October 1, 2023 6:59 am

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ ಗುರಿ. ಈ ಗುರಿಯನ್ನು ಸಾಧಿಸಲು ಮೀಸಲಾತಿ ಒಂದು ತಾತ್ಕಾಲಿಕ ಮಾರ್ಗ ಮಾತ್ರ. ಮೀಸಲಾತಿಯನ್ನು ಶಾಶ್ವತವಾಗಿ ಮುಂದುವರಿಸಿಕೊಂಡು ಹೋಗುವುದು ಎಂದರೆ ಈ ವರ್ಗದ ಜನರ ಸ್ಥಿತಿಗತಿಗಳನ್ನು ಮುಂದುವರಿಸಿಕೊಂಡು ಹೋಗುವುದು. ಆದ್ದರಿಂದ ಮೀಸಲಾತಿ ಎನ್ನುವುದು ಒಂದಲ್ಲ ಒಂದು ದಿವಸ ಅನವಶ್ಯಕ ಎಂದಾಗಬೇಕು ಮತ್ತು ಅದು ಒಂದು ದುರದೃಷ್ಟಕರ ಭೂತಕಾಲದ ಅವಶೇಷ ಎಂಬಂತಾಗಬೇಕು. ಇದು ಸಾಧ್ಯವಾಗಬೇಕಾದರೆ ಮೀಸಲಾತಿಯ ಜೊತೆಗೆ ಸರ್ಕಾರ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು.

ಮೀಸಲಾತಿ ಸೌಲಭ್ಯದಿಂದ ಕಳೆದ 75 ವರ್ಷಗಳಲ್ಲಿ ಒಂದು ಹಿಡಿಯಷ್ಟು ಪ.ಜಾ, ಪ.ಪಂ. ಹಿಂದುಳಿದ ವರ್ಗಗಳವರು ಮತ್ತು ಮಹಿಳೆಯರು ಮೇಲು ಸ್ತರದತ್ತ ಚಲಿಸಲು ಸಾಧ್ಯವಾಗಿದೆ. ಉಳಿದಂತೆ ಬೃಹತ್‌ ಪ್ರಮಾಣದ ಜನರ ಸ್ಥಿತಿಗತಿ ಹೀನಾಯವಾಗಿದೆ. ಬಹುಸಂಖ್ಯಾತ ಜನರ ಜೀವನ ಸುಧಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ. ಮೀಸಲಾತಿ ಬೇಕು ಆದರೆ ಅದನ್ನೇ ನಂಬಿಕೊಂಡು ಎಲ್ಲ ಜಾತಿಯ ಎಲ್ಲಾ ಜನರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.

ದಿನೇ ದಿನೇ ನಿರುದ್ಯೋಗವು ಹೆಚ್ಚುತ್ತಿದೆ. ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಕೈಗಾರಿಕಾ ವಲಯದಲ್ಲೂ ನಿರುದ್ಯೋಗ ಹೆಚ್ಚುತ್ತಿದೆ. ತಯಾರಿಕೆ, ಆಟೊಮೊಬೈಲ್, ಬ್ಯಾಂಕಿಂಗ್, ಜವಳಿ, ರಿಯಲ್ ಎಸ್ಟೇಟ್, ಪ್ರವಾಸ, ನಿರ್ಮಾಣ ಇತ್ಯಾದಿಗಳಲ್ಲಿ ಹಿನ್ನಡೆಯನ್ನು ಕಾಣಬಹುದು ಮತ್ತೆ ಕೆಲವು ಮುಗ್ಗಟ್ಟನ್ನು ಎದುರಿಸುತ್ತಿವೆ. ಇದರ ಜೊತೆಗೆ ಕೊರೋನಾ ವೈರಸ್‌ನಿಂದ ನಿರುದ್ಯೋಗ ಮತ್ತಷ್ಟು ಹೆಚ್ಚಿದೆ. ಈ ವೈರಸ್‌ನ್ನು ಹಿಮ್ಮೆಟ್ಟಿಸಿದರೂ ನಮ್ಮ ನಿರುದ್ಯೋಗ ಸಮಸ್ಯೆ ಮುಂದುವರಿಯುತ್ತದೆ ಮತ್ತು ಸದ್ಯದಲ್ಲಿ ಮುಕ್ತಿಯನ್ನು ಕಾಣಲು ಸಾಧ್ಯವಿಲ್ಲ.

ನಮ್ಮ ಸಂವಿಧಾನದಲ್ಲಿ ಈ ದೇಶವನ್ನು ಕಲ್ಯಾಣ ರಾಜ್ಯವನ್ನಾಗಿ ಕಟ್ಟುವ ಸಂಕಲ್ಪ ಮಾಡಲಾಗಿದೆ. ಕಲ್ಯಾಣ ರಾಜ್ಯವೆಂದರೆ ಸರ್ಕಾರಕ್ಕೆ ಜನಸಾಮಾನ್ಯರ ಕನಿಷ್ಠ ಅಗತ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಸರ್ಕಾರಕ್ಕೆ ಹೆಚ್ಚು ಜವಾಬ್ದಾರಿ ಇರುವುದು. ಆದರೆ ಇಂದು ಸರ್ಕಾರಗಳು ಈ ಜವಾಬ್ದಾರಿಯಿಂದ ದೂರ ಸರಿದು ಈ ಎಲ್ಲಾ ಕ್ಷೇತ್ರಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದು ಸರ್ಕಾರದ ನೀತಿಯಾಗಿದೆ. ಸರ್ಕಾರಗಳ ಈ ನೀತಿ ಬದಲಾಗಬೇಕು. ಎಲ್ಲಿಯವರೆಗೆ ಸರ್ಕಾರಗಳು ಹೆಚ್ಚು ಹೆಚ್ಚು ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದಿಲ್ಲವೋ ದುಡಿಮೆಗೆ ಸಮನಾದ ಪ್ರತಿಫಲವನ್ನು ಉದ್ಯೋಗದ ಭದ್ರತೆಯನ್ನು, ಪ್ರತಿಭೆಗೆ ತಕ್ಕ ಪುರಸ್ಕಾರವನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ, ಒಳಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ, ಕೆನೆಪದರ ಇತರೆ ಜಾತಿಯವರ ಮೀಸಲಾತಿ ಬೇಡಿಕೆ, ನಮ್ಮನ್ನು ಈ ಪಟ್ಟಿಗೆ ಅಥವಾ ಈ ಪ್ರವರ್ಗಕ್ಕೆ ಸೇರಿಸಿ ಇತ್ಯಾದಿ ಬೇಡಿಕೆಗಳು ಹೀಗೇ ಮುಂದುವರಿಯುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಸರ್ಕಾರ ತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಆದ್ಯತೆ ಮೇರೆಗೆ ಅರ್ಹರೆಲ್ಲರಿಗೂ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಸರ್ಕಾರ, ಈ ಕೆಲಸ ಮಾಡಿದಾಗ ಮೀಸಲಾತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ನೇಪಥ್ಯಕ್ಕೆ ಸರಿಯುತ್ತವೆ. ಸರ್ಕಾರಗಳು ಕಡ್ಡಾಯವಾಗಿ ಈ ಕೆಲಸ ಮಾಡಬೇಕಾದರೆ ಶಿಕ್ಷಣ ಮತ್ತು ಉದ್ಯೋಗಗಳು ಜಾರಿಗೊಳಿಸಬಹುದಾದ ಮೂಲಭೂತ ಹಕ್ಕಾಗಬೇಕು.

ಈ ಸಮಾಜದಲ್ಲಿ ಇತರರಿಗೆ ದೊರೆತಿರುವ ಅವಕಾಶಗಳು ಪ.ಜಾ, ಪ.ಪಂ. ಮತ್ತು ಹಿಂದುಳಿದ ವರ್ಗಗಳಿಗೆ ಯಾಕೆ ದೊರೆಯಲು ಸಾಧ್ಯವಿಲ್ಲ? ಈ ಸಮುದಾಯಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಇತರರಿಗೆ ಎಲ್ಲಾ ರಂಗಗಳಲ್ಲಿ ಸ್ಪರ್ಧೆ ನೀಡಲು ಸಾಧ್ಯವಿದೆ. ಈ ಸಮುದಾಯಗಳು ಹೊಸ ರೀತಿಯ ಜೀವನ ನಡೆಸಲು ಪ್ರಯತ್ನ ಮಾಡಿದಾಗ ಇದು ಸಾಧ್ಯ. ಹೊಸ ರೀತಿಯ ಜೀವನ ಎಂದರೆ, ಇಂದು ಈ ವರ್ಗಗಳು ಹಾಕಿಕೊಂಡಿರುವ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗುವುದು. ಅವರಲ್ಲಿರುವ ಭಯ ಮತ್ತು ಕೀಳರಿಮೆಯನ್ನು ದೂರ ಮಾಡುವುದು. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾವು ಸಮರ್ಥರು ಎಂಬ ನಂಬಿಕೆಯನ್ನು ಅವರಲ್ಲಿ ಮೂಡಿಸುವುದು ಮತ್ತು ಜೀವನದಲ್ಲಿ ಗೆಲ್ಲಬೇಕೆಂಬ ಛಲ ಮೈಗೂಡಿಸಿಕೊಳ್ಳುವುದು. ಯುದ್ಧ ಮೊದಲು ಪ್ರಾರಂಭವಾಗುವುದು ಅಂತರಂಗದಲ್ಲಿ, ನಂತರ ರಣರಂಗದಲ್ಲಿ. ಈ ಸಮುದಾಯಗಳ ಜನರ ಅಂತರಂಗ ಯುದ್ಧ ಈಗ ಪ್ರಾರಂಭವಾಗಬೇಕಿದೆ.

“Nothing is permanent, except change” ಎಂಬ ಮಾತಿದೆ. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಆದರೆ ಬದಲಾವಣೆ ಮಾತ್ರ ಶಾಶ್ವತ. ಈ ಮಾತು ವೈಯಕ್ತಿಕ ಜೀವನಕ್ಕೂ ಅನ್ವಯಿಸುತ್ತದೆ. ಹೊಸ ಜೀವನ ಕ್ರಮವೆಂದರೆ ಆತ್ಮವಿಶ್ವಾಸ, ದೊಡ್ಡ ಕನಸು, ಸರಿಯಾದ ಗುರಿ, ಶ್ರದ್ಧೆ, ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ, ಸರಳ ಜೀವನ ಇತ್ಯಾದಿಗಳನ್ನು ಮೈಗೂಡಿಸಿಕೊಂಡು ಆಚರಣೆಗೆ ತರುವುದು.

ಉತ್ತಮ ಸ್ಥಿತಿಯಲ್ಲಿರುವ ಪ.ಜಾ. / ಪ.ಪಂ. / ಹಿಂದುಳಿದ ವರ್ಗದ ಜನರು ತಮ್ಮ ಸಮುದಾಯದಲ್ಲಿ ದುಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡುವ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಾರಕ್ಕೆ ಒಂದು ದಿವಸ ಸಮುದಾಯದ ಹಿತಕ್ಕಾಗಿ ಬಳಸಿ, ವರಮಾನದ ಒಂದಷ್ಟು ಪಾಲನ್ನು ಬಡವರ ಅಭಿವೃದ್ಧಿಗಾಗಿ ಬಳಸಿ, ತಮ್ಮ ಅನುಭವ ಮತ್ತು ಜ್ಞಾನವನ್ನು ಮುಂದಿನ ತಲೆಮಾರಿಗೆ ಧಾರೆ ಎರೆಯಬೇಕು. ನೈತಿಕ ಜೀವನವನ್ನು ನಡೆಸಿ ಯುವ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಬೇಕು. ಈ ರೀತಿಯಲ್ಲಿ ಯುವ ಪೀಳಿಗೆಯನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕಾಗಿದೆ.

ಪ.ಜಾ. / ಪ.ಪಂ. ಮತ್ತು ಹಿಂದುಳಿದ ವರ್ಗದ ಸಮುದಾಯಗಳು ಎದುರಿಸುತ್ತಿರುವ ಅಸಮಾನತೆ, ಶ್ರೇಣೀಕರಣ, ತಾರತಮ್ಯ, ದುಸ್ಥಿತಿ, ಶೋಷಣೆ ಮುಂತಾದವು ಮೂಲತಃ ಚಾರಿತ್ರಿಕ ಮತ್ತು ಸಾಮಾಜಿಕ ಸಮಸ್ಯೆಗಳು. ಇವು ಈ ಸಮಾಜ ಹುಟ್ಟು ಹಾಕಿರುವ ಸಮಸ್ಯೆಗಳು. ಇವುಗಳನ್ನು ನಿವಾರಿಸುವ ಜವಾಬ್ದಾರಿಯನ್ನು ಸಮಾಜವು ಹೊರಬೇಕಾಗಿದೆ. ಇದು ಕೇವಲ ಸರ್ಕಾರದ ಕೆಲಸವೆಂದು ನಮ್ಮ ಜವಾಬ್ದಾರಿಯಿಂದ ದೂರ ಸರಿಯುವುದು ಸರಿಯಲ್ಲ. ಆದರೆ ಸರ್ಕಾರವು ಸಂವಿಧಾನಾತ್ಮಕವಾಗಿ ನೀಡುತ್ತಿರುವ ಸಕಾರಾತ್ಮಕ ತಾರತಮ್ಯ ನೀತಿಯ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಮತ್ತು ಮೀಸಲಾತಿ ಬಗೆಗಿನ ತಿಳುವಳಿಕೆ ಕೊರತೆಯಿಂದಾಗಿ ಸಮಾಜದ ಒಂದು ವರ್ಗಕ್ಕೆ ಅಸಹನೆಯಿದೆ. ಮೀಸಲಾತಿಗೆ ಸಂಬಂಧಿಸಿದ ಸತ್ಯ ಸಂಗತಿಗಳನ್ನು ಯುವ ಜನಾಂಗಕ್ಕೆ ತಿಳಿಯಪಡಿಸಬೇಕಾಗಿದೆ.

ಸಮಾನತೆ ಎಂಬುದು ಸಂವಿಧಾನಾತ್ಮಕ ಮೌಲ್ಯ. ಇದನ್ನು ಸಮಾಜವು ಒಪ್ಪಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಾಗುತ್ತದೆ. ಸಮಾನತೆಯನ್ನು ಯಾಂತ್ರಿಕವಾಗಿ ಪರಿಭಾವಿಸಿಕೊಳ್ಳುವುದರಿಂದ ಉಪಯೋಗವಿಲ್ಲ. ಎಲ್ಲರನ್ನು ಒಳಗೊಳ್ಳುವ ಕ್ರಮವಾಗಿ ಸಮಾನತೆಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಪ.ಜಾ. ಮತ್ತು ಪ.ಪಂ. ಮತ್ತು ಹಿಂದುಳಿದ ವರ್ಗಗಳ ಶಿಕ್ಷಣ ಮಟ್ಟ, ಆರೋಗ್ಯ ಸ್ಥಿತಿಗತಿ ಮತ್ತು ಉದ್ಯೋಗ ಪ್ರಮಾಣ ಉತ್ತಮವಾಗದೆ. ರಾಜ್ಯದ ಒಟ್ಟಾರೆ ಅಭಿವೃದ್ಧಿ ಉತ್ತಮವಾಗುವುದು ಕಷ್ಟಸಾಧ್ಯ. ಸಮಾಜದಲ್ಲಿ ಬಹುದೊಡ್ಡ ಜನಸಮೂಹವೊಂದು ದುಸ್ಥಿತಿಯಲ್ಲಿ ನರಳುತ್ತಿದ್ದರೆ ಉಳಿದ ಜನವರ್ಗವು ಸುಖ-ಸಂತೋಷದಿಂದಿರುವುದು ಸಮಾನತೆ ಎನಿಸಿಕೊಳ್ಳುವುದಿಲ್ಲ. ಈ ವರ್ಗಗಳ ಅಭಿವೃದ್ಧಿಗೆ ಸಮಾಜದ ಎಲ್ಲ ಜನವರ್ಗಗಳು ಎಲ್ಲ ರೀತಿಯ ಸಹಕಾರ ನೀಡಬೇಕು ಮತ್ತು ಇದರಲ್ಲಿ ಸಹಭಾಗಿಯಾಗಬೇಕು. ಈ ಬಗೆಯ ಕ್ರಮದಿಂದ ಮಾತ್ರ ಶತಶತಮಾನಗಳಿಂದ ಹರಿದುಕೊಂಡು ಬಂದಿರುವ ಸಾಮಾಜಿಕ ಪ್ರತ್ಯೇಕೀಕರಣವನ್ನು ಹೋಗಲಾಡಿಸಬಹುದು.

Share:

Leave a Reply

Your email address will not be published. Required fields are marked *

More Posts

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು