ಕೆಲವು ನಂಬಿಕೆಗಳು ಮನಸ್ಸಿಗೆ ಮುದ, ಶಾಂತಿ, ಧೈರ್ಯ, ಸಾಂತ್ವನ, ಸಮಾಧಾನ ಇತ್ಯಾದಿಯಾಗಿ ವಿಶ್ವಾಸವನ್ನು ಮೂಡಿಸುತ್ತವೆ. ಇಂತಹ ನಂಬಿಕೆಗಳನ್ನು ವಚನಕಾರರು ವಿರೋಧಿಸಲಿಲ್ಲ. ಯಾವ ಮೂಢನಂಬಿಕೆಗಳು ಅಮಾನವೀಯವೋ, ಅಪಾಯಕಾರಿಯೋ, ವಿನಾಶಕಾರಿಯೋ, ಹಿಂಸಾತ್ಮಕವೋ ಮತ್ತು ಅನಾರೋಗ್ಯಕರವೋ ಅಂತಹ ಮೂಢನಂಬಿಕೆಗಳನ್ನು ವಚನಕಾರರು ನಂಬಿಕೆಗಳಿಂದ ಪ್ರತ್ಯೇಕಿಸಿದರು. ಇಂತಹ ಮೂಢನಂಬಿಕೆಗಳು ಸಮಾಜದಲ್ಲಿ ಶೋಷಣೆ, ಗುಲಾಮಗಿರಿ, ಅಸ್ಪೃಶ್ಯತೆ, ಮೇಲು- ಕೀಳೆಂಬ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಹುನ್ನಾರವನ್ನು ಬೆಳಕಿಗೆ ತಂದರು.
ಜಾತಿ, ಲಿಂಗ, ವರ್ಣ ಆಧಾರಿತ ತಾರತಮ್ಯಗಳಿಗೆ ಕಾರಣ ಮೂಢನಂಬಿಕೆಗಳೆಂದು ತೋರಿಸಿಕೊಟ್ಟರು. ಹಸಿವು, ಬಡತನ, ಕೊಳಕು, ಅಪೌಷ್ಟಿಕತೆ, ಅನಕ್ಷರತೆ, ಕಂದಾಚಾರ ಇತ್ಯಾದಿಗಳಿಗೆ ಕಾರಣ ಮೂಢನಂಬಿಕೆಗಳೆಂದು ತೋರಿಸಿಕೊಟ್ಟರು. ಮುಗ್ಧ ಜನರನ್ನು ವೈಚಾರಿಕತೆಗೆ ಕೊಂಡೊಯ್ಯುವ ಕೆಲಸವನ್ನು ವಚನಕಾರರು ತಮ್ಮ ವಚನಗಳ ಮುಖಾಂತರ ಪ್ರಯತ್ನಿಸಿದರು. ಕೆಲವು ವಚನಗಳನ್ನು ಇಲ್ಲಿ ನೀಡಲಾಗಿದೆ.
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ
ಮಾಡುವ ಕರ್ಮಿ ನೀ ಕೇಳಾ
ಉದಯವೆಂದೇನೊ ಶರಣಂಗೆ?
ಮಧ್ಯಾಹ್ನವೆಂದೇನೊ ಶರಣಂಗೆ?
ಅಸ್ತಮಾನವೆಂದೇನೊ ಶರಣಂಗೆ?
ಮಹಾಮೇರುವಿನ ಮರೆಯಲ್ಲಿರ್ದು
ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ
ನಮ್ಮ ಕೂಡಲ ಸಂಗಮದೇವರು
ಈ ವಚನದಲ್ಲಿ ಬಸವಣ್ಣನವರು ಪುರೋಹಿತರು ಪಂಚಾಂಗ ನೋಡಿ ಇಂತಿಂತಹ ಕಾಯಕಗಳನ್ನು ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ ನೆರವೇರಿಸಿದರೆ ಇಷ್ಟಾರ್ಥವು ಸಿದ್ಧಿಸುವುದೆಂದು ನಂಬಿಸುತ್ತಾರೆ. ಆದರೆ, ಅಧ್ಯಾತ್ಮದ ಶಿವಶರಣರಿಗೆ ಎಲ್ಲಾ ಕಾಲವು ಶ್ರೇಷ್ಠವೇ, ಪವಿತ್ರವೇ. ಆದ್ದರಿಂದ, ಶರಣರು ಶುಭ ಸಮಯ, ಅಶುಭ ಸಮಯವೆಂಬ ಭೇದ ಮಾಡುವುದಿಲ್ಲ ಎನ್ನುತ್ತಾರೆ.
ಲಗ್ನವೆಲ್ಲಿಯದೊ, ವಿಘ್ನವೆಲ್ಲಿಯದೋ ಸಂಗಯ್ಯ?
ದೋಷವೆಲ್ಲಿಯದೊ, ದುರಿತವೆಲ್ಲಿಯದೋ ಸಂಗಯ್ಯ?
ನಿಮ್ಮ ನೆನವಂಗೆ ಭವಕರ್ಮವೆಲ್ಲಿಯದೊ
ಕೂಡಲಸಂಗಮದೇವಯ್ಯ
ಬಸವಣ್ಣನವರು ಈ ವಚನದಲ್ಲಿ ಜೋತಿಷ್ಯ ಮತ್ತು ಪಂಚಾಂಗವನ್ನು ತಿರಸ್ಕರಿಸಿದ್ದಾರೆ.
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯ
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯ
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ
ಈ ವಚನದಲ್ಲಿ ಬಸವಣ್ಣನವರು ರಾಶಿ ಕೂಟ, ಸಂಬಂಧ, ತಾರಾಬಲ, ಚಂದ್ರಬಲ ಇತ್ಯಾದಿಗಳನ್ನು ತಿರಸ್ಕರಿಸಿ ಅವುಗಳು ಶಿವಭಕ್ತರಿಗೆ ಅನಾವಶ್ಯಕವೆಂದು ಸಾರಿದರು.
ಕಲ್ಲನಾಗರಕಂಡರೆ ಹಾಲನೆರೆಯೆಂಬರು
ದಿಟದ ನಾಗರಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ಹಾವನ್ನು ದೈವವೆಂದು ಭಾವಿಸುವ ಮೌಡ್ಯವೊಂದು ಕಡೆಯಾದರೆ, ನಿಜವಾದ ಹಾವು ಕಂಡರೆ ಕೊಲ್ಲಲು ಹವಣಿಸುವುದು, ಇನ್ನೊಂದು ಕಡೆ. ಹೀಗೆ ಕಂಡದ್ದನ್ನೆಲ್ಲ ದೈವವೆಂದು ಭಾವಿಸುವ ಜನರ ವಿಚಾರ ಶಕ್ತಿಯನ್ನು ಬಸವಣ್ಣ ಪ್ರಶ್ನಿಸುತ್ತಾರೆ.
ವಾರಣಾಸಿ, ಅವಿಮುಕ್ತಿ ಇಲ್ಲಿಯೇ ಇದ್ದಾನೆ
ಹಿಮದ ಕೇದಾರ, ವಿರೂಪಾಕ್ಷ ಇಲ್ಲಿಯೇ ಇದ್ದಾನೆ,
ಗೋಕರ್ಣ, ಸೇತುರಾಮೇಶ್ವರ ಇಲ್ಲಿಯೇ ಇದ್ದಾನೆ
ಶ್ರೀಶೈಲ, ಮಲ್ಲಿನಾಥ ಇಲ್ಲಿಯೇ ಇದ್ದಾನೆ
ಸಕಲ ಲೋಕಪುಣ್ಯಕ್ಷೇತ್ರ ಇಲ್ಲಿಯೇ ಇದ್ದಾನೆ
ಸಕಲಲಿಂಗ ಉಳಿಯುಮೇಶ್ವರ ತನ್ನಲ್ಲಿ ಇದ್ದಾನೆ
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ಈ ವಚನದಲ್ಲಿ ಉಳಿಯುಮಹೇಶ್ವರ ಚಿಕ್ಕಣ್ಣ ಶಿವನು ತನ್ನಲ್ಲಿ ಇದ್ದಾಗ, ಎಲ್ಲಾ ಪವಿತ್ರ ಕ್ಷೇತ್ರಗಳು ತನ್ನಲ್ಲಿಯೇ ಇರುವಾಗ ಬೇರೆ ಪುಣ್ಯ ಕ್ಷೇತ್ರಗಳ ದರ್ಶನವೇಕೆ ಎಂಬುದಾಗಿ ಪ್ರಶ್ನಿಸುತ್ತಾರೆ.
ದೇವಲೋಕ ಮೃತ್ಯುಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ
ಮಿಥ್ಯವ ನುಡಿವುದೇ ಮೃತ್ಯುಲೋಕ
ಆಚಾರವೆ ಸ್ವರ್ಗ, ಅನಾಚಾರವೆ ನರಕ
ಕೂಡಲಸಂಗಮದೇವಾ, ನೀವೆ ಪ್ರಮಾಣು
ಈ ವಚನದಲ್ಲಿ ಬಸವಣ್ಣನವರು ದೇವಲೋಕ, ಮೃತ್ಯುಲೋಕ ಎಂಬ ಮೌಢ್ಯವನ್ನು ತೊಲಗಿಸಿ ಬದುಕಿನಲ್ಲಿ ಸತ್ಯವನ್ನು ತೋರಿಸಿದರು.
ಸುಖ ಬಂದರೆ ಪುಣ್ಯದ ಫಲವನ್ನೆನು,
ದುಃಖ ಬಂದರೆ ಪಾಪದ ಫಲವನ್ನೆನು
ನೀ ಮಾಡಿರಡಾಯಿತ್ತೆಂದೆನ್ನೆನು
ಕರ್ಮಕ್ಕೆ ಕರ್ತವೆ ಕಡೆಯೆಂದೆನ್ನೆನು
ಉದಾಸೀನವಿಡಿದು ಶರಣನೆನ್ನೆನು
ಕೂಡಲಸಂಗಮದೇವಾ
ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ
ಸಂಸಾರದ ಸೆಮೆಯ ಬಳಸುವನು
ಈ ವಚನದಲ್ಲಿ ಬಸವಣ್ಣನವರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ. ಪಾಪ, ಪುಣ್ಯವೆಂಬ ಮೂಢನಂಬಿಕೆಗಳಿಂದ ಬಡವರನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ.
ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ
ಮರದ ದೇವರು ದೇವರಲ್ಲ
ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ
ಸೇತುಬಂಧ ರಾಮೇಶ್ವರ, ಗೋಕರ್ಣ
ಕೇದಾರ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿಹ ದೇವರು ದೇವರಲ್ಲ
ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ
ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವಾ!
ಈ ವಚನದಲ್ಲಿ ದೇಗುಲ ಸಂಸ್ಕೃತಿಯನ್ನು ನಿರಾಕರಿಸುತ್ತಾರೆ. ನಿನ್ನನ್ನು ನೀನು ಅರಿವುದರ ಮೂಲಕ ದೇವರನ್ನು ಕಾಣಬೇಕೆಂದು ಸಾರಿದ್ದಾರೆ.
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ
ಗ್ರಹಣ ಸಂಕ್ರಾಂತಿಯಿಂದ ವೆಗ್ಗಳ
ಏಕಾದಶಿ-ವ್ಯತಿಪಾತದಿಂದ ವೆಗ್ಗಳ
ಸೂಕ್ಷ್ಮ ಶಿವಪಥವರಿದವಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ
ಕೂಡಲಸಂಗದೇವಾ ನಿಮ್ಮ ಮಾಣದ ನೆನೆವಂಗೆ
ಈ ವಚನದಲ್ಲಿ ಬಸವಣ್ಣನವರು ಹೋಮ, ನೇಮ, ಜಪ, ತಪವೆಂಬ ಮೌಢ್ಯವನ್ನು ನಿರಾಕರಿಸುತ್ತಾರೆ.
ಜಂಬೂ ದ್ವೀಪವನ್ನೆಲ್ಲ ತಿರುಗಿದಡೇನು?
ಜಂಬುಕ ಶಂಭು ಧ್ಯಾನದಲ್ಲಿ ಸೈವೆರಗಪ್ಪುದೆ?
ಕುಂಭಿನಿಯ ತಿರುಗಿ ಕೋಟಿ ತೀರ್ಥದಲ್ಲಿ ಮಿಂದುಡೇನು?
ಶಂಭು ನಿಮ್ಮಲ್ಲಿ ಸ್ವಯವಾದವನು ಕುಂಭನಿಯ
ತಿರುಗಿದ ಡೊಂಬನಂತೆ ಕಾಣಾ ರಾಮನಾಥ?
ಈ ವಚನದಲ್ಲಿ ಜೇಡರ ದಾಸಿಮಯ್ಯ ನೂರಾರು ಸ್ಥಳಗಳಿಗೆ ಯಾತ್ರೆ ಹೋಗಿ ಬಂದರೆ ಯಾವ ಪ್ರಯೋಜನವಿಲ್ಲ. ದೇವರು ತನ್ನಲ್ಲಿಯೆ ಇರುವನು. ಅಂತರಂಗ ಶುದ್ಧಿಯಿಂದ ತನ್ನಲ್ಲಿರುವ ದೇವರನ್ನು ಕಾಣುವ ಪ್ರಯತ್ನ ಮಾಡು ಎಂದರು.
ಶಿವನ ನೆನೆದಡೆ ಭವ ಹಿಂಗೊದೆಂಬ
ವಿವರಗೇಡಿಗಳ ಮಾತ ಕೇಳಲಾಗದು
ಹೇಳಿದಿರಯ್ಯಾ, ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ
ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ?
ರಂಭೆಯ ನೆನೆದಡೆ ಕಾಮದ ಕಳವಳ ಅಡುಗುವುದೆ ಅಯ್ಯಾ?
ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ
ಸದ್ಗುರು ಸಿದ್ದ ಸೋಮನಾಥಲಿಂಗನ ನೆನೆಯಬಾರದು
ಈ ವಚನದಲ್ಲಿ ಅಮುಗಿ ದೇವಯ್ಯನವರು ವಿವಿಧ ರೀತಿಯ ಮೂಢನಂಬಿಕೆಗಳನ್ನು ಮತ್ತು ಭ್ರಮೆಗಳನ್ನು ನಿರಾಕರಿಸುತ್ತಾರೆ. ಕತ್ತಲಾದಾಗ ದೀಪ ಹಚ್ಚುವ ಬದಲು ಕೇವಲ ಬೆಳಕನ್ನು ನೆನೆದರೆ ಕತ್ತಲೆ ಕಳೆಯುವುದಿಲ್ಲ. ಹಸಿವಾದಾಗ ಆಹಾರ ನೆನೆಯುತ್ತಾ ಕುಳಿತರೆ ಹೊಟ್ಟೆ ತುಂಬುವುದಿಲ್ಲ. ರಂಭೆಯನ್ನು ನೆನೆದರೆ ಕಾಮ ಶಮನವಾಗುವುದಿಲ್ಲ. ದೇವರನ್ನು ನೆನೆಯುವುದರ ಬದಲು ಸತ್ಯವನ್ನು ತಿಳಿ ನಿನ್ನೊಳಗಿನ ಘನವನ್ನು ಅರಿತು ಮುನ್ನಡೆಯೆನ್ನುತ್ತಾರೆ.
ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ
ಈ ವಚನದಲ್ಲಿ ಬಸವಣ್ಣನವರು ಕಂದಾಚಾರವನ್ನು ನಿರಾಕರಿಸುತ್ತಾರೆ.
ಒಬ್ಬರ ಮನವ ನೋಯಿಸಿ
ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತಯ್ಯ
ಆದಕಾರಣ, ಮನವ ನೋಯಿಸದವನೆ,
ಒಬ್ಬರ ಘಾತವ ಮಾಡದವನೆ
ಪರಮಪಾವನ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ
ಈ ವಚನದಲ್ಲಿ ಸಿದ್ದರಾಮೇಶ್ವರರು, ಜನರನ್ನು ನೋಯಿಸಿ, ಹಿಂಸಿಸಿ ನೂರೆಂಟು ಪಾಪಗಳನ್ನು ಮಾಡಿ ಗಂಗಾ ನದಿಯಲ್ಲಿ ಮುಳುಗಿದರೆ ಪಾಪ ಹೋಗುವುದಿಲ್ಲವೆಂದು ಸಾರಿದ್ದಾರೆ. ಬಸವಾದಿ ಶರಣರ ವೈಚಾರಿಕ ದೃಷ್ಟಿಕೋನಕ್ಕೆ ನಿದರ್ಶನವಾಗಿ ಸಗರದ ಬೊಮ್ಮಣ್ಣಗಳ ಈ ವಚನವನ್ನು ನೋಡಬಹುದು.
ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ
ಬಿಚ್ಚು ಪುತ್ಥಳಿಯಾದ ಠಾವಾವುದು?
ಕೂಡಿದನಪ್ಪ, ಕೂಡಿಸಿಕೊಂಡಳವ್ವ
ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಡಗವೇಕೆ?
ಸಗರ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
ಜೀವಶಾಸ್ತ್ರವು ಹುಟ್ಟುವುದಕ್ಕೆ ಅನೇಕ ಶತಮಾನಗಳ ಹಿಂದೆ ವಚನಕಾರ ಸಗರದ ಬೊಮ್ಮಣ್ಣಗಳು 12ನೆಯ ಶತಮಾನದಲ್ಲಿ ಮಾನವನ ಜನ್ಮಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸಿದ್ದಾರೆ. ಶರಣರ ವೈಚಾರಿಕ ದೃಷ್ಟಿಕೋನಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ಗಂಡು-ಹೆಣ್ಣಿನ ಸಂಯೋಗದಿಂದ ಮಕ್ಕಳು ಹುಟ್ಟುತ್ತವೆ ಎಂಬ ಸತ್ಯವನ್ನು ಈ ವಚನ ತಿಳಿಸುತ್ತದೆ. ಪುತ್ರಕಾಮೇಷ್ಠಿ, ಯಜ್ಞ ಯಾಗ, ದಾನ ಮುಂತಾದವುಗಳ ಪೊಳ್ಳುತನವನ್ನು ಇಲ್ಲಿ ವಚನಕಾರ ಬಹಿರಂಗಪಡಿಸುತ್ತಿದ್ದಾನೆ. ಬ್ರಹ್ಮನ ಕೃಪೆಯಿಂದ ಮಕ್ಕಳು ಹುಟ್ಟುವುದಿಲ್ಲ ಎಂಬ ಕಹಿ ಸತ್ಯವನ್ನು ಇದು ತಿಳಿಸುತ್ತಿದೆ.
ಸಾರಾಂಶ
- ವಚನಕಾರರು ನಂಬಿಕೆಗಳನ್ನು ವಿರೋಧಿಸಲಿಲ್ಲ. ಆದರೆ, ಮೂಢನಂಬಿಕೆಗಳನ್ನು ತಿರಸ್ಕರಿಸಿದರು.
- ಕರ್ಮ ಸಿದ್ಧಾಂತವನ್ನು ನಿರಾಕರಿಸಿ, ಪಾಪ, ಪುಣ್ಯವೆಂಬ ಮೂಢನಂಬಿಕೆಯಿಂದ ಬಡವರನ್ನು ಹೊರತರುವ ಪ್ರಯತ್ನ ಮಾಡಿದರು.
- ಸ್ವರ್ಗ, ನರಕಗಳನ್ನು ಯಾರೂ ಕಂಡುಬಂದಿಲ್ಲ ಅಥವಾ ಅಲ್ಲಿ ವಾಸ ಮಾಡಿ ಬಂದವರಿಲ್ಲ. ಇಂತಹ ಭ್ರಮೆಗಳಿಂದ ಹೊರ ಬಂದು ಸತ್ಯವನ್ನು ತಿಳಿಯಿರೆಂದು ಸಾರಿದರು.
- ಫಲಜೋತಿಷ್ಯ ಮತ್ತು ಪಂಚಾಂಗವನ್ನು ನಿರಾಕರಿಸಿದರು.
- ರಾಹುಕಾಲ, ಗುಳಿಕಕಾಲ, ಯಮಗಂಡಕಾಲಯೆಂಬುದಿಲ್ಲ. ಒಳ್ಳಯೆ ಕೆಲಸ ಮಾಡುವುದಕ್ಕೆ ಎಲ್ಲಾ ಕಾಲವು ಶ್ರೇಷ್ಠ ಮತ್ತು ಪವಿತ್ರವೆಂದರು.
- ನೂರಾರು ಸ್ಥಳಗಳಿಗೆ ಯಾತ್ರೆ ಹೋಗಿ ಬಂದರೂ ಪ್ರಯೋಜನವಿಲ್ಲ, ಅಂತರಂಗ ಶುದ್ಧಿಯಿಂದ ತನ್ನಲ್ಲಿರುವ ದೇವರನ್ನು ಕಾಣಿರೆಂದು ವೈಚಾರಿಕತೆಯನ್ನು ಬಿತ್ತಿದರು.
- ಹೋಮ, ನೇಮ, ಜಪ, ತಪಯೆಂಬ ಮೌಡ್ಯವನ್ನು ನಿರಾಕರಿಸಿದರು.
- ರಾಶಿ, ಕೂಟ, ಸಂಬಂಧ, ತಾರಾಬಲ, ಚಂದ್ರಬಲ ಇತ್ಯಾದಿಗಳನ್ನು ನಿರಾಕರಿಸಿದರು.
- ಯಾಗ, ಯಜ್ಞ, ಬಲಿ ಇತ್ಯಾದಿಗಳನ್ನು ಖಂಡಿಸಿದರು.
- ಭ್ರಮಾಲೋಕದಿಂದ ಹೊರಬಂದು ಜನಸಾಮಾನ್ಯರು ವಾಸ್ತವತೆಯನ್ನು ಅರಿಯಬೇಕೆಂಬ ವೈಚಾರಿಕತೆಯನ್ನು ಸಾರಿದರು.
ಸಂವಿಧಾನದಲ್ಲಿರುವ ಮೂಢನಂಬಿಕೆಗಳ ವಿರುದ್ಧದ ಅಂಶಗಳು
ಜಗತ್ತಿನಾದ್ಯಂತ ಎಲ್ಲ ಕಾಲದಲ್ಲಿ ಎಲ್ಲ ದೇಶಗಳಲ್ಲಿ ಮತ್ತು ಸಮಾಜಗಳಲ್ಲಿ ತನ್ನದೇ ಆದ ನಂಬಿಕೆಗಳು ಮತ್ತು ಮೂಢನಂಬಿಕೆಗಳು ಆಚರಣೆಯಲ್ಲಿ ಇವೆ. ಸಮಾಜದ ಬಹುಪಾಲು ಜನರು ತಮ್ಮ ದಿನನಿತ್ಯ ಜೀವನದ ಹೆಜ್ಜೆ ಹೆಜ್ಜೆಗೂ ಇವುಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಗೆರೆ ಅತ್ಯಂತ ಸೂಕ್ಷ್ಮ ಮತ್ತು ಅಸ್ಪಷ್ಟ. ಅರ್ಥ ಮಾಡಿಕೊಳ್ಳಬಹುದಾದ ನಂಬಿಕೆಗಳಂತೆಯೇ, ಅರ್ಥ ಮಾಡಿಕೊಳ್ಳಲಾಗದ ನಂಬಿಕೆಗಳು ಇವೆ. ಮನಸ್ಸಿಗೆ ಸಮಾಧಾನ, ಶಾಂತಿ, ವಿಶ್ವಾಸ, ಧೈರ್ಯ, ಮುದ ನೀಡುವ ನಂಬಿಕೆಗಳು ಇವೆ. ಅದೇ ರೀತಿ ಅಮಾನವೀಯ, ಅಪಾಯಕಾರಿ, ವಿನಾಶಕಾರಿ, ಹಿಂಸಾತ್ಮಕ ಮತ್ತು ಅನಾರೋಗ್ಯಕಾರಿ ನಂಬಿಕೆಗಳು ಇವೆ. ತಲತಲಾಂತರಗಳಿಂದ ಪ್ರಶ್ನಿಸಿದೇ ಬಂದಿರುವ ನಂಬಿಕೆಗಳೇ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಲು ಅಸಮರ್ಥರಾದ ಜನರ ನಂಬಿಕೆಗಳೇ ಮೂಢನಂಬಿಕೆಗಳು.
ಈ ಮೂಢನಂಬಿಕೆಗಳು ಜನರ ಗಮನವನ್ನು ಸಮಸ್ಯೆಗಳ ಮೂಲದಿಂದ ದೂರ ಸೆಳೆದು ಅವರಲ್ಲಿ ಹತಾಶೆಯನ್ನು ಮೂಡಿಸುತ್ತವೆ. ಅಜ್ಞಾನ ತುಂಬಿದ ಸಾಮಾನ್ಯರನ್ನು ಇನ್ನಷ್ಟು ನಿಸ್ತೇಜಗೊಳಿಸಿ ಜೀವನದ ಸಾರವನ್ನು ಹೀರಿಬಿಡುತ್ತವೆ. ಪರಿಣಾಮವಾಗಿ ಜನರು ಪರಿಸ್ಥಿತಿಯನ್ನು ಮೀರಲಾಗದೆ ಅದರ ದಾಸರಾಗುತ್ತಾರೆ. ವಸ್ತುನಿಷ್ಠ ಸಾಮಾಜಿಕ ಬದಲಾವಣೆಗೆ ಬದಲಾಗಿ ಜಡ್ಡುತನವೇ ಸಾಮಾಜಿಕ ವಾಸ್ತವವಾಗುತ್ತದೆ. ಇಂಥ ಮೌಡ್ಯಗಳಿಂದಲೇ ಶೋಷಣೆ, ಗುಲಾಮಗಿರಿ, ಅಸ್ಪೃಶ್ಯತೆ, ಮೇಲು-ಕೀಳೆಂಬ ಆಲೋಚನೆಗಳು ಮುಂದುವರಿಯುತ್ತವೆ. ಅವುಗಳನ್ನು ಬಳಸಿಕೊಳ್ಳುವ ಸ್ವಾರ್ಥಿಗಳು ಮುಗ್ಧರನ್ನು ಶೋಷಿಸುತ್ತಾರೆ. ಅವರ ಬದುಕನ್ನು ನಾಶ ಮಾಡುತ್ತಾರೆ.
ಮೂಢನಂಬಿಕೆಗಳನ್ನು ಅಳಿಸಲು ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಗಳು ಕೆಲಮಟ್ಟಿಗೆ ಸಹಾಯಕವಾಗುತ್ತದೆ ಎಂಬುದು ತಿಳಿದ ವಿಷಯವೇ. ಆದರೆ ಅದಕ್ಕಿಂತಲೂ ಮುಖ್ಯವಾಗಿ ವೈಜ್ಞಾನಿಕ ಮನೋಭಾವ ಮತ್ತು ಪ್ರಶ್ನಿಸುವ ಪ್ರಶ್ನೆಗಳ ಅಗತ್ಯವೂ ಹೆಚ್ಚೆನಿಸಿದಾಗ ನಮ್ಮ ಸುತ್ತಲಿನ ಜಗತ್ತಿನ ರಚನೆಯನ್ನು ವಿದ್ಯಮಾನಗಳ ಅರಿವನ್ನು ಹಾಗೂ ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ವೈಜಾನಿಕ ಮನೋಭಾವ ನಮಗೆ ಕಲಿಸುತ್ತಿದೆ. ಆ ಮೂಲಕ ನಾವು ಇನ್ನೂ ಹೆಚ್ಚು ಸಮರ್ಥವಾಗಿ, ಕಪ್ಪರಹಿತವಾಗಿ ಮತ್ತು ಸಂತೋಷಪೂರ್ಣವಾಗಿ ನಮ್ಮ ಜೀವನವನ್ನು ನಡೆಸಬಹುದು. ವಿಷಯಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ ಅಂಧಶ್ರದ್ಧೆಯನ್ನು ಹೋಗಲಾಡಿಸುವಲ್ಲಿ ವೈಜ್ಞಾನಿಕ ಮನೋಭಾವವು ನಮ್ಮ ನೆರವಿಗೆ ಬರುತ್ತದೆ. ಪರಂಪರೆಯ ಹೆಸರಿನಲ್ಲಿ ನಡೆಯುವ ಆವೈಚಾರಿಕ ಆಚರಣೆಗಳನ್ನು ಕೊನೆಗೊಳಿಸುವಲ್ಲಿ ಸಹಾಯಕವಾಗುತ್ತದೆ. ಗುಲಾಮಗಿರಿ, ಜೀತಪದ್ಧತಿ, ಅಸ್ಪೃಶ್ಯತೆ, ಜಾತಿ, ಲಿಂಗ ಹಾಗೂ ಜನಾಂಗಗಳ ಆಧಾರದ ಮೇಲಿನ ತಾರತಮ್ಯ ಇವೆಲ್ಲವನ್ನು ತೊಡೆದುಹಾಕಲು ಅವಶ್ಯಕವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಸತ್ಯ ಮತ್ತು ವಾಸ್ತವಗಳ ಆಧಾರದ ಮೇಲೆ ನಮ್ಮ ಮನವು ತಿಳಿಗೊಳ್ಳುವಂತೆ ಮಾಡಿ ಧೈರ್ಯ ತುಂಬುವುದೇ ವೈಜ್ಞಾನಿಕ ಮನೋಭಾವ. ಯಾವುದೋ ಧರ್ಮ ಶಾಸ್ತ್ರದಲ್ಲಿ ಹೇಳಿದೆ ಎಂದೋ ಅಥವಾ ಒಬ್ಬ ಪ್ರಮುಖ ವ್ಯಕ್ತಿ ಹೇಳಿದನೆಂದೋ ಒಪ್ಪಿಕೊಳ್ಳದೇ, ಸೂಕ್ಷ್ಮ ಪರಿಶೀಲನೆಯಾದ ನಂತರವೇ ಯಾವುದೇ ವಿಷಯವನ್ನಾಗಲಿ ಒಪ್ಪುವ ಶಕ್ತಿಯನ್ನು ನಮ್ಮಲ್ಲಿ ತುಂಬುತ್ತದೆ. ಆತ್ಮವಿಶ್ವಾಸ, ಘನತೆಗಳನ್ನು ಹೆಚ್ಚಿಸಿ ಭ್ರಮಾಲೋಕದಿಂದ ನಮ್ಮನ್ನು ಹೊರತಂದು ಜೀವನವನ್ನು ಅದರ ಎಲ್ಲಾ ವಾಸ್ತವತೆಗಳೊಂದಿಗೆ ಅರ್ಥೈಸಿಕೊಳ್ಳುವುದನ್ನು ಕಲಿಸುತ್ತದೆ.
ವೈಜ್ಞಾನಿಕ ಮನೋಭಾವದ ಪ್ರಾಮುಖ್ಯತೆಯನ್ನು ಮನಗಂಡು ನಮ್ಮ ಸಂವಿಧಾನದಲ್ಲಿ ಅನುಚ್ಛೇದ 51-ಎ(ಹೆಚ್)ರ ಅಡಿಯಲ್ಲಿ “ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ಪ್ರಶ್ನಿಸುವ ಮನೋಧರ್ಮಗಳನ್ನು ಬೆಳೆಸಿಕೊಳ್ಳುವುದು ಎಲ್ಲರ ಮೂಲಭೂತ ಕರ್ತವ್ಯವೆಂದು ನಮೂದಿಸಲಾಗಿದೆ.”
ಕರ್ನಾಟಕ ಸರ್ಕಾರ 2017ರಲ್ಲಿ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆಯನ್ನು ತಂದಿತು. ಮುಂದುವರಿದು ಜನವರಿ 2020ರಿಂದ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ಪ್ರಮುಖ ಅಂಶಗಳೆಂದರೆ:
ನಿಷೇಧಿತ ಆಚರಣೆಗಳು
- ಭಾನಾಮತಿ, ಮಾಟಮಂತ್ರ, ಗುಪ್ತ ನಿಧಿ ನಿಕ್ಷೇಪಗಳ ಅನ್ವೇಷಣೆ, ಅದಕ್ಕಾಗಿ ವಾಮಾಚಾರ ಮಾಡುವುದು.
- ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆವಾಹಿಸಲಾಗಿದೆ ಅಥವಾ ಆ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು.
- ದೆವ್ವ ಉಚ್ಚಾಟನೆ ಮಾಡುವ ನೆಪದಲ್ಲಿ ವಿವಿಧ ರೀತಿಯ ಹಿಂಸೆ ನೀಡುವುದು.
- ನಿರ್ದಿಷ್ಟ ವ್ಯಕ್ತಿ ದುರಾದೃಷ್ಟಕ್ಕೆ ಕಾರಣವಾಗಿದ್ದಾನೆ, ರೋಗಗಳನ್ನು ಹರಡುತ್ತಾನೆ ಎಂದು ಆರೋಪಿಸುವುದು. ಪಾಪಿ ಅಥವಾ ಪಾಪಾತ್ಮ ಎಂದು ಹೇಳುವುದು. ಸೈತಾನನ ಅವತಾರವೆಂದು ಘೋಷಿಸುವುದು.
- ಮಂತ್ರ ಪಠಿಸಿ ದೆವ್ವಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿ ಜನರಲ್ಲಿ ಗಾಬರಿ, ಭಯ ಹುಟ್ಟಿಸುವುದು.
- ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಬದಲು, ದುಷ್ಟ ಮತ್ತು ಅಘೋರಿ ಕೃತ್ಯ ಆಚರಿಸಲು ಪ್ರೇರೇಪಿಸುವುದು.
- ಬರಿಗೈ ಬೆರಳುಗಳಿಂದ ಶಸ್ತ್ರಚಿಕಿತ್ಸೆ, ಮಹಿಳೆಯ ಗರ್ಭದಲ್ಲಿನ ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳುವುದು.
- ತನ್ನಲ್ಲಿ ವಿಶೇಷ ಶಕ್ತಿ ಇದೆ. ತಾನು ಪವಿತ್ರಾತ್ಮದ ಅವತಾರ ಎಂದು ಹೇಳುವುದು ಅಥವಾ ಹಿಂದಿನ ಜನ್ಮದಲ್ಲಿ ತಾನು ಪತಿ, ಪತ್ನಿ ಅಥವಾ ಅನೈತಿಕ ಸಂಬಂಧವಿದ್ದ ಪ್ರೇಮಿ ಆಗಿದ್ದೇನೆಂಬ ಭಾವನೆ ಸೃಷ್ಟಿಸುವುದು.
- ದೇಹವನ್ನು ಕೊಕ್ಕೆಯಿಂದ ನೇತು ಹಾಕುವುದು (ಸಿಡಿ), ದೇಹಕ್ಕೆ ಚುಚ್ಚಿಕೊಂಡ ಕೊಕ್ಕೆಯ ಮೂಲಕ ರಥ ಎಳೆಯುವುದು.
- ಋತುಮತಿ, ಬಾಣಂತಿಯನ್ನು ಒಂಟಿಯಾಗಿರುವಂತೆ ಮಾಡುವುದು, ಬೆತ್ತಲೆ ಸೇವೆ, ಬೆತ್ತಲೆ ಮೆರವಣಿಗೆ
- ಪ್ರಾಣಿಯ ಕುತ್ತಿಗೆಯನ್ನು ಕಚ್ಚಿ (ಬಲಿ) ಕೊಲ್ಲುವುದು.
- ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ವ್ಯಕ್ತಿಗಳು ಊಟ ಮಾಡಿಬಿಟ್ಟ ಎಲೆಗಳ ಮೇಲೆ (ಮಡೆ ಸ್ನಾನ) ಉರುಳಾಡುವುದು.
ನಿಷೇಧಕ್ಕೆ ಒಳಪಡದ ಆಚರಣೆಗಳು
- ಧಾರ್ಮಿಕ, ಆಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮ ಮತ್ತು ಪೂಜೆ.
- ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು, ಕಲೆಗಳು, ಪದ್ಧತಿ ಮತ್ತು ಅದರ ಪ್ರಸಾರ.
- ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಚಾರ ಮಾಡುವುದು, ಸಾಹಿತ್ಯ ಪ್ರಸಾರ.
- ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್ ನಂತಹ ಧಾರ್ಮಿಕ ಸ್ಥಳಗಳಲ್ಲಿ ದೈಹಿಕವಾಗಿ ಹಾನಿ ಉಂಟುಮಾಡದಿರುವ ಪ್ರಾರ್ಥನೆ, ಉಪಾಸನೆ, ಧಾರ್ಮಿಕ ಆಚರಣೆ.
- ಧರ್ಮಾಚರಣೆಗೆ ಅನುಸಾರವಾಗಿ ಮಕ್ಕಳ ಕಿವಿ, ಮೂಗು ಚುಚ್ಚುವುದು, ತಪ್ತ ಮುದ್ರಾಧಾರಣೆ, ಜೈನ ಸಂಪ್ರದಾಯದ ಕೇಶ ಲುಂಛನ.
- ವಾಸ್ತುಶಾಸ್ತ್ರ ಸಲಹೆ, ಜ್ಯೋತಿಷ್ಯ ಮತ್ತು ಜ್ಯೋತಿಷಿಗಳಿಂದ ಸಲಹೆ.
ಶಿಕ್ಷೆ: ಅಪರಾಧಿಗಳಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5,000 ರೂಗಳಿಂದ 50,000 ರೂಗಳವರೆಗೆ ದಂಡ.
ಈ ಕಾಯ್ದೆ ಜಾರಿಗೆ ಬಂದು ವರ್ಷಗಳೇ ಕಳೆದರೂ ಒಂದು ಪ್ರಕರಣವೂ ದಾಖಲಾಗಿಲ್ಲ. ಆದರೆ ದಿನನಿತ್ಯ ಮೌಡ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಾನೂನುಗಳು ಬೇಕು ಆದರೆ ಅವುಗಳನ್ನು ಜಾರಿ ಮಾಡುವ ಇಚ್ಛಾ ಶಕ್ತಿಯೂ ಬೇಕು. ಶಿಕ್ಷಣ, ಆರ್ಥಿಕ ಸಬಲತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದರ ಮುಖಾಂತರ, ಮೌಡ್ಯಾಚಾರವನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತವೆ. ಶರಣರ ವಚನ ಚಳುವಳಿಯನ್ನು ಮುಂದುವರಿಸುವ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಮಹತ್ವದ್ದಾಗಿದೆ.