ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ರೈತರು ಸ್ವಾಭಿಮಾನ, ಸ್ವಾವಲಂಬನೆ ಮತ್ತು ಗೌರವದಿಂದ ಜೀವನ ಮಾಡುತ್ತಿದ್ದರು. ಕಳೆದ 15 ವರ್ಷಗಳಲ್ಲಿ ಸರ್ಕಾರಗಳು ಅನುಸರಿಸಿದ ನೀತಿಗಳ ಪರಿಣಾಮವಾಗಿ ಮತ್ತು ವಿಜ್ಞಾನದ ಸಾಧನೆಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡಿದುದರ ಪರಿಣಾಮವಾಗಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬರಡಾಗಿ ಲಕ್ಷಗಟ್ಟಲೆ ಎಕರೆ ಜಮೀನು ಪಾಳು ಬಿದ್ದಿದೆ. ಅಂತರ್ಜಲದ ಮಟ್ಟ ಪಾತಾಳಕ್ಕೆ ಇಳಿದಿದೆ. ವಿಪರೀತವಾಗಿ ರಸಗೊಬ್ಬರ, ಕಳೆನಾಶಕ, ಕೀಟನಾಶಕಗಳ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜೀವ ವೈವಿಧ್ಯತೆ ನಾಶವಾಗಿದೆ. ಹೈಬ್ರಿಡ್ ಬೀಜಗಳ ಬಳಕೆಯಿಂದ ಬೀಜ ಕಣಜ ಧ್ವಂಸವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿ ಫಸಲಿಗೆ ಸರಿಯಾದ ಬೆಲೆ ಸಿಗದೆ ರೈತರು ಸಾಲದ ಬಲೆಯಲ್ಲಿ ಸಿಕ್ಕಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಯ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ದಿವಾಳಿಯಾಗಿದ್ದಾರೆ. ತಮ್ಮ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿಲ್ಲ ಮತ್ತು ಓದಿದ ಮಕ್ಕಳಿಗೆ ಉದ್ಯೋಗ ಕೊಡಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮೀಸಲಾತಿಯೇ ಈ ಸಮಸ್ಯೆಗಳಿಗೆ ಪರಿಹಾರವೆಂದು ಗುಜರಾತಿನ ಪಾಟೀದಾರರು, ಹರಿಯಾಣದ ಜಾಟರು, ರಾಜಸ್ತಾನದ ಗುಜ್ಜಾರರು, ಮಹಾರಾಷ್ಟ್ರದ ಮರಾಠಿಗರು, ಆಂಧ್ರಪ್ರದೇಶದ ಕಾಪುಗಳು ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಒಂದು ಭಾಗವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳನ್ನು ನೋಡಬೇಕಾಗಿದೆ. ರಾಜ್ಯದ ಕುರುಬರು ತಮ್ಮನ್ನು ಪ.ಪಂ.ಕ್ಕೆ ಸೇರಿಸಿ ಎಂದು, ಪಂಚಮಸಾಲಿ ಲಿಂಗಾಯತರು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಿ ಎಂದು, ವಾಲ್ಮೀಕಿಯರು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು, ಒಕ್ಕಲಿಗರು ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಜೊತೆಗೆ ಸುಮಾರು ನಲವತ್ತೈದು ಇತರೆ ಸಣ್ಣ ಸಣ್ಣ ಜಾತಿಗಳು ಮೀಸಲಾತಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಇಟ್ಟಿವೆ. ಹೋರಾಟಕ್ಕೆ ಇಳಿದಿವೆ. ಆದರೆ ಅವರ ಜನಸಂಖ್ಯೆ ಕಡಿಮೆ ಇರುವ ಕಾರಣ ಅವರ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಮೀಸಲಾತಿ ಹೋರಾಟಕ್ಕೆ ಇಳಿದಿರುವ ಈ ಎಲ್ಲಾ ಜಾತಿಗಳ ಶೇ. 80ರಷ್ಟು ಜನ ಕೃಷಿಕರು. ಇವರ ಪೈಕಿ ಶೇ. 75ರಷ್ಟು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು. ರೈತರು ಅನೇಕ ರೀತಿಯ ಸಮಸ್ಯೆಗಳನ್ನು, ಕಷ್ಟಗಳನ್ನು ಮತ್ತು ನೋವನ್ನು ಅನುಭವಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಮತ್ತು ನಮ್ಮ ಕಷ್ಟಗಳನ್ನು ನಿವಾರಿಸಿ ಎಂದು ರೈತರು ಕೇಳಿದರೆ ಸರ್ಕಾರಗಳು ಹಳೆ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ಮತ್ತು ಹೊಸ ಕಾಯ್ದೆಗಳನ್ನು ತಂದು ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೆ ನೀಡುತ್ತಿವೆ. ಇದರಿಂದ ರೈತರು ಮತ್ತು ಕೃಷಿ ಕೂಲಿಗಾರರು ಗುಲಾಮರಾಗಿ ಬಾಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರಿ ದಾರಿ ಯಾವುದು ಎಂಬ ಹುಡುಕಾಟದಲ್ಲಿದ್ದಾರೆ.
ನಮ್ಮ ಸಂವಿಧಾನ 1950ರಲ್ಲಿ ಜಾರಿಗೆ ಬಂದಾಗ ಪ.ಜಾ ಮತ್ತು ಪ. ಪಂ.ಗಳಿಗೆ ಮೀಸಲಾತಿ ನೀಡಿದ್ದನ್ನು ರೈತರು ವಿರೋಧಿಸಲಿಲ್ಲ ಅಥವಾ ತಮಗೆ ಮೀಸಲಾತಿ ಬೇಕೆಂದು ಬೇಡಿಕೆ ಇಡಲಿಲ್ಲ. ಇಂದು ಸಂಕಷ್ಟದಲ್ಲಿರುವ ರೈತರು ತಮ್ಮ ತಮ್ಮ ಜಾತಿಯ ಮೀಸಲಾತಿ ಹೋರಾಟಗಳಲ್ಲಿ ತೊಡಗಿದ್ದಾರೆ. ಸಂಕಷ್ಟದಲ್ಲಿರುವ ರೈತರು ಮೀಸಲಾತಿ ಹೋರಾಟಗಳಿಂದ ತಮ್ಮ ಸಮಸ್ಯೆಗಳಿಗೆ ಏನಾದರೂ ಪರಿಹಾರ ಸಿಗಬಹುದೆಂಬ ಪ್ರಾಮಾಣಿಕತೆಯನ್ನು ನಾನು ಪ್ರಶ್ನೆ ಮಾಡುತ್ತಿಲ್ಲ. ಜಾತಿ ಮೀಸಲಾತಿ ಹೋರಾಟದ ಮುಖಂಡತ್ವವನ್ನು ವಹಿಸಿರುವ ಮಠಾಧೀಶರ ಮತ್ತು ರಾಜಕಾರಣಿಗಳ ಸದುದ್ದೇಶವನ್ನು ನಾನು ಪ್ರಶ್ನಿಸುತ್ತಿಲ್ಲ.
ಆದರೆ ಈ ಮೀಸಲಾತಿ ಹೋರಾಟಗಳು ಸಮಸ್ಯೆಗೆ ಪರಿಹಾರವೆ? ಈ ಎಲ್ಲಾ ಜಾತಿವಾರು ಮೀಸಲಾತಿ ಬೇಡಿಕೆಗಳನ್ನು ಈಡೇರಿಸಿದರೂ ಕೇವಲ ಶೇ. 2 ಅಥವಾ 3ರಷ್ಟು ಜನರಿಗೆ ಸಹಾಯವಾಗಬಹುದು. ಉಳಿದ ಶೇ. 97ರಷ್ಟು ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಆದ್ದರಿಂದ ಎಲ್ಲ ಜಾತಿಯಲ್ಲಿರುವ ಬಹುಸಂಖ್ಯಾತ ರೈತರ ಕೃಷಿ ಬಿಕ್ಕಟ್ಟಿಗೆ ಮೀಸಲಾತಿಯು ಖಂಡಿತವಾಗಿಯೂ ಪರಿಹಾರ ಅಲ್ಲವೇ ಅಲ್ಲ. ಹಾಗಾದರೆ ಕೃಷಿ ಬಿಕ್ಕಟ್ಟಿಗೆ ಪರಿಹಾರವಾಗಬೇಕೆಂದರೆ ಸರ್ಕಾರಗಳು ತಂದಿರುವ ಹೊಸ ಕೃಷಿ ಕಾಯ್ದೆಗಳನ್ನು ಮತ್ತು ಹಳೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ರೈತರು ಬೆಳೆದ ಫಸಲಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕೃಷಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಾರುಕಟ್ಟೆ ವ್ಯವಸ್ಥೆ ವಿಸ್ತರಿಸಬೇಕು. ಸಂಸ್ಕರಣೆ ಸಾರಿಗೆ ಇತ್ಯಾದಿಗಳ ಸುಧಾರಣೆಯಾಗಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಕೃಷಿಯೇತರ ಕಸುಬುಗಳು ಮತ್ತು ಅದಕ್ಕೆ ಅಗತ್ಯವಿರುವ ಶಿಕ್ಷಣ ತರಬೇತಿ ಸಿಗಬೇಕು. ಈ ದಿಕ್ಕಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು. ಎಲ್ಲಾ ಜಾತಿಯ ಮುಖಂಡರು, ರಾಜಕಾರಣಿಗಳು ಮತ್ತು ಮಠಾಧೀಶರು ಕೃಷಿ ಬಿಕ್ಕಟ್ಟಿನ ಪರಿಹಾರಕ್ಕೆ ಧ್ವನಿ ಎತ್ತುವುದರ ಮುಖಾಂತರ ಎಲ್ಲಾ ಜಾತಿಯ ರೈತರ ಒಗ್ಗಟ್ಟನ್ನು ಮತ್ತು ಎಲ್ಲರ ಹಿತವನ್ನು ಕಾಪಾಡಬೇಕು ಎಂದು ನಾನು ಮನವಿ ಮಾಡುತ್ತೇನೆ.