October 1, 2023 7:37 am

ಜಾತಿಗಳ ಉಗಮ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಮಾನವ ಸಮಾಜದ ವಿಕಾಸದಲ್ಲಿ ಒಂದಾದ ನಂತರ ಒಂದರಂತೆ ರೂಪ ತಳೆಯುತ್ತ ಬಂದ ಬೇರೆ ಬೇರೆ ಸಾಮಾಜಿಕ ಮತ್ತು ಆರ್ಥಿಕ ಸಂರಚನೆಗಳಲ್ಲಿ ಜಾತಿ ಪಾತ್ರವೇನೆಂಬ ದೃಷ್ಟಿಯಿಂದ ಜಾತಿಯ ವ್ಯವಸ್ಥೆಯನ್ನು ನಾವು ನೋಡಬೇಕು. ಭಾರತ ದೇಶದ ಉತ್ತರ ಭಾಗದಲ್ಲಿ ದ್ರಾವಿಡ ಜನಾಂಗದವರು ಒಂದು ಕಾಲದಲ್ಲಿ ವಾಸಿಸುತ್ತಿದ್ದರು. ಆರ್ಯರು, ಪರ್ಷಿಯನ್ನರು, ಗ್ರೀಕರು, ಹೂಣರು, ಟರ್ಕಿಯನ್ನರು, ಮಂಗೋಲಿಯನ್ನರು, ಯುರೋಪಿಯನ್ನರು ಮುಂತಾದ ವಿದೇಶಿ ಜನಾಂಗಗಳು ದಾಳಿ ಮಾಡಿ ಸ್ಥಳೀಯ ಜನಾಂಗದ ವಿರುದ್ಧ ಯುದ್ಧ ಮಾಡಿ ಬಂದರೆ, ಮತ್ತೆ ಕೆಲವರು ಬೇರೆಬೇರೆ ಕಾರಣಗಳಿಂದ ಭಾರತದೊಳಗೆ ಪ್ರವೇಶಿಸಿದರು. ಭಾರತದೊಳಗಿದ್ದವರಿಗೂ, ಹೊರಗಿನವರಿಗೂ ಹೊಡೆದಾಟಗಳು ನಡೆದವು. ಗೆದ್ದವರು ಸೋತವರ ಮೇಲೆ ಹಿಡಿತ ಸಾಧಿಸಿದರು. ಗೆದ್ದ ಜನಾಂಗದವರು ಸೋತ ಜನಾಂಗದವರ ಸ್ತ್ರೀಯರೊಂದಿಗೆ ಸಂಪರ್ಕ ಬೆಳೆಸುವುದರ ಮೂಲಕ ಮಿಶ್ರ ಸಂತತಿಗಳುಂಟಾದವು. ಕ್ರಮೇಣ ಮಿಶ್ರ ಸಂತತಿಗಳು ಪ್ರತ್ಯೇಕ ಬುಡಕಟ್ಟುಗಳಾಗಿ ಬೆಳೆದವು. ಭಾರತದಲ್ಲಿನ ಜನಾಂಗಗಳನ್ನು ಅಧ್ಯಯನ ಮಾಡಿದ ಭಾರತದ ಮಾನವ ಶಾಸ್ತ್ರ ಸರ್ವೇಕ್ಷಣ ಇಲಾಖೆಯು ‘ಭಾರತದ ಜನತೆ’ ಎಂಬ ಪುಸ್ತಕ ಮಾಲಿಕೆಯಲ್ಲಿ ಭಾರತೀಯ ಸಮಾಜ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ವಿವರಿಸಿದೆ. ಈ ವಿವರಣೆಯ ಕೆಲವು ಮುಖ್ಯ ಅಂಶಗಳೆಂದರೆ:

1. ಭಾರತ ದೇಶ ಇಡೀ ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ಇಂದು ಸುಮಾರು 4,635 ವಿವಿಧ ಜನಾಂಗೀಯ ಪಂಗಡಗಳು ಇವೆ. ಇವು ತಮ್ಮದೇ ಆದ ಅನುವಂಶೀಯ ಲಕ್ಷಣಗಳು, ಭಾಷೆ, ಉಡುಪು, ಧಾರ್ಮಿಕ ಸಂಪ್ರದಾಯಗಳು, ಆಹಾರ, ಅಭಿರುಚಿಗಳು, ಕೌಟುಂಬಿಕ ಸಂಬಂಧಗಳು ಮತ್ತು ವೈವಾಹಿಕ ಆಚರಣೆಗಳನ್ನು ಒಳಗೊಂಡಿವೆ.

2. ಭಾರತದ ಜನತೆಯು ಹಲವಾರು ಜನಾಂಗೀಯ ವರ್ಣ ಸಂಕರಗಳ ಮಧ್ಯೆ ಬೆಳೆದು ಬಂದಿದೆ. ಅವುಗಳೆಂದರೆ ಪ್ರೊಟೋ-ಅಸ್ಟೋಲಾಯ್ಡ್, ಪಾಲಿಯೋ- ಮೆಡಿಟರೇನಿಯನ್, ಕಾಕಸಾಯಡ್, ನೀಗ್ರೋಯ್ಡ್ ಮತ್ತು ಮಂಗೋಲಾಯ್ಡ್ ಹಲವಾರು ರಾಷ್ಟ್ರೀಯರು ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರೆಂದರೆ ಆರ್ಯನ್ನರು, ಮಂಗೋಲಿಯನ್ನರು ಮತ್ತು ಯುರೋಪಿಯನ್ನರು. ಇಂದು ಭಾರತದಲ್ಲಿ ಎಲ್ಲಿಯೂ ಯಾವುದೇ ಜನಾಂಗೀಯ ಅಥವಾ ರಾಷ್ಟ್ರೀಯತೆಯ ಮೂಲ ಲಕ್ಷಣಗಳು ಗೋಚರಿಸುವುದಿಲ್ಲ. ಬದಲಾಗಿ ಜನಾಂಗೀಯ ಸಮ್ಮಿಶ್ರಣವನ್ನು ಇಡೀ ದೇಶದಲ್ಲಿ ಕಾಣಬಹುದು.

3. ಒಂದೇ ಧರ್ಮದ ಅಥವಾ ಜಾತಿಯ ಜನರಿಗಿಂತ, ಒಂದೇ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿನ ಸಾಮ್ಯತೆಗಳಿರುತ್ತವೆ. ‘ಮೇಲ್ವರ್ಗ’ದ ಮತ್ತು ‘ಕೆಳವರ್ಗ’ದ ಜಾತಿಗಳ ನಡುವೆ ಯಾವುದೇ ಅನುವಂಶೀಯ ಭಿನ್ನತೆಗಳಿರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

4. ಪ್ರತಿಯೊಂದು ಜನಾಂಗೀಯ ಜನರು ತಮ್ಮ ವಿಮೋಚನೆ ಬಿಡುಗಡೆ ಅಥವಾ ‘ಹಿಜ್ರತ್’ ದಿನಗಳನ್ನು ಜನಪದ ಗೀತೆಗಳಲ್ಲಿ, ಇತಿಹಾಸಗಳಲ್ಲಿ ಮತ್ತು ಸಮುದಾಯದ ಹಾಡುಗಳಲ್ಲಿ ಸಂರಕ್ಷಿಸಿಕೊಂಡು ಬಂದಿದ್ದಾರೆ. ಅವರು ವಾಸವಾಗಿದ್ದ ಕಡೆಗಳಲ್ಲೆಲ್ಲಾ ನಿರ್ದಿಷ್ಟ ಪ್ರದೇಶದ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬರುವಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಮತ್ತು ಸ್ಥಳೀಯ ರೂಢಿ ಸಂಪ್ರದಾಯಗಳನ್ನು ಒಪ್ಪಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ವಿಷಯದಲ್ಲಿ, ಆಕ್ರಮಣಕಾರರು ಅವರಾಗಿಯೇ ಸ್ಥಳೀಯರಾಗಿದ್ದಾರೆ.

5. ನಮ್ಮ ವೈವಿಧ್ಯ ಮತ್ತು ಏಕತೆಯ ಲಕ್ಷಣಗಳಲ್ಲಿ ಭಾಷೆ ಅತ್ಯಂತ ಮುಖ್ಯವಾದುದು. ಭಾರತದಲ್ಲಿ ಸುಮಾರು 325 ಭಾಷೆಗಳು ಮತ್ತು 25 ಲಿಪಿಗಳು ಇವೆ. ಇವುಗಳು ಇಂಡೋ-ಆರ್ಯನ್, ಟಿಬೆಟೋ-ಬರ್ಮೀಸ್, ಇಂಡೋ-ಯುರೋಪಿಯನ್, ದ್ರಾವಿಡ ಭಾಷೆಗಳು, ಆಸ್ಟ್ರೋ-ಏಷಿಯಾಟಿಕ್, ಅಂಡಮಾನಿಸ್ ಮತ್ತು ಇಂಡೋ ಇರಾನಿಯನ್ನಂತಹ ವಿವಿಧ ಭಾಷಾ ಕುಟುಂಬಗಳಿಂದ ಬಂದಿವೆ. ನಮ್ಮಲ್ಲಿ ಶೇಕಡ 65ಕ್ಕಿಂತಲೂ ಹೆಚ್ಚು ಜನ ಎರಡು ಭಾಷೆಗಳನ್ನು ಮಾತನಾಡುತ್ತಾರೆ.

6. ಭಾರತದ ಜನರು ಪರಸ್ಪರ ಪ್ರತ್ಯೇಕವಾಗಿ ಬದುಕಿದವರಲ್ಲ. ಅವರು ನೈಸರ್ಗಿಕ ಮತ್ತು ಸಾಮಾಜಿಕ ಪರಿಸರದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದವರು, ಶತಶತಮಾನಗಳಿಂದಲೂ ಅವರು ಬದುಕು ಮತ್ತು ಹೋರಾಟಗಳಲ್ಲಿ ಒಟ್ಟಾಗಿಯೇ ಭಾಗವಹಿಸಿದ್ದಾರೆ. ಈ ಪರಸ್ಪರ ಅವಲಂಬನೆ ಮತ್ತು ಸಾಮೂಹಿಕ ಹೋರಾಟಗಳು ನಮ್ಮ ವೈವಿಧ್ಯ ಹಾಗೂ ಏಕತೆಯನ್ನು ಸುಭದ್ರಗೊಳಿಸಿವೆ.

ಸ್ಥಳೀಯರ ಮತ್ತು ಹೊರಗಿನಿಂದ ಬಂದ ಜನರ ಮಧ್ಯೆ ಇಷ್ಟೆಲ್ಲಾ ಸಮ್ಮಿಶ್ರಣವನ್ನು ನಾವು ಕಂಡರೂ ಜಾತಿಗಳು ಯಾವ ರೀತಿ ಜನ್ಮ ತಾಳಿದವು ಎಂದು ಖಚಿತವಾಗಿ ಹೇಳುವುದು ಬಹಳ ಕಷ್ಟವಾಗುತ್ತದೆ. ಆದರೆ ಜಾತಿ ಏಕೆ ಹುಟ್ಟಿತು ಮತ್ತು ಏಕೆ ಉಳಿದಿದೆ ಎಂಬುದನ್ನು ತಿಳಿಯುವುದು ಕಷ್ಟವಾಗಿ ಕಾಣುವುದಿಲ್ಲ. ಹೊರಗಿನಿಂದ ಬಂದವರು ಯುದ್ಧ ಮಾಡಿ ಗೆದ್ದು ಸ್ಥಳೀಯ ಜನಾಂಗದ ಮೇಲೆ ಹಿಡಿತ ಸಾಧಿಸಿದರು. ಸೋತವರ ಬಗ್ಗೆ ತಿರಸ್ಕಾರ ತೋರಿಸಿ ಭಯ ಹುಟ್ಟಿಸಿ, ಕಷ್ಟದ ಹಾಗೂ ಕೊಳಕಿನ ಕೆಲಸಕ್ಕೆ ನೇಮಿಸಲಾಯಿತು. ಈ ರೀತಿಯಾಗಿ ಒಂದು ವಿಧವಾದ ಕೆಲಸದ ವಿಭಜನೆಯನ್ನು ಮಾಡಲಾಯಿತು.

ಜಾತಿಗಳ ವಿಂಗಡಣೆ

ಭಾರತವು ಅದೆಷ್ಟು ವಿಭಿನ್ನ ಜನಸಮುದಾಯಗಳಿಂದ ಕೂಡಿದ ದೇಶವಾಗಿದೆ ಎಂದರೆ ಇಲ್ಲಿನ ಸಮುದಾಯವನ್ನು ನಿರ್ದಿಷ್ಟ ಜಾತಿ, ಜನಾಂಗ ಅಥವಾ ಕುಲ ಪ್ರಕಾರವಾಗಿ ವಿಂಗಡಿಸುವುದು ಅಸಾಧ್ಯವೇ ಆಗಿದೆ. ನೂರಾರು ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಜಾತಿ ಉಪಜಾತಿಯೂ ಮತ್ತಷ್ಟು ಕವಲೊಡೆಯುತ್ತಾ, ಒಂದಕ್ಕೊಂದು ಹೆಣೆದುಕೊಳ್ಳುತ್ತಾ ಬಹುತೇಕ ಸಂದರ್ಭಗಳಲ್ಲಿ ಮೂಲ ಜಾತಿ ಯಾವುದು, ಅದರ ಮುಖ್ಯ ಕಾಂಡ ಯಾವುದು ಎಂಬುದೇ ಗುರುತು ಸಿಗದಂತಾಗಿದೆ. ಇಲ್ಲಿ ಯಾವುದು ಮೂಲ, ಯಾವುದು ಯಾವುದರ ಕವಲು ಎಂಬುದನ್ನು ಕಂಡುಹಿಡಿಯುವುದು ಸುಲಭವಲ್ಲ. ಆದ್ದರಿಂದ ಭಾರತದಲ್ಲಿ ಜಾತಿಪದ್ಧತಿಯ ಉಗಮವನ್ನು ಹಾಗೂ ಅದು ಈಗಿರುವಂತೆ ಬೆಳೆದು ಬಂದ ಹಂತಗಳನ್ನು ಗುರುತಿಸಲು ಹೋಗುವುದು ಎಷ್ಟೋ ಸಲ ವ್ಯರ್ಥ ಪ್ರಯತ್ನವಾಗಿ ಬಿಡುತ್ತದೆ. ಇಲ್ಲಿ ಬೇರೆಬೇರೆ ವಿದ್ವಾಂಸರು ಮಾಡಿದ ಜಾತಿ ವಿಂಗಡಣೆಯಲ್ಲಾಗಲೀ ಸ್ವತಃ ಜನರೇ ತಮ್ಮ ತಮ್ಮ ಜಾತಿಗಳ ಬಗ್ಗೆ ಕೊಡುವ ವಿವರದಲ್ಲಾಗಲೀ ಒಮ್ಮತಕ್ಕಿಂತ ಭಿನ್ನಮತವೇ ಹೆಚ್ಚಾಗಿರುತ್ತದೆ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ ಮತ್ತು ಜಾತಿ ಇವೆರಡೂ ಒಂದರೊಡನೊಂದು ಹೇಗೆ ಹೆಣೆದುಕೊಂಡಿವೆ ಎಂದರೆ ಜಾತಿಗಳನ್ನು ವಿಂಗಡಿಸುವಾಗ ಧರ್ಮವು ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಜಾತಿಯ ನಿಯಂತ್ರಣವು ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಗೆರೆ ಎಳೆದಂತೆ ಬೇರ್ಪಡಿಸಿ ಹೇಳುವುದು ಬಹಳ ಕಷ್ಟ.

ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಭಾರತೀಕರಣ

10ನೇ ಶತಮಾನದ ಮಧ್ಯಭಾಗದಲ್ಲಿ ಮುಸಲ್ಮಾನರು ಭಾರತ ದೇಶಕ್ಕೆ ಆಕ್ರಮಣಕಾರರಾಗಿ ಮತ್ತು ದಾಳಿಕೋರರಾಗಿ ಬಂದರು. ಇದರಿಂದ ಭಾರತ ದೇಶದೊಳಗೆ ಇಸ್ಲಾಂ ಧರ್ಮ ಪ್ರವೇಶ ಪಡೆಯಿತು. ಇಸ್ಲಾಂ ಧರ್ಮ ಬೋಧಿಸಿದ ಸಾಮಾಜಿಕ ಸಮಾನತೆಗೆ ಭಾರತದ ಕೆಳಜಾತಿಯ ಜನ ಆಕರ್ಷಿತರಾದರು. ಹಿಂದು ಸಮಾಜದ ಜಾತಿ ಅಸಮಾನತೆ, ಕೌರ್ಯ ಮತ್ತು ಅಸ್ಪೃಶ್ಯತೆಯೆಂಬ ಸಾಮಾಜಿಕ ಅನಿಷ್ಟಗಳಿಂದ ವಿಮುಕ್ತಿಗೊಳ್ಳಲು ಕೆಳಜಾತಿಯ ಅನೇಕರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಆದರೆ ಸಾಮಾಜಿಕ ಸಮಾನತೆ ಬರಲಿಲ್ಲ ಮತ್ತು ಅಸಮಾನತೆಯಿಂದ ಮುಕ್ತಿ ಸಿಗಲಿಲ್ಲ.

ಮುಸಲ್ಮಾನರ ಆಡಳಿತದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಲೆಂದೇ ಭಾರತದ ಮೇಲು ಜಾತಿಯ ಕೆಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಭಾರತದ ಮೇಲು ಜಾತಿಯವರು, ಶೂದ್ರರು ಮತ್ತು ಅಸ್ಪೃಶ್ಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಈ ರೀತಿ ಮತಾಂತರಗೊಂಡ ಮುಸಲ್ಮಾನರಲ್ಲಿ ಪ್ರಮುಖವಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:

ಉನ್ನತ ವರ್ಗದ ಮುಸಲ್ಮಾನರು: ಇವರಲ್ಲಿ ಸಯದ್‌, ಶೇಖ್‌, ಪಠಾನ್, ಮೊಗಲ್, ಮಾಲಿಕ್, ಮಿರಜ ಇತ್ಯಾದಿಯವರನ್ನೊಳಗೊಂಡಿದೆ.

ಕೆಳವರ್ಗದ ಮುಸಲ್ಮಾನರು: ಇವರಲ್ಲಿ ದರ್ಜಿ, ಜೂಲಾಹ, ಫಕೀರ, ರುಂಗರಜೆ, ಬ್ಯಾರಿ, ಭಾತಿರ, ಚೆಕ್, ಖುರುಹಾರ್, ದೈಯಿ, ಸವ, ಸುನಿಯ, ಗದ್ದೆ, ಕಾಲ, ಕಸಾಯ, ಕುಲ, ಕುಜಾರ, ಲಗರಿ, ಮುಲ್ಲಾ, ನುಲಿಯ, ನಿಶಾರಿ, ಅದಾಲತ್, ಖಾಕೊ, ಬಡಿಯ, ಬಾಟ್, ಚಮಾಲ, ದಫಿತಿ, ದೋಬಿ, ಹಜಾಮ್‌, ಮುಚಾವ್, ನಗರಬೆ, ನಾಟ್, ಪನವಾರಿಯ, ಮಧಾರಿಯ, ತುನಿತ್ಯ ಇತ್ಯಾದಿಯವರು ಒಳಗೊಂಡಿದ್ದಾರೆ.

ದುರ್ಬಲ ವರ್ಗಕ್ಕೆ ಸೇರಿದ ಮುಸಲ್ಮಾನರು ಇವರಲ್ಲಿ ಬನಾರ್‌, ಹಲಾಲ್ ಕೋರಾ, ಹಿರಜ, ಕಶ್‌ಯಿ, ಲಾಲ್ ಬೇಗಿ, ಮಂಗತ್, ಮೇಹಲಾ‌ ಇತ್ಯಾದಿಯವರು ಒಳಗೊಂಡಿದ್ದಾರೆ.

ಜಗತ್ತಿನ ಬೇರೆ ದೇಶಗಳ ಮುಸಲ್ಮಾನರಲ್ಲಿ ಶಿಯ ಮತ್ತು ಸುನ್ನಿಯೆಂಬ ಎರಡು ಪಂಗಡಗಳಿದ್ದರೆ, ಭಾರತದ ಮುಸಲ್ಮಾನರಲ್ಲಿ ಸುಮಾರು 250 ಜಾತಿಗಳು ಮತ್ತು ಉಪ ಜಾತಿಗಳಿವೆಯೆಂದು ಹೇಳಲಾಗಿದೆ. ಹೀಗೆ ಇಸ್ಲಾಂ ಧರ್ಮ ಭಾರತೀಕರಣವಾಗಿ ಸಾಮಾಜಿಕ ಅಸಮಾನತೆ ಮುಂದುವರೆಯಿತು.

ಇದೇ ರೀತಿ ಯುರೋಪಿನ ಡಚ್ಚರು, ಪೋರ್ಚುಗೀಸರು, ಫ್ರೆಂಚರು ಮತ್ತು ಬ್ರಿಟಿಷರ ಆಗಮನದಿಂದ ಭಾರತ ದೇಶದೊಳಗೆ ಕ್ರೈಸ್ತ ಧರ್ಮ ಪ್ರವೇಶ ಪಡೆಯಿತು. ಈ ಪರಕೀಯರ ಆಡಳಿತದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಲು ಭಾರತದ ಮೇಲು ಜಾತಿಯ ಜನ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಜಾತಿ ವ್ಯವಸ್ಥೆಯ ಸಾಮಾಜಿಕ ಅಸಮಾನತೆಯಿಂದ ಹೊರಬರಲು ಕೆಳಜಾತಿಯ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಕ್ರೈಸ್ತ ಧರ್ಮವು ಭಾರತೀಕರಣವಾಗಿ ಸಾಮಾಜಿಕ ಅಸಮಾನತೆ ಮುಂದುವರೆಯಿತು. ಜಗತ್ತಿನ ಇತರೆ ದೇಶಗಳ ಕ್ರೈಸ್ತ ಧರ್ಮದಲ್ಲಿ ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎಂಬ ಎರಡು ಬಗೆಯ ಪಂಗಡಗಳಿದ್ದರೆ ಭಾರತ ದೇಶದ ಕ್ರೈಸ್ತ ಧರ್ಮದಲ್ಲಿ ಸುಮಾರು 400 ಜಾತಿಗಳಿವೆ ಎಂದು ಹೇಳಲಾಗಿದೆ.

ಇದೇ ರೀತಿ ಭಾರತ ದೇಶದ ಬೌದ್ಧ, ಜೈನ, ಸಿಖ್ ಮತ್ತು ಜರಾಸ್ಟ್ರುನಿಸಂನಲ್ಲಿಯೂ ಸಹ ಅಸ್ಪೃಶ್ಯರು ಅಸ್ಪೃಶ್ಯರಾಗಿ ಮುಂದುವರೆದರು. ನ್ಯಾಯಮೂರ್ತಿ ಸಾಚಾರ್ ಆಯೋಗ 2006ರ ತನ್ನ ವರದಿಯಲ್ಲಿ ಭಾರತದ ಎಲ್ಲಾ ಧರ್ಮಗಳಲ್ಲೂ ಅಸ್ಪೃಶ್ಯರು ಇದ್ದಾರೆಂದು ಹೇಳಿದೆ. ಯಾವ ಯಾವ ಧರ್ಮದಲ್ಲಿ ಶೇಕಡ ಎಷ್ಟು ಪ್ರಮಾಣದ ಅಸ್ಪಶ್ಯರಿದ್ದಾರೆಂದು ತಿಳಿಸಿದೆ.

ಧರ್ಮಶೇ.ವಾರು ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡಹಿಂದುಳಿದ ವರ್ಗಇತರೆಒಟ್ಟು
ಹಿಂದೂ22.2942.626100
ಇಸ್ಲಾಂ0.50.539.25.5100
ಕ್ರೈಸ್ತ932.824.833.3100
ಸಿಖ್30.70.922.445.1100
ಜೈನ02.6394.3100
ಬೌದ್ಧ9.57.40.42.7100
ಜರಸ್ಟ್ರಾನಿಸಂ015.913.770.4100
ಇತರೆ2.62.56.20.7100

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು