October 1, 2023 8:13 am

ವಚನಗಳು: ಮಹಿಳಾ ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಪ್ರಾರಂಭದಲ್ಲಿ ಇದ್ದ ಮಾತೃ ಪ್ರಧಾನ ಕುಟುಂಬಗಳು ಕ್ರಮೇಣ ಪಿತೃ ಪ್ರಧಾನ ಕುಟುಂಬಗಳಾದವು. ಪಿತೃ ಪ್ರಧಾನ ಕುಟುಂಬದಲ್ಲಿ ಮಹಿಳೆ ಪುರುಷನ ಆಸ್ತಿಯಾದಳು. ಕ್ರಮೇಣ ಜಾತಿ ವ್ಯವಸ್ಥೆ ಜಾರಿಗೆ ಬಂತು. ಜಾತಿ ವ್ಯವಸ್ಥೆಯಲ್ಲಿ ಮಹಿಳೆ ವರ್ಗ ಅಸಮಾನತೆಯ ಜೊತೆಗೆ ಸಾಮಾಜಿಕ ಅಸಮಾನತೆಗೆ ಗುರಿಯಾದಳು. ಅಸಮಾನತೆಯನ್ನು ಧರ್ಮದ ಜೊತೆ ಬೆಸುಗೆಗೊಳಿಸಿ ಸತಿ ಪದ್ಧತಿ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ವಿಧವೆಯರ ಶೋಷಣೆ, ಬಾಲೆಯರ ಬಲಿ ಇತ್ಯಾದಿಗಳನ್ನು ಜಾರಿಗೆ ತರುವುದರ ಮುಖಾಂತರ ಮಹಿಳೆಯರನ್ನು ಶೋಷಣೆಗೆ ಒಳಪಡಿಸಲಾಯಿತು. ಮುಂದುವರೆದು ಪುರುಷರ ಕಣ್ಣಲ್ಲಿ ಮಹಿಳೆ ಮಾಯೆಯಾಗಿ ಕಂಡಳು. ಪುರುಷನ ಅಭಿವೃದ್ಧಿಗೆ ಕಂಟಕವಾಗಿ ಕಂಡಳು. ಪುರುಷನ ಬುದ್ಧಿಗೆ ಭ್ರಮೆಯನ್ನುಂಟು ಮಾಡುತ್ತಾಳೆ ಮತ್ತು ತಾಮಸಕಳೆಯಾಗಿ ಕಾಡುತ್ತಾಳೆ ಎಂಬುದಾಗಿ ಪ್ರತಿಪಾದಿಸಿದರು. ಮಹಿಳೆಯರ ಈ ಸ್ಥಿತಿಗಳನ್ನು ಅನುಭವದಿಂದ ಅರಿತು ಅವರ ಹಿತಕ್ಕಾಗಿ ವಚನಕಾರರು ಸ್ಪಂದಿಸಿದರು. ತಮ್ಮ ವಚನಗಳ ಮುಖಾಂತರ ಲಿಂಗ ಭೇದವನ್ನು ತಿರಸ್ಕರಿಸಿ ಲಿಂಗ ಸಮಾನತೆಯನ್ನು ಸಾರಿದರು.

ಹನ್ನೆರಡನೇ ಶತಮಾನದ ವಚನಕಾರರು ಲಿಂಗಭೇದವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಮಹಿಳೆಯನ್ನು ಒಬ್ಬ ಮನುಷ್ಯ ಜೀವಿಯನ್ನಾಗಿ ಕಂಡು ಗೌರವಿಸಿದರು. ಲಿಂಗ ಸಮಾನತೆಯನ್ನು ಸಾರಿದರು. ಇದಕ್ಕೆ ಸಾಕ್ಷಿ ಈ ಕೆಳಗಿನ ಕೆಲವು ವಚನಗಳು:

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು

ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೊರುವ

ಎಮ್ಮಕ್ಕ ಕಂಚಿಯಲಿ ಬಾಣಸವ ಮಾಡುವಳು

ಎಮಗೆ ಆರೂ ಇಲ್ಲವೆಂಬಿರಿ

ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ

ಕೂಡಲಸಂಗಮದೇವಾ

ಎಂದು ಬಸವಣ್ಣ ಮಹಿಳೆಯರನ್ನು ಕುರಿತು ಹೇಳಿ ಸರ್ವ ವಿಧದಲ್ಲಿಯೂ ಸಮಾನತೆಯನ್ನು ಸಾರಿದರು.

ಛಲ ಬೇಕು ಶರಣಂಗೆ ಪರ ಧನವನೊಲ್ಲೆನೆಂಬ

ಛಲ ಬೇಕು ಶರಣಂಗೆ ಪರ ಸತಿಯನೊಲ್ಲೆನೆಂಬ

ಛಲ ಬೇಕು ಶರಣಂಗೆ ಪರ ದೈವನೊಲ್ಲೆನೆಂಬ

ಛಲ ಬೇಕು ಶರಣಂಗೆ ಲಿಂಗಜಂಗಮನೊಂದೆಂಬ

ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ

ಛಲ ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ

ಬಸವಣ್ಣ ಈ ವಚನದಲ್ಲಿ ಪರ ಹೆಣ್ಣಿಗೆ ಆಸೆ ಪಡುವುದು ಅನೈತಿಕ, ಅಪರಾಧ ಎಂದು ಹೇಳಿ ಶರಣರಿಗೆ ಪರ ಸತಿಯನ್ನು ಒಲ್ಲನೆಂಬ ಛಲಬೇಕು ಎಂದು ಬೋಧಿಸಿದರು.

ಕೇಳಿರಯ್ಯ ಮಾನವರೆ,

ಗಂಡಹೆಂಡಿರ ಮನಸ್ಸು ಒಂದಾಗಿದ್ದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ

ಗಂಡ ಹೆಂಡಿರ ಮನಸ್ಸು ಬೇರಾದರೆ

ಗಂಜಳದೊಳಗೆ ಹಂದಿ ಹೊರಳಾಡಿಸಿ

ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ

ಆ ಭಕ್ತನ ಕಾಯವೇ ಕೈಲಾಸ

ಅವನ ಒಡಲೇ ಸೇತುಬಂಧ ರಾಮೇಶ್ವರ

ಅವನ ಶಿರವೇ ಶ್ರೀಶೈಲ

ಅಂಬಿಗರ ಚೌಡಯ್ಯನ ಈ ವಚನ ಶರಣರು ಅನುಪಮವಾದ ದಾಂಪತ್ಯ ಜೀವನಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ. ಸತಿಪತಿಗಳು ಒಂದಾದ ಭಕ್ತಿ ಶಿವನಿಗೆ ಹಿತವೆಂಬ ಸಂದೇಶ ಈ ವಚನದ ಆಶಯ.

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ

ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ

ಮನದ ಮುಂದಿನ ಆಸೆಯೇ ಮಾಯೆ ಕಾಣಾ ಗುಹೇಶ್ವರಾ

ಹೊನ್ನು, ಹೆಣ್ಣು, ಮಣ್ಣುಗಳ ಸಂಪಾದನೆ, ಸಂಗ್ರಹಣ, ಭೋಗಗಳು ಮನುಷ್ಯನನ್ನು ದಿಕ್ಕುಗೆಡಿಸುತ್ತವೆ ಎಂದು ಹೇಳಲಾಯಿತು. ಆದರೆ ಅಲ್ಲಮಪ್ರಭು ಈ ತಿಳುವಳಿಕೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವಾವುವೂ ಮೋಕ್ಷಾಪೇಕ್ಷಿಯಾದವನಿಗೆ ಕಂಟಕಗಳಾಗಿಲ್ಲ, ಮೋಕ್ಷಾಪೇಕ್ಷಿಯಾದವನ ಮನಸ್ಸು ಕಲುಷಿತವಾಗಿ, ಆಸೆಯಿಂದ ಅವುಗಳತ್ತ ಹರಿದಾಗ ಅವು ಅವನನ್ನು ದಿಕ್ಕುಗೆಡಿಸುತ್ತವೆ ಎಂದು ಸಾರಿದರು.

ಮೊಲೆ ಮೂಡಿಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ನಡುವೆ ಸುಳಿವಾತ್ಮನು

ಹೆಣ್ಣು ಅಲ್ಲ, ಗಂಡು ಅಲ್ಲ ಕಾಣ ರಾಮನಾಥ

ಗಂಡು ಹೆಣ್ಣಿನ ನಡುವಿನ ವ್ಯತ್ಯಾಸಗಳು ಕೇವಲ ಭೌತಿಕ ಸ್ವರೂಪಕ್ಕೆ ಸಂಬಂಧಿಸಿದ ಸಂಗತಿಗಳು. ಈ ಬಗೆಯ ಬಾಹ್ಯ ಶರೀರಕ್ಕೂ ಆತ್ಮಕ್ಕೂ ಯಾವುದೇ ಸಂಬಂಧವಿಲ್ಲ. ಆತ್ಮಕ್ಕೆ ಗಂಡು ಅಥವಾ ಹೆಣ್ಣು ಎನ್ನುವ ಭೇದವಿಲ್ಲ ಎಂದು ದಾಸಿಮಯ್ಯನ ವಚನದಲ್ಲಿ ಹೇಳಲಾಗಿದೆ. ಗೊಗ್ಗವ್ವೆ ಎನ್ನುವ ವಚನಕಾರ್ತಿಯು ಈ ವಿಷಯವನ್ನು ಇನ್ನೊಂದೆ ನೆಲೆಯಿಂದ ಪ್ರತಿಪಾದಿಸಿದ್ದಾಳೆ.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು

ಮೀಸೆ ಕಸೆ ಬಂದಡೆ ಗಂಡೆಂಬರು

ಈ ಉಭಯದ ಜ್ಞಾನ ಹೆಣ್ಣೋ ಗಂಡೋ ನಾಸ್ತನಾಥ

ಗೊಗ್ಗವೆಯು ಜ್ಞಾನಕ್ಕೆ ಲಿಂಗ ಭೇದವಿಲ್ಲ ಎಂಬ ಸತ್ಯವನ್ನು ಇಲ್ಲಿ ಪ್ರತಿಪಾದಿಸುತ್ತಿದ್ದಾಳೆ.

ಸತಿಯ ಗುಣವ ಪತಿ ನೋಡಬೇಕಲ್ಲವೆ

ಪತಿಯ ಗುಣವ ಸತಿ ನೋಡಬಹುದೆ ಎಂಬುದು

ಸತಿಯಿಂದ ಬಂದ ಸೊಂಕು ಪತಿಯ ಕೇಡಲ್ಲವೆ?

ಪತಿಯಿಂದ ಬಂದ ಸೊಂಕು ಸತಿಯ ಕೇಡಲ್ಲವೆ?

ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ

ಭಂಗವಾರಿಗೆಂಬುದು ತಿಳಿದಲ್ಲಿಯೇ

ಕಾಲಂತಕ ಭೀಮೇಶ್ವರ ಲಿಂಗಕ್ಕೆ ಸತಿ ಸಂದಿತ್ತು.

ಈ ವಚನದಲ್ಲಿ ಡಕ್ಕೆಯ ಬೊಮ್ಮಣ್ಣ – ಸತಿ ಮತ್ತು ಪತಿ ಗುಣ ಚರ್ಯೆಗಳಲ್ಲಿ ಸಮಾನತೆಯಿದೆಯೆಂದು ಅಭಿಪ್ರಾಯಪಡುತ್ತಾರೆ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,

ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ,

ಈ ಮಾಯೆಯ ಕಳೆವಡೆ ಎನ್ನಳವಲ್ಲ

ನೀವೆ ಬಲ್ಲಿರಿ ಕೂಡಲಸಂಗಮದೇವ

ಬಸವಣ್ಣನವರು ಈ ವಚನದಲ್ಲಿ ಜನಸಮುದಾಯದ ಅರ್ಧದಷ್ಟಿರುವ ಸ್ತ್ರೀಯರನ್ನು ಮಾಯಾ ಬಂಧನದಿಂದ ಬಿಡಿಸುವ ದಾರಿಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತಾರೆ. ಹೆತ್ತ ತಾಯಿಯಾಗಿ, ಕೈಹಿಡಿದ ಮಡದಿಯಾಗಿ, ಮೋಹದ ಮಗಳಾಗಿ ಬಾಳಿನಲ್ಲಿ ಪ್ರೀತಿಯ ಬಳ್ಳಿಯಾಗಿರುವ ಮಹಿಳೆಯನ್ನು ‘ಮಾಯೆ’ ಎಂದು ತಿರಸ್ಕರಿಸುವುದು ತಪ್ಪೆಂದು ಅಭಿಪ್ರಾಯಪಡುತ್ತಾರೆ.

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ

ಸತಿಪತಿಗಳೊಂದಾಗದವನ ಭಕ್ತಿ

ಅಮೃತದೊಳು ವಿಷಬೆರದಂತೆ ಕಾಣಾ ರಾಮನಾಥ

ಈ ವಚನದಲ್ಲಿ ಜೇಡರ ದಾಸಿಮಯ್ಯನು ಹೆಣ್ಣು ಗಂಡಿನ ನಡುವಿನ ಕೌಟುಂಬಿಕ ಸಂಬಂಧದ ಹಿರಿಮೆಯ ಮಹತ್ವವನ್ನು ಸಾರಿದ್ದಾರೆ.

ಕ್ರಿಯೆಯೆ ಜ್ಞಾನ, ಆ ಜ್ಞಾನವೇ ಕ್ರಿಯೆ,

ಜ್ಞಾನವೆಂದಡೆ ತಿಳಿಯುವುದು,

ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು,

ಪರಸ್ತ್ರೀಯ ಭೋಗಿಸಬಾರದೆಂಬುದು ಜ್ಞಾನ;

ಅದರಂತೆ ಆಚರಿಸುವುದು ಕ್ರಿಯೆ

ಅಂತು ಆಚರಿಸದಿದ್ದಡೆ ಅದೇ ಅಜ್ಞಾನ ನೋಡಾ,

ಕೂಡಲಸಂಗಮದೇವಾ

ಬಸವಣ್ಣನವರು ಈ ವಚನದಲ್ಲಿ ಪರಸ್ತ್ರೀಯರ ಬಗ್ಗೆ ಅವರು ಇಟ್ಟುಕೊಂಡ ಆದರ್ಶವನ್ನು ತಿಳಿಸಿದ್ದಾರೆ.

ಲಿಂಗವ ಪೂಜಿಸಿ ಫಲವೇನಯ್ಯ

ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?

ಲಿಂಗವ ಪೂಜಿಸಿ ಫಲವೇನಯ್ಯ?

ಕೂಡಲಸಂಗಮದೇವರ ಪೂಜಿಸಿ

ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ?

ಈ ವಚನದಲ್ಲಿ ಸತಿಪತಿ ಒಂದಾಗಿ ಏಕೋಭಾವದಿಂದ ಸಮಾನತಾ ಪ್ರಜ್ಞೆಯೊಂದಿಗೆ ಬದುಕಬೇಕು. ಪತ್ನಿಯನ್ನು ಸಮಾನ ಭಾವದಿಂದ ಕಾಣದೆ ಬದುಕುವವನು ದೇವರಿಗೆ ದೂರವಾಗುವನು ಎಂದಿದ್ದಾರೆ.

ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ

ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು

ಗಂಡನುಳ್ಳಮ್ಮನ ಒಡದೆರೆದಾತ ನರಕದಲ್ಲಿ

ದಿಂಡುಗೆಡದಿಪ್ಪನೈ ರಾಮನಾಥ!

ಈ ವಚನದಲ್ಲಿ ದಾಸಿಮಯ್ಯ ಪರಸ್ತ್ರೀಯರನ್ನು ಹೇಗೆ ಗೌರವಿಸಬೇಕೆಂಬುದರ ಬಗ್ಗೆ ತಿಳಿಸಿದ್ದಾರೆ. ಮದುವೆಯಾದವರನ್ನು ಮಾತ್ರವಲ್ಲ, ವಿಧವೆಯರನ್ನು ಅತ್ಯಂತ ಗೌರವದಿಂದ ಕಾಣಬೇಕೆಂದು ಹೇಳಿದ್ದಾರೆ.

ಐತಿಹಾಸಿಕವಾಗಿ ವಚನ ಸಂವಿಧಾನದ ಮಹತ್ವದ ಕೊಡುಗೆಯೆಂದರೆ, ಲಿಂಗ ಸಮಾನತೆಯ ಪ್ರಣಾಳಿಕೆ. ಈ ಮೌಲ್ಯವು ಎಲ್ಲ ವಚನಕಾರರಲ್ಲಿಯೂ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ. ಲಿಂಗ ಸಮಾನತೆ ಪ್ರಣಾಳಿಕೆಯು ಅತ್ಯಂತ ಖಚಿತ ರೂಪದಲ್ಲಿ ಅಲ್ಲಮಪ್ರಭುಗಳ ಈ ವಚನದಲ್ಲಿ ಮಂಡಿತವಾಗಿದೆ.

ಸತಿ ಭಕ್ತಿಯಾದಡೆ ಹೊಲೆಗಂಜಲಾಗದು

ಗಂಡ ಭಕ್ತನಾದಡೆ ಕುಲಕ್ಕಂದಲಾಗದು

ಸತಿಪತಿಯೆಂಬ ಅಂಗಸುಖಹಿಂಗಿ

ಲಿಂಗವೇ ಪತಿಯಾದ ಬಳಿಕ

ಸತಿಗೆ ಪತಿಯುಂಟೆ ಪತಿಗೆ ಸತಿಯುಂಟೆ

ಪಾಲುಂಡು ಮೇಲುಂಬರೆ ಗುಹೇಶ್ವರ (ಅಲ್ಲಮನ ವಚನಚಂದ್ರಿಕೆ 148)

ಲಿಂಗ ಸಂಬಂಧಿ ಅಭೇದ ಸಂಸ್ಕೃತಿಯ ಪರಮೋಚ್ಚ ಪ್ರಣಾಳಿಕೆ ಇಲ್ಲಿನ ವಚನದಲ್ಲಿ ಮಂಡಿತವಾಗಿದೆ. ಅಲ್ಲಮನ ಪ್ರಕಾರ ಲಿಂಗವು ಸಮಾನತೆಯ ಪ್ರತೀಕವಾಗಿದೆ. ಎಲ್ಲರನ್ನು ಸಮಾನತೆಯಲ್ಲಿ ಸೇರಿಸಿಕೊಳ್ಳುವ ಗುಣ ಲಿಂಗಕ್ಕಿದೆ. ಮೇಲಿನ ವಚನದಲ್ಲಿನ ಲಿಂಗ ಸಮಾನತೆ ಸೂತ್ರವನ್ನು ಒಂದು ಗಣಿತದ ಸಮೀಕರಣದಲ್ಲಿ ಹೀಗೆ ವ್ಯಕ್ತಪಡಿಸಬಹುದು.

ಸತಿ = ಲಿಂಗ, ಪತಿ = ಲಿಂಗ. ಆದ್ದರಿಂದ ಸತಿ = ಪತಿ

ಲಿಂಗವು ಸತಿ ಮತ್ತು ಪತಿ ಇಬ್ಬರಿಗೂ ಸಾಮಾನ್ಯ ಸಮಾನವಾಗಿರುವುದರಿಂದ ಸತಿ-ಪತಿಗಳಲ್ಲಿ ಭೇದವಿಲ್ಲ. ಸತಿಗೆ ಪತಿಯು ಲಿಂಗ, ಪತಿಗೆ ಸತಿಯು ಲಿಂಗ, ಅಂಗವೇ ಲಿಂಗವಾದಾಗ ಅಲ್ಲಿ ಯಾರು ಯಾರಿಗೂ ಕಡಿಮೆಯಿಲ್ಲ ಅಥವಾ ಹೆಚ್ಚಿಲ್ಲ. ಮಹಿಳೆಯರು ಮತ್ತು ಪುರುಷರ ನಡುವೆ ಸಮಾಜದಲ್ಲಿದ್ದ ಮೇಲು-ಕೀಳು ಭಾವನೆಯನ್ನು ತೊಡೆದು ಹಾಕುವಲ್ಲಿ ವಚನ ಸಂವಿಧಾನವು ಪ್ರಯತ್ನಿಸಿತ್ತು ಎಂಬುದು ಅಲ್ಲಮನ ಲಿಂಗ ಸಂಬಂಧಿ ಅಭೇದ ಸಂಸ್ಕೃತಿಯ ಪ್ರತಿಪಾದನೆಯಿಂದ ಅರ್ಥ ಮಾಡಿಕೊಳ್ಳಬಹುದು. ಈ ಮೌಲ್ಯ ಪ್ರಣಾಳಿಕೆಯು ಅಂದಿಗೆ ವಚನ ಸಂವಿಧಾನಕ್ಕೆ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಅಖಿಲ ಭಾರತ ನೆಲೆಯಲ್ಲಿಯೂ ವಿಶಿಷ್ಟವಾದುದಾಗಿದೆ. ಆದಿಶಂಕರ ಮತ್ತು ಇತರೆ ಪಂಥಗಳು ಹೆಣ್ಣನ್ನು ಮಾಯೆಯೆಂದು, ಕೇಡಿನ ಪ್ರತೀಕವೆಂದು ಪರಿಗಣಿಸುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಮನು ಪ್ರತಿಪಾದಿಸಿದ್ದ ‘ಹೊನ್ನು, ಹೆಣ್ಣು, ಮಣ್ಣು ಮಾಯೆಯಲ್ಲ; ಮನದ ಮುಂದಿನ ಆಸೆಯೇ ಮಾಯೆ’ ಎಂಬ ಸೂತ್ರವು ಮಹತ್ವದ್ದಾಗಿದೆ. ಲಿಂಗ ಸಮಾನತೆಯ ಸೂತ್ರವನ್ನು ದಾಂಪತ್ಯ ಚೌಕಟ್ಟಿನಲ್ಲಿ ಅಲ್ಲಮಪ್ರಭುಗಳು ಅದ್ಭುತವಾಗಿ ಮಂಡಿಸಿದ್ದಾರೆ.

ಸಾರಾಂಶ

1. ಪುರುಷ ಮತ್ತು ಸ್ತ್ರೀ ಮಧ್ಯೆ ಇರುವ ಎಲ್ಲಾ ರೀತಿಯ ಭೇದಭಾವಗಳನ್ನು ಮತ್ತು ಅಸಮಾನತೆಯನ್ನು ತಿರಸ್ಕರಿಸಿದರು.

2. ಪುರುಷ ಮತ್ತು ಸ್ತ್ರೀಯರ ನಡುವೆ ಸರ್ವ ವಿಧದಲ್ಲಿ ಸಮಾನತೆಯನ್ನು ಸಾರಿದರು.

3. ಸ್ತ್ರೀ ಪುರುಷರ ಪ್ರೀತಿಗೆ ಭೇದವಿಲ್ಲವೆಂದು ಸಾರಿದರು.

4. ಗಂಡ ಮತ್ತು ಹೆಂಡತಿಯ ಸಂಬಂಧಗಳಲ್ಲಿ ಸಮಾನತೆಯನ್ನು ಸಾರಿದರು.

5. ಹೆತ್ತ ತಾಯಿಯಾಗಿ, ಕೈಹಿಡಿದ ಮಡದಿಯಾಗಿ ಮತ್ತು ಮೋಹದ ಮಗಳಾಗಿರುವ ಮಹಿಳೆಯರನ್ನು ‘ಮಾಯೆ’ಯೆಂದು ತಿರಸ್ಕರಿಸುವುದು ತಪ್ಪು ಎಂದರು.

6. ಪರಸ್ತ್ರೀಯರು ಯಾವುದೇ ಸ್ಥಿತಿಯಲ್ಲಿರಲಿ ಗೌರವದಿಂದ ತನ್ನ ತಾಯಿಯಂತೆ ಕಾಣಬೇಕೆಂದರು.

7. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ನೀಡಿದರು.

8. ಮಹಿಳೆಯರಿಗೂ ಶಿಕ್ಷಣದ ಹಕ್ಕನ್ನು ನೀಡಿದರು.

9. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದರು.

ಸಂವಿಧಾನದಲ್ಲಿ ಲಿಂಗ ಸಮಾನತೆ

ಜಗತ್ತಿನ ಒಟ್ಟು ಜನಸಂಖ್ಯೆಯ ಸರಿ ಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ಶೋಷಣೆಗೆ ಒಳಪಡಿಸಿ ಗುಲಾಮರಂತೆ ನಡೆಸಿಕೊಳ್ಳಲಾಯಿತು. ಜಗತ್ತಿನ ಎಲ್ಲ ನಾಗರಿಕತೆಗಳಲ್ಲಿ ಮಹಿಳೆಯರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಕಾಣಲಾಗಿದೆ. ಇಂತಹ ಸಾಮಾಜಿಕ ವ್ಯವಸ್ಥೆ ಪುರುಷರಿಗೆ ಅನುಕೂಲಕರವಾದದ್ದೆಂದು ಕಂಡುಕೊಳ್ಳಲಾಯಿತು. ವ್ಯವಸ್ಥಿತವಾಗಿ ಇಂಥ ಲಿಂಗ ಅಸಮಾನ ವ್ಯವಸ್ಥೆಯನ್ನು ನಿರಂತರಗೊಳಿಸಲಾಯಿತು. ಮಹಿಳೆಯರ ಈ ಸ್ಥಿತಿಗತಿಗಳಿಗೆ ಪ್ರಮುಖವಾಗಿ ಐದು ಕಾರಣಗಳನ್ನು ಪರಿಶೀಲಿಸಬಹುದಾಗಿದೆ. ಅವುಗಳೆಂದರೆ :

 • ರಾಜಕೀಯ ನಿರ್ಬಲೀಕರಣ
 • ಆರ್ಥಿಕ ನಿರ್ಬಲೀಕರಣ
 • ಧಾರ್ಮಿಕ ಕಟ್ಟುಪಾಡುಗಳು
 • ಸಾಮಾಜಿಕ ಮೌಲ್ಯಗಳು
 • ಮೂಢನಂಬಿಕೆಗಳು

ಮಹಿಳಾ ಅಸಮಾನತೆಯ ವಿರುದ್ಧ ಬುದ್ಧ, ಬಸವ, ಸಾವಿತ್ರಿಬಾಯಿ ಫುಲೆ, ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್, ಗಾಂಧಿ ಇಂತಹ ಮಹನೀಯರು ತಮ್ಮ ಧ್ವನಿಯನ್ನು ಎತ್ತಿದ್ದರು. ಇವೆಲ್ಲದರ ಪರಿಣಾಮವಾಗಿ ನಮ್ಮ ಸಂವಿಧಾನದಲ್ಲಿ ಲಿಂಗಭೇದ ನಿವಾರಣೆಗೆ ಹಾಗೂ ಮಹಿಳೆಯರ ಸ್ಥಿತಿಗತಿಗಳ ಅಭಿವೃದ್ಧಿಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ:

ಅನುಚ್ಛೇದ 14 ಪ್ರಕಾರ : ಸಮಾನ ಅವಕಾಶಗಳನ್ನು ಭಾರತ ದೇಶದ ವ್ಯಾಪ್ತಿಯಲ್ಲಿ ಎಲ್ಲ ವ್ಯಕ್ತಿಗಳಿಗೆ ಕಾನೂನಿನ ದೃಷ್ಟಿಯಲ್ಲಿ ರಕ್ಷಣೆ ದೊರೆಯುವುದು. ಕಾನೂನು ಅತ್ಯಂತ ಶ್ರೇಷ್ಠವಾದದ್ದು, ಕಾನೂನಿನ ದೃಷ್ಟಿಯಲ್ಲಿ ಯಾವುದೇ ವ್ಯಕ್ತಿಗೆ (ಪುರುಷ ಅಥವಾ ಸ್ತ್ರೀ) ಸಮಾನತೆಯನ್ನು ನಿರಾಕರಿಸಬಾರದು ಅಥವಾ ತಾರತಮ್ಯ ಮಾಡಬಾರದು.

ಅನುಚ್ಛೇದ 15 ಪ್ರಕಾರ :

• ಧರ್ಮ, ಜಾತಿ, ಕುಲ, ಲಿಂಗ, ಜನ್ಮ ಪ್ರದೇಶದ ಆಧಾರದ ಮೇಲೆ ತಾರತಮ್ಯ ನಿಷೇಧ

• ಸಾರ್ವಜನಿಕ ಅಂಗಡಿ, ಸಾರ್ವಜನಿಕ ಮನರಂಚನಾ ಸ್ಥಳಗಳು, ಅದೇ ರೀತಿ ಪ್ರಭುತ್ವದಿಂದ ಸಂಪೂರ್ಣ ಅಥವಾ ಭಾಗಶಃ ನಿರ್ವಹಿಸಲ್ಪಡುವ ಸಾರ್ವಜನಿಕ ಬಾವಿ, ಸ್ನಾನ ಘಟ್ಟಗಳು, ರಸ್ತೆ, ಸಾರ್ವಜನಿಕ ಉದ್ಯಾನವನ ಉಪಯೋಗಿಸಲು, ಧರ್ಮ, ಜಾತಿ, ಕುಲ, ಲಿಂಗ ಮುಂತಾದ ಆಧಾರದ ಮೇಲೆ ನಿರ್ಬಂಧಿಸುವಂತಿಲ್ಲ.

ಅನುಚ್ಛೇದ 16ರ ಪ್ರಕಾರ : ಸಾರ್ವಜನಿಕ ಉದ್ಯೋಗ ಅವಕಾಶಗಳನ್ನು ಪಡೆಯಲು ಎಲ್ಲರೂ ಸಮಾನರು. ಈ ಸಂಬಂಧ ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ವಾಸ ಇವುಗಳ ಆಧಾರದ ಮೇಲೆ ವ್ಯಕ್ತಿ-ವ್ಯಕ್ತಿ ಮಧ್ಯೆ ಯಾವುದೇ ತಾರತಮ್ಯ ಮಾಡುವಂತಿಲ್ಲ.

ಅನುಚ್ಛೇದ 19ರಿಂದ 22ರ ವರೆಗಿನ ಪ್ರಕಾರ: ವ್ಯಕ್ತಿಯ ಸ್ವಾತಂತ್ರ್ಯ ಹಕ್ಕಿನ ಬಗೆಗೆ ವಿವರಣೆ ನೀಡಿವೆ. ಈ ಸ್ವಾತಂತ್ರ್ಯ ಹಕ್ಕುಗಳನ್ನು ಪುರುಷರಿಗೂ ಮತ್ತು ಮಹಿಳೆಯರಿಗೂ ಸಮಾನವಾಗಿ ನೀಡಲಾಗಿದೆ. ಅವುಗಳಾವುವೆಂದರೆ:

1. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು

2. ಶಾಂತಿಯುತವಾಗಿ ಶಸ್ತ್ರರಹಿತವಾಗಿ ಸಭೆ ಸೇರುವ ಸ್ವಾತಂತ್ರ್ಯದ ಹಕ್ಕು

3. ಸಂಘ, ಸಂಸ್ಥೆ ರಚಿಸುವ ಹಕ್ಕು

4. ಭಾರತದಾದ್ಯಂತ ಸ್ವತಂತ್ರವಾಗಿ ಸಂಚರಿಸುವ ಹಕ್ಕು

5. ಎಲ್ಲಿ ಬೇಕಾದರೂ ಭಾರತದ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುವ ಹಕ್ಕು

6. ಆಸ್ತಿಯನ್ನು ಗಳಿಸುವ, ಇಟ್ಟುಕೊಳ್ಳುವ, ವಿನಿಯೋಗ ಮಾಡುವ ಸ್ವಾತಂತ್ರ್ಯದ ಹಕ್ಕನ್ನು 44ನೇ ತಿದ್ದುಪಡಿಯನ್ವಯ ರದ್ದುಗೊಳಿಸಲಾಗಿದೆ.

7. ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಮಾಡುವ ಸ್ವಾತಂತ್ರ್ಯದ ಹಕ್ಕು

ಅನುಚ್ಛೇದ 23ರ ಪ್ರಕಾರ : ಜೀತ ಪದ್ಧತಿಯನ್ನು ನಿಷೇಧಿಸಲಾಗಿದೆ. ಗುಲಾಮಗಿರಿಯನ್ನು

ನಿಷೇಧಿಸಲಾಗಿದೆ ಹಾಗೂ ಅನೈತಿಕ ಉದ್ದೇಶಗಳಿಗಾಗಿ ಮಹಿಳೆಯರು, ಮಕ್ಕಳನ್ನು ಮತ್ತು ದುರ್ಬಲ ವರ್ಗದವರನ್ನು ಶೋಷಣೆ ಮಾಡಬಾರದು.

ಅನುಚ್ಛೇದ 25ರಿಂದ 28ರ ಪ್ರಕಾರ : ಧಾರ್ಮಿಕ ಹಕ್ಕನ್ನು ನೀಡಲಾಗಿದೆ.

ಅನುಚ್ಛೇದ 29 ಮತ್ತು 30ರ ಪ್ರಕಾರ : ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕನ್ನು ನೀಡಲಾಗಿದೆ.

ಅನುಚ್ಛೇದ 32ರಿಂದ 35ರ ಪ್ರಕಾರ : ಸಂವಿಧಾನಾತ್ಮಕ ಪರಿಹಾರಗಳ ಹಕ್ಕನ್ನು ನೀಡಲಾಗಿದೆ.

ಅನುಚ್ಛೇದ 39ರ ಪ್ರಕಾರ : ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಕೆಲವು ನಿರ್ದೇಶಕ ತತ್ವಗಳನ್ನು ಜಾರಿಗೆ ತರುವ ಹೊಣೆಯನ್ನು ತಿಳಿಸಿದೆ. ಅವುಗಳಲ್ಲಿ ಮಹಿಳೆಯರಿಗೆ

ಸಂಬಂಧಿಸಿದ ನಿರ್ದೇಶನಗಳೆಂದರೆ:

1. ನಾಗರಿಕರು, ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಜೀವನ ಸಾಗಿಸಲು ಅಗತ್ಯವಾದ ಯೋಗ್ಯ ಸಾಧನಗಳನ್ನು ಒದಗಿಸುವುದು.

2. ಸಂಪತ್ತಿನ ಕೇಂದ್ರೀಕರಣ ತಪ್ಪಿಸುವುದು.

3. ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತೆ ಮಾಡುವುದು.

4. ಕಾರ್ಮಿಕರ ಶಕ್ತಿ ದುರುಪಯೋಗವಾದಂತೆ ಲಕ್ಷ್ಯವಹಿಸಿ ಅವರ ಆರೋಗ್ಯ ವರ್ಧನೆಗೆ ಕ್ರಮಕೈಗೊಳ್ಳುವುದು

5. ಮಕ್ಕಳು, ಎಳೆಯ ವಯಸ್ಸಿನಲ್ಲಿ ದುಡಿಮೆಗೆ ತೊಡಗದಂತೆ ನಿರ್ಬಂಧಿಸುವುದು,

ಆರೋಗ್ಯಕರವಾದ ಪರಿಸರದಲ್ಲಿ ಅಭಿವೃದ್ಧಿ ಹೊಂದಲು ಮಕ್ಕಳಿಗೆ ಅವಕಾಶ ನೀಡಿ ಅವರ ಶೋಷಣೆಯಾಗದಂತೆ ನೋಡಿಕೊಳ್ಳುವುದು

ಅನುಚ್ಛೇದ 42ರ ಪ್ರಕಾರ : ಸರ್ಕಾರಗಳು ಮಾನವೀಯ ಪರಿಸ್ಥಿತಿಗಳನ್ನು ಮತ್ತು ಹೆರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ನಿರ್ದೇಶಿಸುತ್ತವೆ.

ಅನುಚ್ಛೇದ 51(ಎ) : ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ಕರ್ತವ್ಯಗಳೆಂದರೆ: ಧರ್ಮ, ಭಾಷೆ, ಪ್ರಾದೇಶಿಕತೆ ಅಥವಾ ಜಾತಿ ಪಂಗಡಗಳ ಸಹೋದರ ಭಾವನೆಯನ್ನು ಬೆಳೆಸುವುದು ಹಾಗೂ ಸ್ತ್ರೀಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸುವುದು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಮಾನವೀಯತೆ ತೋರ್ಪಡಿಸಿ ಸುಧಾರಣಾ ಮನೋಭಾವ ಹೊಂದುವುದು.

ಅನುಚ್ಛೇದ 243ರ ಪ್ರಕಾರ : ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿ, ನಗರಸಭೆಗಳಲ್ಲಿ ಮೂರನೆಯ ಒಂದರಷ್ಟು ಸ್ಥಾನಗಳು ಮಹಿಳೆಯರಿಗಾಗಿ ಕಡ್ಡಾಯವಾಗಿ ಮೀಸಲಾಗಿರುತ್ತವೆ.

ಜಾರಿಯಲ್ಲಿದ್ದ ಕಾನೂನುಗಳಿಗೆ ತಿದ್ದುಪಡಿಗಳು

ಸಂವಿಧಾನದ ಆಶಯಗಳನ್ನು ಕಾರ್ಯಗತಗೊಳಿಸಲು ಕೆಲವು ಕಾನೂನುಗಳ ಅವಶ್ಯಕತೆ ಅನಿವಾರ್ಯವಾಯಿತು. ಕಾಲಕಾಲಕ್ಕೆ ಸರ್ಕಾರ ಹಲವು ಕಾನೂನುಗಳನ್ನು ರಚಿಸುವುದರ ಮುಖಾಂತರ ಮಹಿಳಾ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಪ್ರಯತ್ನಿಸಿದೆ. ಮುಂದುವರೆದು ಕೆಲವು ಹಳೆ ಕಾನೂನುಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರುವ ಮುಖಾಂತರ ಇರತಕ್ಕಂತಹ ಲೋಪದೋಷಗಳನ್ನು, ನ್ಯೂನತೆಗಳನ್ನು ಸರಿಪಡಿಸಿದೆ. ಅವುಗಳೆಂದರೆ:

1. ಕ್ರಿಮಿನಲ್ ಪ್ರೊಸೀಜರ್ ಕೋಡ್ 1973ರಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳೆಂದರೆ :

ಕಲಂ 125ರಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ತಂದೆ-ತಾಯಿಯರಿಗೆ ಜೀವನಾಂಶ ಪಡೆಯುವ ಹಕ್ಕು.

ಕಲಂ 126ರಲ್ಲಿ- ಜೀವನಾಂಶ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ತಿಳಿಯಪಡಿಸಲಾಗಿದೆ.

ಕಲಂ 127ರಲ್ಲಿ- ಜೀವನಾಂಶದ ಮೊತ್ತವನ್ನು ಕಾಲಕಾಲಕ್ಕೆ ಬದಲಾಯಿಸುವುದರ ಬಗ್ಗೆ ತಿಳಿಯಪಡಿಸಿದೆ

ಕಲಂ 128ರಲ್ಲಿ – ಜೀವನಾಂಶದ ಮೊತ್ತವನ್ನು ಪಡೆಯುವ ವಿಧಾನವನ್ನು ತಿಳಿಯಪಡಿಸಿದೆ.

ಭಾರತದ ದಂಡ ಸಂಹಿತೆ ಕಾಯ್ದೆಯ

ಕಲಂ 304ಬಿಯಲ್ಲಿ – ವರದಕ್ಷಿಣೆ ಕಾರಣಕ್ಕೆ ಮಹಿಳೆಯರನ್ನು ಸಾಯಿಸಲಾಗಿದ್ದರೆ ಶಿಕ್ಷೆಯನ್ನು ವಿಧಿಸಲಾಗಿದೆ.

ಕಲಂ 312ರಲ್ಲಿ – ಗರ್ಭಪಾತಕ್ಕೆ ಕಾರಣರಾದವರಿಗೆ ಶಿಕ್ಷೆ.

ಕಲಂ 313ರಲ್ಲಿ – ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿದವರಿಗೆ ಶಿಕ್ಷೆ.

ಕಲಂ 314ರಲ್ಲಿ – ಗರ್ಭಪಾತ ಮಾಡಿಸುವ ಉದ್ದೇಶದಿಂದ ಮಾಡಿದ ಕೃತ್ಯದಿಂದ ಆದ ಸಾವು.

ಕಲಂ 366ರಲ್ಲಿ – ಮಹಿಳೆಯನ್ನು ಬಲಾತ್ಕಾರವಾಗಿ ಮದುವೆ ಆಗಲು ಅಪಹರಿಸುವುದು, ಹಾರಿಸಿಕೊಂಡು ಹೋಗುವುದು, ಅಥವಾ ಪುಸಲಾಯಿಸುವುದು ಇತ್ಯಾದಿ.

ಕಲಂ 366ಎಯಲ್ಲಿ – ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ದೊರಕಿಸಿಕೊಡುವುದು.

ಕಲಂ 366ಬಿಯಲ್ಲಿ – ಹುಡುಗಿಯನ್ನು ವಿದೇಶಗಳಿಂದ ಆಮದು ಮಾಡುವುದು.

ಕಲಂ 373ರಲ್ಲಿ – ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ವೇಶ್ಯಾವೃತ್ತಿಗಾಗಿ ಖರೀದಿ ಮಾಡುವುದು.

ಕಲಂ 375ರಲ್ಲಿ – ಅತ್ಯಾಚಾರ

ಕಲಂ 376ರಲ್ಲಿ – ಅತ್ಯಾಚಾರಕ್ಕೆ ಶಿಕ್ಷೆ.

ಕಲಂ 376ಎನಲ್ಲಿ – ವಿಚ್ಛೇದನದ ಸಮಯದಲ್ಲಿ ಪುರುಷ ತನ್ನ ಪತ್ನಿಯನ್ನು ಸಂಭೋಗಿಸುವುದು.

ಕಲಂ 376ಬಿಯಲ್ಲಿ ಸಾರ್ವಜನಿಕ ಸೇವಾನಿರತ ವ್ಯಕ್ತಿ ತನ್ನ ಸುಪರ್ದಿಯಲ್ಲಿ

ಇರುವ ಮಹಿಳೆಯನ್ನು ಸಂಭೋಗಿಸುವುದು.

ಕಲಂ 376 ಸಿಯಲ್ಲಿ – ಜೈಲು, ರಿಮಾಂಡ್ ಹೋಂ ಇತ್ಯಾದಿಗಳಲ್ಲಿ ಸೂಪರಿಂಟೆಂಡೆಂಟ್‌ನಿಂದ ತನ್ನ ಸುಪರ್ದಿಯಲ್ಲಿರುವ ಮಹಿಳೆಯೊಂದಿಗೆ ಸಂಭೋಗ

ಕಲಂ 493ರಲ್ಲಿ – ಕಾನೂನುಬದ್ಧ ಮದುವೆಯೆಂದು ನಂಬಿಸಿ ಪುರುಷ ಮಹಿಳೆಯ ಜತೆಗೆ ವಾಸ ಮಾಡುವುದು.

ಕಲಂ 494ರಲ್ಲಿ – ಗಂಡ ಅಥವಾ ಹೆಂಡತಿ ಜೀವಂತವಾಗಿರುವಾಗ ಇನ್ನೊಂದು ಮದುವೆ ಆಗುವುದು.

ಕಲಂ 495ರಲ್ಲಿ – ಹಿಂದಿನ ಮದುವೆ ವಿಷಯದಲ್ಲಿ ಮುಂದಿನ ಮದುವೆ ಆಗುವ ವ್ಯಕ್ತಿಯೊಂದಿಗೆ ಮಾಹಿತಿ ಮುಚ್ಚಿಡುವುದು.

ಕಲಂ 496ರಲ್ಲಿ – ಕಾನೂನುಬದ್ಧ ಮದುವೆಯ ಕ್ರಮ ಅನುಸರಿಸದೆ ಮೋಸದ ಮದುವೆ ಆಚರಣೆ.

ಕಲಂ 497ರಲ್ಲಿ – ಇನ್ನೊಬ್ಬನ ಪತ್ನಿಯ ಜೊತೆ ಸಂಭೋಗ ಅಥವಾ ವ್ಯಭಿಚಾರ (ಅಡಲ್ಟರಿ)

ಕಲಂ 498ರಲ್ಲಿ – ವಿವಾಹಿತ ಮಹಿಳೆಯನ್ನು ಅಪರಾಧ ಎಸಗುವ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡು ಹೋಗುವುದು ಅಥವಾ ಬಂಧಿಸಿಡುವುದು.

ಕಲಂ 498ಎನಲ್ಲಿ ಮಹಿಳೆಯ ಪತಿ ಅಥವಾ ಪತಿಯ ಸಂಬಂಧಿ ಆಕೆಯನ್ನು ಕ್ರೂರವಾಗಿ ನಡೆಸಿಕೊಳ್ಳುವುದು.

ಹೊಸ ಕಾನೂನುಗಳು

 1. ಕಾರ್ಖಾನೆಗಳ ಕಾಯಿದೆ 1948 (ತಿದ್ದುಪಡಿ 1976)ರಲ್ಲಿ ಶಿಶುಪಾಲನಾ ಕೇಂದ್ರ (ಅಂಗನವಾಡಿ)ಸ್ಥಾಪಿಸುವುದರ ಬಗ್ಗೆ ಪ್ರಸ್ತಾಪಿಸಿದೆ.
 2. ತೋಟಗಾರಿಕೆ ಕಾರ್ಮಿಕರ ಕಾಯಿದೆ 1951ರಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪನೆ ಹಾಗೂ ಮಹಿಳಾ ಕಾರ್ಮಿಕರು ತಮ್ಮ ಮಕ್ಕಳಿಗೆ ಹಾಲು ಉಣಿಸುವುದಕ್ಕೆ ಸಮಯವನ್ನು ನೀಡುವುದರ ಬಗ್ಗೆ ತಿಳಿಯಪಡಿಸಿದೆ.
 3. ಗಣಿ ಕಾಯಿದೆ 1957ರಲ್ಲಿ ಮಹಿಳಾ ಕಾರ್ಮಿಕರನ್ನು ಗಣಿಗಾರಿಕೆ ಕೆಲಸಕ್ಕೆಂದು ಭೂಮಿ ಒಳಗಡೆ ನೇಮಕಾತಿಯನ್ನು ನಿಷೇಧಿಸಿದೆ.
 4. ಬಾಣಂತಿತನ ಸವಲತ್ತು ಕಾಯಿದೆ 1961ರ ಪ್ರಕಾರ ಬಾಣಂತಿ ಹೆಂಗಸು 12 ವಾರಗಳ ಕಾಲ ವೇತನ ಸಹಿತ ರಜೆಗೆ ಅರ್ಹಳೆಂದು ತಿಳಿಯಪಡಿಸುತ್ತದೆ.
 5. ರಾಜ್ಯ ವಿಮಾ ನೌಕರರ ಕಾಯಿದೆ 1948ರಲ್ಲಿ ಸಹ ಮಹಿಳಾ ಕಾರ್ಮಿಕರು ಬಾಣಂತಿ ಸೌಲಭ್ಯಕ್ಕೆ ಅರ್ಹಳೆಂದು ತಿಳಿಯಪಡಿಸುತ್ತದೆ.
 6. ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಕರಾರುಗಳ) ಕಾಯಿದೆ 1966 ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸುವುದರ ಬಗ್ಗೆ ತಿಳಿಸುತ್ತದೆ.
 7. ಕಾಂಟ್ರಾಕ್ಟ್ ಲೇಬರ್ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯಿದೆ 1970ರಲ್ಲಿ ಮಹಿಳೆಯರನ್ನು ಬೆಳಿಗ್ಗೆ 6ರಿಂದ ಸಂಜೆ 7 ಗಂಟೆ ಸಮಯದಲ್ಲಿ 9 ಗಂಟೆಗಿಂತ ಹೆಚ್ಚು ದುಡಿಸಿಕೊಳ್ಳಬಾರದು ಮತ್ತು ಈ ಅವಧಿಯನ್ನು ಮೀರಿ ಮಹಿಳೆಯರನ್ನು ದುಡಿಮೆಗೆ ಹಚ್ಚಬಾರದು. ನರ್ಸ್‌ಗಳಿಗೆ ವಿನಾಯಿತಿ ನೀಡಲಾಗಿದೆ.
 8. ಅಂತರ್‌ ರಾಜ್ಯ ವಲಸೆ ಬಂದ ಕಾರ್ಮಿಕರ ಕಾಯಿದೆ 1979ರಲ್ಲಿ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನದ ಕೊಠಡಿಯನ್ನು ಒದಗಿಸುವುದರ ಬಗ್ಗೆ ಪ್ರಸ್ತಾಪಿಸಿದೆ.
 9. ಸಮಾನ ಸಂಭಾವನೆ ಕಾಯಿದೆ 1976ರಲ್ಲಿ ಸಮಾನ ಕೆಲಸಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸಂಭಾವನೆ ನೀಡಬೇಕೆಂದು ಹೇಳುತ್ತದೆ.
 10. ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ ವರದಕ್ಷಿಣೆ ನೀಡುವುದನ್ನು ಮತ್ತು ಪಡೆಯುವುದನ್ನು ನಿಷೇಧಿಸಲಾಗಿದೆ ಮತ್ತು ಶಿಕ್ಷೆಗೆ ಗುರಿಪಡಿಸಲಾಗಿದೆ.
 11. ಅನೈತಿಕ ಕಳ್ಳವ್ಯವಹಾರ ದಮನ ಕಾಯಿದೆ (ದಿ ಸಪ್ರೆಶನ್ ಆಫ್ ಇಮ್ಮೋರಲ್ ಟ್ರಾಫಿಕ್ ಆಕ್ಟ್) 1956 ಹಣ ಸಂಪಾದನೆಗಾಗಿ ಮಹಿಳೆಯರನ್ನು ಶೋಷಿಸುವುದನ್ನು ನಿಷೇಧಿಸುತ್ತದೆ.
 12. ವಿಶೇಷ ವಿವಾಹ ಕಾಯಿದೆ 1954 – ಅಂತರ್‌ಜಾತೀಯ ಅಂತರ್‌ಧರ್ಮಿಯ ಮತ್ತು ಅಂತರರಾಷ್ಟ್ರೀಯ ವಿವಾಹಕ್ಕೆ ಮನ್ನಣೆ ಕೊಡಲಾಗಿದೆ.
 13. ಹಿಂದೂ ವಿವಾಹ ಕಾಯಿದೆ 1955 – ಹಿಂದೂ ಮಹಿಳೆಯರಿಗೆ ವಿಚ್ಛೇದನ ಕೇಳುವ ಹಕ್ಕು, ಗಂಡನಿಂದ ಪ್ರತ್ಯೇಕವಾಗಿ ವಾಸಿಸುವ ಹಕ್ಕು, ಜೀವನಾಂಶ ಪಡೆಯುವ ಹಕ್ಕು ಮತ್ತು ಮಕ್ಕಳ ಸಂಪರ್ಕವನ್ನು ಪಡೆಯುವ ಹಕ್ಕುಗಳನ್ನು ನೀಡಲಾಗಿದೆ.
 14. ಹಿಂದೂ ವಾರಸುದಾರಿಕೆ ಕಾಯಿದೆ 1956 – ಹಿಂದೂ ಮಹಿಳೆಯರಿಗೆ ಗಂಡನ/ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ನೀಡಲಾಗಿದೆ.
 15. ಹಿಂದೂ ವಾರಸುದಾರಿಕೆ ಕಾಯಿದೆ (2005ರ ತಿದ್ದುಪಡಿ) ಪಿತ್ರಾರ್ಜಿತ – ಆಸ್ತಿಯಲ್ಲಿ ಹಿಂದೂ ಮಹಿಳೆಗೆ ಸಮಾನ ಹಕ್ಕನ್ನು ನೀಡಲಾಗಿದೆ.
 16. ಹಿಂದೂ ಜೀವನಾಂಶ ಮತ್ತು ದತ್ತು ಕಾಯಿದೆ 1956 – ಮಹಿಳೆಯರಿಗೆ ದತ್ತು ತೆಗೆದುಕೊಳ್ಳುವ ಹಕ್ಕು ಹಾಗೂ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕು ನೀಡಲಾಗಿದೆ.
 17. ಸತಿಪದ್ಧತಿ ನಿಷೇಧ ಕಾಯಿದೆ 1987ರ ಪ್ರಕಾರ ಸತಿ ಪದ್ಧತಿಯನ್ನು ಮತ್ತು ಅದರ ವೈಭವೀಕರಣವನ್ನು ನಿಷೇಧಿಸಲಾಗಿದೆ.
 18. ಪ್ರಸವ / ಜನನ ಪೂರ್ವ (ಪ್ರಿ-ನೆಟಾಲ್) ನಟಾಲ್ ಡಯಾಗೋಸ್ಟಿಕ್ ತಂತ್ರಗಳು (ದುರುಪಯೋಗದ ನಿಯಂತ್ರಣ ಮತ್ತು ತಡೆಗಟ್ಟುವಿಕೆ) ಕಾಯಿದೆ 1994ರ ಪ್ರಕಾರ ಅಲ್ಟ್ರಾ ಸೌಂಡ್ ಡಯಾಗೋಸ್ಟಿಕ್‌ ವಿಧಾನಗಳ ತಾಂತ್ರಿಕತೆಯ ಬೆಳವಣಿಗೆಯಿಂದ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೇ ಅದರ ಲಿಂಗ ಪತ್ತೆಯನ್ನು ಮಾಡಿಸಿ ಅದು ಹೆಣ್ಣು ಎಂದು ತಿಳಿದುಕೊಂಡು ಭ್ರೂಣಹತ್ಯೆ ಮಾಡಿಸುವುದನ್ನು ನಿಷೇಧಿಸಲಾಗಿದೆ.
 19. ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ 1984ರಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಿ ಕೌಟುಂಬಿಕ ವ್ಯಾಜ್ಯಗಳಾದ ಮದುವೆ, ವಿಚ್ಛೇದನ, ಜೀವನಾಂಶ, ಮಕ್ಕಳ ಪೋಷಣೆ, ಆಸ್ತಿಯ ವಿವಾದಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಪ್ರಯತ್ನಿಸಬೇಕೆಂದು ಇಲ್ಲವಾದಲ್ಲಿ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸುತ್ತದೆ.
 20. ವಿದೇಶಿ ಮದುವೆ ಕಾಯಿದೆ 1969ರಲ್ಲಿ ಭಾರತೀಯ ಪೌರ ಭಾರತ ದೇಶದ ಹೊರಗೆ ಮದುವೆಯಾದರೆ ಅದರ ಊರ್ಜಿತದ ಬಗ್ಗೆ ತಿಳಿಯಪಡಿಸುತ್ತದೆ.
 21. ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವುದು (ಪ್ರತಿಬಂಧಕ) ಕಾಯಿದೆ [ದಿ ಇನ್ಡೀಸೆಂಟ್ ರೆಪ್ರಸೆಂಟೇಶನ್ ಆಫ್ ವಿಮೆನ್ (ಪ್ರೊಹಿಬಿಶನ್) ಆಕ್ಟ್] 1986 ಜಾಹಿರಾತುಗಳ ಮೂಲಕ ಅಥವಾ ಪ್ರಕಟಣೆಗಳಲ್ಲಿ, ಬರಹಗಳಲ್ಲಿ, ವರ್ಣಚಿತ್ರಗಳಲ್ಲಿ, ಆಕೃತಿಗಳಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತಿಬಂಧಿಸುತ್ತದೆ.
 22. ವೈದ್ಯಕೀಯ ಗರ್ಭಪಾತ ಕಾಯಿದೆ (ದಿ ಮೆಡಿಕಲ್ ಟರ್ಮಿನೇಶನ್ ಆಫ್ ಪೆಗ್ನೆನ್ಸಿ ಆಕ್ಟ್) 1971-ಗರ್ಭಧಾರಣೆಯನ್ನು ಮುಂದುವರೆಸುವುದು ಮಹಿಳೆಯ ಅಥವಾ ಮಗುವಿನ ಜೀವಕ್ಕೆ ಅಥವಾ ಭೌತಿಕ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ  ಎಂಬಂತಹ ಸಂದರ್ಭಗಳಲ್ಲಿ ರಿಜಿಸ್ಟರ್ಡ್ ವೈದ್ಯರಿಂದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುತ್ತದೆ.
 23. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸುರಕ್ಷತೆ ಕಾಯಿದೆ 2005 – ಕುಟುಂಬದೊಳಗೆ ಅಥವಾ ಅದಕ್ಕೆ ಸಂಬಂಧಪಟ್ಟ ಅಥವಾ ಅದರಲ್ಲಿ ಪ್ರಾಸಂಗಿಕವಾಗಿ ಯಾವುದೇ ರೀತಿಯಲ್ಲಿ ಉದ್ಭವಿಸಬಹುದಾದ ದೌರ್ಜನ್ಯಕ್ಕೆ ಬಲಿಯಾಗುವ ಮಹಿಳೆಯನ್ನು ಸಂರಕ್ಷಿಸಲು ಮಾಡಲಾದ ಕಾಯಿದೆ.
 24. ಪಾಲಕರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯಿದೆ (ದಿ ಮೆಂಟೇನನ್ಸ್ ಅಂಡ್ ವೆಲ್‌ಫೇರ್ ಆಫ್ ಪೇರೆಂಟ್ಸ್ ಅಂಡ್ ಸೀನಿಯರ್ ಸಿಟಿಜನ್ ಆಕ್ಟ್) 2007 – ವೃದ್ಧಾಪ್ಯದ ಅಗತ್ಯಕ್ಕೆ ಬೇಕಾದ ಜೀವನಾಂಶ, ಉತ್ತಮ ವೈದ್ಯಕೀಯ ಸವಲತ್ತುಗಳು, ಜೀವ ಮತ್ತು ಆಸ್ತಿ ರಕ್ಷಣೆಗೆ, ಹಾಗೂ ವೃದ್ಧಾಶ್ರಮಗಳನ್ನು ಸ್ಥಾಪಿಸಲು ಮಾಡಲಾದ ಕಾಯಿದೆ.
 25. ಮುಸಲ್ಮಾನ ಮಹಿಳೆಯರ (ವಿಚ್ಛೇದನ ರಕ್ಷಣಾ ಹಕ್ಕು) ಕಾಯಿದೆ 1986
 26. ಉದ್ಯೋಗಸ್ಥ ಮಹಿಳೆಯರ ಮೇಲೆ ಉದ್ಯೋಗದ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ವಿರುದ್ಧ ರಕ್ಷಣಾ ಕಾಯಿದೆ 2014ರ ಪ್ರಕಾರ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆಯನ್ನು ತಿಳಿಯಪಡಿಸುತ್ತದೆ.
 27. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ದಿ ಪ್ರೊಟೆಕ್ಷನ್ ಆಫ್ ಚಿಲ್ಡನ್ ಅಗೈನ್ಸ್ಟ್ ಸೆಕ್ಷುವಲ್ ಅಫೆನ್ಸಸ್ ಆಕ್ಟ್) 2012.
 28. ಅಪರಾಧ (ತಿದ್ದುಪಡಿ) ಕಾಯಿದೆ [ದಿ ಕ್ರಿಮಿನಲ್ (ಅಮೆಂಡ್‌ಮೆಂಟ್) ಆಕ್ಸ್] 2013 – ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಶಿಕ್ಷೆ ಕೊಡಲು ತೀವ್ರ ಕ್ರಮಗಳನ್ನು ತೆಗೆದುಕೊಂಡ ಕಾಯ್ದೆ
 29. ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ 1990ರ ಪ್ರಕಾರ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಲಾಗಿದೆ. ಇದರ ಉದ್ದೇಶವೆಂದರೆ:

ಅ. ಮಹಿಳೆಯರಿಗೆ ನೀಡಿರುವ ಸಂವಿಧಾನಾತ್ಮಕ ಮತ್ತು ಕಾನೂನು ರಕ್ಷಣೆಯನ್ನು ಪರಾಮರ್ಶೆ ಮಾಡುವುದು.

ಆ. ಮಹಿಳೆಯರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸೂಚಿಸುವುದು.

ಇ. ಮಹಿಳಾ ಸಮಸ್ಯೆಗಳ ಪರಿಹಾರಕ್ಕೆ ಸಹಕರಿಸುವುದು. \

ಈ. ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರ್ಕಾರ ನೀತಿಯನ್ನು ರೂಪಿಸುವ ಸಲಹೆಗಳನ್ನು ನೀಡುವುದು.

30. ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ 1987ರಲ್ಲಿ ಮಹಿಳೆಯರಿಗೆ ಉಚಿತವಾದ ಕಾನೂನಿನ ನೆರವನ್ನು ನೀಡುತ್ತದೆ. ನೆರವು ಅಂದರೆ ಕಾನೂನು ಸಲಹೆ, ವಕೀಲರ ಖರ್ಚು, ನ್ಯಾಯಾಲಯ ಶುಲ್ಕ ಮತ್ತು ವೆಚ್ಚ. ಈ ನೆರವನ್ನು ಅತ್ಯಂತ ಕೆಳಹಂತದ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದವರೆಗೆ ಮತ್ತು ಯಾವುದೇ ಕಛೇರಿಯಲ್ಲಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಡಲಾಗುತ್ತದೆ.

ಅನುಷ್ಠಾನ

ಸಂವಿಧಾನದ ಹಲವು ಅನುಚ್ಛೇದಗಳ, ಹೊಸ ಕಾನೂನುಗಳ, ಕಾರ್ಯಕ್ರಮಗಳ ಮತ್ತು ಯೋಜನೆಗಳ ಪರಿಣಾಮವಾಗಿ ಮಹಿಳಾ ಸ್ಥಿತಿಗತಿಗಳಲ್ಲಿ ಸ್ವಲ್ಪ ಸುಧಾರಣೆಯನ್ನು ಹಾಗೂ ಅಭಿವೃದ್ಧಿಯನ್ನು ಕಾಣುತ್ತೇವೆ. ಮಹಿಳಾ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಕೇಂದ್ರ ಸರ್ಕಾರದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ, ಶಾಸಕರಾಗಿ, ಸ್ಥಳೀಯ ಸಂಸ್ಥೆಗಳ ಮುಖಂಡರಾಗಿ ರಾಜಕೀಯದಲ್ಲಿ ಪ್ರವೇಶ ಮಾಡಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ, ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಪ್ರವೇಶಿಸಿದ್ದಾರೆ. ಐ.ಎ.ಎಸ್., ಐ.ಎಫ್.ಎಸ್, ಐ.ಆರ್.ಎಸ್ ಅಧಿಕಾರಿಗಳಾಗಿ ಆಡಳಿತದಲ್ಲಿ, ಸೈನ್ಯದಲ್ಲಿಯೂ ಮುನ್ನುಗ್ಗಿದ್ದಾರೆ. ಶಿಕ್ಷಣ, ಕ್ರೀಡೆ, ಸಿನಿಮಾ, ವಿಜ್ಞಾನ, ತಂತ್ರಜ್ಞಾನ, ಪತ್ರಿಕೋದ್ಯಮ ಇತ್ಯಾದಿಯಾಗಿ ಮಹಿಳೆಯರು ಪ್ರವೇಶಿಸಿ ಹೆಸರು ಮಾಡಿದ್ದಾರೆ.

ಒಂದಷ್ಟು ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಮನೆ, ಭೂಮಿ ಇತ್ಯಾದಿಗಳು ಲಭ್ಯವಾಗಿ ಮಹಿಳೆಯರ ಜೀವನದಲ್ಲಿ ಸ್ವಲ್ಪ ಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು. ಇಂದು ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವೇಶಿಸಿ ತಮ್ಮ ಜೀವನವನ್ನು ಉತ್ತಮವಾಗಿಸಿಕೊಂಡಿದ್ದಾರೆ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ.

ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸಮಸ್ಯೆಗಳಿಂದ ಪಾರಾಗಿಲ್ಲ. ವರದಕ್ಷಿಣೆ, ಬಾಲ್ಯವಿವಾಹಗಳು, ಅತ್ಯಾಚಾರಗಳು, ವೇಶ್ಯಾವಾಟಿಕೆ ಇತ್ಯಾದಿಗಳು ಮುಂದುವರೆಯುತ್ತಿವೆ. ಭ್ರೂಣ ಹತ್ಯೆ, ಕೊಂಡು ತಂದ ಹೆಂಡತಿಯರು, ಬಾಡಿಗೆ ತಾಯಿ, ಒಂಟಿ ಮಹಿಳೆಯ ಸಮಸ್ಯೆಗಳು, ದುಡಿಯುವ ಮಹಿಳೆಯ ಸಮಸ್ಯೆಗಳು, ವೃದ್ಧಾಪ್ಯ ಮಹಿಳೆಯರ ಸಮಸ್ಯೆಗಳು, ಹೆಚ್ಚುತ್ತಿರುವ ವಿಚ್ಛೇದನಗಳು, ಮದುವೆಯಾಗದ ಕನ್ಯೆಯರು ಹೀಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ.

ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಪರಿಹಾರ ಕೇವಲ ಕಾನೂನುಗಳಿಂದ ಸಾಧ್ಯವಿಲ್ಲ. ಅಂದರೆ ಕಾನೂನುಗಳು ಬೇಡವೆಂದಲ್ಲ. ಕಾನೂನುಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಬೇಕು. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪುನರ್ ಸಂಘಟಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನೈತಿಕತೆ ಬೇಕಾಗಿದೆ. ಇವೆಲ್ಲವನ್ನು ಒಟ್ಟೊಟ್ಟಿಗೆ ನೀಡಬಲ್ಲ ಶಕ್ತಿ ವಚನ ಸಂದೇಶದಿಂದ ಮಾತ್ರ ಸಾಧ್ಯ. ವಚನ ಸಂದೇಶ ನಮ್ಮನ್ನು ಮುನ್ನಡೆಸಲಿ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು