October 1, 2023 7:04 am

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಹುಟ್ಟಿನಿಂದಲೇ ಜಾತಿಯನ್ನು ನಿಗದಿಪಡಿಸುವುದು ಮತ್ತು ಜಾತಿ ವ್ಯವಸ್ಥೆಯ ಎಲ್ಲಾ ಕಟ್ಟುಪಾಡುಗಳಿಗೆ ವ್ಯಕ್ತಿಯನ್ನು ಬದ್ಧವಾಗಿಸುವುದರಲ್ಲಿರುವ ಹಿತಾಸಕ್ತಿಗಳ ಹುನ್ನಾರದ ಬಗ್ಗೆ ಪ್ರಾಚೀನ ಕಾಲದಿಂದಲೂ ಮಹಾನ್ ಪುರುಷರು, ವಿಚಾರವಾದಿಗಳು, ಮಾನವೀಯ ಕಾಳಜಿ ಉಳ್ಳವರು ಪ್ರತಿಭಟಿಸುತ್ತಲೇ ಬಂದಿದ್ದಾರೆ.

ಬೌದ್ಧ ಧರ್ಮದ ಬಂಡಾಯ

ಜಾತಿ-ಮತ, ದೇವರು-ಧರ್ಮ, ಪಾಪ-ಪುಣ್ಯ, ಸ್ವರ್ಗ-ನರಕಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ಮೂಢನಂಬಿಕೆಗಳಲ್ಲಿಯೇ ಇರುವಂತೆ ಮಾಡಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಾ ಬಂದ ಆಳುವ ವರ್ಗಗಳ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಬೌದ್ಧ ಧರ್ಮ ಮಾಡಿತು.

ಜ್ಞಾನ – ವಿದ್ಯೆಗಳನ್ನು ತನ್ನ ಸ್ವತ್ತಾಗಿಸಿಕೊಂಡ ಪುರೋಹಿತಶಾಹಿಯು ಸಂಸ್ಕೃತವನ್ನು ದೇವ ಭಾಷೆ ಎಂದು ಕರೆಯುತ್ತಾ ಅದನ್ನು ಓದುವ ಹಕ್ಕು ತನಗೆ ಮಾತ್ರ ಇದೆ ಎಂದು ಹೇಳಿ ವೇದೋಪನಿಷತ್ತುಗಳನ್ನು ತನ್ನ ಹಿತಾಸಕ್ತಿಗೆ ತಕ್ಕಂತ ವ್ಯಾಖ್ಯಾನಿಸುತ್ತ ಶತಮಾನಗಳ ಕಾಲ ಜನರನ್ನು ವಂಚಿಸುತ್ತ ಬಂದಿತು.

ಹೀಗೆ ಅಜ್ಞಾನ, ಅಂಧಶ್ರದ್ಧೆಗಳಲ್ಲಿ ತೊಡಗಿದ್ದ ಜನರಿಗೆ ಬುದ್ಧ ಜ್ಞಾನದ ಮಾರ್ಗವನ್ನು ತೋರಿಸಿದ ಮತ್ತು ಮಾನವತೆಯ ಘನತೆಯನ್ನು ಎತ್ತಿ ಹಿಡಿಯುವ ನಡವಳಿಕೆಗಳನ್ನು ಬೋಧಿಸಿದ. ವೈಚಾರಿಕತೆಯನ್ನು ಬೆಳೆಸಿದ. ಅಮೂರ್ತವಾದ ಹಾಗೂ ಅಸಂಗತವಾದ ವಿಚಾರಗಳನ್ನು ಅಲ್ಲಗಳೆದು ಮನುಷ್ಯರು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಡವಳಿಕೆ, ಮೌಲ್ಯಗಳನ್ನು ತಿಳಿಯ ಹೇಳಿದ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿಯೇ ತನ್ನ ವಿಚಾರಗಳನ್ನು ಬೋಧಿಸುವ ಮೂಲಕ ಜನಸಾಮಾನ್ಯರನ್ನು ಬೆಳಕಿನ ಹಾದಿಯಲ್ಲಿ ನಡೆಯುವಂತೆ ಮಾಡಿದ.

ಹೀಗೆ ಜಾತಿ ಪದ್ಧತಿ ಮತ್ತು ಇದು ನಿರ್ಮಿಸಿದ ಅಸಮಾನತೆಯ ವಿರುದ್ಧ ಸುಮಾರು 2600 ವರ್ಷಗಳ ಹಿಂದೆಯೇ ಧ್ವನಿ ಎತ್ತಿದ ಮೊದಲ ಮಹಾಪುರುಷ ಗೌತಮ ಬುದ್ಧ. ಬುದ್ಧನು ಪ್ರತಿಪಾದಿಸಿದ ಬೌದ್ಧ ಧರ್ಮವು ಸಮಾನತೆ, ಶಾಂತಿ, ಪ್ರೀತಿ, ದಯೆಯನ್ನು ಅವಲಂಬಿಸಿದೆ. ಬುದ್ಧನ ವಿಚಾರಗಳು ಮತ್ತು ಮೌಲ್ಯಗಳೆಂದರೆ:

1. ಮುಕ್ತ ಸಮಾಜದಲ್ಲಿ ಧರ್ಮದ ಅವಶ್ಯಕತೆ ಇದೆ.

2. ಆದರೆ ಎಲ್ಲಾ ಧರ್ಮಗಳು ಅನುಸರಿಸಲು ಅರ್ಹವಲ್ಲ.

3. ಧರ್ಮವೆನ್ನುವುದು ಜೀವನದ ಸತ್ಯ ಸಂಗತಿಗಳಿಗೆ ಸಂಬಂಧಿಸಿರಬೇಕು. ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವ ಅಥವಾ ಆತ್ಮ, ಸ್ವರ್ಗಗಳ ಬಗೆಗೆ ಅಲ್ಲ. ದೇವರನ್ನು ಧರ್ಮದ ಕೇಂದ್ರ ನೆಲೆ ಮಾಡುವುದು ಸರಿಯಲ್ಲ.

4. ಪ್ರಾಣಿ ಬಲಿಯನ್ನು ಧರ್ಮದ ಕೇಂದ್ರವನ್ನಾಗಿ ನೋಡುವುದು ತಪ್ಪು.

5. ನಿಜವಾದ ಧರ್ಮವು ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಲ್ಲ.

6. ಮಾನವೀಯತೆ ಮತ್ತು ನೈತಿಕತೆಯೇ ಧರ್ಮದ ಕೇಂದ್ರವಾಗಿರಬೇಕು.

7. ನೈತಿಕತೆ ಎನ್ನುವುದು ಜೀವನದ ಆದರ್ಶವಾಗಿದ್ದರೆ ಮಾತ್ರ ಸಾಲದು. ಅದು ಜೀವನದ ನಿಯಮ, ಅಂತೆಯೇ ಅದು ಕಾನೂನು ಕೂಡ ಆಗಬೇಕು.

8. ಈ ಜಗತ್ತಿನಲ್ಲಿ ದುಃಖವೆನ್ನುವುದು ವಿವಿಧ ಆಸಕ್ತಿಗಳ ಘರ್ಷಣೆಯ ಕಾರಣದಿಂದಾಗಿ ಇದೆ. ಅದನ್ನು ಪರಿಹರಿಸಲು ಇರುವ ದಾರಿ ಎಂದರೆ ಅಷ್ಟಾಂಗ ಮಾರ್ಗ ಮಾತ್ರ. ಅಷ್ಟಾಂಗ ಮಾರ್ಗ ಎಂದರೆ:

ಸಮ್ಯಕ್ ದೃಷ್ಟಿ, ಅಂದರೆ ಶುದ್ಧವಾದ ದೃಷ್ಟಿಕೋನ

ಸಮ್ಯಕ್ ಸಂಕಲ್ಪ, ಅಂದರೆ ಶುದ್ಧವಾದ ಆಶೋತ್ತರ

ಸಮ್ಯಕ್‌ ವಾಚ, ಅಂದರೆ ಶುದ್ಧವಾದ ಮಾತು

ಸಮ್ಯಕ್ ಕರ್ಮ, ಎಂದರೆ ಶುದ್ಧವಾದ ವರ್ತನೆ

ಸಮ್ಯಕ್ ವ್ಯಾಯಾಮ, ಅಂದರೆ ಶುದ್ಧವಾದ ಪ್ರಯತ್ನ

ಸಮ್ಯಕ್ ಸ್ಮೃತಿ, ಅಂದರೆ ಶುದ್ಧವಾದ ಆಲೋಚನೆ

ಸಮ್ಯಕ್ ಸಮಾಧಿ, ಅಂದರೆ ಶುದ್ಧವಾದ ಉದ್ದೇಶ

9. ಆಸ್ತಿಯ ಖಾಸಗಿ ಒಡೆತನವು ಒಂದು ವರ್ಗಕ್ಕೆ ಶಕ್ತಿಯನ್ನು ಮತ್ತೊಂದು ವರ್ಗಕ್ಕೆ ದು:ಖವನ್ನು ತರುತ್ತದೆ.

10. ಸಮಾಜದ ಒಳಿತಿಗಾಗಿ, ಈ ದುಃಖದ ಮೂಲ ಕಾರಣವಾದ ಆಸ್ತಿಯನ್ನೇ ಇಲ್ಲವಾಗಿಸಬೇಕು.

11. ಎಲ್ಲಾ ಮಾನವರೂ ಸಮಾನರು

12. ಹುಟ್ಟಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಗುಣದಿಂದ ದೊಡ್ಡವನಾಗುತ್ತಾನೆ.

13. ಒಳ್ಳೆಯ ವಂಶದ ಹುಟ್ಟು ಮುಖ್ಯವಲ್ಲ. ಉನ್ನತಾದರ್ಶಗಳು ಮುಖ್ಯ

14. ಎಲ್ಲರ ಬಗೆಗೆ ಮೈತ್ರಿಯೇ ಮುಖ್ಯ. ಶತ್ರುವಿಗೂ ಕೂಡ ಅದು ಸಲ್ಲಬೇಕು

15. ಪ್ರತಿಯೊಬ್ಬರಿಗೂ ಕಲಿಯುವ ಹಕ್ಕಿದೆ. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ

16. ಚಾರಿತ್ರ್ಯವಿಲ್ಲದ ಜ್ಞಾನ ಅಪಾಯಕಾರಿ

17. ಯಾವುದೂ ಶಾಶ್ವತವಲ್ಲ. ಪ್ರತಿಯೊಂದು ಕೂಡಾ ವಿಮರ್ಶೆಗೆ, ವಿಶ್ಲೇಷಣೆಗೆ ಒಳಗಾಗಬೇಕು

18. ಯಾವುದೂ ಅಂತಿಮವಲ್ಲ

19. ಎಲ್ಲವೂ ಕಾರ್ಯ-ಕಾರಣ ಸಂಬಂಧಕ್ಕೆ ಬದ್ಧ

20. ಪ್ರತಿಯೊಂದೂ ಪರಿವರ್ತನಶೀಲವಾಗಿದೆ

21. ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಯುದ್ಧ ತಪ್ಪದು

22. ಯುದ್ಧದಲ್ಲಿ ಗೆದ್ದವರಿಗೆ ಸೋತವರ ಬಗೆಗೂ ಜವಾಬ್ದಾರಿ ಇರುತ್ತದೆ.

ಬುದ್ಧನು ತನ್ನ ವಿಚಾರಗಳನ್ನು ಸರಳಾಗಿ ಮತ್ತು ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲೇ ಬೋಧಿಸಿದನು. ಆತನ ಸಂಘದ ನಿಯಮಗಳು ಸರಳವಾದ್ದರಿಂದ ಕೆಳಜಾತಿಯವರು ಬಹು ಸಂಖ್ಯೆಯಲ್ಲಿ ಸೇರಿದರು. ಆತನ ಸಂಘದ ಅತ್ಯುಚ್ಚ ಭಿಕ್ಕು ಒಬ್ಬ ಅಸ್ಪೃಶ್ಯನೇ ಆಗಿದ್ದ. ಸ್ವಾತಂತ್ರ್ಯ, ಸಮಾನತೆ, ಸೋದರತೆಗಳ ಜೊತೆಗೆ ಮಾನವನ ಭೌತಿಕ ಸುಖ-ಸಂಪತ್ತನ್ನು ಹೆಚ್ಚಿಸಬಲ್ಲ ಏಕೈಕ ಧರ್ಮವೆಂದರೆ ‘ಬೌದ್ಧ ಧರ್ಮ’ ಎಂಬುದನ್ನು ಜನ ಅನುಭವದಿಂದ ಅರಿತರು.

ವಚನಕಾರರ ಬಂಡಾಯ

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ‘ಅನುಭವ ಮಂಟಪ’ವೆಂಬ ಸಂಸ್ಥೆ ಸ್ಥಾಪಿತವಾಯಿತು. ಇಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು. ಸುದೀರ್ಘ ಚರ್ಚೆಯ ನಂತರ ಬಂದ ನಿರ್ಣಯಗಳೇ ವಚನಗಳ ರೂಪ ತಾಳಿದವು. ಜಾತಿಬೇಧವಿಲ್ಲದ ವರ್ಗಬೇಧವಿಲ್ಲದ ಮತ್ತು ಲಿಂಗಬೇಧವಿಲ್ಲದ, ಒಂದು ಸಮ ಸಮಾಜದ ನಿರ್ಮಾಣವೇ ಎಲ್ಲಾ ವಚನಕಾರರ ಗುರಿಯಾಗಿತ್ತು. ಬಸವಣ್ಣನವರು ಆರಂಭಿಸಿದ ಚಳುವಳಿಯು ಅಂದಿನ ಸಮಾಜದಲ್ಲಿ ಕ್ರಾಂತಿಕಾರಕವಾದ ಬದಲಾವಣೆಯನ್ನು ಹುಟ್ಟುಹಾಕಿತು. ಅದುವರೆಗೆ ಸಮಾಜದಲ್ಲಿ ಪಶುಗಳಿಗಿಂತ ಕೀಳಾಗಿ ಕಾಣಲ್ಪಡುತ್ತಿದ್ದಂಥ ಅಸ್ಪೃಶ್ಯರನ್ನು ಸ್ಪೃಶ್ಯತೆಯ ನೆಲೆಗೆ ತಂದದ್ದು ಬಸವಣ್ಣನವರ ಬಹು ಮಹತ್ವದ ಸಾಧನೆ. ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಲೇ ಮೂಢನಂಬಿಕೆ, ಅಂಧ ಶ್ರದ್ಧೆ, ಕಂದಾಚಾರಗಳನ್ನು ಖಂಡಿಸುತ್ತ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ಕಾರಣವಾದರು. ಅವರು ಅಸ್ಪೃಶ್ಯತೆ ಮತ್ತು ಜಾತಿಬೇಧವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಕಾಯಕವನ್ನು ಕೀಳಾಗಿ ಕಾಣುವ ಬದಲು ಕಾಯಕವೇ ಕೈಲಾಸ ಎಂದರು. ಕಲ್ಯಾಣ ರಾಜ್ಯದ ಸಾಧನೆಗೆ ದಾಸೋಹ ಸಂಸ್ಕೃತಿಯನ್ನು ಬಿತ್ತಿದರು. ಮೌಢ್ಯವನ್ನು ನಿರಾಕರಿಸಿ ವೈಚಾರಿಕತೆಯನ್ನು ಬೆಳೆಸಿದರು. ಶರಣರು ನೈತಿಕತೆಯನ್ನು ಮೆರೆದರು ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು.

ಜಾತಿ ತಾರತಮ್ಯವನ್ನು ನಿರಾಕರಿಸುವ ಕೆಲವು ವಚನಗಳು:

ನೆಲವೊಂದೇ – ಹೊಲಗೇರಿ ಶಿವಾಲಯಕ್ಕೆ

ಜಲವೊಂದೇ – ಶೌಚಾಚಮನಕ್ಕೆ

ಕುಲವೊಂದೇ ತನ್ನ ತಾನರಿದವಂಗೆ

ಫಲವೊಂದೇ ಷಡುದರ್ಶನ ಮುಕ್ತಿಗೆ

ನಿಲುವೊಂದೇ ಕೂಡಲಸಂಗಮದೇವಾ ನಿಮ್ಮನರಿದವಂಗೆ

ಬಸವಣ್ಣನವರು ಮೇಲಿನ ವಚನದಲ್ಲಿ ಮಾನವ ಜಾತಿ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ. ಜಾತಿ ತಾರತಮ್ಯವನ್ನು ಇದರಲ್ಲಿ ತಿರಸ್ಕರಿಸಿದ್ದಾರೆ.

ಸೆಟ್ಟಿಯೆಂಬೆನೆ ಸಿರಿಯಾಳನ?

ಮಡಿವಾಳನೆಂಬೆನೇ ಮಾಚಯ್ಯನ?

ಡೋಹರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚೆನ್ನಯ್ಯನ?

ಆನು ಹಾರುವನೆಂದೊಡೆ ಕೂಡಲಸಂಗಮದೇವ ನಗುವನಯ್ಯ

ಬಸವಣ್ಣನವರು ಈ ಮೇಲಿನ ವಚನದಲ್ಲಿ ಜಾತಿ ಆಧರಿಸಿದ ಜನರ ಬಗೆಗಿನ ತಾರತಮ್ಯ ಭಾವನೆಯನ್ನು ತಿರಸ್ಕರಿಸುತ್ತಾರೆ. ವರ್ಗ ವ್ಯವಸ್ಥೆಯನ್ನೂ ಪ್ರಶ್ನಿಸಿದ್ದಾರೆ.

ಚನ್ನಯ್ಯನ ಮನೆಯ ದಾಸನ ಮಗನು

ಕಕ್ಕಯ್ಯನ ಮನೆಯ ದಾಸಿಯ ಮಗಳು

ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ

ಸಂಗವ ಮಾಡಿದರು

ಇವರಿಬ್ಬರಿಗೆ ಜನಿಸಿದ ಮಗ ನಾನು

ಕೂಡಲಸಂಗಮದೇವ ಸಾಕ್ಷಿಯಾಗಿ

ಈ ಕ್ರಾಂತಿಕಾರಕ ವಚನದಲ್ಲಿ ಬಸವಣ್ಣ ತಮ್ಮ ಬ್ರಾಹ್ಮಣ ಮೂಲವನ್ನು ತಿರಸ್ಕರಿಸಿ ಕೆಳ ವರ್ಗದವರ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.

ಭಕ್ತಿ ಪಂಥ ಮತ್ತು ದಾಸ ಸಾಹಿತ್ಯದಲ್ಲಿ ಬಂಡಾಯ

ಸುಮಾರು 15 ಮತ್ತು 16ನೇ ಶತಮಾನದ ಕಾಲಕ್ಕೆ ಭಾರತದಲ್ಲಿ ಜಾತಿ ಅಸಮಾನತೆ, ಅಸ್ಪೃಶ್ಯತೆ ಮತ್ತು ಅಮಾನವೀಯ ಆಚರಣೆಗಳ ವಿರುದ್ಧ ಹುಟ್ಟಿದ್ದೇ ಭಕ್ತಿಪಂಥ. ಹಿಂದೂ ಮತ್ತು ಸೂಫಿ ಸಂತರು ವಿವಿಧ ಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸಿ ತಮ್ಮ ಹಾಡುಗಳ ಮುಖಾಂತರ ಜನ ಸಾಮಾನ್ಯರನ್ನು ತಲುಪಿದರು. ಈ ಸಂತರು ವಿವಿಧ ಧರ್ಮ, ಜಾತಿ ಹಾಗೂ ವರ್ಗಗಳ ಹಿನ್ನೆಲೆಯಿಂದ ಬಂದವರಾಗಿದ್ದರು. ಆದರೆ, ಯಾವುದೇ ಮತ, ಧರ್ಮ, ಜಾತಿ ಹಾಗೂ ಸಂಪ್ರದಾಯಗಳಿಗೆ ಕಟ್ಟು ಬಿದ್ದವರಲ್ಲ. ಮತ ಮತ್ತು ಜಾತಿ ಅಸಮಾನತೆಯ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದರು. ಮೂಢನಂಬಿಕೆಗಳನ್ನು, ಅರ್ಥವಿಲ್ಲದ ಆಚಾರಗಳನ್ನು, ಪದ್ಧತಿಗಳನ್ನು ತಿರಸ್ಕರಿಸಿದರು.

ಇದೇ ರೀತಿಯಾಗಿ ದಾಸ ಸಾಹಿತ್ಯದ ಸಂತರು ನಮ್ಮ ಸಮಾಜದ ಸಾಮಾಜಿಕ ಬದುಕಿನ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಿದ್ದಾರೆ. ದಾಸರ ಕೆಲವು ರಚನೆಗಳನ್ನು ಇಲ್ಲಿ ನೀಡಲಾಗಿದೆ.

ಕನಕದಾಸರು ತಮ್ಮ ಒಂದು ಕೀರ್ತನೆಯಲ್ಲಿ ಕುಲದ ಬಗ್ಗೆ ರೀತಿ ಹೇಳಿದ್ದಾರೆ:

ಕುಲಕುಲ ಕುಲವೆನ್ನುತಿಹರು

ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ

ಕೆಸರೊಳು ತಾವರೆ ಹುಟ್ಟಲು ಅದ ತಂದು

ಬಿಸಜನಾಭನಿಗರ್ಪಿಸಲಿಲ್ಲವೆ

ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು

ವಸುಧೆಯೊಳಗೆ ಭೂಸುರರುಣಲಿಲ್ಲವೆ

ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ

ತೆಗೆದು ಪೂಸುವರು ಭೂಸುರರೆಲ್ಲರು

ಬಗೆಯಿಂದ ನಾರಾಯಣನ್ಯಾವ ಕುಲದವ

ಆಗಜವಲ್ಲಭ ನಿನ್ಯಾತರ ಕುಲದವನು.

ಆತ್ಮ ಯಾವ ಕುಲ ಜೀವ ಯಾವ ಕುಲ

ತತ್ವೇಂದ್ರಿಯಗಳ ಕುಲ ಪೇಳಿರಯ್ಯ

ತತ್ವ ಪದಕಾರರಾದ ಶಿಶುನಾಳ ಶರೀಫರ ಒಂದು ರಚನೆ:

ತೊಗಲ ಮೊಲೆಯ ಹಾಲ ಕುಡಿದು ದೊಡ್ಡವರಾಗಿ

ಶೀಲ ಮಾಡತೀರಿ ನಾಡೆಲ್ಲ

ನಾ ಆದರೇನು ನೀ ಆದರೇನು

ಅರಸ ಪ್ರಧಾನ ತೊಗಲು

ತೊಗಲ ತೋಳದ ಕರ ನೀರ ಮಡಿ ಮಾಡಿ

ಗುಂಡಿಯ ತಂದ್ಯೋ ಬಿಕನಾಶಿ

ಗಂಧ ವಿಭೂತಿ ತೊಗಲಲಿ ಧರಿಸಿ

ಜ್ಯಾತಿ ಜ್ಯಾತಿ ಬ್ಯಾರೆಯೆನಿಸಿ

ಅನ್ನಮಚಾರ್ಯರ ಒಂದು ರಚನೆ:

ಯಾರಾದರೇನು ಜಾತಿ ಏನಾದರೇನು

ಹರಿಯ ನಂಬಿದಾತನೇ ಗಣ್ಯನು.

ಸಂತ ತುಕಾರಾಮರ ಒಂದು ರಚನೆ:

ದೀನದಲಿತನನಪ್ಪಿಕೊಳ್ಳುವವನೇ ನಿಜವಾದ ಸಂತನು

ದೇವದೊರೆವನು ಅವನಲಿ.

ಕೈವಾರ ನಾರಾಯಣಪ್ಪಣವರ ಒಂದು ರಚನೆ:

ಹೊಲೆಯನೆಂದೀ ಜನರು ಹೀಗಳೆವುದೇತಕೆ

ಹೊಲೆಯನ ಆತ್ಮ ಮಂದಿರದಲ್ಲಿ

ಸಕುದೇವ ವಿಹಾರಿ ಸದ್ಗುರುವು ಇರುವ

ನಾದ ಬ್ರಹ್ಮಾನಂದ ನಾರೇಯಣ ಕವಿ

ಉಚ್ಚೆ ಬಾಗಿಲೊಳು ತೂರಿ ಬಂದರು ನರರು

ಉತ್ತಮ ಕುಲದವರು ಯಾರಿಲ್ಲ ಇಲ್ಲಿ

ಉತ್ತಮ ಕುಲವೆಂಬುದು ಬರೀ ಸುಳ್ಳು

ನಾದ ಬ್ರಹ್ಮಾನಂದ ನಾರೇಯಣ ಕವಿ.

ಈ ರೀತಿಯಾಗಿ ಬುದ್ಧ, ಬಸವ ಮತ್ತು ಭಕ್ತಿ ಪಂಥದ ಹಾಗೂ ದಾಸ ಪಂಥದ ಸಂತರು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು. ಆದರೆ, ಅದು ವ್ಯಕ್ತಿ ನೀತಿಯಾಗಿಯೇ ಉಳಿಯಿತು. ರಾಜ ನೀತಿಯಾಗಲಿಲ್ಲ. ಕಡ್ಡಾಯವಾಗಿ ಜಾರಿ ಮಾಡಲಾಗದ ನೀತಿಯಾಗಿಯೇ ಉಳಿಯಿತು. ಮೊದಲನೇ ಬಾರಿಗೆ ಅಂಬೇಡ್ಕರ್‌ರವರು “ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ, ಅದೊಂದು ಮಾನವ ಹಕ್ಕು” ಎಂಬುದಾಗಿ ಪ್ರತಿಪಾದಿಸಿದರು. ಸ್ವಾಮಿ ವಿವೇಕಾನಂದ, ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ನಾರಾಯಣಗುರು, ಮಹಾತ್ಮ ಗಾಂಧಿ ಇತ್ಯಾದಿಯಾಗಿ ಅನೇಕ ಮಹನೀಯರು ಜಾತಿ ಅಸಮಾನತೆಯ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದರು. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯವು ಕೇವಲ ವ್ಯಕ್ತಿ ಅಥವಾ ಸಾಮಾಜಿಕ ನೀತಿಯಾಗಿ ಉಳಿಯದೆ ಸರ್ಕಾರದ ನೀತಿಯಾಗಿ ಸ್ಥಾನ ಗಳಿಸುವಂತಾಯಿತು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು