ವಚನಕಾರರು ಕಾಯಕವನ್ನು ಜಾತಿಯಿಂದ ಪ್ರತ್ಯೇಕಿಸಿದರು. ಕಾಯಕವನ್ನು ಕಡ್ಡಾಯಗೊಳಿಸಿದರು. ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದುಡಿಯಬೇಕು, ದುಡಿಮೆಗೆ ತಕ್ಕ ಪ್ರತಿಫಲವನ್ನು ಪಡೆಯಬೇಕು, ಈ ಪ್ರತಿಫಲದಲ್ಲಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು, ಉಳಿದದ್ದನ್ನು ಇತರರಿಗೆ ದಾಸೋಹ ನೀಡಬೇಕೆಂದರು. ಈ ಮುಖಾಂತರ ಸಮಾಜದಲ್ಲಿ ಅಭಿವೃದ್ಧಿಯನ್ನು ಮತ್ತು ಸಮಾನತೆಯನ್ನು ಸಾಧಿಸುವ ದಾರಿ ತೋರಿಸಿದರು.
ದುಡಿಮೆಯಿಂದ ಬಂದ ಪ್ರತಿಫಲದಲ್ಲಿ ಸ್ವಲ್ಪ ಭಾಗವನ್ನು ರಾಜ್ಯ ಭಂಡಾರಕ್ಕೆ ನೀಡಬೇಕು. ರಾಜ್ಯ ಭಂಡಾರ ಜನಕಲ್ಯಾಣಕ್ಕೆ ಬಳಕೆಯಾಗಬೇಕೆಂದರು. ಈ ಮುಖಾಂತರ ಸರ್ಕಾರಕ್ಕೆ ಒಂದು ಸಾಮಾಜಿಕ ಕರ್ತವ್ಯವನ್ನು ಕಡ್ಡಾಯಗೊಳಿಸಿದರು. ಇದರಿಂದ ಜನಸಾಮಾನ್ಯರು ತಮ್ಮ ಕನಿಷ್ಠ ಅವಶ್ಯಕತೆಗಳನ್ನು ಸರ್ಕಾರದಿಂದ ಪಡೆಯುವ ಒಂದು ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತಂದರು.
ಭೋಗ ಜೀವನದಿಂದ ನಮ್ಮಲ್ಲಿ ದುರಾಸೆ, ಸ್ವಾರ್ಥ, ಸ್ವಜನಪಕ್ಷಪಾತ, ಇತ್ಯಾದಿಗಳು ಬೆಳೆದು ದುಃಖಕ್ಕೆ ಒಳಗಾಗುತ್ತೇವೆ. ಸರಳ ಜೀವನದಿಂದ ಎಲ್ಲ ಕೆಟ್ಟ ಗುಣಗಳಿಂದ ಮುಕ್ತರಾಗಿ ಸುಖ, ಸಂತೋಷ, ನೆಮ್ಮದಿಯಿಂದ ಬದುಕಬಹುದೆಂದು ತೋರಿಸಿಕೊಟ್ಟರು. ಈ ರೀತಿಯಾಗಿ ಎಲ್ಲರೂ ತಮ್ಮ ಕನಿಷ್ಠ ಅವಶ್ಯಕತೆಗಳನ್ನು ಪಡೆದು ತೃಪ್ತಿಕರ ಜೀವನ ನಡೆಸುವ ಕಲ್ಯಾಣ ರಾಜ್ಯದ ಕಲ್ಪನೆಯನ್ನು ಬಿತ್ತಿ ಜಾರಿಗೆ ತಂದರು. ವಚನಕಾರರು ತಮ್ಮ ವಚನದಲ್ಲಿ ಈ ರೀತಿ ಹೇಳಿದ್ದಾರೆ:
ಕಲ್ಯಾಣದಲ್ಲಿ ಕೊಡುವವರುಂಟು
ಬೇಡುವವರಿಲ್ಲ
ಬೇಡುವವರಿಲ್ಲದೆ ಬಡವಾದೆನಯ್ಯಾ
ಬಿಜ್ಜಳನ ರಾಜಧಾನಿ ಕಲ್ಯಾಣದಲ್ಲಿ ಎಲ್ಲರೂ ಕಾಯಕ ಮಾಡಿ ಜೀವಿಸುತ್ತಿದ್ದರು. ತಮ್ಮ ಕಾಯಕದಿಂದ ಬಂದ ಫಲವನ್ನು ತಮಗೆ ಅಗತ್ಯವಿರುವಷ್ಟು ಬಳಸಿಕೊಂಡು ಉಳಿದದ್ದನ್ನು ಇತರರಿಗೆ ದಾಸೋಹಕ್ಕೆ ನೀಡಬೇಕೆಂಬ ನೀತಿ ಜಾರಿಯಲ್ಲಿತ್ತು. ಆದ್ದರಿಂದಲೇ, ಕಲ್ಯಾಣದಲ್ಲಿ ಬೇಡುವವರ ಬದಲಿಗೆ ಕೊಡುವವರುಂಟು.
ಛಲಬೇಕು ಶರಣಂಗೆ
ಪರಧನವನೊಲ್ಲೆನೆಂಬ
ನಮ್ಮ ದುಡಿಮೆಯ ಸಂಪಾದನೆಯಿಂದ ನಾವು ಜೀವಿಸಬೇಕು. ನಮಗೆ ಛಲ ಬೇಕು ಪರರ ಸಂಪಾದನೆಯಿಂದ ಜೀವಿಸುವುದಿಲ್ಲವೆಂದು.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವ
ಮಾನವನ ಧನ ಸಂಗ್ರಹ ಬುದ್ಧಿಯನ್ನು ತಿರಸ್ಕರಿಸುತ್ತಾರೆ, ಸರಳ ಜೀವನದ ಮಾರ್ಗವನ್ನು ಸೂಚಿಸುತ್ತಾರೆ. ಕೂಡಿಡುವ ಬುದ್ಧಿಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.
ತನು ಮನ ಧನವ ಸವೆಸಲೇಬೇಕು,
ನಮ್ಮ ಕೂಡಲಸಂಗನ ಶರಣರಿಗೆ ಅಂಜಲೇಬೇಕು
ನಾವು ದುಡಿಯಲೇಬೇಕು, ದುಡಿಮೆಯ ಫಲ ಸವಿಯಲೇಬೇಕು, ಸಮಾಜದ ಹಿತಕ್ಕೆ ಸವೆಸಬೇಕೆಂಬುದಾಗಿ ಸೂಚಿಸಿದ್ದಾರೆ.
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬರು,
ನೀವೆಲ್ಲಾ ಕೇಳಿರಣ್ಣ
ಹಾಗದ ಕೆರಹ ಹೊರಗೆ ಕಳೆದು,
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವಸಿರದಿರಾ, ಇರಿಸಿದಡೆ ಭವ ಬಪ್ಪುದು ತಪ್ಪದು.
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.
ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಹಣದ ಅಸೆ ಬಿಡಬೇಕು, ಹಣಕ್ಕೆ ಮಹತ್ವ ನೀಡಿದರೆ ನಮ್ಮ ಜೀವನದಲ್ಲಿ ನಮಗೆ ನೆಮ್ಮದಿ ಇರುವುದಿಲ್ಲ ಎನ್ನುವುದು ಮೇಲಿನ ಎಚ್ಚರ ಆಶಯ.
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೊ
ಕಾಳ, ಬೆಳದಿಂಗಳು, ಸಿರಿ ಸ್ಥಿರವಲ್ಲ
ಕೇಡಿಲ್ಲದ ಪದವಿ
ಕೂಡಲಸಂಗಮದೇವನ ಮರೆಯದೆ ಪೂಜಿಸು
ಇಲ್ಲಿ ಬಸವಣ್ಣನವರು ಮಾನವ ಆಸೆಯನ್ನು ಬಿಡಬೇಕು. ಏಕೆಂದರೆ ಅದು ಶಾಶ್ವತವಲ್ಲ. ಶಾಶ್ವತವಾದ ಪದವಿ ಎಲ್ಲಿದೆಯೆಂದರೆ ಕೂಡಲಸಂಗಮದೇವನ ಪೂಜಿಸುವುದರಲ್ಲಿದೆ ಎಂಬುದು ಈ ವಚನದ ಸಂದೇಶವಾಗಿದೆ.
ಧನಕ್ಕೆ ಮನವನೊಡ್ಡಿದಡೇನು? ಮನಕ್ಕೆ ಧನವನೊಡ್ಡಿದಡೇನು?
ತನು, ಮನ, ಧನವ ಮೀರಿ ಮಾತಾಡಬಲ್ಲಡೆ
ಆತ ನಿಸ್ಸೀಮನು; ಆತ ನಿಜೈಕ್ಯನು,
ತನು, ಮನ, ಧನವನುವಾದಡೆ,
ಕೂಡಲಸಂಗಮದೇವನೊಲಿವ
ಧನವೇ ಎಲ್ಲವೂ ಅಲ್ಲ. ತನು, ಮನ, ಧನ – ಈ ಮೂರನ್ನು ಮೀರಿದಾಗ ಮಾತ್ರ ದೇವರು ಒಲಿಯುತ್ತಾನೆ ಎಂಬುದು ಬಸವಣ್ಣನ ನೀತಿಯಾಗಿದೆ. ಈ ಮೂರನ್ನು ಮೀರಿದಾಗ ಬದುಕು ಸುಂದರವಾಗುತ್ತದೆ.
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ
ಸತ್ಪಾತ್ರಕ್ಕೆ ಸಲ್ಲದಯ್ಯಾ |
ನಾಯಿ ಹಾಲು ನಾಯಿಗಲ್ಲದೆ
ಪಂಚಾಮೃತಕ್ಕೆ ಸಲ್ಲದಯ್ಯಾ |
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
ನಾವು ಮಾಡುವ ಸೇವೆಯು ಉತ್ತಮರಿಗೆ ಸಲ್ಲಬೇಕು. ಸತ್ಪಾತ್ರರು ಎಂದರೆ ಶರಣರು. ಅವರಿಗೆ ಮಾಡುವ ಧನಸಹಾಯ ವ್ಯರ್ಥವಾಗುವುದಿಲ್ಲ.
ಸತ್ಯವುಳ್ಳ ಭಂಡವ ತುಂಬುವುದಯ್ಯಾ
ಸುಯಿಧಾನವಯ್ಯಾ ಸುಯಿಧಾನವಯ್ಯಾ |
ಮನ ಧಾರೆ ವಟ್ಟಲು
ಕೂಡಲಸಂಗನ ಶರಣರ ಹಿಡಿಯದ ಭಂಡವನು
ಆರಾದಡಾಗಲಿ ಹೋಗಲಿಯರಯ್ಯಾ
ಶರಣರಿಗೆ ‘ಸತ್ಯ’ ಎಂಬುದು ಸಂಪತ್ತು. ಸತ್ಯದಿಂದ ಬದುಕನ್ನು ನಡೆಸಬೇಕು. ಅಂತಹ ಸತ್ಯದ ಬದುಕನ್ನು ಶರಣರು ಬಿಡಬಾರದು.
ಅಯ್ಯಾ ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನುಮನಧನವಲಸದಂತೆ ಮಾಡಯ್ಯಾ
ತನು ದಾಸೋಹಕ್ಕೆ ಉಬ್ಬುವಂತೆ ಮಾಡು
ಮನ ದಾಸೋಹಕ್ಕೆ ಲೀಯವಹಂತೆ ಮಾಡು,
ಧನ ದಾಸೋಹಕ್ಕೆ ಸವೆದು, ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ ಹಾಡಿ, ನೋಡಿ ಕೂಡಿ, ಭಾವಿಸಿ ಸುಖಿಸಿ,
ಪರಿಣಮಿಸುವಂತೆ ಮಾಡು, ಕೂಡಲಸಂಗಮದೇವಾ
ಕಾಯಕದಿಂದ ಬಂದ ಪ್ರತಿಫಲವನ್ನು ತನಗೆ ಅಗತ್ಯವಿದ್ದಷ್ಟು ಬಳಕೆ ಮಾಡಿಕೊಂಡು ಉಳಿದದ್ದನ್ನು ಇತರರಿಗೆ ದಾಸೋಹ ಮಾಡುವುದರ ಮುಖಾಂತರ ಸಮಾಜದಲ್ಲಿ ಸುಭಿಕ್ಷೆಯುಂಟಾಗುತ್ತದೆ.
ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದುದಯ್ಯಾ ಶಿವನ ಪ್ರಕಾಶ
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೇ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ?
ಗುಹೇಶ್ವರ ಲಿಂಗದಲ್ಲಿ ತನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ದರಾಮಯ್ಯ
ಈ ವಚನದಲ್ಲಿ ಅಲ್ಲಮಪ್ರಭು ಕಲ್ಯಾಣದ ಮಹತ್ವವನ್ನು ಮತ್ತು ಬಸವಣ್ಣನವರ ಪರಿಶ್ರಮವನ್ನು ಗುರುತಿಸಿದ್ದಾರೆ.
ಕಲ್ಯಾಣಕ್ಕೆ ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ ಇದರಂಥವನಾರು ಬಲ್ಲರಯ್ಯಾ?
ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ,
ನಿಮ್ಮ ಶರಣಬಸವಣ್ಣನ ಕಾಂಬೆನೆಂಬ
ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನ.
ಕಲ್ಯಾಣ ಮತ್ತು ಬಸವಣ್ಣನನ್ನು ಅಭಿನ್ನಗೊಳಿಸಿ ಇಲ್ಲಿ ಅಕ್ಕಮಹಾದೇವಿ ಸ್ತುತಿಸುತ್ತಿದ್ದಾಳೆ. ಶರಣರಿಗೆ ಅಂದು ಕಲ್ಯಾಣವೇ ಕೈಲಾಸವಾಗಿತ್ತು. ಈ ವಚನದಲ್ಲಿ ಅಕ್ಕಮಹಾದೇವಿ ಕಲ್ಯಾಣವನ್ನು ಕುರಿತು ಈ ರೀತಿ ಹೇಳಿದ್ದಾಳೆ. ಬಸವಣ್ಣ ಕಲ್ಯಾಣವನ್ನು ಕೈಲಾಸದಂತೆ ಮಾಡಲು ತನ್ನ ಜೀವನವನ್ನೇ ಮುಡುಪಾಗಿಟ್ಟು, ಬಸವಣ್ಣನ ಪರಿಶ್ರಮದಿಂದ ಅಲ್ಲಿ ಭಿನ್ನ ಭೇದಗಳಿಲ್ಲದೆ ಸಮ ಸಮಾಜವೊಂದು ನಿರ್ಮಾಣವಾಯಿತು.
ಕೃಷಿ ಕೃತ್ಯ ಕಾಯಕದಿಂದಾದಡೇನು?
ತನು ಮನ ಬಳಲಿಸಿ ತಂದು
ದಾಸೋಹವ ಮಾಡುವ ಪರಮ ಸದ್ಭಕ್ತನ
ಪಾದವ ತೋರಯ್ಯ ಎನಗೆ
ಆಹೆಂತೆನೆ ಆತನ ತನು ಶುದ್ಧ, ಆತನ ಮನಶುದ್ಧ
ಆತನಿಗೆ ಉಪದೇಶವ ಮಾಡಿದಾತನೆ ಪರಮ ಸದ್ಗುರು
ಅಂತಪ್ಪ ಸದ್ಭಕ್ತನ ಮನೆಯೆ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆ ಮಾಡುವ ಜಂಗಮನೆ ಜಗತ್ಪಾವನ
ಇಂತಪ್ಪವರ ನಾನು ನೆರೆ ನಂಬಿ ನಮೋ ನಮೋ
ಎಂಬೆನಯ್ಯಾ ಕೂಡಲಸಂಗಮದೇವಾ
ಕೂಡಲಸಂಗಮದೇವಾ.
ಬಸವಣ್ಣನವರು ಈ ವಚನದಲ್ಲಿ ಪ್ರತಿಯೊಬ್ಬರು ಸತ್ಯ, ಶುದ್ಧ ಕಾಯಕ ಮಾಡಿ ಭಕ್ತಿಯಿಂದ ದಾಸೋಹ ಮಾಡಿದ್ದನ್ನು ಸ್ವೀಕರಿಸುವುದೇ ಪ್ರಸಾದ. ಇಂತಹ ಪ್ರಸಾದವನ್ನು ಸ್ವೀಕರಿಸಿದವರ ಜೀವನ ಪಾವನವಾಗುತ್ತದೆ ಎಂದರು.
ಲೋಕ ತಾನಾದ ಬಳಿಕ
ಲೋಕನ ಸೊಮ್ಮು ತನಗೇಕಯ್ಯಾ
ಪರುಷ ತಾನಾದ ಬಳಿಕ
ಸುವರ್ಣದ ಸೊಮ್ಮು ತನಗೇಕಯ್ಯಾ
ಧೇನು ತಾನಾದ ಬಳಿಕ
ಅನ್ಯ ಗೋವಿನ ಸೊಮ್ಮು ತನಗೇಕಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನ.
ಈ ವಚನದಲ್ಲಿ ಸಿದ್ಧರಾಮ ನಮ್ಮಲ್ಲಿ ದಾಸೋಹವು ಬೆಳೆದರೆ ಎಲ್ಲ ಐಹಿಕ ದುರಾಸೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ ಮತ್ತು ಮನುಷ್ಯನನ್ನು ವಿಶ್ವ ಮಾನವನನ್ನಾಗಿ ಮಾಡುತ್ತದೆಯೆಂಬ ಸಂದೇಶವನ್ನು ಸಾರಿದ್ದಾರೆ.
ತನುವಿಡಿದು ದಾಸೋಹವ ಮಾಡಿ
ಗುರು ಪ್ರಸಾದಿಯಾದ ಬಸವಣ್ಣ
ಮನವಿಡಿದು ದಾಸೋಹವ ಮಾಡಿ
ಲಿಂಗ ಪ್ರಸಾದಿಯಾದ ಬಸವಣ್ಣ
ಧನವಿಡಿದು ದಾಸೋಹವ ಮಾಡಿ
ಜಂಗಮ ಪ್ರಸಾದಿಯಾದ ಬಸವಣ್ಣ
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಕಪಿಲ ಸಿದ್ಧಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣ ಸ್ವಯಂ ಪ್ರಸಾದಿಯಾದನಯ್ಯಾ ಬಸವಣ್ಣ
ದೈಹಿಕ ಶ್ರಮವಿಲ್ಲದೆ ಬಂದ ಸಂಪತ್ತನ್ನು ಸಮಾಜಕ್ಕೆ ನೀಡಕೂಡದು. ಅಂತಹ ಸಂಪತ್ತು ನಿಷಿದ್ಧ. ತನ್ನ ಶ್ರಮದ ಫಲವಾಗಿ ಬಂದ ಸಂಪತ್ತಿನ ಉಳಿಕೆಯನ್ನು ಸಮಾಜಕ್ಕೆ ದಾಸೋಹ ನೀಡಬೇಕು. ಬಸವಣ್ಣನವರು ಇಂತಹ ಪರಿಶುದ್ಧ ಜೀವನವನ್ನು ನಡೆಸಿದವರು ಎಂದು ಅಕ್ಕಮಹಾದೇವಿ ತಿಳಿಯಪಡಿಸಿದ್ದಾರೆ.
ಸಾರಾಂಶ
- ಎಲ್ಲಾ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರಲ್ಲಿ ಎಲ್ಲಾ ರೀತಿಯ ಸಮಾನತೆ ಸಾಧಿಸುವುದು ಸರ್ಕಾರದ ನೀತಿ, ಸಮಾಜದ ನೀತಿ ಮತ್ತು ವ್ಯಕ್ತಿ ನೀತಿ ಆಗಬೇಕೆಂದರು.
- ಜನಸಾಮಾನ್ಯರ ಕನಿಷ್ಠ ಅವಶ್ಯಕತೆಗಳನ್ನು ಸರ್ಕಾರ/ಸಮಾಜ ಒದಗಿಸಬೇಕು.
- ರಾಜ್ಯ ಭಂಡಾರಕ್ಕೆ ಪ್ರತಿಯೊಬ್ಬರು ಕೊಡುಗೆಯನ್ನು ನೀಡಬೇಕು ಮತ್ತು ಅದು ಜನ ಕಲ್ಯಾಣಕ್ಕೆ ಬಳಕೆಯಾಗಬೇಕೆಂದರು.
- ಪ್ರತಿಯೊಬ್ಬರೂ ದುಡಿಯಬೇಕು ಮತ್ತು ಯಾರೂ ಕೂಡ ಪರಾವಲಂಬಿಗಳಾಗಿ ಬಾಳಬಾರದೆಂದರು.
- ಕಾಯಕ ಶ್ರಮದಿಂದ ಬಂದ ಪ್ರತಿಫಲದಲ್ಲಿ ಅಗತ್ಯವಿದ್ದಷ್ಟು ಬಳಸಿಕೊಂಡು ಉಳಿದಿದ್ದನ್ನು ಇತರರಿಗೆ ದಾಸೋಹ ನೀಡಬೇಕೆಂದರು.
- ಸಂಪತ್ತು ಹಾಗೂ ಇತರೆ ಎಲ್ಲಾ ಸಂಗ್ರಹ ಬುದ್ಧಿಯನ್ನು ತಿರಸ್ಕರಿಸಿದರು.
- ಸರಳ ಜೀವನವನ್ನು ಪ್ರತಿಪಾದಿಸಿದರು.
- ಕೇವಲ ಅನ್ನ ದಾಸೋಹ ಮಾತ್ರವಲ್ಲ ಜ್ಞಾನ ದಾಸೋಹವನ್ನು ಪ್ರತಿಪಾದಿಸಿದರು.
ಕಲ್ಯಾಣ ರಾಜ್ಯ
ರಾಜಕೀಯ ಅಧಿಕಾರವೆಂದರೆ ದೇಶಕ್ಕೆ ಬೇಕಾದ ಕಾನೂನುಗಳನ್ನು ರಚಿಸುವುದು, ಅವುಗಳನ್ನು ಜಾರಿಗೊಳಿಸುವುದು ಮತ್ತು ಅವುಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆ ವಿಧಿಸುವುದು. ಒಂದು ಕಾಲದಲ್ಲಿ ಈ ಮೂರೂ ಅಧಿಕಾರಗಳು ಒಬ್ಬರಲ್ಲಿ ಅಂದರೆ ಸಾಮ್ರಾಟರ, ಚಕ್ರವರ್ತಿಗಳ ಮತ್ತು ರಾಜಮಹಾರಾಜರ ಕೈಯಲ್ಲಿ ಕೇಂದ್ರೀಕರಣವಾಗಿತ್ತು. ಕ್ರಮೇಣ ಸಾಮ್ರಾಟರ, ಚಕ್ರವರ್ತಿಗಳ ಮತ್ತು ರಾಜಮಹಾರಾಜರ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವಗಳು ಜಾರಿಗೆ ಬಂದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಗಳನ್ನು ರಚಿಸುವ ಅಧಿಕಾರವನ್ನು ಶಾಸಕಾಂಗಕ್ಕೆ, ಅವುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೆ ಮತ್ತು ಅವುಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆ ವಿಧಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಯಿತು. ಈ ರೀತಿಯಾಗಿ ಅಧಿಕಾರ ವಿಕೇಂದ್ರೀಕರಣವಾಗಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
ಮುಂದೆ ಈ ಸ್ವತಂತ್ರ ಸಂಸ್ಥೆಗಳು ಸ್ವೇಚ್ಛಾಚಾರ ಪ್ರದರ್ಶಿಸಿ, ಸ್ವಾರ್ಥ, ಭ್ರಷ್ಟಾಚಾರ ಮತ್ತು ನಿರಂಕುಶವಾಗಿ ಅಧಿಕಾರ ಚಲಾಯಿಸುವ ಪ್ರವೃತ್ತಿ ಪ್ರಾರಂಭವಾಯಿತು. ಇಂತಹ ಬೆಳವಣಿಗೆಯಿಂದ ಜನಸಾಮಾನ್ಯರು ಅನೇಕ ರೀತಿಯ ಕಷ್ಟಗಳನ್ನು ಎದುರಿಸಬೇಕಾಯಿತು. ಈ ಸಂಸ್ಥೆಗಳ ಕೆಲಸವನ್ನು ನಿಯಂತ್ರಿಸಲು ಮತ್ತು ನಿರಂಕುಶವಾಗಿ ಅಧಿಕಾರ ಚಲಾಯಿಸದಂತೆ ನಿಯಂತ್ರಿಸಲು ಕಾನೂನುಗಳ ಮತ್ತು ಪ್ರಭುತ್ವ ನಿಯಮಗಳ ಅಗತ್ಯತೆ ಕಂಡುಬಂತು, ಇವುಗಳ ಜೊತೆಗೆ ಪ್ರಜೆಗಳ ಹಕ್ಕುಗಳು, ಕರ್ತವ್ಯಗಳು, ಮೂಲತತ್ವಗಳು ಇತ್ಯಾದಿಯಾಗಿ ರೂಪುಗೊಂಡವು. ಈ ಎಲ್ಲಾ ಕಾನೂನುಗಳ, ನಿಯಮಗಳ, ಹಕ್ಕುಗಳ, ಕರ್ತವ್ಯಗಳ, ಮೂಲತತ್ವಗಳ ಸಂಗ್ರಹವೇ ಸಂವಿಧಾನ. ಈ ರೀತಿಯಾಗಿ ಎಶ್ವದಲ್ಲಿ ಸಂವಿಧಾನಗಳ ಉಗಮ ಪ್ರಾರಂಭವಾಯಿತು.
13ನೇ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡಿನ ದೊರೆ ಕಿಂಗ್ ಜಾನ್ ಮತ್ತು ಅಲ್ಲಿನ ಜಹಗೀರುದಾರರಿಗೆ ನಡೆದ ಸಂಘರ್ಷದ ಫಲವಾಗಿ ಜಗತ್ತಿನ ಮೊದಲನೇ ಸಂವಿಧಾನವೆಂದು ಕರೆಯಲ್ಪಡುವ “ಮ್ಯಾಗ್ನ ಕಾರ್ಟ” ಕ್ರಿ.ಶ. 1215ರಲ್ಲಿ ರಚನೆಯಾಯಿತು. ನಂತರ 1776ರಲ್ಲಿ ಅಮೆರಿಕ ದೇಶದ ಮಹಾನ್ ಕ್ರಾಂತಿಯ ನಂತರ ಆ ದೇಶದ ಎಲ್ಲಾ ರಾಜ್ಯಗಳು ತಮ್ಮ ತಮ್ಮ ಸಂವಿಧಾನಗಳನ್ನು ರಚಿಸಿಕೊಂಡವು. ನಂತರ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನವು ರಚನೆಯಾಯಿತು. ತದನಂತರ 1789ರಲ್ಲಿ ಫ್ರೆಂಚ್ ಸಂವಿಧಾನ ರಚನೆಯಾಯಿತು. 20ನೇ ಶತಮಾನದ ಪ್ರಾರಂಭದಲ್ಲಿ ಅಂದರೆ 1917ರಲ್ಲಿ ರಷ್ಯಾ ಕ್ರಾಂತಿಯು ಜಗತ್ತಿನ ಚಿಂತನೆಯನ್ನೇ ಬದಲಾಯಿಸಿತು. ರಷ್ಯಾದಲ್ಲಿ ಸಮಾಜವಾದಿ ಸಂವಿಧಾನ ರಚಿಸಲಾಯಿತು. ರಾಜ್ಯವೆಂದರೆ ಕೇವಲ ದೇಶದ ಗಡಿಯನ್ನು ರಕ್ಷಿಸುವುದು, ಸಾಧ್ಯವಾದರೆ ಗಡಿಯನ್ನು ವಿಸ್ತರಿಸುವುದು ಮತ್ತು ದೇಶದಲ್ಲಿ ಬೆಳೆದು ಬರುವ ದಂಗೆಗಳನ್ನು ಸದೆಬಡಿಯುವುದು ಎಂಬ ಅರ್ಥವನ್ನು ಮರು ವ್ಯಾಖ್ಯಾನ ಮಾಡಲಾಯಿತು. ಜನಸಾಮಾನ್ಯರ ಕನಿಷ್ಠ ಅಗತ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ಇತ್ಯಾದಿಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಎಂಬ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು. ಕೇವಲ ರಾಜಕೀಯ ಹಕ್ಕುಗಳನ್ನು ನೀಡಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ರಾಜಕೀಯ ಹಕ್ಕುಗಳ ಜೊತೆಗೆ ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ನೀಡಿದರೆ ಮಾತ್ರ ಪ್ರಜಾಪ್ರಭುತ್ವ ಪರಿಪೂರ್ಣವಾಗುತ್ತದೆ ಎಂಬ ಹೊಸ ತಾತ್ಪರ್ಯವನ್ನು ನೀಡಲಾಯಿತು. ಭೂಮಿ, ನೀರು, ಖನಿಜ ಸಂಪತ್ತು, ಇತರೆ ನೈಸರ್ಗಿಕ ಸಂಪತ್ತು ಸಮಾಜಕ್ಕೆ ಸೇರಿದ್ದು ಮತ್ತು ಪ್ರತಿಯೊಬ್ಬ ಪ್ರಜೆಗೂ ಇದರಲ್ಲಿ ಹಕ್ಕು ಇದೆ ಎಂದು ಘೋಷಿಸಲಾಯಿತು. ವರ್ಗಭೇದ, ವರ್ಣಭೇದ ಮತ್ತು ಲಿಂಗಭೇದವನ್ನು ರದ್ದುಮಾಡಿ ಸಮಾನತೆಯನ್ನು ಸಾರಲಾಯಿತು. ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಇತ್ಯಾದಿಗಳು ಮೂಲಭೂತ ಹಕ್ಕುಗಳಾದವು. ದುಡಿದು ತಿನ್ನಬೇಕು ಎಂಬ ಕರ್ತವ್ಯವನ್ನು ಘೋಷಿಸಲಾಯಿತು. ಈ ರೀತಿಯಾಗಿ ಕಲ್ಯಾಣ ರಾಜ್ಯದ ಸಿದ್ದಾಂತವನ್ನು ಜಾರಿಗೆ ತರಲಾಯಿತು. \
ಭಾರತ ದೇಶದ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಹೆಕ್ಕಿ ಪಟ್ಟಿಮಾಡಿ ಪ್ರಸ್ತುತಪಡಿಸಿದೆ. ‘ಈ ಮೂಲ ತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲೂ ಆಗದು’ ಎಂಬುದಾಗಿ ಸ್ಪಷ್ಟಪಡಿಸಿದೆ. ಅವುಗಳಲ್ಲಿ ‘ಕಲ್ಯಾಣ ರಾಜ್ಯ’ ಎಂಬುದು ಪ್ರಮುಖವಾದ ಮೂಲತತ್ವ.
ನಮ್ಮ ಸಂವಿಧಾನವು ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ. ಈ ಗುರಿಯನ್ನು ಸಾಧಿಸಲು ಜನರ ಆರ್ಥಿಕ, ಸಾಮಾಜಿಕ, ಭೌತಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಸುಧಾರಿಸಲು ಈ ಕೆಳಕಂಡ ಮಾರ್ಗದರ್ಶನಗಳನ್ನು ನೀಡಿದೆ:
- ಎಲ್ಲಾ ಪ್ರಜೆಗಳ ಜೀವನ ನಿರ್ವಹಣೆಗೆ ಅಗತ್ಯವಾದಷ್ಟು ಸಾಧನ ಸೌಕರ್ಯಗಳು ಲಭ್ಯವಿರುವಂತೆ ನೋಡಿಕೊಳ್ಳುವುದು.
- ಗಂಡಸು ಮತ್ತು ಹೆಂಗಸು ಎಂಬ ಭೇದ-ಭಾವ ಇಲ್ಲದೆ ಸಮಾನ ಕೆಲಸಕ್ಕೆ ಸಮಾನ ಸಂಬಳ ನೀಡುವುದು.
- ಸಂಪತ್ತು ಕೇವಲ ಕೆಲವೇ ಜನರ ಸ್ವತ್ತಾಗದೇ, ಎಲ್ಲರಿಗೂ ಲಭ್ಯವಾಗುವಂಥ ಅರ್ಥ ವ್ಯವಸ್ಥೆಯನ್ನು ರೂಪಿಸುವುದು.
- ಗ್ರಾಮ ಪಂಚಾಯಿತಿಗಳನ್ನು ರೂಪಿಸಿ ವ್ಯವಸ್ಥೆಗೊಳಿಸುವುದು.
- ಎಲ್ಲ ಪೌರರಿಗೂ ಒಂದೇ ರೀತಿಯಾದ ನಿಯಮಗಳನ್ನು ರೂಪಿಸುವುದು.
- ಹದಿನಾಲ್ಕು ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವುದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಸಾಮಾಜಿಕ ದುರ್ಬಲ ವರ್ಗಗಳ ಸ್ಥಿತಿಗತಿಗಳನ್ನು ಸುಧಾರಿಸುವುದು.
- ಜನರ ಜೀವನಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸುವುದು.
- ವ್ಯವಸಾಯ ಮತ್ತು ಪಶುಸಂಗೋಪನೆಯನ್ನು ವ್ಯವಸ್ಥೆಗೊಳಿಸುವುದು.
- ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದ ಸ್ಮಾರಕಗಳನ್ನು ಮತ್ತು ಸ್ಥಳಗಳನ್ನು ರಕ್ಷಿಸುವುದು.
- ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕರ್ತವ್ಯಗಳನ್ನು ಪ್ರತ್ಯೇಕವಾಗಿಡುವುದು.
- ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗಳನ್ನು ವೃದ್ಧಿಸುವುದು.
ಅನುಷ್ಠಾನ
ನಮ್ಮ ಸಂವಿಧಾನದಲ್ಲಿ ಭಾರತ ದೇಶವನ್ನು ಒಂದು ಕಲ್ಯಾಣ ರಾಜ್ಯವನ್ನಾಗಿ ಕಟ್ಟುವ ಸಂಕಲ್ಪ ಮಾಡಲಾಗಿದೆ. ಕಲ್ಯಾಣ ರಾಜ್ಯವೆಂದರೆ ಸರ್ಕಾರಕ್ಕೆ ಜನ ಸಾಮಾನ್ಯರ ಕನಿಷ್ಠ ಅಗತ್ಯತೆಗಳಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಹೆಚ್ಚು ಜವಾಬ್ದಾರಿ. ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯದ ಸ್ಥಾಪನೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ ದೇಶದ ಶೇ.81ರಷ್ಟು ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ದೇಶದ 2/3ರಷ್ಟು ಜನರಿಗೆ ಪಿಡಿಎಸ್ ಮುಖಾಂತರ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ಶೇ.50ರಷ್ಟು ಜನರಿಗೆ ಆರೋಗ್ಯದ ಸೌಲಭ್ಯವನ್ನು ಸರ್ಕಾರ ಒದಗಿಸುತ್ತದೆ. ಶೇ.50ರಷ್ಟು ಜನರಿಗೆ ಮನೆ ವ್ಯವಸ್ಥೆ ಮಾಡಲಾಗಿದೆ. ಶೇ.80ರಷ್ಟು ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತದೆ. ಹೀಗೆ ಬಡತನದಲ್ಲಿರುವ ವೃದ್ಧರಿಗೆ, ವಿಕಲಚೇತನರಿಗೆ, ಗರ್ಭಿಣಿ ಹೆಂಗಸರಿಗೆ, ವಿಧವೆಯರಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಕನಿಷ್ಠ ಅಗತ್ಯತೆಗಳನ್ನು ಪೂರೈಸಲಾಗಿದೆ. ವಚನಕಾರರ ಕನಸಿನ ಕಲ್ಯಾಣ ರಾಜ್ಯ ಸ್ಥಾಪಿಸಲು ಒಂದು ಪ್ರಯತ್ನವಂತೂ ನಡೆದಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಖಾಸಗಿಯವರ ಕೈಗೆ ಒಪ್ಪಿಸುತ್ತಾ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ದೂರ ಸಾಯುತ್ತಿವೆ. ಕೆಲವೇ ಜನರ ಕೈಯಲ್ಲಿ ಬಹುಪಾಲು ಸಂಪತ್ತು ಸಂಗ್ರಹವಾಗಿದ್ದು, ಬಹುಸಂಖ್ಯಾತ ಜನರ ಕೈಯಲ್ಲಿ ಅತ್ಯಲ್ಪ ಸಂಪತ್ತು ಉಳಿದಿದೆ. ಸಂಪತ್ತು ಮತ್ತು ಸೌಲಭ್ಯಗಳ ಅಸಮಾನ ಹಂಚಿಕೆಯಿಂದ ದೇಶದ ಬಹುಸಂಖ್ಯಾತ ಜನರನ್ನು ಹಸಿವು, ಬಡತನ, ನಿರುದ್ಯೋಗ, ಅಭದ್ರತೆ ಇತ್ಯಾದಿಗಳು ಕಾಡುತ್ತಿವೆ. ಜಾಗತೀಕರಣದ ಪರಿಣಾಮವಾಗಿ ಅತಿಯಾದ ವ್ಯಾಪಾರೀಕರಣ ಬೆಳೆಯುತ್ತಿದೆ. ಕೃಷಿ ಮತ್ತು ಕೈಗಾರಿಕೆ ಕ್ಷೇತ್ರಗಳು ಬಿಕ್ಕಟ್ಟಿನಲ್ಲಿವೆ. ವ್ಯಾಪಕವಾದ ನಿರುದ್ಯೋಗ, ಭ್ರಷ್ಟಾಚಾರ, ಅಪರಾಧೀಕರಣ ಜನರನ್ನು ಕಾಡುತ್ತಿವೆ. ಸಾಮಾಜಿಕ ನ್ಯಾಯ ಅಪ್ರಸ್ತುತವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶರಣರ ಕಲ್ಯಾಣರಾಜ್ಯದ ತತ್ವವನ್ನು ಮುನ್ನಡೆಸಿ ಸಾಮಾನ್ಯ ಜನರನ್ನು ರಕ್ಷಿಸಬೇಕಾಗಿದೆ.
ಕೊನೆಯದಾಗಿ
12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ನೀಡಿರುವ ಸಂದೇಶ ಯಾವುದೇ ಒಂದು ನಿರ್ದಿಷ್ಟ ಪ್ರದೇಶಕ್ಕೆ ನಿರ್ದಿಷ್ಟ ಜನಾಂಗಕ್ಕೆ ನಿರ್ದಿಷ್ಟ ಕಾಲಮಾನಕ್ಕೆ ನೀಡಿದ್ದಲ್ಲ! ಅದು ಸಾರ್ವಕಾಲಿಕವಾದ ಮತ್ತು ಸಮಸ್ತ ಮಾನವ ಸಮುದಾಯಕ್ಕೆ ಅನ್ವಯವಾಗುವ ಜೀವನ ಸಂದೇಶ. ಅದೇ ರೀತಿ 1950 ಜನವರಿ 26ನೇ ತಾರೀಖಿನಂದು ಜಾರಿಗೆ ಬಂದ ಭಾರತ ಸಂವಿಧಾನ ಈ ದೇಶದ 140 ಕೋಟಿ ಜನರ ಬದುಕನ್ನು ನಿಯಂತ್ರಿಸುತ್ತಿದೆ. ವಿವಿಧ ಧರ್ಮದ, ಜಾತಿಗಳ, ಭಾಷೆಗಳ, ಆಚಾರ-ವಿಚಾರಗಳ ಜನರನ್ನು ಒಟ್ಟಾಗಿ ಮುನ್ನಡೆಸುತ್ತಿರುವುದು ನಮ್ಮ ಸಂವಿಧಾನ. ಇಂದಿಗೂ ನಮ್ಮ ಸಂವಿಧಾನ ಉತ್ತಮ ಮತ್ತು ಪ್ರಸ್ತುತವಾದದ್ದು.
ಇಂದು ಕೆಲವರು ನಾವು ಶರಣರ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ ಮತ್ತೊಂದು ಕಡೆ ಮೂಢನಂಬಿಕೆಗಳನ್ನು ಮತ್ತು ಗೊಡ್ಡು ಸಂಪ್ರದಾಯಗಳನ್ನು ದಿನನಿತ್ಯ ಆಚರಿಸುತ್ತಿದ್ದಾರೆ. ಮತ್ತೆ ಕೆಲವರು ಬಸವಣ್ಣನ ಹೆಸರನ್ನೇ ಬಂಡವಾಳ ಮಾಡಿಕೊಂಡು ದುಖಾನ್‌ಗಳನ್ನು ನಡೆಸುತ್ತಿರುವುದು ವ್ಯಂಗ್ಯ. ಇವುಗಳಿಂದ ಮತ್ತು ಇಂತಹವರಿಂದ ಬಸವಣ್ಣನವರನ್ನು ಬಿಡಿಸಿ ಅವರ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಬೇಕಾಗಿದೆ.
ಅದೇ ರೀತಿ ಕೆಲವರು ನಮ್ಮ ಸಂವಿಧಾನದ ಅರಿವನ್ನು ಬೆಳೆಸಿಕೊಳ್ಳದೆ ಅಮಲನ್ನು ಏರಿಸಿಕೊಂಡಿದ್ದಾರೆ ಮತ್ತು ಕೆಲವರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಸಂವಿಧಾನವನ್ನು ಸುಡುವಂಥ ಅನಾಗರಿಕ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಮಗದೊಂದು ಕಡೆ ಸಂವಿಧಾನಕ್ಕೆ ನಮಸ್ಕಾರ ಮಾಡುತ್ತಾರೆ, ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕುತ್ತಾರೆ. ಆದರೆ, ಅವರ ಕಾರ್ಯವೈಖರಿ ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾದದ್ದು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು, ಅದರಂತೆ ನಡೆದುಕೊಳ್ಳಬೇಕು, ಸಂವಿಧಾನವನ್ನು ರಕ್ಷಿಸಬೇಕು.
ವಚನಗಳನ್ನು ಓದಿ ಅರ್ಥ ಮಾಡಿಕೊಂಡರೆ ಭಾರತ ಸಂವಿಧಾನವನ್ನು ಅರ್ಥ ಮಾಡಿಕೊಂಡ ಹಾಗೆ. ಸಂವಿಧಾನ ಜಾರಿಗೆ ಬಂದರೆ ವಚನಗಳು ಜಾರಿಗೆ ಬಂದಂತೆ. ಸಂವಿಧಾನಕ್ಕೆ ಧಕ್ಕೆಯಾದರೆ ವಚನಗಳಿಗೆ ಧಕ್ಕೆಯಾದಂತೆ, ಸಂವಿಧಾನವನ್ನು ಕಳೆದುಕೊಳ್ಳುವುದೆಂದರೆ ವಚನಗಳನ್ನು ಕಳೆದುಕೊಂಡ ಹಾಗೆ. ಸಂವಿಧಾನವನ್ನು ರಕ್ಷಿಸಿಕೊಳ್ಳುವುದೆಂದರೆ ವಚನಗಳನ್ನು ರಕ್ಷಿಸಿಕೊಳ್ಳುವುದು. ವಚನಗಳು ಎಂದೆಂದಿಗೂ ಪ್ರಸ್ತುತ, ಅದೇ ರೀತಿಯಲ್ಲಿ ನಮ್ಮ ಸಂವಿಧಾನವು ಪ್ರಸ್ತುತ ವಚನ ಸಂದೇಶ ಮತ್ತು ಸಂವಿಧಾನದ ಮೂಲ ಆಶಯಗಳು ನಮ್ಮನ್ನು ಮುನ್ನಡೆಸಲಿ.