October 1, 2023 8:53 am

ಜಾತಿ ಅಸಮಾನತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ನಿರುದ್ಯೋಗ ಸೃಷ್ಟಿಯಾಗಲು ಜಾತಿ ಪದ್ಧತಿಯೂ ನೇರ ಕಾರಣವಾಯಿತು

ಭಾರತದ ಮಾನವಶಾಸ್ತ್ರ ಸರ್ವೇಕ್ಷಣ ಇಲಾಖೆಯ ಅಧ್ಯಯನದಂತೆ ದೇಶದಲ್ಲಿ 4,635 ಜಾತಿಗಳು ಮತ್ತು ಉಪಜಾತಿಗಳು ಇವೆ. ಹುಟ್ಟುತ್ತಾ ಒಂದು ಜಾತಿಯನ್ನು ಕಟ್ಟಲಾಯಿತು ಮತ್ತು ಜಾತಿಗೊಂದು ಕಸುಬನ್ನು ಕಡ್ಡಾಯಗೊಳಿಸಲಾಯಿತು. ಜಾತಿ ಬದಲಾಯಿಸುವಂತಿಲ್ಲ. ಜಾತಿ ಜಾತಿಯ ಮಧ್ಯೆ ಸಂಬಂಧ ಬೆಳೆಸುವಂತಿಲ್ಲ ಮತ್ತು ಸಹ ಪಂಕ್ತಿ ಭೋಜನ ಮಾಡುವಂತಿಲ್ಲ. ಅಷ್ಟೇ ಏಕೆ ಹೆಣಗಳನ್ನು ಒಂದೇ ಸ್ಮಶಾನದಲ್ಲಿ ಸುಡುವಂತಿಲ್ಲ ಅಥವಾ ದಫನ್ ಮಾಡುವಂತಿಲ್ಲ. ಸಾಲದೆಂದು ಜಾತಿ ಮತ್ತು ಕಸುಬನ್ನು ವಂಶಪಾರಂಪರ್ಯ ಮಾಡಲಾಗಿದೆ.

ಜಾತಿ ವ್ಯವಸ್ಥೆಯಲ್ಲಿ ಒಂದು ವಿಧವಾದ ಕೆಲಸದ ವಿಭಜನೆಯನ್ನು ಕಾಣಬಹುದು. ವಿದ್ಯೆ ಬುದ್ಧಿಯ ಗುತ್ತಿಗೆದಾರರನ್ನಾಗಿ ಬ್ರಾಹ್ಮಣರನ್ನು, ಯುದ್ಧ ಮತ್ತು ಆಡಳಿತ ನಡೆಸುವುದಕ್ಕೆ ಕ್ಷತ್ರಿಯರನ್ನು, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ನಡೆಸುವುದಕ್ಕೆ ವೈಶ್ಯರನ್ನು ನೇಮಿಸಲಾಯಿತು. ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ಶೂದ್ರರನ್ನು ಅತ್ಯಂತ ಕಷ್ಟ ಮತ್ತು ಕೊಳಕಿನ ಕೆಲಸ ಮಾಡುವ ಗುಲಾಮರ ನ್ನಾಗಿ ಮಾಡಲಾಯಿತು. ಈ ರೀತಿಯಾದ ಶ್ರಮ

ವಿಭಜನೆಯಿಂದ ಮೊದಲ ಮೂರು ವರ್ಣಗಳು ಆಳುವವರಾಗಿಯೂ, ನಾಲ್ಕನೆಯವರಾದ ಶೂದ್ರರು ಆಳಲ್ಪಡುವವರಾಗಿಯೂ ರೂಪುಗೊಂಡರು. ಚಾತುರ್ವಣ್ಯದ ಹೊರಗೆ ಅಸ್ಪೃಶ್ಯರೆಂಬ ಸಾಮಾಜಿಕ ವರ್ಗವನ್ನು ನಿರ್ಮಿಸಲಾಯಿತು.

ಜಾತಿ ಆಧಾರಿತ ಅಸಮಾನತೆ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಅಸಮಾನತೆಯನ್ನು ಕಾಣಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಮೇಲು ಜಾತಿಗಳನ್ನು ಮೇಲು ವರ್ಗಗಳೆಂದೂ ಮತ್ತು ಕೆಳ ಜಾತಿಗಳನ್ನು ಕೆಳ ವರ್ಗಗಳೆಂದು ಪರಿಗಣಿಸಲಾಗಿದೆ ಎನ್ನುವುದನ್ನು ಗಮನಿಸಬೇಕು. ಅತಿ ಹೆಚ್ಚು ಅವಿದ್ಯಾವಂತರು, ನಿರುದ್ಯೋಗಿಗಳು, ಬಡವರು, ರೋಗಗ್ರಸ್ಥರು, ವಸತಿಹೀನರು, ಭೂಹೀನರು ಎಲ್ಲಿದ್ದಾರೆಂದು ಹುಡುಕಿಕೊಂಡು ಹೋದರೆ ಅವರು ಕಾಣುವುದು ಕೆಳ ಜಾತಿಗಳಲ್ಲಿ. ಹೀಗೆ ಜಾತಿ ಮತ್ತು ವರ್ಗ ಬೆರೆತು ಹೋಗಿರುವ ಒಂದು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಭಾರತದಲ್ಲಿ ಕಾಣಬಹುದು.

ಶೋಷಣಾ ವ್ಯವಸ್ಥೆಯಾದ ಜಾತಿ ವ್ಯವಸ್ಥೆಯನ್ನು ಧರ್ಮದೊಂದಿಗೆ ಬೆಸುಗೆಗೊಳಿಸಿ, ಭಾರತದಲ್ಲಿ ಅದನ್ನು ಶಾಶ್ವತಗೊಳಿಸಲಾಯಿತು. ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ “ಚಾತುರ್ವಣ್ಯ್ರಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ” ಎನ್ನುತ್ತಾನೆ. ಅಂದರೆ, ಗುಣಕ್ಕೂ, ಕರ್ಮಕ್ಕೂ ತಕ್ಕಂತೆ ನಾಲ್ಕು ವರ್ಣಗಳನ್ನು ನಿರ್ಮಿಸಲಾಗಿದೆ. ಮನು ಧರ್ಮ ಶಾಸ್ತ್ರದಲ್ಲೂ ಜಾತಿ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಉಲ್ಲೇಖ ಇರುವುದು ಕಂಡುಬರುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (ಬರಹಗಳು ಮತ್ತು ಭಾಷಣಗಳು: ಸಂಪುಟ 7, ಭಾಗ 2, ಅಧ್ಯಾಯ 3, ಪುಟ 375) ಅಸ್ಪಶ್ಯರ ಬಗ್ಗೆ ಮನು ಏನು ಹೇಳಿದ್ದಾನೆ ಎಂಬುದನ್ನು ಈ ಕೆಳಕಂಡಂತೆ ಉಲ್ಲೇಖಿಸಿದ್ದಾರೆ:

51. ಚಂಡಾಲರ ಮತ್ತು ಶ್ವಪಚರ ಮನೆಗಳು ಊರ ಹೊರಗೇ ಇರತಕ್ಕದ್ದು, ಅವರನ್ನು ಅಪಾತ್ರರನ್ನಾಗಿ ಮಾಡಬೇಕು, ನಾಯಿ ಮತ್ತು ಕತ್ತೆ ಅವರ ಸಂಪತ್ತು ಆಗಬೇಕು.

52. ಶವಕ್ಕೆ ತೊಡಿಸಿದ ಬಟ್ಟೆಯನ್ನು ಅವರು ತೊಡಬೇಕು. ಒಡಕು ತಟ್ಟೆಯಲ್ಲಿ ಊಟ ಮಾಡಬೇಕು, ಅವರ ಆಭರಣಗಳು ಕಬ್ಬಿಣದಿಂದ ಮಾಡಿದವು ಆಗಿರಬೇಕು ಮತ್ತು ಅವರು ಯಾವಾಗಲೂ ಅಲೆಮಾರಿಗಳಾಗಿರಬೇಕು.

53. ಧಾರ್ಮಿಕ ವಿಧಿಗಳನ್ನು ಪೂರೈಸಿದವರು ಅವರೊಂದಿಗೆ ಸಂಬಂಧ ಇರಿಸಿಕೊಳ್ಳಬಾರದು, ಅವರ ವ್ಯವಹಾರ ತಮ್ಮವರಲ್ಲಿಯೇ ನಡೆಯಬೇಕು ಮತ್ತು ಅವರ ಮದುವೆಗಳು ತಮ್ಮ ಸಮಾನರೊಂದಿಗೆ ನೆರವೇರಬೇಕು.

54. ಅವರಿಗೆ ಊಟವನ್ನು ಒಡಕು ತಟ್ಟೆಯಲ್ಲಿ ಬೇರೆಯವರು (ಅನಾರ್ಯರು) ಕೊಡಬೇಕು, ರಾತ್ರಿ ವೇಳೆ ಅವರು ಹಳ್ಳಿ ಇಲ್ಲವೆ ಪಟ್ಟಣದಲ್ಲಿ ತಿರುಗಾಡಬಾರದು.

55. ಹಗಲಿನಲ್ಲಿ ಅರಸನ ಆಜ್ಞೆಯ ಗುರುತನ್ನು ಧರಿಸಿ ತಮ್ಮ ಕೆಲಸಕ್ಕಾಗಿ ತಿರುಗಾಡಬಹುದು. ಸಂಬಂಧಿಕರಲ್ಲದವರ ಶವವನ್ನು ಹೊರಬೇಕು. ಅದು ಕಡ್ಡಾಯ ಕಾಯ್ದೆ.

56. ಯಾವಾಗಲೂ ಅಪರಾಧಿಗಳನ್ನು ಅರಸನ ಆಜ್ಞೆಯಂತೆ, ಕಾಯ್ದೆಗೆ ಅನುಗುಣವಾಗಿ ಕೊಲ್ಲತಕ್ಕದ್ದು ಮತ್ತು ಆ ಅಪರಾಧಿಗಳ ಬಟ್ಟೆ, ಹಾಸಿಗೆ ಮತ್ತು ಆಭರಣಗಳನ್ನು ತಾವೇ ತೆಗೆದುಕೊಳ್ಳತಕ್ಕದ್ದು.

ಶೂದ್ರರಿಗಿರುವ ಸಾಮಾಜಿಕ ಸ್ಥಾನಮಾನಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಈ ರೀತಿ ಹೇಳಿದ್ದಾರೆ:

1. ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರರಿಗೆ ಕೊನೆಯ ಸ್ಥಾನ.

2. ಶೂದ್ರರು ಅತ್ಯಂತ ಕೊಳಕಾಗಿರುವುದರಿಂದ ಯಾವುದೇ ಪವಿತ್ರ ಕೆಲಸವನ್ನು ಅವರ ಕಣ್ಣಿಗೆ ಕಾಣುವಂತಾಗಲೀ, ಕಿವಿಗೆ ಕೇಳುವಂತಾಗಲೀ ಮಾಡಬಾರದು.

3. ಇತರ ಮೂರು ವರ್ಗಗಳವರಿಗೆ ನೀಡುವ ಯಾವುದೇ ಗೌರವವನ್ನು ಶೂದ್ರರಿಗೆ ನೀಡಬಾರದು.

4. ಶೂದ್ರರ ಜೀವನಕ್ಕೆ ಯಾವುದೇ ಬೆಲೆ ಇಲ್ಲವಾದ್ದರಿಂದ ಯಾರು ಬೇಕಾದರೂ ಅವರನ್ನು ಕೊಲ್ಲಬಹುದು. ಅವರನ್ನು ಕೊಂದಿದ್ದಕ್ಕಾಗಿ ಯಾವುದೇ ಪರಿಹಾರವನ್ನು ನೀಡಬೇಕಾಗಿಲ್ಲ. ಒಂದು ವೇಳೆ ಕೊಡಬೇಕಾದರೂ, ಅತ್ಯಂತ ಸಣ್ಣ ಮೊತ್ತವನ್ನು ಕೊಡಬಹುದು.

5. ಶೂದ್ರರು ವಿದ್ಯೆಯನ್ನು ಪಡೆಯುವಂತಿಲ್ಲ. ಅವರಿಗೆ ವಿದ್ಯೆಯನ್ನು ಕೊಡುವುದು ಮಹಾಪಾಪ ಹಾಗೂ ಪಾತಕ.

6. ಶೂದ್ರರು ಆಸ್ತಿಯನ್ನು ಹೊಂದಬಾರದು ಹಾಗೂ ಅವರ ಆಸ್ತಿಯನ್ನು ಬ್ರಾಹ್ಮಣರು ಇಚ್ಛಾನುಸಾರ ಅನುಭವಿಸಬಹುದು.

7. ಶೂದ್ರರು ಯಾವುದೇ ರಾಜ್ಯಾಧಿಕಾರ ಹೊಂದಬಾರದು.

8. ತಮ್ಮ ಮೇಲಿನ ಮೂರು ವರ್ಗಗಳ ಸೇವೆ ಮಾಡುವುದೇ ಶೂದ್ರರ ಕರ್ತವ್ಯ ಹಾಗೂ ಅದರಿಂದಲೇ ಅವರಿಗೆ ಮೋಕ್ಷ.

9. ಮೇಲ್ವರ್ಗದವರಾರೂ ಶೂದ್ರರನ್ನು ಮದುವೆ ಆಗುವಂತಿಲ್ಲ. ತಮಗಿಷ್ಟವಿದ್ದಲ್ಲಿ ಶೂದ್ರ ಹೆಣ್ಣನ್ನು ಸೂಳೆಯನ್ನಾಗಿ ಇಟ್ಟುಕೊಳ್ಳಬಹುದು. ಆದರೆ, ಶೂದ್ರನಾದವನು ಮೇಲ್ವರ್ಗದ ಹೆಣ್ಣನ್ನು ಮುಟ್ಟಿದರೆ ಅತ್ಯುಗ್ರ ಶಿಕ್ಷೆಗೆ ಗುರಿಯಾಗಬೇಕು.

10. ಶೂದ್ರರು ಹುಟ್ಟಿನಿಂದ ಸಾಯುವ ತನಕ ಗುಲಾಮರಾಗಿಯೇ ಉಳಿಯಬೇಕು.

ಈ ರೀತಿಯಾಗಿ ಭಾರತ ದೇಶದ ಜಾತಿ ಅಸಮಾನತೆಯಲ್ಲಿ ವರ್ಗ ಅಸಮಾನತೆ, ವರ್ಣ ಅಸಮಾನತೆ, ಲಿಂಗ ಅಸಮಾನತೆ, ಸಾಮಾಜಿಕ ಅಸಮಾನತೆ ಮತ್ತು ಸಾಂಸ್ಕತಿಕ ಅಸಮಾನತೆಯೂ ಸಹ ಒಳಗೊಂಡಿದೆ. ಮುಂದುವರೆದು ಶೂದ್ರರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ವ೦ಚಿಸಲಾಯಿತು.

ಶೂದ್ರರು ಮತ್ತು ದಲಿತರು ನೂರಕ್ಕೆ ನೂರು ಶ್ರಮ ಜೀವಿಗಳು, ಸಮಾಜದ ಕಷ್ಟದ ಕೆಲಸ ಮತ್ತು ಕೊಳಕಿನ ಕೆಲಸ ಮಾಡುವವರು. ರಾತ್ರಿ ಹಗಲು ದುಡಿದರೂ ಎರಡು ಹೊತ್ತಿನ ಊಟ ಸಿಗುವುದು ನಿಶ್ಚಿತವಿಲ್ಲ. ಇಡೀ ಬದುಕೇ ದುಡಿಮೆಯ ಬದುಕು. ಹೀಗೆ ದೇಶದ ಸಂಪತ್ತಿನ ಉತ್ಪಾದನೆಗೆ ಅಪಾರವಾದ ಶ್ರಮವನ್ನು ವ್ಯಯಿಸಿದ ಈ ಜನರಿಗೆ ಸಂಪತ್ತಿನ ಮೇಲೆ ಯಾವುದೇ ಮಾಲೀಕತ್ವ ಇಲ್ಲ. ಉತ್ಪಾದನಾ ಸಾಧನಗಳಾದ ಭೂಮಿ, ಕೈಗಾರಿಕೆ, ಯಂತ್ರಗಳು ಇತ್ಯಾದಿ ಇವರ ಕೈಯಲ್ಲಿಲ್ಲ. ಉತ್ಪಾದನೆಯಾದ ಸರಕಾಗಲೀ ಅಥವಾ ಅದರ ವಿತರಣೆಯಾಗಲೀ ಇವರ ಕೈಯಲ್ಲಿಲ್ಲ. ಈ ರೀತಿ ಶ್ರಮ ಜೀವಿಗಳನ್ನು ಆರ್ಥಿಕವಾಗಿ ನಿರ್ಬಲಗೊಳಿಸಲಾಯಿತು.

ಒಂದು ದೇಶದ ಅಥವಾ ಸಮಾಜದ ರಾಜಕೀಯ ಅಧಿಕಾರವು ಆ ಸಮಾಜದ ಸ್ವರೂಪವನ್ನು ನಿರ್ಧರಿಸುತ್ತದೆ. ರಾಜಕೀಯ ಅಧಿಕಾರವೆಂದರೆ ಕಾನೂನುಗಳನ್ನು ರಚಿಸುವುದು, ಅವುಗಳನ್ನು ಅನುಷ್ಠಾನಗೊಳಿಸುವುದು, ಅವುಗಳ ವ್ಯಾಖ್ಯಾನ ಮತ್ತು ಕಾನೂನುಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯನ್ನು ವಿಧಿಸುವುದು. ಇಂತಹ ರಾಜಕೀಯ ಅಧಿಕಾರ ಮತ್ತು ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಿಂದ ಶೂದ್ರರನ್ನು, ದಲಿತರನ್ನು ಹಾಗೂ ಮಹಿಳೆಯರನ್ನು ದೂರವಿಡಲಾಯಿತು.

ಜಗತ್ತಿನ ಯಾವುದೇ ದೇಶದ ಇತಿಹಾಸ ಎಂದರೆ ಅದು ರಾಜ ಮಹಾರಾಜರ ಕಥೆ, ಅದು ಪ್ರಭುಗಳ ಇತಿಹಾಸವೇ ಹೊರತು ಪ್ರಜೆಗಳ ಇತಿಹಾಸವಲ್ಲ. ಭೂಮಿಯ ಮೇಲಿನ ಒಡೆತನಕ್ಕಾಗಿ ರಾಜ ಮನೆತನಗಳು ತಮ್ಮ ತಮ್ಮಲ್ಲಿ ಹೊಡೆದಾಡಿದ್ದನ್ನೇ ಇತಿಹಾಸವೆಂದು ಬರೆದಿಡಲಾಗಿದೆ. ರಾಜರ ನಿರಂತರ ಯುದ್ಧದ, ಸುಖದುಃಖದ ವಿಷಯ ಬಿಟ್ಟರೆ ಸಾಮಾನ್ಯ ಜನರ ಬದುಕಿನ ವಿವರಗಳು ಇಲ್ಲವೇ ಇಲ್ಲ. ಆದರೆ ಚರಿತ್ರೆಯನ್ನು ನಿರ್ಮಿಸಿದ್ದು ಸಾಮಾನ್ಯರೇ ಹೊರತು ರಾಜರಲ್ಲ. ಈ ಸಾಮಾನ್ಯರೆಂದರೆ ಶೂದ್ರರು, ದಲಿತರು ಮತ್ತು ಮಹಿಳೆಯರು, ಈ ರೀತಿಯಾಗಿ ಶತಮಾನಗಳ ಕಾಲ ಶೂದ್ರರನ್ನು, ದಲಿತರನ್ನು ಮತ್ತು ಮಹಿಳೆಯರನ್ನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಿರ್ಬಲಗೊಳಿ ಶೋಷಣೆಗೆ ಒಳಪಡಿಸಿ ಗುಲಾಮರನ್ನಾಗಿ ನಡೆಸಿಕೊಳ್ಳಲಾಯಿತು.

ಜಾತಿ ಪದ್ಧತಿಯ ಸಾಮಾಜಿಕ ಸಮಸ್ಯೆಗಳು

ಅಂಬೇಡ್ಕರ್‌ರವರ ಪ್ರಕಾರ ಜಾತಿ ಪದ್ಧತಿಯು, ಶ್ರಮದ ವಿಭಜನೆಯಾಗಿರದೇ ಶ್ರಮಿಕರ ವಿಭಜನೆಯಾಗಿದೆ. ಒಬ್ಬರ ಮೇಲೊಬ್ಬರು ಹೇರುವ ಶ್ರೇಣೀಕೃತ ವ್ಯವಸ್ಥೆಯಾಗಿದೆ. ಇಚ್ಛೆಪಟ್ಟು ಮಾಡಿಕೊಂಡ ಸಹಜ ಸ್ಥಿತಿಯಾಗದೆ ಬಲವಂತವಾಗಿ ಹೇರಲಾದ ಸ್ಥಿತಿಯಾಗಿದೆ. ವೈಯಕ್ತಿಕ ಭಾವನೆಗಳಿಗೆ ಇಲ್ಲಿ ಆಸ್ಪದವೇ ಇಲ್ಲ. ವ್ಯಕ್ತಿಯು, ತನಗೆ ನಿಗದಿಪಡಿಸಿದ ಕೆಲಸವು ಕಡ್ಡಾಯವಾಗಿದ್ದ ಹಾಗೂ ವಂಶ ಪಾರಂಪರ್ಯವಾಗಿದ್ದ ಕಾರಣ ಕೆಲಸವನ್ನು ಅಥವಾ ಕಸುಬನ್ನು ಬದಲಾಯಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ನಿರುದ್ಯೋಗ ಸೃಷ್ಟಿಯಾಗಲು ಜಾತಿ ಪದ್ಧತಿಯೂ ನೇರ ಕಾರಣವಾಯಿತು. ಜಾತಿ ಪದ್ಧತಿಯು ಒಂದು ಆರ್ಥಿಕ ಸಂಘಟನೆಯಾಗಿ ಬಹು ಹಾನಿಕಾರಕ ವ್ಯವಸ್ಥೆಯಾಗಿದೆ. ಮಾನವರ ಸಹಜ ಶಕ್ತಿ ಮತ್ತು ಪ್ರತಿಭೆಗಳನ್ನು ಹತ್ತಿಕ್ಕಿ ಸಮಾಜ ಹೊರಿಸುವ ವೃತ್ತಿಯನ್ನು ಒಪ್ಪಿಕೊಳ್ಳುವುದರಿಂದ ವ್ಯಕ್ತಿಯ ಬುದ್ಧಿ ಬೆಳೆಯದೇ ಕಾಲಕ್ರಮೇಣ ಅವರು ನಿರುಪಯುಕ್ತ ಆಗಿಬಿಡುತ್ತಾರೆ. ಜಾತಿ ವ್ಯವಸ್ಥೆಯು ಯಾವುದೇ ಜನಾಂಗವನ್ನು ಅಭಿವೃದ್ಧಿಪಡಿಸಲಿಲ್ಲ; ಬದಲಿಗೆ ಅದು ಸಮಾಜವನ್ನು ಛಿದ್ರಗೊಳಿಸಿ ಅನೈತಿಕತೆಯ ಅಂಚಿಗೆ ತಳ್ಳಿತು.

ಹಿಂದೂ ಸಮಾಜದಲ್ಲಿ ಜಾತಿ ಪದ್ಧತಿಯು ಸಾಮೂಹಿಕ ಚಟುವಟಿಕೆಯನ್ನು ನಿಷೇಧಿಸಿತು. ಹಿಂದುಗಳು ಒಗ್ಗಟ್ಟಾಗಿ ಬಾಳುವುದನ್ನು ಜಾತಿ ಪದ್ಧತಿಯು ತಪ್ಪಿಸಿತು. ನಾವೀಗ ಕಾಣುವುದು ವೈಯಕ್ತಿಕ ಚುಟವಟಿಕೆಗಳೇ ಹೊರತು ಸಮಾಜದ ಸಾಮೂಹಿಕ ಚಟುವಟಿಕೆಯಲ್ಲ, ಜಾತಿ ಪದ್ಧತಿಯೆಂಬ ಸಮಾಜ ವಿರೋಧಿ ಅಂಶವು ಸಮಾಜವನ್ನು ಒಡೆದು ಹಾಕಿದ್ದು ಮಾತ್ರವಲ್ಲದೇ ಒಡೆದು ಹೋದ ಗುಂಪುಗಳು ತಮಗಾಗಿ ಮತ್ತು ತಮ್ಮ ಸ್ವಾರ್ಥಕ್ಕಾಗಿ ಸದಾ ಕಾದಾಡುವಂತೆ ಮಾಡಿದೆ. ಒಂದು ಗುಂಪನ್ನು ತುಳಿಯುವುದರ ಮೂಲಕ ಮತ್ತೊಂದು ಗುಂಪು ಅಸ್ತಿತ್ವದಲ್ಲಿರಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ ಜಾತಿ ಮತ್ತು ಜಾತಿ ಪ್ರಜ್ಞೆಯು ಸಮಾಜದ ಐಕ್ಯವನ್ನು ಅಸಾಧ್ಯವಾಗಿಸಿದೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು