ಜಾತಿ ವ್ಯವಸ್ಥೆಯಲ್ಲಿ ಮಹಿಳೆಯರು, ಶೂದ್ರರು ಮತ್ತು ಅಸ್ಪೃಶ್ಯರು ದುಡಿಮೆಗಾರರು. ಇವರ ಶ್ರಮದಿಂದ ಉತ್ಪತ್ತಿಯಾಗುವ ಸಂಪತ್ತನ್ನು ಉಳಿದ ಪರಾವಲಂಬಿಗಳು ಅನುಭವಿಸುತ್ತಿದ್ದರು. ಶ್ರಮಜೀವಿಗಳು ರಾತ್ರಿ ಹಗಲು ದುಡಿದರೂ ಎರಡು ಹೊತ್ತು ಊಟ ಸಿಗುತ್ತಿರಲಿಲ್ಲ. ಈ ಶ್ರಮಜೀವಿಗಳನ್ನು ಶಿಕ್ಷಣದಿಂದ, ಆಡಳಿತದಿಂದ ದೂರವಿರಿಸಿ, ಆಸ್ತಿಯ ಹಕ್ಕು, ಆಯುಧಗಳನ್ನು ಹೊಂದದಂತೆ ವಂಚಿಸಿದರು. ಕಡುಬಡತನ, ದಾರಿದ್ರ್ಯ, ಹಿಂಸೆ, ಶೋಷಣೆ, ದಬ್ಬಾಳಿಕೆ, ಅವಮಾನಕ್ಕೆ ಗುರಿಪಡಿಸಿದರು. ಗುಲಾಮರಂತೆ ನಡೆಸಿಕೊಂಡರು. ಇಂತಹ ಕ್ರೂರ ಮತ್ತು ಅಮಾನವೀಯ ದುಸ್ಥಿತಿಯ ವಿರುದ್ಧ ಎದ್ದ ಧ್ವನಿಯೇ ವಚನ ಚಳುವಳಿ.
ಜಾತಿಯಿಂದ ಕಾಯಕವನ್ನು ಬೇರ್ಪಡಿಸಿ ಕಡ್ಡಾಯಗೊಳಿಸಲಾಯಿತು. ಕಾಯಕದಲ್ಲಿ ಮೇಲು-ಕೀಳೆಂಬ ಭೇದಭಾವವನ್ನು ಕಿತ್ತೊಗೆದು ಎಲ್ಲಾ ರೀತಿಯ ಕಾಯಕಕ್ಕೆ ಘನತೆ ಗೌರವಗಳನ್ನು ತಂದುಕೊಟ್ಟರು. ಕಾಯಕಕ್ಕೆ ತಕ್ಕ ಪ್ರತಿಫಲವನ್ನು ಮಾತ್ರ ಪಡೆಯಬೇಕು. ಕಾಯಕದಿಂದ ಬಂದ ಪ್ರತಿಫಲದಲ್ಲಿ ಅಗತ್ಯವಿದ್ದಷ್ಟು ಬಳಸಿಕೊಂಡು ಉಳಿದದ್ದನ್ನು ದಾಸೋಹಕ್ಕೆ ಬಳಸಬೇಕೆಂದರು. ದಾನವನ್ನು ಕಿತ್ತು ಅದರ ಸ್ಥಾನದಲ್ಲಿ ದಾಸೋಹವೆಂಬ ಸಾಮಾಜಿಕ ಜವಾಬ್ದಾರಿಯನ್ನು ಜಾರಿಗೆ ತಂದರು. ಪೂಜೆಗಿಂತ ಶ್ರೇಷ್ಠ ಕಾಯಕವೆಂದರು, ಕಾಯಕವೇ ಕೈಲಾಸವೆಂದು ಹೊಸ ತಾತ್ಪರ್ಯವನ್ನು ಬರೆದರು.
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯ ಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲ ಸದರವಲ್ಲ ಕಾಣವ್ವಾ.
ಈ ವಚನದಲ್ಲಿ ವಚನಕಾರ ಉರಿಲಿಂಗಪೆದ್ದಿ ಸಂದೇಶವೇನೆಂದರೆ, ಪ್ರತಿಯೊಬ್ಬರು ಕಾಯಕ ಮಾಡಲೇಬೇಕು. ಕಾಯಕವನ್ನು ಭಕ್ತಿಯಿಂದ ಮತ್ತು ಸತ್ಯಶುದ್ಧ ಮನಸ್ಸಿನಿಂದ ಮಾಡಬೇಕು. ಆಸೆಯೆಂಬುದು ಲೌಕಿಕ ಬಂಧನಕ್ಕೆ ಮೂಲಕಾರಣ, ಆಸೆ ಇಲ್ಲದಿರುವುದು ಮುಕ್ತಿಗೆ ಮೂಲ.
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಠ ಹರಿವುದು
ಗುರುವಾದಡೂ ಚರಸೇವೆಯ ಮಾಡಬೇಕು
ಲಿಂಗವಾದಡೂ ಚರಸೇವೆಯ ಮಾಡಬೇಕು
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣ ಪ್ರಿಯ ಚಂದೇಶ್ವರಲಿಂಗದ ಅರಿವು.
ಈ ವಚನದಲ್ಲಿ ದೇವರು ಸಹ ಕಾಯಕ ಮಾಡಬೇಕು, ಭಕ್ತನು ದೇವರನ್ನೇ ದುಡಿಸಿಕೊಂಡಿದ್ದನ್ನು ನೋಡುತ್ತೇವೆ. ನುಲಿಯ ಚಂದಯ್ಯ ಈ ವಚನದಲ್ಲಿ ಕಾಯಕದ ಮಹತ್ವವನ್ನು ತಿಳಿಸುತ್ತಾರೆ. ದೇವರನ್ನೊಳಗೊಂಡಂತೆ ಪ್ರತಿಯೊಬ್ಬರೂ ಕಾಯಕ ಮಾಡಬೇಕೆನ್ನುತ್ತಾರೆ.
ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರು
ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ
ಕಾಯಕದೊಳಗು.
ಈ ವಚನದಲ್ಲಿ ಆಯ್ದಕ್ಕಿ ಮಾರಯ್ಯ ಕಾಯಕದ ವಿಷಯ ಬಂದಾಗ ಮಾತ್ರ ಅವರು ದೇವರನ್ನು ಸಹ ದೂರಿಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ.
ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು
ಕೂಡಲಸಂಗನ ಶರಣರು ಸ್ವತಂತ್ರಧೀರರು.
ಬಡವರು ಶ್ರಮಜೀವಿಗಳು. ಆದರೆ ಅವರು ಗುಣದಲ್ಲಿ ಶ್ರೀಮಂತರು. ಅವರು ಸಂಪತ್ತನ್ನು ಕೂಡಿಡಲಿಲ್ಲ, ಆದರೆ ಬಂದ ಅತಿಥಿಗಳಿಗೆ ಇದ್ದದ್ದನ್ನು ಹಂಚಿದರು. ಅವರು ಸ್ವತಂತ್ರ ಜೀವನ ನಡೆಸಿದವರು. ಈ ರೀತಿಯಾಗಿ ಬಸವಣ್ಣನವರು ಶ್ರಮಿಕರಲ್ಲಿ ಸ್ವಾಭಿಮಾನ ತುಂಬಿದರು.
ನಾನು ಆರಂಭ ಮಾಡುವೆನಯ್ಯ
ಗುರು ಪೂಜೆಗೆಂದು
ನಾನು ವ್ಯವಹಾರ ಮಾಡುವೆನಯ್ಯಾ
ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮ ದಾಸೋಹಕ್ಕೆಂದು
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮ ಫಲ ಭೋಗವ ನೀ ಕೊಡುವ
ಎಂಬುದ ನಾನು ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಕ್ರಿಯೆಯ ಮಾಡೆನು.
ನಮ್ಮ ಸೊಮ್ಮಿಂಗೆ ಸಲಿಸುವನು
ನಿಮ್ಮಾಣೆ ಕೂಡಲಸಂಗಮದೇವ.
ಈ ವಚನದಲ್ಲಿ ಬಸವಣ್ಣನವರು ಪೂಜೆಗಿಂತ ಕಾಯಕ ಶ್ರೇಷ್ಠವಾದದ್ದು ಎಂದು ಸಾರಿದ್ದಾರೆ. ಪೂಜೆ ಮಾಡುವುದು ಕಾಯಕವಾಗುವುದಿಲ್ಲ. ಆದರೆ ಕಾಯಕವೇ ಪೂಜೆಯೆಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.
ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತನರಾಣೆ!
ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ,
ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ.
ಈ ವಚನದಲ್ಲಿ ಬಸವಣ್ಣನವರು ಎಲ್ಲಾ ಕಾಯಕವು ಮಹತ್ವದ್ದು, ಕಾಯಕದಲ್ಲಿ ಚಿಕ್ಕದೆಂಬುದು ಅಥವಾ ದೊಡ್ಡದೆಂಬುದಿಲ್. ಕಾಯಕ ಜೀವಿಗಳೆಲ್ಲ ಸಮಾನರು ಎಂದು ಸಂದೇಶವನ್ನು ಸಾರಿದ್ದಾರೆ.
ಮನಶುದ್ಧವಿಲ್ಲದವರಿಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ.
ಈ ವಚನದಲ್ಲಿ ಆಯ್ದಕ್ಕಿ ಲಕ್ಕಮ್ಮ ಜಾತಿ ಮತವನ್ನು ಅಲ್ಲೆಗಳೆದು ಕಾಯಕದ ಮಹತ್ವವನ್ನು ಎತ್ತಿ ಹಿಡಿಯುತ್ತಾಳೆ.
ಉಂಕಿಯನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣೆಯೇಳಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆಯ ನೇಯ್ದವ ನಾನೋ ನೀನೋ ರಾಮನಾಥ
ಈ ವಚನದಲ್ಲಿ ದೇವರ ದಾಸಿಮಯ್ಯ ಸಾಮೂಹಿಕ ಕಾಯಕ ಪ್ರಜ್ಞೆಯ ಮಹತ್ವವನ್ನು ತಿಳಿಸಿದ್ದಾರೆ. ನೇಯ್ಗೆ ಕೆಲಸದಲ್ಲಿ ಮನೆ ಮಂದಿಯೆಲ್ಲ ಒಗ್ಗೂಡಿ ದುಡಿಯುವುದು, ಶ್ರಮಿಸುವುದು ಸಹಜವಾದದ್ದು, ಈ ದುಡಿಮೆಯಲ್ಲಿ ಮನೆಯವರೆಲ್ಲ ಸಂತೋಷ ಪಡುತ್ತಾರೆ.
ಆಸೆಯಂಬುದು ಅರಸಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ?
ಈಶ್ವರನೊಬ್ಬ ಮಾರೇಶ್ವರಪ್ರಿಯ ಅಮರೇಶ್ವರ
ಲಿಂಗಕ್ಕೆ ದೂರ ಮಾರಯ್ಯ
ಈ ವಚನದಲ್ಲಿ ಮಾರಯ್ಯ ತನ್ನ ಶ್ರಮಕ್ಕಿಂತ ಹೆಚ್ಚಿನ ಅಕ್ಕಿಯನ್ನು ತಂದಿದ್ದಕ್ಕೆ ಆತನ ಹೆಂಡತಿ ಆಕ್ಷೇಪಿಸುತ್ತಾಳೆ. ತಂದ ಅಕ್ಕಿಯನ್ನು ಮರಳಿ ತಂದ ಜಾಗಕ್ಕೆ ಸುರಿದು ಬರುವಂತೆ ಹಿಂದಿರುಗಿಸುತ್ತಾಳೆ. ದುಡಿಮೆಗೆ ಸಮನಾದ ಪ್ರತಿಫಲವನ್ನು ಪಡೆಯಬೇಕು ಹೊರತು ಹೆಚ್ಚಿನದಲ್ಲ.
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ, ಇದಕ್ಕಾ
ದೇವರ ಹಂಗೇಕೆ ಬಾಪು ಲದ್ದೆಯ ಸೋಮಾ.
ಈ ವಚನದಲ್ಲಿ ಲದ್ದೆಯ ಸೋಮಣ್ಣನವರು ಯಾವುದೇ ಕಾಯಕವಾದರು ಅದರಲ್ಲಿ ಕಾಯಾ ಮನಸಾ ತಲ್ಲೀನನಾಗಿ ಬದುಕಿನ ಆನಂದವನ್ನು ಅನುಭವಿಸಬೇಕೆನ್ನುತ್ತಾರೆ. ಕಾಯಕದಿಂದ ಬಂದ ಉಳಿತಾಯವನ್ನು ಜ್ಞಾನ, ಧರ್ಮ ಮತ್ತು ಸಮಾಜಕ್ಕೆ ದಾಸೋಹ ಮಾಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಜನಮೆಚ್ಚಿ ಶುದ್ಧನಲ್ಲದೆ ಮನ ಮೆಚ್ಚಿ ಶುದ್ಧನಲ್ಲವನಯ್ಯಾ
ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವನಯ್ಯಾ
ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವನಯ್ಯಾ
ಧನ ದೊರಕದಿದ್ದೊಡೆ ನಿಸ್ಪೃಹನಲ್ಲದೆ ಧನ ದೊರಕಿ ನಿಸ್ಪೃಹನಲ್ಲವನಯ್ಯಾ
ಏಕಾಂತ ದ್ರೋಹಿ ಗುಪ್ತಪಾತಕ ಸಯುಕ್ತಿ ಶೂನ್ಯಂಗೆ
ಸಕಲೇಶ್ವರ ದೇವ ಒಲಿಯೆಂದಡೆ ಎಂತೊಲಿವನಯ್ಯಾ?
ಈ ವಚನದಲ್ಲಿ ಮಾದರಸರು ಮಾಡುವ ಕಾಯಕ ಸತ್ಯಶುದ್ಧವಾಗಿರಬೇಕು ಎಂದು ಹೇಳುತ್ತಾರೆ.
ಸಾರಾಂಶ
- ಜಗತ್ತಿನ ಹೆಚ್ಚಿನ ದಾರ್ಶನಿಕರು ಈ ಜನ್ಮದಲ್ಲಿ ಕಾಯಕ ಮಾಡಿದರೆ ಮುಂದಿನ ಜನ್ಮದಲ್ಲಿ ಕೈಲಾಸಕ್ಕೆ ಹೋಗುತ್ತಾರೆ ಎಂದು ಸಾರಿದರು. ಆದರೆ ವಚನಕಾರರು ಕಾಯಕವೇ ಕೈಲಾಸವೆಂದರು.
- ದೇವರನ್ನೊಳಗೊಂಡಂತೆ ಪ್ರತಿಯೊಬ್ಬರು ಕಾಯಕ ಮಾಡಲೇಬೇಕೆಂದರು.
- ಮಾಡುವಂಥ ಕಾಯಕವನ್ನು ಭಕ್ತಿ, ಸತ್ಯ, ಶುದ್ಧ ಮನಸ್ಸಿನಿಂದ ಮಾಡಬೇಕೆಂದರು.
- ಕಾಯಕ ಮಾಡುವಾಗ ದೇವರೇ ಬಂದರೂ ಹಿಂದು ಮುಂದು ನೋಡದೆ ನಮ್ಮ ಕಾಯಕವನ್ನು ಮುಂದುವರಿಸಬೇಕು ಎಂದರು.
- ಪೂಜೆಗಿಂತ ಕಾಯಕ ಶ್ರೇಷ್ಠವಾದದು, ಮುಂದುವರೆದು ಕಾಯಕವೇ ಪೂಜೆಯೆಂದರು.
- ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ, ಚಿಕ್ಕದು-ದೊಡ್ಡದೆಂಬುದಿಲ್ಲ, ಈ ಜಾತಿ ಆ ಜಾತಿ ಎಂಬುದಿಲ್ಲ ಎಲ್ಲಾ ಕಾಯಕವು ಮಹತ್ವದ್ದೆ.
- ಸಾಮೂಹಿಕ ದುಡಿಮೆಯಿಂದ ಸಂತೋಷವನ್ನು ಪಡೆಯಬಹುದೆಂದರು.
- ಸಾಮರ್ಥ್ಯಕ್ಕೆ ಅನುಗುಣವಾಗಿ ದುಡಿಯಬೇಕು. ದುಡಿಮೆಗೆ ತಕ್ಕನಾದಂತಹ ಪ್ರತಿಫಲವನ್ನು ಪಡೆಯಬೇಕು. ಹೆಚ್ಚಿನ ಪ್ರತಿಫಲಕ್ಕೆ ಆಸೆ ಪಡಬಾರದು.
- ನಿಮ್ಮ ಕಾಯಕದಿಂದ ಸಿಕ್ಕ ಪ್ರತಿಫಲದಲ್ಲಿ ನಿಮಗೆ ಅಗತ್ಯವಿರುವಷ್ಟು ಬಳಸಬೇಕು, ಉಳಿದಿದ್ದನ್ನು ಇತರರಿಗೆ ದಾಸೋಹ ನೀಡಬೇಕು.
ಸಂವಿಧಾನದಲ್ಲಿ ಕಾಯಕ ಮತ್ತು ಶ್ರಮಜೀವಿಗಳು
ಸಂಪತ್ತು ಉತ್ಪಾದನೆಯಾಗುವುದು ಶ್ರಮಜೀವಿಗಳ ಶ್ರಮದಿಂದ. ಉತ್ಪಾದನೆಯಾದ ಸಂಪತ್ತಿನ ಮೇಲೆ ಶ್ರಮಿಕರಿಗೆ ಯಾವುದೇ ರೀತಿಯ ಒಡೆತನವಿಲ್ಲ. ಆದರೆ ಜಗತ್ತಿನ ಉದ್ದಕ್ಕೂ ಎಲ್ಲಾ ಕಾಲದಲ್ಲೂ ಶ್ರಮಿಕರ ಶೋಷಣೆ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಈ ಶೋಷಣೆಯ ವಿರುದ್ಧ ಶ್ರಮಜೀವಿಗಳು ತಮ್ಮ ಹೋರಾಟವನ್ನು ಮಾಡುತ್ತಲೇ ಬರುತ್ತಿದ್ದಾರೆ.
ಭಾರತ ದೇಶದಲ್ಲಿ ಅನೇಕ ಮತಗಳು, ಜಾತಿಗಳು ಮತ್ತು ಉಪಜಾತಿಗಳಿವೆ. ಈ ಜಾತಿ ವ್ಯವಸ್ಥೆಯಲ್ಲಿ ಶೂದ್ರರು, ಅಸ್ಪೃಶ್ಯರು, ಬುಡಕಟ್ಟುಗಳು ಮತ್ತು ಮಹಿಳೆಯರು, ದುಡಿಯುವ ವರ್ಗಗಳು ಇವೆ. ಭಾರತದಲ್ಲಿ ಪ್ರಾದೇಶಿಕ ವೈವಿಧ್ಯ, ಮತೀಯ ವೈವಿಧ್ಯ, ಜಾತಿ ವೈವಿಧ್ಯ ಎಂಬ ನಾನಾ ಬಗೆಯ ವೈವಿಧ್ಯಗಳನ್ನು ಕಾಣಬಹುದು. ಇಂತಹ ವೈವಿಧ್ಯಮಯ ಸಮಾಜ ಬ್ರಿಟಿಷರ ಆಳ್ವಿಕೆಯಲ್ಲಿ ವಿವಿಧ ಬಗೆಯ ಪ್ರಭಾವಗಳಿಗೆ ಗುರಿಯಾಯಿತು. ಸಾಮೂಹಿಕ ಇಂಗ್ಲಿಷ್ ಶಿಕ್ಷಣ, ಸರ್ಕಾರಿ ನೌಕರಿ, ಸೈನ್ಯದಲ್ಲಿ ನೌಕರಿ, ಔದ್ಯಮೀಕರಣ ಇತ್ಯಾದಿಗಳು ಹೊಸ ಜನವರ್ಗಗಳನ್ನು ರೂಪಿಸಿದವು. ಹೀಗೆ ಔದ್ಯಮಿಕ ಬಂಡವಾಳಗಾರ ವರ್ಗ, ಕಾರ್ಮಿಕ ವರ್ಗ, ವಿದ್ಯಾವಂತ ಮಧ್ಯಮ ವರ್ಗಗಳನ್ನು ರೂಪಿಸಲಾಯಿತು.
ಬ್ರಿಟಿಷರು ಭಾರತದಲ್ಲಿ ಟೀ, ನೀಲಿ, ಅಫೀಮು, ಹತ್ತಿ ಮುಂತಾದ ತೋಟಗಳನ್ನು ಅಭಿವೃದ್ಧಿಪಡಿಸಿದರು. ಕಚ್ಚಾಮಾಲು ಸಾಗಿಸಲು ರೈಲು ಮತ್ತು ಬಂದರುಗಳನ್ನು ಸ್ಥಾಪನೆ ಮಾಡಿದರು. ಕಲ್ಕತ್ತೆಯ ಸುತ್ತ ಸೆಣಬು ಕಾರ್ಖಾನೆಗಳು ಹುಟ್ಟಿಕೊಂಡವು. ಮುಂಬಯಿ ಮತ್ತು ಅಹಮದಾಬಾದ್ ಪ್ರದೇಶಗಳಲ್ಲಿ ಜವಳಿ ಉದ್ಯಮ ಬೆಳೆಯಿತು. ಇದರ ಪರಿಣಾಮವಾಗಿ ಭಾರತದಲ್ಲಿ ಆಧುನಿಕ ಕಾರ್ಮಿಕ ವರ್ಗ ರೂಪಗೊಂಡಿತು. ಕಡಿಮೆ ಕೂಲಿ ಮಿತಿಯಿಲ್ಲದ ದುಡಿಮೆ, ಹೀನವಾದ ವಸತಿ ಸೌಕರ್ಯ, ಮಾಲಿಕರ ದಬ್ಬಾಳಿಕೆ ಇತ್ಯಾದಿಗಳ ವಿರುದ್ಧ ಕಾರ್ಮಿಕ ವರ್ಗ ಹೋರಾಟ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ತತ್ಪರಿಣಾಮವಾಗಿ ಕಾರ್ಮಿಕ ಸಂಘಗಳು ಹುಟ್ಟಿಕೊಂಡವು.
1942ರಿಂದ 1946ರ ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಬ್ರಿಟಿಷ್ ವೈಸ್‌ರಾಯ್ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ / ಸದಸ್ಯರಾಗಿ ಕಾರ್ಯನಿರ್ವಹಿಸಿದರು. ತಮಗಿದ್ದ ಇತಿಮಿತಿಯೊಳಗೆ ಸಾಧ್ಯವಾದಷ್ಟು ಕಾರ್ಮಿಕರ ಪರವಾದ ಕೆಲಸ ನಿರ್ವಹಿಸಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ :
- ತರಬೇತಿ ಹೊಂದಿದ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಬೀದಿಗಳಲ್ಲಿ ಅಲೆದಾಡಬಾರದೆಂಬ ದೃಷ್ಟಿಯಿಂದ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದರು.
- ದಿನಕ್ಕೆ 14 ಗಂಟೆ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿದರು.
- ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಸೌಲಭ್ಯ
- ಮಹಿಳಾ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ
- ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಪ್ರತ್ಯೇಕ ಶೌಚಾಲಯಗಳ ಏರ್ಪಾಡು
- ವೇತನ ಸಹಿತ ರಜಾದಿನಗಳ ಸೌಲಭ್ಯಗಳನ್ನು ಕಲ್ಪಿಸಿದರು.
- ಕಾರ್ಮಿಕರಿಗೆ ಶಿಕ್ಷಣ, ವೈದ್ಯಕೀಯ ಮತ್ತು ಸಾಂಸ್ಕೃತಿಕ ಸೌಲಭ್ಯಗಳನ್ನು ಕಲ್ಪಿಸಿದರು
- ಕೌನ್ಸಿಲೇಷನ್ ಅಥವಾ ರಾಜಿ ಸಂಧಾನ/ಪಂಚಾಯತಿ ಮೂಲಕ ಕಾರ್ಮಿಕರ ವ್ಯಾಜ್ಯಗಳನ್ನು ಇತ್ಯರ್ಥಪಡಿಸಬೇಕೆಂದರು ಮತ್ತು ಈ ಪ್ರಕ್ರಿಯೆ ಕಾರ್ಮಿಕ ಕಾಯ್ದೆಯ ಭಾಗವಾಗಬೇಕೆಂದರು
- ಕಾರ್ಮಿಕರಿಗೆ ಕಡ್ಡಾಯ ವಿಮೆ ಯೋಜನೆಯನ್ನು ಜಾರಿಗೊಳಿಸಿದರು
- ಕನಿಷ್ಠ ಕೂಲಿ
- ಕಾರ್ಮಿಕರ ಕಲ್ಯಾಣ ನಿಧಿ
- ಫ್ಯಾಕ್ಟರೀಸ್ ಕಾಯ್ದೆ (ಕಾರ್ಖಾನೆ ಕಾಯ್ದೆ)
- ವೇತನ ಪರಿಷ್ಕರಣೆ
- ಭವಿಷ್ಯ ನಿಧಿ ಕಾಯ್ದೆ
ಭಾರತ ಸಂವಿಧಾನದ ಭಾಗ-ಮೂರರಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ಹೇಳುತ್ತದೆ. ಭಾರತ ಸಂವಿಧಾನವು ತನ್ನ ಪಜೆಗಳಿಗೆ ಮೂಲಭೂತವಾದ ಮಾನವೀಯ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಈ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಸಂವಿಧಾನಾತ್ಮಕ ಪರಿಹಾರವನ್ನು ಪಡೆಯುವ ಹಕ್ಕು ನೀಡಿದೆ. ಮೂಲಭೂತ ಹಕ್ಕುಗಳಲ್ಲಿ ಕಾರ್ಮಿಕರಿಗೆ ಸಂಬಂಧಿಸಿದ ಪ್ರಮುಖ ಅನುಚ್ಛೇದಗಳು ಈ ಕೆಳಕಂಡಂತಿವೆ.
ಅನುಚ್ಛೇದ 14ರಲ್ಲಿ ಭಾರತ ದೇಶದ ಯಾವುದೇ ವ್ಯಕ್ತಿಗೆ ಕಾನೂನಿನ ಸಮಾನತೆಯನ್ನು ಅಥವಾ ಕಾನೂನಿನ ಸಮಾನ ರಕ್ಷಣೆಯನ್ನು ರಾಜ್ಯ ನಿರಾಕರಿಸುವಂತಿಲ್ಲ.
ಅನುಚ್ಛೇದ 15ರಲ್ಲಿ
(1) ಸರ್ಕಾರವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮ ಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ತಾರತಮ್ಯವನ್ನು ಮಾಡತಕ್ಕದ್ದಲ್ಲ
(2) ಸರ್ಕಾರ ಅಥವಾ ಯಾವುದೇ ಖಾಸಗಿ ವ್ಯಕ್ತಿಯು ಧರ್ಮ, ಮೂಲವಂಶ, ಲಿಂಗ, ಜಾತಿ, ಅಥವಾ ಜನ್ಮಸ್ಥಳ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳೆಂದರೆ ಅಂಗಡಿ, ಉಪಹಾರ ಗೃಹಗಳು, ಹೋಟೆಲ್, ಮನರಂಜನಾ ಸ್ಥಳಗಳು, ಕೆರೆಗಳು, ಸ್ನಾನಗೃಹಗಳು ಮತ್ತು ರಸ್ತೆಗಳನ್ನು ಒಳಗೊಂಡಿವೆ. ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿತವಾದ ಬಾವಿಗಳನ್ನು, ಕೆರೆಗಳನ್ನು, ಸ್ನಾನಘಟ್ಟಗಳನ್ನು ಎಲ್ಲರೂ
ಬಳಸಬಹುದು.
ಅನುಚ್ಛೇದ 16ರಲ್ಲಿ
(1) ಸರ್ಕಾರದ ಯಾವುದೇ ಸಂಸ್ಥೆಗೆ ಸಂಬಂಧಿಸಿದಂತೆ ನಿಯೋಜನೆ ಅಥವಾ ನೇಮಕದ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶವಿರತಕ್ಕದ್ದು.
(2) ಧರ್ಮ, ಮೂಲವಂಶ, ಜಾತಿ, ಲಿಂಗ, ಸಂತತಿ, ಜನ್ಮ ಸ್ಥಳ, ನಿವಾಸದ ಆಧಾರದ ಮೇಲೆ ರಾಜ್ಯದ ಅಧೀನದಲ್ಲಿರುವ ಯಾವುದೇ ನಿಯೋಜನೆಗೆ ಅಥವಾ ನೇಮಕಾತಿಗೆ ಸಂಬಂಧಿಸಿದಂತೆ ಯಾರನ್ನಾದರೂ ಅನರ್ಹಗೊಳಿಸುವುದಾಗಲಿ ಅಥವಾ ತಾರತಮ್ಯವಾಗಲೀ ಮಾಡತಕ್ಕದ್ದಲ್ಲ.
ಅನುಚ್ಛೇದ 19ರಲ್ಲಿ : ಸಮಸ್ತ ನಾಗರಿಕರು
1. ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ;
2. ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ;
3. ಸಂಸ್ಥೆಗಳನ್ನು ಅಥವಾ ಸಂಘಗಳನ್ನು ರಚಿಸುವ;
4. ದೇಶದಲ್ಲಿ ಅಬಾಧಿತರಾಗಿ ಸಂಚರಿಸುವ;
5. ದೇಶದ ಯಾವುದೇ ಭಾಗದಲ್ಲಿ ವಾಸ ಮಾಡುವ / ನೆಲೆಸುವ;
6. ಯಾವುದೇ ವೃತ್ತಿಯನ್ನು ನಡೆಸುವ, ವ್ಯಾಪಾರವನ್ನು ವ್ಯವಹಾರವನ್ನು ನಡೆಸುವ ಹಕ್ಕನ್ನು ಹೊಂದಿರುತ್ತಾರೆ.
ಅನುಚ್ಛೇದ 21ರಲ್ಲಿ ಕಾನೂನು ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾರೇ ವ್ಯಕ್ತಿಯ ಜೀವನವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ.
ಅನುಚ್ಛೇದ 23ರಲ್ಲಿ ಮಾನವನ ಮಾರಾಟ ಮತ್ತು ಅದೇ ಸ್ವರೂಪದ ಇತರ ಬಲಾತ್ಕಾರದ ದುಡಿಮೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಉಪಬಂಧದ ಯಾವುದೇ ಉಲ್ಲಂಘನೆಯು
ಕಾನೂನಿಗೆ ಅನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು.
ಅನುಚ್ಛೇದ 24ರಲ್ಲಿ: ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆಯಲ್ಲಿ ಅಥವಾ ಗಣಿಯಲ್ಲಿ ಕೆಲಸ ಮಾಡಲು ನಿಯೋಜಿಸತಕ್ಕದ್ದಲ್ಲ
ಅಥವಾ ಇತರೆ ಯಾವುದೇ ಅಪಾಯಕಾರಿಯಾದ ಉದ್ಯೋಗದಲ್ಲಿ ತೊಡಗಿಸತಕ್ಕದ್ದಲ್ಲ.
ಭಾರತ ಸಂವಿಧಾನದ ಭಾಗ-ನಾಲ್ಕರಲ್ಲಿ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ತಿಳಿಯಪಡಿಸಿದೆ. ಇವುಗಳನ್ನು ಪಾಲಿಸುವುದು ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಸರ್ಕಾರಗಳು ರಾಜ್ಯ ನಿರ್ದೇಶಕ ನೀತಿಗಳನ್ನು ಪಾಲಿಸದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಲು ಬರುವುದಿಲ್ಲ. ಕಾರ್ಮಿಕರಿಗೆ ಸಂಬಂಧಿಸಿದ ರಾಜ್ಯ ನಿರ್ದೇಶನ ನೀತಿಗಳು ಈ ಕೆಳಕಂಡಂತಿವೆ :
ಅನುಚ್ಛೇದ 39ರಲ್ಲಿ : ರಾಜ್ಯವು ವಿಶೇಷವಾಗಿ
- ನಾಗರಿಕರು ಅವರು ಪುರುಷರೇ ಆಗಿರಲಿ, ಸ್ತ್ರೀಯರೇ ಆಗಿರಲಿ ಸಮಾನವಾಗಿ ಜೀವನ ನಿರ್ವಹಿಸುವುದಕ್ಕೆ ಸಾಕಷ್ಟು ಸಾಧನಗಳಿಗೆ ಹಕ್ಕು ಹೊಂದಿರುವುದನ್ನು;
- ಸಮುದಾಯದ ಭೌತಿಕ ಸಾಧನ ಸಂಪತ್ತುಗಳ ಒಡೆತನವು ಮತ್ತು ನಿಯಂತ್ರಣವು ಸಕಲರ ಸಾಧನೆಗೆ ಅತ್ಯುತ್ತಮ ರೀತಿಯಲ್ಲಿ ಸಹಾಯಕವಾಗುವಂತೆ ಹಂಚಿಕೆಯಾಗುವುದನ್ನು;
- ಸಕಲರ ಹಿತ ಸಾಧನೆಗೆ ಬಾಧಕವಾಗುವ ರೀತಿಯಲ್ಲಿ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೇಂದ್ರೀಕೃತವಾಗದಂತೆ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸುವುದನ್ನು;
- ಪುರುಷರಿಗೆ ಮತ್ತು ಮಹಿಳೆಯರಿಗೆ ಇಬ್ಬರಿಗೂ ಸಮಾನ ವೇತನ ದೊರೆಯುವುದನ್ನು;
- ಪುರುಷ ಮತ್ತು ಮಹಿಳಾ ಕೆಲಸಗಾರರ ಆರೋಗ್ಯ ಮತ್ತು ಶಕ್ತಿ ಹಾಗೂ ಮಕ್ಕಳ ಎಳೆಯ ವಯಸ್ಸು ಇವುಗಳನ್ನು ದುರುಪಯೋಗಪಡಿಸಿಕೊಳ್ಳದಿರುವುದನ್ನು ಮತ್ತು ಆರ್ಥಿಕ ಅವಶ್ಯಕತೆಯ ಒತ್ತಡದಿಂದಾಗಿ ನಾಗರಿಕರನ್ನು ತಮ್ಮ ವಯಸ್ಸಿಗೆ ಅಥವಾ ಶಕ್ತಿಗೆ ತಕ್ಕುದಲ್ಲದ ಉಪ ಕಸುಬುಗಳಲ್ಲಿ ತೊಡಗಿಸದೆ ಇರುವುದನ್ನು;
- ಆರೋಗ್ಯಕರವಾದ ರೀತಿಯಲ್ಲಿ ಮತ್ತು ಸ್ವತಂತ್ರ ಹಾಗೂ ಘನತೆಯ ವಾತಾವರಣದಲ್ಲಿ ಬೆಳವಣಿಗೆ ಹೊಂದಲು ಮಕ್ಕಳಿಗೆ ಅವಕಾಶ ಮತ್ತು ಅನುಕೂಲತೆಗಳು ದೊರೆಯುವುದನ್ನು ಹಾಗೂ ಐಹಿಕ ಪತನದ ವಿರುದ್ಧ ಸಂರಕ್ಷಣೆ ಒದಗಿಸುವುದನ್ನು.
ಅನುಚ್ಛೇದ 39ರಲ್ಲಿ – ಆರ್ಥಿಕ ಅಥವಾ ಇತರೆ ಅಸಮರ್ಥತೆಗಳ ಕಾರಣದಿಂದಾಗಿ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸದಿರುವುದನ್ನು ಸುನಿಶ್ಚಿತಗೊಳಿಸಲು ಸೂಕ್ತ ಕಾನೂನು ರಚನೆಯ ಮೂಲಕ ಅಥವಾ ಯೋಜನೆಗಳ ಮೂಲಕ ಅಥವಾ ಇತರೆ ಯಾವುದೇ ರೀತಿಯಲ್ಲಿ ಉಚಿತ ಕಾನೂನು ನೆರವನ್ನು ಒದಗಿಸತಕ್ಕದ್ದು.
ಅನುಚ್ಛೇದ 41ರಲ್ಲಿ ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ, ಶಿಕ್ಷಣ ಪಡೆಯುವ ಮತ್ತು ನಿರುದ್ಯೋಗ, ವೃದ್ಧಾಪ್ಯ, ರೋಗ ಮತ್ತು ಅಸಮರ್ಥತೆಯ ಮತ್ತು ಇತರೆ ಉಪಬಂಧಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಸರ್ಕಾರ ತನ್ನ ಆರ್ಥಿಕ ಸಾಮರ್ಥ್ಯದ ಮತ್ತು ಅಭಿವೃದ್ಧಿಯ ಪರಿಮಿತಿಗಳಲ್ಲಿ ಪರಿಣಾಮಕಾರಿಯಾದ ಉಪಬಂಧಗಳನ್ನು ಮಾಡತಕ್ಕದ್ದು.
ಅನುಚ್ಛೇದ 42ರಲ್ಲಿ ಕೆಲಸ ಮಾಡಲು ನ್ಯಾಯಯುತ ಮತ್ತು ಮಾನವೋಚಿತ ಪರಿಸ್ಥಿತಿಗಳಿರುವಂತೆ ಮತ್ತು ಪ್ರಸೂತಿ ಪ್ರಯೋಜನವು ದೊರೆಯುವಂತೆ ರಾಜ್ಯವು ಉಪಬಂಧವನ್ನು ಮಾಡತಕ್ಕದ್ದು.
ಅನುಚ್ಛೇದ 43ರಲ್ಲಿ ರಾಜ್ಯವು ಸೂಕ್ತ ಕಾನೂನನ್ನು ರಚಿಸುವ ಮೂಲಕ ಅಥವಾ ಆರ್ಥಿಕ ವ್ಯವಸ್ಥೆಯ ಮೂಲಕ ಅಥವಾ ಇತರೆ ಯಾವುದೇ ರೀತಿಯಲ್ಲಿ ಕೃಷಿಯ, ಕೈಗಾರಿಕೆಯ ಅಥವಾ ಇತರ ಎಲ್ಲ ಕೆಲಸಗಾರರಿಗೂ ಕೆಲಸ, ಜೀವನ ನಿರ್ವಹಣಾ ವೆಚ್ಚ ಮತ್ತು ಉತ್ತಮ ಜೀವನ ಮಟ್ಟವನ್ನು ಸುನಿಶ್ಚಿತಗೊಳಿಸುವ ಕೆಲಸದ ಸ್ಥಿತಿಗಳು ಮತ್ತು ವಿರಾಮದ ವೇಳೆಯ ಸಂಪೂರ್ಣ ಉಪಯೋಗ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಅವಕಾಶಗಳು ದೊರೆಯುವಂತೆ ಮಾಡಲು ಪ್ರಯತ್ನಿಸತಕ್ಕದ್ದು, ಮತ್ತು ವಿಶೇಷವಾಗಿ ರಾಜ್ಯವು ಗ್ರಾಮಾಂತರ ಪ್ರದೇಶಗಳಲ್ಲಿ ವೈಯಕ್ತಿಕ ಆಧಾರದ ಮೇಲೆ ಅಥವಾ ಸಹಕಾರಿ ವ್ಯವಸ್ಥೆಯ ಆಧಾರದ ಮೇಲೆ ಗೃಹ ಕೈಗಾರಿಕೆಗಳ ಸಂವರ್ಧನೆಗೆ ಪ್ರಯತ್ನಿಸತಕ್ಕದ್ದು.
ಅನುಚ್ಛೇದ 43ಎನಲ್ಲಿ ಕಾರ್ಮಿಕರು ತಾವು ಕೆಲಸ ಮಾಡುವ ಕೈಗಾರಿಕಾ ಸಂಸ್ಥೆಯ ಆಡಳಿತದಲ್ಲಿ ಭಾಗವಹಿಸುವ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳುವುದು.
ಭಾರತ ಸಂವಿಧಾನದ ಅಡಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾನೂನುಗಳನ್ನು ರಚಿಸಿ ಕಾರ್ಮಿಕ ವರ್ಗಕ್ಕೆ ಹಲವು ರೀತಿಯ ಹಕ್ಕುಗಳನ್ನು ನೀಡಿವೆ. ಕಾನೂನುಗಳಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅನುವು ಮಾಡಿಕೊಡಲಾಗಿದೆ. ಕಾರ್ಮಿಕ ವರ್ಗದ ಹಿತ ಕಾಪಾಡಲು ಮತ್ತು ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಅನುಷ್ಠಾನ
ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದ ಜೀತಪದ್ಧತಿಯನ್ನು ರದ್ದುಪಡಿಸಲಾಗಿದೆ. ಜೀತಕಾರ್ಮಿಕರನ್ನು ಮುಕ್ತಗೊಳಿಸಿ ಸ್ವತಂತ್ರರನ್ನಾಗಿ ಮಾಡಲಾಯಿತು, ಮಾನವನ ಮಾರಾಟ ನಿಷೇಧಿಸಲಾಗಿದೆ. ಜಾತಿಗೊಂದು ಕಸಬು ಮತ್ತು ಅದು ವಂಶಪಾರಂಪರವಾಗಿದ್ದುದನ್ನು ರದ್ದುಪಡಿಸಿ ಯಾವುದೇ ಜಾತಿಯ ವ್ಯಕ್ತಿ ಯಾವುದೇ ವೃತ್ತಿಯನ್ನು ಮಾಡುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಸಮಾನ ಕಾನೂನಿನ ರಕ್ಷಣೆಯನ್ನು ನೀಡಲಾಗಿದೆ. ಮತ, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಮತ್ತು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಪುರುಷನೇ ಆಗಿರಲಿ, ಸ್ತ್ರೀಯರೇ ಆಗಿರಲಿ, ಸಮಾನ ಕೆಲಸಕ್ಕೆ ಸಮಾನ ಕೂಲಿ ಕೊಡಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಕಾರ್ಮಿಕರು ಸಂಘ-ಸಂಸ್ಥೆಗಳನ್ನು ರಚಿಸಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಸಂಚರಿಸಿ ದುಡಿಯುವ ಹಕ್ಕನ್ನು ನೀಡಲಾಗಿದೆ. ಯಾವುದೇ ವೃತ್ತಿ/ಕಸಬು/ವ್ಯಾಪಾರ/ವ್ಯವಹಾರವನ್ನು ನಡೆಸುವ ಹಕ್ಕನ್ನು ನೀಡಲಾಗಿದೆ. ಕೆಲಸಗಾರರ ಕೆಲಸದ ಭದ್ರತೆ ಇತ್ಯಾದಿಗಳ ಬಗ್ಗೆ ಸುಧಾರಣೆಗಳನ್ನು ತರಲಾಗಿದೆ. ಉಚಿತ ಕಾನೂನು ನೆರವನ್ನು ನೀಡಲಾಗುತ್ತಿದೆ. ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವೆಲ್ಲದರ ಪರಿಣಾಮವಾಗಿ 1947ರಲ್ಲಿ ಶೇ.70ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದದ್ದನ್ನು ಶೇ.21ಕ್ಕೆ ಇಳಿಸಲು ಸಾಧ್ಯವಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ಆಹಾರ ಇತ್ಯಾದಿಗಳನ್ನು ಒದಗಿಸಿ ದುಡಿಯುವ ಜನರ ಜೀವನ ಮಟ್ಟವನ್ನು ಸ್ವಲ್ಪ ಮಟ್ಟಿಗೆ ಉತ್ತಮಗೊಳಿಸಿದೆ.
ಇಂದಿನ ಪರಿಸ್ಥಿತಿ
ಇಷ್ಟೆಲ್ಲ ಸಾಧನೆಯಾಗಿದ್ದರೂ ಇಂದು ದೇಶದ ಕಾರ್ಮಿಕ ವರ್ಗ ಏನನ್ನು ಗಳಿಸಿತ್ತೋ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಇಂದು ದೇಶದಲ್ಲಿ ಶೇ.94ರಷ್ಟು ದುಡಿಯುವ ವರ್ಗ ಅಸಂಘಟಿತ ವಲಯದಲ್ಲಿ ಇದ್ದಾರೆ. ಇವರಿಗೆ ಕಾನೂನಿನ ರಕ್ಷಣೆಯಿಲ್ಲ. ಕನಿಷ್ಠ ವೇತನವಿಲ್ಲ. ದಿನದಲ್ಲಿ 8 ಗಂಟೆಗೂ ಹೆಚ್ಚು ದುಡಿಯಬೇಕು, ಆರೋಗ್ಯದ ಭದ್ರತೆಯಿಲ್ಲ ಮತ್ತು ಯಾವುದೇ ತರಹದ ಸಾಮಾಜಿಕ ಭದ್ರತೆಯೂ ಸಹ ಇಲ್ಲ. ಕರೋನ ವೈರಸ್ ಸಮಯದಲ್ಲಿ 40 ಕೋಟಿ ವಲಸೆ ಕಾರ್ಮಿಕರು ಪಟ್ಟ ಕಷ್ಟಕಾರ್ಪಣ್ಯಗಳು ಮತ್ತು ನಮ್ಮ ಸರ್ಕಾರಗಳು ಇವರ ಬಗ್ಗೆ ನಡೆದುಕೊಂಡ ರೀತಿ ಎಷ್ಟು ಅಮಾನವೀಯ ಎಂಬ ಸತ್ಯ ನಮ್ಮ ಕಣ್ಮುಂದಿದೆ.
ಇಂದು ಕಾರ್ಮಿಕರಿಗೆ ಸಂಬಂಧಿಸಿ ಕೇಂದ್ರ ಸರ್ಕಾರ 50 ಕಾನೂನುಗಳನ್ನು ಮತ್ತು ರಾಜ್ಯ ಸರ್ಕಾರಗಳು ಸುಮಾರು 200 ಕಾನೂನುಗಳನ್ನು ಜಾರಿಗೆ ತಂದಿವೆ. ಈ ಎಲ್ಲ ಕಾನೂನುಗಳನ್ನು ವಿಲೀನ ಮಾಡಿ ನಾಲ್ಕು ಪರಿಷ್ಕರಿಸಿದ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅವುಗಳೆಂದರೆ;
- ಕಾರ್ಮಿಕರ ಕೂಲಿ ಮಜೂರಿಗೆ ಸಂಬಂಧಿಸಿದ್ದು
- ಕಾರ್ಮಿಕರ ಮತ್ತು ಮಾಲಿಕರ ಸಂಬಂಧಗಳನ್ನು ಕುರಿತದ್ದು
- ಕಾರ್ಮಿಕರ ಆರೋಗ್ಯ, ಸುರಕ್ಷತೆ ಇತ್ಯಾದಿಗಳಿಗೆ ಸಂಬಂಧಿಸಿದ್ದು
- ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ್ದು
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ಕಾನೂನುಗಳ ಜಾರಿಯಿಂದ ಕಾರ್ಮಿಕ ಸಂಘಗಳು ನಾಶವಾಗಿ ಕಾರ್ಮಿಕರು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆಯಾಗಲಿ ಅಥವಾ ಶೋಷಣೆಯ ವಿರುದ್ಧವಾಗಲಿ ಧ್ವನಿ ಎತ್ತುವಂತಿಲ್ಲ. ಕಾರ್ಮಿಕ ವರ್ಗ ತಮ್ಮ ಹೋರಾಟಗಳಿಂದ ಗಳಿಸಿದ್ದ ಹಲವು ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ. ಸಾಮಾಜಿಕ ಭದ್ರತೆ ಇಲ್ಲದೆ ಗುಲಾಮರಂತೆ ಬಾಳಬೇಕಾಗುತ್ತದೆ. ವಿದೇಶಗಳಿಂದ ಬಂಡವಾಳ ಹರಿದು ಬಂದರೂ ಹೊಸ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಕಾರಣ ಅವರು ತಮ್ಮ ಕೈಗಾರಿಕೆಗಳನ್ನು ವಿಜ್ಞಾನ, ತಂತ್ರಜ್ಞಾನ, ಗಣಕೀಕರಣ, ರೊಬೊಟ್, ಡ್ರೋನ್ ಇತ್ಯಾದಿಗಳನ್ನು ಬಳಸಿ ಕನಿಷ್ಠ ಕೆಲಸಗಾರದಿಂದ ತಮ್ಮ ಸಂಸ್ಥೆಗಳನ್ನು ನಡೆಸುತ್ತಾರೆ. ಇದರ ಪರಿಣಾಮ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತದೆ.
ಒಬ್ಬೊಬ್ಬರಾಗಿ ಈ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಇಡೀ ದುಡಿಯುವ ವರ್ಗ ಒಟ್ಟಾಗಿ ಈ ಸವಾಲುಗಳನ್ನು ಎದುರಿಸಬೇಕು. ದುಡಿಯುವ ವರ್ಗ ಕೇವಲ ತಮ್ಮ ಬೇಡಿಕೆಗಳ ಹೋರಾಟಗಳಿಗೆ ಸೀಮಿತವಾಗದೇ, ಅದಕ್ಕೂ ಮಿಗಿಲಾದ ಕ್ರಾಂತಿಕಾರಿ ಕರ್ತವ್ಯವನ್ನು ನಿರ್ವಹಿಸಬೇಕಾದ ಹೊಣೆಗಾರಿಕೆಯೂ ಇದೆ.
ವಚನಕಾರರು ದುಡಿಯುವ ವರ್ಗದ ಪರವಾಗಿ ಕೇವಲ ಆರ್ಥಿಕ ಹೋರಾಟ ನಡೆಸಲಿಲ್ಲ. ಅದರ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಹೋರಾಟವನ್ನು ನಡೆಸಿದರು. ಇಂದು ದೇಶದ ದುಡಿಯುವ ವರ್ಗ ಎದುರಿಸುತ್ತಿರುವುದು ಕೇವಲ ಆರ್ಥಿಕ ಸವಾಲು ಮಾತ್ರವಲ್ಲ, ಅದೊಂದು ಸಾಮಾಜಿಕ ಮತ್ತು ರಾಜಕೀಯ ಸವಾಲು ಸಹ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಚನಕಾರರ ಸಂದೇಶ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ. ಈ ದಿಕ್ಕಿನಲ್ಲಿ ಪ್ರಜಾಪ್ರಭುತ್ವ ಚಳುವಳಿಗಳನ್ನು ಕಟ್ಟುವ ಕೆಲಸ ತುರ್ತಾಗಿ ನಡೆಸಬೇಕಾಗಿದೆ. ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾಗಿದೆ.