ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು ಮತ್ತು ವಿತರಣೆ ಎಂದರೇನು, ಮೀಸಲಾತಿ ಯಾವ ವಲಯಗಳಲ್ಲಿ ನೀಡಬೇಕು, ಯಾವ ವಲಯಗಳಲ್ಲಿ ನೀಡಬಾರದು. ಮೀಸಲಾತಿ ಸವಲತ್ತು ಯಾರಿಗೆ ತಲುಪಿಲ್ಲ ಮತ್ತು ಅವರಿಗೆ ಯಾವ ರೀತಿ ತಲುಪಿಸಬೇಕು ಇನ್ನೆಷ್ಟು ವರ್ಷ ಮೀಸಲಾತಿ ಮುಂದುವರೆಸಬೇಕು ಎಂಬ ಪ್ರಶ್ನೆಗಳು ಎದುರಾಗಿವೆ.
ಯಾವ ಜಾತಿಯನ್ನು ಯಾವ ಪಟ್ಟಿಗೆ ಸೇರಿಸಬೇಕು, ಯಾವ ಜಾತಿಯನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು ಎಂಬ ವಿಷಯದಲ್ಲಿ ವೈಜ್ಞಾನಿಕ ಮಾನದಂಡಗಳನ್ನು ರೂಪಿಸುವುದು ಬೇಡವೆ? ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆ, ಅನಾಥ ಮಕ್ಕಳನ್ನು ಯಾವ ಧರ್ಮ, ಜಾತಿ ಮತ್ತು ಪ್ರವರ್ಗಕ್ಕೆ ಸೇರಿಸಬೇಕು, ಮತಾಂತರಗೊಂಡವರಿಗೆ ಮೀಸಲಾತಿ ನೀಡಬೇಕೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ವಿಸ್ತರಿಸಬೇಕೆ ಇತ್ಯಾದಿ ಹಲವು ಸವಾಲುಗಳು ಇವೆ.
ಕೆಲವು ಖಾಸಗಿ ಸಂಸ್ಥೆಗಳು ಒಂದೇ ಜಾತಿ ಅಥವಾ ಕೆಲವು ಮೇಲು ಜಾತಿ ನೌಕರರನ್ನು ನೇಮಿಸಿಕೊಂಡು ತಮ್ಮ ಉದ್ಯಮಗಳನ್ನು ನಡೆಸುತ್ತಿರುವುದು ವರ್ಣಭೇದವಲ್ಲವೆ? ಮೀಸಲಾತಿ ನೀತಿಯನ್ನು ಜಾರಿಗೊಳಿಸದ ಅಧಿಕಾರಿಗಳಿಗೆ ಶಿಕ್ಷೆ ಬೇಡವೆ? ಇತ್ಯಾದಿ ಅನೇಕ ಸಮಸ್ಯೆಗಳು ನಮ್ಮ ಮುಂದಿವೆ.
ಈ ರೀತಿಯ ಸಮಸ್ಯೆಗಳಿಗೆ, ಸವಾಲುಗಳಿಗೆ ಮತ್ತು ಪ್ರಶ್ನೆಗಳಿಗೆ ಸ್ಪಷ್ಟವಾದ ನೀತಿ ನಮ್ಮ ಸರ್ಕಾರಗಳ ಮುಂದೆ ಇಲ್ಲ. ನ್ಯಾಯಾಲಯದ ತೀರ್ಪುಗಳೂ ಸಹ ಅನೇಕ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿವೆ. ಜೊತೆಗೆ ನ್ಯಾಯಾಲಯದ ತೀರ್ಪುಗಳಲ್ಲಿ ಸಾಮರಸ್ಯ ಕಾಣುತ್ತಿಲ್ಲ. ಸರಿಯಾದ ಉತ್ತರಗಳನ್ನು ತುರ್ತಾಗಿ ಕಂಡುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಸಮಾಜದ ವಿವಿಧ ಜಾತಿಗಳ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಮುಂದುವರೆದು ಜಾತಿ ಜಾತಿಗಳ ನಡುವೆ ತಮಗಾಗಿ ಮತ್ತು ತಮ್ಮ ಸ್ವಾರ್ಥಕ್ಕಾಗಿ ಸದಾ ಕಾದಾಡುವಂತೆ ಮಾಡುತ್ತದೆ. ಒಂದು ಜಾತಿಯನ್ನು ತುಳಿಯುವುದರ ಮೂಲಕ ಮತ್ತೊಂದು ಜಾತಿ ಅಸ್ತಿತ್ವದಲ್ಲಿರಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ ಜಾತಿ ಮತ್ತು ಜಾತಿಪ್ರಜ್ಞೆಯು ದೇಶದ ಐಕ್ಯತೆಯನ್ನು ಅಸಾಧ್ಯವಾಗಿಸುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಗಳ ಅಧ್ಯಯನ ಮಾಡಬೇಕಾಗಿದೆ. ಕಾರಣಗಳನ್ನು ಕಂಡುಕೊಳ್ಳಬೇಕಾಗಿದೆ ಹಾಗೂ ಪರಿಣಾಮಕಾರಿಯಾದ ಪರಿಹಾರಗಳನ್ನು ಜಾರಿಗೆ ತರಬೇಕಾಗಿದೆ. ಇರುವ ಕಾನೂನುಗಳಿಗೆ ಸಣ್ಣಪುಟ್ಟ ತಿದ್ದುಪಡಿಗಳನ್ನು ತರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಇಡೀ ಮೀಸಲಾತಿ ನೀತಿಯನ್ನು ಪುನರ್ ರೂಪಿಸಬೇಕಾಗಿದೆ. ಪುನರ್ರೂಪಿಸುವ ಹೆಸರಿನಲ್ಲಿ ಈಗಾಗಲೇ ಇರುವ ಹಕ್ಕುಗಳನ್ನು ಕಿತ್ತುಕೊಳ್ಳಬಾರದು ಅಥವಾ ಮೊಟಕುಗೊಳಿಸಬಾರದು. ಇರುವಂಥ ಮೀಸಲಾತಿ ನೀತಿಯನ್ನು ಸರಿಪಡಿಸಿ ಉತ್ತಮಗೊಳಿಸಿ ಮತ್ತಷ್ಟು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಪುನರ್ ರೂಪಿಸಬೇಕಾಗಿದೆ.