತ್ತು ಹಿಂದುಳಿದ ವರ್ಗದ ಲಕ್ಷಾಂತರ ಜನರಿಗೆ ಕೆಲಸ ಸಿಕ್ಕಿ ಸಹಾಯವಾಗುತ್ತಿತ್ತು.
ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತ(ಡಿಸ್ಇನ್ವೆಸ್ಟ್ಮೆಂಟ್)
ನಮ್ಮ ದೇಶದಲ್ಲಿ ಸಾರ್ವಜನಿಕ ವಲಯವನ್ನು ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯ ಸಾಧನವಾಗಿ ನಿರ್ಮಿಸಲಾಯಿತು. ಸ್ವಾತಂತ್ರೋತ್ತರ ಭಾರತದಲ್ಲಿ ಕೈಗಾರಿಕೀಕರಣಕ್ಕೆ ಭದ್ರ ಬುನಾದಿಯನ್ನು ಸಾರ್ವಜನಿಕ ವಲಯ ನಿರ್ಮಿಸಿತು. ಸ್ವಾತಂತ್ರ್ಯ ಬಂದ ಆರಂಭದ ದಶಕಗಳಲ್ಲಿ ಭಾರಿ ಕೈಗಾರಿಕೆಗಳ ಮೇಲೆ-ಉದಾ: ವಿದ್ಯುತ್, ರೈಲ್ವೆ, ರಸ್ತೆ ನಿರ್ಮಾಣ, ಅಣು ಶಕ್ತಿ, ರಕ್ಷಣಾ ಉದ್ಯಮ ಇತ್ಯಾದಿ – ಬಂಡವಾಳ ಹೂಡುವ ಸಾಮರ್ಥ್ಯ ಖಾಸಗಿ ವಲಯಕ್ಕಿರಲಿಲ್ಲ. ಉಕ್ಕು ಮತ್ತು ಕಬ್ಬಿಣ ಉದ್ದಿಮೆ, ರಕ್ಷಣಾ ಉಪಕರಣ, ಹಡಗು ನಿರ್ಮಾಣ, ತೈಲ, ಕಲ್ಲಿದ್ದಲು, ಇತ್ಯಾದಿ ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ನಮ್ಮ ದೇಶದಲ್ಲಿ ಸಾರ್ವಜನಿಕ ವಲಯವು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿತು. ಈ ವಲಯದಲ್ಲಿ ಮೀಸಲಾತಿ ಇರುವ ಕಾರಣದಿಂದ ಲಕ್ಷಾಂತರ ಪ.ಜಾ., ಪ.ಪಂ. ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯಿತು.
ನಮ್ಮ ಸರ್ಕಾರಗಳು 1991ರಿಂದ ಉದಾರವಾದ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ಬಳಿಕ ಸಾರ್ವಜನಿಕ ವಲಯದ ವ್ಯಾಪ್ತಿಯನ್ನು ಸೀಮಿತಗೊಳಿಸುವುದು ಸರ್ಕಾರದ ನೀತಿಯಾಯಿತು. ಈ ನೀತಿಯನ್ನು ಮುಂದುವರೆಸಿ ಸಾರ್ವಜನಿಕ ವಲಯದಲ್ಲಿದ್ದ ಅನೇಕ ಉದ್ದಿಮೆಗಳನ್ನು ಖಾಸಗಿ ಉದ್ದಿಮೆದಾರರಿಗೆ ಮಾರಾಟ ಮಾಡಲಾಯಿತು. ಕೆಲವನ್ನು ಮುಚ್ಚಲಾಯಿತು. ಕೆಲವು ಸಾರ್ವಜನಿಕ ಉದ್ದಿಮೆಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಯಿತು ಮತ್ತೂ ಕೆಲವು ಸಾರ್ವಜನಿಕ ಉದ್ದಿಮೆಗಳಲ್ಲಿ ಸ್ವಯಂಚಾಲಿತ ಯಾಂತ್ರೀಕರಣ, ಆಧುನೀಕರಣ ಮತ್ತು ಕಂಪ್ಯೂಟರೀಕರಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಯಿತು. ಸಾರ್ವಜನಿಕ ವಲಯದಲ್ಲಿ ಹೂಡಲಾಗಿದ್ದ ಬಂಡವಾಳವನ್ನು ಹಿಂಪಡೆಯುವ ನೀತಿಯನ್ನು ಸರ್ಕಾರಗಳು ಅಳವಡಿಸಿಕೊಂಡವು. ಈ ಪ್ರಕ್ರಿಯೆಯು ಎಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದರೆ 2022-23ರಲ್ಲಿ ಸರ್ಕಾರವು ಉದ್ದೇಶಿಸಿರುವ ಸಾರ್ವಜನಿಕ ವಲಯದಲ್ಲಿನ ಬಂಡವಾಳ ಹಿಂತೆಗೆತದ ಮೊತ್ತವು ಅಂದಾಜು ರೂ. 6 ಲಕ್ಷಕ್ಕೂ ಹೆಚ್ಚಿನ ಕೋಟಿಯಾಗಿದೆ. ವಿವಿಧ ವರ್ಷಗಳಲ್ಲಿ ಬಂಡವಾಳ ಹಿಂತೆಗೆದ ಪ್ರಮಾಣವನ್ನು ಕೆಳಗಿನ ಕೋಷ್ಟಕದಲ್ಲಿ ತೋರಿಸಿದೆ.
ಸಾರ್ವಜನಿಕ ವಲಯದಿಂದ ಹಿಂತೆಗೆದ
ಬಂಡವಾಳ ಡಿಸ್ ಇನ್ವೆಸ್ಟ್ಮೆಂಟ್
ಕ್ರ.ಸಂ | ವರ್ಷಗಳು | ಮೊತ್ತ (ಕೋಟಿ ರೂಪಾಯಿಗಳಲ್ಲಿ) |
1 | 1991-1996 | 99,672 |
2. | 1996-1998 | 1,200 |
3. | 1998-2004 | 33,656 |
4. | 2004-2014 | 1,07,883 |
5. | 2014-2015 | 23,348 |
6. | 2015-2016 | 2,39,977 |
7. | 2016-2017 | 26,246 |
8. | 2017-2018 | 1,00,056 |
9. | 2018-2019 | 84,972 |
10. | 2019-2020 | 1,05,000 |
11. | 2020-2021 | 2.11 ಲಕ್ಷ ಕೋಟಿ |
12. | 2022-2023 | 6 ಲಕ್ಷ ಕೋಟಿ |
ಮೂಲ: ವಿವಿಧ ವರ್ಷಗಳ ಕೇಂದ್ರ ಬಜೆಟ್ ದಾಖಲೆಗಳು
ಸರ್ಕಾರವು ಪಾಲಿಸುತ್ತಿರುವ ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆತ ನೀತಿಯಿಂದ ಅಲ್ಲಿ ಉದ್ಯೋಗಗಳ ಸಂಖ್ಯೆಯು ಕಡಿಮೆಯಾಗುತ್ತಿವೆ ಮತ್ತು ಕೆಲವೊಂದು ಸಂದರ್ಭದಲ್ಲಿ ಇಲ್ಲವಾಗುತ್ತಿವೆ ಅಥವಾ ಸಾರ್ವಜನಿಕ ಉದ್ದಿಮೆಗಳು ಖಾಸಗಿ ವಲಯಕ್ಕೆ ಹಸ್ತಾಂತರಗೊಳ್ಳುತ್ತಿವೆ. ಇದರ ಪರಿಣಾಮವಾಗಿ ಸಾಮಾಜಿಕ ನ್ಯಾಯ ಅಪ್ರಸ್ತುತವಾಗುತ್ತಿದೆ. ಸಂವಿಧಾನದತ್ತ ಮೀಸಲಾತಿಯನ್ನು ಪಡೆಯುತ್ತಿದ್ದ ಪ.ಜಾ., ಪ.ಪಂ. ಮತ್ತು ಹಿಂದುಳಿದ ವರ್ಗದ ಜನರಿಗೆ ಬಂಡವಾಳ ಹಿಂತೆಗೆತ ಮಾರಕವಾಗಿ ಪರಿಣಮಿಸಿದೆ.
ಗುತ್ತಿಗೆ ಮತ್ತು ಹೊರ ಗುತ್ತಿಗೆ ಕಾರ್ಮಿಕ ಪದ್ಧತಿ
ಸಾಮಾಜಿಕ ನ್ಯಾಯಕ್ಕೆ ಕುತ್ತಾಗಿ ಪರಿಣಮಿಸಿರುವ ಮತ್ತೊಂದು ಸಂಗತಿಯೆಂದರೆ ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕ ಪದ್ಧತಿ. ಸಾರ್ವಜನಿಕ ಉದ್ದಿಮೆಗಳು, ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಉದ್ದಿಮೆಗಳು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು 1970ರಿಂದ ಅನುಸರಿಸುತ್ತಿವೆ. ಈ ಪದ್ಧತಿಯಿಂದ ಕೈಗಾರಿಕಾ ಮಾಲೀಕರಿಗೆ ಅನೇಕ ಅನುಕೂಲಗಳಿವೆ. ನಮ್ಮ ದೇಶದಲ್ಲಿ ಕಾರ್ಮಿಕರ ಸಂಖ್ಯೆ ಬೇಡಿಕೆಗಿಂತ ಅಧಿಕವಾಗಿರುವುದರಿಂದ ಅವರು ಕಡಿಮೆ ಕೂಲಿಗೆ ದೊರೆಯುತ್ತಾರೆ. ಯಾವುದೇ ಕಾರ್ಮಿಕ ಕಾನೂನುಗಳನ್ನು ಪಾಲಿಸದೆ ಕೆಲಸಗಾರರನ್ನು ನೇಮಿಸಿಕೊಳ್ಳಬಹುದು. ಯಾವಾಗ ಬೇಕಾದರೂ ಕಾರಣ ನೀಡದೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಬಹುದು. ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಉದ್ದಿಮೆಗಳು ಇಲ್ಲಿ ಪಾಲಿಸಬೇಕಾಗಿಲ್ಲ. ಈ ರೀತಿಯ ಗುತ್ತಿಗೆ ಕಾರ್ಮಿಕ ಪದ್ಧತಿಯು ದೇಶದಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಕೆಲವು ಅಧ್ಯಯನಗಳು ಬಹಿರಂಗಪಡಿಸಿರುವಂತೆ 2018ರಲ್ಲಿ ದೇಶದ ಒಟ್ಟು ಉದ್ಯೋಗಗಳಲ್ಲಿ ಶೇ.34ರಷ್ಟು ಗುತ್ತಿಗೆ ಕಾರ್ಮಿಕರಿದ್ದಾರೆ.
ಗುತ್ತಿಗೆ ಕಾರ್ಮಿಕ ಪದ್ಧತಿಯ ಜೊತೆಯಲ್ಲಿ ಇರುವ ಮತ್ತೊಂದು ಕಾರ್ಮಿಕ ಪದ್ಧತಿಯೆಂದರೆ ಹೊರಗುತ್ತಿಗೆ ಪದ್ಧತಿ. ಕೆಲವು ಕೆಲಸಗಳನ್ನು ಖಾಸಗಿಯವರಿಗೆ ವಹಿಸುವುದು. ಎರಡೂ ಪದ್ಧತಿಗಳಲ್ಲಿ ಕೆಲಸಗಾರರಿಗೆ ಯಾವುದೇ ಭದ್ರತೆ, ಸಾಮಾಜಿಕ ಕಲ್ಯಾಣ, ರಜೆಗಳ ಸೌಲಭ್ಯ ಮುಂತಾದವು ಇರುವುದಿಲ್ಲ. ಈ ಪದ್ಧತಿಯಿಂದ ಮೀಸಲಾತಿಯು ಅಪ್ರಸ್ತುತವಾಗುತ್ತಿದೆ.
1. ಮೀಸಲಾತಿಗೆ ಲಭ್ಯವಿರುವ ಉದ್ಯೋಗಗಳು ಕಡಿಮೆಯಾಗುತ್ತಿವೆ.
2. ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವ (ಡಿಸ್‌ಇನ್‌ವೆಸ್ಟ್‌ಮೆಂಟ್)ಸರ್ಕಾರದ ಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಮೀಸಲಾತಿಗೆ ದೊರೆಯಬೇಕಾಗಿದ್ದ ಉದ್ಯೋಗಗಳು ಇಲ್ಲವಾಗುತ್ತಿವೆ.
3. ಮಂಜೂರಾದ ಹುದ್ದೆಗಳಲ್ಲಿ ಬಹಳಷ್ಟು ಭರ್ತಿಯಾಗದೆ ಖಾಲಿಯಿವೆ. ಇದರಿಂದಾಗಿಯೂ ಮೀಸಲಾತಿಯ ಉದ್ಯೋಗ ಸಾಮರ್ಥ್ಯವು ದುರ್ಬಲವಾಗುತ್ತಿದೆ.
4. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಗಳನ್ನು ವ್ಯಾಪಕವಾಗಿ ಅನುಸರಿಸಲಾಗುತ್ತಿದೆ. ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ಮೀಸಲಾತಿ ನಿಯಮವನ್ನು ಪಾಲಿಸಬೇಕಾಗಿಲ್ಲ.
ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದ ಸಂವಿಧಾನದತ್ತ ಮೀಸಲಾತಿಯು ಅಪ್ರಸ್ತುತವಾಗುತ್ತಿದೆ.