October 1, 2023 6:59 am

ಬಾಳೆಯ ಹಣ್ಣೋ ಮೊಟ್ಟೆಯೋ? ಆಯ್ಕೆಗೆ ಮಾನದಂಡಗಳೇನು? ಆಯ್ಕೆ ಮಾಡಬೇಕಾದವರು ಯಾರು?

Mahalingappa Alabal

ಮಹಾಲಿಂಗಪ್ಪ ಆಲಬಾಳ ಅವರು ಬಿಡಬ್ಲೂಎಸ್ ಪದವೀಧರರು. ವಿದ್ಯಾರ್ಥಿ, ಭೂಮಿ, ವಸತಿ, ದಲಿತ ಹಕ್ಕುಗಳ ಪರವಾಗಿ ಸುಮಾರು 2 ದಶಕಗಳಿಂದ ಹೋರಾಟ ನಡೆಸಿದ್ದಾರೆ. ಗದಗಿನ ಲಡಾಯಿ, ಬೆಂಗಳೂರಿನ ಗೌರಿ ಲಂಕೇಶ್, ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದಿರುವ ಇವರು ಅನೇಕ ಅಕ್ರಮಗಳನ್ನು ರಾಜಿರಹಿತವಾಗಿ ಬಯಲು ಮಾಡಿದವರು. ಅಂಬೇಡ್ಕರ್ ಚಿಂತನೆಗಳಿಂದ ಆಳವಾಗಿ ಪ್ರಭಾವಿತವಾಗಿರುವ ಇವರು ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕರಾಗಿ, ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಕರ್ನಾಟಕ ರಾಜ್ಯ ಸರಕಾರ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಕಡಿಮೆಗೊಳಿಸುವ ಸಲುವಾಗಿ ಶಾಲೆಯ ಮಕ್ಕಳಿಗೆ ಬಿಸಿ ಉಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ಮುಂದುವರೆಸಿದೆ. ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರಗಳು ಇದನ್ನು ಆರಂಭಿಸಿದ್ದವು. ಕೊರೋನಾ ನಂತರ ಆರಂಭವಾದ ಶಾಲೆಗಳಲ್ಲಿ ಬಿಸಿ ಊಟದೊಂದಿಗೆ ಈ ಯೋಜನೆಯನ್ನು ಈಗ ಮತ್ತೆ ಮುಂದುವರೆಸಲಾಗುತ್ತಿದೆ.

ಆದರೆ ನಾಡಿನ ಪ್ರಮುಖ ಮಠಾಧೀಶರೊಬ್ಬರು ಕೆಲ ಸಂಘಟನೆಗಳ ನೇತೃತ್ವದಲ್ಲಿ ಈ ಯೋಜನೆಯನ್ನು ಮುಂದುವರೆಸಬಾರದೆಂದು ಪ್ರತಿಭಟನೆ ನಡೆಸಿದ್ದಾರೆ. ಇದು ನಾಡಿನಾದ್ಯಂತ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಸರಕಾರ ಈಗಾಗಲೇ ಸ್ಪಷ್ಟಪಡಿಸಿದಂತೆ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿದೆ. ಇಲ್ಲಿ ತಿನ್ನುವ ಅಥವಾ ತಿನ್ನದೇ ಇರುವ ಆಯ್ಕೆಯನ್ನು ಮಕ್ಕಳಿಗೆ ಬಿಡಲಾಗಿದೆ. ಆದರೆ ಸ್ವಾಮಿಜಿಯವರ ಪ್ರಕಾರ ಶಾಲೆಯಲ್ಲಿ ಯಾವ ಮಕ್ಕಳಿಗೂ ಮೊಟ್ಟೆಯನ್ನು ನೀಡಬಾರದು. ಇದಕ್ಕೂ ಕೆಲದಿನಗಳ ಮುಂಚೆ ಹಂಸಲೇಖ ಅವರು ಅವರು ಪೇಜಾವರ ಸ್ವಾಮಿಜಿಗಳೂ ಸೇರಿದಂತೆ ಹಲವರು ದಲಿತರ ಕೇರಿಗಳಿಗೆ ಭೇಟಿ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದರ ಕುರಿತು ಮಾತನಾಡಿ ಅದರಿಂದಾದ ಪ್ರಯೋಜನದ ಬಗ್ಗೆ ಪ್ರಶ್ನಿಸಿದ್ದರು. ಅವರ ಆಹಾರವನ್ನು ಪೇಜಾವರ ಶ್ರೀಗಳು ಸ್ವೀಕರಿಸಲು ಸಾಧ್ಯವೇ? ಎಂದು ಕೇಳಿದ್ದರು. ಇದನ್ನು ಕೆಲವು ಮತೀಯವಾದಿಗಳು ಪೆಜಾವರ ಶ್ರೀಗಳಿಗೆ ಮಾಡಿದ ಅವಮಾನ ಎಂದು ಹುಯಿಲು ಎಬ್ಬಿಸಿ ವಿವಾದವನ್ನು ಸೃಷ್ಟಿಸಿ ಹಂಸಲೇಖ ಅವರು ಕ್ಷಮೆ ಕೇಳುವಂತೆ ಮಾಡಿದ್ದರು. ಈ ಮತೀಯವಾದಿಗಳ ನಡೆಯನ್ನು ವಿರೋಧಿಸಿ ಜನಪರರು ಹಂಸಲೇಖ ಪರ ಪ್ರತಿಭಟನೆ ಹಾಗೂ ಆಹಾರ ಹಕ್ಕಿನ ಅಭಿಯಾನವನ್ನೇ ನಡೆಸಿದ್ದರು. ಇದು ರಾಜ್ಯಾದ್ಯಂತ ಚರ್ಚೆ ಮುಂದುವರೆದು ಎಲ್ಲ ಸಮೂದಾಯ, ವರ್ಗದ ಜನ ಬೇರ ಬೇರೆ ಸಮುದಾಯಗಳ ಅವರವರ ಆಹಾರದ ಹಕ್ಕಿನ ಪರ ಮಾತನಾಡಲಾರಂಭಿಸಿದ್ದರು. ಮತ್ತು ಆಹಾರದಲ್ಲಿ ಶ್ರೇಷ್ಠ-ಕನಿಷ್ಠ ಎಂಬ ಅನಿಷ್ಟ ತಾರತಮ್ಯದ ವಿರುದ್ಧ ಒಂದು ನಿರ್ಣಾಯಕ ಜನಾಭಿಪ್ರಾಯ ರೂಪಗೊಳ್ಳತೊಡಗಿತ್ತು. ಅದೇ ಸಂದರ್ಭದಲ್ಲೇ ಲಿಂಗಾಯತ ಮಠಾಧೀಶರೊಬ್ಬರು ಬೀದರ್ ನಲ್ಲಿ ಮಕ್ಕಳಿಗೆ ಬಿಸಿ ಊಟದಲ್ಲಿ ಮೊಟ್ಟೆ ನೀಡುವುದರ ವಿರುದ್ಧ ಕೆಲ ತಮ್ಮದೇ ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಬಿದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪೇಜಾವರ ಶ್ರೀಗಳ ಮಠದ ಅಂಗಳದಲ್ಲಿದ್ದ ಆಹಾರದ ಕುರಿತ ಚೆಂಡು ಈಗ ಶೂದ್ರ ಲಿಂಗಾಯತರ ಮಠದ ಅಂಗಳಕ್ಕೆ ಬಂದಂತಾಗಿದೆ. ಈ ವಿಷಯದಲ್ಲಿ ಈ ಸ್ವಾಮೀಜಿಯ ವಿರುದ್ಧ ತೀವ್ರವಾದ ಜನವಿರೋಧ ಆರಂಭವಾಗಿದೆ.

ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ ಎದ್ದಿರೋದು ಪೇಜಾವರ ಶ್ರೀಗಳನ್ನು ಕೇಂದ್ರವಾಗಿಟ್ಟು ಮಾಂಸಾಹಾರದ ಪರ – ವಿರೋಧ ಅಭಿಪ್ರಾಯ ರೂಪಿಸುವ ಕೆಲಸ ವೇಗಪಡೆದುಕೊಂಡಿದ್ದ ಸಮಯದಲ್ಲೇ ಯಾಕೆ ಈ ಸ್ವಾಮಿಜಿ ಮೊಟ್ಟೆ ನೀಡುವುದರ ವಿರುದ್ದ ಮಾತನಾಡಿದರು ಎನ್ನುವುದು? ಏಕೆಂದರೆ ಲಿಂಗಾಯತರಲ್ಲೇ ಕೆಲ ಸಮುದಾಯಗಳನ್ನು ಹೊರತುಪಡಿಸಿದರೆ ಮಾಂಸಾಹಾರ ಸೇವಿಸುವ ಸಮುದಾಯಗಳೆ ಹೆಚ್ಚಿನವು. ಶರಣರು ಆಹಾರದ ಕುರಿತು ಎಲ್ಲೂ ಭೇದ ಮಾಡಿದ ಉದಾಹರಣೆಗಳಿಲ್ಲ. ಜೊತೆಗೆ ಹಲವು ಶರಣರು ಮಾಂಸಾಹಾರವೂ ಸಸ್ಯಾಹಾರದಂತೆಯೇ ಆಹಾರ. ಯಾವುದೂ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ ಎಂದೇ ಸಾರಿ ಈ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ. ಆದರೂ ಈ ಸ್ವಾಮಿಜಿಗಳು ಅನವಶ್ಯಕವಾಗಿ ಈಗ ವಿವಾದದ ಕೇಂದ್ರಕ್ಕೆ ಬಂದು ನಿಂತಿದ್ದಾರೆ.

ಕಾರಣವೆನೆಂದರೆ ಬ್ರಾಹ್ಮಣ್ಯದ ಶ್ರೇಷ್ಠತೆ ಕೇವಲ ಬ್ರಾಹ್ಮರಿಗೆ ಮಾತ್ರ ಸಿಮಿತವಾಗಿರದೇ ಅದನ್ನು ಹೊತ್ತು ಮೆರೆಯುತ್ತಿರುವವರಲ್ಲಿ ಈ ಮಧ್ಯಮ ಶೂದ್ರ ಸಮುದಾಯಗಳೆ ಮುಂಚೂಣಿಯಲ್ಲಿರುವುದು. ವಿಚಿತ್ರವೆಂದರೆ ಚರಿತ್ರೆಯಲ್ಲಿ ಬ್ರಾಹ್ಮಣ್ಯದ ಕಾರಣಕ್ಕಾಗಿ ತಮ್ಮದೆಲ್ಲವನ್ನು ಕಳೆದುಕೊಂಡು ಗುಲಾಮರಾಗಿ ಸಾವಿರಾರು ವರ್ಷ ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದು ಇದೇ ಸಮುದಾಯಗಳು. ಒಂದು ಕಾಲಕ್ಕೆ ಕೃಷಿ ಮಾಡುತ್ತ, ಬೆರಗುಗೊಳಿಸುವಂತಹ ನಗರಗಳನ್ನು ಕಟ್ಟಿಕೊಂಡು, ಮಾನವ ವಿಕಾಸಕ್ಕೆ ಅಗತ್ಯವಾದ ಕಂಬಾರಿಕೆ, ಕುಂಬಾರಿಕೆ, ಎಣ್ಣೆ ತೆಗೆಯುವಿಕೆ, ನಗರ, ರಸ್ತೆಗಳ ನಿರ್ಮಾಣ, ಹಡಗು ಕಟ್ಟಿಕೊಂಡು ವಿದೇಶಗಳೊಂದಿಗೆ ವ್ಯಾಪಾರ, ಸಂಸ್ಕೃತಿ, ಕಲೆ ಹೀಗೇ ಎಲ್ಲದರಲ್ಲೂ ಜಗತ್ತಿನ ಇತರರಿಗಿಂತ ಮುಂದೆ ಇದ್ದ ಈ ಸಮುದಾಯಗಳು ವಲಸೆ ಆರ್ಯರ ಮುಂದೆ ಸೆಣಸಲಾರದೇ ಮುಗ್ಗರಿಸಿ ಗುಲಾಮರಾದದ್ದು ಈ ದೇಶದ ಮೂರು ಸಾವಿರ ವರ್ಷಗಳ ಚರಿತ್ರೆಯ ದಿಕ್ಕನ್ನೆ ಬದಲಿಸಿತು. ಅದನ್ನು ಮರು ನಿರ್ಮಿಸಲು ಚಾರ್ವಾಕರು, ಲೋಕಾಯತರು, ಆಜೀವಕರು, ಬೌದ್ಧರು ನಡೆಸಿದ ಪ್ರಯತ್ನದ ಫಲ ಕುತಂತ್ರ ಮತ್ತು ಭೀಕರ ಹತ್ಯಾಕಾಂಡದ ಮೂಲಕ ಮತ್ತೆ ಮೂಲ ನಿವಾಸಿಗಳಾದ ಈ ಶೂದ್ರರ ಕೈ ತಪ್ಪುವಂತೆ ಮಾಡಲಾಯಿತು. ಈ ಅನ್ಯಾಯದ ವಿರುದ್ಧವೇ ಶರಣರು ಬಂಡೆದ್ದು ಲಿಂಗಾಯತ ತತ್ವವನ್ನು ಹುಟ್ಟುಹಾಕಿದರು. ಜ್ಯೋತಿಬಾ, ಸಾವಿತ್ರಿಬಾ ಫುಲೆ ಅದೇ ದಾರಿಯಲ್ಲಿ ಮುಂದುವರೆದು ಅಂಬೇಡ್ಕರ್ ತಮ್ಮ ಜೀವಿತದುದ್ದಕ್ಕೂ ಮುಂದುವರೆಸಿ ಸಂವಿಧಾನದ ಮೂಲಕ ಅಕ್ಕೊಂದು ನಿರ್ಣಾಯಕ ಚೌಕಟ್ಟನ್ನು ಒದಗಿಸಿದರು. ಒಂದು ಕಾಲಕ್ಕೆ ದನದ ಮಾಂಸವನ್ನೇ ಪ್ರಮುಖ ಆಹಾರವಾಗಿ ಸೇವಿಸುತ್ತಿದ್ದ, ಯಜ್ಞ ಯಾಗಗಳಲ್ಲಿ ಯಥೇಚ್ಛವಾಗಿ ಪ್ರಾಣಿ ಬಲಿ ನೀಡುತ್ತಿದ್ದ ಸಮುದಾಯ ಆಗ ಅದನ್ನು ತಮ್ಮ ಶ್ರೇಷ್ಠ ಆಹಾರವಂದೇ ಸಾರಿತ್ತು. ಮತ್ತು ಅದನ್ನು ತಮ್ಮ ದೇವಾದಿದೇವತೆಗಳಿಗೆ ಯಜ್ಞ ಯಾಗಗಳಲ್ಲಿ ಅರ್ಪಿಸಲಾಗುತ್ತಿತ್ತು. ಬುದ್ಧನ ಕಾಲದಲ್ಲಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಸಸ್ಯಾಹಾರಿಗಳಾಗಿ ಈಗ ಅದನ್ನು ಶ್ರೇಷ್ಠ ಎನ್ನುತ್ತಿದ್ದಾರೆ. ಬೇರೆಯವರು ತಿನ್ನುವ ಮಾಂಸಾಹಾರವನ್ನು ಕನಿಷ್ಠ ಎನ್ನುತ್ತಿದ್ದಾರೆ. ಒಟ್ಟಾರೆ ಅವರು, ಅವರ ಸಂಸ್ಕೃತಿ, ಅವರ ಆಹಾರ ಶ್ರೇಷ್ಠ ಇನ್ನುಳಿದವರು, ಅವರ ಸಂಸ್ಕೃತಿ, ಆಹಾರ ಕನಿಷ್ಠ ಎಂದು ಅವರು ನಂಬಿದ್ದಾರೆ ಮತ್ತು ಅದನ್ನು ಎಲ್ಲರೂ ನಂಬಲೇಬೇಕೆಂದು ಅವರು ಬಯಸುತ್ತಾರೆ. ಆದರೆ ಈ ಲಿಂಗಾಯತ ಸ್ವಾಮಿಜಿಗಳ ಸಮಸ್ಯೆ ಏನು?

ವಾಸ್ತವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನವನ್ನು ಹುಟ್ಟುಹಾಕಿದ್ದು ಬ್ರಾಹ್ಮಣ ಸಮುದಾಯವೇ ಆಗಿದ್ದರು ಅದರ ಪಾಲನೇ ಪೋಷಣೆ ಮಾಡುತ್ತ ಅದನ್ನು ಸಾಧ್ಯವಾದಷ್ಟು ಕಠೋರವಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದು ಮಧ್ಯಮ ಜಾತಿಯ ಶೂದ್ರರು. ಅಂದರೆ ರಾಜ್ಯದ ಮಟ್ಟಿಗೆ ಲಿಂಗಾಯತರು ಮತ್ತು ಒಕ್ಕಲಿಗರ ಸಮೀಪದ ಜಾತಿಗಳು; ಹೀಗಾಗಿ ಇವರಲ್ಲಿ ಬಹುಪಾಲು ಜನ ಈಗಲೂ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ದೈವದತ್ತವೆಂದೇ ಭಾವಿಸಿದ್ದಾರೆ. ಮತ್ತು ತಮಗೂ ದೈವದತ್ತವಾಗಿ ಶ್ರೇಷ್ಠತೆ ಲಭಿಸಿದೆ ಎಂದೇ ಭಾವಿಸುತ್ತಾರೆ. ಆದರೆ ಆ ಶ್ರೇಷ್ಠತೆ ತಮಗಿಂತ ಕೆಳಗಿನವರ ಮೇಲೆ ಯಜಮಾನಿಕೆ ನಡೆಸಲು ಮಾತ್ರ ಎಂಬುದನ್ನೂ ಕೂಡ ಅರಿತವರಾಗಿರುತ್ತಾರೆ. ತಮಗಿಂತ ಮೇಲಿನವರು ತಮ್ಮನ್ನು ಕನಿಷ್ಠವಾಗಿ ಕಾಣುವಾಗ ಕುಗ್ಗಿಹೋಗುವ ಇವರು ಅದನ್ನೇ ಕೆಳಗಿನವರಿಗೆ ಅನ್ವಯಿಸುವಾಗ ಹಿಗ್ಗಿ ಹೋಗುತ್ತಾರೆ ಮತ್ತು ತಮ್ಮ ಶ್ರೇಷ್ಠತೆಯನ್ನು ಎತ್ತಿತೋರಲು ಹವಣಿಸುತ್ತಾರೆ. ಶೂದ್ರರಾಗಿರುವ ಈ ಲಿಂಗಾಯತ ಮಠಾಧೀಶರೂ ಕೂಡ ಮೊಟ್ಟೆಯನ್ನು ತಾವು ಸೇವಿಸುವುದಿಲ್ಲ ಎಂಬುದನ್ನೇ ಶ್ರೇಷ್ಠ ಎಂದು ಭಾವಿಸಿ ಅದನ್ನು ಬೇರೆಯವರ ಮೇಲೆ ಹೇರಲು ಹೊರಟಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೆಕೆಂದು ಬಯಸುತ್ತಾರೆ. ಅದೇ ಸಂದರ್ಭದಲ್ಲಿ ಈ ದೇಶದ ಬಹುಪಾಲು ಜನರು ಮಾಂಸಾಹಾರ ಸ್ವೀಕರಿಸುತ್ತಾರೆ. ಶುದ್ಧ ಸಸ್ಯಾಹಾರಿಗಳು ಅಲ್ಪ ಸಂಖ್ಯೆಯಲ್ಲಿದ್ದಾರೆ. ತಾನು ಆಡುವ ಮಾತು ಬಹು ಸಂಖ್ಯಾತರ ಆಹಾರಕ್ರಮವನ್ನು ಹಿಯಾಳಿಸಿದಂತಾಗುತ್ತದೆ. ಇದು ಲಿಂಗಾಯತ ಮೂಲ ತತ್ವಕ್ಕೇ ವಿರುದ್ಧವಾಗುತ್ತದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಇವರೆಂದೂ ಸಸ್ಯಾಹಾರಿಗಳಷ್ಟೇ ತಮ್ಮ ಮಠಕ್ಕೆ ಬರಬೇಕೆಂದು ಹೇಳುವುದಿಲ್ಲ. ಹಾಗೆ ಹೇಳಿದರೆ ಅದರಿಂದ ಆಗುವ ಪರಿಣಾಮದ ಅರಿವು ಇರುತ್ತದೆ. ಒಟ್ಟಾರೆಯಾಗಿ ಲಿಂಗಾಯತ ಹೆಸರು ಬ್ರಾಹ್ಮಣ್ಯದ ಗುಲಾಮಗಿರಿ ಎರಡನ್ನು ಒಟ್ಟೊಟ್ಟಿಗೆ ನಿಭಾಯಿಸಿಕೊಂಡು ಹೋಗುಲು ಪ್ರಯತ್ನಿಸುತ್ತಾರೆ. ಅವೆರಡೂ ವಿರುದ್ಧ ದಿಕ್ಕಿನಲ್ಲಿ ನಿಂತು ಒಂದರ ವಿರುದ್ಧ ಒಂದು ಸೆಣಸಾಟ ನಡೆಸಿ ಬೆಳೆದು ಬಂದಿವೆ ಎಂಬುದರ ಅರಿವು ಇವರಲ್ಲಿ ಮೂಡಬೇಕಾಗಿದೆ. ಜನ ಜಾಗೃತರಾಗಿ ಒಂದೇ ಆಯ್ಕೆಯನ್ನು ಇವರ ಮುಂದೆ ಇಡಬೇಕಾಗಿದೆ.

  • ಮಹಾಲಿಂಗಪ್ಪ ಆಲಬಾಳ, ಸಾಂಸ್ಕೃತಿಕ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು