October 1, 2023 8:40 am

ಜನಹಿತಕ್ಕೆ ಶರಣಾಗಬೇಕಾದವರು ಜಾತಿ ಹಿತಕ್ಕೆ ಶರಣಾದರು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಜಗತ್ತಿನ ಎಲ್ಲಾ ಧರ್ಮಗಳು ಪ್ರಾರಂಭವಾದದ್ದು ಜನರ ಕಣ್ಣೀರನ್ನು ಒರೆಸುವುದಕ್ಕೆ, ಜನರ ಸಂಕಷ್ಟಗಳನ್ನು ಪರಿಹರಿಸುವುದಕ್ಕೆ. ರೋಮ್ ನಾಗರಿಕತೆಯಲ್ಲಿ ಗುಲಾಮರ ಸಂಕಷ್ಟಗಳನ್ನು ಪರಿಹರಿಸಲು ಕ್ರೈಸ್ತ ಧರ್ಮ ಹುಟ್ಟಿತು. ಸೆಂಟ್ರಲ್ ಏಷ್ಯಾದಲ್ಲಿ ಕೊಲೆ, ಲೂಟಿ, ದರೋಡೆ, ಹಿಂಸೆಗಳಿಂದ ನೊಂದ ಜನರ ದುಃಖವನ್ನು ಪರಿಹರಿಸಲು ಇಸ್ಲಾಂ ಧರ್ಮ ಹುಟ್ಟಿಕೊಂಡಿತು. ಭಾರತದ ಬಲಿ, ಯಾಗ, ಯಜ್ಞ ಇತ್ಯಾದಿಗಳಿಗೆ ತತ್ತರಿಸಿದ ಜನರ ಕಷ್ಟವನ್ನು ಪರಿಹರಿಸಲು ಜೈನ – ಬೌದ್ಧ ಧರ್ಮಗಳು ಹುಟ್ಟಿಕೊಂಡವು. ಮುಂದುವರೆದು ಇದೇ ಉದ್ದೇಶದಿಂದ ಹುಟ್ಟಿದ್ದು ಸಿಖ್ ಧರ್ಮ. ಆದ್ದರಿಂದಲೇ ದಮನಕ್ಕೊಳಗಾದ ಜನರ ಧ್ವನಿಯೇ ಧರ್ಮವೆಂದು ಹೇಳಲಾಗಿದೆ. ಕ್ರಮೇಣ ಧರ್ಮವು ಕೆಲವೇ ಜನರ ಹಿತಾಸಕ್ತಿ ಕಾಯುವ ಅಸ್ತ್ರವಾಯಿತು. ಧರ್ಮ ಅಪ್ರಜಾಪ್ರಭುತ್ವಗೊಂಡು ಮೂಲಭೂತವಾದವಾಯಿತು. ಧರ್ಮವು ರಾಜಕಾರಣದ ಜೊತೆ ಬೆರೆತು ಕೋಮುವಾದವಾಯಿತು. ವಿಶ್ವದಲ್ಲಿ ಯುದ್ಧಗಳಲ್ಲಿ ಸತ್ತ ಜನರಿಗಿಂತ ಹೆಚ್ಚಿನ ಜನ ಮೂಲಭೂತವಾದ ಮತ್ತು ಕೋಮುವಾದದಿಂದಾದ ಘರ್ಷಣೆಗಳಲ್ಲಿ ಸತ್ತಿದ್ದಾರೆ. ಹಾಗಾಗಿ ನಾವು ಧರ್ಮ ವಿರೋಧಿಗಳಾಗಬೇಕಾಗಿಲ್ಲ. ಆದರೆ ಧರ್ಮವನ್ನು ಮೂಲಭೂತವಾಗಿಸುವುದನ್ನು ಹಾಗೂ ಕೋಮುವಾದವನ್ನಾಗಿಸುವುದನ್ನು ತಡೆಯಬೇಕಾಗಿದೆ.

ಧಾರ್ಮಿಕ ಕೇಂದ್ರಗಳಾದ ಅನೇಕ ಮಠಗಳು ಮತ್ತು ಮಠಾಧೀಶರು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ / ನೀಡುತ್ತಿದ್ದಾರೆ. ಇಂತಹ ಮಠಗಳ ಮತ್ತು ಮಠಾಧೀಶರ ಬಗ್ಗೆ ಸಾರ್ವಜನಿಕರು ಇಂದಿಗೂ ಅಪಾರವಾದ ಗೌರವವನ್ನು ಹೊಂದಿದ್ದಾರೆ.

ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಒಂದು ಮೂಲತತ್ವ. ಧರ್ಮ ನಿರಪೇಕ್ಷತೆ ಎಂದರೆ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು. ಸರ್ಕಾರಕ್ಕೆ ತನ್ನದೇ ಆದ ಧರ್ಮವಿರಕೂಡದು. ಸರ್ಕಾರ ಬೇರೆ ಬೇರೆ ಧರ್ಮಗಳ ಮಧ್ಯೆ ತಾರತಮ್ಯ ತೋರಬಾರದು. ಧರ್ಮದ ಪೋಷಣೆಗೆ ಸರ್ಕಾರ ಜನರ ಮೇಲೆ ತೆರಿಗೆ ವಿಧಿಸಬಾರದು. ಸರ್ಕಾರ ರಚಿಸುವ ಯಾವುದೇ ಕಾನೂನುಗಳು ಧರ್ಮದ ಫರ್ಮಾನುಗಳಿಂದ ಪ್ರೇರಿತವಾಗಕೂಡದು. ಇಂತಹ ಒಂದು ರಾಜಕೀಯ ವ್ಯವಸ್ಥೆ ಧರ್ಮನಿರಪೇಕ್ಷ ವ್ಯವಸ್ಥೆಯೆಂದು ಕರೆಯಲ್ಪಡುತ್ತದೆ. ಧರ್ಮ ನಿರಪೇಕ್ಷತೆಯು ಧರ್ಮ ವಿರೋಧಿಯಲ್ಲ.

ದುರದೃಷ್ಟವೆಂದರೆ ಇಂದು ಅನೇಕ ಧರ್ಮಗುರುಗಳು ಮತ್ತು ಧರ್ಮಪೀಠಗಳು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅನೇಕ ಧರ್ಮಗುರುಗಳು ಚುನಾವಣಾ ಕಣದಲ್ಲಿದ್ದಾರೆ. ರಾಜಕೀಯ ಅಧಿಕಾರ ಧರ್ಮಗುರುಗಳ ಕೈಗೆ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೆಲವು ಮಠಾಧೀಶರು ರಾಜಕಾರಣದ ಕೈಗೊಂಬೆಗಳಾಗಿ ವರ್ತಿಸುತ್ತಿರುವುದು ಸಹ ಆರೋಗ್ಯಕರವಾದ ಬೆಳವಣಿಗೆಯಲ್ಲ.

ಕರ್ನಾಟಕದಲ್ಲಿ ಇಂದು ಅನೇಕ ಮಠಾಧೀಶರು ತಮ್ಮ ತಮ್ಮ ಜಾತಿಗಳ ಪರವಾಗಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಈ ಹೋರಾಟ ಯಾತಕ್ಕಾಗಿ, ಯಾವ ಕಾರಣಕ್ಕಾಗಿ, ಯಾವ ಉಪಯೋಗಕ್ಕಾಗಿ, ಈ ಹೋರಾಟಗಳು ಸಂವಿಧಾನಾತ್ಮಕವಾಗಿವೆಯೇ, ಆಗುವಂತಹ ಅನುಕೂಲಗಳೇನು, ಪ್ರತಿಕೂಲಗಳೇನು ಎಂಬ ಅರಿವಿಲ್ಲದೆ ನಡೆಯುತ್ತಿರುವುದು ದುರದೃಷ್ಟಕರ. ಈ ಜಾತಿ ಹೋರಾಟದ ಬೇಡಿಕೆಗಳನ್ನು ಪೂರೈಸಿದರೂ ಸಹ ತಮ್ಮ ಜಾತಿಯಲ್ಲಿರುವ ಎಷ್ಟು ಜನರಿಗೆ ಉಪಯೋಗವಾಗುವುದೆಂಬ ಕನಿಷ್ಠ ಅಂದಾಜಿಲ್ಲದೆ ಹೋರಾಟಗಳು ನಡೆಯುತ್ತಿವೆ. ಇದರಿಂದ ಬೇರೆ ಜಾತಿಗಳಿಗೆ ಆಗುವ ಅನಾನುಕೂಲದ ಬಗ್ಗೆ ಚಿಂತಿಸಲೇ ಇಲ್ಲ. ಸಮಸ್ಯೆಯ ಮೂಲ ಕಾರಣ ಯಾವುದು ಅದಕ್ಕೆ ಪರಿಹಾರ ಎಲ್ಲಿದೆಯೆಂದು ಹುಡುಕುವ ಪ್ರಯತ್ನ ನಡೆಯಲೇ ಇಲ್ಲ.

ಸಂವಿಧಾನದ ಅನುಚ್ಛೇದ 341ರಲ್ಲಿ ಪರಿಶಿಷ್ಟ ಜಾತಿಗಳ ಮತ್ತು 342ರಲ್ಲಿ ಪರಿಶಿಷ್ಟ ಪಂಗಡಗಳ ಯಾವುದೇ ಜಾತಿಯನ್ನು ಮೀಸಲು ಪಟ್ಟಿಯಿಂದ ತೆಗೆಯಲು ಅಥವಾ ಸೇರಿಸಲು ಶಾಸನಬದ್ಧ ಕ್ರಮಗಳ ಬಗ್ಗೆ ತಿಳಿಯಪಡಿಸಲಾಗಿದೆ. ಯಾವುದೇ ರಾಜ್ಯ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಸಂಬಂಧಿತ ಜಾತಿಯ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ನಡೆಸಿ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿದ ಬಳಿಕ ಸಂಬಂಧಿಸಿದ ರಾಷ್ಟ್ರೀಯ ಆಯೋಗಕ್ಕೆ ಶಿಫಾರಸು ಮಾಡಬೇಕು. ಸಂಬಂಧಿಸಿದ ರಾಷ್ಟ್ರೀಯ ಆಯೋಗವು ರಾಜ್ಯ ಸರ್ಕಾರದ ವರದಿಯನ್ನು ಯಥಾಸ್ಥಿತಿ ಒಪ್ಪಬಹುದು ಅಥವಾ ಸ್ವತಂತ್ರ ತನಿಖೆ ನಡೆಸಿ ತನ್ನ ವರದಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟಕ್ಕೆ ಕಳುಹಿಸಬೇಕು. ತದನಂತರ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದ ಮೇಲೆ ಮಸೂದೆಯಾಗಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ನೀಡಿದ ನಂತರ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಂತಿಮವಾಗಿ ರಾಷ್ಟ್ರಪತಿಗಳು ಸಹಿ ಮಾಡಿದ ನಂತರ ಒಂದು ಜಾತಿಯನ್ನು ಮೀಸಲು ಪಟ್ಟಿಯಲ್ಲಿ ಸೇರಿಸಬಹುದು ಇಲ್ಲವೇ ತೆಗೆದು ಹಾಕಬಹುದು. ಈ ಪ್ರಕ್ರಿಯೆಯ ಅರಿವೇ ಇಲ್ಲದೆ ನಮ್ಮ ಜಾತಿಯನ್ನು ತಕ್ಷಣ ಮೀಸಲು ಪಟ್ಟಿಗೆ ಸೇರಿಸಿ ಎಂಬ ಹೋರಾಟಗಳು ನಡೆಸುವುದು ಎಷ್ಟು ಸರಿ? ಒಂದು ವೇಳೆ ಪ.ಜಾ ಮತ್ತು ಪ.ಪಂಗಳ ಮೀಸಲಾತಿ ಪಟ್ಟಿಯಲ್ಲಿ ಒಳಮೀಸಲಾತಿ ಕಲ್ಪಿಸಿದರೆ ಇಂತಹ ಹೋರಾಟಗಳು ಮುಂದುವರಿಯುತ್ತವೆಯೆ?

ಕರ್ನಾಟಕದ ಹಿಂದುಳಿದ ವರ್ಗದ 207 ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ ಶೇ. 32ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಪ್ರವರ್ಗ – ಶೇ.2. 2ಎ – ಶೇ.16, 2ಬಿ – ಶೇ.5, 3ಎ – ಶೇ.4 ಮತ್ತು 3ಬಿ – ಶೇ.5. ಇಂದು ಪಂಚಮಸಾಲಿ ಲಿಂಗಾಯತರು ತಮ್ಮನ್ನು ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಸುಮಾರು 43 ಜಾತಿಗಳು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಿ ಎಂದು ಬೇಡಿಕೆಯನ್ನು ಇಟ್ಟಿವೆ. ಇವರು ಕಡಿಮೆ ಜನಸಂಖ್ಯೆ ಇರುವ ಸಣ್ಣ ಸಣ್ಣ ಜಾತಿಗಳು ಮತ್ತು ಅವರ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗ ಕೇವಲ ಪಂಚಮಸಾಲಿ ಲಿಂಗಾಯತರ ಬಗ್ಗೆ ಅಧ್ಯಯನ ಮಾಡುವುದರ ಜತೆಗೆ ಸಣ್ಣ ಜಾತಿಗಳ ಬಗ್ಗೆಯೂ ಅಧ್ಯಯನ ಮಾಡಿ ವರದಿ ನೀಡಬೇಕು. ಕೇವಲ ಬಲಿಷ್ಠರ ಬೇಡಿಕೆಗೆ ಮಾನ್ಯತೆ ನೀಡಿ ಸಣ್ಣ ಜಾತಿಗಳ ಬೇಡಿಕೆಯನ್ನು ಕಡೆಗಾಣಿಸಬಾರದು. ಯಾವುದೇ ತಾರತಮ್ಯ ಅನುಸರಿಸಬಾರದು. ಬಲಿಷ್ಠರ ಜೊತೆ ಬಲಹೀನರನ್ನು ಸ್ಪರ್ಧೆಗೆ ಇಳಿಸುವುದು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾದದ್ದು. ಯಾರನ್ನು ಯಾರ ಜೊತೆ ಸೇರಿಸಬೇಕೆಂಬ ವೈಜ್ಞಾನಿಕ ವರ್ಗೀಕರಣವೂ ಇಂದಿನ ಆಗತ್ಯ. ಇವು ಯಾವುದರ ಅರಿವೇ ಇಲ್ಲದೆ ಮೀಸಲಾತಿ ಹೋರಾಟಗಳು ನಡೆಯುತ್ತಿರುವುದು ದುರಂತವೇ ಸರಿ.

ಜಾತಿ ಮೀಸಲಾತಿ ಹೋರಾಟಗಳ ನೇತೃತ್ವ ವಹಿಸಿರುವ ಕೆಲವು ಮಠಾಧೀಶರ ಹೇಳಿಕೆಗಳು ಬಹಳ ಗಂಭೀರ ಸ್ವರೂಪದವು. ಅವು ಪ್ರಜಾಪ್ರಭುತ್ವ ಸರ್ಕಾರಗಳ ಮೇಲೆ ಬೀರುವ ಪರಿಣಾಮಗಳೇನು ಎಂಬುದರ ಬಗ್ಗೆ ಚಿಂತಿಸಬೇಕು. ನಮ್ಮ ಸಂವಿಧಾನದಲ್ಲಿ King is not the law, law is the king ಎಂಬ ತತ್ವವನ್ನು ನಾವು ಮರೆಯಬಾರದು. ಸರ್ಕಾರಗಳು ಇಂತಹ ಒತ್ತಡಗಳಿಗೆ ಶರಣಾದರೆ ನಮ್ಮ ಸಂವಿಧಾನದ ಗತಿ ಏನು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ. ಸಂವಿಧಾನವನ್ನು ನಾವು ಕಳೆದುಕೊಂಡರೆ ಗುಲಾಮರಂತೆ ಬಾಳಬೇಕಾಗುತ್ತದೆ. ದಿನ ಪತ್ರಿಕೆಗಳಲ್ಲಿ ವರದಿಯಾದ ಕೆಲವು ಹೇಳಿಕೆಗಳು ಇಂತಿವೆ.

‘ನಮ್ಮ ಸಮುದಾಯದ ಇಂತಹ ಶಾಸಕರನ್ನು ಮಂತ್ರಿ ಮಾಡಬೇಕು. ಅವರನ್ನು ಸಿ.ಎಂ. ಮಾಡಬೇಕು ಕೈ ಬಿಟ್ಟರೆ ನಮ್ಮ ಅಖಂಡ ಸಮುದಾಯ ನಿಮ್ಮ ಕೈ ಬಿಡುತ್ತೆ.’

“ನಮ್ಮ ಸಮುದಾಯ ನಿಮ್ಮ ಪಕ್ಷಕ್ಕೆ 11 ಜನ ಶಾಸಕರನ್ನು ನೀಡಿ ಅಧಿಕಾರಕ್ಕೆ ತಂದಿದೆ. ನಮ್ಮ ಸಮುದಾಯದ 3 ಶಾಸಕರನ್ನು ನೀವು ಮಂತ್ರಿ ಮಾಡಲೇಬೇಕು.”

‘ಮಾತು ಕೊಟ್ಟಂತೆ ನಾವು ಹೇಳಿದ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಇಲ್ಲವೆಂದರೆ 10 ಜನ ಶಾಸಕರ ರಾಜೀನಾಮೆ ಕೊಡಿಸುವ ತಾಕತ್ ನಮಗಿದೆ.’

‘ನಮ್ಮ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಬರುವ ಚುನಾವಣೆಯಲ್ಲಿ ನಮ್ಮ ಸಮಾಜ ನಿಮಗೆ ತಕ್ಕ ಪಾಠ ಕಲಿಸಲಿದೆ.’

‘ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ… ನಾನು ಎಲ್ಲ ರೀತಿಯ ಜನರಿಗೆ ಸರಿಯಾದುದನ್ನೇ ಮಾಡುತ್ತೇನೆ’ ಎಂಬುದಾಗಿ ಪ್ರಮಾಣ ಮಾಡಿ ಮಂತ್ರಿಗಳಾಗುತ್ತಾರೆ ಮತ್ತು ಶಾಸಕರಾಗುತ್ತಾರೆ. ಆದರೆ ಇಂದು ಹಾಲಿ ಸಚಿವರು ಮತ್ತು ಶಾಸಕರು ಮೀಸಲಾತಿಗಾಗಿ ನಡೆಯುತ್ತಿರುವ ಜಾತಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಆಡಳಿತಾರೂಢ ಪಕ್ಷದ ಮಂತ್ರಿಗಳು ಮತ್ತು ಶಾಸಕರು ಜಾತಿವಾರು ಮೀಸಲಾತಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಯಾರ ವಿರುದ್ಧದ ಹೋರಾಟವೆನ್ನಬೇಕು? ಒಂದು ವೇಳೆ ತಮ್ಮ ಜಾತಿಯ ಜನರನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲೇ ಬೇಕಾದರೆ ಸಾಂವಿಧಾನಿಕ ಸ್ಥಾನಗಳಿಗೆ ರಾಜಿನಾಮೆ ನೀಡಿ ಮುಂದಿನ ಹೆಜ್ಜೆ ಇಡಬೇಕು. ರಾಜಕಾರಣಿಗಳು ಮತ್ತು ಮಠಾಧೀಶರು ಒಂದಾಗಿ ಜಾತಿ ಹೋರಾಟಗಳನ್ನು ನಡೆಸುತ್ತಿರುವುದು ಸಂವಿಧಾನದ ಮೂಲ ಆಶಯವಾದ ಧರ್ಮನಿರಪೇಕ್ಷತೆಗೆ ಮಾರಕವಾದದ್ದು. ಇಡೀ ಸಮಾಜದ ಹಿತವನ್ನು ಕಾಪಾಡಬೇಕಾದವರು ಒಂದು ಜಾತಿಯ ಹಿತಕ್ಕೆ ಶರಣಾಗಬಾರದು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು