ಭಾರತದಲ್ಲಿ ಮೀಸಲಾತಿಯ ಯುಗವನ್ನು 19ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಗುರುತಿಸಬಹುದು. ಈ ಮೀಸಲಾತಿ ಚರಿತ್ರೆಯನ್ನು ನಾಲ್ಕು ಭಾಗಗಳಲ್ಲಿ ಕಾಣಬಹುದು. ಅವುಗಳೆಂದರೆ:
- ಬ್ರಿಟಿಷ್ ಆಡಳಿತದಲ್ಲಿ ಮೀಸಲಾತಿ
- ಕೊಲ್ಲಾಪುರ ಸಂಸ್ಥಾನದಲ್ಲಿ ಮೀಸಲಾತಿ
- ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ
- ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇತರ ರಾಜ್ಯಗಳಲ್ಲಿ ಮೀಸಲಾತಿ
- ಬ್ರಿಟಿಷ್ ಆಡಳಿತದಲ್ಲಿ ಮೀಸಲಾತಿ
ಬ್ರಿಟಿಷ್ ವಸಾಹತು ಭಾರತದಲ್ಲಿ, ಮೀಸಲಾತಿಯ ಕ್ರಮವು 1932ರ ದುಂಡು ಮೇಜಿನ ಸಭೆಯಲ್ಲಿ ಚರ್ಚೆಗೆ ಬಂದಿತು. ಬ್ರಿಟಿಷ್ ಸರ್ಕಾರವು ದುಂಡು ಮೇಜಿನ ಪರಿಷತ್ತಿನಲ್ಲಿ ಕೋಮುವಾರು ಮತಕ್ಷೇತ್ರಗಳನ್ನು ಮುಸ್ಲಿಮರಿಗೆ, ಸಿಖ್ ಸಮುದಾಯಕ್ಕೆ, ಇಂಡಿಯನ್ ಕ್ರಿಶ್ಚಿಯನ್ನರಿಗೆ, ಆಂಗ್ಲೋ ಇಂಡಿಯನ್ನರಿಗೆ ಮತ್ತು ಯುರೋಪಿಯನ್ನರಿಗೆ ಮೀಸಲಿಡುವ ಪ್ರಸ್ತಾವವನ್ನು ಅನುಮೋದಿಸಿತು. ಈ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಜನರು ಮಾತ್ರ ಆ ಧರ್ಮದ ಅಭ್ಯರ್ಥಿಗಳಿಗೆ ಮತ ಚಲಾಯಿಸಬಹುದಿತ್ತು. ಇದನ್ನು ‘ಧರ್ಮವಾರು ಪ್ರತ್ಯೇಕ ಮತಕ್ಷೇತ್ರಗಳ ವ್ಯವಸ್ಥೆ’ ಎಂದು ಕರೆಯಬಹುದು. ಈ ಕ್ರಮವು ಭಾರತೀಯ ಸಮಾಜವನ್ನು ಒಡೆಯುತ್ತದೆ ಎಂದು ಭಾವಿಸಿ ಮಹಾತ್ಮ ಗಾಂಧೀಜಿ ಇದನ್ನು ಪ್ರಬಲವಾಗಿ ವಿರೋಧಿಸಿದರು. ಆದರೆ ಅಂಬೇಡ್ಕರ್ ಅಷ್ಟೇ ಪ್ರಬಲವಾಗಿ ಇದನ್ನು ಸಮರ್ಥಿಸಿದರು. ಇದು ತೀವ್ರ ವಿವಾದಕ್ಕೆ ಕಾರಣವಾಯಿತು. ಕೊನೆಗೆ ಈ ವಿವಾದವು ಪುಣೆ ಒಪ್ಪಂದದಲ್ಲಿ ಕೊನೆಗೊಂಡಿತು. ಈ ಒಪ್ಪಂದದ ಪ್ರಕಾರ ದಲಿತರಿಗೆ ಸ್ಥಾನಗಳನ್ನು ಮೀಸಲಿಡುವ ಕ್ರಮವು ಜಾರಿಗೆ ಬಂದಿತು. ಈ ವ್ಯವಸ್ಥೆಯಲ್ಲಿ ಕೆಲವು ಮತಕ್ಷೇತ್ರಗಳನ್ನು ದಲಿತರಿಗೆ ಮೀಸಲಾಗಿಡಲಾಗುತ್ತಿತ್ತು. ಈ ಮತಕ್ಷೇತ್ರಗಳಲ್ಲಿ ದಲಿತರು ಮಾತ್ರ ಸ್ಪರ್ಧಿಸಬಹುದಿತ್ತು. ಆದರೆ ಮತಕ್ಷೇತ್ರದ ಎಲ್ಲಾ ಮತದಾರರು ಮತ ಚಲಾಯಿಸಬಹುದಿತ್ತು. ಹೀಗೆ ಬ್ರಿಟಿಷ್ ವಸಾಹತು ಆಡಳಿತದಲ್ಲಿ ಮೀಸಲಾತಿಯು ರಾಜಕೀಯ ಪ್ರಾತಿನಿಧ್ಯ ಕ್ರಮವಾಗಿ ಅಸ್ತಿತ್ವಕ್ಕೆ ಬಂದಿತು. ಇಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೀಸಲಾತಿಯ ಯಾವುದೇ ಕ್ರಮಗಳು ಇರಲಿಲ್ಲ.
- ಕೊಲ್ಲಾಪುರ ಸಂಸ್ಥಾನದಲ್ಲಿ ಮೀಸಲಾತಿ
ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿದ್ದ ಬ್ರಾಹ್ಮಣರ ಪ್ರಾಬಲ್ಯವನ್ನು ಮನಗಂಡರು. ಈ ವ್ಯವಸ್ಥೆಯಿಂದ ಅಸಮಾಧಾನಗೊಂಡ ಮಹಾರಾಜರು ಬ್ರಾಹ್ಮಣೇತರರಿಗೆ ಉದ್ಯೋಗದಲ್ಲಿ ಮತ್ತು ಶಿಕ್ಷಣದ ಅವಕಾಶಗಳಲ್ಲಿ ಮೀಸಲಾತಿ ನೀಡುವ ಕ್ರಮವನ್ನು ತೆಗೆದುಕೊಂಡರು. ಈ ಬಗ್ಗೆ 1902ರ ಜುಲೈ 26ರಂದು ಕೊಲ್ಲಾಪುರದ ಗೆಜೆಟ್ಟಿನಲ್ಲಿ ಈ ರೀತಿ ಆದೇಶಿಸಲಾಗಿದೆ:
ಮ್ಯಾನಿಫೆಸ್ಟೋ
ಈ ಕೆಳಕಂಡ ವಿಶೇಷ ಮ್ಯಾನಿಫೆಸ್ಟೋವನ್ನು ತನ್ನ ಆಜ್ಞೆಯ ಮೂಲಕ ಕೊಲ್ಲಾಪುರ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿದೆ.
“ಕೊಲ್ಲಾಪುರದ ಸಂಸ್ಥಾನದ ನಾಗರಿಕ ಪ್ರಜೆಗಳ ಎಲ್ಲಾ ವರ್ಗಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಮತ್ತು ಉತ್ತೇಜನ ಕೊಡಲು ಇತ್ತೀಚಿನ ವರ್ಷಗಳಲ್ಲಿ ಮಾಡಿದ ಪ್ರಯತ್ನಗಳು ಹೆಚ್ಚಿನ ಹಿಂದುಳಿದ ವರ್ಗಗಳಿಗೆ ಪರಿಣಾಮಕಾರಿಯಾಗಿ ಮುಟ್ಟಿಲ್ಲವೆಂದು ಮಾನ್ಯ ಮಹಾರಾಜರು ವಿಷಾದಿಸುತ್ತಾರೆ. ಈ ವಿಚಾರವು ಮಹಾರಾಜರ ಹೆಚ್ಚಿನ ಎಚ್ಚರಿಕೆಯ ಪರಿಗಣನೆಯಲ್ಲಿದೆ ಮತ್ತು ಉನ್ನತ ಶಿಕ್ಷಣದ ಪ್ರತಿಫಲಗಳು ಸಾಕಷ್ಟು ವಿಸ್ತೃತವಾಗಿ ಹಂಚಿಕೆಯಾಗದ ಕಾರಣದಿಂದ ಈ ವಿಫಲತೆ ಎಂಬ ತೀರ್ಮಾನಕ್ಕೆ ಮಹಾರಾಜರು ಬಂದಿದ್ದಾರೆ. ಇದನ್ನು ಸ್ವಲ್ಪಮಟ್ಟಿಗೆ ಪರಿಹರಿಸಲು ಮತ್ತು ಸಂಸ್ಥಾನದೊಳಗೆ ಮಹಾರಾಜರ ಪ್ರಜೆಗಳ ಹಿಂದುಳಿದ ವರ್ಗಗಳು ಉನ್ನತ ಶಿಕ್ಷಣದವರೆಗೆ ಅಧ್ಯಯನ ಮಾಡಲು ಉತ್ತೇಜನ ಕ್ರಮಗಳನ್ನು ಸ್ಥಾಪಿಸಲಾಗುವುದು. ಮಹಾರಾಜರು ಈಗಿರುವುದಕ್ಕಿಂತ ಹೆಚ್ಚಿಗೆ ಸಂಸ್ಥಾನದ ಸೇವೆಯಲ್ಲಿ ಉದ್ಯೋಗದ ಹೆಚ್ಚಿನ ಪಾಲನ್ನು ಆ ಹಿಂದುಳಿದ ವರ್ಗಗಳಿಗೆ ನೀಡುವುದು ಅಪೇಕ್ಷಣೀಯವೆಂದು ನಿರ್ಧರಿಸಿದ್ದಾರೆ.
ಈ ನೀತಿ-ಧೋರಣೆಗೆ ಅನುಗುಣವಾಗಿ ಮಾನ್ಯ ಮಹಾರಾಜರು ಈ ಆಜ್ಞೆಯ ದಿನಾಂಕದಿಂದ, ಖಾಲಿ ಬೀಳುವ ಹುದ್ದೆಗಳ ಶೇಕಡ 50ರಷ್ಟು ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳನ್ನು ನೇಮಕ ಮಾಡಲು ನಿರ್ದೇಶನ ನೀಡಲು ಹರ್ಷಿಸುತ್ತಾರೆ. ಎಲ್ಲಾ ಕಛೇರಿಗಳಲ್ಲಿ ಸದ್ಯಕ್ಕೆ ಹಿಂದುಳಿದ ವರ್ಗಗಳ ಅನುಪಾತವು ಶೇಕಡ 50ಕ್ಕಿಂತ ಕಡಿಮೆಯಿದ್ದರೆ, ಮುಂದಿನ ನೇಮಕಗಳನ್ನು (ಹುದ್ದೆ) ಈ ವರ್ಗಗಳ ಸದಸ್ಯರಿಗೆ ನೀಡಬೇಕು.
ಈ ಆಜ್ಞೆ ಪ್ರಕಟವಾದ ನಂತರ ನೇಮಕಗಳ ತ್ರೈಮಾಸಿಕ ಲೆಕ್ಕಪತ್ರವನ್ನು ಇಲಾಖೆಗಳ ಎಲ್ಲಾ ಮುಖ್ಯಸ್ಥರು ಸಲ್ಲಿಸಬೇಕು. ಈ ಆಜ್ಞೆಗಳ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳು ಎಂದರೆ ಬ್ರಾಹ್ಮಣರು, ಪ್ರಭುಗಳು, ಪಾರ್ಸಿಗಳು, ಶೆನ್ವಿಗಳು ಮತ್ತು ಇತರೆ ಮುಂದುವರಿದ ವರ್ಗಗಳನ್ನು ಬಿಟ್ಟು ಎಲ್ಲಾ ಜಾತಿಗಳಿಗೆಂದು ತಿಳಿಯಬೇಕು”.
ಛತ್ರಪತಿ ಶಾಹುಮಹಾರಾಜರು ಅಸ್ಪೃಶ್ಯರ ಶಿಕ್ಷಣ ಪ್ರಸಾರಕ್ಕೆ ವಿಶೇಷ ಆದ್ಯತೆಯನ್ನು ನೀಡಿದರು. 1911ರಲ್ಲಿ ಒಂದು ಆಜ್ಞೆಯನ್ನು ಹೊರಡಿಸಿ ಎಲ್ಲಾ ಅಸ್ಪೃಶ್ಯರಿಗೆ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತ ಮತ್ತು ಕಡ್ಡಾಯಗೊಳಿಸಿದರು. ಅಸ್ಪೃಶ್ಯ ಸಮುದಾಯದ ದುಸ್ತರವಾದ ಪರಿಸ್ಥಿತಿಗಳನ್ನು ಪರಿಗಣಿಸಿ ಮತ್ತು ಅವರ ಕಲಿಕೆಯನ್ನು ಪ್ರೋತ್ಸಾಹಿಸಲು ಪುಸ್ತಕಗಳು, ಸ್ಲೇಟುಗಳು ಮತ್ತು ಸೀಸದ ಕಡ್ಡಿಗಳನ್ನು ಮಕ್ಕಳಿಗೆ ಉಚಿತವಾಗಿ ಹಂಚಲು ವ್ಯವಸ್ಥೆ ಮಾಡಿದರು. ಪ್ರತಿಭಾವಂತ ಅಸ್ಪೃಶ್ಯ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವಿದ್ಯಾರ್ಥಿ ವೇತನಗಳನ್ನು ನೀಡಿದರು.
1919 ಸೆಪ್ಟೆಂಬರ್ 28ರಂದು ಒಂದು ಆಜ್ಞೆಯನ್ನು ಹೊರಡಿಸಿ ಅಸ್ಪೃಶ್ಯರಿಗೆ ಪ್ರತ್ಯೇಕವಾಗಿದ್ದ ಶಾಲೆಗಳನ್ನು ಮುಚ್ಚಿಸಿದರು. ಈ ಆಜ್ಞೆಯಲ್ಲಿ ಈ ರೀತಿ ಹೇಳಲಾಗಿದೆ: “ಕರವೀರದ ಪ್ರದೇಶದಲ್ಲಿ (ಜಹಗೀರು ಪ್ರದೇಶಗಳನ್ನು ಬಿಟ್ಟು) ಅಸ್ಪಶ್ಯರಿಗೆ ಪ್ರತ್ಯೇಕ ಶಾಲೆಗಳಿದ್ದವು. ಬರುವ ದಸರಾ ಹಬ್ಬದಿಂದ ಅವುಗಳನ್ನು ಮುಚ್ಚಬೇಕು ಮತ್ತು ಸರಕಾರಿ ಶಾಲೆಗಳಲ್ಲಿ ಸವರ್ಣ ಜಾತಿಯ ಹುಡುಗರೊಂದಿಗೆ ಅಸ್ಪಶ್ಯ ಹುಡುಗರನ್ನು ಸೇರಿಸಿಕೊಳ್ಳಬೇಕು. ಸರಕಾರಿ ಶಾಲೆಗಳಲ್ಲಿ ಸ್ಪರ್ಶ-ನಿಷಿದ್ದ (Touch-Taboo) ಎಂಬ ಆಚರಣೆಯನ್ನು ಇನ್ನು ಮೇಲೆ ಆಚರಿಸುವಂತಿಲ್ಲ, ಎಲ್ಲಾ ಜಾತಿಯ ಮತ್ತು ಧರ್ಮದ ಮಕ್ಕಳು ಒಟ್ಟಿಗೆ ಕುಳಿತುಕೊಳ್ಳಬೇಕು”.
ಅಸ್ಪೃಶ್ಯತೆಯನ್ನು ಬುಡಸಹಿತ ತಮ್ಮ ಸಂಸ್ಥಾನದಲ್ಲಿ ಕಿತ್ತು ಹಾಕುವ ಸಲುವಾಗಿ ಶಾಹು ಮಹಾರಾಜರು ಜನವರಿ 1, 1919ರಲ್ಲಿ ಎರಡು ಘೋಷಣೆಗಳನ್ನು ಹೊರಡಿಸಿದರು. ಮೊದಲನೆಯ ಘೋಷಣೆಯು ಇಲಾಖೆಗಳಾದ ಕಂದಾಯ, ನ್ಯಾಯಕ್ಕೆ ಸಂಬಂಧಿಸಿದ್ದು, ಅದು ಹೇಳುತ್ತದೆ: “ಕೊಲ್ಲಾಪುರ ಸಂಸ್ಥಾನದಲ್ಲಿ ಕಂದಾಯ, ನ್ಯಾಯಾಂಗ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಅಸ್ಪೃಶ್ಯ ನೌಕರರನ್ನು ಪ್ರೀತಿ ಮತ್ತು ಸಮಾನತೆಗಳಿಂದ ಕಾಣಬೇಕು, ಉಪಚರಿಸಬೇಕು. ಒಂದು ವೇಳೆ ಯಾವುದೇ ಅಧಿಕಾರಿ ಮೇಲೆ ಹೇಳಿದ ರೀತಿಯಲ್ಲಿ ಅಸ್ಪೃಶ್ಯ ಉದ್ಯೋಗಿಗಳನ್ನು ಸತ್ಕರಿಸದಿದ್ದರೆ, ಅವನು ಈ ಆಜ್ಞೆಯ ಸ್ವೀಕೃತಿಯನ್ನು ಪಡೆದ ಆರು ವಾರಗಳಲ್ಲಿ ಸೂಕ್ತ ತಿಳುವಳಿಕೆಯ ಪತ್ರವನ್ನು ನೀಡಿ ರಾಜೀನಾಮೆ ನೀಡಬೇಕು. ಅವನಿಗೆ ನಿವೃತ್ತಿ ವೇತನ ನೀಡಲಾಗುವುದಿಲ್ಲ. ನಮ್ಮ ಸಂಸ್ಥಾನದಲ್ಲಿ ಯಾವ ಒಬ್ಬ ವ್ಯಕ್ತಿಯನ್ನೂ ಪ್ರಾಣಿಯೆಂದು ಪರಿಗಣಿಸದೆ, ಪ್ರತಿಯೊಬ್ಬನನ್ನೂ ಒಬ್ಬ ಮನುಷ್ಯನೆಂದು ಪರಿಗಣಿಸಿ ಕಾಣಬೇಕೆಂಬುದು ನಮ್ಮ ಪವಿತ್ರ ಆಶಯ. ನಮ್ಮ ಅಧಿಕಾರಿಗಳು ಮಿಷನರಿಗಳ, ಆರ್ಯ ಸಮಾಜದವರ, ರೈಲ್ವೆ ಮತ್ತು (ಬ್ರಿಟಿಷ್) ಸರಕಾರದ ಅಧಿಕಾರಿಗಳನ್ನು ಈ ವಿಷಯದಲ್ಲಿ ಅನುಕರಿಸಬೇಕು”.
“ದತ್ತಿ ಆಸ್ಪತ್ರೆಗಳಲ್ಲಿ ಸ್ಪಶ್ಯ ಮತ್ತು ಅಸ್ಪೃಶ್ಯರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ಮತ್ತು ಅಸ್ಪೃಶ್ಯರನ್ನು ಆಸ್ಪತ್ರೆಯ ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ ಎಂಬ ಸಂಗತಿ ಮಾನ್ಯ ಮಹಾರಾಜರ ಗಮನಕ್ಕೆ ಬಂದಿದೆ. ಸರಕಾರಿ ಕಟ್ಟಡಗಳನ್ನು ಬೇರೆಯವರಿಗೆ ಆರೋಗ್ಯಧಾಮಗಳನ್ನು ಬಿಟ್ಟುಕೊಟ್ಟಂತೆ ಬಿಟ್ಟುಕೊಟ್ಟಿಲ್ಲ; ಅಸ್ಪೃಶ್ಯರಿಗೆ ತಿರಸ್ಕಾರ ಭಾವನೆಯಿಂದ ಚಿಕಿತ್ಸೆ ನೀಡುವ ಹಕ್ಕು ಯಾರಿಗೂ ಇಲ್ಲ. ಮಿಗಿಲಾಗಿ ಅಸ್ಪೃಶ್ಯರನ್ನು ಬಹು ಎಚ್ಚರಿಕೆ ಮತ್ತು ಗೌರವದಿಂದ ಉಪಚರಿಸಬೇಕು. ದತ್ತಿ ಆಸ್ಪತ್ರೆಗಳಿರುವುದೇ ಬಡವರಿಗಾಗಿ, ಬಡವರಲ್ಲಿಯೇ ಅತಿಬಡವರಾದ ಅಸ್ಪೃಶ್ಯರನ್ನು ಸಮಾನವಾಗಿ ಉಪಚರಿಸಬೇಕು. ಸಂಸ್ಥಾನದ ವೈದ್ಯಾಧಿಕಾರಿಗಳು ಪಾಶ್ಚಿಮಾತ್ಯರ ನಿದರ್ಶನಗಳನ್ನು ವಿಶೇಷವಾಗಿ ಮೀರಜ್‌ನ ಅಮೇರಿಕನ್ ಮಿಷನ್ನನ್ನು ಅನುಸರಿಸಬೇಕೆಂದು ಮಾನ್ಯ ಮಹಾರಾಜರು ಪ್ರಾಮಾಣಿಕವಾಗಿ ಬಯಸುತ್ತಾರೆ. ಸ್ಪಶ್ಯ ಅಥವಾ ಅಸ್ಪೃಶ್ಯ ರೋಗಿ ಒಳಕ್ಕೆ ಬಂದಾಗ ಅವನನ್ನು ಗೌರವದಿಂದ ಪರೀಕ್ಷಿಸಿ ಚಿಕಿತ್ಸೆ ನೀಡಬೇಕು. ಅದರ ಬದಲಿಗೆ ದನಗಳನ್ನು ಅಟ್ಟಿದಂತೆ ಅಟ್ಟದೆ, ಅವರನ್ನು ಆಸ್ಪತ್ರೆಯೊಳಕ್ಕೆ ಚಿಕಿತ್ಸೆಗೆ ಕಳುಹಿಸಿಕೊಡಬೇಕು. ಯಾವುದೇ ಅಧಿಕಾರಿಗೆ ಈ ನಡವಳಿಕೆಗೆ ಆಕ್ಷೇಪಣೆಯಿದ್ದರೆ ಈ ಆಜ್ಞೆ ಮುಟ್ಟಿದ ಆರು ವಾರಗಳಲ್ಲಿ ತಮ್ಮ ರಾಜೀನಾಮೆಯನ್ನು ಕೊಡುವುದು ಉತ್ತಮ. ಆದರೆ ಆ ಅಧಿಕಾರಿಗೆ ನಿವೃತ್ತಿ ವೇತನವಿಲ್ಲ. ಏನೇ ಆದರೂ ಅಧಿಕಾರಿಯು ಆಯಾಸಗೊಂಡಿರಬಹುದು, ಅವನು ಒಬ್ಬ ಹೊಸರೋಗಿಯನ್ನು ನೋಡಿಕೊಳ್ಳಲೇಬೇಕು; ಈ ನಿಯಮ ಪ್ರತಿಯೊಬ್ಬರಿಗೂ ಅನ್ವಯಿಸುತ್ತೆ; ಇದು ಮೇಲಧಿಕಾರಿಯಿಂದ ಹಿಡಿದು ಬ್ಯಾಂಡೇಜ್ ಬಟ್ಟೆ ಕಟ್ಟುವವನಿಗೂ ಮತ್ತು ನರ್ಸ್‌ನಿಂದ ಹಿಡಿದು ವೈದ್ಯಕೀಯ ಇಲಾಖೆಗೂ ಅನ್ವಯಿಸುತ್ತದೆ. ಈ ಆಜ್ಞೆಯ ಒಂದು ಪ್ರತಿಯನ್ನು ಪ್ರತಿಯೊಬ್ಬರಿಗೆ ಮತ್ತು ಈಗ ಹಾಲಿಯಿರುವ ಮತ್ತು ಮುಂದೆ ಬರುವ ವೈದ್ಯಕೀಯ ಇಲಾಖೆಯ ಉದ್ಯೋಗಿಗಳಿಗೆ ಕೊಡಲಾಗುವುದು ಮತ್ತು ಒಂದು ಪ್ರತಿಯನ್ನು ನಿತ್ಯದ ಉಪಯೋಗಕ್ಕಾಗಿ ಆಸ್ಪತ್ರೆಯ ಕಛೇರಿಯಲ್ಲಿ ನೇತುಹಾಕಲಾಗುವುದು”.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಘೋಷಣೆಯಲ್ಲಿ ಶಾಹು ಮಹಾರಾಜರು ಹೀಗೆ ಹೇಳುತ್ತಾರೆ:
“ಶಿಕ್ಷಣ ಇಲಾಖೆಯಲ್ಲಿ ಸ್ಪಶ್ಯರನ್ನು ಮತ್ತು ಅಸ್ಪೃಶ್ಯರನ್ನು ವಿಭಿನ್ನವಾಗಿ ಉಪಚರಿಸಲಾಗುವುದೆಂದು ಮತ್ತು ಈ ಇಲಾಖೆಯ ಕಾಂಪೌಂಡಿನೊಳಕ್ಕೆ ಅಸ್ಪೃಶ್ಯರನ್ನು ಒಳಬರಿಸುತ್ತಿಲ್ಲ ಎಂಬುದನ್ನು ಶಾಹುರವರು ಅರ್ಥಮಾಡಿಕೊಂಡಿದ್ದಾರೆ. ಸರಕಾರಿ ಕಟ್ಟಡಗಳನ್ನು ಖಾಸಗಿ ಉದ್ಯಮಗಳಿಗೆ ಕೊಟ್ಟಿಲ್ಲವಾದ್ದರಿಂದ ಅಸ್ಪೃಶ್ಯರನ್ನು ತಿರಸ್ಕಾರ ಭಾವನೆಯಿಂದ ನೋಡುವ ಹಕ್ಕು ಯಾರಿಗೂ ಇಲ್ಲ. ಮಿಗಿಲಾಗಿ ಅವರ ಬಗ್ಗೆ ಸಾಧ್ಯವಾದ ಎಲ್ಲಾ ರೀತಿಗಳಲ್ಲಿ ಪಾಲನೆ ಕೈಗೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳು ಬಡವರಿಗಾಗಿಯೇ ಇವೆ ಮತ್ತು ಬಡವರಲ್ಲಿಯೇ ಬಡವರಾದ ಅಸ್ಪೃಶ್ಯರನ್ನು ಸಮಾನವಾಗಿ ಕಾಣುವುದು ಅತ್ಯಂತ ಸೂಕ್ತ. ಅವರೂ ಸಹ ತೆರಿಗೆಗಳನ್ನು ನೀಡುವಾಗ ಅವರನ್ನು ಏಕೆ ಕೆಟ್ಟ ರೀತಿಯಲ್ಲಿ ಉಪಚರಿಸಬೇಕು? ಶಾಲಾ ಇಲಾಖೆಯ ಖಾಸಗಿ ಮತ್ತು ಸರಕಾರಿ ವಿದ್ಯಾಸಂಸ್ಥೆಗಳು ಮತ್ತು ಅನುದಾನ ಪಡೆದ ಅಥವಾ ಸಹಾಯ ಸ್ವೀಕರಿಸಿದ ಯಾವುದೇ ರೂಪದ ಕಟ್ಟಡವಾಗಲಿ ಅಥವಾ ಆಟದ ಮೈದಾನವಾಗಲಿ ಅಸ್ಪೃಶ್ಯರನ್ನು ಹೆಚ್ಚು ಗೌರವ ಮತ್ತು ಮಮತೆಯಿಂದ, ಸ್ಪಶ್ಯರಿಗಿಂತ ಮಿಗಿಲಾಗಿ ನೋಡಿಕೊಳ್ಳಬೇಕು. ಹೀಗೇ ಇದನ್ನು ಮಾಡಬೇಕು. ಏಕೆಂದರೆ ಸ್ಪಶ್ಯರು ಶಿಕ್ಷಣವನ್ನು ಇತರೆ ಮೂಲಗಳಿಂದ ಗಳಿಸಿಕೊಳ್ಳಬಹುದು. ಅಸ್ಪಶ್ಯರಿಗೆ ಯಾವುದೇ ವಿಧಾನದ ಮೂಲಗಳು ಎಟುಕುತ್ತಿಲ್ಲ. ಅಸ್ಪೃಶ್ಯರನ್ನು ಸಮಾನತೆಯಿಂದ ಕಾಣದಿದ್ದರೆ ಅಧ್ಯಾಪಕರು ಅವರು ಪ್ರಾಂಶುಪಾಲರಾಗಿರಲಿ ಅಥವಾ ಕೆಳಶ್ರೇಣಿಯ ಅಧ್ಯಾಪಕರಾಗಿರಲಿ ಹೊಣೆಗಾರರಾಗುತ್ತಾರೆ. ಮತ್ತು ಖಾಸಗಿ ಸಂಸ್ಥೆಗಳಿಗೆ ನೀಡುವ ನೆರವನ್ನು ರದ್ದುಗೊಳಿಸಲಾಗುವುದು”.
ಹೀಗೆ ಹಿಂದುಳಿದವರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳ್ಗೆಗಾಗಿ ಶಾಹುಮಹಾರಾಜರು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಆಜ್ಞೆಗಳನ್ನು ಹೊರಡಿಸಿ ಜಾರಿಗೆ ತಂದರು.
- ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ
ದಕ್ಷಿಣ ಭಾರತದಲ್ಲಿ ಶಾಸನಾತ್ಮಕವಾಗಿ ಹಿಂದುಳಿದ ವರ್ಗಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡುವ ಕ್ರಮ ಮೈಸೂರು ಸಂಸ್ಥಾನದಲ್ಲಿ ಆರಂಭವಾಯಿತು. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ನೇಮಿಸಿದ್ದ ಜಸ್ಟೀಸ್ ಮಿಲ್ಲರ್ ಸಮಿತಿ ವರದಿಯು ಇದಕ್ಕೆ ಮುನ್ನುಡಿ ಬರೆಯಿತು. ಈ ಸಮಿತಿಯು 1919ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. 1921ರಲ್ಲಿ ಮಿಲ್ಲರ್ ವರದಿಯನ್ನು ಜಾರಿಗೊಳಿಸುವುದರ ಮೂಲಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅರ್ಧದಷ್ಟು ಮತ್ತು ಕೆಳ ದರ್ಜೆಯ ಹುದ್ದೆಗಳಲ್ಲಿ ಮೂರನೆಯ ಎರಡರಷ್ಟು ಬ್ರಾಹ್ಮಣೇತರರಿಗೆ ಮೀಸಲಿಡಲಾಯಿತು. ದಮನಿತ ವರ್ಗದವರಲ್ಲಿ ಆರ್ಹತೆ ಇರುವ ಅಭ್ಯರ್ಥಿಗಳಿದ್ದರೆ ಅವರಿಗೆ ಆದ್ಯತೆ ನೀಡಲಾಯಿತು. ಪ್ರಾಥಮಿಕ ಶಿಕ್ಷಣದ ವಿಸ್ತರಣೆ, ಶಿಕ್ಷಣದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಬಳಕೆ, ವಿದ್ಯಾರ್ಥಿ ವೇತನ, ಹಾಸ್ಟೆಲ್‌ಗಳ ನಿರ್ಮಾಣ, ಉನ್ನತ ಶಿಕ್ಷಣದಲ್ಲಿ ಸೀಟುಗಳ ಹಂಚಿಕೆ ಇತ್ಯಾದಿ ಸುಧಾರಣೆಗಳನ್ನು ತರಲಾಯಿತು.
- ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇತರ ರಾಜ್ಯಗಳಲ್ಲಿ ಮೀಸಲಾತಿ
ಬ್ರಾಹ್ಮಣ ಸಮುದಾಯವು ಅತ್ಯಂತ ಅಲ್ಪಸಂಖ್ಯಾತರಾಗಿದ್ದರೂ ರಾಜಕೀಯ, ಆರ್ಥಿಕ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಸಿಂಹಪಾಲು ಪಡೆದಿತ್ತು. ಈ ಅಸಮಾನತೆಯನ್ನು ಸರಿಪಡಿಸುವುದಕ್ಕಾಗಿ ಜಸ್ಟೀಸ್ ಪಾರ್ಟಿಯು ಬ್ರಾಹ್ಮಣೇತರರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸಿತು. ಈ ಪಕ್ಷವು 1920-26 ಮತ್ತು 1930-37ರಲ್ಲಿ ಅಧಿಕಾರದಲ್ಲಿದ್ದಾಗ ಜಾತಿವಾರು ಪ್ರಾತಿನಿಧ್ಯ ನೀತಿಯನ್ನು ಜಾರಿಗೆ ತಂದಿತು. ಜಸ್ಟೀಸ್ ಪಾರ್ಟಿಯು 1928ರಲ್ಲಿ ಹೊರಡಿಸಿದ ಕಮ್ಯುನಲ್ ರೆಪ್ರೆಸೆಂಟೇಶನ್ ಪ್ರಕಾರ ಸರ್ಕಾರಿ ಸೇವೆಯಲ್ಲಿನ ಪ್ರತಿ 12ರ ಗುಂಪಿನಲ್ಲಿ ಬ್ರಾಹ್ಮಣೇತರರಿಗೆ 5, ಬ್ರಾಹ್ಮಣರಿಗೆ 2, ಮಹಮದೀಯರಿಗೆ 2, ಆಂಗ್ಲೋ ಇಂಡಿಯನ್ನರಿಗೆ 2 ಮತ್ತು ಇಂಡಿಯನ್ ಕ್ರಿಶ್ಚಿಯನ್ನರಿಗೆ 1 ಹುದ್ದೆಗಳನ್ನು ನಿಗದಿಪಡಿಸಿತು.
ಇದೇ ರೀತಿಯಲ್ಲಿ ಕೇರಳದಲ್ಲಿ ಶ್ರೀ ನಾರಾಯಣಗುರುಗಳು ಈಳವ ಜನಾಂಗಕ್ಕೆ ದೇವಾಲಯ ಪ್ರವೇಶ, ಈಳವ ಜನಾಂಗದ ಸಂಘಟನೆ, ಶಿಕ್ಷಣದ ಪ್ರಾಮುಖ್ಯತೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರು. ಇದರ ಪರಿಣಾಮವಾಗಿ 1935ರಲ್ಲಿ ತಿರುವಾಂಕೂರು ಮಹಾರಾಜರು ಮತ್ತು ತದನಂತರ ಕೊಚ್ಚಿನ್ ಮಹಾರಾಜರು ಮೀಸಲಾತಿ ಕ್ರಮಗಳನ್ನು ಜಾರಿಗೊಳಿಸಿದರು. ಬಾಂಬೆ ಪ್ರೆಸಿಡೆನ್ಸಿಯಲ್ಲಿ 1931ರಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಭಾರತದ ಎಲ್ಲ ಪ್ರಾಂತಗಳು ಮತ್ತು ಸಂಸ್ಥಾನಗಳು ಹಿಂದುಳಿದ ವರ್ಗಗಳಿಗೆ ಮತ್ತು ಪ.ಜಾ ಮತ್ತು ಪ.ಪಂ ಗಳಿಗೆ ಮೀಸಲಾತಿ ನೀಡುವ ಕ್ರಮಗಳು ಒಂದಲ್ಲ ಒಂದು ರೀತಿಯಲ್ಲಿ ಜಾರಿಗೊಂಡಿದ್ದವು ಎಂಬುದು ಗಮನಾರ್ಹ.