October 1, 2023 8:33 am

ಪ್ರಜಾಪ್ರಭುತ್ವ: ವಿಶ್ವದ ಮೊದಲ ಸಂಸದ್ ಅನುಭವ ಮಂಟಪ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಮೊದಲು ಪ್ರಪಂಚದಲ್ಲಿ ಸಾಮ್ರಾಟರು, ಚಕ್ರವರ್ತಿಗಳು, ರಾಜ-ಮಹಾರಾಜರು, ಪಾಳೇಗಾರರು, ರಾಜ್ಯಭಾರ ಮಾಡುತ್ತಿದ್ದರು. ಕಾನೂನುಗಳನ್ನು ರಚಿಸುವ ಅಧಿಕಾರ, ಅವುಗಳನ್ನು ಜಾರಿಗೊಳಿಸುವ ಅಧಿಕಾರ ಮತ್ತು ಅವುಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರ ಇವರಲ್ಲೇ ಕೇಂದ್ರೀಕೃತವಾಗಿತ್ತು. ಜನಹಿತಕ್ಕೆ ಮತ್ತು ಜನ ಕಲ್ಯಾಣಕ್ಕೆ ಆಡಳಿತ ನೀಡಿದ ಕೆಲವು ರಾಜರನ್ನು ಹೊರತುಪಡಿಸಿದರೆ ಉಳಿದವರಲ್ಲಿ ತಮ್ಮ ನಿರಂಕುಶ ಆಡಳಿತದಿಂದ ಮೇಲಿಂದ ಮೇಲೆ ಯುದ್ಧಗಳು ನಡೆದು ಅರಾಜಕತೆ, ಅಸ್ಥಿರತೆ ಮತ್ತು ಆರ್ಥಿಕ ದಿವಾಳಿತನದಿಂದ ಜನಸಾಮಾನ್ಯರ ಬದುಕು ವಿವಿಧ ಸಂಕಷ್ಟಗಳಿಗೆ ತುತ್ತಾಯಿತು.

ರಾಜ ಮಹಾರಾಜರು ಪುರೋಹಿತಶಾಹಿಗಳ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತಿದ್ದರು. ಜಾತಿ, ಲಿಂಗ, ವರ್ಣ ಮತ್ತು ವರ್ಗ ಅಸಮಾನತೆಯೇ ಸಾಮಂತಶಾಹಿಯ ತಳಪಾಯವಾಗಿತ್ತು. ಹೀಗೆ ಸಾಮಂತಶಾಹಿ, ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳೆಂಬ ವಿಷವರ್ತುಲ ಜೀವನವನ್ನು ಬರ್ಬರಗೊಳಿಸಿತು.

ಇಂತಹ ಸಂದರ್ಭದಲ್ಲಿ ವಚನಕಾರರು ಸಾಮಂತಶಾಹಿ, ಜಾತಿವ್ಯವಸ್ಥೆ ಮತ್ತು ಮೌಡ್ಯದ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದರು. ಇದರ ಒಂದು ಭಾಗವಾಗಿ ‘ಅನುಭವ ಮಂಟಪ’ ಸ್ಥಾಪನೆಯಾಯಿತು. ಈ ಅನುಭವ ಮಂಟಪಕ್ಕೆ ಒಬ್ಬರು ಅಧ್ಯಕ್ಷತೆಯನ್ನು ವಹಿಸುತ್ತಿದ್ದರು. ಈ ರೀತಿಯ ಅಧ್ಯಕ್ಷ ಸ್ಥಾನಕ್ಕೆ ‘ಶೂನ್ಯ ಸಿಂಹಾಸನ’ವೆಂದು ಕರೆದರು. ಸಕಲ ಜೀವಿಗಳ ಲೇಸು, ಜನಕಲ್ಯಾಣ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ವೈಚಾರಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳ ಕುರಿತು ಮುಕ್ತವಾದ ಚರ್ಚೆಗಳು ನಡೆದು ಮೂಡಿ ಬಂದ ಅಭಿಪ್ರಾಯಗಳು ವಚನಗಳಾಗಿ ರೂಪಗೊಂಡವು.

ಬಸವಣ್ಣನವರ ಮನೆ ‘ಮಹಾಮನೆ’ಯಾಗಿ ಮುಂದೆ ಅನುಭವ ಮಂಟಪವಾಗಿ ಮುಕ್ತ ಚಿಂತನೆಗೂ ಕಲ್ಪಿಸಲಾದ ಒಂದು ವೇದಿಕೆಯಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದ ವಿವಿಧ ಚಿಂತನೆಗಳುಳ್ಳ ವಿವಿಧ ಜಾತಿಯ ವರ್ಗಗಳ ಜನರು ಅನುಭವ ಮಂಟಪದಲ್ಲಿನ ಚರ್ಚೆಗಳಲ್ಲಿ ಭಾಗಿಯಾದರು. ವೈಚಾರಿಕತೆ, ವಾಸ್ತವ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿದ್ದವು. ಪ್ರಶ್ನಿಸುವ ಮನೋಧರ್ಮವನ್ನು ಮುಕ್ತ ಚರ್ಚೆಯನ್ನು ಇಲ್ಲಿ ಪ್ರೋತ್ಸಾಹಿಸಲಾಯಿತು. ಪರಂಪರಾನುಗತವಾದ ನಂಬಿಕೆಗಳನ್ನು ಆಚರಣೆಗಳನ್ನು ವಿಶ್ಲೇಷಣೆಗೆ ಗುರಿಪಡಿಸಿ ಜನರನ್ನು ಮೌಡ್ಯಗಳಿಂದ, ಅರ್ಥಹೀನ ಆಚರಣೆಗಳಿಂದ ಬಿಡುಗಡೆಪಡಿಸುವ ಪ್ರಯತ್ನ ಮಾಡಿದರು. ವರ್ಗ, ಜಾತಿ, ಲಿಂಗಾಧಾರಿತ, ತಾರತಮ್ಯವಿಲ್ಲದ ಸಮಾಜದ ನಿರ್ಮಾಣ ವಚನಕಾರರ ಗುರಿಯಾಗಿತ್ತು. ಪರಿಣಾಮವಾಗಿಯೇ ವಚನ ಸಾಹಿತ್ಯವೆಂಬ ಮಹಾನ್ ಸಾಹಿತ್ಯ ಪರಂಪರೆಯ ಉಗಮವಾಯಿತು.

ಪ್ರಣವ ಬೀಜವ ಬಿತ್ತಿ

ಪಂಚಾಕ್ಷರಿಯ ಬೆಳೆಯ ಬೆಳೆದು

ಪರಮಪ್ರಸಾದವನೊಂದುರೂಪಮಾಡಿ ಮೆರೆದು

ಭಕ್ತಿ ಫಲವನುಂಡಾತ ನಮ್ಮ ಬಸವಯ್ಯ

ಚನ್ನಬಸವನೆಂಬ ಪ್ರಸಾದಿಯ ಪಡೆದು

ಅನುಭವ ಮಂಟಪವನನು ಮಾಡಿ

ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು

ಅರಿವ ಸಂಪಾದಿಸಿ ಆಚಾರನಂಗೆಗೊಳಿಸಿ

ಏಳುನೂರೆಪ್ಪತ್ತು ಅಮರಗಣಗಳ

ಅನುಭವ ಮೂರ್ತಿಗಳ ಮಾಡಿದಾತ ನಮ್ಮ

ಬಸವಯ್ಯನು ಸಂಗಯ್ಯನಲ್ಲಿ

ಸ್ವಯಂಲಿಂಗಿಯಾದ ನಮ್ಮ ಬಸವಯ್ಯನು.

ಈ ವಚನದಲ್ಲಿ ಶರಣೆ ನೀಲಾಂಬಿಕೆ ಅನುಭವ ಮಂಟಪದ ಮಹತ್ವವನ್ನು ತಿಳಿಸಿದ್ದಾರೆ. ‘ಅನುಭವ ಮಂಟಪ’ ಜಗತ್ತಿನ ಪ್ರಪ್ರಥಮ ಪ್ರಜಾಪ್ರಭುತ್ವ ಮಾದರಿಯ ಸ್ವತಂತ್ರ ಚಿಂತನೆಯ ಸಂಸತ್ತು ಎಂದೇ ಖ್ಯಾತಿ ಪಡೆಯಿತು. 770 ಶರಣ-ಶರಣೆಯರು ಮುಕ್ತ ಚರ್ಚೆ ನಡೆಸಿದರು. ಸಕಲ ಜೀವಾತ್ಮರ ಲೇಸು, ಮಾನವ ಕಲ್ಯಾಣದ ಕಲ್ಯಾಣಕ್ಕಾಗಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ವಿಚಾರಗಳ ಕುರಿತು ಸಮಸ್ಯೆಗಳ ಕುರಿತು, ಚರ್ಚಿಸಿ, ಸ್ಪಷ್ಟ ನಿರ್ಧಾರಗಳನ್ನು ತಮ್ಮ ವಚನಗಳ ಮೂಲಕ ವಿಶ್ವಕ್ಕೆ ನೀಡಿದರು.

ಆನೆಯನೇರಿಕೊಂಡು ಹೋದಿರೇ ನೀವು

ಕುದುರೆಯನೇರಿಕೊಂಡು ಹೋದಿರೇ ನೀವು,

ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ!

ಸತ್ಯದ ನಿಲವನರಿಯದೆ ಹೋದಿರಲ್ಲಾ

ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!

ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ!

ಈ ವಚನದಲ್ಲಿ ಬಸವಣ್ಣನವರು ರಾಜಸತ್ತೆ ಹಾಗೂ ಪುರೋಹಿತಶಾಹಿಯ ಕುರಿತು ವಿಡಂಬನೆ ಮಾಡಿದ್ದಾರೆ. ರಾಜ ಮಹಾರಾಜರು, ಪುರೋಹಿತಶಾಹಿಗಳು ತಮ್ಮ ಭೋಗ-ವೈಭವದಲ್ಲಿ ಮೈ ಮರೆತರೇ ವಿನಹ ಪ್ರಜೆಗಳ ಕಲ್ಯಾಣಕ್ಕಾಗಿ ಯೋಚಿಸಲೂ ಇಲ್ಲ, ಶಮಿಸಲೂ ಇಲ್ಲ. ಇಂಥವರು ಅಹಂಕಾರವೆಂಬ ಮದವೇರಿದ ಗಜದಂತೆ ಮೃತ್ಯುವಿಗೆ ಸರಿಯಾಗಿ ಹೋದರು. ನರಕಕ್ಕೆ ಭಾಜನವಾದರೇ ವಿನಹ ಸತ್ಯದ ನಿಲವನ್ನರಿಯಲಿಲ್ಲ.

ಹೊನ್ನಿನೊಳಗೊಂದೊರೆಯ

ಅನ್ನದೊಳಗೊಂದಗುಳ

ಸೀರೆಯೊಳಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ

ನಿಮ್ಮಾಣೆ, ನಿಮ್ಮ ಪ್ರಮಥರಾಣೆ

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ

ಕೂಡಲಸಂಗಮದೇವ

ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಮಂತ್ರಿಯಾಗಿ ಮಾಡಿದ ಪ್ರತಿಜ್ಞೆಯೇ ಈ ವಚನ. ಅಧಿಕಾರದಲ್ಲಿರುವವರು ಪ್ರಾಮಾಣಿಕವಾಗಿದ್ದರೆ ಆಡಳಿತವು ಪ್ರಾಮಾಣಿಕವಾಗಿರುತ್ತದೆ. ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಸಂಪತ್ತನ್ನು ಸಂಗ್ರಹಿಸಬಾರದು. ತಮ್ಮ ಸೇವೆಯನ್ನು ದೇಶದ ಮತ್ತು ಸಮಾಜದ ಹಿತಕ್ಕಾಗಿ ನೀಡಬೇಕು.

ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು

ಒರೆಯಾವಿನ ಬೆನ್ನ ಹರಿಯಲೇದಕಯ್ಯಾ?

ಲಜ್ಜೆಗೆಡಲೇಕೆ? ನಾಣುಗೆಡಲೇಕೆ?

ಕೂಡಲಸಂಗಮದೇವನುಳ್ಳನ್ನಕ್ಕ

ಬಿಜ್ಜಳನ ಭಂಡಾರವೆನಗೇಕಯ್ಯಾ?

ಕಾಯಕದಿಂದ ಬರುವ ಪ್ರತಿಫಲವೇ ‘ಹಾಲಹಳ್ಳ’ವಿದ್ದಂತೆ, ಹೀಗಿರುವಾಗ ಲಂಚದಾಸೆಗೆ ಕೈಯೊಡ್ಡುವುದೆಂದರೆ ಒದೆಯುವ ಆಕಳ ಬೆನ್ನಹತ್ತಿ ಇಲ್ಲದ ಹಾಲಿಗಾಗಿ ತಿರುಗಿದಂತೆಯೇ ಸರಿ, ಇಂತಹ ಲಜ್ಜೆಗೇಡು, ಮಾನಗೇಡು, ಭ್ರಷ್ಟತನಕ್ಕೆ ಕೈಹಾಕಲೇಕೆ? ಎಂದು ಹೇಳುತ್ತಾರೆ. ರಾಜಭಂಡಾರ ಪ್ರಜೆಗಳ ಕಲ್ಯಾಣಕ್ಕೆ ಮಾತ್ರ ಬಳಸಬೇಕು ಎಂದು ಸಾರಿದರು.

ಅಗ್ರಜ ಅಂತ್ಯಜ ವರ್ಣಧರ್ಮದ ಎರಡು ಧ್ರುವಗಳು

ಒಂದು ಉತ್ತರ, ಇನ್ನೊಂದು ದಕ್ಷಿಣ

ನಡುವೆ ದೊಡ್ಡಕಮರಿ

ಸಮತೆಯ ಗಾಳಿ ಬೀಸಿ

ಶಿವಭಕ್ತಿ ಸೂತ್ರ ಬಂಧಿಸಿತ್ತು ಇವೆರಡನ್ನು

ಅಗ್ರಜನ ಪುತ್ರಿ ಅಂತ್ಯಜನ ಪುತ್ರನ ಕೈಹಿಡಿದಳು

ಸಾಧಿಸಿತು ಮಾನವತೆಯ ಮಹಾಸಿದ್ಧಿ ಶರಣರಲ್ಲಿ

ನಿಃಕಳಂಕ ಮಲ್ಲಿಕಾರ್ಜುನಾ

ನೋಡಿ ಬೆರಗಾದೆ ನಾನು

ಕಾಶ್ಮೀರದ ಮೋಳಿಗೆಯ ಮಾರಯ್ಯ ಕಲ್ಯಾಣದಲ್ಲಿ ಕಂಡ ಮಾನವತೆಯನ್ನು ಈ ರೀತಿ ವರ್ಣಿಸಿದ್ದಾರೆ. ಜಾತಿಬೇಲಿಯನ್ನು ಕಿತ್ತು ಮನುಷ್ಯ ಮನುಷ್ಯ ಬಂಧ ಬೆಸೆದ ವಚನ ಕ್ರಾಂತಿ ನಾಡಿನ ಹೆಮ್ಮೆ ಎಂದರೆ ಹೆಚ್ಚುಗಾರಿಕೆಯಲ್ಲ.

ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ

ನಾನು ಕೈ ಮುಟ್ಟಿ ಎತ್ತಿದೆನಾದರೆ

ನಿಮ್ಮಾಣೆ ನಿಮ್ಮ ಪ್ರಮಥರಾಣೆ

ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷ್ಯದಲ್ಲಿಪ್ಪನಾಗಿ

ಇಂತಲ್ಲದೆ ನಾನು ಅಳಿಮನವ ಮಾಡಿ

ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ

ನೀನಾಗಲೆ ಎನ್ನ ನರಕದಲ್ಲಿ ಅದ್ದಿ

ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ

ಈ ವಚನದಲ್ಲಿ ಶರಣೆ ಸತ್ಯಕ್ಕೆ ನಾನು ಅನ್ಯಾಯದ ಧನದಿಂದ ದೂರವಿದ್ದೇನೆ ಎಂದು ಸಾರಿದ್ದಾಳೆ. ಕಸಗುಡಿಸುವ ಕಾಯಕದ ಸಂದರ್ಭದಲ್ಲಿ ಬೆಲೆಯುಳ್ಳ ವಸ್ತುಗಳಾದ ಬಂಗಾರದ ಆಭರಣ, ರೇಷ್ಮೆವಸ್ತ್ರ ಬೀದಿಯಲ್ಲಿ ಬಿದ್ದಿದ್ದರೂ ಕಾಲ ಕಸದಂತೆ ನೋಡುತ್ತಾ, ಅವುಗಳನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾಳೆ. ತನ್ನ ಕಾಯಕದ ಮೂಲಕವೇ ಬದುಕುವುದಾಗಿ ವಚನ ನೀಡುತ್ತಾಳೆ.

ಸಾರಾಂಶ 

1. ಪ್ರಜಾಪ್ರಭುತ್ವ ಸಂಸ್ಥೆಯಾದ ‘ಅನುಭವ ಮಂಟಪ’ವನ್ನು ಸ್ಥಾಪಿಸಿದರು.

2. ವರ್ಣ, ಜಾತಿ, ವರ್ಗ ಭೇದವಿಲ್ಲದೆ ದೇಶದ ಮೂಲೆಮೂಲೆಗಳಿಂದ ಪ್ರತಿನಿಧಿಗಳು ಈ ಅನುಭವ ಮಂಟಪದಲ್ಲಿ ಭಾಗವಹಿಸಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

3. ಪ್ರಶ್ನಿಸುವ, ಚರ್ಚಿಸುವ, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು.

4. ಅಧಿಕಾರದಲ್ಲಿರುವವರು ಭ್ರಷ್ಟರಾಗಕೂಡದು, ಸಂಪತ್ತನ್ನು ಸಂಗ್ರಹಿಸಬಾರದು, ಪಾರದರ್ಶಕವಾಗಿ ಮತ್ತು ಜನಕಲ್ಯಾಣಕ್ಕಾಗಿ ಶ್ರಮಿಸಬೇಕು.

5. ನಮ್ಮ ಕೆಲಸದಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು.

ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅನೇಕ ಪ್ರಶ್ನೆಗಳು ಎದುರಾದವು. ಅವುಗಳಲ್ಲಿ ಒಂದೆಂದರೆ: ಬ್ರಿಟಿಷರನ್ನು ಈ ದೇಶದಿಂದ ಹೊರದೂಡಿದ ನಂತರ ರಾಜಕೀಯ ಅಧಿಕಾರ ಯಾರ ಕೈಗೆ ಹೋಗಬೇಕೆಂಬುದು; ಮಹಾತ್ಮ ಗಾಂಧಿಯವರನ್ನು ಒಬ್ಬ ಸಾಮ್ರಾಟನನ್ನಾಗಿ ಮಾಡೋಣವೇ? ಎಂಬುದು ಕಾಲದ ಗಹನ ವಿಚಾರವಾಗಿತ್ತು, ಈ ಪ್ರಶ್ನೆಗೆ ಈ ದೇಶದ ಜನತೆ ಕಂಡುಕೊಂಡಂತಹ ಉತ್ತರವೆಂದರೆ: ನಮಗೆ ಸಾಮ್ರಾಟರು ಬೇಡ, ಚಕ್ರವರ್ತಿಗಳು ಬೇಡ, ರಾಜ ಮಹಾರಾಜರುಗಳು ಬೇಡ. ರಾಜಕೀಯ ಅಧಿಕಾರ ಪ್ರಜೆಗಳ ಕೈಗೆ ಬರಬೇಕು. ಸ್ವಾತಂತ್ರ್ಯದ ನಂತರ ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡುವುದು ಒಂದು ಗುರಿಯಾಯಿತು. ಈ ರೀತಿಯಾಗಿ ‘ಪ್ರಜಾಪ್ರಭುತ್ವ’ ನಮ್ಮ ಸಂವಿಧಾನದಲ್ಲಿ ಪ್ರಧಾನ ಸ್ಥಾನವನ್ನು ಗಳಿಸಿಕೊಂಡಿದೆ.

ಪ್ರಜಾಪ್ರಭುತ್ವವೆಂದರೆ ‘ಜನರಿಂದ ಜನರಿಗಾಗಿ ಜನರಿಗೋಸ್ಕರ’ ಎಂಬುದಾಗಿ ಹೇಳುತ್ತಾ ಬಂದಿದ್ದೇವೆ. ಆದರೆ ಅನುಭವದಿಂದ ಕಂಡುಕೊಂಡ ಸತ್ಯವೇನೆಂದರೆ ಪ್ರಜಾಪ್ರಭುತ್ವ ಸಂಸ್ಥೆಗಳು, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳನ್ನು ಒಳಗೊಂಡಿರುವುದೇ ನಿಜವಾದ ಪ್ರಜಾಪ್ರಭುತ್ವ. ನಮ್ಮ ಸಂವಿಧಾನದಲ್ಲಿ ಪಾಳೇಗಾರಿ ಪದ್ಧತಿಯನ್ನು ರದ್ದುಪಡಿಸಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ಕೇಂದ್ರದಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯ ಮಟ್ಟದಲ್ಲಿ ವಿಧಾನಸಭೆ, ವಿಧಾನ ಪರಿಷತ್ತು ಎಂಬ ಶಾಸಕಾಂಗ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿಗಳೆಂಬ ಕಾರ್ಯಾಂಗದ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲ್ಲೂಕು ನ್ಯಾಯಾಲಯಗಳೆಂಬ ನ್ಯಾಯಾಂಗ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ.

ಪ್ರತಿಯೋರ್ವ ಪ್ರಜೆಯ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆದು ವಿಕಾಸವಾಗಬೇಕಾದರೆ ಅವರಿಗೆ ಕೆಲವು ಹಕ್ಕುಗಳನ್ನು ನೀಡಬೇಕಾಗುತ್ತದೆ. ಇಂತಹ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ. ಸಮಾನತೆಯ ಹಾಗೂ ಸ್ವಾತಂತ್ರ್ಯದ ಹಕ್ಕುಗಳನ್ನು ಮತ್ತು ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮತ್ತು ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ಹಾಗೂ ಶೋಷಣೆಯ ವಿರುದ್ಧದ ಹಕ್ಕುಗಳನ್ನು ನೀಡಲಾಗಿದೆ. ಈ ರೀತಿಯಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ, ಸಂಘ ಸಂಸ್ಥೆಗಳನ್ನು ರಚಿಸುವ, ಸಂಚರಿಸುವ, ವಾಸಿಸುವ, ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮಾಡುವ ಹಕ್ಕುಗಳನ್ನು ನೀಡಲಾಗಿದೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳನ್ನು ತಂದಿದ್ದೇವೆ. ಭೂ ಸಂಬಂಧಿ ವಿಚಾರಗಳಲ್ಲಿ, ಶಿಕ್ಷಣದಲ್ಲಿ, ಆರೋಗ್ಯದಲ್ಲಿ, ಕೃಷಿಯಲ್ಲಿ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದು ಜನಜೀವನವನ್ನು ಮೊದಲಿಗಿಂತ ಉತ್ತಮಗೊಳಿಸಲಾಗಿದೆ.

ಅನುಷ್ಠಾನದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು

ನಮ್ಮ ಸಂವಿಧಾನದಲ್ಲಿ ಪಾಳೇಗಾರಿ ಪದ್ಧತಿಯನ್ನು ರದ್ದುಪಡಿಸಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ. ನಮ್ಮದು ಸಂಸದೀಯ ಪ್ರಜಾಪ್ರಭುತ್ವ, 545 ಸದಸ್ಯರನ್ನೊಳಗೊಂಡ ಲೋಕಸಭೆ ಮತ್ತು 245 ಸದಸ್ಯರನ್ನೊಳಗೊಂಡ ರಾಜ್ಯಸಭೆ, ಇವೆರಡನ್ನು ಒಳಗೊಂಡಿರುವುದೇ ನಮ್ಮ ಸಂಸತ್ತು. ಸಾರ್ವತ್ರಿಕ ಚುನಾವಣೆಗಳ ಮೂಲಕ ದೇಶದ ಮತದಾರರು 543 ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡುತ್ತಾರೆ. ಉಳಿದ ಇಬ್ಬರು ಆಂಗ್ಲೋ-ಇಂಡಿಯನ್ ಸಮುದಾಯದವರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು 233 ರಾಜ್ಯಸಭೆ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಮುಖ್ಯ ಕೆಲಸವೆಂದರೆ ದೇಶಕ್ಕೆ ಬೇಕಾದ ಕಾನೂನುಗಳನ್ನು ರಚಿಸುವುದು, ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರುವುದು, ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದೆಯೇ? ಇಲ್ಲವೇ? ಕರ ನಿರ್ಧಾರ, ರಾಷ್ಟ್ರಪತಿಗಳನ್ನು ಮತ್ತು ಉಪರಾಷ್ಟ್ರಪತಿಗಳನ್ನು ಚುನಾಯಿಸುವುದು, ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಮೂರ್ತಿಗಳನ್ನು ಪ್ರಶ್ನೆ ಮಾಡುವ ಅಧಿಕಾರವನ್ನು ಹೊಂದಿದೆ. ನಮ್ಮ ಸಂಸತ್ತು ಒಂದು ರೀತಿಯಲ್ಲಿ 12ನೇ ಶತಮಾನದ ‘ಅನುಭವ ಮಂಟಪ’ವನ್ನು ಹೋಲುತ್ತೆ.

ಎಲ್ಲಾ ರಾಜ್ಯಗಳಲ್ಲಿ ಇದೇ ರೀತಿಯಾಗಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ರಚಿಸಲಾಗಿದೆ. ದೊಡ್ಡದೊಡ್ಡ ನಗರಗಳಲ್ಲಿ ಮಹಾನಗರ ಪಾಲಿಕೆಗಳನ್ನು, ಸಾಧಾರಣ ನಗರಗಳಲ್ಲಿ ಪಾಲಿಕೆಗಳನ್ನು, ಪಟ್ಟಣಗಳಲ್ಲಿ ಪುರಸಭೆಗಳನ್ನು ರಚಿಸಲಾಗಿದೆ.

ಈ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಜನರು ನೇರವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದಾರೆ. ಜನ ಪ್ರತಿನಿಧಿಗಳು ಉತ್ತಮ ಚರ್ಚೆಗಳನ್ನು ನಡೆಸಿ, ನೈತಿಕತೆಯನ್ನು ಮೆರೆದು ಜನಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಇದರ ಪರಿಣಾಮವಾಗಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಯಿತು. ದೇಶದಲ್ಲಿ ವಿಭಿನ್ನ ಧರ್ಮಗಳು, ಜಾತಿಗಳು, ಭಾಷೆಗಳು, ಸಂಸ್ಕೃತಿ, ಆಚಾರ, ವಿಚಾರಗಳು, ಹಲವು ರಾಜಕೀಯ ಪಕ್ಷಗಳು, ರಾಜಕೀಯ ಸಿದ್ಧಾಂತಗಳಿದ್ದರೂ ಕೂಡ, ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಿಕೊಂಡು, ಶಾಂತಿಯುತವಾಗಿ ಸರ್ಕಾರಗಳನ್ನು ಬದಲಾಯಿಸಿಕೊಂಡು ಮುಂದುವರೆದಿದ್ದೇವೆ. ಇದು ಸಹ ಒಂದು ರೀತಿಯಲ್ಲಿ ವಚನಕಾರರು ಪ್ರತಿಪಾದಿಸಿದ ಎಲ್ಲರನ್ನು ಒಳಗೊಳ್ಳುವ ಮೌಲ್ಯ ಜಾರಿಗೆ ಬಂದಿದೆ.

ಆದರೆ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ಗಂಭೀರವಾದ ಮತ್ತು ಗುಣಾತ್ಮಕ ಚರ್ಚೆಗಳು ದಿನೇದಿನೇ ಕಡಿಮೆಯಾಗುತ್ತಿವೆ. ಅಸಹನೆ, ವಿಭಜನಶೀಲತೆ, ಭ್ರಷ್ಟಾಚಾರ, ಘರ್ಷಣೆಗಳು, ಭಿನ್ನಮತಕ್ಕೆ ಅಗೌರವ ತೋರುವುದು ಸಾಮಾನ್ಯ ಸಂಗತಿಗಳಾಗಿವೆ. ಹಲವು ಜನ ಪ್ರತಿನಿಧಿಗಳು ಬಳಸುವ ಭಾಷೆ ಸಮಾಜದಲ್ಲಿ ದ್ವೇಷ, ಅಸೂಯೆ ಮತ್ತು ಭೀತಿಯನ್ನು ಉಂಟುಮಾಡುವಂಥವುಗಳಾಗಿವೆ. ಉದಾಹರಣೆಗೆ ಜಾತ್ಯತೀತರು ಒಂದು ಅಪ್ಪನಿಗೆ ಹುಟ್ಟಿಲ್ಲ, ದಲಿತರು ಬೀದಿ ನಾಯಿಗಳು, ಹಿಂದೂ ಹೆಣ್ಣು ಮಕ್ಕಳನ್ನು ಮುಟ್ಟುವವರ ಕೈಕತ್ತರಿಸಿ, ನಾಲಿಗೆ ಸೀಳಿರಿ, ತಲೆಕಡಿಯಿರಿ, ಗುಂಡಿಕ್ಕಿ ಸಾಯಿಸಿ, ಕಳ್ಳರು, ದೇಶದ್ರೋಹಿ, ಇತ್ಯಾದಿಯಾಗಿ, ಇಂತಹ ಭಾಷೆ ಸಂಸದೀಯ ಪದ್ಧತಿಗೆ ಉಚಿತವಲ್ಲ. ಪ್ರಮಾಣ ಮಾಡಿ ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆಂದು ಅಧಿಕಾರಕ್ಕೆ ಬಂದು ಅದರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ.

ಗ್ರಾಮ ಪಂಚಾಯತಿಯಿಂದ ಹಿಡಿದು ಸಂಸತ್ತಿನವರೆಗೆ ನಡೆಯುವ ಚುನಾವಣೆಗಳು ಧರ್ಮ, ಜಾತಿ, ಹಣ ಮತ್ತು ಅಪರಾಧೀಕರಣದಂತಹ ಅನಿಷ್ಟಗಳ ಪ್ರಭಾವಕ್ಕೆ ಬಲಿಯಾಗಿವೆ. ಹೆಚ್ಚು ಹಣ ಹೊಂದಿರುವ ಮತ್ತು ಕ್ರಿಮಿನಲ್ ಕೇಸ್ ಘೋಷಿಸಿಕೊಂಡಿರುವ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸುತ್ತಿದ್ದು, ನಿಷ್ಠಾವಂತರು ಠೇವಣಿ ಕಳೆದುಕೊಳ್ಳುತ್ತಿದ್ದಾರೆ. ಹಣಬಲ ಮತ್ತು ಅಪರಾಧದ ಹಿನ್ನೆಲೆ ಇರುವವರು ಚುನಾವಣೆಯಲ್ಲಿ ಗೆಲ್ಲುವ ಪ್ರಮಾಣ ಹೆಚ್ಚುತ್ತಿದೆ.

14, 15, 16, ಮತ್ತು 17ನೇ ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳು ಅನುಕ್ರಮವಾಗಿ ಶೇ.24, ಶೇ.30, ಶೇ.34 ಮತ್ತು ಶೇ.43ರಷ್ಟು. ಈ ಕ್ರಿಮಿನಲ್ ಕೇಸುಗಳು ಕೊಲೆ, ಕೊಲೆ ಪ್ರಯತ್ನ, ಮಹಿಳೆಯರ ಅಪಹರಣ, ಅತ್ಯಾಚಾರ, ಕೋಮುಗಲಭೆ, ಹಣಕಾಸು ವಂಚನೆ, ಇತ್ಯಾದಿಗಳು. ಅದೇರೀತಿ 14, 15, 16 ಮತ್ತು 17ನೇ ಲೋಕಸಭೆಯಲ್ಲಿ ಅನುಕ್ರಮವಾಗಿ ಶೇ.30, ಶೇ.58, ಶೇ.82 ಮತ್ತು ಶೇ.88ರಷ್ಟು ಸಂಸದರು ಕೋಟ್ಯಾಧಿಪತಿಗಳು, ಸಂಸತ್ತಿನಲ್ಲಿ ನಿಷ್ಠರ, ಪರಿಣತರ, ಯೋಗ್ಯರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಭ್ರಷ್ಟರ, ಕ್ರಿಮಿನಲ್ ಕೇಸು ಹಾಕಿಸಿಕೊಂಡವರ, ರಾಜಕಾರಣಿಗಳ ಮಕ್ಕಳು, ಅವರ ಬಂಧುಗಳು, ಉದ್ಯಮಿಗಳು, ರಿಯಲ್‌ಎಸ್ಟೇಟ್ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಬರುತ್ತಿದ್ದಾರೆ.

ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡುವುದು ಮತ್ತು ಪಕ್ಷಾಂತರ ಮಾಡುವುದು ದೇಶವ್ಯಾಪಿಯಲ್ಲಿ ಹಬ್ಬಿರುವ ರಾಜಕೀಯ ವೈರಸ್, ಈ ಕೃತ್ಯದ ಹಿಂದೆ ಯಾವುದೇ ತಾತ್ವಿಕ ಕಾರಣವಾಗಲಿ ಅಥವಾ ಜನಹಿತವಾಗಲಿ ಇಲ್ಲವೆಂದು ಮೇಲ್ನೋಟಕ್ಕೆ ಕಾಣುತ್ತದೆ. ಇದು ಕೇವಲ ಹಣಕ್ಕಾಗಿ, ಅಧಿಕಾರಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ, ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾದಂಥ ಕಾನೂನುಗಳು ಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನಿನ ಜೊತೆಗೆ ನಮ್ಮ ಜನಪ್ರತಿನಿಧಿಗಳಿಗೆ ನೈತಿಕತೆ ಬೇಕು. ಇಂತಹ ದುಃಸ್ಥಿತಿಯಲ್ಲಿ 12ನೇ ಶತಮಾನದ ‘ಅನುಭವ ಮಂಟಪ’ ನಮಗೆ ದಾರಿದೀಪವಾಗಬೇಕು, ಜಾತಿ ಭೇದವಿಲ್ಲದ, ವರ್ಗ ಭೇದವಿಲ್ಲದ ಮತ್ತು ಲಿಂಗ ಭೇದವಿಲ್ಲದ 770 ಪ್ರತಿನಿಧಿಗಳು ಅನುಭವ ಮಂಟಪದ ಕಲಾಪಗಳಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ನೈತಿಕತೆಯನ್ನು, ಪಾರದರ್ಶಕತೆಯನ್ನು ಮತ್ತು ಜನಕಲ್ಯಾಣದ ಬದ್ಧತೆಯನ್ನು ಮೆರೆದವರು. ಅಂದಿನ ‘ಅನುಭವ ಮಂಟಪ’ ಇಂದು ನಮಗೆ ದಾರಿದೀಪವಾಗಲಿ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು