October 1, 2023 8:52 am

ದಲಿತರಿಗೆ ಶಾಹೂ ಮಹಾರಾಜರಂತಹ ಸಖ ಲಭಿಸುತ್ತಾನೋ ಇಲ್ಲವೋ ಸಂಶಯ

ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಿವೃತ್ತವಾಗಿರುವ ಪ್ರೊ.ರಹಮತ್ ತರೀಕೆರೆ ಅವರು ಕನ್ನಡದ ವಿದ್ವತ್ ಲೋಕವನ್ನು ವಿಸ್ತರಿಸಿದವರು. ಸಂಸ್ಕೃತಿ, ಪ್ರತಿ ಸಂಸ್ಕೃತಿ, ನಾಥ ಪರಂಪರೆ, ಸಂಶೋಧನೆ ಮೊದಲಾದ ವಿಷಯಗಳಲ್ಲಿ ವಿದ್ವತ್ ಪೂರ್ಣ ಕೃತಿಗಳನ್ನು ರಚಿಸಿರುವ ಇವರು, ಪ್ರವಾಸ ಕಥನ ಮತ್ತು ಹಳಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಇಂದು ಶಾಹು ಮಹಾರಾಜರ ಜನ್ಮದಿನ. ‌ನನ್ನ‌ಕೊಲ್ಹಾಪುರ ಭೇಟಿಯ ನೆನಪನ್ನು ಹಂಚಿಕೊಳ್ಳಬೇಕು ಅನಿಸಿತು.

ಕೊಲ್ಹಾಪುರಕ್ಕೆ ಹೋದಾಗಲೆಲ್ಲ ನಾನು ಭೇಟಿ ಮಾಡುವ ವ್ಯಕ್ತಿಗಳಲ್ಲಿ ಜಯಸಿಂಗರಾವ್ ಪವಾರರೂ ಒಬ್ಬರು. ಅವರ `ರಾಜರ್ಷಿ ಶಾಹೂ ಛತ್ರಪತಿ: ಒಬ್ಬ ಸಾಮಾಜಿಕ ಕ್ರಾಂತಿಕಾರಿ ರಾಜ’  ಕೃತಿಯು ಭಾರತದ ಪ್ರಗತಿಶೀಲ ದೊರೆಗಳನ್ನು ಅರ್ಥಮಾಡಿಕೊಳ್ಳುವ ನನ್ನ ದೃಷ್ಟಿಕೋನವನ್ನೇ ಪಲ್ಲಟಿಸಿತು. ಭಾರತದಲ್ಲಿ ಸಾಮಾಜಿಕ ಸುಧಾರಣೆಯ ಪ್ರಯೋಗಗಳು ನಡೆದ ಕೋರೆಗಾಂವ್, ಮಹಾಡ್, ಪುಣೆ, ಬಸವಕಲ್ಯಾಣಗಳ ಪಂಕ್ತಿಯಲ್ಲಿ ಕೊಲ್ಹಾಪುರವೂ ಒಂದೆಂದು ಮನವರಿಕೆಗೊಳಿಸಿತು. 

ಕೊಲ್ಹಾಪುರದ ತಿರುಗಾಟವನ್ನು ನಾನು ಸಾಮಾನ್ಯವಾಗಿ ಛತ್ರಪತಿ ಶಾಹು ಅರಮನೆಯಿಂದ ಶುರುಮಾಡುತ್ತೇನೆ. ಬಳಿಕ ಅರಮನೆ ಬದಿಯಿರುವ ಹೊಳೆಗಿಳಿದು ಶಾಹೀ ಸ್ನಾನಘಟ್ಟಕ್ಕೆ ಹೋಗುತ್ತೇನೆ. ದೊರೆ ಕಟ್ಟಿಸಿದ ವಿಶಾಲ ಕೆರೆ, ಸ್ಥಾಪಿಸಿದ ಕುಸ್ತಿ ಮೈದಾನ, ದಲಿತ ಮಾಲೀಕತ್ವದಲ್ಲಿದ್ದ ಹೋಟೆಲಿನ ಜಾಗ ಹಾಗೂ ರಂಗಮಂದಿರಗಳನ್ನು ಕಾಣುತ್ತೇನೆ. ಇವೆಲ್ಲವೂ ದೊರೆ ಕೈಗೊಂಡ ವಿವಿಧ ಪ್ರಯೋಗದ ಕುರುಹುಗಳು. ಇವುಗಳಲ್ಲೆಲ್ಲ ಶಾಹೀ ಸ್ನಾನಘಟ್ಟಕ್ಕೆ  ವಿಶಿಷ್ಟ ಸ್ಥಾನವಿದೆ.  ಇದು ದೊರೆಯ ಸ್ನಾನದ ಹೊತ್ತಲ್ಲಿ, ಅರಮನೆಯ ಪುರೋಹಿತನು `ಶೂದ್ರ ದೊರೆಗೆ ವೇದಮಂತ್ರಗಳನ್ನು ಪಠಿಸಲಾರೆ’ ಎಂದು ನಿರಾಕರಿಸಿದ ಜಾಗ. ಇದನ್ನರಿತ ಶಾಹು ತೀವ್ರ ಅಪಮಾನ ಅನುಭವಿಸುತ್ತಾರೆ. ಈ ಅಪಮಾನದ ಚಾರಿತ್ರಿಕ ವಿದ್ಯಮಾನವು ವೇದೋಕ್ತ ಪ್ರಕರಣವೆಂದು ಹೆಸರಾಗಿದೆ. ಇದು ಕೊಲ್ಹಾಪುರದ ರಾಜ್ಯನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತು. ರಾಜ್ಯದ ದಲಿತರಿಗೆ ಕೆಳಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಚಳುವಳಿಗೆ ನಾಂದಿ ಹಾಡಿತು. ಶೂದ್ರರು ವೇದಮಂತ್ರ ಕಲಿತು ಪುರೋಹಿತರಾಗುವ ಶಾಲೆಯನ್ನು ಸ್ಥಾಪಿಸುವ, ಬ್ರಾಹ್ಮಣ ಅಧಿಕಾರಿಗಳ ಅಧಿಕಾರವನ್ನು ಕಡಿತಗೊಳಿಸುವ, ಹಳ್ಳಿಗಳಲ್ಲಿ ದಲಿತರು ಮಾಡುತ್ತಿದ್ದ ಕಡ್ಡಾಯ ಸೇವೆ ನಿಲ್ಲಿಸಿ ಸ್ವತಂತ್ರ ರೈತಾಪಿಗಳಾಗಿ ಘೋಷಿಸುವ, ಬ್ರಾಹ್ಮಣೇತರ ಚಳುವಳಿಯನ್ನು ಹುಟ್ಟುಹಾಕುವ, ಪರ್ಯಾಯ ಆಧ್ಯಾತ್ಮಿಕ ಚಿಂತನೆಯ ಸತ್ಯಶೋಧಕ ಸಂಸ್ಥೆ ಆರಂಭಿಸುವ, ದಲಿತರು-ಶೂದ್ರರು ನಡೆಸುವ ಪತ್ರಿಕೆಗಳಿಗೆ ಅನುದಾನ ನೀಡುವ, ಶಾಹು ಅವರನ್ನು ದಕ್ಷಿಣ ಭಾರತದ ಶೂದ್ರ ಚಳುವಳಿಗಳ ಜತೆ ಬೆಸೆವ ಸರಣಿ ಕಾರ್ಯಕ್ರಮಗಳಿಗೆ ಪ್ರೇರಕವಾಯಿತು. 

ಇದರ ಭಾಗವಾಗಿ ಶಾಹು ಅವರು ನಗರದ ಮಧ್ಯದಲ್ಲಿ ಗಂಗಾರಾಮ ಕಾಂಬಳೆ ಎಂಬ ದಲಿತನಿಗೆ `ಸತ್ಯಸುಧಾರಕ ಹೋಟೆಲು’ (೧೯೧೬) ಹಾಕಿಕೊಟ್ಟರು. ಮಾತ್ರವಲ್ಲ, ತಮ್ಮ ಪರಿವಾರದೊಂದಿಗೆ ಬಂದು ಹೋಟೆಲಿನಲ್ಲಿ ಚಹಾಪಾನ ಮಾಡುತ್ತಿದ್ದರು. ಅಲ್ಲಿ ಚಹಾಪರಾಳ ಸ್ವೀಕರಿಸಿದ ರಶೀದಿಯನ್ನು ಅರ್ಜಿಗೆ ಲಗತ್ತಿಸಿದರೆ ಕಛೇರಿಯಲ್ಲಿ ಸ್ವೀಕಾರವಾಗುವ ನಿಯಮ ಜಾರಿಗೊಳಿಸಿದರು. ದಮನಿತರು ಸಂಘಟಿತರಾಗಿ ಸಮಾನತೆ ಸ್ವಾತಂತ್ರ್ಯ ಸ್ವಾಭಿಮಾನಕ್ಕಾಗಿ ಚಳುವಳಿ ಮಾಡುವ ಒಂದು ಕ್ರಮವಿದೆ. ಆದರಿದು ಸ್ವತಃ ಪ್ರಭುತ್ವವೇ ಸಾಮಾಜಿಕವಾಗಿ ಅಧಿಕಾರಸ್ಥವಾದ ವರ್ಗವನ್ನು ಎದುರು ಹಾಕಿಕೊಂಡು, ತನ್ನ ದಲಿತ-ಶೂದ್ರ  ಪ್ರಜೆಗಳ ಪರವಾಗಿ ನಡೆಸಿದ ಕಾರ್ಯಾಚರಣೆ. ಇದುವೇ ಶಾಹು-ಅಂಬೇಡ್ಕರ್ ಸ್ನೇಹಕ್ಕೂ ಬುನಾದಿ ಹಾಕಿತು. ಈಗ ಆ ಹೋಟೆಲಿಲ್ಲ.‌ ಅದರ‌ ಜಾಗದಲ್ಲಿ ಒಂದು ಸ್ಮಾರಕ‌ ಸ್ಥಂಭವಿದೆ. ಅದನ್ನು ನೋಡುತ್ತೇನೆ. ಇದು ಮಹಾರ್ ರೆಜಿಮೆಂಟು ಪೇಶ್ವೆಗಳನ್ನು ಸೋಲಿಸಿದ ಸ್ಮಾರಕವಾದ ಕೊರೆಗಾಂವ್ ಸ್ಥಂಭದಷ್ಟೆ ಮಹತ್ವದ್ದು.

೨೦ನೇ ಶತಮಾನದಲ್ಲಿ ಭಾರತದ ಧಾರ್ಮಿಕ ಸಾಮಾಜಿಕ ಚಳುವಳಿಗಳ ತಾತ್ವಿಕತೆಯನ್ನು ಎರಡು ವಿಚಾರಧಾರೆಗಳು ಪ್ರಭಾವಿಸಿದವು.

ಮೊದಲನೆಯದು – ಫುಲೆ, ವಿವೇಕಾನಂದ, ನಾರಾಯಣಗುರು, ಪೆರಿಯಾರ್, ಶಾಹು, ಅಂಬೇಡ್ಕರ್ ಅವರ ಧಾರೆ. ಇದು ಶೂದ್ರ – ದಲಿತರಿಗೆ ಸ್ವಾಭಿಮಾನದ ಪ್ರಜ್ಞೆಯನ್ನು ಕೊಟ್ಟಿತು.

ಎರಡನೆಯದು – ಬಂಕಿಮಚಂದ್ರ, ತಿಲಕ್, ಸಾವರ್ಕರ್ ಧಾರೆ. ಈ ಧಾರೆಯು ಪೇಶ್ವೆಗಳ ಪತನದ ಬಳಿಕ ಪ್ರಭುತ್ವದ ಬೆಂಬಲವಿಲ್ಲದೆ ಕಂಗಾಲಾಗಿದ್ದ ಸಂಪ್ರದಾಯವಾದಿಗಳಿಗೆ, ರಾಷ್ಟ್ರೀಯತೆಯ ಹೆಸರಲ್ಲಿ ಸಮಾಜವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಹೊಸ ಹಾದಿಯನ್ನು ಕಲ್ಪಿಸಿತು.

ವಸಾಹತುಶಾಹಿ ಕಾಲದಲ್ಲಿ ದೊರಕಿದ ಸಾರ್ವತ್ರಿಕ ಶಿಕ್ಷಣ ಪದ್ಧತಿಯಿಂದಲೂ ಮೀಸಲಾತಿ ಹಕ್ಕಿನ ಚಳುವಳಿಗಳಿಂದಲೂ ಶೂದ್ರರು, ಕೆಳಜಾತಿಯವರು ಹಾಗೂ ದಲಿತರು, ವಿದ್ಯಾಭ್ಯಾಸ ಮತ್ತು ನೌಕರಿ ಪಡೆದು ಸಾಧಿಸಿದ ಸಾಮಾಜಿಕ ಚಲನೆಗಳು, ತಮ್ಮ  ಸಾಮಾಜಿಕ ಯಜಮಾನಿಕೆಯನ್ನು ಕಸಿದುಕೊಳ್ಳುತ್ತವೆ ಎಂಬ ತಳಮಳದಿಂದ ಪಾರಾಗಲು, ಹೊಸ ಸಿದ್ಧಾಂತ-ಸಂಘಟನೆಗಳನ್ನು ರೂಪಿಸಿಕೊಳ್ಳಲು ಇದು ಪ್ರೇರಿಸಿತು.  

ಕೆಳಜಾತಿಗಳ ಈ ಸಾಮಾಜಿಕ ಹಕ್ಕುಪ್ರಜ್ಞೆ ಮತ್ತು ಮೇಲ್ಜಾತಿಗಳ ಕಳೆದುಕೊಳ್ಳುವ ಆತಂಕಗಳ ಕುದಿತದಲ್ಲಿದ್ದ ಭಾರತೀಯ ಸಮಾಜದ ಈ  ಸಂಕ್ರಮಣಾವಸ್ಥೆಯಲ್ಲಿ, ಕೆಲವು ರಾಜಪ್ರಭುತ್ವಗಳು ವಹಿಸಿದ ಪಾತ್ರಗಳು ಚಾರಿತ್ರಿಕವಾಗಿವೆ. ೨೦ನೇ ಶತಮಾನದ ಮೊದಲ ದಶಕಗಳಲ್ಲಿ, ಬ್ರಾಹ್ಮಣೇತರರಿಗೆ ಶಿಕ್ಷಣ – ನೌಕರಿಗಳಲ್ಲಿ ಮೀಸಲಾತಿ ನೀಡುವುದಕ್ಕೆ ಮೈಸೂರು ಬರೋಡಾ ಕೊಲ್ಹಾಪುರ ಸಂಸ್ಥಾನಗಳು ಮುಂದಾದವು. ನಾಲ್ವಡಿಯವರು ಮಿಲ್ಲರ್ ಆಯೋಗದ ವರದಿಯನ್ನು ಜಾರಿಗೊಳಿಸಿದರು. ಅದನ್ನು ವಿರೋಧಿಸಿದ ವಿಶ್ವೇಶ್ವರಯ್ಯನವರ ರಾಜಿನಾಮೆ ಸ್ವೀಕರಿಸಿದರು. ವಸಾಹತುಶಾಹಿ ಆಳ್ವಿಕೆಯನ್ನು ಒಪ್ಪಿಕೊಂಡಿದ್ದ ಈ ಮೂರೂ ಸಂಸ್ಥಾನಗಳು ಸ್ವಾತಂತ್ರ್ಯ ಚಳುವಳಿಯ ಭಾಗವಾಗಲಿಲ್ಲ. ಆದರೆ ತಮಗೆ ಸಿಕ್ಕ ಸೀಮಿತ ಅಧಿಕಾರದಲ್ಲಿ ಸಾರ್ವತ್ರಿಕ ಶಿಕ್ಷಣ, ಸಾಮಾಜಿಕ ಸುಧಾರಣೆ, ಆಧುನಿಕ ಕೈಗಾರಿಕಾ ಸ್ಥಾಪನೆ ಹಾಗೂ ಹೊಸ ವೈಚಾರಿಕತೆಯನ್ನು ತರಲೆತ್ನಿಸಿದವು. (ವಿಶೇಷವೆಂದರೆ ಬರೋಡ ಹಾಗೂ ಮೈಸೂರು ಸಂಸ್ಥಾನದ ದೊರೆಗಳಿಗೆ ಶಿಕ್ಷಕನಾಗಿದ್ದವರು ಉದಾರವಾದಿ ಮನೋಭಾವದ ಫ್ರೇಜರ್.) ಬರೋಡೆ ಸಂಸ್ಥಾನವು ಅಂಬೇಡ್ಕರರಿಗೆ ಉನ್ನತ  ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳಿಸಿಕೊಟ್ಟರೆ, ಇಂಗ್ಲೆಂಡಿನಲ್ಲಿ ಕಲಿಕೆ ಮಾಡಲು ಕೊಲ್ಹಾಪುರ ನೆರವಾಯಿತು. ಈ ಹಿನ್ನೆಲೆಯಲ್ಲಿ  ಕರ್ನಾಟಕದ ದಲಿತ ಸಂಘಟನೆಗಳು ತಮ್ಮ ಕರಪತ್ರ – ಭಿತ್ತಿಪತ್ರಗಳಲ್ಲಿ, ಬುದ್ಧ ಬಸವ ಪೆರಿಯಾರ್ ಅಂಬೇಡ್ಕರ್ ಫುಲೆ ಜತೆ, ದೊರೆಗಳಾಗಿದ್ದ ಟಿಪ್ಪು ಶಾಹು ನಾಲ್ವಡಿಯವರ ಚಿತ್ರಗಳನ್ನು ಒಟ್ಟಿಗೆ ಕಾಣಿಸುವುದು ಆಕಸ್ಮಿಕವಲ್ಲ. 

ಕೊಲ್ಹಾಪುರದ ಅರಮನೆಯ ಚಿತ್ರಪಟಗಳಲ್ಲಿ ಶಾಹು ಅವರು ಬ್ರಿಟಿಶ್ ಅಧಿಕಾರಿಗಳನ್ನು ಸ್ವಾಗತಿಸುವ, ಅವರ ಜತೆ ಕುಳಿತಿರುವ, ಇಂಗ್ಲೆಂಡ್ ಪ್ರವಾಸ ಮಾಡುತ್ತಿರುವ, ಮುಂಬೈ ವೈಸರಾಯರಿಂದ ಪದವಿ ಸ್ವೀಕರಿಸುತ್ತಿರುವ ದೃಶ್ಯಗಳಿವೆ. ತಿಲಕ್ ಮೊದಲಾದ ಮೇಲ್ಜಾತಿ ಕಾಂಗ್ರೆಸ್ ನಾಯಕರು ಶಾಹು ಅವರನ್ನು `ಬ್ರಿಟಿಶರ ಬಾಲಬಡುಕ’ ಎಂದು ಟೀಕಿಸುತ್ತಿದ್ದರು. ದೊರೆಯ ಬ್ರಿಟಿಶ್‌ ನಿಷ್ಠೆಗೆ ದಲಿತ – ಶೂದ್ರರ ಸಾಮಾಜಿಕ ಎಚ್ಚರ, ಆಧುನಿಕತೆ, ವೈಚಾರಿಕತೆಗಳ ಮುಖವಿರುವುದನ್ನು ಅವರು ಪರಿಗಣಿಸಲಿಲ್ಲ. ಈ ಮಾತು ಕೋರೆಗಾಂವ್ ಸ್ಮಾರಕಕ್ಕೂ ಅನ್ವಯವಾಗುತ್ತದೆ. ಬ್ರಿಟಿಶ್ ಸೇನೆಯಲ್ಲಿದ್ದ ಮಹಾರ್ ರೆಜಿಮೆಂಟ್, ಸಾಮಾಜಿಕವಾಗಿ ಸಂಪ್ರದಾಯವಾದಿಗಳಾಗಿದ್ದ ಪೇಶ್ವೆಗಳನ್ನು ಸೋಲಿಸಿದ ಸಂಕೇತವಾಗಿ ಸದರಿ ಸ್ಮಾರಕವನ್ನು ನಿರ್ಮಿಸಿತು. ಇದನ್ನು ದಲಿತರು ವಿಮೋಚನೆಯ ಪ್ರತೀಕವೆಂದು ಪರಿಭಾವಿಸಿದರು.

ಹೀಗೆ ೧೯-೨೦ನೇ ಶತಮಾನಗಳ ಸಮಾಜ ಸುಧಾರಣ ಚಳುವಳಿಗಳಲ್ಲಿ, ವಸಾಹತುಶಾಹಿ ಆಧುನಿಕತೆ, ಶಿಕ್ಷಣ, ಕೈಗಾರಿಕೀಕರಣ, ಪಾಶ್ಚಿಮಾತ್ಯ ವೈಚಾರಿಕತೆ, ವಿಜ್ಞಾನ ಹಾಗೂ ಪ್ರಗತಿಶೀಲ ರಾಜಸಂಸ್ಥಾನಗಳು ಬಳ್ಳಿಯಂತೆ ಬೆಸೆದುಕೊಂಡಿವೆ. ಈ ಬೆಸೆತದಲ್ಲಿ ಕೊಲ್ಹಾಪುರ ಸಂಸ್ಥಾನದ ಸ್ಥಾನವು ಮಹತ್ವದ್ದಾಗಿದೆ.  

ಶಾಹು ಅವರಿಗೂ ಉತ್ತರ ಕರ್ನಾಟಕಕ್ಕೂ ಹಿಂದಿನಿಂದಲೂ ನಂಟಿತ್ತು. ರಾಯಬಾಗವು ಅವರ ಮೃಗಯಾ ವಿನೋದದ ಜಾಗವಾಗಿತ್ತು. ಅವರ ಆರಂಭದ ವಿದ್ಯಾಭ್ಯಾಸ ಧಾರವಾಡದಲ್ಲಿ ನಡೆಯಿತು. ಅವರ ಸಾಮಾಜಿಕ ಸಂಬಂಧಗಳು  `ಕರ್ನಾಟಕ ಬ್ರಾಹ್ಮಣೇತರ ಸಾಮಾಜಿಕ ಪರಿಷತ್ತು’ (ಧಾರವಾಡ: ಜುಲೈ ೨೭ ೧೯೨೦) ಸಮಾವೇಶದಿಂದ ಆರಂಭಗೊಂಡವು. ಸರ್ ಸಿದ್ಧಪ್ಪ ಕಂಬಳಿಯಂತಹ ಉತ್ತರ ಕರ್ನಾಟಕ ಲಿಂಗಾಯತ ಮುಖಂಡರ ನಾಯಕತ್ವದಲ್ಲಿ ಆರಂಭವಾಗಿದ್ದ ಶಿಕ್ಷಣ ಮತ್ತು ನೌಕರಿಯಲ್ಲಿ ಸಮಾನ ಅವಕಾಶ ಕೇಳುವ ಆಂದೋಲನದ ಭಾಗವಾಗಿ ಏರ್ಪಟ್ಟ ಕಾರ್ಯಕ್ರಮವಿದು. ಇದರ ಅಧ್ಯಕ್ಷತೆಯನ್ನು ಸಿದ್ಧಾರೂಢ ಸ್ವಾಮಿಗಳು ವಹಿಸಿದ್ದರು. ಸಮಾವೇಶದ ಉದ್ಘಾಟನ ಭಾಷಣದಲ್ಲಿ ಶಾಹು ತಮ್ಮ ಧಾರವಾಡದ ದಿನಗಳನ್ನು ಸ್ಮರಿಸುತ್ತಾರೆ. ಸಮಾವೇಶಕ್ಕೆ ಮದರಾಸಿನಿಂದ ಜಸ್ಟೀಸ್ ಚಳುವಳಿಯ ತ್ಯಾಗರಾಜ ಚೆಟ್ಟಿ ಆಗಮಿಸಿದ್ದರು. ಜಸ್ಟೀಸ್ ಚಳುವಳಿಯನ್ನು ಅಧ್ಯಯನ ಮಾಡಲು ಸ್ವತಃ ಶಾಹು ಮದ್ರಾಸಿಗೆ ಹೋಗಿದ್ದರು. ತಮ್ಮ ಭಾಷಣದಲ್ಲಿ `ಮದ್ರಾಸಿನ ಬ್ರಾಹ್ಮಣೇತರ ಚಳುವಳಿಯಂತಹ ಚಳುವಳಿ ಮಹಾರಾಷ್ಟ್ರದಲ್ಲಿ ಹುಟ್ಟಬೇಕಾಗಿದೆಯೆಂದೂ, ಮದರಾಸಿನ ಚಳುವಳಿಗಾರರ ಮುಂದೆ ಮುಂಬೈ ಪುಣೆ ಚಳುವಳಿಗಾರರು ಬಾಲಿಶವಾಗಿ ಕಾಣುತ್ತಾರೆಂದೂ’ ಅವರು ನುಡಿದರು. ಚಳುವಳಿ ಕಟ್ಟಲು ಬೇಕಾದ ಸಂಪನ್ಮೂಲ ಮತ್ತು ರಾಜ್ಯಾಧಿಕಾರ ಅವರಲ್ಲಿದ್ದವು. ಆದರೆ ಸೈದ್ಧಾಂತಿಕ ಸ್ಪಷ್ಟತೆ ಕೊಡುವವರು ಇಲ್ಲವಾಗಿತ್ತು. 

ಈ ಚಾರಿತ್ರಿಕ ಸನ್ನಿವೇಶದಲ್ಲಿ ಶಾಹು ಅವರಿಗೆ ಅಂಬೇಡ್ಕರ್ ಸ್ನೇಹ ಏರ್ಪಟ್ಟಿತು. ಶಾಹು ಅವರ ಅಕಾಲಿಕ ನಿಧನದಿಂದ ಈ ಸೈದ್ಧಾಂತಿಕ ಗೆಳೆತನ ೩-೪ ವರ್ಷಗಳ ಅವಧಿಯದಷ್ಟೇ ಆಗಿತ್ತು. ಈ ಕಿರು ಅವಧಿಯಲ್ಲಿ ಇಬ್ಬರೂ ಮಾಡಿದ ಭೇಟಿ ಮತ್ತು ಚರ್ಚೆ, ಬರೆದುಕೊಂಡ ಪತ್ರಗಳು ಅವರಲ್ಲಿದ್ದ ಸಮಾನ ಮನಸ್ಕತೆಯನ್ನು ಸೂಚಿಸುತ್ತವೆ. ಅಮೆರಿಕೆಯಲ್ಲಿ ಪಿಎಚ್.ಡಿ., ಪಡೆದು ಬಂದಿದ್ದ ತರುಣ ಅಂಬೇಡ್ಕರ್ ಬಗ್ಗೆ ಶಾಹು ಅವರಿಗೆ ಮಾಹಿತಿಯಿತ್ತು. ಅಂಬೇಡ್ಕರರ ಪ್ರಖರ ವಿದ್ವತ್ತು ಮತ್ತು ಚಿಂತನೆಗಳು ತಮ್ಮ ಸಾಮಾಜಿಕ ಸುಧಾರಣ ಕಾರ್ಯಾಚರಣೆಗೆ ಇಂಬಾಗುತ್ತವೆ ಎಂದವರು ಭಾವಿಸಿದ್ದರು. ಹೀಗಾಗಿ ಅವರು ಮುಂಬೈನಲ್ಲಿ ಕಾಲೇಜು ಅಧ್ಯಾಪಕರಾಗಿದ್ದ ಅಂಬೇಡ್ಕರರನ್ನು ಹುಡುಕಿಕೊಂಡು (೧೯೧೯) ಹೋದರು. ತಮ್ಮನ್ನು ಹುಡುಕಿ ಸ್ವತಃ ದೊರೆ ಬಂದಿದ್ದು ಅಂಬೇಡ್ಕರ್ ಅವರಿಗೆ ವಿಸ್ಮಯ ತರುತ್ತದೆ. ಇದಾದ ಬಳಿಕ ಶಾಹು ಅಂಬೇಡ್ಕರ್ ಅವರನ್ನು ಕೊಲ್ಹಾಪುರಕ್ಕೆ ಹಲವು ಸಲ ಕರೆಸಿಕೊಂಡು ಚರ್ಚೆ ಮಾಡುತ್ತಾರೆ. ದೊರೆಯು, ಬ್ರಾಹ್ಮಣೇತರರ ಪತ್ರಿಕೆಗಳಿಗೆ ನೆರವು ನೀಡುವುದನ್ನು ಅರಿತಿದ್ದ ಅಂಬೇಡ್ಕರ್, ತಾವು ಪ್ರಕಟಿಸ ಬಯಸುತ್ತಿರುವ `ಮೂಕನಾಯಕ’ ಪತ್ರಿಕೆಗೆ ನೆರವು ಕೋರುತ್ತಾರೆ. ಕೂಡಲೇ ಮಹಾರಾಜರು ಧನಸಹಾಯ ಮಂಜೂರು ಮಾಡುತ್ತಾರೆ. `ಮೂಕನಾಯಕ’ದಲ್ಲಿ ಅಂಬೇಡ್ಕರ್, ಶಾಹು ಅವರ ಸುಧಾರಣೆಗಳನ್ನು ಸಮರ್ಥಿಸುವ ಮತ್ತು ಅವರ ವಿರೋಧಿಗಳನ್ನು ಖಂಡಿಸುವ ಲೇಖನ ಬರೆಯತೊಡಗುತ್ತಾರೆ. ಭಾರತದ ದೊಡ್ಡ ವಿದ್ವಾಂಸ ಮತ್ತು ಸಾಮಾಜಿಕ ರಾಜಕೀಯ ಸಿದ್ಧಾಂತಿಯೊಬ್ಬನ ತಾಲೀಮಿನ ಗರಡಿಯಂತೆ ಮೂಕನಾಯಕದ ಲೇಖನಗಳಿವೆ. `ರಾಜರ್ಷಿ ಶಾಹೂ ಮಹಾರಾಜ ಮತ್ತು ವಿರೋಧಿಗಳ ಕಾಕಗರ್ಜನೆ’ ಎಂಬ ಲೇಖನದಲ್ಲಿ (ಜುಲೈ ೧೯೨೦) `ತಮ್ಮನ್ನು ವಿರೋಧಿಸುತ್ತಿರುವ ಕಾಕಗರ್ಜನೆಗೆ ಮಣಿಯದೆ ಛತ್ರಪತಿಯವರು ತಮ್ಮ ಸಾಮಾಜಿಕ ನ್ಯಾಯ ಮತ್ತು ಸತ್ಯದ ಚಳುವಳಿಯಿಂದ ಕಿಂಚಿತ್ತೂ ಹಿಂದೆ ಸರಿಯಬಾರದು’ ಎಂದು ಅಂಬೇಡ್ಕರ್ ಬರೆಯುತ್ತಾರೆ.

ಕ್ರಾಂತಿಕಾರಕ ವಿಚಾರಗಳನ್ನು ಸಾಕಾರಗೊಳಿಸಲು, ರಾಜಕೀಯ ಅಧಿಕಾರದ ಮಹತ್ವವನ್ನು ಅಂಬೇಡ್ಕರ್ ಚೆನ್ನಾಗಿ ಅರಿತಿದ್ದರು. ದಮನಿತರು ಕೇವಲ ಪ್ರತಿರೋಧದ ಚಳುವಳಿಯಲ್ಲಿ ಮಾತ್ರವಲ್ಲದೆ, ರಾಜ್ಯಾಧಿಕಾರವನ್ನು ಹಸ್ತಗತ ಮಾಡಿಕೊಳ್ಳಬೇಕೆಂಬ ಚಿಂತನೆಗೆ ಅವರ ಈ ಅನುಭವಗಳು ನೆರವಾದವು.

ಶಾಹು – ಅಂಬೇಡ್ಕರ್ ಇಬ್ಬರೂ ಎರಡು ಸಮಾವೇಶಗಳಲ್ಲಿ ವೇದಿಕೆ ಹಂಚಿಕೊಂಡರು. ಮೊದಲನೆಯದು `ಅಖಿಲ ಮಹಾರಾಷ್ಟ್ರ ಬಹಿಷ್ಕೃತ ಸಮಾಜ ಪರಿಷತ್ತಿ’ನ (ಮಾರ್ಚ ೧೯೨೦) ಮಾಣಗಾಂವದ ಸಮಾವೇಶ. ಈ ಸಮಾವೇಶದಲ್ಲಿ ಶಾಹು ಅವರು ‘ದಲಿತರು ಅಂಬೇಡ್ಕರ್ ಅವರಂತಾಗಲು ಯತ್ನಿಸಬೇಕು’ ಎಂದು ಕರೆಗೊಡುತ್ತಾರೆ. ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ  ಪರಿಷತ್ತು, ಅಖಿಲ ಭಾರತೀಯ ವಿಸ್ತರಣೆ ಪಡೆದ ನಂತರ ಮೊದಲ ಸಭೆ (ಮೇ ೧೯೨೦) ನಾಗಪುರದಲ್ಲಿ ಸೇರುತ್ತದೆ. ಅಲ್ಲಿನ ಭಾಷಣದಲ್ಲಿ ಶಾಹು ಅವರು `ಅಂಬೇಡ್ಕರ್ ಭಾರತದ ಸಮಸ್ತ ದಮನಿತರ ಪಾಲಿಗೆ ಬೆಳಕಾಗುವರು; ರಾಜ್ಯ ಕಳೆದುಕೊಂಡರೂ ಸರಿಯೇ ನಿಮಗಾಗಿ ಹೋರಾಡುವುದನ್ನು ನಿಲ್ಲಿಸುವುದಿಲ್ಲ’ ಎಂದು ಘೋಷಿಸುವರು. ಪರಿಷತ್ತಿನ ಮೂರನೇ ಸಭೆ (ಫೆಬ್ರ. ೧೯೨೨) ದೆಹಲಿಯಲ್ಲಿ ಸೇರುತ್ತದೆ. ಆಗ ಅಂಬೇಡ್ಕರ್ ಲಂಡನ್ನಿಗೆ ಕಲಿಯಲು ಹೋಗಿರುತ್ತಾರೆ. ಸಮಾವೇಶದಲ್ಲಿ ಶಾಹು ಮಾತಾಡುತ್ತ `ಇವತ್ತಿನ ಅಧ್ಯಕ್ಷತೆಯ ಗೌರವ ಸುಶಿಕ್ಷಿತ ಉತ್ಸಾಹಿ ತರುಣನಾದ ಮಿ. ಅಂಬೇಡ್ಕರ್‌ಗೆ ಸಿಗಬೇಕಿತ್ತು. ನಿಮ್ಮ ನಿಜವಾದ ನಾಯಕ ಅವರು. ಅವರ ಆದರ್ಶವನ್ನು ಕಣ್ಣೆದುರಿಗಿಸಿಕೊಂಡು ಅವರಂತಾಗಲು ಪ್ರಯತ್ನಿಸಿರಿ. ನಾನು ನಿಮ್ಮವನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನಾನು ನಿಮ್ಮ ಗುಲಾಮ, ದಾಸ. ನನ್ನಿಂದ ಬೇಕಾದ ಸೇವೆ ಮಾಡಿಸಿಕೊಳ್ಳಿ’ ಎಂದು ವಿನಂತಿಸುತ್ತಾರೆ. ತಮಗಿಂತ ೧೬ ವರ್ಷ ಚಿಕ್ಕವರಾದ ಅಂಬೇಡ್ಕರ್ ಬಗ್ಗೆ ಶಾಹು ಅವರು ಪ್ರಿಯಸ್ನೇಹಿತ, ತರುಣ ಗೆಳೆಯ, ಮಿ. ಅಂಬೇಡ್ಕರ್ ಎಂದು ಸಂಬೋಧಿಸುತ್ತಾರೆ.  ಅವರಿಗೆ ಅಂಬೇಡ್ಕರರ ವಿದ್ವತ್ತು ಮತ್ತು ವಿಚಾರವಂತಿಕೆ ಬಗ್ಗೆ ಅಪಾರ ಗೌರವವಿತ್ತು. ಅಂಬೇಡ್ಕರ್ ಲಂಡನಿನಲ್ಲಿದ್ದಾಗ, ತಮ್ಮ ಇಂಗ್ಲೆಂಡಿನ ಗೆಳೆಯರಿಗೆ ಪತ್ರ ಬರೆದು, ಅಂಬೇಡ್ಕರ್ ವಿಚಾರಗಳನ್ನು ಆಲಿಸುವಂತೆಯೂ ಅದಕ್ಕೆ ಬ್ರಿಟಿಶ್ ಸಮಾಜದಲ್ಲಿ ಮಾನ್ಯತೆ ದೊರಕಿಸಿಕೊಡುವಂತೆಯೂ ಶಾಹು ಕೋರುತ್ತಾರೆ.   

ಇಷ್ಟೇ ಗೌರವವನ್ನು ಅಂಬೇಡ್ಕರ್ ಛತ್ರಪತಿಯವರನ್ನು ಕುರಿತು ಇರಿಸಿಕೊಂಡಿದ್ದರು.  ಇಂಗ್ಲೆಂಡಿನಿಂದ ಧನಸಹಾಯ ಕೋರಿ ದೊರೆಗೆ ಬರೆದ ಪತ್ರದಲ್ಲಿ (೨೦೨೧),  “ನೀವು ಹಿಂದೂಸ್ತಾನದಲ್ಲಿರುವ ಸಾಮಾಜಿಕ ಪ್ರಜಾಪ್ರಭುತ್ವದ ಚಳುವಳಿಯ ಆಧಾರಸ್ಥಂಭ” ಎಂಬ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ; ಶಾಹು ಅವರ ಸಲಹೆಯಂತೆ, ದಲಿತರ-ಶೂದ್ರರ ನಿಲುವನ್ನು ಮಂಡಿಸಲು ಲಂಡನಿನಲ್ಲಿ ಒಂದು ಸಂಸ್ಥೆ ಸ್ಥಾಪಿಸಲು ಯತ್ನಿಸುತ್ತಾರೆ.  ಶಾಹು ಅವರ ಅಕಾಲಿಕ ಸಾವಿಗೆ (೧೯೨೨) ದುಃಖಿಸುತ್ತ ಇಂತಹ `ಸಖ ಅಸ್ಪೃಶ್ಯರಿಗೆ ಈ ಹಿಂದೆ ಲಭಿಸಿಲ್ಲ. ಮುಂದೆಯೂ ಲಭಿಸುವನೊ ಇಲ್ಲವೋ ಸಂಶಯ’ ಎಂದು ಉದ್ಗರಿಸುತ್ತಾರೆ. ತಾವು ಏಕಾಂಗಿಯಾಗಿ ಹೋರಾಡುವಾಗೆಲ್ಲ ಶಾಹು ಅವರನ್ನು  ನೆನೆಯುತ್ತಾರೆ. `ಕೊಲ್ಹಾಪುರದಲ್ಲಿ ಶಾಹು ಅವರು ನಿಜವಾದ ಪ್ರಜಾಪ್ರಭುತ್ವದ ನಿಜವಾದ ಮುಹೂರ್ತದ ಕಂಬ ಸ್ಥಾಪಿಸಿದರು’ ಎಂದು ವರ್ಣಿಸುತ್ತಾರೆ. 

ಶಾಹು ಅವರು ಜಾರಿಮಾಡಿದ್ದ ವಿಧವಾವಿವಾಹ ಕಾನೂನು, ಅಂತರ್ಜಾತೀಯ ಕಾನೂನು, ವಿವಾಹ ವಿಚ್ಛೇದನ ಕಾನೂನು, ವಾರಸಾ ಹಕ್ಕಿನ ಕಾನೂನು, ದೇವದಾಸಿ ಪದ್ಧತಿಯ ನಿರ್ಬಂಧ – ಎಂಬ ಸ್ತ್ರೀಪರ ಕಾನೂನುಗಳ ಮಹತ್ವವನ್ನು ಅಂಬೇಡ್ಕರ್ ಅರಿತಿದ್ದರು. ಈ ಅರಿವು ಸಂವಿಧಾನ ರಚನೆಯಲ್ಲೂ, ಕಾನೂನು ಮಂತ್ರಿಯಾಗಿ  ಹಿಂದೂ ಕೋಡ್ ಬಿಲ್ ರೂಪಿಸುವಲ್ಲೂ ನೆರವಾಯಿತು. ಮುಸ್ಲಿಮರ ಸಾಂಪ್ರದಾಯಿಕತೆ  ಮತ್ತು ಮತೀಯ ರಾಜಕಾರಣಗಳನ್ನು ಕಟುವಾಗಿ ವಿಮರ್ಶಿಸಲು ಪ್ರೇರಕವಾಯಿತು. ಪುರೋಹಿತಶಾಹಿಯಿಂದ ಅಪಮಾನಿತ ದೊರೆಯ ಸಂಕಲ್ಪ ಮತ್ತು ದಲಿತ ಹಿನ್ನೆಲೆಯಿಂದ ಬಂದ ವಿದ್ವಾಂಸನ ಪ್ರತಿಭೆಗಳು, ಆಧುನಿಕ ಭಾರತ ನಿರ್ಮಾಣದಲ್ಲಿ  ಭಾಗವಹಿಸಿದ ಈ ಬಗೆ, ಅಪೂರ್ವವಾಗಿದೆ. 

ಶಾಹು ಸ್ವತಃ ಕುಸ್ತಿ ಪೈಲ್ವಾನರಾಗಿದ್ದರು. ಅವರಿಗೆ ಶಿಕಾರಿಯ ಹುಚ್ಚಿತ್ತು. ಕೊಲ್ಹಾಪುರದ ಅರಮನೆಯಲ್ಲಿ ಅವರು ಬೇಟೆಯಾಡಿದ ಪ್ರಾಣಿಗಳ ಅವಶೇಷಗಳಿವೆ. ಹುಲಿ ಕರಡಿಗಳ ಕಳೇಬರಗಳ ಮೇಲೆ ಕಾಲಿಟ್ಟು ನಿಂತಿರುವ ಫೊಟೊಗಳಿವೆ. ಬೇಟೆಯು ರಾಜರಾದವರಿಗೆ ಶಸ್ತ್ರ ತರಬೇತಿಯ ಅವಕಾಶವಾಗಿತ್ತು. ಬ್ರಿಟಿಶ್ ಕಾಲದ ಅಧಿಕಾರಸ್ಥರ ವಿಲಾಸ ಮತ್ತು ಮನರಂಜನೆಯ ಹವ್ಯಾಸವಾಗಿತ್ತು. ಏನೇ ಆದರೂ ಅಡವಿಯ ಪ್ರಾಣಿಗಳನ್ನು ಕೊಂದು ಅವುಗಳ ಕೊಂಬು ತಲೆಗಳನ್ನು ಆಲಂಕಾರಿಕ ವಸ್ತುವನ್ನಾಗಿ ಇಡುವುದನ್ನು ಕಾಣುವಾಗ ಸಂತೋಷವಾಗುವುದಿಲ್ಲ. ಶಾಹು ಅವರ ಹೆಸರು ಚರಿತ್ರೆಯಲ್ಲಿ ಉಳಿದಿರುವುದು ಈ ಮೃಗಬೇಟೆಯಿಂದಲ್ಲ. ಸಾಮಾಜಿಕ ಪ್ರಗತಿಯನ್ನು ನಿರಾಕರಿಸುವ ಸಂಪ್ರದಾಯವಾದ ಮತ್ತು ಪುರೋಹಿತಶಾಹಿಗಳ ಬೇಟೆಯಿಂದ. ವೇದೋಕ್ತ ಪ್ರಕರಣದ ಬಳಿಕ ಅವರು,  ರಾಜ್ಯದ ಆಡಳಿತದಲ್ಲಿ ಜಾರಿ ತಂದ ಸುಧಾರಣ ಕಾರ್ಯಕ್ರಮಗಳು, ಮೇಲ್ಜಾತಿಗಳು ಅವರ ವಿರುದ್ಧ ಯುದ್ಧ ಸಾರಲು ಕಾರಣವಾದವು. ಕೆಲವು ಪತ್ರಿಕೆಗಳು ಶಾಹು ಅವರನ್ನು ಕೊನೆಯ ತನಕವೂ ದ್ವೇಷಿಸಿದವು. ಅವರ ನಿಧನಕ್ಕೆ ಸಂಭ್ರಮಾಚರಣೆ ಮಾಡಿದ ವರದಿಗಳೂ ಬಂದವು. (ಇಂತಹ ವರದಿಗಳು ಗಾಂಧಿ ಮತ್ತು ಅಂಬೇಡ್ಕರ್ ಸಾವಿನ ಹೊತ್ತಲ್ಲೂ ಬಂದವು.) ಆದರೆ ಶಾಹು ಅವರ ಪತ್ರ ಮತ್ತು ಭಾಷಣಗಳಲ್ಲಿ, ಸಮಾಜವನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಪುರೋಹಿತಶಾಹಿಯ ಬಗ್ಗೆ ಆಗ್ರಹ ಮತ್ತು ಸಮಾಜ ಬದಲಿಸಬೇಕೆಂಬ ತಾತ್ವಿಕತೆ ಸ್ಪಷ್ಟವಾಗಿದೆ. ಅವರಿಗೆ ಅಂಬೇಡ್ಕರ್ ಸಿಕ್ಕಿದ್ದು ಯುದ್ಧಕ್ಕೆ ನಿಪುಣ ಸೇನಾಧಿಕಾರಿ ಸಿಕ್ಕಂತಾಗಿತ್ತು. ಮಹಾರರನ್ನು ಅಪರಾಧಿ ಸಮುದಾಯವೆಂದು ಕರೆದ ತಿಲಕರ ಮೇಲೆ ಖಟ್ಲೆ ಹೂಡಬಾರದೇಕೆ ಎಂದು ಅಂಬೇಡ್ಕರ್ ಅವರಿಗೆ ಒಮ್ಮೆ ಶಾಹು ಪತ್ರ ಬರೆದರು. ಆಗ ಅಂಬೇಡ್ಕರ್ `ಈ ವಿಷಯದಲ್ಲಿ ಕಾನೂನು ಹೋರಾಟಕ್ಕಿಳಿದರೆ, ಶ್ರಮ, ಹಣ, ಸಮಯ ವ್ಯರ್ಥವಾಗುತ್ತದೆಯೆಂದೂ, ಇದರ ಬದಲಿಗೆ ದಲಿತರಿಗೆ ಉದ್ಧರಿಸುವ ಕಾರ್ಯಕ್ರಮಗಳತ್ತ ಗಮನಹರಿಸುವುದು ಸೂಕ್ತವೆಂದೂ ಉತ್ತರಿಸುತ್ತಾರೆ. 

ಈ ಹಿನ್ನೆಲೆಯಲ್ಲಿ ಶಾಹು ಅವರು ಮಾಣಗಾಂವ್ ಸಮಾವೇಶಕ್ಕೆ, ಬೇಟೆ ದಿರಿಸಿನಲ್ಲೇ ಕಾಡಿನಿಂದ ನೇರವಾಗಿ ಬಂದು ಭಾಗವಹಿಸುವ ಸನ್ನಿವೇಶವು ಸಾಂಕೇತಿಕವಾಗಿದೆ. ಕುವೆಂಪು ತಮ್ಮ ಪ್ರಸಿದ್ಧ ಭಾಷಣವೊಂದರಲ್ಲಿ `ಸಂಪ್ರದಾಯವಾದದ ಹುಲಿಯ ಮೈಗೆ ಈಡು ಹೊಡೆದು ಗಾಯಗೊಳಿಸಬಾರದು. ತಲೆಗೆ ಹೊಡೆಯಬೇಕು. ಆದರೆ ಅದಕ್ಕೆ ಮೊದಲು ಸಂಪ್ರದಾಯವಾದಕ್ಕೆ ಶರಣಾಗಿರುವ ತಮ್ಮ ಮೆದುಳಿಗೆ ವೈಚಾರಿಕತೆಯ ಗುಂಡು ಹೊಡೆದುಕೊಳ್ಳಬೇಕು’ ಎಂದು ಹೇಳಿದ್ದರು. ಶಾಹು ಮತ್ತು ಅಂಬೇಡ್ಕರ್ ಅವರು ಎರಡೂ ಬಗೆಯ ಗುಂಡುಗಳನ್ನು ಹೊಡೆದವರು. ಇವರ ಗುಂಡುಗಳು ರೂಪುಗೊಂಡಿದ್ದು, ಸಂತ ತುಕಾರಾಮ್, ಜ್ಯೋತಿಬಾ ಫುಲೆ, ಪಾಶ್ಚಿಮಾತ್ಯ ಆಧುನಿಕತೆ ಮತ್ತು ವಿಚಾರವಾದದ ಕುಲುಮೆಗಳಲ್ಲಿ.

– ಪ್ರೊ. ರಹಮತ್ ತರೀಕೆರೆ, ನಿವೃತ್ತ ಪ್ರಾಧ್ಯಾಪಕರು 

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು