October 1, 2023 8:16 am

ಸಂವಿಧಾನದಲ್ಲಿ ಜಾತಿ ಮತ್ತು ಅಸ್ಪೃಶ್ಯತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಕೆಳಸ್ತರದವರು ಎಂದು ಕರೆಸಿಕೊಳ್ಳುವ ಜನ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಇದ್ದರು. ರೋಮನ್ನರಲ್ಲಿ ಗುಲಾಮರು, ಸ್ಪಾರ್ಟನ್ನರಲ್ಲಿ ಜೀತದಾಳುಗಳು, ಬ್ರಿಟಿಷರಲ್ಲಿ ನೀಚ ವೃತ್ತಿಯವರು, ಅಮೇರಿಕಾದಲ್ಲಿ ನೀಗೋಗಳು ಇದ್ದರು. ಹೀಗೆಯೇ ಹಿಂದೂಸ್ಥಾನದಲ್ಲಿ ಅಸ್ಪೃಶ್ಯರಿದ್ದಾರೆ. ಆದರೆ, ಉಳಿದವರಾರಿಗೂ ಅಸ್ಪಶ್ಯರಿಗೆ ಬಂದಂತಹ ದುರ್ಗತಿ ಬಂದಿರಲಿಲ್ಲ. ಗುಲಾಮಗಿರಿ, ಜೀತಪದ್ಧತಿ ಇವೆಲ್ಲ ಅದೃಶ್ಯವಾದವು. ಆದರೆ, ಅಸ್ಪಶ್ಯತೆ ಮಾತ್ರ ಇನ್ನೂ ಉಳಿದೇ ಇದೆ.

ಜಾತಿ ಅಸಮಾನತೆಯ ವಿರುದ್ಧ ಬುದ್ಧ, ಬಸವ, ಭಕ್ತಿಪಂಥ, ದಾಸಪಂಥದವರು ಬಹುವಾಗಿ ಪ್ರತಿಭಟಿಸಿದರು. ಎಂ.ಜಿ. ರಾನಡೆ, ರಾಜಾರಾಮ್ ಮೋಹನ್‌ರಾಯ್, ಜ್ಯೋತಿ ಫುಲೆ, ಪೆರಿಯಾರ್, ಶ್ರೀನಾರಾಯಣಗುರು, ಅಂಬೇಡ್ಕರ್, ಮಹಾತ್ಮ ಗಾಂಧಿ ಇತ್ಯಾದಿಯಾಗಿ ಅನೇಕ ಮಹನೀಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ನಮ್ಮ ಸಂವಿಧಾನದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ನಿವಾರಣೆಗೆ ಹಾಗೂ ಅಸ್ಪೃಶ್ಯರ ವಿಮೋಚನೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ ಮುಖ್ಯವಾದದ್ದು ಪ್ರಸ್ತಾವನೆ. ಅದು ಈ ರೀತಿ ಇದೆ:

“ಭಾರತದ ಜನತೆಯಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ; ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ”

ಭಾರತದ ಸರ್ವೋಚ್ಛ ನ್ಯಾಯಾಲಯ “ಪ್ರಸ್ತಾವನೆಯು ಸಂವಿಧಾನ ರಚನಾಕಾರರ ಮನಸ್ಥಿತಿಯನ್ನು ತಿಳಿಯಲು ಇರುವ ಕೀಲಿ ಕೈ” ಎಂದು ಅಭಿಪ್ರಾಯಪಟ್ಟಿದೆ. ಈ ಪ್ರಸ್ತಾವನೆಯ ಮೂಲಕ ತಿಳಿಯಪಡಿಸುವ ತತ್ವಗಳೆಂದರೆ, ಜನರೇ ಅಧಿಕಾರದ ಮೂಲ. ಭಾರತ ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ. ಅದೊಂದು ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದ ಗಣರಾಜ್ಯ. ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು ನಮ್ಮ ಗುರಿ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ (ಶ್ರದ್ಧೆ) ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡುವುದು, ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸ್ಥಾನಮಾನವನ್ನು ಕಲ್ಪಿಸುವುದು. ವ್ಯಕ್ತಿಗೌರವ ಮತ್ತು ಸಹೋದರತೆಯನ್ನು ಬೆಳೆಸುವುದು; ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ.

ಪ್ರಸ್ತಾವನೆಯಲ್ಲಿ ಅಡಕವಾಗಿರುವ ನಿಯಮಗಳ ಬಗ್ಗೆ ಭಾರತ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್‌ರವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ:

“ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಬೇರ್ಪಡಿಸಿ ಅರ್ಥೈಸಬಾರದು. ಬೇರೆಬೇರೆ ಮಾಡಿ ಅರ್ಥೈಸಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಹಾಳುಗೆಡುವುತ್ತದೆ, ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ, ಸಮಾನತೆಯನ್ನು ಸ್ವಾತಂತ್ರ್ಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಮತ್ತು ಸಮಾನತೆಯನ್ನು ಭ್ರಾತೃತ್ವದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಸಮಾನತೆ ಇದ್ದು ಸ್ವಾತಂತ್ರ್ಯ ಇಲ್ಲದಿದ್ದರೆ ಕೆಲವರು ಹಲವರ ಮೇಲೆ ಮೇಲುಗೈ ಸಾಧಿಸಲು ಅನುವು ಮಾಡಿಕೊಡುತ್ತದೆ. ಸಮಾನತೆ ಇಲ್ಲದ ಸ್ವಾತಂತ್ರ್ಯ ವ್ಯಕ್ತಿಯ ಪರಿವರ್ತನಾ ಶಕ್ತಿಯನ್ನೇ ಕೊಲ್ಲುತ್ತದೆ.”

ಅನುಚ್ಛೇದ 14 – ಭಾರತ ರಾಜ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೆ ಕಾನೂನಿನ ಸಮಾನತೆಯನ್ನು ಅಥವಾ ಕಾನೂನಿನ ಸಮಾನ ರಕ್ಷಣೆಯನ್ನು ರಾಜ್ಯ ನಿರಾಕರಿಸುವಂತಿಲ್ಲ.

ಅನುಚ್ಛೇದ 15ರಲ್ಲಿ ಸರ್ಕಾರವು ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ, ಇವುಗಳ ಆಧಾರದ ಮೇಲಿನ ತಾರತಮ್ಯ ತಡೆ ಹಕ್ಕು: ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ, ಇವುಗಳಲ್ಲಿ ಯಾವುದಾದರೊಂದರ ಆಧಾರದ ಮೇಲೆ ಮಾತ್ರ ಯಾವುದೇ ನಾಗರಿಕನು (ಪೌರನು) – (ಅ) ಅಂಗಡಿಗಳು, ಸಾರ್ವಜನಿಕ ಉಪಹಾರ ಗೃಹ, ಹೊಟೇಲು ಮತ್ತು ಸಾರ್ವಜನಿಕ ಮನೋರಂಜನಾ ಸ್ಥಳ – ಇವುಗಳಿಗೆ ಪ್ರವೇಶಿಸುವ ಸಂಬಂಧದಲ್ಲಿ; ಅಥವಾ (ಆ) ಸಾರ್ವಜನಿಕರ ಉಪಯೋಗಕ್ಕಾಗಿರುವ ಬಾವಿ, ಕೆರೆ, ಸ್ನಾನಘಟ್ಟ, ರಸ್ತೆ, ಸಾರ್ವಜನಿಕರ ಉಪಯೋಗಕ್ಕಿರುವ ಸ್ಥಳ ಮುಂತಾದವುಗಳನ್ನು ಉಪಯೋಗಿಸುವ ಸಂಬಂಧದಲ್ಲಿ; ಆತನಿಗೆ ಯಾವುದೇ ನಿರ್ಬಂಧವನ್ನು ಅಥವಾ ಷರತ್ತನ್ನು ವಿಧಿಸುವಂತಿಲ್ಲ. ಆದಾಗ್ಯೂ, ಮಹಿಳೆ ಮತ್ತು ಮಕ್ಕಳ ಸಂಬಂಧವಾಗಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ನಾಗರಿಕರ ಏಳಿಗೆಗಾಗಿ ರಾಜ್ಯವು ವಿಶೇಷ ಕಾನೂನುಗಳನ್ನು ಜಾರಿಗೆ ತರಬಹುದು.

ಅನುಚ್ಛೇದ 16ರಲ್ಲಿ ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶದ ಹಕ್ಕು: ರಾಜ್ಯದ ಅಧೀನದಲ್ಲಿಯ ಯಾವುದೇ ಸೇವೆಗೆ ಸಂಬಂಧಿಸಿದ ಅಥವಾ ಯಾವುದೇ ಹುದ್ದೆಗೆ ನೇಮಕ ಮಾಡುವ ವಿಚಾರದಲ್ಲಿ ಭಾರತದ ಎಲ್ಲಾ ನಾಗರಿಕರಿಗೆ ಸಮಾನವಾದ ಅವಕಾಶವಿರತಕ್ಕದ್ದು ಮತ್ತು ಈ ಸಮಾನ ಅವಕಾಶವನ್ನು ಯಾವುದೇ ನಾಗರಿಕನಿಗೆ ಆತನ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ, ವಾಸಸ್ಥಳ – ಇವುಗಳಲ್ಲಿ ಯಾವುದಾದರೊಂದರ ಆಧಾರದ ಮೇಲೆ ಮಾತ್ರ ನಿರಾಕರಿಸುವಂತಿಲ್ಲ.

ಆದಾಗ್ಯೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದ ನಾಗರಿಕರ ಸಂಬಂಧವಾಗಿ ಯಾವುದೇ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ಮೀಸಲಾತಿಯನ್ನು ಕಲ್ಪಿಸುವ ಅಧಿಕಾರ ಸಂಸತ್ತಿಗಿರುತ್ತದೆ.

ಅನುಚ್ಚೇದ-17ರಲ್ಲಿ ಅಸ್ಪೃಶ್ಯತೆ ಆಚರಣೆಯ ವಿರುದ್ಧದ ಹಕ್ಕು – ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಲಾಗಿರುತ್ತದೆ. ಯಾವುದೇ ನಾಗರಿಕನ ವಿರುದ್ಧ ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ. ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ.

ಅನುಚ್ಛೇದ 21ರಲ್ಲಿ ಕಾನೂನಿನ ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾವುದೇ ವ್ಯಕ್ತಿಯ ಜೀವನವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ.

ಅನುಚ್ಛೇದ 21 ‘ಎ’ರಲ್ಲಿ ರಾಜ್ಯವು, ಕಾನೂನಿನ ಮೂಲಕ ತಾನು ನಿರ್ಧರಿಸಬಹುದಾದಂಥ ರೀತಿಯಲ್ಲಿ 6ರಿಂದ 14 ವರ್ಷಗಳ ವಯಸ್ಸಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು.

ಅನುಚ್ಛೇದ – 23ರಲ್ಲಿ (1) ಮಾನವ ದುರ್ವ್ಯವಹಾರವನ್ನು ಮತ್ತು ಅದೇ ಸ್ವರೂಪದ ಇತರ ಬಲಾತ್ಕಾರದ ದುಡಿಮೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಉಪಬಂಧದ ಯಾವುದೇ ಉಲ್ಲಂಘನೆಯು ಕಾನೂನಿಗೆ ಅನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು. (2) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಸಾರ್ವಜನಿಕ ಉದ್ದೇಶಗಳಿಗಾಗಿ ರಾಜ್ಯವು ಕಡ್ಡಾಯ ಸೇವೆಯನ್ನು ವಿಧಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ಅಂಥ ಸೇವೆಯನ್ನು ವಿಧಿಸುವಾಗ ರಾಜ್ಯವು ಧರ್ಮ, ಮೂಲವಂಶ, ಜಾತಿ ಅಥವಾ ವರ್ಗದ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆಯೂ ಯಾವುದೇ ರೀತಿಯ ತಾರತಮ್ಯ ಮಾಡತಕ್ಕದ್ದಲ್ಲ.

ಅನುಚ್ಛೇದ 24ರಲ್ಲಿ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆಯಲ್ಲಿ ಅಥವಾ ಗಣಿಯಲ್ಲಿ ಕೆಲಸ ಮಾಡಲು ನಿಯೋಜಿಸತಕ್ಕದ್ದಲ್ಲ ಅಥವಾ ಇತರೆ ಯಾವುದೇ ಅಪಾಯಕರವಾದ ಉದ್ಯೋಗವಲ್ಲಿ ತೊಡಗಿಸತಕದಲ್ಲ.

ಅನುಚ್ಛೇದ 43ರಲ್ಲಿ ರಾಜ್ಯವು ಸೂಕ್ತ ಕಾನೂನನ್ನು ರಚಿಸುವ ಮೂಲಕ ಅಥವಾ ವ್ಯವಸ್ಥೆಯ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಕೃಷಿಯ, ಕೈಗಾರಿಕೆಯ ಅಥವಾ ಇತರ ಎಲ್ಲಾ ಕೆಲಸಗಾರರಿಗೂ ಕೆಲಸ, ಜೀವನ ನಿರ್ವಹಣಾ ವೆಚ್ಚ ಮತ್ತು ಉತ್ತಮ ಜೀವನ ಮಟ್ಟವನ್ನು ಸುನಿಶ್ಚಿತಗೊಳಿಸುವ ಕೆಲಸದ ಸ್ಥಿತಿಗಳು ಮತ್ತು ಸಾಂಸ್ಕೃತಿಕ ಅವಕಾಶಗಳು ದೊರೆಯುವಂತೆ ಮಾಡಲು ಪ್ರಯತ್ನಿಸತಕ್ಕದ್ದು ಮತ್ತು ವಿಶೇಷವಾಗಿ, ರಾಜ್ಯವು ಗ್ರಾಮಾಂತರ ಪ್ರದೇಶಗಳಲ್ಲಿ ವೈಯಕ್ತಿಕ ಆಧಾರದ ಮೇಲೆ ಅಥವಾ ಸಹಕಾರಿ ವ್ಯವಸ್ಥೆಯ ಆಧಾರದ ಮೇಲೆ ಗೃಹ ಕೈಗಾರಿಕೆಗಳ ಸಂವರ್ಧನೆಗೆ ಪ್ರಯತ್ನಿಸತಕ್ಕದ್ದು.

ಅನುಚ್ಛೇದ – 45ರಲ್ಲಿ ರಾಜ್ಯವು 6 ವರ್ಷ ವಯಸ್ಸು ಪೂರ್ತಿಯಾಗುವತನಕ ಎಲ್ಲಾ ಮಕ್ಕಳ ಶೈಶವಾವಸ್ಥೆಯ ಮತ್ತು ಅವರಿಗೆ ಶಿಕ್ಷಣ ಒದಗಿಸುವುದಕ್ಕೆ ಪ್ರಯತ್ನಿಸತಕ್ಕದ್ದು.

ಅನುಚ್ಛೇದ – 46ರಲ್ಲಿ ಪರಿಶಿಷ್ಟ ಜಾತಿಗಳ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ: ರಾಜ್ಯವು, ದುರ್ಬಲ ವರ್ಗಗಳ ವಿಶೇಷವಾಗಿ ಪರಿಶಿಷ್ಟ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಜನತೆಯನ್ನು ಶೈಕ್ಷಣಿಕ ಸಂಬಂಧವಾದ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ವೃದ್ಧಿಗೊಳಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಸಂರಕ್ಷಿಸತಕ್ಕದ್ದು.

ಅನುಚ್ಛೇದ 243 ‘ಡಿ’ರಲ್ಲಿ ಪ್ರತಿಯೊಂದು ಪಂಚಾಯತಿಯಲ್ಲಿ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸ್ಥಾನಗಳನ್ನು ಮೀಸಲಿಡತಕ್ಕದ್ದು.

ಅನುಚ್ಛೇದ 243 ‘ಟಿ’ರಲ್ಲಿ ಪ್ರತಿಯೊಂದು ಪೌರಸಭೆಯಲ್ಲಿ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸ್ಥಾನಗಳನ್ನು ಮೀಸಲಿಡತಕ್ಕದ್ದು.

ಅನುಚ್ಛೇದ – 330ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆಯಲ್ಲಿ ಸ್ಥಾನಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ.

ಅನುಚ್ಛೇದ – 332ರಲ್ಲಿ ಪರಿಶಿಷ್ಟ ಪಂಗಡಗಳ ಜನರಿಗೆ ರಾಜ್ಯದ ಶಾಸನ ಸಭೆಯಲ್ಲಿ ಸ್ಥಾನಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ.

ಅನುಚ್ಛೇದ – 335ರಲ್ಲಿ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಪರಿಶಿಷ್ಟ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಹಕ್ಕುಗಳ ಸಂಘದ ಅಥವಾ ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವಲ್ಲಿ ಆಡಳಿತದ ದಕ್ಷತೆಯನ್ನು ಕಾಪಾಡಿಕೊಂಡು ಬರುವುದಕ್ಕೆ ಸುಸಂಗತವಾಗಿರುವಂತೆ, ಪರಿಶಿಷ್ಟ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಹಕ್ಕುಗಳನ್ನು ಪರ್ಯಾಯ ಆಲೋಚನೆಗೆ ತೆಗೆದುಕೊಳ್ಳತಕ್ಕದ್ದು.

ಆದರೆ, ಈ ಅನುಚ್ಛೇದದಲ್ಲಿನ ಯಾವುದೇ ಪರಿಶಿಷ್ಟ ಪಂಗಡಗಳ ಸದಸ್ಯರ ಅನುಕೂಲಕ್ಕಾಗಿ ಪರೀಕ್ಷೆಗಳಲ್ಲಿನ ಅರ್ಹತಾ ಅಂಕಗಳ ಸಡಿಲಿಸುವಿಕೆ ಅಥವಾ ಮೌಲ್ಯಮಾಪನದ ಮಟ್ಟವನ್ನು ಕಡಿಮೆಗೊಳಿಸಿ, ಸಂಘದ ಅಥವಾ ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆಗಳ ಅಥವಾ ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆಗಳ ಅಥವಾ ಹುದ್ದೆಗಳ ಯಾವುದೇ ವರ್ಗ ಅಥವಾ ವರ್ಗಗಳಿಗೆ ಬಡ್ತಿಯ ಮೀಸಲಾತಿಗಾಗಿ ಯಾವುದೇ ಉಪಬಂಧ ರಚಿಸಲು ಅಡ್ಡಿಯಾಗುವುದಿಲ್ಲ.

ಅನುಚ್ಛೇದ – 338ರಲ್ಲಿ ಅನುಸೂಚಿತ ಜಾತಿಗಳ ಹಿತ ಕಾಪಾಡಲು ಕಾಲಕಾಲಕ್ಕೆ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಲು ಮತ್ತು ರಚಿಸಿರುವ ಕಾನೂನುಗಳನ್ನು ಜಾರಿಗೊಳಿಸಲು ಅನುಸೂಚಿತ ಜಾತಿಗಳ ರಾಷ್ಟ್ರೀಯ ಆಯೋಗ ರಚಿಸುವುದು.

ಅನುಚ್ಛೇದ – 338 ‘ಎ’ರಲ್ಲಿ ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗ ರಚಿಸುವುದು.

ಅನುಚ್ಛೇದ – 340ರಲ್ಲಿ ಹಿಂದುಳಿದ ವರ್ಗಗಳ  ಸ್ಥಿತಿಗತಿಗಳನ್ನು ತನಿಖೆ ಮಾಡುವುದಕ್ಕಾಗಿ ಆಯೋಗದ ನೇಮಕಾತಿ.

1. ಭಾರತದ – ರಾಜ್ಯ ಕ್ಷೇತ್ರದಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ತನಿಖೆ ಮಾಡುವುದಕ್ಕಾಗಿ ಮತ್ತು ಯಾವುದೇ ರಾಜ್ಯವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಆ ಉದ್ದೇಶಕ್ಕಾಗಿ ಸಂಘ ಅಥವಾ ಯಾವುದೇ ರಾಜ್ಯವು ಕೊಡಬೇಕಾದ ಅನುದಾನಗಳ ಬಗ್ಗೆ ಮತ್ತು ಅನುದಾನಗಳನ್ನು ಯಾವ ಷರತ್ತುಗಳಿಗೊಳಪಟ್ಟು ಕೊಡಬೇಕಾಗಿದೆಯೋ, ಆ ಷರತ್ತುಗಳ ಬಗ್ಗೆ ಶಿಫಾರಸ್ಸುಗಳನ್ನು ಮಾಡುವುದಕ್ಕಾಗಿ, ಮತ್ತು ರಾಷ್ಟ್ರಪತಿಯು ತಾನು ಸೂಕ್ತವೆಂದು ಭಾವಿಸುವಂತಹ ವ್ಯಕ್ತಿಗಳನ್ನು ಒಳಗೊಂಡ ಒಂದು ಆಯೋಗವನ್ನು ಆದೇಶದ ಮೂಲಕ ನೇಮಿಸಬಹುದು ಮತ್ತು ಆ ಆಯೋಗವು ಅನುಸರಿಸಬೇಕಾದ ಪ್ರಕ್ರಿಯೆಯನ್ನು ನಿರ್ಧರಿಸತಕ್ಕದ್ದು.

2. ಹಾಗೆ ನೇಮಕಗೊಂಡ ಆಯೋಗವು, ಅದಕ್ಕೆ ಒಪ್ಪಿಸಿದ ವಿಷಯಗಳ ಬಗ್ಗೆ ತನಿಖೆ ಮಾಡತಕ್ಕದ್ದು ಮತ್ತು ಅದಕ್ಕೆ ಕಂಡುಬಂದ ಸಂಗತಿಗಳನ್ನು ನಮೂದಿಸುವ ಮತ್ತು ಅದು ಉಚಿತವೆಂದು ಭಾವಿಸುವಂತಹ ಶಿಫಾರಸ್ಸುಗಳನ್ನು ಮಾಡುವ ವರದಿಯನ್ನು ರಾಷ್ಟ್ರಪತಿಯವರು, ಹಾಗೆ ಒಪ್ಪಿಸಲಾದ ವರದಿಯ ಪ್ರತಿಯನ್ನು, ಅದರ ಮೇಲೆ ಕೈಗೊಂಡ ಕ್ರಮವನ್ನು ವಿವರಿಸುವ ಒಂದು ವಿವರಣಾ ಪತ್ರದೊಂದಿಗೆ ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಇರಿಸುವಂತೆ ಮಾಡತಕ್ಕದ್ದು.

ಅನುಚ್ಛೇದ – 341ರಲ್ಲಿ ರಾಷ್ಟ್ರಪತಿಯವರು ಯಾವುದೇ ರಾಜ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳನ್ನು ಯಾವುವೆಂದು ಸಾರ್ವಜನಿಕ ಅಧಿಸೂಚನೆಯ ಮೂಲಕ ನಿರ್ದಿಷ್ಟವಾಗಿ ಸ್ಪಷ್ಟಪಡಿಸಬಹುದು.

ಅನುಚ್ಛೇದ – 342ರಲ್ಲಿ ರಾಷ್ಟ್ರಪತಿಯವರು ಯಾವುದೇ ರಾಜ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳು ಯಾವುದೆಂದು ಸಾರ್ವಜನಿಕ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದು.

ನಮ್ಮ ಸಂವಿಧಾನದ ಆಶಯದಂತೆ ಜಾತಿ ಅಸಮಾನತೆಯನ್ನು ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಅನೇಕ ಕಾನೂನುಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲಾಗಿದೆ:

1. ಅಸ್ಪೃಶ್ಯತೆ ಅಪರಾಧ ಕಾಯ್ದೆ 1955

2. ನಾಗರಿಕ ಹಕ್ಕುಗಳ ಅಧಿನಿಯಮ 1955

3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಅಧಿನಿಯಮ 1989

4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಹಲವು ಜಮೀನುಗಳ ಪರಭಾರೆ ನಿಷೇಧ) ಅಧಿನಿಯಮ 1978 ಕಾಯಿದೆ

5. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ 1994

6. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪುರಸಭೆ ಮತ್ತು ನಗರಸಭೆಗಳಲ್ಲಿ ಮೀಸಲಾತಿಯನ್ನು ಕಲ್ಪಿಸಿ, ಸಂಬಂಧಪಟ್ಟ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ.

7. 1989ರಲ್ಲಿ ಜೀತದಾಳು ಪದ್ಧತಿ (ನಿಷೇಧ) ಕಾಯ್ದೆಯನ್ನು ಜಾರಿಗೆ ತರಲಾಯಿತು.

8. 1993ರಲ್ಲಿ ನೀರಿಲ್ಲದ ಶೌಚಾಲಯಗಳ ನಿರ್ಮಾಣ ರದ್ದತಿ ಕಾಯ್ದೆ ಜಾರಿಗೆ ತರಲಾಯಿತು.

9. ಮಲ ಹೊರುವ ಪದ್ಧತಿ ನಿಷೇಧ ಮತ್ತು ಅವರುಗಳ ಪುರ್ನವಸತಿ ಕಾಯ್ದೆ 2013ರಲ್ಲಿ ತರಲಾಯಿತು.

ಅನೇಕ ಆಯೋಗಗಳನ್ನು ಮತ್ತು ನಿಗಮಗಳನ್ನು ಸ್ಥಾಪಿಸಿ ನೂರಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಯ ಜನರ ಅಭಿವೃದ್ಧಿಗೆ ಅನುವು ಮಾಡಲಾಗಿದೆ.

ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಹಲವು ಅಂಶಗಳು, ಇತರೆ ಕಾನೂನುಗಳು ಮತ್ತು ಯೋಜನೆಗಳ ಪರಿಣಾಮವಾಗಿ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾತಿಗಳ ಸ್ಥಿತಿಗತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಆ ವರ್ಗದವರು ದೇಶದ ರಾಷ್ಟ್ರಪತಿಯಾಗಿ, ಉಪ ಪ್ರಧಾನಿಯಾಗಿ, ಕೇಂದ್ರ ಸರ್ಕಾರದ ಸಚಿವರಾಗಿ, ರಾಜ್ಯಪಾಲರಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ, ಶಾಸಕರಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯವಾಗಿ ಪ್ರವೇಶ ಮಾಡಿ, ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ, ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ, ನ್ಯಾಯವಾದಿಗಳಾಗಿ, ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಪ್ರವೇಶಿಸಿದ್ದಾರೆ. ಕುಲಪತಿಗಳಾಗಿ, ಉಪಕುಲಪತಿಗಳಾಗಿ, ಕುಲಸಚಿವರಾಗಿ, ಪ್ರೊಫೆಸರ್‌ಗಳಾಗಿ, ಅಧ್ಯಾಪಕರಾಗಿ, ಶಿಕ್ಷಕರಾಗಿ, ಸಾಹಿತಿಗಳಾಗಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಆಡಳಿತ ಅಧಿಕಾರಿಗಳಾಗಿ, ಪೊಲೀಸ್ ಅಧಿಕಾರಿಗಳಾಗಿ, ಪತ್ರಕರ್ತರಾಗಿ, ಕ್ರೀಡಾಪಟುಗಳಾಗಿ, ಕಲಾವಿದರಾಗಿ, ಕೈಗಾರಿಕೋದ್ಯಮಿಗಳಾಗಿ ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಹಾಗೂ ರಂಗಗಳಿಗೆ ಪ್ರವೇಶಿಸಿದ್ದಾರೆ. ಒಂದಷ್ಟು ಜನರಿಗೆ ಶಿಕ್ಷಣ, ಉದ್ಯೋಗ, ಮನೆ, ಭೂಮಿ ಇತ್ಯಾದಿಗಳು ಲಭ್ಯವಾಗಿ ಕೆಳ ಜಾತಿಯ ಅಭಿವೃದ್ಧಿಯಾಗಿದ್ದನ್ನು ನಾವು ಕಾಣುತ್ತೇವೆ.

12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವಿನಾಶ ಚಳುವಳಿ ಆರಂಭಿಸಿದರು. ಮುಂದುವರೆದು ತಳಸಮುದಾಯದ ಹರಳಯ್ಯನವರ ಮಗ ಶೀಲವಂತ ಮತ್ತು ಮೇಲ್ದಾತಿಯ ಮಧುವರಸರ ಮಗಳು ಲಾವಣ್ಯಳ ಅಂತರ್ ಜಾತಿ ವಿವಾಹವನ್ನು ನಡೆಸಿದರು. ಇದು ಜಾತಿ ವ್ಯವಸ್ಥೆಯ ಕಟ್ಟುಪಾಡುಗಳ ಉಲ್ಲಂಘನೆಯೆಂದು ಎಳೆಹೂಟೆ ಶಿಕ್ಷೆಯಾಯಿತು. ಆದರೆ ಇಂದು ಅಂತರ್ಜಾತಿ ಮದುವೆಯಾದರೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಅಂದು ಶಿಕ್ಷೆಗೆ ಗುರಿಯಾದ ಅಂತರ್ಜಾತಿ ಮದುವೆ ಇಂದು ಸರ್ಕಾರದಿಂದ ಗೌರವಿಸಲ್ಪಡುತ್ತದೆ. ಇದು ವಚನಗಳ ಅನುಷ್ಠಾನವಲ್ಲದೆ ಮತ್ತಿನ್ನೇನೆನ್ನಬೇಕು?

ಇಷ್ಟೆಲ್ಲ ಸಾಧನೆಯಾಗಿದ್ದರೂ ದೇಶದ ಪ್ರತಿಯೊಂದು ಸಾಮಾಜಿಕ, ಆರ್ಥಿಕ ಸೂಚ್ಯಂಕಗಳು ಅಸ್ಪಶ್ಯರ ಸ್ಥಿತಿಯು ತೀರಾ ಅತೃಪ್ತಿಕರವಾಗಿದೆ ಮತ್ತು ಅನೇಕ ಪ್ರಕರಣಗಳಲ್ಲಿ ಶೋಚನೀಯವಾಗಿದೆಯೆಂದು ತೋರಿಸುತ್ತವೆ. ಕೆಲವು ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳನ್ನು ಶಾಲೆಯ ಕಟ್ಟಕಡೆಯ ಬೆಂಚುಗಳಲ್ಲಿ ಕೂರಿಸಲಾಗುತ್ತದೆ. ಅನೇಕ ಶಾಲೆಗಳಲ್ಲಿ ಸಹಭೋಜನ ನಿರಾಕರಿಸಲಾಗಿದೆ. ಅಸಂಘಟಿತ ವಲಯದಲ್ಲಿ ದಿನಗೂಲಿ ಕೂಲಿಗಾರರಾಗಿ ದುಡಿಯುತ್ತಿರುವವರು ಕೆಳಜಾತಿಯ ಶ್ರಮಜೀವಿಗಳು. ಇವರ ಮೇಲೆ ದೌರ್ಜನ್ಯಗಳು ದಿನೇದಿನೇ ಹೆಚ್ಚುತ್ತಿವೆ. ಮರ್ಯಾದಾ ಹತ್ಯೆ ಮತ್ತು ಖಾಪ್ ಪಂಚಾಯತಿ ಹೆಸರಿನಲ್ಲಿ ಅಸ್ಪಶ್ಯರು ಅನೇಕ ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಜಾತಿವಾದ ಬೆಳೆದು, ಜಾತಿ ಸಂಘಟನೆಗಳು ಹುಟ್ಟಿಕೊಂಡು ಜನರ ಮಧ್ಯೆ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಧರ್ಮವನ್ನು ಅಪ್ರಜಾಪ್ರಭುತ್ವಗೊಳಿಸಿ ಮೂಲಭೂತವಾದವನ್ನು ಹುಟ್ಟುಹಾಕಲಾಯಿತು. ಧರ್ಮದೊಂದಿಗೆ ರಾಜಕಾರಣವನ್ನು ಬೆರೆಸಿ ಕೋಮುವಾದವನ್ನು ಹುಟ್ಟುಹಾಕಲಾಯಿತು. ಇವುಗಳು ಜನರ ಐಕ್ಯತೆಯನ್ನು ಮುರಿದಿದ್ದು, ಜನರ ಮಧ್ಯೆ ಗೋಡೆಗಳನ್ನು ನಿರ್ಮಾಣ ಮಾಡಿವೆ. ಜನರಲ್ಲಿ ದ್ವೇಷ, ಹಿಂಸೆ, ಅಸೂಯೆ, ಅಪನಂಬಿಕೆಗಳನ್ನು ಹುಟ್ಟುಹಾಕಿದೆ. ಸಮಾಜದಲ್ಲಿ ಶಾಂತಿಯನ್ನು ಕದಡಿದೆ. ಜನರ ದಿಕ್ಕನ್ನೇ ಬದಲಿಸಿ, ಅವರ ಬದುಕಿನ ವಿಚಾರಗಳಿಗಿಂತ ಭಾವನಾತ್ಮಕ ವಿಚಾರಗಳಿಗೆ ಆದ್ಯತೆಯನ್ನು ಕೊಡುವಂತೆ ಮಾಡಿದೆ. ಆತಂಕದ ವಿಚಾರವೆಂದರೆ ಮೂಲಭೂತವಾದ ಮತ್ತು ಕೋಮುವಾದ ಎಲ್ಲಾ ಕ್ಷೇತ್ರಗಳಿಗೆ ಅಂದರೆ ರಾಜಕಾರಣ, ಆಡಳಿತ, ಶಿಕ್ಷಣ, ಸಿನಿಮಾ, ಕ್ರೀಡೆ, ಸಂಗೀತ, ಕಲೆ, ಪೊಲೀಸ್ ಇತ್ಯಾದಿಗಳಿಗೆ ಪ್ರವೇಶಿಸಿದೆ. ಸಂವಿಧಾನದ ಮೂಲ ತತ್ವಗಳಾದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಗೆ ಧಕ್ಕೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಸರಿದಾರಿಯೆಂದರೆ ವಚನ ಮಾರ್ಗ. ನಾವೆಲ್ಲರೂ ವಚನ ಸಂದೇಶವನ್ನು ಮೈಗೂಡಿಸಿಕೊಂಡು ಅದರಂತೆ ನಡೆದರೆ ಮೂಲಭೂತವಾದವನ್ನು ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು