October 1, 2023 8:30 am

ಜಾತಿ ಅಸಮಾನತೆ ಮತ್ತು ಅಸ್ಪೃಶ್ಯತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಭಾರತದಲ್ಲಿ ಜಾತಿಗಳು ಯಾವ ರೀತಿ ಜನ್ಮತಾಳಿದವು ಎಂದು ಖಚಿತವಾಗಿ ಹೇಳುವುದು ಬಹಳ ಕಷ್ಟ. ಆದರೆ, ಜಾತಿಗಳು ಏಕೆ ಹುಟ್ಟಿದವು ಮತ್ತು ಏಕೆ ಉಳಿದಿವೆ ಎಂಬುದನ್ನು ತಿಳಿಯುವುದು ಕಷ್ಟವೇನಲ್ಲ. ಅನಾದಿ ಕಾಲದಲ್ಲಿ ಹೊರಗಿನಿಂದ ಬಂದವರು ಸ್ಥಳೀಯ ಜನಾಂಗದ ಮೇಲೆ ಯುದ್ಧ ಮಾಡಿ ಗೆದ್ದು ಹಿಡಿತ ಸಾಧಿಸಿದರು. ಅವರಲ್ಲಿ ಭಯ ಹುಟ್ಟಿಸಿ, ಕಷ್ಟದ ಹಾಗೂ ಕೊಳಕಿನ ಕೆಲಸಗಳಲ್ಲಿ ತೊಡಗಿಸಿದರು. ಈ ರೀತಿಯ ಒಂದು ವಿಧವಾದ ಕೆಲಸದ ವಿಭಜನೆಯನ್ನು ಮಾಡಿಕೊಂಡರು. ವಿದ್ಯೆ- ಬುದ್ಧಿಯ ಗುತ್ತಿಗೆದಾರರನ್ನಾಗಿ ಬ್ರಾಹ್ಮಣರನ್ನು, ಸಮುದಾಯದ ರಕ್ಷಣೆಗಾಗಿ ಕ್ಷತ್ರಿಯರನ್ನು, ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ನಡೆಸುವುದಕ್ಕೆ ವೈಶ್ಯರನ್ನು ನೇಮಿಸಿದರು. ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ಶೂದ್ರರನ್ನು ಅತ್ಯಂತ ಕಷ್ಟ ಮತ್ತು ಕೊಳಕಿನ ಕೆಲಸ ಮಾಡುವ ಗುಲಾಮರನ್ನಾಗಿ ಮಾಡಿದರು. ಈ ರೀತಿಯಾಗಿ ಶ್ರಮ ವಿಭಜನೆಯಿಂದ ಮೊದಲು ಮೂರು ವರ್ಣಗಳು ಆಳುವವರಾಗಿಯೂ ನಾಲ್ಕನೆಯವರು (ಶೂದ್ರರು) ಆಳಿಸಿಕೊಳ್ಳುವವರಾಗಿಯೂ ರೂಪುಗೊಂಡರು. ಇದಲ್ಲದೆ ಚಾತುರ್ವರ್ಣ್ಯದ ಹೊರಗೆ ಸಾಮಾಜಿಕ ವರ್ಗಗಳನ್ನು ನಿರ್ಮಿಸಲಾಗಿದೆ. ಅವುಗಳೆಂದರೆ: ಅಪರಾಧಿ ಬುಡಕಟ್ಟುಗಳು, ಆದಿವಾಸಿ ಬುಡಕಟ್ಟುಗಳು ಮತ್ತು ಅಸ್ಪೃಶ್ಯರು.

ಭಾರತದ ಮಾನವಶಾಸ್ತ್ರ ಸರ್ವೇಕ್ಷಣಾ ಇಲಾಖೆಯ ಅಧ್ಯಯನದ ಪ್ರಕಾರ ದೇಶದಲ್ಲಿ 4,635 ಜಾತಿಗಳು ಮತ್ತು ಉಪಜಾತಿಗಳು ಇವೆ. ಒಂದೊಂದು ಜಾತಿಗೆ ಒಂದೊಂದು ಕಸುಬು. ಈ ಕಸುಬನ್ನು ವಂಶ ಪಾರಂಪರ್ಯ ಮಾಡಲಾಗಿದೆ. ಜಾತಿಯನ್ನು ಬದಲಾಯಿಸುವಂತಿಲ್ಲ, ಕಸುಬನ್ನು ಬದಲಾಯಿಸುವಂತಿಲ್ಲ, ಜಾತಿ ಜಾತಿಯ ಮಧ್ಯೆ ಸಂಬಂಧ ಬೆಳೆಸುವಂತಿಲ್ಲ. ಅಷ್ಟೇ ಏಕೆ ಹೆಣಗಳನ್ನು ಒಂದೇ ಸ್ಮಶಾನದಲ್ಲಿ ಸುಡುವಂತಿಲ್ಲ ಅಥವಾ ಹೂಳುವಂತಿಲ್ಲ.

ಈ ಜಾತಿ ಆಧಾರಿತ ಅಸಮಾನತೆ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಅಸಮಾನತೆಗಳನ್ನು ಕಾಣಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಮೇಲ್ದಾತಿಗಳು, ಮೇಲ್ವರ್ಗಗಳು ಮತ್ತು ಕೆಳ ಜಾತಿಗಳು, ಕೆಳ ವರ್ಗಗಳು. ಹೀಗೆ ಜಾತಿ ಮತ್ತು ವರ್ಗ ಬೆರೆತುಹೋಗಿರುವ ಒಂದು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಭಾರತದಲ್ಲಿ ಕಾಣಬಹುದು.

ಜಾತಿ ಪದ್ಧತಿಯು ಸಾಮೂಹಿಕ ಚಟುವಟಿಕೆಯನ್ನು ನಿಷೇಧಿಸಿತು. ಭಾರತೀಯರು ಒಗ್ಗಟ್ಟಾಗಿ ಬಾಳುವುದನ್ನು ಜಾತಿ ಪದ್ಧತಿ ತಪ್ಪಿಸಿತು. ನಾವೀಗ ಕಾಣುವುದು ವೈಯಕ್ತಿಕ ಚಟುವಟಿಕೆಗಳೇ ಹೊರತು ಸಮಾಜದ ಒಟ್ಟಾರೆ ಚಟುವಟಿಕೆಯಲ್ಲ. ಜಾತಿ ಪದ್ಧತಿಯೆಂಬ ಸಮಾಜ ವಿರೋಧಿ ಅಂಶವು ಸಮಾಜವನ್ನು ಒಡೆದು ಹಾಕಿದ್ದು ಮಾತ್ರವಲ್ಲದೇ ಒಡೆದು ಹೋದ ಗುಂಪುಗಳು ತಮಗಾಗಿ ಮತ್ತು ತಮ್ಮ ಸ್ವಾರ್ಥಕ್ಕಾಗಿ ಸದಾ ಕಾದಾಡುವಂತೆ ಮಾಡಿದೆ. ಒಂದು ಗುಂಪನ್ನು ತುಳಿಯುವುದರ ಮೂಲಕ ಮತ್ತೊಂದು ಗುಂಪು ಅಸ್ತಿತ್ವದಲ್ಲಿರಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ ಜಾತಿ ಮತ್ತು ಜಾತಿ ಪ್ರಜ್ಞೆಯು ಸಮಾಜದ ಐಕ್ಯತೆಯನ್ನು ಅಸಾಧ್ಯವಾಗಿಸಿದೆ.

ಭಾರತ ದೇಶದಲ್ಲಿ ಜಾತಿ ವ್ಯವಸ್ಥೆಯ ರೂಪದಲ್ಲಿ ವರ್ಗ ಸಮಾಜ ನೆಲೆಗೊಂಡಿದೆ. ಜಾತಿ ವ್ಯವಸ್ಥೆಯನ್ನು ಧರ್ಮದೊಂದಿಗೆ ಬೆಸುಗೆಗೊಳಿಸಿ ಭಾರತ ದೇಶದಲ್ಲಿ ಶಾಶ್ವತಗೊಳಿಸಲಾಯಿತು. ಇಲ್ಲಿ ಒಂದು ವರ್ಗವು ಅನೈತಿಕವಾಗಿ ಲಾಭ ಪಡೆಯುವುದು, ಮತ್ತೊಂದು ವರ್ಗವು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವುದನ್ನು ನಿರಂತರ ನೀತಿಯನ್ನಾಗಿ ಮಾಡಲಾಯಿತು. ವಚನಕಾರರು ಜಾತಿ ಅಸಮಾನತೆಯ ಬೇರುಗಳು ಧರ್ಮದಲ್ಲಿ ಮತ್ತು ಶ್ರಮದಲ್ಲಿದೆ ಎಂಬ ಸತ್ಯವನ್ನು ಕಂಡುಕೊಂಡರು. ಎಲ್ಲಾ ರೀತಿಯ ಜಾತಿ ಅಸಮಾನತೆಯನ್ನು ತಿರಸ್ಕರಿಸಿದರು. ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು. ಶ್ರಮ ಜೀವಿಗಳನ್ನು ಒಟ್ಟುಗೂಡಿಸುವ ಮೂಲಕ ಜಾತಿಯನ್ನು ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡಿದರು. ಎಲ್ಲಾ ಧರ್ಮಗಳಲ್ಲಿ ಮತ್ತು ಜಾತಿಗಳಲ್ಲಿರುವ ಕಾಯಕ ಜೀವಿಗಳು ಒಂದೇ ಎಂದು ಸಾರಿದರು. ವಚನಕಾರರು ತಮ್ಮ ವಚನಗಳ ಮುಖಾಂತರ ಕಾಯಕಕ್ಕೆ ಮೇಲು ಕೀಳೆಂಬುದಿಲ್ಲವೆಂದು ಸಾರಿದರು. ಪ್ರತಿಯೊಬ್ಬರ ಕಾಯಕಕ್ಕೆ ಘನತೆ ಮತ್ತು ಗೌರವವನ್ನು ನೀಡುವುದರ ಮೂಲಕ ಜಾತಿ ವ್ಯವಸ್ಥೆಯನ್ನು ಧ್ವಂಸ ಮಾಡುವ ಪ್ರಯತ್ನ ಮಾಡಿದರು. ಜಾತಿ ವ್ಯವಸ್ಥೆ ಮಾನವ ನಿರ್ಮಿತ, ಅದು ದೈವ ಸೃಷ್ಟಿಯಲ್ಲವೆಂದು ಸಾರಿದರು.

ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?

ಹೊಲೆಯ ಹೊರಕೇರಿಯಲ್ಲಿರುವನು

ಊರೊಳಗಿಲ್ಲವೆ ಅಯ್ಯಾ, ಹೊಲೆಯರು?

ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೆ ಹೊಲೆಯ

ತಂದೆಗೆ ಬೈದವನೆ ಹೊಲೆಯ

ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ

ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ

ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ

ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ

ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ

ಲಿಂಗವ ಬಿಟ್ಟು ತಿರುಗುವವನೇ ಹೊಲೆಯ

ಧರ್ಮವ ಮಾಡದವನೇ ಹೊಲೆಯ

ಬಸವನ ಇರಿದವನೇ ಹೊಲೆಯ

ಲಿಂಗಪೂಜೆಯ ಮಾಡದವನೇ ಹೊಲೆಯ

ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ

ಹೊರಕೇರಿಯವರಿಗೆ ಹೊಲೆಯರೆನಬಹುದೆ?

ಅಂಬಿಗರ ಚೌಡಯ್ಯ ಈ ವಚನದ ಮೂಲಕ ಕೇವಲ ಹುಟ್ಟಿನಿಂದ ಒಬ್ಬ ವ್ಯಕ್ತಿ ದೊಡ್ಡವನಾಗಲಾರ. ಆತ ತನ್ನ ಕಾಯಕದಿಂದ ಮತ್ತು ಉತ್ತಮ ನಡವಳಿಕೆಯಿಂದ ಒಳ್ಳೆಯವನಾಗುತ್ತಾನೆ ಎಂಬ ಸಂದೇಶವನ್ನು ಈ ವಚನದ ಮೂಲಕ ನೀಡಿದ್ದಾರೆ.

ಅಪ್ಪನು ನಮ್ಮ ಮಾದರ ಚೆನ್ನಯ್ಯ;

ಬೊಪ್ಪನು ನಮ್ಮ ಡೋಹರ ಕಕ್ಕಯ್ಯ;

ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,

ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ;

ಎನ್ನನೇತಕ್ಕರಿಯಿರಿ ಕೂಡಲಸಂಗಯ್ಯಾ?

ಬಸವಣ್ಣ ಈ ವಚನದಲ್ಲಿ ಅಸ್ಪೃಶ್ಯ ಜಾತಿಯವನಾದ ಮಾದರ ಚೆನ್ನಯ್ಯನನ್ನು ತನ್ನ ತಂದೆಯೆಂದು ಕರೆಯುತ್ತಾನೆ. ಹಾಗೆಯೇ ಚರ್ಮ ಹದಮಾಡುವ ಕಕ್ಕಯ್ಯನನ್ನು ತನ್ನ

ದೊಡ್ಡಪ್ಪನನ್ನಾಗಿ ಪರಿಗಣಿಸುತ್ತಾನೆ.

ಕೊಲುವನೇ ಮಾದಿಗ ಹೊಲಸು ತಿಂಬವನೆ ಹೊಲೆಯ

ಕುಲವೇನೋ ಅಂವಂದಿಗನ ಕುಲವೇನೋ?

ಸಕಲ ಜೀವಾತ್ಮರಿಗೆ ಲೇಸನೇ ಬಯಸುವ

ನಮ್ಮ ಕೂಡಲಸಂಗನ ಶರಣರೇ ಕುಲಜರು

ಈ ರೀತಿಯಾಗಿ ಬಸವಣ್ಣ ಕುಲಮದವನ್ನು ಅಳಿಸಲು ಯತ್ನಿಸಿದರಲ್ಲದೆ, ಸಮಾಜದಲ್ಲಿ ಬಹುಕಾಲದಿಂದ ಬೇರೂರಿದ ಅಸ್ಪೃಶ್ಯತೆಯನ್ನಳಿಸಲು ಯತ್ನಿಸಿದರು.

ಬ್ರಾಹ್ಮಣ ಭಕ್ತರಾದರೇನಯ್ಯಾ? ಸೂತಕ ಪಾತಕಗಳ ಬಿಡ

ಕ್ಷತ್ರಿಯ ಭಕ್ತನಾದರೇನಯ್ಯಾ? ಕ್ರೋಧವ ಬಿಡ

ವೈಶ್ಯ ಭಕ್ತನಾದರೇನಯ್ಯಾ? ಕಪಟವ ಬಿಡ

ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿಯೆಂಬುದ ಬಿಡ

ಇಂತಿ ಜಾತಿಡಂಭಕರ ಮೆಚ್ಚುವನೇ ಕೂಡಲಚೆನ್ನಸಂಗಮದೇವ

ಚೆನ್ನ ಬಸವಣ್ಣನವರು ಈ ವಚನದಲ್ಲಿ ಅಂತರಂಗದಲ್ಲಿ ಜಾತಿಯನ್ನು ಬಿಡದೇ ಕೇವಲ ಭಕ್ತಿಯಿಂದ ಜಾತಿವ್ಯವಸ್ಥೆ ಹೋಗುವುದಿಲ್ಲ ಎಂಬುದನ್ನು ಸಾರಿದ್ದಾರೆ.

ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ

ದೇವಾ ನೀನೊಲಿದವನ ಸ್ವಾಮಿ ನೀ ಹಿಡಿದವನ ಕುಲವೇನೋ!

ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,

ನಿಮ್ಮಿಂದಧಿಕ ಕೂಡಲಸಂಗಮದೇವಾ.

ಜಾತಿವ್ಯವಸ್ಥೆಯಲ್ಲಿ ಯಾವ ಜನರನ್ನು ಕಟ್ಟಕಡೆಯಲ್ಲಿ ನಿಲ್ಲಿಸಿ ಅವಮಾನಿಸಿತೋ ಅಂತಹವರನ್ನು ದೇವರಿಗಿಂತ ಶ್ರೇಷ್ಠರಂತೆ ಕಾಣುವ ವಚನದ ಮೂಲಕ ಬಸವಣ್ಣನವರು ಒಂದು ಹೊಸ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕುತ್ತಾರೆ. ಅಂತಹ ಉದಾತ್ತ ಚಿಂತನೆಗಳ ವಚನಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ.

ನೆಲವೊಂದೆ-ಹೊಲಗೇರಿ ಶಿವಾಲಯಕ್ಕೆ,

ಜಲವೊಂದೆ-ಶೌಚಾಚಮನಕ್ಕೆ,

ಕುಲವೊಂದೆ ತನ್ನ ತಾನರಿದವಂಗೆ,

ಫಲವೊಂದೆ ಷಡುದರುಶನ ಮುಕ್ತಿಗೆ,

ನಿಲುವೊಂದೆ ಕೂಡಲಸಂಗಮದೇವಾ ನಿಮ್ಮನ್ನರಿದವಂಗೆ

ಈ ವಚನದಲ್ಲಿ ಬಸವಣ್ಣನವರು ನೇರವಾಗಿ ಮತ್ತು ಅತ್ಯಂತ ಧೈರ್ಯವಾಗಿ ಸಮಾನತೆಯ ಪ್ರಣಾಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ ಹಾಗೂ ಪವಿತ್ರ ಅಪವಿತ್ರತೆಗಳ ನಡುವಿನ ಭಿನ್ನತೆಯು ಅರ್ಥಹೀನ ಎಂಬುದನ್ನು ‘ಜಲವೊಂದೆ ಶೌಚಾಚಮನಕ್ಕೆ’ ಎಂಬ ಸಂದೇಶದ ಮೂಲಕ ಹೇಳುತ್ತಿದ್ದಾರೆ.

ವ್ಯಾಸ ಬೋಯಿತಿಯ ಮಗ,

ಮಾರ್ಕಂಡೇಯ ಮಾತಂಗಿಯ ಮಗ,

ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿ ಭೋ

ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ

ಕೌಂಡಿಲ್ಯನೆಂಬ ಋಷಿ ಮೂರು ಭುವನವರಿಯೆ ನಾವಿದ ಕಾಣೀಭೋ

ನಮ್ಮ ಕೂಡಲಸಂಗನ ವಚನವೆಂತೆಂದುದು

ಶ್ವಪಚೋಪಿಯಾದರೇನು? ಶಿವಭಕ್ತನೇ ಕುಲಜ ಭೋ

ವೃತ್ತಿ ಸಂಬಂಧವಾಗಿ ಅಸಮಾನತೆಯನ್ನು ಪಾಲಿಸುವುದನ್ನು ಇಲ್ಲಿ ಬಸವಣ್ಣನವರು ನಿರಾಕರಿಸುತ್ತಿದ್ದಾರೆ. ಶಿವಭಕ್ತರಾದವರೆಲ್ಲ ಒಂದು ಎಂಬ ಸಂದೇಶವನ್ನು ಇಲ್ಲಿ ಬಸವಣ್ಣ ನೀಡುತ್ತಿದ್ದಾನೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ

ಜಲ-ಬಿಂದುವಿನ ವ್ಯವಹಾರ ಒಂದೆ

  • – –

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ

ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ,

ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?

ಇದು ಕಾರಣ ಕೂಡಲಸಂಗಮದೇವಾ,

ಲಿಂಗಸ್ಥಳವನರಿದವನೆ ಕುಲಜನು

ಇದೊಂದು ವೈಚಾರಿಕ ವಚನ. ‘ಅಯೋನಿಜ’ ಸಿದ್ಧಾಂತವನ್ನು ಅಲ್ಲಗಳೆಯುತ್ತಾ ಬಸವಣ್ಣ ‘ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ’ ಎಂಬ ಪ್ರಶ್ನೆ ಹಾಕಿ ಮನುಷ್ಯರೆಲ್ಲರೂ ‘ಯೋನಿಜರು’ ಎಂಬ ಸಾರ್ವತ್ರಿಕ ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸುತ್ತಿದ್ದಾರೆ.

ಶ್ವಪಚನಾದರೇನು? ಲಿಂಗಭಕ್ತನೆ ಕುಲಜನು

ನಂಬಿ, ನಂಬದಿದ್ದಡೆ ಸಂದೇಹಿ ನೋಡಾ

ಕಟ್ಟಿದಡೇನು? ಮುಟ್ಟಿದಡೇನು? ಹೂಸಿದಡೇನು? ಮನಮೆಚ್ಚದನ್ನಕ್ಕ?

ಭಾವ ಶುದ್ಧವಿಲ್ಲದವನಿಗೆ ಭಕ್ತಿ ನೆಲೆಗೊಳ್ಳದು

ಕೂಡಲಸಂಗಮದೇವ ಒಲಿದವಂಗಲ್ಲದೆ.

ಈ ವಚನದಲ್ಲಿ ಬಸವಣ್ಣನವರು ‘ಕಟ್ಟಿದರೇನು, ಮುಟ್ಟಿದರೇನು’ ಎಂಬುದರ ಮೂಲಕ ಅಸ್ಪೃಶ್ಯತೆಯನ್ನು ನಿರಾಕರಿಸುತ್ತಿದ್ದಾರೆ.

ಸೆಟ್ಟಿಯೆಂನೆ ಸಿರಿಯಾಳನ?

ಮಡಿವಾಳನೆಂಬನೆ ಮಾಚಯ್ಯನ?

ಡೋಹರನೆಂಬನೆ ಕಕ್ಕಯ್ಯನ?

ಮಾದರನೆಂಬನೆ ಚೆನ್ನಯ್ಯನ?

ಆನು ಹಾರುವನೆಂದಡೆ ಕೂಡಲಸಂಗಮದೇವ ನಗುವನಯ್ಯ

ಜಾತಿ-ಜಾತಿಗಳ ನಡುವಿನ ಅಸಮಾನತೆ ನೆಲೆಗಳನ್ನು ಬಸವಣ್ಣ ಇಲ್ಲಿ ಅಲ್ಲಗಳೆಯುತ್ತಿದ್ದಾನೆ. ವೃತ್ತಿ ಮತ್ತು ಜಾತಿಗಳ ನಡುವಣ ಸಂಬಂಧವನ್ನು ಇಲ್ಲಿ ಅಲ್ಲಗಳೆಯಲಾಗುತ್ತಿದೆ.

ಚೆನ್ನಯ್ಯನ ಮನೆಯ ದಾಸನ ಮಗನು

ಕಕ್ಕಯ್ಯನ ಮನೆಯ ದಾಸಿಯ ಮಗಳು

ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು

ಇವರಿಬ್ಬರಿಗೆ ಹುಟ್ಟಿದ ಮಗ ನಾನು,

ಕೂಡಲಸಂಗಮದೇವ ಸಾಕ್ಷಿಯಾಗಿ,

ಈ ವಚನವು ಬಸವಣ್ಣನವರು ಡಿಕ್ಲಾಸಿಫಿಕೇಶನ್‌ಗೆ ನಡೆಸಿದ ಪ್ರಯತ್ನದ ವಿವರವನ್ನು ನೀಡುತ್ತದೆ. ತನ್ನನ್ನು ತಾನು ಮಾದಾರ ಚನ್ನಯ್ಯನ, ಡೋಹರ ಕಕ್ಕಯ್ಯನ ಸಂತತಿಯಲ್ಲಿ ಗುರುತಿಸಿಕೊಳ್ಳುವ ಒಂದು ಮಹತ್ವದ ಕ್ರಮವನ್ನು ಇದು ಸೂಚಿಸುತ್ತದೆ.

ಉಳ್ಳವರು ಶಿವಾಲಯ ಮಾಡುವರು

ನಾನೇನ ಮಾಡುವ ಬಡವನಯ್ಯ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಸವಯ್ಯ

ಕೂಡಲಸಂಗಮದೇವ ಕೇಳಯ್ಯಾ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಬಸವಣ್ಣನ ಈ ಪ್ರಸಿದ್ದ ವಚನವು ಆರ್ಥಿಕ ಅಸಮಾನತೆಯ ಜೊತೆಗೆ ‘ಯಾವುದು ಚರವಾಗಿರುತ್ತದೊ (ಜಂಗಮ) ಅದು ಬದುಕುತ್ತದೆ ಮತ್ತು ಯಾವುದು ಸ್ಥಿರವಾಗಿರುತ್ತದೋ (ಸ್ಥಾವರ) ಅದು ನಶಿಸಿ ಹೋಗುತ್ತದೆ’ ಎಂಬ ಜಾಗತಿಕ ಸತ್ಯವನ್ನು ಪ್ರತಿಪಾದಿಸುತ್ತಿದೆ. ‘ಮಾಡುವುದಕ್ಕಿಂತ’ ಬಸವಾದಿ ಶರಣರಿಗೆ ‘ಆಗುವುದು’ ಮುಖ್ಯ. ದೇವಾಲಯಗಳಿಗೆ ಅಸ್ಪಶ್ಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಅಸ್ಪಶ್ಯರ ದೇಹಕ್ಕೆ ದೇವಾಲಯದ ಸ್ವರೂಪವನ್ನು ನೀಡಿ ತನ್ನ ದೇಹದಲ್ಲಿ ದೇವರನ್ನು ತಂದು ನಿಲ್ಲಿಸುವ ಕೆಲಸ ಈ ವಚನದಲ್ಲಿ ಬಸವಣ್ಣನವರು ಮಾಡಿದ್ದಾರೆ.

ಜಾತಿವಿಡಿದು ನೆನೆವರೇ ನಮ್ಮ ನೀತಿಯುಳ್ಳ ಶರಣರ?

ಕುಲವ ಛಲವ ನೀತಿಗಳೆದು

ಪರಮನೈದಿ ಹೋಗುವಾಗ

ಕೀಳು ಮೇಲಿಲ್ಲ ನಮ್ಮ ಶೀಲವಂತ ಭಕ್ತರಲ್ಲಿ

ಕೀಳಿಂಗಲ್ಲದೆ ಹಯನು ಕರೆಯದು

ಶರಣರಿಗೆ ಜಾತಿ ಸೋಂಕಿಲ್ಲ ಎಂಬುದನ್ನು ಚೆನ್ನಬಸವಣ್ಣನವರ ಈ ವಚನ ಹೇಳುತ್ತಿದೆ. ಶಿವ ಭಕ್ತರಲ್ಲಿ ಮೇಲು-ಕೀಳಿಲ್ಲ ಎಂಬ ಸಂದೇಶವನ್ನು ಇದು ನೀಡುತ್ತಿದೆ. ‘ಕೀಳಿಂಗಲ್ಲದೆ ಹಯನು ಕರೆಯದು’ ಎಂಬ ನಿದರ್ಶನದ ಮೂಲಕ ಸಮಾನತೆಯ ಆಶಯವನ್ನು ವಚನ ವ್ಯಕ್ತಪಡಿಸುತ್ತಿದೆ.

ಶೀಲವಂತನಾದಡೆ ಜಾತಿಯ ಬಿಡಬೇಕು

ಶಿವಜ್ಞಾನಿಯಾದಡೆ ಸಮಯವ ಬಿಡಬೇಕು

ಹಿಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ

ನಿಭ್ರಾಂತನಾದ ಶರಣಂಗೆ ಅಮ್ಮುಗೇಶ್ವರ

ಜಾತಿ ಮತ್ತು ಜಾತಿ ಪಾವಿತ್ರ್ಯತೆಯನ್ನು ಆಚರಿಸುವವರು ಭ್ರಾಂತಿಗೆ ಒಳಗಾಗಿರುತ್ತಾರೆ. ಇವರಿಗೆ ಅಮುಗೇಶ್ವರ ಒಲಿಯುವುದಿಲ್ಲ. ‘ನಿಭ್ರಾಂತರಿಗೆ ಒಲಿಯುತ್ತಾನೆ’ ಎಂಬ ಸಂದೇಶವನ್ನು ಅಮುಗೆ ರಾಯಮ್ಮ ಇಲ್ಲಿ ನೀಡುತ್ತಿದ್ದಾಳೆ.

ಜಾತಿಭ್ರಮೆ ನೀತಿಭ್ರಮೆ ಎಂಬ ಕರ್ಮಂಗಳನು

ಘಾತಿಸಿ ಕಳೆಯಬಲ್ಲಡಾತ ಯೋಗಿ

ಕ್ಷೇತ್ರಭ್ರಮೆ ತೀರ್ಥಭ್ರಮೆ, ಪಾಷಾಣಭ್ರಮೆ ಎಂಬ ಕರ್ಮಂಗಳನು

ನಿಃಕರಿಸಿ ಕಲೆಯಬಲ್ಲಡಾತ ಯೋಗಿ

ಲೋಕಕ್ಕಂಜಿ ಲೌಕಿಕವ ಮರೆಗೊಂಡು

ನಡೆವಾತ ತೂತಯೋಗಿ

ಎಂದಾತನಂಬಿಗ ಚೌಡಯ್ಯ

ಜಾತಿ ಭ್ರಮೆ ಮತ್ತು ನೀತಿ ಭ್ರಮೆಗಳನ್ನು ಮೀರಿದವರು ಯೋಗಿಗಳು, ಕ್ಷೇತ್ರ ಭ್ರಮೆ, ತೀರ್ಥ ಭ್ರಮೆ ಮತ್ತು ಪಾಷಾಣ ಭ್ರಮೆಗಳನ್ನು ತೊರೆದವರು ಯೋಗಿಗಳು ಎಂಬುದನ್ನು ಪ್ರತಿಪಾದಿಸುತ್ತಾ ಅಂಬಿಗರ ಚೌಡಯ್ಯನವರು ಲೋಕಕ್ಕಂಜಿ ನಡೆವವರನ್ನು ‘ತೂತಯೋಗಿ’ಗಳು ಎಂದು ಮೂದಲಿಸುತ್ತಾರೆ. ವಚನ ವ್ಯವಸ್ಥೆಯಲ್ಲಿ ತೀರ್ಥಯಾತ್ರೆಗೆ ಸ್ಥಾನವಿಲ್ಲ.

ಕುರಿ ಕೋಳಿ ಕಿರು ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು

ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು

ಅವರೆಂತು ಕೀಳು ಜಾತಿಯಾದರು, ಜಾತಿಗಳ ನೀವೇಕೆ ಕೀಳಾಗಿರೊ?

ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು

ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣ ಶೋಭಿತವಾಯಿತು

ಅದೆಂತೆಂದಡೆ ಸಿದ್ಧಲಿಕೆಯಾಯಿತು ಸಗ್ಗಳೆಯಾಯಿತು

ಸಿದ್ಧಲಿಕೆಯ ತುಪ್ಪವನ್ನು ಸಗ್ಗಳೆಯ ನೀರನ್ನು ಶುದ್ಧವೆಂದು ಕುಡಿವ

ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ

ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ

ಕಾಳವ್ವ ದಲಿತ ವಚನಕಾರ್ತಿ. ತನ್ನ ಬದುಕಿನ ಅನುಭವವನ್ನೇ ನೆಲೆಯಾಗಿಟ್ಟುಕೊಂಡು ಮಾಂಸಾಹಾರದ ಬಗೆಗಿನ ವಿಕೃತಿಯನ್ನು ಇಲ್ಲಿ ಅವಳು ಹೀಗಳೆಯುತ್ತಿದ್ದಾಳೆ. ಆಹಾರ ಪದ್ಧತಿಯ ಮೇಲೆ ಕೀಳು ಜಾತಿ-ಮೇಲು ಜಾತಿ ಎಂಬ ಶ್ರೇಣೀಕರಣದ ಆಚರಣೆಯನ್ನು ಕಾಳವ್ವೆಯು ಇಲ್ಲಿ ಅಲ್ಲಗಳೆಯುತ್ತಿದ್ದಾಳೆ. ಈ ವಚನ ಸಂದೇಶದ ಸಮಕಾಲೀನ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ.

ಸಾರಾಂಶ

1. ವರ್ಣ ಆಧಾರಿತ ಜಾತಿ ವ್ಯವಸ್ಥೆಯನ್ನು ಮತ್ತು ಜಾತಿ ಅಸಮಾನತೆಯನ್ನು ತಿರಸ್ಕರಿಸಿದರು.

2. ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು.

3. ಮೇಲ್ಜಾತಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ಒಬ್ಬ ವ್ಯಕ್ತಿ ದೊಡ್ಡವನಾಗುವುದಿಲ್ಲ.

4. ಒಬ್ಬ ವ್ಯಕ್ತಿ ತನ್ನ ಕಾಯಕದಿಂದ ಮತ್ತು ನಡವಳಿಕೆಯಿಂದ ಮಾತ್ರ ಒಳ್ಳೆಯವನಾಗುತ್ತಾನೆ.

5. ಮೇಲ್ಜಾತಿಯ ಕುಲಮದವನ್ನು ಖಂಡಿಸಿದರು.

6. ಯಾವುದೇ ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲವೆಂದು ಸಾರಿದರು.

7. ಜಾತಿ ವ್ಯವಸ್ಥೆಯ ಕಟ್ಟಕಡೆಯಲ್ಲಿ ನಿಲ್ಲಿಸಿ ಅವಮಾನಿಸಿದವರಲ್ಲಿ ದೇವರನ್ನು ಕಂಡು ಗೌರವಿಸಿದರು.

8. ದೇವಾಲಯ ಪ್ರವೇಶವನ್ನು ನಿರಾಕರಿಸಿದ ಜನರ ದೇಹವನ್ನೇ ದೇವಾಲಯವಾಗಿ ಮಾಡಿದರು.

9. ಅಂತರಂಗದಲ್ಲಿ ಜಾತಿಯನ್ನು ಬಿಡದೆ ಬಹಿರಂಗದ ಭಕ್ತಿಯಿಂದ ಜಾತಿ ವ್ಯವಸ್ಥೆ ಹೋಗುವುದಿಲ್ಲವೆಂದರು.

10. ಶ್ರಮಿಕರನ್ನು ಧರ್ಮ ಆಧಾರಿತ ಜಾತಿ ವ್ಯವಸ್ಥೆಯಿಂದ ಬೇರ್ಪಡಿಸುವ ಪ್ರಯತ್ನ ಮಾಡಿದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು