ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಭಾರತದ ಜಾತಿ ವ್ಯವಸ್ಥೆಯಲ್ಲಿ ವರ್ಗ ವ್ಯವಸ್ಥೆಯು ಅಡಗಿದೆ. ಇಲ್ಲಿ ಮೇಲ್ಲಾತಿಗಳು ಮೇಲ್ವರ್ಗಗಳು, ಕೆಳ ಜಾತಿಗಳು ಕೆಳ ವರ್ಗಗಳು. ಜಾತಿ-ಜಾತಿಯ ನಡುವೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸಮಾನತೆಯನ್ನು ಕಾಣಬಹುದು. ಕೆಳಜಾತಿಯ ಶ್ರಮಿಕರನ್ನು ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಅಪಮಾನಕ್ಕೆ ಒಳಪಡಿಸಿ ಗುಲಾಮರಂತೆ ನಡೆಸಿಕೊಳ್ಳಲಾಯಿತು. ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಹಿಂಸೆಯೂ ಸಹ. ಒಬ್ಬ ತನ್ನ ಜಾತಿ, ಶ್ರೀಮಂತಿಕೆ, ಅಧಿಕಾರ, ವಿದ್ಯೆ ಮುಂತಾದ ಕಾರಣವಾಗಿ ಇನ್ನೊಬ್ಬರನ್ನು ಕೀಳಾಗಿ ಕಾಣುವುದೂ ಹಿಂಸೆಯೇ! ಇಂತಹ ಅಮಾನವೀಯ ಸಾಮಾಜಿಕ ವ್ಯವಸ್ಥೆಯನ್ನು ನಿರಾಕರಿಸಿ, ಸಮಾನತೆಯ ಮೌಲ್ಯಗಳನ್ನು ವಚನಕಾರರು ತಮ್ಮ ವಚನಗಳ ಮುಖಾಂತರ ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಗೆ ಗೌರವದಿಂದ ಘನತೆಯಿಂದ, ಸ್ವತಂತ್ರವಾಗಿ, ಸ್ವಾವಲಂಬಿಗಳಾಗಿ ಬದುಕುವ ಹಕ್ಕು ಇದೆ ಎಂದು ಪ್ರತಿಪಾದಿಸಿದರು. ನಮಗೆ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯಗಳು ಅಷ್ಟೇ ಮುಖ್ಯ. ಹಕ್ಕುಗಳ ಜೊತೆ ಜೊತೆಯಲ್ಲಿ ಕರ್ತವ್ಯಗಳನ್ನು ಸೂಚಿಸಿದರು. ವಚನಕಾರರ ಈ ಪ್ರತಿಪಾದನೆ ಕೇವಲ ಕಲ್ಯಾಣಕ್ಕೆ ಸೀಮಿತವಾಗದೇ ಅವು ಸಾರ್ವಕಾಲಿಕ, ಸರ್ವ ಸಾಂದರ್ಭಿಕ ಮತ್ತು ಇಡೀ ವಿಶ್ವಕ್ಕೆ ಅನ್ವಯವಾಗುವಂತಹವು. ಹೀಗೆ ವಚನಕಾರರು ಮಾನವ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಪ್ರತಿಪಾದಿಸಿದ್ದರು. ಈ ಸಂಬಂಧ ಕೆಲವು ವಚನಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ:

ಭಕ್ತನು ಶಾಂತನಾಗಿರಬೇಕು;

ತನ್ನ ಕುರಿತ ಬಂದ ಠಾವಿನಲ್ಲಿ ಸತ್ಯನಾಗಿರಬೇಕು;

ಭೂತಹಿತವಹ ವಚನವ ನುಡಿಯಬೇಕು;

ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು;

ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು;

ತನು ಮನ ಧನವ ಗುರುಲಿಂಗಜಂಗಮಕ್ಕೆ ಸವೆಸಲೇಬೇಕು;

ಅಪಾತ್ರ ದಾನವ ಮಾಡಲಾಗದು;

ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು;

ಇದೇ ಮೊದಲಲ್ಲಿ ಬೇಹ ಶೌಚ ನೋಡ;

ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ

ಕೂಡಲ ಚೆನ್ನ ಸಂಗಮದೇವಾ

ಈ ವಚನದಲ್ಲಿ ಚನ್ನ ಬಸವಣ್ಣನವರು ಮಾನವ ವ್ಯಕ್ತಿತ್ವ ದರ್ಶನ ಮಾಡಿಸಿ ಅವನು ಹೇಗಿರಬೇಕು ಎಂಬುದನ್ನು ತಿಳಿ ಹೇಳಿದ್ದಾರೆ.

ದಾಸೀ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ

ಶಿವ ದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ ಪೂಜಿಸಿ

ಪಾದೋದಕ ಪ್ರಸಾದಕೊಂಬುದೇ ಯೋಗ್ಯ

ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ

ಪಂಚ ಮಹಾಪಾತಕ ನರಕ ಕಾಣ,

ಕೂಡಲಸಂಗಮದೇವಾ

ದಾಸಿಯರು, ವೇಶ್ಯೆಯರು, ಅನಾಥ ಮಕ್ಕಳು, ಅನೈತಿಕ ಸಂಬಂಧದಿಂದ ಜನಿಸಿದ ಮಕ್ಕಳು ದೀಕ್ಷೆ ಪಡೆದ ನಂತರ ಎಲ್ಲರಂತೆ ಸಮಾನರಾಗುತ್ತಾರೆ. ಇಂಥವರಿಗೆ ವಂದಿಸಬೇಕು, ಪೂಜಿಸಬೇಕು, ಇವರಿಂದ ಪಾದೋದಕ ಮತ್ತು ಪ್ರಸಾದ ಸ್ವೀಕರಿಸಬೇಕು. ಉದಾಸೀನ ಮಾಡಿದರೆ ನರಕಕ್ಕೆ ಹೋಗುತ್ತಾರೆ ಎಂದು ಬಸವಣ್ಣನವರು ಎಚ್ಚರಿಸಿದ್ದಾರೆ.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ‘ಅಹುದಹುದೆ’ನ ಬೇಕು

ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯಾ?

ಈ ವಚನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಲಾಗಿದೆ. ಜೊತೆಯಲ್ಲಿ ವಾಕ್ ಸ್ವಾತಂತ್ರ್ಯದ ಮಿತಿಗಳನ್ನು ಸೂಚಿಸಲಾಗಿದೆ. ನುಡಿದಂತೆ ನಡೆಯಬೇಕೆಂಬ ಸಂದೇಶವನ್ನು ಬಸವಣ್ಣನವರು ಸಾರಿದ್ದಾರೆ.

ಆವ ಕಾಯಕವಾದಡೂ ಸ್ವಕಾಯಕವ ಮಾಡಿ

ಗುರು ಲಿಂಗ ಜಂಗಮದ ಮುಂದಿಟ್ಟು,

ಒಕ್ಕುದ ಹಾರೈಸಿ, ಮಿಕ್ಕಿದ ಕೈಕೊಂಡು

ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು

ಜೀವ ಹೋದಡೆ ಸಾಯಿ,

ಇದಕ್ಕಾ ದೇವರ ಹಂಗೇಕೆ

ಬಾಪು ಲದ್ದೆಯ ಸೋಮ

ಈ ವಚನದಲ್ಲಿ ಲದ್ದೆಯ ಸೋಮಣ್ಣ ಯಾವುದೇ ಕಾಯಕವಾದರು, ತಲ್ಲೀನನಾಗಿ ಮಾಡು, ಕಾಯಕದಿಂದ ಬಂದದ್ದನ್ನು ದಾಸೋಹದ ಭಾವದಿಂದ ಗುರು, ಲಿಂಗ ಮತ್ತು ಜಂಗಮಕ್ಕೆ ಅರ್ಪಿಸು. ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು, ರೋಗ ಬಂದರೆ ನರಳು, ನೋವಾದರೆ, ಅರಚು, ಸಾವು ಬಂದರೆ ಸಾಯಿ, ಇದಕ್ಕೆ ದೇವರ ಹಂಗೇಕೆ? ಈ ವಚನದಲ್ಲಿ ಮಾನವನ ಆತ್ಮ ಗೌರವಕ್ಕೆ ಮಾನ್ಯತೆಯನ್ನು ನೀಡಲಾಗಿದೆ.

ಘನಗಂಭೀರ ಮಹಾಘನದೊಳಗೆ

ಘನಕ್ಕೆ ಘನವಾಗಿದ್ದೆನಯ್ಯಾ

ಕೂಡಲಸಂಗಮದೇವಯ್ಯನೆಂಬ

ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ

ಶಬ್ದ ಮುಗ್ಧವಾದುದನೇನೆಂಬೆನಯ್ಯಾ

ಈ ವಚನದಲ್ಲಿ ಬಸವಣ್ಣನವರು ಮಾನವ ಘನತೆಯ ಮಹತ್ವವನ್ನು ಸಾರಿದ್ದಾರೆ. ನಮ್ಮೊಳಗಿನ ಘನದ ಅರಿವಾದಾಗ ಮಾತ್ರ ನಾವು ಘನತೆವೆತ್ತವರಾಗುತ್ತೇವೆ. ಯಾವ ಭೇದವಿಲ್ಲದೆ ಪ್ರತಿಯೊಬ್ಬರಲ್ಲಿ ಘನತೆ ಇದೆ. ಅದನ್ನು ಅವರು ಅರಿಯಬೇಕು.

ದಯವಿಲ್ಲದ ಧರ್ಮವಾವುದಯ್ಯ?

ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನೆಂತೊಲಿವನಯ್ಯಾ

ಈ ವಚನದಲ್ಲಿ ಬಸವಣ್ಣನವರು ಧರ್ಮವನ್ನು ವಿರೋಧಿಸಲಿಲ್ಲ. ಇಲ್ಲಿ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಲಾಗಿದೆ. ಆದರೆ ಧರ್ಮಕ್ಕೆ ಮಾನವೀಯತೆಯನ್ನು ತುಂಬಲಾಗಿದೆ.

ತಾಳಮಾನ ಸರಿಸವನರಿಯೆ

ಓಜೆಬಜಾವಣೆ ಲೆಕ್ಕವನರಿಯೆ

ಅಮೃತಗಣ ದೇವಗಣವನರಿಯೆ

ಕೂಡಲಸಂಗಮದೇವಾ

ನಿನಗೆ ಕೇಡಿಲ್ಲವಾಗಿ ಆನುವೊಲಿದಂತೆ ಹಾಡುವೆನಯ್ಯ

ಈ ವಚನದಲ್ಲಿ ಬಸವಣ್ಣನವರು ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಮೂಲಭೂತ ಹಕ್ಕು ಎಂಬುದಾಗಿ ಪ್ರತಿಪಾದಿಸಿದ್ದಾರೆ. ಅದರ ಜೊತೆಯಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುತ್ತಾರೆ. ಅನ್ಯರನ್ನು ಗೌರವಿಸುವ ಮತ್ತು ಅನ್ಯರಿಗೆ ಕೆಟ್ಟದ್ದನ್ನು ಮಾಡದಿರುವ ನಿಬಂಧನೆಗಳನ್ನು ಸೂಚಿಸುತ್ತಾರೆ.

ಸಕಲ ಜೀವಾತ್ಮರಿಗೆ ಲೇಸನೆ ಬಯಸುವ

ನಮ್ಮ ಕೂಡಲಸಂಗನ ಶರಣರೇರ ಕುಲಜರು

ಈ ವಚನದಲ್ಲಿ ಬಸವಣ್ಣನವರು ಎಲ್ಲ ರೀತಿಯ ಕ್ರೌರ್ಯ ಮತ್ತು ಅಮಾನುಷ ನಡವಳಿಕೆಯನ್ನು ವಿರೋಧಿಸಿದ್ದಾರೆ. ನಿಜವಾದ ಶರಣರೆಂದರೆ ಇತರರನ್ನು ಹಿಂಸಿಸಬಾರದು, ಕ್ರೂರವಾಗಿ ನಡೆಸಿಕೊಳ್ಳಬಾರದು ಮತ್ತು ಇತರರ ಲೇಸನ್ನು ಬಯಸಬೇಕು.

ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ,

ಲೋಕವಿರೋಧಿ, ಶರಣನಾರಿಗಂಜುವನಲ್ಲ;

ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ

ಈ ವಚನದಲ್ಲಿ ಕಾನೂನಿನ ಮುಂದೆ ಎಲ್ಲರೂ ಒಂದೇ ಮತ್ತು ಎಲ್ಲರೂ ಕಾನೂನಿನಂತೆ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದ್ದಾರೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡ

ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ

ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ

ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ

ಈ ವಚನದಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಎಚ್ಚರಿಸಿದ್ದಾರೆ. ನಮ್ಮ ಕರ್ತವ್ಯಗಳೇ ಇತರರ ಹಕ್ಕುಗಳಾಗುತ್ತವೆ. ಈ ವಚನದಂತೆ ನಾವೆಲ್ಲರೂ ಬದುಕಿದರೆ ಯಾರೂ ಯಾವ ಆತಂಕ, ಅಭದ್ರತೆ, ಭಯವಿಲ್ಲದೆ ಬದುಕಬಹುದು.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ,

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ,

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆನಿಸಯ್ಯಾ

ವಿವಿಧ ಧರ್ಮಗಳು, ಸಾವಿರಾರು ಜಾತಿಗಳು-ಉಪಜಾತಿಗಳು, ನೂರಾರು ಭಾಷೆಗಳು, ಆಚಾರ-ವಿಚಾರ, ಸಂಪ್ರದಾಯಗಳು, ನಂಬಿಕೆಗಳು ಹೀಗೆ ಹರಿದು ಹಂಚಿ ಹೋಗಿರುವ ಜನರನ್ನು ಸಮಾನರಾಗಿ, ತಮ್ಮವರನ್ನಾಗಿ ಮತ್ತು ತಮ್ಮ ಮನೆಯ ಮಕ್ಕಳಂತೆ ಕಾಣಿ ಎಂಬ ಮಹಾ ಮಾನವೀಯತೆಯನ್ನು ಈ ವಚನದಲ್ಲಿ ಸಾರಿದ್ದಾರೆ.

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ-ನಿಮ್ಮ ತನುವು ಸಂತೈಸಿಕೊಳ್ಳಿ.

ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವಾ

ಇನ್ನೊಬ್ಬರಲ್ಲಿ ತಪ್ಪು ಕಾಣುವ ಕೆಲಸಕ್ಕೆ ಹೋಗುವ ಮೊದಲು ತಮ್ಮ ತಪ್ಪು ತಾವು ತಿದ್ದುಕೊಳ್ಳಿ ಮತ್ತು ಸರಿಪಡಿಸಿಕೊಳ್ಳಿ. ಇಡೀ ಜನ ಇಂತಹ ಕೆಲಸ ಮಾಡಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರೆ ಒಂದು ಸುಂದರ ಸಮಾಜವನ್ನು ಕಟ್ಟಬಹುದು.

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ?

ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,

ಜಂಗಮವಾಸ್ಯಾಯನವಾದಡೆ ಲಿಂಗಸಂತುಷ್ಟಿಯಹುದಯ್ಯಾ

ಈ ವಚನದಲ್ಲಿ ಬಸವಣ್ಣನವರು ಸಕಲಜೀವಿಗಳು ಸಂತೃಪ್ತಿ ಹೊಂದಿದಾಗ ಮಾತ್ರ ದೇವರು ಸಂತೃಪ್ತನಾಗುವನು ಎಂದು ಸಾರಿದ್ದಾರೆ. ಕಬ್ಬಿಣ ಕಾದಾಗ ಮಾತ್ರ ನೀರು ಕುಡಿಯುವುದು, ಭೂಮಿಯ ಜೊತೆ ಇದ್ದಾಗ ಮಾತ್ರ ಮರ ನೀರು ಕುಡಿಯುವುದು. ಅದೇ ರೀತಿ ಜೀವ ಜಗತ್ತಿನ ಜೊತೆ ಇದ್ದಾಗ ಮಾತ್ರ ದೇವರು ಸಂತಸಪಡುವನು.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ

ಛಲಬೇಕು ಶರಣಂಗೆ ಲಿಂಗಜಂಗಮನನೊಂದೆಂಬ

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ

ಒಳ್ಳೆಯದನ್ನು ಸಾಧಿಸುವ ಛಲ ಬೇಕಾಗುತ್ತದೆ. ಛಲವಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸ್ವಾರ್ಥಕ್ಕಾಗಿ ಛಲವಲ್ಲ ಜನ ಕಲ್ಯಾಣಕ್ಕಾಗಿ ಛಲಬೇಕು ಎಂದು

ಬಸವಣ್ಣನವರು ಸಾರಿದ್ದಾರೆ.

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ

ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು

ಕೂಡಲಸಂಗಮದೇವಾ

ಒಳ್ಳೆಯದನ್ನು ಸಾಧಿಸಬೇಕಾದರೆ ನಮಗೆ ಕೆಲವು ನಿರ್ಬಂಧಗಳು ಬೇಕು! ಕೆಲವುದರ ಕಡೆ ಹೋಗದಂತೆ ಕೆಲವುದರ ಕಡೆ ನೋಡದಂತೆ ಮತ್ತೆ ಕೆಲವನ್ನು ಕೇಳದಂತೆ ಇರುವ ನಿರ್ಬಂಧಗಳು ಬೇಕು. ಒಳ್ಳೆಯವರ ಸಾನ್ನಿಧ್ಯದಿಂದ ಇದು ಸಾಧ್ಯವೆಂದು ಬಸವಣ್ಣನವರು ದಾರಿ ತೋರಿಸುತ್ತಾರೆ.

ಕಾಮವೇಕೊ ಲಿಂಗಪ್ರೇಮಿಯೆನಿಸುವಂಗೆ?

ಕ್ರೋಧವೇ ಶರಣವೇದ್ಯವೆನಿಸುವಂಗೆ?

ಲೋಭವೇ ಭಕ್ತಿಯ ಲಾಭ ಬಯಸುವಂಗೆ?

ಮೋಹವೇಕೊ ಪ್ರಸಾದ ವೇದ್ಯವೆನಿಸುವಂಗೆ?

ಮದ ಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೇ?

ಹದುಳಿಗರಾದಲ್ಲಿಪ್ಪ ನಮ್ಮ ಕೂಡಲಸಂಗಮದೇವ

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಮುಕ್ತರಾಗಬೇಕು. ಅವುಗಳನ್ನು ಪ್ರೀತಿಯಿಂದ, ಭಕ್ತಿಯಿಂದ, ಜನಕಲ್ಯಾಣದ ಕಾಯಕದಲ್ಲಿ ತೊಡಗಿಸಿಕೊಳ್ಳುವುದರಿಂದ ಜಯಿಸಬಹುದು. ಈ ಮೂಲಕವೇ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವೆಂದು ಬಸವಣ್ಣನವರು ತಿಳಿಸಿದ್ದಾರೆ.

ಉಂಡರೆ ಭೂತನೆಂಬರು, ಉಣದಿದ್ದರೆ ಚಾತಕನೆಂಬರು

ಭೋಗಿಸಿದರೆ ಕಾಮಿಯೆಂಬರು

ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮ ಎಂಬರು

ಊರೊಳಗಿದ್ದರೆ ಸಂಸಾರಿ ಎಂಬರು

ಅಡವಿಯೊಳಗಿದ್ದರೆ ಮೃಗಜಾತಿ ಎಂಬರು

ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚಕೋರನೆಂಬರು

ಇಂತಿ ಜನಮೆಚ್ಚಿ ನಡೆದವರ

ಎಡದ ಪಾದದ ಕಿರು ಕಿರುಗುಣಿಯಲ್ಲಿ ಮನೆ ಮಾಡು ಮನೆ ಮಾಡು

ಎಂದಾತ ನಮ್ಮ ಅಂಬಿಗರ ಚೌಡಯ್ಯ

ಒಂದು ಮಾಡಿದರೆ ಹೆಚ್ಚು, ಮತ್ತೊಂದು ಮಾಡಿದರೆ ಕಡಿಮೆ. ಹೀಗೆ ಲೋಕದ ಮೆಚ್ಚುಗೆಗಾಗಿ ತಮ್ಮ ಜೀವನವನ್ನು ವ್ಯರ್ಥಮಾಡಿಕೊಳ್ಳದೆ, ನಡೆಯಬೇಕೆಂದು ಅಂಬಿಗರ ಚೌಡಯ್ಯ ಈ ವಚನದಲ್ಲಿ ಎಚ್ಚರಿಸಿದ್ದಾರೆ.

ನುಡಿಯಲುಬಾರದು ಕೆಟ್ಟನುಡಿಗಳ

ನಡೆಯಲು ಬಾರದು ಕೆಟ್ಟನಡೆಗಳ

ನುಡಿಯದಡೇನು ನುಡಿಯದಿರ್ದಡೇನು?

ಹಿಡಿದವ್ರತ ಬಿಡದಿರಲು, ಅದೇ ಮಹಾಜ್ಞಾನದಾಚರಣೆ

ಎಂಬೆನು ಅಜಗಣ್ಣ ತಂದೆ.

ನಡೆ ನುಡಿ ಎರಡೂ ಕೆಟ್ಟದಾಗಿರದೆ ಅವು ಒಳ್ಳೆಯದಾಗಿರಬೇಕು. ನುಡಿದಂತೆ ನಡೆಯುವುದು ವ್ರತವಿದ್ದಂತೆ ಎಂಬ ಸಂದೇಶವನ್ನು ಈ ವಚನದಲ್ಲಿ ಶರಣೆ ಮುಕ್ತಾಯಕ್ಕೆ ತಿಳಿಸಿದ್ದಾರೆ. ಸಮಾಜಕ್ಕೆ ಯಾವುದೇ ರೀತಿಯಲ್ಲಿ ಕೇಡು ಬಾರದಂತೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಬೇಕೆಂಬ ಎಚ್ಚರಿಕೆಯನ್ನು ಈ ವಚನದಲ್ಲಿ ನೀಡಿದ್ದಾರೆ.

ಕುರಿ ಕೋಳಿ ಕಿರು ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು

ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು

ಅವರೆಂತು ಕೀಳು ಜಾತಿಯಾದರು, ಜಾತಿಗಳ ನೀವೇಕೆ ಕೀಳಾಗಿರೋ

ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು

ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣ ಶೋಭಿತವಾಯಿತು

ಅದೆಂತೆಂದಡೆ ಸಿದ್ಧಲಿಕೆಯಾಯಿತು ಸಗ್ಗಳೆಯಾಯಿತು

ಸಿದ್ಧಲಿಕೆಯ ತುಪ್ಪವನ್ನು ಸಗ್ಗಳೆಯ ನೀರನ್ನು ಶುದ್ಧವೆಂದು ಕುಡಿವ

ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ!

ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ

ಆಹಾರ ನಮ್ಮ ಹಕ್ಕು ನಮ್ಮ ಆಹಾರ ಪದ್ಧತಿಯ ಮೇಲೆ ಮೇಲು-ಕೀಳೆಂಬ ವರ್ಗೀಕರಣ ತಪ್ಪು ಎಂದು ಶರಣೆ ಕಾಳವ್ವ ಈ ವಚನದಲ್ಲಿ ಪ್ರತಿಪಾದಿಸಿದ್ದಾಳೆ.

ಸತ್ಯದಲ್ಲಿ ನಡೆವುದು ಶೀಲ

ಸತ್ಯದಲ್ಲಿ ನುಡಿವುದು ಶೀಲ

ಸಜ್ಜನ ಸದಾಚಾರದಲ್ಲಿ ವರ್ತಿಸಿ

ನಿತ್ಯವನರಿವುದೇ ಶೀಲ ಕಾಣಿಭೋ

ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವಿನಲ್ಲಿ!

ಈ ವಚನದಲ್ಲಿ ಶಿವಸಿದ್ಧೇಶ್ವರರು ಸತ್ಯದ ದಾರಿಯಲ್ಲಿ ನಡೆಯಬೇಕೆಂದು ಸೂಚಿಸಿದ್ದಾರೆ.

ಭೇರುಂಡನ ಪಕ್ಷಿಗೆ ದೇಹ ಒಂದೇ

ತಲೆಯೆರಡರ ನಡುವೆ ಕನ್ನವಡ ಕಟ್ಟಿ

ಒಂದು ತಲೆಯಲ್ಲಿ ಹಾಲನೆರೆದು

ಒಂದು ತಲೆಯಲ್ಲಿ ವಿಷವನೆರೆದಡೆ

ದೇಹವೊಂದೇ, ವಿಷ ಬಿಡುವುದೇ ಅಯ್ಯಾ?

ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ

ನಾ ಬೆಂದೆ ಕಾಣಾ ಕೂಡಲಸಂಗಮದೇವಾ

ಈ ವಚನದಲ್ಲಿ ಬಸವಣ್ಣನವರು ಕೇವಲ ಲಿಂಗಪೂಜೆಯೊಂದೆ ಮಾಡಿದರೆ ಸಾಲದು ಸಮಾಜಸೇವೆಯನ್ನು ಮಾಡಬೇಕೆಂಬ ಸಂದೇಶವನ್ನು ನೀಡಿದ್ದಾರೆ. ಒಂದು ಕೈಯಲ್ಲಿ ಒಳ್ಳೆಯದನ್ನು ಮಾಡಿ ಮತ್ತೊಂದು ಕೈಯಲ್ಲಿ ಕೆಡಕನ್ನು ಮಾಡಿದರೆ ಒಳ್ಳೆಯದು ಕೆಟ್ಟದಾಗಿ ಬಿಡುತ್ತೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಸದಾ ಸಮಾಜಮುಖಿ ಸೇವೆಯನ್ನು ಮಾಡಬೇಕು, ಸಮಾಜಸೇವೆಗೆ ತತ್ಪರರಾಗಿರಬೇಕು ಎಂಬುದು ವಚನಗಳ ಆಶಯ.

ಸಾರಾಂಶ

1. ವಿಶ್ವದ ಸಕಲ ಜೀವಿಗಳು ಸಂತೃಪ್ತಿಯಿಂದ ಇರಬೇಕು

2. ಎಲ್ಲರಲ್ಲಿಯೂ ಸಮಾನತೆ ಇರಬೇಕು

3. ವರ್ಣ, ಜಾತಿ, ವರ್ಗ ಮತ್ತು ಲಿಂಗ ಭೇದಗಳನ್ನು ನಿರಾಕರಿಸಿದರು

4. ಮಾನವ ಘನತೆಯನ್ನು ಎತ್ತಿ ಹಿಡಿದರು

5. ಕ್ರೌರ್ಯ ಮತ್ತು ಅಮಾನುಷ ನಡವಳಿಕೆಯನ್ನು ವಿರೋಧಿಸಿದರು

6. ಇತರರಿಗೆ ಕೇಡನ್ನು ಬಯಸಬಾರದೆಂಬ ಛಲಬೇಕೆಂದರು

7. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಛಲಬೇಕೆಂದರು

8. ಇತರರ ತಪ್ಪುಗಳನ್ನು ಹುಡುಕುವ ಮೊದಲು ನಿಮ್ಮ ತಪ್ಪುಗಳನ್ನು ತಿಳಿದು ತಿದ್ದುಕೊಳ್ಳಿಯೆಂದರು

9. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿಗಳಿಂದ ಮುಕ್ತರಾಗಿಯೆಂದು ಸಾರಿದರು

10. ಪ್ರೀತಿ, ಭಕ್ತಿ ಮತ್ತು ಜನ ಕಲ್ಯಾಣದಂತಹ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿಯೆಂದರು.

11. ವಚನಕಾರರು ಧರ್ಮ ವಿರೋಧಿಗಳಲ್ಲ, ಆದರೆ ಧರ್ಮಕ್ಕೆ ದಯೆ ಇರಬೇಕೆಂಬ ಮಾನವೀಯತೆಯನ್ನು ತುಂಬಿದರು

12. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು

13. ಆಹಾರದ ಹಕ್ಕನ್ನು ಪ್ರತಿಪಾದಿಸಿದರು

14. ನಮ್ಮ ಪ್ರತಿಯೊಂದು ಹಕ್ಕಿನ ಜೊತೆ ನಮಗೊಂದು ಕರ್ತವ್ಯ ಇದೆಯೆಂದರು

15. ಕಾನೂನಿನ ಮುಂದೆ ಎಲ್ಲರೂ ಸಮಾನರೆಂದರು

16. ಯಾವುದೇ ಕಸಬು ಅಥವಾ ವೃತ್ತಿಯನ್ನು ಗೌರವಿಸಬೇಕು

17. ನಮ್ಮ ಆತ್ಮ ಸಾಕ್ಷಿಗೆ ಸರಿಯಾಗಿ ಬದುಕಬೇಕು

18. ಸತ್ಯದ ದಾರಿಯಲ್ಲಿ ನಡೆಯಬೇಕು

ಸಂವಿಧಾನದಲ್ಲಿ ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು

ವಿಶ್ವದಲ್ಲಿ ಅನೇಕ ಯುದ್ಧಗಳು ನಡೆದಿವೆ. ಈ ಯುದ್ಧಗಳಲ್ಲಿ ಮಿಲಿಯಾಂತರ ಜನ ಸತ್ತರೂ, ನಿಖರವಾಗಿ ಎಷ್ಟು ಜನ ಸತ್ತರೆಂದು ಹೇಳಲು ಸಾಧ್ಯವಿಲ್ಲ. 20ನೇ ಶತಮಾನದಲ್ಲಿ ನಡೆದ ಮೊದಲನೆಯ ಮಹಾಯುದ್ಧವು 1914ರಿಂದ 1918ರವರೆಗೆ ನಡೆಯಿತು. ಈ ಯುದ್ಧದಲ್ಲಿ ಅಪಾರವಾದ ಪ್ರಾಣಹಾನಿ ಮತ್ತು ಆಸ್ತಿ ಹಾನಿ ಸಂಭವಿಸಿತು. ಇದರಿಂದ ಪಾಠ ಕಲಿತ ಮಾನವ ಜನಾಂಗ ಇನ್ನು ಮುಂದೆ ವಿಶ್ವದಲ್ಲಿ ಈ ರೀತಿಯ ಯುದ್ಧಗಳು ನಡೆಯದಂತೆ ತಡೆಯಲು, ವಿಶ್ವಶಾಂತಿಯನ್ನು ಸ್ಥಾಪಿಸಲು ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ “ಲೀಗ್ ಆಫ್ ನೇಷನ್” ಅನ್ನು ಸ್ಥಾಪನೆ ಮಾಡಿತು. ಕೆಲವು ವರ್ಷಗಳ ನಂತರ ಸದಸ್ಯ ರಾಷ್ಟ್ರಗಳ ಅಸಹಕಾರ, ದ್ವೇಷ, ವೈಷಮ್ಯ, ಸಂಶಯ, ಭೀತಿ, ಶಸ್ತ್ರಾಸ್ತ್ರಗಳ ಪೈಪೋಟಿ, ಫ್ಯಾಸಿಸಂನ ಹುಟ್ಟು, ಬೆಳವಣಿಗೆ, ಸರ್ವಾಧಿಕಾರಿಗಳ ಏಳಿಗೆ ಮುಂತಾದ ಮಾನವ ದೌರ್ಬಲ್ಯಗಳು ಎರಡನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.

ಎರಡನೇ ಮಹಾಯುದ್ಧವು 1939ರಿಂದ 1945ರವರೆಗೆ ನಡೆಯಿತು. ಈ ಯುದ್ಧದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಂದಲ್ಲ ಒಂದು ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದವು. ಈ ಯುದ್ಧದಲ್ಲಿ ಸುಮಾರು 2 ಕೋಟಿ ಸೈನಿಕರು, 4 ಕೋಟಿ ನಾಗರಿಕರು ಮರಣ ಹೊಂದಿದರು. ಸುಮಾರು 2.5 ಕೋಟಿ ಜನ ಗಾಯಗೊಂಡರು. ಈ ಹಿಂದೆ ಎಂದೂ ಕಾಣದಂತಹ ವಿಪತ್ತು, ವಿನಾಶ, ಭೀಕರ ನರಹತ್ಯೆ, ಆರ್ಥಿಕ ದುಂದುವೆಚ್ಚ, ಅವ್ಯವಸ್ಥೆ ಮತ್ತು ಅರಾಜಕತೆ ಜಗತ್ತನ್ನೇ ಮುಳುಗಿಸಿತು. ಈ ಯುದ್ಧದಿಂದ ಬಂದೊದಗಿದ ರೋಗ ರುಜಿನಾದಿಗಳಿಂದ ಮತ್ತು ಆಹಾರದ ಅಭಾವದಿಂದ ಅನೇಕ ಜನರು ಸಾವನ್ನಪ್ಪಿದರು. ಬಾಂಬುಗಳನ್ನು ಸಿಡಿಸಿ ನಗರಗಳನ್ನು ಧ್ವಂಸ ಮಾಡಲಾಯಿತು, ಹಳ್ಳಿಗಳಿಗೆ ಮತ್ತು ಕಾಡಿಗೆ ಬೆಂಕಿ ಹಚ್ಚಲಾಯಿತು, ಕೈಗಾರಿಕೆಗಳನ್ನು, ಅಣೆಕಟ್ಟುಗಳನ್ನು, ರಸ್ತೆಗಳನ್ನು, ಮೂಲ ಸೌಕರ್ಯಗಳನ್ನು ನಾಶಮಾಡಲಾಯಿತು. ಜನಾಂಗೀಯ ದ್ವೇಷದಿಂದ ದೊಡ್ಡ ಪ್ರಮಾಣದ ನರಹತ್ಯೆ, ಹಿಂಸೆ, ಕ್ರೌರ್ಯ, ಜಗತ್ತಿನ ಜನರು ತತ್ತರಿಸುವಂತೆ ಮಾಡಿತು. ಹೀಗೆ ಎರಡನೇ ಮಹಾಯುದ್ಧ ಮಾನವ ಇತಿಹಾಸ ಕಾಣದ ಘೋರ ಘಟನೆಯಾಗಿ ಪರಿಣಮಿಸಿತು. ಇದರಿಂದ ಉಂಟಾದ ದುಷ್ಪರಿಣಾಮಗಳು ಜಗತ್ತಿನ ಜನರನ್ನು ದಂಗುಬಡಿಸಿ, ಮತ್ತೊಂದು ಯುದ್ಧ ನಡೆದರೆ ಇಡೀ ಜಗತ್ತೇ ನಾಶ ಎಂಬ ಕಟು ಸತ್ಯದ ಅರಿವು ಮೂಡಿತು. ಇದರ ಪರಿಣಾಮವಾಗಿ ಅಸಮರ್ಥ ಮತ್ತು ಅಪ್ರಯೋಜಕವಾಗಿದ್ದ ಲೀಗ್ ಆಫ್ ನೇಷನ್ಸ್ ಸ್ಥಾನದಲ್ಲಿ 1945ರಲ್ಲಿ “ವಿಶ್ವಸಂಸ್ಥೆ” ಸ್ಥಾಪನೆಯಾಯಿತು.

ವಿಶ್ವಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ವಿಶ್ವದಾದ್ಯಂತ ವಿಸ್ತರಿಸುವುದು. ಈ ಗುರಿ ಸಾಧನೆಗಾಗಿ ವಿಶ್ವಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಿತು. ಕಾಲಕ್ರಮೇಣ ಈ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬರಲಾಗಿದೆ, ಅವುಗಳೆಂದರೆ:

1. ಜಗತ್ತಿನ ಎಲ್ಲ ಜನರು ಸಮಾನರು.

2. ಧರ್ಮ, ಜಾತಿ, ಲಿಂಗ, ವರ್ಗ ಆಧಾರದ ಮೇಲೆ ತಾರತಮ್ಯ ತೋರಬಾರದು.

3. ಜೀವಿಸುವ, ಸ್ವತಂತ್ರವಾಗಿರುವ ಮತ್ತು ವೈಯಕ್ತಿಕ ಭದ್ರತೆ ಪಡೆಯುವ ಹಕ್ಕು.

4. ಗುಲಾಮಿತನದಿಂದ ವಿಮೋಚನೆ ಪಡೆಯುವ ಹಕ್ಕು.

5. ಚಿತ್ರಹಿಂಸೆ ಮತ್ತು ಕ್ರೌರ್ಯಕ್ಕೆ ಒಳಪಡದಿರುವ ಹಕ್ಕು.

6. ಕಾನೂನಿನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕು.

7. ಕಾನೂನಿನ ದೃಷ್ಟಿಯಲ್ಲಿ ಸಮಾನತೆಯ ಹಕ್ಕು.

8. ತ್ವರಿತ ವಿಚಾರಣೆಯ ಹಕ್ಕು.

9. ಇಚ್ಛಾನುಸಾರ ಬಂಧಿಸಿಡುವ ಅಥವಾ ಗಡಿಪಾರು ಮಾಡದಿರುವ ಹಕ್ಕು.

10. ನ್ಯಾಯಯುತವಾದ ಸಾರ್ವಜನಿಕ ವಿಚಾರಣೆ ಹಕ್ಕು.

11. ಅಪರಾಧಿಯೆಂದು ರುಜುವಾತುಪಡಿಸುವವರೆಗೂ ನಿರ್ದೋಷಿಯೆಂದು ಪರಿಗಣಿಸುವ ಹಕ್ಕು.

12. ತನ್ನ ಖಾಸಗಿ ವಿಚಾರದಲ್ಲಿ ಕೌಟುಂಬಿಕ ವಿಚಾರಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಇತರರು ಅತಿಕ್ರಮಿಸದೆ ಇರುವ ಹಕ್ಕು.

13. ದೇಶದಲ್ಲಿ ಮತ್ತು ವಿದೇಶಗಳಲ್ಲಿ ಸಂಚರಿಸುವ ಹಕ್ಕು.

14. ಇತರೆ ದೇಶಗಳಲ್ಲಿ ಆಶ್ರಯ ಪಡೆಯುವ ಹಕ್ಕು.

15. ಒಂದು ರಾಷ್ಟ್ರದ ಪೌರತ್ವವನ್ನು ಪಡೆಯುವ ಅಥವಾ ಬದಲಾಯಿಸಿಕೊಳ್ಳುವ ಹಕ್ಕು

16. ಮದುವೆ ಮಾಡಿಕೊಂಡು ಸಂಸಾರ ಮಾಡುವ ಹಕ್ಕು

17. ಖಾಸಗಿ ಆಸ್ತಿಯನ್ನು ಹೊಂದುವ ಹಕ್ಕು.

18. ಧಾರ್ಮಿಕ ಹಕ್ಕು.

19. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು.

20. ಶಾಂತಿಯುತವಾಗಿ ಸಭೆ ಸೇರುವ ಮತ್ತು ಸಂಘಟಿಸುವ ಹಕ್ಕು.

21. ಸರ್ಕಾರದ ಕಾರ್ಯದಲ್ಲಿ ಮತ್ತು ಚುನಾವಣೆಗಳಲ್ಲಿ ಭಾಗವಹಿಸುವ ಹಕ್ಕು.

22. ಸಾಮಾಜಿಕ ಭದ್ರತೆಯ ಹಕ್ಕು.

23. ಐಚ್ಛಿಕ ಕೆಲಸ ಮಾಡುವ ಮತ್ತು ಕಾರ್ಮಿಕ ಮತ್ತು ಕಾರ್ಮಿಕ ಸಂಘ ಸೇರುವ ಹಕ್ಕು

24. ವಿಶ್ರಾಂತಿ ಪಡೆಯುವ ಹಕ್ಕು.

25. ಜೀವನದ ಕನಿಷ್ಠ ಅವಶ್ಯಕತೆಗಳನ್ನು ಹೊಂದುವ ಹಕ್ಕು.

26. ಶಿಕ್ಷಣದ ಹಕ್ಕು.

27. ಸಮುದಾಯದ ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸುವ ಹಕ್ಕು

28. ಸಾಮಾಜಿಕ ನೆಮ್ಮದಿಯ ಹಕ್ಕು.

29. ಬೆಳವಣಿಗೆಯ ಹಕ್ಕು.

30. ಸರ್ಕಾರ ಈ ಮೇಲೆ ಹೇಳಿರುವ ಹಕ್ಕುಗಳಲ್ಲಿ ಮಧ್ಯ ಪ್ರವೇಶಿಸದಿರುವ ಹಕ್ಕು.

ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡಿದಾಗ ಭಾರತದ ಸಂವಿಧಾನ ರಚನಾ ಸಭೆ ಕಾರ್ಯನಿರತವಾಗಿತ್ತು. ಈ ಮಾನವ ಹಕ್ಕುಗಳು ನಮ್ಮ ಸಂವಿಧಾನ ರಚನಾಕಾರರ ಮೇಲೆ ಪ್ರಭಾವವಾಗಿ ಬಹುಪಾಲು ಮಾನವ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.

1) ಸಮಾನತೆಯ ಹಕ್ಕು

i) ಎಲ್ಲಾ ವ್ಯಕ್ತಿಗಳು ಕಾನೂನಿನ ದೃಷ್ಟಿಯಲ್ಲಿ ಸರಿಸಮಾನರು ಹಾಗೂ ಎಲ್ಲರಿಗೂ ಕಾನೂನಿನಿಂದ ಸಮಾನ ರಕ್ಷಣೆ ದೊರೆಯುವುದು.

ii) ಧರ್ಮ, ಜಾತಿ, ಲಿಂಗ, ಜನ್ಮತಾಣದ ಆಧಾರದ ಮೇಲೆ ತಾರತಮ್ಯ ತೋರುವುದನ್ನು ನಿಷೇಧಿಸಿದೆ

iii) ಉದ್ಯೋಗ ಅವಕಾಶಗಳನ್ನು ಪಡೆಯಲು ಎಲ್ಲರೂ ಸಮಾನರು.

2) ಸ್ವಾತಂತ್ರ್ಯದ ಹಕ್ಕು

i) ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ii) ಶಾಂತಿಯುತವಾಗಿ, ಶಸ್ತ್ರರಹಿತವಾಗಿ ಸಭೆ ಸೇರುವ ಸ್ವಾತಂತ್ರ್ಯ

iii) ಸಂಘ, ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯ

iv) ಭಾರತದಾದ್ಯಂತ ಸ್ವತಂತ್ರವಾಗಿ ಸಂಚರಿಸುವ ಸ್ವಾತಂತ್ರ್ಯ

v) ಭಾರತದಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯ

vi) ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮಾಡುವ ಸ್ವಾತಂತ್ರ್ಯ

3) ಶೋಷಣೆಯ ವಿರುದ್ಧ ಹಕ್ಕು

i) ಮಾನವ ಕಳ್ಳ ಸಾಗಾಣಿಕೆ ಮತ್ತು ಯಾವುದೇ ಸ್ವರೂಪದ ಬಲಾತ್ಕಾರದ ದುಡಿಮೆಗಳನ್ನು ನಿಷೇಧಿಸಲಾಗಿದೆ.

ii) ಸಾರ್ವಜನಿಕ ಉದ್ದೇಶಗಳಿಗಾಗಿ ಸರ್ಕಾರ ಕಡ್ಡಾಯ ಸೇವೆಯನ್ನು ವಿಧಿಸಬಹುದು; ಆದರೆ ಅಂಥ ಸೇವೆಯನ್ನು ವಿಧಿಸುವಾಗ ಧರ್ಮ, ಜಾತಿ, ವಂಶ ಹಾಗೂ ವರ್ಗ ಆಧಾರದ ಮೇಲೆ ತಾರತಮ್ಯ ತೋರಬಾರದು.

iii) ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಅಥವಾ ಯಾವುದೇ ಅಪಾಯಕಾರಿ ಕೆಲಸದಲ್ಲಿ ತೊಡಗಿಸುವಂತಿಲ್ಲ.

4) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

i) ತಮ್ಮ ಆತ್ಮಸಾಕ್ಷಿಯಂತೆ ಯಾವುದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಸ್ವಾತಂತ್ರ್ಯ ಸ್ವಾತಂತ್ರ್ಯ

ii) ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಿರ್ವಹಿಸುವ ಸ್ವಾತಂತ್ರ್ಯ

iii) ಧರ್ಮ ಹಾಗೂ ಧಾರ್ಮಿಕ ಸಂಸ್ಥೆಗಳ ಪೋಷಣೆಗೆ ತೆರಿಗೆ ವಿನಾಯತಿಯ ಸ್ವಾತಂತ್ರ್ಯ

5) ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು

i) ಯಾವುದೇ ಜನ ವಿಭಾಗವು ತನ್ನದೇ ಆದ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಅನುಸರಿಸುವುದು ಮತ್ತು ಸಂರಕ್ಷಿಸಿಕೊಳ್ಳುವುದು.

ii) ಸರ್ಕಾರ ನಿರ್ವಹಿಸುವ ಅಥವಾ ಸರ್ಕಾರದ ನೆರವು ಪಡೆದು ನಿರ್ವಹಿಸುವ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಧರ್ಮ, ಜಾತಿ, ಭಾಷೆ, ವಂಶ, ಲಿಂಗದ ಆಧಾರದ ಮೇಲೆ ಯಾರಿಗೂ ಪ್ರವೇಶಾವಕಾಶವನ್ನು ನಿರಾಕರಿಸುವಂತಿಲ್ಲ.

6) ಸಂವಿಧಾನಾತ್ಮಕ ಪರಿಹಾರದ ಹಕ್ಕು

  1. ಮೂಲಭೂತ ಹಕ್ಕಿಗೆ ಚ್ಯುತಿಬಂದರೆ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳಿಗೆ ಹೋಗಿ ನ್ಯಾಯ ಪಡೆಯಬಹುದು.
  2. ಈ ನ್ಯಾಯಾಲಯಗಳು ಮೂಲಭೂತ ಹಕ್ಕುಗಳ ರಕ್ಷಣೆಗೆ ವಿವಿಧ ರೀತಿಯ

ರಿಟ್ ಅರ್ಜಿಗಳನ್ನು ಸ್ವೀಕರಿಸಿ ಸೂಕ್ತ ಆದೇಶಗಳನ್ನು ನೀಡಬಹುದು.

(a) ಹೆಬಿಯಸ್ ಕಾರ್ಪಸ್ ರಿಟ್: ಕಾಣೆಯಾದ ಅಥವಾ ಬಂಧಿಸಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬಂಧನದ ಕಾರಣ ತಿಳಿಸಿ, ತಿಳಿಸಿದ ಕಾರಣ ಸಮರ್ಥನೀಯವಲ್ಲದಿದ್ದರೆ ವ್ಯಕ್ತಿಯ ಬಿಡುಗಡೆಗೆ ಆದೇಶ ಮಾಡುವುದು.

(b) ಮ್ಯಾಂಡಮಸ್ ರಿಟ್: ಕಾನೂನುಬದ್ದವಾದ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸಲು ಸರ್ಕಾರದ ಯಾವುದೇ ಸಂಸ್ಥೆಯು ನಿರಾಕರಿಸಿದಾಗ ಅಂತಹ ಸಂಸ್ಥೆಗೆ ಕರ್ತವ್ಯ ನಿರ್ವಹಿಸುವಂತೆ ಆಜ್ಞೆ ಮಾಡುವುದು.

(c) ಪ್ರಾಹಿಬಿಷನ್ ರಿಟ್ (ಸೆರ್ಷಿಯೋರರಿ ರಿಟ್): ಸರ್ಕಾರ ಅಥವಾ ಅದರ ಅಧಿಕಾರಿಗಳು ಅಥವಾ ನ್ಯಾಯಮಂಡಳಿಗಳು ಹೊರಡಿಸಿರುವ ಆದೇಶಗಳು ಕಾನೂನುಬದ್ಧವಾಗಿಲ್ಲದಿದ್ದರೆ ಅವುಗಳನ್ನು ರದ್ದುಗೊಳಿಸುವುದು.

(d) ಕೋ-ವಾರಂಟೋ ರಿಟ್: ಯಾವುದೇ ಸರ್ಕಾರಿ ಸ್ಥಾನವನ್ನು ಹೊಂದಲು ನಿಗದಿಪಡಿಸಲಾದ ಅರ್ಹತೆಯನ್ನು ಹೊಂದಿಲ್ಲದೆ ನಿರ್ದಿಷ್ಟವೂ ಸರ್ಕಾರಿ ಸ್ಥಾನದಲ್ಲಿದ್ದರೆ ಅಂತಹವರನ್ನು ಆ ಸ್ಥಾನದಿಂದ ತೆಗೆದುಹಾಕುವುದು.

1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವುದರ ಮೂಲಕ, ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸೇರಿಸಲಾಯಿತು. ಅನುಚ್ಛೇದ 5ಎ ರಲ್ಲಿ ಮೂಲಭೂತ ಕರ್ತವ್ಯಗಳನ್ನು ಸ್ಪಷ್ಟಪಡಿಸಲಾಗಿದೆ.

1) ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನದ ಆದರ್ಶಗಳನ್ನು ಗೌರವಿಸುವುದು.

2) ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಅನುಸರಿಸುವುದು ಹಾಗೂ ಗೌರವಿಸುವುದು.

3) ಭಾರತದ ಸಮಗ್ರತೆ, ಐಕ್ಯತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದು.

4) ದೇಶದ ರಕ್ಷಣೆಗೆ ಹಾಗೂ ಸೇವೆಗೆ ಕರೆ ಬಂದಾಗ ಧಾವಿಸುವುದು.

5) ಧರ್ಮ, ಭಾಷೆ, ಪ್ರಾದೇಶಿಕತೆ, ಜಾತಿ ಮತ್ತು ಪಂಗಡಗಳ ಎಲ್ಲೆ ಮೀರಿ ಸಮಸ್ತ ಭಾರತೀಯರಲ್ಲಿ ಸಹೋದರ ಭಾವನೆಯನ್ನು ಬೆಳೆಸುವುದು ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸುವುದು.

6) ಬಹುತ್ವದ ಸಂಸ್ಕೃತಿಯನ್ನು, ಪರಂಪರೆಯನ್ನು ಗೌರವಿಸುವುದು ಹಾಗೂ ರಕ್ಷಿಸುವುದು.

7) ಅರಣ್ಯಗಳು, ನದಿಗಳು, ಸರೋವರ ಹಾಗೂ ವನ್ಯ ಜೀವಿಗಳು ಸೇರಿದಂತೆ, ಸಮಗ್ರ ನೈಸರ್ಗಿಕ ಪರಿಸರವನ್ನು ಕಾಪಾಡುವುದು; ಜೊತೆಗೆ ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದು.

8) ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು.

9) ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.

10) ವೈಯಕ್ತಿಕ ಹಾಗೂ ಸಾಮೂಹಿಕ ಕಾರ್ಯಗಳಲ್ಲಿ ಶ್ರೇಷ್ಠತೆಯನ್ನು ತೋರಿ ರಾಷ್ಟ್ರದ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಸಾಧನೆಯನ್ನು ತೋರುವುದು.

11) 6ರಿಂದ 14ರ ವಯೋಮಾನದ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ.

ಅನುಷ್ಠಾನ

1950 ಜನವರಿ 26ರಂದು ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು. ಇಂದಿಗೆ 72 ವರ್ಷಗಳು ಕಳೆದಿವೆ. ವಚನಗಳ ತಾತ್ವಿಕ ಬಿಂಬವಾಗಿ ಸಂವಿಧಾನ ಜಾರಿಯಾಗಿದೆ, ಯಾವ ರೀತಿಯಾಗಿ ನಾವು ನಮ್ಮ ಸಂವಿಧಾನವನ್ನು ಜಾರಿಗೊಳಿಸಿದ್ದೇವೆ ಎಂಬುದನ್ನು ನೋಡೋಣ.

ನಮ್ಮ ಸಂವಿಧಾನದಲ್ಲಿ ಮಾನವ ಹಕ್ಕುಗಳು ಯಾವ ರೀತಿ ಸೇರ್ಪಡೆಯಾಗಿವೆ ಎಂಬುದನ್ನು ಈಗಾಗಲೇ ತಿಳಿಯಪಡಿಸಿದೆ. ಮುಂದುವರೆದು, 1993ರಲ್ಲಿ ಮಾನವ ಹಕ್ಕುಗಳ ಕಾಯಿದೆಯನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ. ಅದೇ ರೀತಿ ಎಲ್ಲಾ ರಾಜ್ಯಗಳಲ್ಲಿ ರಾಜ್ಯ ಆಯೋಗಗಳನ್ನು ರಚಿಸಲಾಗಿದೆ. ಸಂವಿಧಾನದ ಅನುಚ್ಛೇದ 32ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಮೂಲಭೂತ ಹಕ್ಕುಗಳನ್ನು ರಕ್ಷಿಸಿ ಜಾರಿಗೊಳಿಸುವ ಅಧಿಕಾರವನ್ನು ಹೊಂದಿದೆ. ಅನುಚ್ಛೇದ 226ರಲ್ಲಿ ರಾಜ್ಯದ ಉಚ್ಚ ನ್ಯಾಯಾಲಯಗಳು ರಿಟ್‌ಗಳನ್ನು ಹೊರಡಿಸಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿದೆ. ನ್ಯಾಯಾಂಗ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದೆ. ಸರ್ವೋಚ್ಛ ನ್ಯಾಯಾಲಯ ನೂರಾರು ತೀರ್ಪುಗಳಲ್ಲಿ ಭಾರತ ಸಂವಿಧಾನದ ಹಲವು ಅನುಚ್ಛೇದಗಳನ್ನು ವ್ಯಾಖ್ಯಾನ ಮಾಡುತ್ತಾ ಮಾನವ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಪ್ರಮುಖ ತೀರ್ಪುಗಳ ಸಾರಾಂಶವನ್ನು ಇಲ್ಲಿ ತಿಳಿಯಪಡಿಸಿದೆ:

ಜೀವಿಸುವ ಹಕ್ಕು ಮೂಲಸೌಕರ್ಯಗಳನ್ನು ಪಡೆಯುವ ಹಕ್ಕನ್ನು ಒಳಗೊಳ್ಳುತ್ತದೆ.

ಜೀವಿಸುವ ಹಕ್ಕು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿದೆ.

ಪ್ರತಿಯೊಬ್ಬರಿಗೂ ತನ್ನ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಹಕ್ಕು.

ಮಹಿಳೆಯರನ್ನು ಮತ್ತು ಮಕ್ಕಳನ್ನು ಸಭ್ಯತೆ ಮತ್ತು ಸೂಕ್ತ ಘನತೆಯಿಂದ ನಡೆಸಿಕೊಳ್ಳುವ ಹಕ್ಕು.

ತಿಳಿದುಕೊಳ್ಳುವ ಹಕ್ಕು, ಮಾಹಿತಿ ಹಕ್ಕು, ಖಾಸಗಿ ಹಕ್ಕು, ವಿದೇಶಿ ಪ್ರವಾಸದ ಹಕ್ಕು

ತ್ವರಿತ ವಿಚಾರಣೆಯ ಹಕ್ಕು, ಉಚಿತ ಕಾನೂನು ನೆರವು ಹಕ್ಕು

ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯುವ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ಬೇಡಿ ತೊಡಿಸುವುದರ ವಿರುದ್ಧ ಹಕ್ಕು

ವೈದ್ಯಕೀಯ ನೆರವು ಹಕ್ಕು, ಆರೋಗ್ಯಕರ ಪರಿಸರದ ಹಕ್ಕು

ಮಾನವ ಹಕ್ಕುಗಳನ್ನು ಜಾರಿಗೊಳಿಸುವ ದಿಕ್ಕಿನಲ್ಲಿ ಸರ್ಕಾರ ಕೆಲವು ಕಾನೂನುಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇವುಗಳೆಲ್ಲದರ ಪರಿಣಾಮವಾಗಿ ಭಾರತ ದೇಶದಲ್ಲಿ ಮಾನವ ಹಕ್ಕುಗಳು ಸ್ವಲ್ಪ ಮಟ್ಟಿಗೆ ಜಾರಿಯಾಗಿವೆ. ಸಮಾಜದ ಬಹುಪಾಲು ಚಟುವಟಿಕೆಯನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಿದ್ದೇವೆ. ಮಹಿಳೆಯರ, ಮಕ್ಕಳ, ವೃದ್ಧರ, ವಿಕಲಚೇತನರ, ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಜೀವನಮಟ್ಟದಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಇದು ಒಂದು ರೀತಿಯಲ್ಲಿ ಶರಣರ ವಚನಗಳ ಪ್ರಭಾವವೆನ್ನಬಹುದು.

ಇಷ್ಟೆಲ್ಲ ಸಾಧನೆಯ ಮಧ್ಯೆ ಇನ್ನೂ ಸಮಸ್ಯೆಗಳು ಮುಂದುವರಿಯುತ್ತಿವೆ, ಹೊಸ ಸಮಸ್ಯೆಗಳು ಸೇರಿಕೊಂಡಿವೆ ಮತ್ತು ಸವಾಲುಗಳು ಇವೆ. ಸರ್ಕಾರ, ಪೊಲೀಸು ಮತ್ತು ಸೈನ್ಯದಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಭಯೋತ್ಪಾದಕರಿಂದ, ಉಗ್ರಗಾಮಿಗಳಿಂದ, ಮೂಲಭೂತವಾದಿಗಳಿಂದ, ಕೋಮುವಾದಿಗಳಿಂದ ಮತ್ತು ಕ್ರಿಮಿನಲ್‌ಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜಾಗತೀಕರಣ ಮಾರುಕಟ್ಟೆ ವ್ಯವಸ್ಥೆಯಲ್ಲಿ ಜನರನ್ನು ಸಂಘಟಿತವಾಗಿ ಶೋಷಣೆಮಾಡಲಾಗುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಆಯೋಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ನ್ಯಾಯಾಂಗದ ಇತ್ತೀಚಿನ ಕೆಲವು ತೀರ್ಪುಗಳು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ನಕಾರಾತ್ಮಕ ಧೋರಣೆಯನ್ನು ತಾಳಿವೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಿದಾರಿಯೆಂದರೆ ವಚನಕಾರರ ದಾರಿ. ವಚನಕಾರರು ಯಾವ ರೀತಿ ಪ್ರಶ್ನಿಸಿದರೋ, ಪ್ರತಿಭಟಿಸಿದರೋ ಮತ್ತು ತಮ್ಮ ಕರ್ತವ್ಯವನ್ನು ನಿರ್ವಹಿಸಿದರೋ ಅಂತದ್ದು ನಮ್ಮ ದಾರಿಯಾಗಬೇಕು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ