ಚುನಾಯಿತ ಪ್ರತಿನಿಧಿಗಳ ಸಂವಿಧಾನ ಸಭೆಯು 1946 ಜುಲೈ ತಿಂಗಳಲ್ಲಿ ಸ್ಥಾಪನೆಯಾಯಿತು. 2 ವರ್ಷ 11 ತಿಂಗಳು 17 ದಿವಸಗಳ ಕೃಷಿಯ ನಂತರ 1949 ನವಂಬರ್ 26ನೇ ದಿನದಂದು ಅಂತಿಮ ಕರಡು ಸಂವಿಧಾನವನ್ನು ಭಾರತ ಸರ್ಕಾರದ ಅಂಗೀಕಾರಕ್ಕೆ ಮಂಡಿಸಲಾಯಿತು. ನಮ್ಮ ಸಂವಿಧಾನ ರಚನಕಾರರು ತಮ್ಮ ಕಾಯಕದಲ್ಲಿ ತೊಡಗಿದ್ದಾಗ ಅವರ ಮೇಲೆ ಅನೇಕ ವಿಚಾರಗಳು ಪ್ರಭಾವ ಬೀರಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
1. ರಾಷ್ಟ್ರೀಯ ಚಳವಳಿಯ ಗುರಿಗಳು
2. ಮಹಾನ್ ಕ್ರಾಂತಿಗಳ ಉದಾತ್ತ ಘೋಷಣೆಗಳು
3. ಅಂದು ಜಾರಿಯಲ್ಲಿದ್ದ ಇತರೇ ದೇಶಗಳ ಸಂವಿಧಾನಗಳು
4. ಭಾರತ ದೇಶದ ಮಹಾನ್ ದಾರ್ಶನಿಕರ ಸಂದೇಶಗಳು
1. ರಾಷ್ಟ್ರೀಯ ಚಳವಳಿಯ ಗುರಿಗಳು
ನಮ್ಮ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೇ, ಅದೊಂದು ಆರ್ಥಿಕ ಮತ್ತು ಸಾಮಾಜಿಕ ಹೋರಾಟವೂ ಆಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಯು ದೇಶ ಬಿಟ್ಟು ಹೋಗಬೇಕು, ರಾಜಕೀಯ ಅಧಿಕಾರ ನಮ್ಮ ಕೈಗೆ ಬರಬೇಕೆಂಬ ರಾಜಕೀಯ ಹೋರಾಟ ಒಂದು ಕಡೆ ನಡೆದರೆ, ಮತ್ತೊಂದು ಕಡೆ ಜಮೀನ್ದಾರಿ ಪದ್ಧತಿ ಹೋಗಬೇಕು, ಉಳುವವನಿಗೆ ಭೂಮಿ ಸಿಗಬೇಕು, ದುಡಿಯುವ ಕೈಗಳಿಗೆ ಕೆಲಸ ಮತ್ತು ಕೆಲಸಕ್ಕೆ ಸಮನಾದ ಕೂಲಿ ಸಿಗಬೇಕೆಂಬ ಆರ್ಥಿಕ ಹೋರಾಟವೂ ನಡೆಯಿತು. ಜೊತೆ ಜೊತೆಯಲ್ಲಿ ಸಾಮಾಜಿಕವಾಗಿ ಅನಿಷ್ಟ ಪದ್ಧತಿಗಳಾಗಿದ್ದ ಸತಿ ಸಹಗಮನ ಪದ್ಧತಿ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ ಇತ್ಯಾದಿಗಳ ವಿರುದ್ಧ ಸಾಮಾಜಿಕ ಹೋರಾಟವೂ ನಡೆಯಿತು. ಈ ಹೋರಾಟದ ಒಂದು ಹಂತದಲ್ಲಿ ನಮಗೆ ಅನೇಕ ಪ್ರಶ್ನೆಗಳು ಎದುರಾದವು. ಆ ಪ್ರಶ್ನೆಗಳಿಗೆ ಈ ದೇಶದ ಜನ ಕಂಡುಕೊಂಡಂತಹ ಉತ್ತರಗಳು ನಮ್ಮ ರಾಷ್ಟ್ರೀಯ ಚಳುವಳಿಯ ಗುರಿಗಳಾದವು. ಆ ಪ್ರಮುಖ ಪ್ರಶ್ನೆಗಳು ಯಾವುವೆಂದರೆ:
ಪ್ರಶ್ನೆ: ಬ್ರಿಟಿಷರನ್ನು ಈ ದೇಶದಿಂದ ಹೊರದೂಡಿದ ನಂತರ ರಾಜಕೀಯ ಅಧಿಕಾರ ಯಾರ ಕೈಗೆ ಹೋಗಬೇಕು? ಮಹಾತ್ಮ ಗಾಂಧಿಯವರನ್ನು ಒಬ್ಬ ಸಾಮ್ರಾಟನನ್ನಾಗಿ, ಜವಾಹರ್‌ಲಾಲ್ ನೆಹರೂರವರನ್ನು ಒಬ್ಬ ಚಕ್ರವರ್ತಿಯನ್ನಾಗಿ ಮಾಡೋಣವೇ?
ಉತ್ತರ: ನಮಗೆ ಸಾಮ್ರಾಟರು, ಚಕ್ರವರ್ತಿಗಳು, ರಾಜ ಮಹಾರಾಜರುಗಳು ಬೇಡ. ಪಾಳೇಗಾರಿ ಪದ್ಧತಿ ರದ್ದಾಗಬೇಕು, ರಾಜಕೀಯ ಅಧಿಕಾರ ಪ್ರಜೆಗಳ ಕೈಗೆ ಬರಬೇಕು. ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡುವುದು ರಾಷ್ಟ್ರೀಯ ಚಳುವಳಿಯ ಮುಖ್ಯ ಗುರಿಯಾಯಿತು.
ಪ್ರಶ್ನೆ: ಬಹುಸಂಖ್ಯಾತ ಹಿಂದೂಗಳಿರುವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸೋಣವೇ?
ಉತ್ತರ : ವಿವಿಧ ಧರ್ಮದ, ಜಾತಿಯ, ಭಾಷೆಯ ಜನರು ಭುಜಕ್ಕೆ ಭುಜ ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಇತಿಹಾಸ ಈ ದೇಶದ್ದು. ಅನೇಕ ಶತಮಾನಗಳ ಕಾಲ ಅನೇಕ ಧರ್ಮದ, ಜಾತಿಯ, ಭಾಷೆಯ ಜನರು ಒಟ್ಟಿಗೆ ಬಾಳಿದ ಮತ್ತು ಎಲ್ಲರೂ ಕೂಡಿ ದೇಶವನ್ನು ಕಟ್ಟಿದ ಇತಿಹಾಸ ಇದೆ. ಹಾಗಾಗಿ ನಮಗೆ ಹಿಂದು ರಾಷ್ಟ್ರ ಬೇಡ, ಕ್ರೈಸ್ತ ರಾಷ್ಟ್ರ ಬೇಡ, ಇಸ್ಲಾಂ ರಾಷ್ಟ್ರ ಬೇಡ, ಸಿಖ್ ರಾಷ್ಟ್ರ ಬೇಡ, ಬದಲಾಗಿ ನಮಗೆ ಜಾತ್ಯತೀತ ಹಾಗೂ ಧರ್ಮ ನಿರಪೇಕ್ಷತೆಯ ರಾಷ್ಟ್ರ ಬೇಕು. ಅದರಂತೆ ಧರ್ಮ ನಿರಪೇಕ್ಷತೆ ಮತ್ತು ಜಾತ್ಯತೀತ ರಾಷ್ಟ್ರದ ಧ್ಯೇಯ ನಮ್ಮ ಸ್ವಾತಂತ್ರ್ಯ ಚಳುವಳಿಯ ಮಹತ್ತರ ಗುರಿಯಾಯಿತು.
ಪ್ರಶ್ನೆ: ಬಹುಮತ ಅಥವಾ ಪ್ರತಿಭೆಯ ಆಧಾರದ ಮೇಲೆ ದೇಶವನ್ನು ಕಟ್ಟೋಣವೇ?
ಉತ್ತರ: ಭಾರತದಲ್ಲಿ ಅನೇಕ ಜಾತಿಗಳಿವೆ. ಇಲ್ಲಿ ಮೇಲ್ದಾತಿಗಳು, ಮೇಲ್ವರ್ಗಗಳು, ಕೆಳ ಜಾತಿಗಳು, ಕೆಳ ವರ್ಗಗಳು, ಜಾತಿ ಜಾತಿಯ ನಡುವೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳು ಇವೆ. ಈ ಅಸಮಾನತೆಯನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣ ಮಾಡುವುದೇ ನಮ್ಮ ಸ್ವಾತಂತ್ರ್ಯ ಚಳುವಳಿಯ ಉದ್ದೇಶ. ಇದು ಸಾಧ್ಯವಾಗಬೇಕಾದರೆ ಕೇವಲ ಸಾಮಾಜಿಕ ನ್ಯಾಯದಿಂದಲೇ ಸಾಧ್ಯ.
ಪ್ರಶ್ನೆ: ದೇಶದ ರಾಜಧಾನಿಯಾದ ದೆಹಲಿಯಲ್ಲಿ ಒಂದು ಬಲಾಢ್ಯವಾದ ಕೇಂದ್ರ ಸರ್ಕಾರ ರಚಿಸಿ, ಇಡೀ ದೇಶದ ಆಡಳಿತ ನಡೆಸೋಣವೇ?
ಉತ್ತರ: ಈ ದೇಶದ ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆ ಇದೆ. ಭಿನ್ನವಾದ ಸಂಸ್ಕೃತಿ, ಉಪ ಸಂಸ್ಕೃತಿ, ಆಚರಣೆಗಳು ಇವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಮಸ್ಯೆಗಳು, ಸವಾಲುಗಳು ಮತ್ತು ಅಗತ್ಯತೆಗಳು ಇವೆ. ಇಂತಹ ವೈವಿಧ್ಯಮಯವಾದ ದೇಶವನ್ನು ದೆಹಲಿಯಲ್ಲಿ ಒಂದು ಕೇಂದ್ರ ಸರ್ಕಾರ ಮಾತ್ರ ರಚಿಸಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಹಾಗೂ ಸೂಕ್ತವೂ ಅಲ್ಲ. ಆದರೆ ಒಂದು ಭಾಷೆ ಮಾತನಾಡುವ ಪ್ರದೇಶವನ್ನು ಒಂದು ಸ್ವತಂತ್ರ ದೇಶವೆಂದು ಘೋಷಿಸಿದರೆ ಭಾರತದ ರಾಷ್ಟ್ರ ನಿರ್ಮಾಣ ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲ್ಲಿ ನಮಗೆ ಬಲಿಷ್ಠವಾದ ಕೇಂದ್ರ ಸರ್ಕಾರವೂ ಬೇಕು. ಭಾಷಾವಾರು ರಾಜ್ಯಗಳೂ ಬೇಕು. ಹೀಗೆ ಒಂದು ಸಂಯುಕ್ತ ವ್ಯವಸ್ಥೆ ನಮ್ಮ ರಾಷ್ಟ್ರೀಯ ಚಳುವಳಿಯ ಗುರಿಯಾಯಿತು.
ಪ್ರಶ್ನೆ: ಕೇಂದ್ರ ಸರ್ಕಾರದಲ್ಲಿ ಎಲ್ಲಾ ಅಧಿಕಾರ ಕೇಂದ್ರೀಕರಿಸಿ ಆಡಳಿತ ನಡೆಸೋಣವೇ?
ಉತ್ತರ: ಪ್ರಜಾಪ್ರಭುತ್ವದಲ್ಲಿ ಜನರು ಭಾಗವಹಿಸುವುದು ಬಹಳ ಮುಖ್ಯ. ಹಳ್ಳಿಯಿಂದ ದಿಲ್ಲಿವರೆಗೆ ಹಂತ ಹಂತವಾಗಿ ಜನರು ಭಾಗವಹಿಸಬೇಕು. ಆದ್ದರಿಂದ ಅಧಿಕಾರ ವಿಕೇಂದ್ರೀಕರಣ ನಮ್ಮ ರಾಷ್ಟ್ರೀಯ ಚಳುವಳಿಯ ಗುರಿಯಾಯಿತು. ರಾಷ್ಟ್ರೀಯ ಚಳುವಳಿಯ ಗುರಿಗಳಾದ ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಫೆಡರಲ್ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ ಇತ್ಯಾದಿಗಳು ನಮ್ಮ ಸಂವಿಧಾನದಲ್ಲಿ ಪ್ರಮುಖ ಸ್ಥಾನ ಪಡೆದವು.
2. ಮಹಾನ್ ಕ್ರಾಂತಿಗಳ ಉದಾತ್ತ ಘೋಷಣೆಗಳು
ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. ಪ್ರತಿಯೊಂದು ಕ್ರಾಂತಿಯು ಒಂದಲ್ಲ ಒಂದು ರೀತಿಯ ಬದಲಾವಣೆಗಳನ್ನು ತಂದಿವೆ. ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯ ಮುನ್ನ ವಿಶ್ವದ ಹಲವು ದೇಶಗಳಲ್ಲಿ ವಿಮೋಚನಾ ಚಳುವಳಿಗಳು ನಡೆದಿವೆ. ಕೆಲವು ದೇಶಗಳ ಮಹಾನ್ ಚಳುವಳಿಗಳು ಮಹಾನ್ ಘೋಷಣೆಗಳನ್ನು ನೀಡಿವೆ. 1776ರ ಅಮೇರಿಕಾ ದೇಶದ ಕ್ರಾಂತಿಯ ಮಹಾನ್ ಘೋಷಣೆ “ಸೃಷ್ಟಿಯಲ್ಲಿ ಎಲ್ಲ ಮನುಷ್ಯರು ಸಮಾನರು.” 1789ರ ಫ್ರೆಂಚ್ ಮಹಾಕ್ರಾಂತಿಯ ಮಹಾನ್ ಘೋಷಣೆ “ಸ್ವಾತಂತ್ರ್ಯ, ಸಮಾನತೆ, ಮತ್ತು ಸಹೋದರತ್ವ”, 1917ರ ರಷ್ಯಾ ಕ್ರಾಂತಿಯ ಮಹಾನ್ ಘೋಷಣೆ “ಅವರವರ ಸಾಮರ್ಥ್ಯಕ್ಕನುಗುಣವಾಗಿ ದುಡಿಯಬೇಕು, ಅಗತ್ಯಕ್ಕೆ ಅನುಗುಣವಾಗಿ ಪಡೆಯಬೇಕು” ಎಂಬ ಮಹೋನ್ನತ ಘೋಷಣೆಗಳು ನಮ್ಮ ಸಂವಿಧಾನದ ರಚನಕಾರರ ಮೇಲೆ ಪ್ರಭಾವ ಬೀರಿದವು. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಈ ಮಹಾನ್ ಘೋಷಣೆಗಳು ಸೇರ್ಪಡೆಯಾಗಿರುವುದನ್ನು ಕಾಣಬಹುದು.
3. ಇತರೆ ದೇಶಗಳ ಸಂವಿಧಾನಗಳು
ನಮ್ಮ ಸಂವಿಧಾನ ರಚನೆಯಾಗುವುದಕ್ಕೆ ಮುಂಚೆ ವಿಶ್ವದ ಅನೇಕ ದೇಶಗಳು ಸಂವಿಧಾನಗಳನ್ನು ಹೊಂದಿದ್ದವು ಮತ್ತು ಅನುಷ್ಠಾನದಲ್ಲಿದ್ದವು. ನಮ್ಮ ಸಂವಿಧಾನ ರಚನಕಾರರು, ಅದರಲ್ಲಿ ವಿಶೇಷವಾಗಿ ಡಾ.ಅಂಬೇಡ್ಕರ್‌ರವರು ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಒಳ್ಳೆಯ ಅಂಶಗಳನ್ನು ಆಯ್ಕೆ ಮಾಡಿ ಅವುಗಳು ನಮ್ಮ ದೇಶದ ಪರಿಸ್ಥಿತಿಗೆ ಸೂಕ್ತವೇ ಅಥವಾ ಇಲ್ಲವೇ ಎಂದು ಯೋಚಿಸಿ ಸೂಕ್ತವಾದವುಗಳನ್ನು ನಮ್ಮ ಸಂವಿಧಾನದಲ್ಲಿ ಸೇರ್ಪಡೆ ಮಾಡಿದರು. ಈ ರೀತಿ ಅಮೇರಿಕಾ, ಫ್ರಾನ್ಸ್, ಜರ್ಮನಿ, ಕೆನಡಾ, ಐರ್ಲೆಂಡ್, ಆಸ್ಟ್ರೇಲಿಯಾ, ಸೋವಿಯತ್ ರಷ್ಯಾ ಮುಂತಾದ ದೇಶಗಳ ಸಂವಿಧಾನಗಳು ಸಹ ನಮ್ಮ ಮೇಲೆ ಪ್ರಭಾವ ಬೀರಿವೆ.
4. ನಮ್ಮ ದೇಶದ ಮಹಾನ್ ದಾರ್ಶನಿಕರ ಸಂದೇಶಗಳು
ಬುದ್ಧ, ಬಸವ, ಮಹಾತ್ಮ ಗಾಂಧಿ ಮತ್ತು ಡಾ.ಅಂಬೇಡ್ಕರ್‌ರಂತಹ ದಾರ್ಶನಿಕರ ಸಂದೇಶಗಳು ಸಹ ನಮ್ಮ ಸಂವಿಧಾನ ರಚನಕಾರರ ಮೇಲೆ ಪ್ರಭಾವ ಬೀರಿವೆ. ಬುದ್ಧನ ಧಮ್ಮ ಮಾರ್ಗ, ಬಸವಣ್ಣನವರ ಸಮಾನತೆಯ ಮಾರ್ಗ, ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಡಾ.ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯದ ಮಾರ್ಗದ ತಳಹದಿ/ಅಡಿಪಾಯದ ಮೇಲೆ ನಮ್ಮ ಸಂವಿಧಾನ ರಚನೆಯಾಗಿದೆ.
ಬುದ್ಧನು 2600 ವರ್ಷಗಳ ಹಿಂದೆ ಸಮಾನತೆ, ಶಾಂತಿ, ಪ್ರೀತಿ, ದಯೆ, ಕರುಣೆ, ಮಾನವೀಯತೆ ಎಂಬ ವಿಚಾರಗಳನ್ನು ಈ ಜಗತ್ತಿಗೆ ಸಾರಿದ. ಬುದ್ಧನ ಪ್ರಮುಖ ವಿಚಾರಗಳು ಮತ್ತು ಮೌಲ್ಯಗಳೆಂದರೆ :
1. ಮುಕ್ತ ಸಮಾಜದಲ್ಲಿ ಧರ್ಮದ ಅವಶ್ಯಕತೆ ಇದೆ.
2. ಆದರೆ ಎಲ್ಲಾ ಧರ್ಮಗಳು ಅನುಸರಿಸಲು ಅರ್ಹವಲ್ಲ.
3. ಧರ್ಮವೆನ್ನುವುದು ಜೀವನದ ಸತ್ಯ ಸಂಗತಿಗಳಿಗೆ ಸಂಬಂಧಿಸಿರಬೇಕು. ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವ ಅಥವಾ ಆತ್ಮ, ಸ್ವರ್ಗಗಳ ಬಗೆಗೆ ಅಲ್ಲ. ದೇವರನ್ನು ಧರ್ಮದ ಕೇಂದ್ರ ನೆಲೆ ಮಾಡುವುದು ಸರಿಯಲ್ಲ.
4. ಪ್ರಾಣಿ ಬಲಿಯನ್ನು ಧರ್ಮದ ಕೇಂದ್ರವನ್ನಾಗಿ ನೋಡುವುದು ತಪ್ಪು.
5. ನಿಜವಾದ ಧರ್ಮ, ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಿಲ್ಲ.
6. ಮಾನವೀಯತೆ ಮತ್ತು ನೈತಿಕತೆಯೇ ಧರ್ಮದ ಕೇಂದ್ರವಾಗಿರಬೇಕು. ಇಲ್ಲದಿದ್ದರೆ, ಧರ್ಮವು ಕ್ರೂರ ಮೂಢನಂಬಿಕೆಯಾಗಿಬಿಡುತ್ತದೆ.
7. ನೈತಿಕತೆ ಎನ್ನುವುದು ಜೀವನದ ಆದರ್ಶವಾಗಿದ್ದರೆ ಮಾತ್ರ ಸಾಲದು. ಅದು ಜೀವನದ ನಿಯಮ, ಅಂತೆಯೇ ಅದು ಕಾನೂನು ಕೂಡ ಆಗಬೇಕು.
8. ಈ ಜಗತ್ತಿನಲ್ಲಿ ದುಃಖವೆನ್ನುವುದು ವಿವಿಧ ಆಸಕ್ತಿಗಳ ಘರ್ಷಣೆಯ ಕಾರಣದಿಂದಾಗಿ ಉಂಟಾಗಿದೆ, ಅದನ್ನು ಪರಿಹರಿಸಲು ಇರುವ ದಾರಿ ಎಂದರೆ ಅದು ಅಷ್ಟಾಂಗ ಮಾರ್ಗ ಮಾತ್ರ. ಅಷ್ಟಾಂಗ ಮಾರ್ಗವೆಂದರೆ:
ಸಮ್ಯಕ್ ದೃಷ್ಟಿ ಅಂದರೆ ಶುದ್ಧವಾದ ದೃಷ್ಟಿಕೋನ :
ಸಮ್ಯಕ್ ಸಂಕಲ್ಪ ಅಂದರೆ ಶುದ್ಧವಾದ ಆಶೋತ್ತರ :
ಸಮ್ಯಕ್ ವಾಕ್ ಅಂದರೆ ಶುದ್ಧವಾದ ಮಾತು :
ಸಮ್ಯಕ್ ಕರ್ಮ ಎಂದರೆ ಶುದ್ಧವಾದ ವರ್ತನೆ :
ಸಮ್ಯಕ್ ಜೀವನ ಎಂದರೆ ಶುದ್ಧವಾದ ಜೀವನ :
ಸಮ್ಯಕ್ ವ್ಯಾಯಾಮ ಅಂದರೆ ಶುದ್ಧವಾದ ಪ್ರಯತ್ನ :
ಸಮ್ಯಕ್ ಸ್ಮೃತಿ ಅಂದರೆ ಶುದ್ಧವಾದ ಆಲೋಚನೆ :
ಸಮ್ಯಕ್ ಸಮಾಧಿ ಅಂದರೆ ಶುದ್ಧವಾದ ಉದ್ದೇಶ.
9. ಆಸ್ತಿಯ ಖಾಸಗಿ ಒಡೆತನವು ಒಂದು ವರ್ಗಕ್ಕೆ ಶಕ್ತಿಯನ್ನು ಮತ್ತೊಂದು ವರ್ಗಕ್ಕೆ ದುಖವನ್ನು ತರುತ್ತದೆ.
10. ಸಮಾಜದ ಒಳಿತಿಗಾಗಿ ಈ ದುಃಖದ ಮೂಲ ಕಾರಣವಾದ ಆಸ್ತಿಯನ್ನೇ ಇಲ್ಲವಾಗಿಸಬೇಕು.
11. ಎಲ್ಲಾ ಮಾನವರು ಸಮಾನರು.
12. ಹುಟ್ಟಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಗುಣದಿಂದ ದೊಡ್ಡವನಾಗುತ್ತಾನೆ.
13. ಒಳ್ಳೆ ವಂಶದ ಹುಟ್ಟು ಮುಖ್ಯವಲ್ಲ. ಉನ್ನತಾದರ್ಶಗಳು ಮುಖ್ಯ.
14. ಎಲ್ಲರ ಬಗೆಗೆ ಮೈತ್ರಿಯೇ ಮುಖ್ಯ. ಶತ್ರುವಿಗೂ ಕೂಡ ಅದು ಸಲ್ಲಬೇಕು.
15. ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ
16. ಚಾರಿತ್ರ್ಯವಿಲ್ಲದ ಜ್ಞಾನ ಅಪಾಯಕಾರಿ.
17. ಯಾವುದೂ ಶಾಶ್ವತವಲ್ಲ. ಪ್ರತಿಯೊಂದು ಕೂಡಾ ವಿಮರ್ಶೆಗೆ, ವಿಶ್ಲೇಷಣೆಗೆ ಒಳಗಾಗಬೇಕು
18. ಯಾವುದೂ ಅಂತಿಮವಲ್ಲ.
19, ಎಲ್ಲವೂ ಕಾರ್ಯ-ಕಾರಣ ಸಂಬಂಧಕ್ಕೆ ಬದ್ಧ.
20. ಪ್ರತಿಯೊಂದೂ ಪರಿವರ್ತನಾಶೀಲವೆ.
21. ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಯುದ್ಧ ತಪ್ಪು.
22. ಯುದ್ಧದಲ್ಲಿ ಗೆದ್ದವನಿಗೆ ಸೋತವರ ಬಗೆಗೂ ಜವಾಬ್ದಾರಿ ಇರುತ್ತದೆ.
ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗ
ಹಿಂಸೆಯನ್ನು ಅಹಿಂಸೆಯ ಮೂಲಕ, ದ್ವೇಷವನ್ನು ಪ್ರೇಮದ ಮೂಲಕ, ಅಸತ್ಯವನ್ನು ಸತ್ಯದ ಮೂಲಕ, ವೈರತ್ವವನ್ನು ಸ್ನೇಹದ ಮೂಲಕ, ತಮಸ್ಸನ್ನು ಸಾತ್ವಿಕತೆಯ ಮೂಲಕ ಎದುರಿಸಲು ಸಾಧ್ಯ ಎಂಬುದನ್ನು ವಿಶ್ವಕ್ಕೆ ದಾರಿ ತೋರಿಸಿದವರು ಯುಗ ಪುರುಷ ಮಹಾತ್ಮ ಗಾಂಧೀಜಿಯವರು.
ನಮ್ಮ ಪ್ರಾಚೀನ ಪೂರ್ವಿಕರು ನರಭಕ್ಷಕರಾಗಿದ್ದರು. ನರಭಕ್ಷಣೆ ಸಾಕು ಎನಿಸುವ ಕಾಲ ಬಂತು, ಆಗ ಅವರು ಬೇಟೆಯನ್ನು ಕಾಯಕವಾಗಿಸಿಕೊಂಡರು, ಆನಂತರ ಅಲೆಮಾರಿ ಬೇಟೆಗಾರನ ಬದುಕಿನ ಬಗ್ಗೆ ಮನುಷ್ಯನಿಗೆ ಅನಿಶ್ಚಿತತೆ ಹುಟ್ಟಿತು. ಆದ್ದರಿಂದ ಬೇಸಾಯವನ್ನು ರೂಢಿಸಿಕೊಂಡು ಆಹಾರಕ್ಕಾಗಿ ಭೂಮಿತಾಯಿಯನ್ನೇ ಮುಖ್ಯವಾಗಿ ಅವಲಂಬಿಸಿದ. ಹೀಗೆ, ಅಲೆಮಾರಿಯಾಗಿದ್ದವನು ನಾಗರಿಕನಾಗಿ ಸ್ಥಿರ ಜೀವನಕ್ಕೆ ನೆಲೆನಿಂತ, ಹಳ್ಳಿ-ನಗರಗಳನ್ನು ಕಟ್ಟಿದ. ಕುಟುಂಬದ ಸದಸ್ಯನಾಗಿದ್ದವನು ಸಮುದಾಯದ ಸದಸ್ಯನಾದ, ರಾಷ್ಟ್ರ ಸದಸ್ಯನಾದ. ಇವೆಲ್ಲವೂ ಅಹಿಂಸೆಯ ಮುನ್ನಡೆ ಹಾಗೂ ಹಿಂಸೆಯ ಹಿನ್ನಡೆಯ ಚಿಹ್ನೆಗಳು. ಹಾಗಲ್ಲದೇ ಬೇರೆಯಾಗಿದ್ದರೆ ಅನೇಕ ಪ್ರಾಣಿ ಸಂಕುಲಗಳು (ಉದಾ: ಪೆಡಂಭೂತ) ಮಾಯವಾಗಿವೆಯಲ್ಲ, ಹಾಗೆಯೇ ಮಾನವ ಜಾತಿಯೂ ಈ ವೇಳೆಗೆ ಕಾಣೆಯಾಗಿ ಹೋಗಿರುತ್ತಿತ್ತು. ಮಾನವ ಇತಿಹಾಸದ ಈ ಬೆಳವಣಿಗೆಯಲ್ಲಿ ಅಹಿಂಸೆಯ ಮಹತ್ವವನ್ನು ಕಾಣಬಹುದು.
ಗಾಂಧೀಜಿಯವರು ಅಹಿಂಸೆಯ ಸೂತ್ರಗಳನ್ನು ಈ ರೀತಿ ತಿಳಿಸಿದ್ದಾರೆ :
1. ಅಹಿಂಸೆ ಮನು ಕುಲದ ನಿಯಮ. ಅದು ಪಶುಬಲಕ್ಕಿಂತ ಅನೇಕ ಪಟ್ಟು ಶ್ರೇಷ್ಠ.
2. ಅಂತಿಮವಾಗಿ ಅಹಿಂಸೆ ಎಂದರೆ ಪ್ರೇಮ, ವಿಶ್ವ ಪ್ರೇಮದಲ್ಲಿ ವಿಶ್ವಾಸವಿಲ್ಲದವರಿಗೆ ಅಹಿಂಸೆ ದಕ್ಕುವುದಿಲ್ಲ.
3. ಅಹಿಂಸೆ ಒಬ್ಬ ವ್ಯಕ್ತಿಯ ಆತ್ಮಗೌರವಕ್ಕೆ ಪೂರ್ತಿ ರಕ್ಷಣೆ ಒದಗಿಸುತ್ತದೆ.
4. ಅಹಿಂಸೆಯನ್ನು ಆಚರಿಸುವ ವ್ಯಕ್ತಿ, ತನ್ನದೆಂದಿರುವ ಎಲ್ಲವನ್ನು ತ್ಯಾಗ ಮಾಡಲು ಸಿದ್ಧನಾಗಿರಬೇಕು. ಆದ್ದರಿಂದ ಇದು ಸಾಮ್ರಾಜ್ಯವಾದಕ್ಕೆ ಹೊಂದಿಕೆಯಾಗುವುದಿಲ್ಲ.
5. ಅಹಿಂಸೆ- ಜೀವನದ ನಿಯಮ. ಆದರೆ ಮಾನವಕುಲದ ಮೇಲೆ ಪ್ರೀತಿ ಇರಬೇಕು.
ಮಕ್ಕಳು, ಹೆಂಗಸರು, ವೃದ್ಧರು ಯಾರೂ ಅಹಿಂಸೆಯನ್ನು ಬಳಸಬಹುದು.
6. ವ್ಯಕ್ತಿಗೆ ಅಹಿಂಸೆ ಒಳ್ಳೆಯದು. ಆದರೆ ಜನ ಕೋಟಿಗಲ್ಲ ಎಂದು ತಿಳಿಯುವುದು ಅತೀ ದೊಡ್ಡ ತಪ್ಪು.
ಅಹಿಂಸೆ, ಪ್ರೀತಿ, ಸತ್ಯ, ತ್ಯಾಗ ಮತ್ತು ಸತ್ಯಾಗ್ರಹಗಳು ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದನ್ನು ಗಾಂಧೀಜಿಯವರು ತಮ್ಮ ಜೀವನದ ಮುಖಾಂತರ ತೋರಿಸಿಕೊಟ್ಟರು. ಹಿಂಸೆ ಎಂದರೆ ಪ್ರಾಣಿಗಳನ್ನು ವಧಿಸುವುದು, ಮತ್ತು ಮಾನವನ ದೈಹಿಕ ಹಿಂಸೆ ಮಾತ್ರ ಎನ್ನುವುದು ಅಸಮಂಜಸ ವ್ಯಾಖ್ಯಾನ. ಪ್ರಾಣಿ ಹಿಂಸೆ ಮತ್ತು ಮಾನವನ ದೇಹಕ್ಕಾಗುವ ಹಿಂಸೆ ಹಿಂಸೆ ಎಂಬ ದೈತ್ಯನ ಒಂದು ಭಾಗ ಮಾತ್ರ. ದುರಾಸೆ, ಕಳ್ಳತನ, ಅಸತ್ಯ, ಧೂರ್ತರಾಜಕಾರಣ, ಮಾನಸಿಕ ಘಾಸಿಯೂ ಸಹ ಹಿಂಸೆ ಒಳಗೊಂಡಿದೆ.
ಗಾಂಧೀಜಿಯವರ ಅಭಿಪ್ರಾಯದಲ್ಲಿ ಹಿಂಸೆ ಎಂದರೆ :
“ತತ್ವವಿಲ್ಲದ ರಾಜಕೀಯ
ನೀತಿ ಇಲ್ಲದ ವ್ಯಾಪಾರ
ಶ್ರಮವಿಲ್ಲದ ಸಂಪತ್ತು
ಆತ್ಮಸಾಕ್ಷಿ ಇಲ್ಲದ ಭೋಗ
ಶೀಲವಿಲ್ಲದ ಜ್ಞಾನ
ಮಾನವೀಯತೆ ಮರೆತ ವಿಜ್ಞಾನ
ತ್ಯಾಗವಿಲ್ಲದ ಪೂಜೆ”
ಯೂರೋಪ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಇತಿಹಾಸವನ್ನು ನೋಡಿದಾಗ ಅಲ್ಲಿ ನಡೆದಂತಹ ಅನೇಕ ಕ್ರಾಂತಿಗಳು ರಕ್ತದ ಹೊಳೆಯನ್ನೇ ಹರಿಸಿದವು. ರಾಜಮಹಾರಾಜರ ತಲೆಯನ್ನು ಕಡಿದು ಪ್ರಜಾಪ್ರಭುತ್ವಗಳನ್ನು ಸ್ಥಾಪಿಸಲಾಯಿತು. ಆದರೆ ಭಾರತದ ಸ್ವಾತಂತ್ರ್ಯ ಚಳುವಳಿ, ಸಂವಿಧಾನದ ರಚನೆ ಮತ್ತು ಅದರ ಅನುಷ್ಠಾನ ಶಾಂತಿಯುತವಾಗಿ ನಡೆದುಕೊಂಡು ಬರಲು ಕಾರಣವೆಂದರೆ ಗಾಂಧೀಜಿಯವರ ಅಹಿಂಸಾ ಮಾರ್ಗ.
ಡಾ.ಅಂಬೇಡ್ಕರವರ ಸಾಮಾಜಿಕ ನ್ಯಾಯದ ಮಾರ್ಗ
ಡಾ. ಅಂಬೇಡ್ಕರ್‌ರವರು ನ್ಯಾಯವಾದಿಯಾಗಿ, ನ್ಯಾಯಶಾಸ್ತ್ರ ತಜ್ಞರಾಗಿ, ಸಂವಿಧಾನ ರಚನಕಾರರಾಗಿ, ಕಾರ್ಮಿಕರ ನಾಯಕನಾಗಿ, ಸಮಾಜಶಾಸ್ತ್ರ ತಜ್ಞರಾಗಿ, ಆಡಳಿತಗಾರರಾಗಿ ಮತ್ತು ಮಹಾನ್ ಮಾನವತಾವಾದಿಯಾಗಿ ಶ್ರಮಿಸಿದ ಜಾಗತಿಕ ಧುರೀಣ.
ಜಾತಿ ಅಸಮಾನತೆಯ ವಿರುದ್ಧ ಬುದ್ಧ, ಬಸವ, ಕನಕದಾಸ, ತುಕಾರಾಮ, ವೇಮನ, ಖಾಕಿಪೀರರು, ಕೈವಾರದ ನಾರೇಯಣ ತಾತ, ಶ್ರೀ ನಾರಾಯಣಗುರು, ಪೆರಿಯಾರ್, ಶಿಶುನಾಳ ಷರೀಫ ಇನ್ನೂ ಅನೇಕ ಮಹಾನ್ ಸಂತರು ತಮ್ಮ ಧ್ವನಿಯನ್ನು ಎತ್ತಿದರು ಮತ್ತು ಸಾಮಾಜಿಕ ನ್ಯಾಯ ಎಂಬ ಮೌಲ್ಯವನ್ನು ಬಿತ್ತಿದರು. ಆದರೆ 19ನೇ ಶತಮಾನದ ಕೊನೆಯವರೆಗೆ ಸಾಮಾಜಿಕ ನ್ಯಾಯ ಸಮಾಜದಲ್ಲಿ ಒಂದು ನೈತಿಕ ನೀತಿಯಾಗಿ ಉಳಿಯಿತೇ ಹೊರತು ಕಡ್ಡಾಯವಾಗಿ ಜಾರಿಗೊಳಿಸಬಹುದಾದ ರಾಜನೀತಿಯಾಗಲಿಲ್ಲ. ಮೊದಲನೇ ಬಾರಿಗೆ ಡಾ.ಅಂಬೇಡ್ಕರ್‌ರವರು “ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಮಾನವ ಹಕ್ಕು” ಎಂದು ಪ್ರತಿಪಾದಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರ ಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಕೇವಲ ಸಮಾಜದ ನೈತಿಕ ನೀತಿಯಾಗಿ ಉಳಿಯದೇ ಜಾರಿಗೊಳಿಸಬಹುದಾದ ರಾಜ ನೀತಿಯಾಗಿ ಸ್ಥಾನಗಳಿಸುವಂತಾಯಿತು. ಮುಂದೆ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯ ಪ್ರಮುಖ ಸ್ಥಾನ ಪಡೆದುಕೊಂಡಿತು. ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು, ಎಲ್ಲರಿಗೆ ಸಮಾನ ಕಾನೂನಿನ ರಕ್ಷಣೆ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು, ಯಾವುದೇ ವರ್ಣ, ಧರ್ಮ, ಜಾತಿ, ಲಿಂಗ ಹಿನ್ನೆಲೆಯಲ್ಲಿ ಭೇದಭಾವ ಮಾಡಕೂಡದು. ಸಮಾನತೆಯೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಮಾನವಾದ ಅವಕಾಶಗಳನ್ನು ಸರ್ಕಾರ ನೀಡಬೇಕು ಎಂದು ಹೇಳಲಾಗಿದೆ.
ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ, ಶೂದ್ರರು, ಮಹಿಳೆಯರು ಮತ್ತು ಅಸ್ಪಶ್ಯರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮೇಲಕ್ಕೆತ್ತಲು ಶಾಸನಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವುದು. ಇದರ ಪರಿಣಾಮವಾಗಿ ನಮ್ಮ ಸಂವಿಧಾನದ ಅನೇಕ ಅನುಚ್ಛೇದಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾಣಬಹುದು.
ಬಸವಣ್ಣನವರ ಸಮಾನತೆಯ ಸಂದೇಶ
12ನೇ ಶತಮಾನ ರಾಜ-ಮಹಾರಾಜರ ಆಳ್ವಿಕೆಯ ಕಾಲವಾಗಿತ್ತು. ರಾಜರು ಶ್ರಮ ಜೀವಿಗಳ ಸಂಪತ್ತನ್ನು ದೋಚುತ್ತಿದ್ದರು. ರಾಜ್ಯದ ಭಂಡಾರವನ್ನು ರಾಜರ ಭಂಡಾರವೆಂದು ತಮ್ಮ ಭೋಗ ಜೀವನಕ್ಕೆ ಬಳಕೆ ಮಾಡುತ್ತಿದ್ದರು. ನಿರಂತರವಾಗಿ ಯುದ್ಧದಲ್ಲಿ ತೊಡಗಿ ಜನಸಾಮಾನ್ಯರ ಜೀವನವನ್ನು ಬರ್ಭರವಾಗಿಸಿದ್ದರು. ಜಾತಿಯೆಂಬ ಸಾಮಾಜಿಕ ವ್ಯವಸ್ಥೆಯನ್ನು ಜನರ ಮಧ್ಯೆ ಗೋಡೆಯಾಗಿ ನಿರ್ಮಾಣ ಮಾಡಿ ಎಲ್ಲಾ ರೀತಿಯ ಅಸಮಾನತೆಯನ್ನು ಸಮಾಜದ ಮೇಲೆ ಹೇರಿ ಕೆಳಜಾತಿಗಳನ್ನು ಆರ್ಥಿಕವಾಗಿ ಶೋಷಣೆ ಮಾಡಿದರು ಮತ್ತು ಸಾಮಾಜಿಕವಾಗಿ ಅವಮಾನಿಸಿದರು. ಇದೇ ರೀತಿ ಪುರುಷ ಪ್ರಧಾನ ಸಮಾಜ ನಿರ್ಮಿಸಿ ಎಲ್ಲಾ ಜಾತಿಯ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನಡೆಸಿಕೊಳ್ಳುತ್ತಾ ತುಳಿಯುತ್ತಿದ್ದರು. ಕರ್ಮ ಸಿದ್ಧಾಂತ, ನಾವು – ಪುಣ್ಯ, ಸ್ವರ್ಗ-ನರಕ, ಕೈಲಾಸ-ವೈಕುಂಠ, ಮಂತ್ರ ತಂತ್ರ, ಜೋತಿಷ್ಯ ಪಂಚಾಂಗ, ಪ್ರಾಣಿ ಬಲಿ, ನರಬಲಿ, ಕನ್ಯೆಯರ ಬಲಿ, ಯಾಗ ಯಜ್ಞ, ಹೋಮ ಇತ್ಯಾದಿಯಾಗಿ ಮೌಡ್ಯವನ್ನು ಬಿತ್ತಿದರು. ದೇವರು, ಧರ್ಮ, ದೇವಸ್ಥಾನ ಎಂಬ ಸಂಸ್ಥೆಗಳನ್ನು ಸ್ಥಾಪಿಸಿ ಜನರ ಪ್ರತಿಭಟನಾ ಧ್ವನಿಯನ್ನು ಹತ್ತಿಕ್ಕಿದ್ದರು. ಇಂತಹ ಅಮಾನವೀಯ, ಅಸಮಾನ ಅವಮಾನ ಮತ್ತು ಶೋಷಣೆಯ ವಿರುದ್ಧ ಕೆಳಜಾತಿಯ ಮತ್ತು ಕೆಳವರ್ಗದ ಜನರು ತಮ್ಮ ವಿಮೋಚನೆಗಾಗಿ ತಾವೇ ನಡೆಸಿದ ಆಂದೋಲನವೇ ವಚನ ಚಳುವಳಿ.
ವಚನಕಾರರು ಪ್ರಶ್ನಿಸಿದರು, ಪ್ರತಿಭಟಿಸಿದರು, ತಿರಸ್ಕರಿಸಿದರು, ನಿರಾಕರಿಸಿದರು ಮತ್ತು ಪರ್ಯಾಯ ಮಾರ್ಗವನ್ನು ಸೂಚಿಸಿದರು. ಅದರಂತೆ ನಡೆದರು. ಧರ್ಮ, ಜಾತಿ, ವರ್ಗ, ಲಿಂಗ ಭೇದವಿಲ್ಲದ ಒಂದು ಸಮ ಸಮಾಜದ ನಿರ್ಮಾಣವೇ ಎಲ್ಲಾ ವಚನಕಾರರ ಅಂತಿಮ ಗುರಿಯಾಗಿತ್ತು. ಪುರುಷರು-ಸ್ತ್ರೀಯರು, ಮೇಲ್ಜಾತಿ-ಕೆಳಜಾತಿ, ಪ್ರಭುಗಳು-ಪ್ರಜೆಗಳು ಸಮಾನರಾಗಿ ವಚನಗಳನ್ನು ರಚಿಸಿದರು. ನುಡಿದಂತೆ ಬರೆದರು, ಬರೆದಂತೆ ಬದುಕಿ ನೈತಿಕತೆಯನ್ನು ಮೆರೆದರು. ಅದೊಂದು ಸಂಘಟಿತ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯಾಗಿತ್ತು. ಈ ಕ್ರಾಂತಿಯ ನಾಯಕತ್ವವನ್ನು ಬಸವಣ್ಣನವರು ವಹಿಸಿಕೊಂಡಿದ್ದರು. ಬಸವಣ್ಣನವರದ್ದು ಎಂತಹ ಮಹಾನ್ ವ್ಯಕ್ತಿತ್ವ ಎಂಬುದನ್ನು ಅವರ ಸಮಕಾಲೀನ ವಚನಕಾರರು ರಚಿಸಿದ ವಚನಗಳಿಂದ ತಿಳಿಯಬಹುದು. ಕೆಲವು ವಚನಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಶರಣೆ ಅಕ್ಕ ನಾಗಮ್ಮ ಬಸವಣ್ಣನನ್ನು ಕುರಿತು :
ಎನ್ನ ಕುಲಸೂತಕವ ಕಳೆದಾತ ಬಸವಣ್ಣ
ಎನ್ನ ಛಲಸೂತಕವ ಕಳೆದಾತ ಬಸವಣ್ಣ
ಎನ್ನ ತನುಸೂತಕವ ಕಳೆದಾತ ಬಸವಣ್ಣ
ಎನ್ನ ಮನಸೂತಕವ ಕಳೆದಾತ ಬಸವಣ್ಣ
ಎನ್ನ ನೆನದು ಸೂತಕವ ಕಳೆದಾತ ಬಸವಣ್ಣ
ಎನ್ನ ಭಾವಸೂತಕವ ಕಳೆದಾತ ಬಸವಣ್ಣ
ಎನ್ನ ಅರಹು-ಮರೆವಿನ ಸಂದು ಸಂಶಯವ ಬಿಡಿಸಿದಾತ ಬಸವಣ್ಣ
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ
ಬಸವಣ್ಣ ಪ್ರಿಯ ಚೆನ್ನಸಂಗಯ್ಯನ ಹೃದಯ ಕಮಲದಲ್ಲಿ ನಿಜನಿವಾಸಿಯಾಗಿಸಿದ ಎನ್ನ ತಂದೆ ಸಂಗನ ಬಸವಣ್ಣನು
ಶರಣೆ ಅಕ್ಕಮಹಾದೇವಿ ಈ ವಚನದಲ್ಲಿ ಬಸವಣ್ಣನವರನ್ನು ಕುರಿತು :
ಬಸವಣ್ಣ ನಿಮ್ಮಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು
ಎನಗೆ ಜಂಗಮ ಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದು ಎನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನ ಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು
ನೀವಾದ ಕಾರಣ ನಿಮ್ಮ ಶ್ರೀ ಪಾದಕ್ಕೆ
ನಮೋ ನಮೋ ಎನ್ನುತಿರ್ದೆನು
ಕಾಣಾ ಸಂಗನ ಬಸವಣ್ಣ
ಮಡಿವಾಳ ಮಾಚಯ್ಯನವರು ಬಸವಣ್ಣರವರನ್ನು ಕುರಿತು:
ಬಸವಣ್ಣನ ನಡೆ ಪರುಷ ಬಸವಣ್ಣನ ನುಡಿ ಪರುಷ
ಬಸವಣ್ಣನ ದೃಷ್ಟಿ ಪರುಷ ಬಸವಣ್ಣನ ಹಸ್ತ ಪರುಷ
ಬಸವಣ್ಣನ ಭಾವ ಪರುಷ ಬಸವಣ್ಣನ ಮನ ಪರುಷ
ತನುಮನ ಧನವ ನಿವೇದಿಸಿದಾತ ಬಸವಣ್ಣನು
ಬಸವಣ್ಣನ ನೆನೆವುದೆ ಲಿಂಗಾರ್ಚನೆ
ಬಸವಣ್ಣನ ನೆನೆವುದೆ ಪರತತ್ವ
ಬಸವಣ್ಣನ ನೆನೆವುದೆ ಕಲ್ಯಾಣವೆನೆಗೆ
ಕಲಿದೇವಯ್ಯಾ ನಿಮ್ಮ ಶರಣ ಬಸವಣ್ಣನಿಂತಹ ಮಹಿಮೆ ನೋಡಯ್ಯ
ಸಿದ್ಧರಾಮೇಶ್ವರರು ಬಸವಣ್ಣರವರನ್ನು ಕುರಿತು:
ಕಾಲಿಲ್ಲದವಂಗೆ ಕಾಲು ಕೊಟ್ಟೆ ಬಸವಾ,
ಕಣ್ಣಿಲ್ಲದವಂಗೆ ಕಣ್ಣು ಕೊಟ್ಟೆ ಬಸವಾ,
ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವ
ಕಪಿಲ ಸಿದ್ಧ ಮಲ್ಲಿನಾಥಯ್ಯಾ
ಮತ್ತೊಂದು ವಚನದಲ್ಲಿ ಸಿದ್ಧರಾಮೇಶ್ವರರು:
ತನುವ ಗುರುವಿಂಗಿತ್ತು ಗುರುವಾದನಯ್ಯ ಬಸವಣ್ಣನು
ಮನವ ಲಿಂಗಕ್ಕಿತ್ತು ಲಿಂಗವಾದನಯ್ಯ ಬಸವಣ್ಣನು
ಧನವ ಜಂಗಮಕ್ಕಿತ್ತು ಜಂಗಮವಾದನಯ್ಯ ಬಸವಣ್ಣನು
ಇಂತೀ ತ್ರಿವಿಧವ ತ್ರಿವಿಧಕ್ಕಿತ್ತು ಸದ್ಗುರು
ಕಪಿಲ ಸಿದ್ಧ ಮಲ್ಲಿಕಾರ್ಜುನಯ್ಯ ನಿಮ್ಮ ಶರಣ
ಎಲ್ಲರಿಗೂ ಗುರುವಾದನಯ್ಯ ಬಸವಣ್ಣನು
ಈ ರೀತಿಯಾಗಿ ಬಸವಣ್ಣನವರ ಸಮಕಾಲೀನ, ಬಸವಕಾಲದ ನಂತರವೂ ವಚನಕಾರರು ಮತ್ತು ಜನಪದರು ಬಸವಣ್ಣನ ಬಹುಮುಖ ಪ್ರತಿಭೆಯನ್ನು, ಅವರ ಪಾರದರ್ಶಕತೆಯನ್ನು, ನಾಯಕತ್ವವನ್ನು ಕೊಂಡಾಡಿದ್ದಾರೆ.
ಮಹಾಮಾನವತಾವಾದಿ, ಸಕಲ ಜೀವಿಗಳ ಲೇಸನ್ನು ಬಯಸಿದ, ಜನ ಕಲ್ಯಾಣಕ್ಕಾಗಿ ಶ್ರಮಿಸಿದ, ಸಮಾನತೆಯನ್ನು ಸಾರಿದ, ಕಾಯಕ, ದಾಸೋಹ, ದಯೆ, ಕರುಣೆ, ತ್ಯಾಗ, ಅರಿವು ಎಂಬ ಮೌಲ್ಯಗಳನ್ನು ಬಿತ್ತಿದ ಮಹಾನ್ ದಾರ್ಶನಿಕ.
ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ವೈಚಾರಿಕ, ಸಾಂಸ್ಕೃತಿಕ, ಸಾಹಿತ್ಯ, ಕಾಯಕ, ದಾಸೋಹ – ಇತ್ಯಾದಿಯಾಗಿ ಬದುಕಿನ ಎಲ್ಲಾ ವಿಷಯಗಳ ಬಗ್ಗೆ ಶರಣರು ತಮ್ಮ ವಚನಗಳ ಮುಖಾಂತರ ಬೆಳಕನ್ನು ಚೆಲ್ಲಿದ್ದಾರೆ. ವಚನಗಳನ್ನು ಓದಿಕೊಂಡು ಪ್ರಭಾವಿತರಾಗಿ ನಮ್ಮ ಸಂವಿಧಾನ ರಚನಕಾರರು ನಮ್ಮ ಸಂವಿಧಾನದಲ್ಲಿ ವಚನ ಸಂದೇಶಗಳನ್ನು ಅಳವಡಿಸಿದ್ದಾರೆ ಎಂಬುದಕ್ಕೆ ನನ್ನ ಅಧ್ಯಯನದಲ್ಲಿ ಯಾವ ಪುರಾವೆಯೂ ಕಾಣಲಿಲ್ಲ. ಆದರೆ ನಮ್ಮ ಸಂವಿಧಾನದಲ್ಲಿ ಹಲವು ವಚನ ಸಂದೇಶಗಳನ್ನು ಕಾಣಬಹುದು. ಈ ದೃಷ್ಟಿಯಲ್ಲಿ ಕೆಲವು ಮಹತ್ವದ ವಿಚಾರಗಳು ಯಾವ ರೀತಿ ನಮ್ಮ ಸಂವಿಧಾನದಲ್ಲಿ ಮತ್ತು ವಚನಗಳಲ್ಲಿ ಸಮನಾಗಿ ಕಾಣಬಹುದು ಎಂಬ ಸಣ್ಣ ಪ್ರಯತ್ನ ಈ ಕೃತಿಯಲ್ಲಿ ಮಾಡಲಾಗಿದೆ. ಪ್ರಮುಖವಾಗಿ ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರಗಳೆಂದರೆ:
- ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು
- ಪ್ರಜಾಪ್ರಭುತ್ವ
- ಜಾತಿ ಮತ್ತು ಅಸ್ಪೃಶ್ಯತೆ
- ಲಿಂಗ ಅಸಮಾನತೆ
- ಕಾಯಕವೇ ಕೈಲಾಸ
- ಮೌಢ್ಯ ಮತ್ತು ವೈಚಾರಿಕತೆ
- ಕಲ್ಯಾಣ ರಾಜ್ಯ ಮತ್ತು ದಾಸೋಹ