ಭಾರತ ದೇಶ 1947 ಆಗಸ್ಟ್ 15ರಂದು ಸ್ವತಂತ್ರವಾಯಿತು. 1949 ನವೆಂಬರ್ 26ರಂದು ಭಾರತ ಸರ್ಕಾರವು ಲಿಖಿತ ಸಂವಿಧಾನವನ್ನು ಒಪ್ಪಿತು. 1950 ಜನವರಿ 26ರಂದು ಸಂವಿಧಾನವನ್ನು ಜಾರಿಗೆ ತರುವುದರ ಮುಖಾಂತರ ಭಾರತವು ಗಣರಾಜ್ಯವಾಯಿತು. ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಪೀಠಿಕೆಯನ್ನು ಸಂವಿಧಾನದ ಪ್ರಸ್ತಾವನೆ ಎಂದು ಕರೆಯಲಾಗಿದೆ. ಅದು ಈ ಕೆಳಕಂಡಂತಿದೆ:
ಈ ಪ್ರಸ್ತಾವನೆಯ ಮೂಲಕ ತಿಳಿಯಪಡಿಸುವ ತತ್ವಗಳೆಂದರೆ, ಜನರೇ ಅಧಿಕಾರದ ಮೂಲ, ಭಾರತ ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ; ಅದೊಂದು ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದ ಗಣರಾಜ್ಯ; ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು ನಮ್ಮ ಗುರಿ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡುವುದು; ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸ್ಥಾನಮಾನವನ್ನು ಕಲ್ಪಿಸುವುದು; ವ್ಯಕ್ತಿ ಗೌರವ ಮತ್ತು ಸಹೋದರತೆಯನ್ನು ಬೆಳೆಸುವುದು; ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ.
ನಮ್ಮ ಸಂವಿಧಾನವನ್ನು ಹಲವು ಮೂಲತತ್ವಗಳ ಅಡಿಪಾಯದ ಮೇಲೆ ರೂಪಿಸಲಾಗಿದೆ. ಅವುಗಳನ್ನು ಮೂಲತತ್ವ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿಲ್ಲವಾದರೂ, ಅಂತರ್ಗತ ಮಾಡಲಾಗಿದೆ. 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು, ಅಂತರ್ಗತವಾಗಿದ್ದ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. ‘ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲೂ ಆಗದು’ ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ನ್ಯಾಯವು ಸಂವಿಧಾನದ ಮೂಲ ತತ್ವಗಳಲ್ಲಿ ಒಂದು ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂವಿಧಾನದಲ್ಲಿ ಮೀಸಲಾತಿಗೆ ಸಂಬಂಧಿಸಿದ ವಿಚಾರಗಳನ್ನು ಹಲವು ಅನುಚ್ಛೇದಗಳಲ್ಲಿ ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ ಮುಖ್ಯವೆಂದರೆ:
ಅನುಚ್ಛೇದ 14: ಭಾರತ ರಾಜ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೆ ಕಾನೂನಿನ ಸಮಾನತೆಯನ್ನು ಅಥವಾ ಕಾನೂನಿನ ರಕ್ಷಣೆಯನ್ನು ರಾಜ್ಯ ನಿರಾಕರಿಸುವಂತಿಲ್ಲ.
ಅನುಚ್ಛೇದ 15: ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯವನ್ನು ನಿಷೇಧಿಸಲಾಗಿದೆ.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿಗಾಗಿ ರಾಜ್ಯವು ವಿಶೇಷ ಕಾನೂನುಗಳನ್ನು ಜಾರಿಗೆ ತರಬಹುದು.
ಅನುಚ್ಛೇದ 16: ರಾಜ್ಯದ ಸೇವೆಗಳಲ್ಲಿ ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡದ ಜನರಿಗೆ ಮೀಸಲಾತಿಯನ್ನು ಒದಗಿಸುವುದು.
ಅನುಚ್ಛೇದ 46: ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಸಂವರ್ಧಿಸುವುದು ಮತ್ತು ಸಂರಕ್ಷಿಸತಕ್ಕದ್ದು.
ಅನುಚ್ಛೇದ 243: ಪ್ರತಿಯೊಂದು ಪಂಚಾಯಿತಿಯಲ್ಲಿ ಅನುಸೂಚಿತ ಜಾತಿಗಳಿಗೆ ಅನುಸೂಚಿತ ಬುಡಕಟ್ಟುಗಳಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿಡತಕ್ಕದ್ದು.
ಅನುಚ್ಛೇದ 330: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಲೋಕಸಭೆಯಲ್ಲಿ ಸ್ಥಾನಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಅನುಚ್ಛೇದ 332: ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ರಾಜ್ಯದ ಶಾಸನ ಸಭೆಯಲ್ಲಿ ಸ್ಥಾನಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಇಷ್ಟೆಲ್ಲ ಒಳ್ಳೆಯ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ತಿಳಿಯಪಡಿಸಿದ್ದರೂ ಸಹ ಅಂತಿಮ ಕರಡು ಸಂವಿಧಾನವನ್ನು ಭಾರತ ಸರ್ಕಾರದ ಅಂಗೀಕಾರಕ್ಕೆ ಒಪ್ಪಿಸಿದಾಗ ಅಂಬೇಡ್ಕರ್ ಅವರು ಹೇಳಿದ ಎಚ್ಚರಿಕೆಯ ಮಾತುಗಳು ಇಂದಿಗೂ ಪ್ರಸ್ತುತ:
“ಭಾರತದ ಸಮಾಜದಲ್ಲಿ ಸಂಪೂರ್ಣವಾಗಿ ಕಾಣೆಯಾಗಿರುವ ಎರಡು ಅಂಶಗಳನ್ನು ಒಪ್ಪಿಕೊಂಡೇ ನಾವು ಮುಂದೆ ಹೋಗಬೇಕಿದೆ. ಇದರಲ್ಲಿ ಒಂದು ಸಮಾನತೆಗೆ ಸಂಬಂಧಿಸಿದ ಪ್ರಶ್ನೆ. ಸಾಮಾಜಿಕ ನೆಲೆಯಲ್ಲಿ ಶ್ರೇಣೀಕೃತ ಅಸಮಾನತೆಯ ತತ್ವದ ಮೇಲೆ ಆಧಾರಿತವಾದ ಸಮಾಜವನ್ನು ನಾವು ಭಾರತದಲ್ಲಿ ನೋಡುತ್ತೇವೆ. ಅಂದರೆ ಕೆಲವರಿಗೆ ಉಚ್ಚ ಸ್ಥಾನ, ಕೆಲವರಿಗೆ ನೀಚ ಸ್ಥಾನ ಎಂದು ಇದರ ಅರ್ಥ. ಆರ್ಥಿಕ ನೆಲೆಯಲ್ಲಿ ನೋಡುವುದಾದರೆ ಕೆಲವರಿಗೆ ಅಪಾರವಾದ ಐಶ್ವರ್ಯವಿರುವ, ಕೆಲವರಿಗೆ ಅತೀವ ಬಡತನವಿರುವ ಸಮಾಜ ನಮ್ಮದು. ಜನವರಿ 26ರಂದು ನಾವು ವಿರೋಧಾಭಾಸಗಳಿಂದ ಕೂಡಿದ ಬದುಕಿಗೆ ಪಾದಾರ್ಪಣೆ ಮಾಡಲಿದ್ದೇವೆ. ರಾಜಕೀಯವಾಗಿ ನಮ್ಮಲ್ಲಿ ಸಮಾನತೆ ಇರುತ್ತದೆ. ಆದರೆ
ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಅಸಮಾನತೆ ಇರುತ್ತದೆ. ರಾಜಕೀಯ ನೆಲೆಯಲ್ಲಿ ಒಬ್ಬ ಮನುಷ್ಯ, ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ನೋಡುತ್ತೇವೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ನಾವು ನಮ್ಮ ಸಾಮಾಜಿಕ, ಆರ್ಥಿಕ ರಚನೆಯ ಕಾರಣದಿಂದಾಗಿ ಒಬ್ಬ ಮನುಷ್ಯ, ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸುತ್ತಲೇ ಹೋಗುತ್ತೇವೆ. ಈ ರೀತಿಯ ವಿರೋಧಾಭಾಸಗಳ ಬದುಕನ್ನು ನಾವು ಇನ್ನೂ ಎಷ್ಟು ಕಾಲ ನಡೆಸಬೇಕು? ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಇನ್ನೂ ಎಷ್ಟು ಕಾಲದವರೆಗೆ ನಾವು ಸಮಾನತೆಯನ್ನು ನಿರಾಕರಿಸುತ್ತಲೇ ಹೋಗಬೇಕು? ನಾವು ದೀರ್ಘಕಾಲದವರೆಗೆ ಹೀಗೆ ಮುಂದುವರೆಸಿಕೊಂಡು ಹೋದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಂಕಷ್ಟದಲ್ಲಿ ಸಿಲುಕಿಸಿದ ಹಾಗೆ ಆಗುತ್ತದೆ. ಈ ವಿರೋಧಾಭಾಸವನ್ನು ನಾವು ಸಾಧ್ಯವಾದಷ್ಟು ಬೇಗ ನಿವಾರಿಸಬೇಕು. ಇಲ್ಲವಾದಲ್ಲಿ ಈ ಅಸೆಂಬ್ಲಿಯು ಅಷ್ಟೆಲ್ಲಾ ಶ್ರಮಪಟ್ಟು ನಿರ್ಮಿಸಿದ ಈ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನು, ಅಸಮಾನತೆಯ ಸಂಕಷ್ಟಗಳಿಗೆ ಈಡಾದವರು ಧೂಳೀಪಟ ಮಾಡುತ್ತಾರೆ.
ನಮ್ಮಲ್ಲಿ ಕಾಣೆಯಾಗಿರುವ ಎರಡನೇ ಅಂಶವೆಂದರೆ ಭ್ರಾತೃತ್ವದ ತತ್ವ, ಭ್ರಾತೃತ್ವ ಎಂದರೇನು? ಭ್ರಾತೃತ್ವ ಎಂದರೆ, ನಾವು ಭಾರತೀಯರೆಲ್ಲರೂ ಸೋದರರು ಎಂಬ ಭಾವನೆ. ಭಾರತೀಯರಲ್ಲಿ ನಾವೆಲ್ಲ ಒಂದು ಎಂಬ ಭಾವನೆ ಇದ್ದಾಗ, ಈ ತತ್ವವು ಸಾಮಾಜಿಕ ಬದುಕಿಗೆ ಒಗ್ಗಟ್ಟು, ಅಖಂಡತೆಯನ್ನು ಹಾಗೂ ಏಕತೆಯನ್ನು ತಂದು ಕೊಡುತ್ತದೆ. ನಾವು ಇನ್ನೂ ಒಂದು ರಾಷ್ಟ್ರವಾಗಿಲ್ಲ ಎಂಬುದನ್ನು ಎಷ್ಟು ಬೇಗ ಅರ್ಥಮಾಡಿಕೊಂಡು, ಈ ಗುರಿಯನ್ನು ಸಾಧಿಸುವ ಮಾರ್ಗ ವಿಧಾನಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತೇವೋ ಅಷ್ಟೂ ಒಳ್ಳೆಯದು. ಏಕೆಂದರೆ ಒಂದು ರಾಷ್ಟ್ರವಿದ್ದಾಗ ಮಾತ್ರ ಭಾತೃತ್ವವು ವಾಸ್ತವವಾಗುತ್ತದೆ. ಭ್ರಾತೃತ್ವವಿಲ್ಲದಿದ್ದರೆ ಸಮಾನತೆ ಹಾಗೂ ಸ್ವಾತಂತ್ರ್ಯಗಳು ಆಳಕ್ಕೆ ಇಳಿಯದೆ ಮೇಲಷ್ಟೇ ಉಳಿದ ಒಂದು ಬಣ್ಣದ ಲೇಪನ ಮಾತ್ರ ಆಗಿರುತ್ತವೆ.”