October 1, 2023 8:30 am

ನ್ಯಾಯಾಂಗ ಮತ್ತು ಮೀಸಲಾತಿ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ನಮ್ಮ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಒಂದು ಮಹತ್ತರವಾದ ಸ್ಥಾನವಿದೆ. ಶಾಸಕಾಂಗ ಮತ್ತು ಕಾರ್ಯಾಂಗದಿಂದ ಪ್ರತ್ಯೇಕಿಸಲ್ಪಟ್ಟಿರುವ ನ್ಯಾಯಾಂಗವು ಒಂದು ಸ್ವತಂತ್ರವಾದಂಥ ಅಂಗ. ನಮ್ಮ ನ್ಯಾಯ ವಿತರಣಾ ಪದ್ಧತಿಯು ಪ್ರಜೆಗಳ ಮಧ್ಯೆ ಉದ್ಭವಿಸುವ ವಿವಾದಗಳನ್ನು ತೀರ್ಮಾನ ಮಾಡುವುದಲ್ಲದೆ ಶಾಸಕಾಂಗ ರಚಿಸುವ ಕಾನೂನುಗಳನ್ನು ವ್ಯಾಖ್ಯಾನ ಮಾಡುವ ಮತ್ತು ಅಂತಹ ಕಾನೂನುಗಳು ಸಂವಿಧಾನಕ್ಕೆ ವಿರೋಧವಾಗಿದ್ದರೆ ಅವುಗಳನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ. ಕಾನೂನನ್ನು ಉಲ್ಲಂಘನೆ ಮಾಡಿದ ಅಪರಾಧಿಗಳಿಗೆ ಶಿಕ್ಷೆಯನ್ನು ಅಂದರೆ ಮರಣದಂಡನೆಯನ್ನೊಳಗೊಂಡು ವಿವಿಧ ರೀತಿಯ ಶಿಕ್ಷೆಯನ್ನು ವಿಧಿಸುವ ಅಧಿಕಾರವನ್ನು ನ್ಯಾಯಾಂಗವು ಹೊಂದಿದೆ.

ಭಾರತದ ನ್ಯಾಯಾಂಗದ ವ್ಯವಸ್ಥೆಯು ಸರ್ವೋಚ್ಛ ನ್ಯಾಯಾಲಯ, ರಾಜ್ಯಗಳಲ್ಲಿ ಉಚ್ಛ ನ್ಯಾಯಾಲಯ, ಜಿಲ್ಲೆಗಳಲ್ಲಿ ಜಿಲ್ಲಾ ನ್ಯಾಯಾಲಯಗಳನ್ನು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳನ್ನು ಒಳಗೊಂಡಿದೆ. ದೇಶದ ನ್ಯಾಯಾಂಗದ ಆಡಳಿತದ ಜವಾಬ್ದಾರಿ ಸರ್ವೋಚ್ಛ ನ್ಯಾಯಾಲಯದ್ದು, ದೇಶದ ಎಲ್ಲಾ ನ್ಯಾಯಾಲಯಗಳು ಸರ್ವೋಚ್ಛ ನ್ಯಾಯಾಲಯದ ಅಧೀನದಲ್ಲಿ ಕೆಲಸ ಮಾಡುತ್ತವೆ. ಸರ್ವೋಚ್ಛ ನ್ಯಾಯಾಲಯದ ತೀರ್ಮಾನವು ಅಂತಿಮವಾಗಿರುತ್ತದೆ ಮತ್ತು ಇಡೀ ರಾಷ್ಟ್ರದ ಜೀವನವು ಅದಕ್ಕೆ ಬದ್ಧವಾಗಿರುತ್ತದೆ. ಆದರೆ ಅದು ತನ್ನದೇ ತೀರ್ಮಾನಗಳನ್ನು ಪುನರವಲೋಕನ ಮಾಡುವ ಅಧಿಕಾರ ಹೊಂದಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಮತ್ತು ಜನತೆಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯು ಸರ್ವೋಚ್ಛ ನ್ಯಾಯಾಲಯದ ಮೇಲಿದೆ. ಈ ಕೆಲಸವನ್ನು ನಿರ್ವಹಿಸಲೆಂದು ಸರ್ವೋಚ್ಛ ನ್ಯಾಯಾಲಯ ಅನುಚ್ಛೇದ 32ರಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಅರ್ಜಿಗಳನ್ನು ಸ್ವೀಕರಿಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.

ಆದರೆ ಕಳೆದ 73 ವರ್ಷಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಮೀಸಲಾತಿಯ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಕೆಳಗೆ ಉಲ್ಲೇಖಿಸಲಾಗಿರುವ ಕೆಲವು ಪ್ರಮುಖ ತೀರ್ಮಾನಗಳಿಂದ ಇದು ಸ್ಪಷ್ಟವಾಗಿ ಕಾಣುತ್ತದೆ:

1. 1948ರಲ್ಲಿ ಅಂದಿನ ಮದ್ರಾಸ್ ಸರ್ಕಾರವು ಪ.ಜಾ., ಪ.ಪಂ., ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೀಸಲಾತಿಯನ್ನು ಒದಗಿಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ನಿಯಮಗಳನ್ನು ರೂಪಿಸಿತು. ಶ್ರೀಮತಿ ಚಂಪಕಂ ದೊರೆರಾಜನ್ ಎಂಬುವರು ಸರ್ಕಾರದ ಈ ನಿಯಮಗಳನ್ನು ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಿದರು. 1950ರಲ್ಲಿ ಮದ್ರಾಸ್ ಉಚ್ಛ ನ್ಯಾಯಾಲಯವು ಸರ್ಕಾರದ ನಿಯಮಗಳು ಸಂವಿಧಾನದ ಅನುಚ್ಛೇದ 29(2)ಕ್ಕೆ ವಿರೋಧವಾಗಿವೆ ಎಂದು ರದ್ದುಪಡಿಸಿ ತೀರ್ಪನ್ನು ನೀಡಿತು. ಮದ್ರಾಸ್ ಸರ್ಕಾರವು ಉಚ್ಛ ನ್ಯಾಯಾಲಯದ ಈ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿತು. 1951ರಲ್ಲಿ ಸರ್ವೋಚ್ಛ ನ್ಯಾಯಾಲಯವು ಮದ್ರಾಸ್‌ ಉಚ್ಛ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು.

ಮುಂದೆ ಕೇಂದ್ರ ಸರ್ಕಾರವು 1951ರಲ್ಲಿ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ತಂದು ಅನುಚ್ಛೇದ 15(4)ನ್ನು ಸೇರಿಸುವ ಮೂಲಕ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಶೂನ್ಯೀಕರಿಸಿತು. ಅನುಚ್ಛೇದ 15(4) ಈ ರೀತಿ ಇದೆ: “ಈ ಅನುಚ್ಛೇದದಲ್ಲಿ ಅಥವಾ 29ನೆಯ ಅನುಚ್ಛೇದದ (2)ನೆಯ ಖಂಡದಲ್ಲಿ ಇರುವ ಯಾವುದೂ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಅಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ”.

2. 1962ರಲ್ಲಿ ಅಂದಿನ ಮೈಸೂರು ಸರ್ಕಾರವು ಪ.ಜಾ., ಪ.ಪಂ. ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಶೇ.68ರಷ್ಟು ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ಬಾಲಾಜಿ ಪ್ರಕರಣದಲ್ಲಿ ರದ್ದುಪಡಿಸಿ ಎಲ್ಲಾ ವರ್ಗಗಳಿಗೂ ಸೇರಿ ಒಟ್ಟು ಮೀಸಲಾತಿ ಶೇ.50ರಷ್ಟನ್ನು ಮೀರಬಾರದೆಂದು ನಿಬಂಧನೆಯನ್ನು ವಿಧಿಸಿತು.

3. ಮುಂದೆ ಕೇಂದ್ರ ಸರ್ಕಾರವು ಮಂಡಲ್ ವರದಿಯನ್ನು ಆಧರಿಸಿ 1990ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಿತು. ಕೇಂದ್ರ ಸರ್ಕಾರದ ಈ ಕ್ರಮವನ್ನು ಇಂದಿರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 1992ರಲ್ಲಿ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿಹಿಡಿದರೂ ಸಹ ಕೆಲವು ನಿಬಂಧನೆಗಳನ್ನು ವಿಧಿಸಿತು. ಅವುಗಳೆಂದರೆ:

1. ಸರ್ಕಾರಿ ಸೇವೆಗೆ ಪ್ರವೇಶಿಸುವ ಪ್ರಾಥಮಿಕ ಹಂತದಲ್ಲಿ ಮಾತ್ರ ಮೀಸಲಾತಿ ಇರಬೇಕು.

2. ಸೇವೆಗೆ ಸೇರಿದ ನಂತರ ಬಡ್ತಿ ವಿಚಾರದಲ್ಲಿ ಮೀಸಲಾತಿ ಇರಕೂಡದು.

3. ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದು.

4. ಕೆನೆಪದರ ಎಂಬ ನೀತಿ ಕೇವಲ ಹಿಂದುಳಿದ ಜಾತಿಗಳಿಗೆ ಅನ್ವಯವಾಗುತ್ತದೆ.

5. ಕೆನೆಪದರ ಎಂಬ ನೀತಿ ಪ.ಜಾ. ಮತ್ತು ಪ.ಪಂ.ಗಳಿಗೆ ಅನ್ವಯವಾಗುವುದಿಲ್ಲ.

ಮುಂದೆ ಕೇಂದ್ರ ಸರ್ಕಾರವು 1995ರಲ್ಲಿ ಸಂವಿಧಾನಕ್ಕೆ 77ನೇ ತಿದ್ದುಪಡಿ ತಂದು ಅನುಚ್ಛೇದ 16(4ಎ)ನ್ನು ಸೇರಿಸಿ ಬಡ್ತಿಯಲ್ಲಿ ಮೀಸಲಾತಿ ನೀಡಬಹುದು ಎಂಬುದಾಗಿ ಹೇಳಿ ಸರ್ವೋಚ್ಛ ನ್ಯಾಯಾಲಯವು ಇಂದಿರಾ ಸಹಾನಿ ಪ್ರಕರಣದಲ್ಲಿ ವಿಧಿಸಿದ್ದ ನಿಬಂಧನೆಯನ್ನು ಶೂನ್ಯಕರಿಸಿತು.

ಅನುಚ್ಛೇದ 16(4ಎ) ಈ ರೀತಿ ಹೇಳುತ್ತದೆ: “ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನ ಸೇವೆಗಳಲ್ಲಿನ (ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜೇಷ್ಠತೆಯೊಂದಿಗೆ, ಬಡ್ತಿ ವಿಷಯದಲ್ಲಿ) ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡಲು ರಾಜ್ಯಕ್ಕಿರುವ ಅಧಿಕಾರವನ್ನು ಈ ಅನುಚ್ಛೇದದಲ್ಲಿರುವ ಯಾವುದೂ, ಪ್ರತಿಬಂಧಿಸತಕ್ಕದ್ದಲ್ಲ.

2000ರಲ್ಲಿ ಸಂವಿಧಾನಕ್ಕೆ 81ನೇ ತಿದ್ದಪಡಿ ತಂದು ಅನುಚ್ಛೇದ 16(4ಬಿ)ನ್ನು ಸೇರಿಸಿ ಶೇ.50 ಮೀರಬಾರದು ಎಂಬ ಷರತ್ತು ಬ್ಯಾಕ್‌ಲಾಗ್ ಹುದ್ದೆಗಳಿಗೆ ಅನ್ವಯಿಸುವುದಿಲ್ಲವೆಂದು ತಿಳಿಯಪಡಿಸಿತು.

ಅನುಚ್ಛೇದ 16(4ಬಿ) ಕೆಳಕಂಡಂತಿದೆ: “ಈ ಅನುಚ್ಛೇದದಲ್ಲಿ ಇರುವ ಯಾವುದೂ, ಒಂದು ವರ್ಷದಲ್ಲಿ, 4ನೇ ಖಂಡದ ಅಥವಾ (4ಎ) ಖಂಡದ ಮೇರೆಗೆ ಮಾಡಿದ ಯಾವುದೇ ಮೀಸಲಾತಿ ಉಪಬಂಧಕ್ಕನುಸಾರವಾಗಿ, ಆ ವರ್ಷದಲ್ಲಿ ಭರ್ತಿ ಮಾಡುವುದಕ್ಕಾಗಿ ಯಾವುದೇ ಹುದ್ದೆಗಳನ್ನು ಮೀಸಲಾಗಿಟ್ಟಿದ್ದು, ಭರ್ತಿ ಮಾಡದೇ ಇರುವ ಆ ಹುದ್ದೆಗಳನ್ನು ಯಾವುದೇ ಮುಂಬರುವ ವರ್ಷದಲ್ಲಿ ಅಥವಾ ವರ್ಷಗಳಲ್ಲಿ ಭರ್ತಿ ಮಾಡಬೇಕಾದ ಪ್ರತ್ಯೇಕ ಹುದ್ದೆಗಳ ವರ್ಗವೆಂದು ಪರಿಗಣಿಸಲು ರಾಜ್ಯವನ್ನು ಪ್ರತಿಬಂಧಿಸತಕ್ಕದಲ್ಲ ಮತ್ತು ಅಂಥ ವರ್ಗದ ಖಾಲಿ ಹುದ್ದೆಗಳನ್ನು, ಯಾವ ವರ್ಷದಲ್ಲಿ ಅವುಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆಯೋ ಆ ವರ್ಷದಲ್ಲಿನ ಹುದ್ದೆಗಳೊಂದಿಗೆ, ಆ ವರ್ಷದ ಒಟ್ಟು ಸಂಖ್ಯೆಯ ಹುದ್ದೆಗಳ ಮೇಲಿನ ಶೇ.50ರ ಮೀಸಲಾತಿಯ ಪರಿಮಿತಿಯನ್ನು ನಿರ್ಧರಿಸುವಾಗ ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ”.

2000ನೇ ಸಾಲಿನಲ್ಲಿ ಸಂವಿಧಾನಕ್ಕೆ 82ನೆಯ ತಿದ್ದುಪಡಿ ತಂದು ಅನುಚ್ಛೇದ 335ಕ್ಕೆ Proviso ಸೇರಿಸಿ ಬಡ್ತಿ ವಿಷಯಗಳಲ್ಲಿ ಅರ್ಹತಾದಾಯಕ ಅಂಶಗಳನ್ನು ಅಥವಾ ಮೌಲ್ಯಮಾಪನದ ಮಾನಕಗಳನ್ನು ಸಡಿಲಿಸಿ ತಗ್ಗಿಸಬಹುದೆಂದು ತಿಳಿಯಪಡಿಸಿದೆ. ಈ Proviso ಹೀಗಿದೆ:

“ಪರಂತು, ಈ ಅನುಚ್ಛೇದದಲ್ಲಿ ಇರುವ ಯಾವುದೂ, ಒಕ್ಕೂಟದ ಅಥವಾ ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆಗಳು ಅಥವಾ ಹುದ್ದೆಗಳ ಯಾವುದೇ ವರ್ಗಕ್ಕೆ ಅಥವಾ ವರ್ಗಗಳಿಗೆ ಬಡ್ತಿ ವಿಷಯಗಳಲ್ಲಿ ಮೀಸಲಾತಿಗಾಗಿ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಅನುಕೂಲವಾಗುವಂತೆ, ಯಾವುದೇ ಪರೀಕ್ಷೆಯಲ್ಲಿ ಅರ್ಹತಾದಾಯಕ ಅಂಕಗಳನ್ನು ಸಡಿಲಿಸಲು ಅಥವಾ ಮೌಲ್ಯಮಾಪನದ ಮಾನದಂಡಗಳನ್ನು ತಗ್ಗಿಸಲು, ಯಾವುದೇ ಉಪಬಂಧ ಮಾಡುವುದನ್ನು ಪ್ರತಿಬಂಧಿಸತಕ್ಕದ್ದಲ್ಲ”.

2000ನೇ ಸಾಲಿನಲ್ಲಿ ಸಂವಿಧಾನಕ್ಕೆ 85ನೇ ತಿದ್ದುಪಡಿ ತಂದು ಅನುಚ್ಛೇದ 16(ಎ)ರಲ್ಲಿ ಮೀಸಲಾತಿಯ ಮುಖಾಂತರ ಬಡ್ತಿ ಪಡೆದವರು ತತ್ಪರಿಣಾಮ ಜೇಷ್ಠತೆಗೆ ಅರ್ಹರಲ್ಲವೆಂಬ ನ್ಯಾಯಾಲಯದ ತೀರ್ಪನ್ನು ಶೂನ್ಯೀಕರಿಸಲಾಗಿದೆ.

4. ಸಂವಿಧಾನದ 77, 81, 82 ಮತ್ತು 85ನೇ ತಿದ್ದುಪಡಿಗಳನ್ನು ಎಂ.ನಾಗರಾಜ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 5 ಜನ ನ್ಯಾಯಮೂರ್ತಿಗಳ ಸಂವಿಧಾನ ಪೀಠ 2006ರಲ್ಲಿ ತೀರ್ಪು ನೀಡಿ ಈ ತಿದ್ದುಪಡಿಗಳು ಊರ್ಜಿತವೆಂದು ಹೇಳಿತು. ಆದರೆ ಕೆಲವು ನಿಬಂಧನೆಗಳನ್ನು ಸೂಚಿಸಿತು. ಅವುಗಳೆಂದರೆ:

1. ಬಡ್ತಿಯಲ್ಲಿ ಮೀಸಲಾತಿ ಕೊಡಲೇಬೇಕೆಂಬ ಕಡ್ಡಾಯ ಸರ್ಕಾರಕ್ಕೆ ಇಲ್ಲ.

2. ಬಡ್ತಿಯಲ್ಲಿ ಮೀಸಲಾತಿಯ ಪ್ರತಿಯೊಂದು ಪ್ರಕರಣದಲ್ಲಿ ಕೊಡಲೇಬೇಕಾದ ಅನಿವಾರ್ಯತೆಯನ್ನು ತೋರಿಸಬೇಕು.

3. ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ ಎಂದು ಖಾತರಿಪಡಿಸಿಕೊಳ್ಳಬೇಕು.

4. ಈ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕದಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು.

5. ಈ ರೀತಿ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವುದರಿಂದ ಆಡಳಿತದ ಕಾರ್ಯಸಾಮರ್ಥ್ಯಕ್ಕೆ ಧಕ್ಕೆ ಆಗಬಾರದು.

6. ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು.

ಒಂಬತ್ತು ನ್ಯಾಯಮೂರ್ತಿಗಳ ಪೀಠದ ಇಂದಿರಾ ಸಹಾನಿ ತೀರ್ಪು ಮತ್ತು ಐವರು ನ್ಯಾಯಮೂರ್ತಿಗಳ ಪೀಠದ ಎಂ.ನಾಗರಾಜ್ ತೀರ್ಪು ಕೆಲವು ವಿಚಾರಗಳಲ್ಲಿ ತದ್ವಿರುದ್ಧವಾಗಿವೆ. ಆದ ಕಾರಣ ಈ ಸಮಸ್ಯೆಯನ್ನು ವಿಶಾಲವಾದ ಪೀಠಕ್ಕೆ ಒಪ್ಪಿಸಬೇಕೆಂದು ಜರ್ನೇಲ್ ಸಿಂಗ್ ಪ್ರಕರಣದಲ್ಲಿ ವಿನಂತಿಸಲಾಯಿತು. 2018ರಲ್ಲಿ ಸರ್ವೋಚ್ಛ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿತು. ಆದರೆ, ಎಂ.ನಾಗರಾಜ್ ಪ್ರಕರಣದಲ್ಲಿ ವಿಧಿಸಿರುವ “ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ ಎಂದು ಖಾತರಿಪಡಿಸಿಕೊಳ್ಳಬೇಕು” ಎಂಬ ನಿಬಂಧನೆಯು ಅನವಶ್ಯಕವೆಂದು ತಿಳಿಸಿದೆ. ಉಳಿದಂತೆ ಬೇರೆ ನಿಬಂಧನೆಗಳು ಮುಂದುವರೆದಿವೆ. ಮುಂದುವರೆದು, ಈ ತೀರ್ಪಿನಲ್ಲಿ ಕೆನೆಪದರ ನೀತಿಯನ್ನು ಪ.ಜಾ. ಮತ್ತು ಪ.ಪಂ.ಗಳಿಗೆ ಅನ್ವಯಿಸಬಹುದು ಎಂದು ತಿಳಿಸಿದೆ.

5. ಕರ್ನಾಟಕ ಸರ್ಕಾರವು 2011ರಲ್ಲಿ ಒಂದು ಕಾಯ್ದೆಯನ್ನು ತಂದು ಪ.ಜಾ, ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿ ಮತ್ತು ತತ್‌ಪರಿಣಾಮವಾಗಿ ಸೇವಾ ಜೇಷ್ಠತೆ ಒದಗಿಸಿತು. 2017ರಲ್ಲಿ ಸರ್ವೋಚ್ಛ ನ್ಯಾಯಾಲಯವು ಪವಿತ್ರ-I ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತಂದ ಕಾಯಿದೆಯನ್ನು ಅಸಿಂಧು ಎಂದು ಘೋಷಿಸಿತು.

6. ಸರ್ವೋಚ್ಛ ನ್ಯಾಯಾಲಯವು ಎಂ.ನಾಗರಾಜ್‌ ಪ್ರಕರಣದಲ್ಲಿ ವಿಧಿಸಿರುವ ನಿಬಂಧನೆಗಳ ಅನುಗುಣವಾಗಿ ಕರ್ನಾಟಕ ಸರ್ಕಾರವು ಕೆ.ರತ್ನಪ್ರಭ ಸಮಿತಿಯನ್ನು ರಚಿಸಿ, ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ವರದಿಯನ್ನು ಪಡೆದು ಅದರಂತೆ ಹೊಸದೊಂದು ಕಾನೂನು ತಂದು 2018ರಲ್ಲಿ ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಒದಗಿಸಿತು. ಈ ಕಾಯಿದೆಯ ಸಿಂಧುತ್ವವನ್ನು ಪವಿತ್ರ-IIರಲ್ಲಿ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ.

7. 2020ರಲ್ಲಿ ಮುಕೇಶ್ ಕುಮಾರ್ ಉತ್ತರಾಖಂಡ್ ಸರಕಾರದ ನಡುವಿನ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಈ ರೀತಿ ಹೇಳಿದೆ: “ಈ ನ್ಯಾಯಾಲಯವು ಈಗಾಗಲೇ ರೂಪಿಸಿರುವ ಕಾನೂನಿನನ್ವಯ ಸರಕಾರಗಳು ಮೀಸಲಾತಿಯನ್ನು ಒದಗಿಸಲೇಬೇಕೆಂಬ ಕಡ್ಡಾಯವಿಲ್ಲ. ಒಬ್ಬ ವ್ಯಕ್ತಿಯು ಬಡ್ತಿಯಲ್ಲಿ ಮೀಸಲಾತಿಯನ್ನು ಆಗ್ರಹಿಸಲು ಅವಕಾಶ ಮಾಡಿಕೊಡುವ ಯಾವುದೂ ಮೂಲಭೂತ ಹಕ್ಕುಗಳಲ್ಲಿ ಇಲ್ಲ. ಆದ್ದರಿಂದ ಸರಕಾರವು ಮೀಸಲಾತಿಯನ್ನು ನೀಡಬೇಕೆಂಬ ಆದೇಶವನ್ನು (ಮ್ಯಾಂಡಮಸ್) ಕೊಡಲು ಸಾಧ್ಯವಿಲ್ಲ”.

ಈ ತೀರ್ಪಿನಿಂದ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವುದು ಸರಕಾರದ ಸಾಂವಿಧಾನಿಕ ಕರ್ತವ್ಯವೆಂಬ ನೀತಿಗಿಂತ ಮೀಸಲಾತಿಯೆಂಬುದು ಸರಕಾರಗಳು ತಮ್ಮ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಕೊಡಬಹುದಾದ ಭಿಕ್ಷೆ ಅಥವಾ ದಾನ ಎಂಬುದಕ್ಕೆ ದಾರಿಮಾಡಿಕೊಟ್ಟಂತೆ.

ಸಂವಿಧಾನದ ಅನುಚ್ಛೇದ 15 ಮತ್ತು ಅನುಚ್ಛೇದ 16ರಲ್ಲಿ ನೀಡಿರುವ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ. ಅನುಚ್ಛೇದ 15 ಮತ್ತು 16ರಲ್ಲಿ ಈ ದೇಶದ ಕೆಳವರ್ಗಗಳಿಗೆ ಒಂದು ಹಕ್ಕನ್ನು ನೀಡಿದೆ. ಈ ಅನುಚ್ಛೇದಗಳಲ್ಲಿ ನೀಡಿರುವ ಮೀಸಲಾತಿ ಸವಲತ್ತನ್ನು ಜಾರಿಗೊಳಿಸಿ ಎಂದು ಕೇಳುವ ಹಕ್ಕು ಪ.ಜಾ., ಪ.ಪಂ, ಮತ್ತು ಹಿಂದುಳಿದ ವರ್ಗಗಳಿಗೆ ಇದೆ. ಹೀಗಾಗಿ ಮೀಸಲಾತಿ ಒಂದು ಹಕ್ಕಲ್ಲ ಎಂಬುದಾಗಿ ಹೇಳಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು, ಆದ್ದರಿಂದ ಸರ್ವೋಚ್ಛ ನ್ಯಾಯಾಲಯ ಈ ತೀರ್ಪನ್ನು ಪುನರ್ ಪರಿಶೀಲಿಸಬೇಕಾಗಿದೆ.

8. ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳ ಪರಿಣಾಮದಿಂದ ಪಾರಾಗಲು ಪ.ಜಾ. ಮತ್ತು ಪ.ಪಂ.ದವರನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಸಂವಿಧಾನಕ್ಕೆ 117ನೇ ತಿದ್ದುಪಡಿಯನ್ನು ಮಂಡಿಸಿತು. 17-12-2012ರಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡಿಯನ್ನು ಪಾಸು ಮಾಡಲಾಯಿತು. ಕಾರಣಾಂತರಗಳಿಂದ ಲೋಕಸಭೆಯಲ್ಲಿ ಇನ್ನೂ ಪಾಸ್ ಮಾಡಿಲ್ಲ. ನಮ್ಮ ಸಂಸದರೂ ಕೂಡಲೇ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸಂವಿಧಾನದ 117ನೇ ತಿದ್ದುಪಡಿ ತರುವುದರ ಮುಖಾಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

9. ಭಾರತದ ಸರ್ವೋಚ್ಛ ನ್ಯಾಯಾಲಯವು ಚೆಬೋಲು ಲೀಲಾ ಪ್ರಸಾದ್‌ ರಾವ್ ಮತ್ತು ಇತರರು ಎಂಬ ಪ್ರಕರಣದಲ್ಲಿ (ಏಪ್ರಿಲ್‌ 2020) ಈ ರೀತಿ ಹೇಳಿದೆ: ಕಳೆದ 70 ವರ್ಷಗಳಿಂದಲೂ ಅಥವಾ ಅನುಸೂಚಿತ ಪಟ್ಟಿಯಲ್ಲಿ ಸೇರ್ಪಡೆಯಾದಾಗಿಂದಲೂ ಕೆಲವು ವರ್ಗಗಳು ಮಾತ್ರ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡು ಮೇಲೆ ಬಂದಿವೆ. ಆದರೆ ಈ ಮೀಸಲಾತಿ ಸೌಲಭ್ಯಗಳು ಅಗತ್ಯವಿರುವವರಿಗೆ ತಲುಪುವಂತಾಗಬೇಕು. ಸೌಲಭ್ಯ ಪಡೆದವರು ದುರಾಕ್ರಮಣ ಮಾಡದ ರೀತಿಯಲ್ಲಿ ಮೀಸಲಾತಿಯ ಶೇಕಡಾವಾರನ್ನು ವ್ಯತ್ಯಾಸಗೊಳಿಸದೆ ಪಟ್ಟಿಯ ಪರಿಷ್ಕರಣೆಯನ್ನು ಮಾಡಬಹುದಾಗಿದೆ.

ಆಂಧ್ರಪ್ರದೇಶ ರಾಜ್ಯ ಸರ್ಕಾರ ಪ.ಜಾತಿಗಳನ್ನು ಎ, ಬಿ, ಸಿ ಮತ್ತು ಡಿ ಎಂಬುದಾಗಿ ವಗೀಕರಿಸಿ ಒಳಮೀಸಲಾತಿಯನ್ನು ಜಾರಿಗೆ ತಂದಿತು. ರಾಜ್ಯ ಸರ್ಕಾರದ ಈ ಕ್ರಮವನ್ನು ಸರ್ವೋಚ್ಛ ನ್ಯಾಯಾಲಯ 2004ರಲ್ಲಿ ಚಿನ್ನಯ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಒದಗಿಸುವ ಅಧಿಕಾರವಿಲ್ಲವೆಂದು ರದ್ದುಗೊಳಿಸಿತು.

2020ರಲ್ಲಿ ಸರ್ವೋಚ್ಛ ನ್ಯಾಯಾಲಯ ದೇವೇಂದ್ರ ಸಿಂಗ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಒದಗಿಸುವ ಅಧಿಕಾರವಿದೆಯೆಂದು ಹೇಳಿತು. ಈ ರೀತಿಯ ಭಿನ್ನ ಅಭಿಪ್ರಾಯಗಳನ್ನು ವಿಸ್ತೃತ 7 ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಈ ವಿಷಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಕಾದು ನೋಡಬೇಕಾಗಿದೆ.

ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದೆಂಬ ನಿಬಂಧನೆಯನ್ನು ಇಂದಿರಾ ಸಹಾನಿ ಪ್ರಕರಣದಲ್ಲಿ ವಿಧಿಸಲಾಯಿತು. ನಿಬಂಧನೆಯನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆಯೆಂದು ಸರ್ವೋಚ್ಛ ನ್ಯಾಯಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ನೀಡಿ ತಮ್ಮ ಅಭಿಪ್ರಾಯಗಳನ್ನು ತಿಳಿಯಪಡಿಸಲು ಸೂಚಿಸಿತು. ಡಾ. ಜಯಶ್ರೀ ಲಕ್ಷ್ಮಣರಾವ್‌ ಪಟೇಲ್‌ ಪ್ರಕರಣದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಮರಾಠಿಗರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸಿತು. ಈ ತೀರ್ಪು ಅನೇಕ ರಾಜ್ಯಗಳ ಮೀಸಲಾತಿ ನೀತಿಯ ಮೇಲೆ ಪರಿಣಾಮ ಬೀರುತ್ತದೆ. ಈ ತೀರ್ಪಿನಲ್ಲಿ Exceptional Circumstances ಎಂದರೆ ಏನು ಎಂದು ಸ್ಪಷ್ಟಪಡಿಸಲಿಲ್ಲ. ಹಿಂದುಳಿದ ವರ್ಗದ ಪಟ್ಟಿಗೆ ಯಾವ ಜಾತಿಗಳನ್ನು ಪಟ್ಟಿಯಿಂದ ತೆಗೆಯಬೇಕೆಂಬ ಅಧಿಕಾರವನ್ನು ರಾಜ್ಯ ಸರ್ಕಾರಗಳಿಂದ ಕಿತ್ತು ಕೇಂದ್ರ ಸರ್ಕಾರಕ್ಕೆ ನೀಡಿದ್ದು ಒಕ್ಕೂಟ ವ್ಯವಸ್ಥೆಗೆ ಮಾರಕವಾದದ್ದು. ಒಮ್ಮೆ ಮೀಸಲಾತಿಯನ್ನು ಮೀರಬಾರದೆಂಬ ನಿಬಂಧನೆಯನ್ನು ಮರು ಪರಿಶೀಲನೆ ಮಾಡಲು ನಿರಾಕರಿಸಿತು.

ಸಂವಿಧಾನಕ್ಕೆ 105ನೇ ತಿದ್ದುಪಡಿ ತರುವುದರ ಮುಖಾಂತರ ಸರ್ವೋಚ್ಛ ನ್ಯಾಯಾಲಯ ಜಯಶ್ರೀ ಲಕ್ಷ್ಮಣರಾವ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಶೂನ್ಯೀಕರಿಸಿ ಹಿಂದುಳಿದ ವರ್ಗಗಳ ಪಟ್ಟಿಯ ವಿಚಾರವನ್ನು ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಬರುತ್ತೆಂದು ತಿಳಿಯಪಡಿಸಿತು.

ನಮ್ಮ ದೇಶದಲ್ಲಿ ಮೀಸಲಾತಿ ಸಿದ್ಧಾಂತಕ್ಕೆ ಮತ್ತು ಮೀಸಲಾತಿ ಅನುಷ್ಠಾನಕ್ಕೆ ನೂರು ವರ್ಷಕ್ಕೂ ಮೀರಿದ ಚರಿತ್ರೆಯಿದೆ. ಭಾರತದಲ್ಲಿ ಮೀಸಲಾತಿ ಕಾರ್ಯಯೋಜನೆಯ ಅನುಷ್ಠಾನವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಮೀಸಲಾತಿಯ ವಿವಿಧ ಅಂಶಗಳಿಂದ ನಮಗೆ ಅನ್ಯಾಯವಾಗಿದೆ ಎಂದು ಮೀಸಲಾತಿ ವ್ಯಾಪ್ತಿಯಿಂದ ಹೊರಗಿರುವ ಜನರು ನ್ಯಾಯಾಲಯಗಳ ಮೆಟ್ಟಿಲು ಏರುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮೀಸಲಾತಿ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿವೆ.

1951ರಿಂದಲೂ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ಹಾಗೂ ಅದರಿಂದಾಗಿ ಬದಲಾವಣೆಗಳು ಕಾಣುತ್ತಾ ಬಂದಿವೆ. ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಾವು ಪ್ರಶ್ನೆ ಮಾಡಲು ಬರುವುದಿಲ್ಲ. ಆದರೆ ನ್ಯಾಯಾಲಯಗಳು ಮೀಸಲಾತಿ ಬಗ್ಗೆ ನೀಡಿರುವ ತೀರ್ಪುಗಳನ್ನು ವಿಮರ್ಶಿಸುವ ಹಕ್ಕು ನಾಗರಿಕರಿಗಿದೆ. ನ್ಯಾಯಾಲಯಗಳ ಬಹಳಷ್ಟು ತೀರ್ಪುಗಳು ಮೀಸಲಾತಿ ಕುರಿತಂತೆ ಪ್ರೋತ್ಸಾಹದಾಯಕವಾಗಿಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು