March 25, 2023 4:32 pm

ಮನುಸ್ಮೃತಿಯಲ್ಲಿರುವ ಕೆಲವು ಸುಳ್ಳುಗಳು: ಭಾಗ 2

Dr. Pradeep Malgudi

ಕನ್ನಡ ಸ್ನಾತಕೋತ್ತರ ಪದವೀಧರರಾದ ಡಾ. ಪ್ರದೀಪ್ ಮಾಲ್ಗುಡಿಯವರು ಬೆಂಗಳೂರಿನಲ್ಲಿ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಎಂ.ಫಿಲ್, ಪಿಎಚ್.ಡಿ., ಪದವಿಗಳನ್ನು ಕನ್ನಡ ವಿವಿಯಿಂದ ಪಡೆದಿದ್ದಾರೆ. ಅನಂತರ ಮೈಸೂರಿನ ಕನ್ನಡ ಜನಮನ, ರಾಜ್ಯಧರ್ಮ ಪತ್ರಿಕೆಗಳ ಸಂಪಾದಕೀಯ ಪುಟ ನಿರ್ವಹಣೆ, ಸುದ್ದಿ ಟಿವಿಯಲ್ಲಿ ಇನ್ ಪುಟ್ ಮುಖ್ಯಸ್ಥ, ಡೆಮಾಕ್ರಟಿಕ್ ಟಿವಿಯಲ್ಲಿ ಕಾರ್ಯನಿರ್ವಹಾಕ ಸಂಪಾದಕ ಮತ್ತು ಜನಸಂಸ್ಕೃತಿ ಮಾಸಿಕ ಹಾಗೂ ಮಾಲ್ಗುಡಿ ಎಕ್ಸ್ ಪ್ರೆಸ್ ವೆಬ್ ತಾಣದ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

“ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು” (ಅ- 4:80) ಎಂದು ಮನು ಶಾಸ್ತ್ರದ ಮೂಲಕ ಮನು ವಿಧಿಸಿದ್ದಾನೆ. ಇಲ್ಲಿರುವುದು ಅಸಮಾನತೆಯನ್ನು ಶೂದ್ರರ ಮೇಲೆ ಹೇರುವ ಹುನ್ನಾರ. ಅಕ್ಷರ ನಿರಾಕರಣೆ ದೇಶದ ಮೊದಲ ಅಸಮಾನತೆಯ ಮೆಟ್ಟಿಲು. ಶಿಕ್ಷಣ ಮನುಷ್ಯರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಆಲೋಚನೆಯನ್ನು ಶಿಕ್ಷಣ ಮತ್ತು ಅಕ್ಷರ ಜ್ಞಾನ ನಿಯಂತ್ರಿಸುತ್ತದೆ. ಶಿಕ್ಷಣ ಪಡೆದ ವ್ಯಕ್ತಿ ಪೊರೆ ಕಳಚಿದ ಹಾವಿನಂತೆ ಹೊಳಪು ಪಡೆಯುತ್ತಾನೆ. ಶಿಕ್ಷಣ ಸರಿ, ತಪ್ಪು ವಿವೇಚನೆ ಕಲಿಸುತ್ತದೆ. ತನ್ನ ಮೇಲೆ ಯಾರು ಶೋಷಣೆ ಮಾಡಿದ್ದಾರೆ, ಯಾಕೆ ಶೋಷಣೆ ಮಾಡಿದ್ದಾರೆ, ಹೇಗೆ ಶೋಷಣೆ ಮಾಡಿದ್ದಾರೆ, ಎಷ್ಟು ವರ್ಷಗಳಿಂದ ಶೋಷಣೆ ಮಾಡಿದ್ದಾರೆ, ಯಾವೆಲ್ಲ ಮಾದರಿಯಲ್ಲಿ ಯಾವೆಲ್ಲ ಹುನ್ನಾರಗಳ ಮೂಲಕ ತನ್ನನ್ನು ಶೋಷಣೆ ಮಾಡಲಾಗಿದೆ ಎಂದು ಅರಿಯುತ್ತದೆ. ಈ ಅರಿವು ಮೊದಲು ತನ್ನನ್ನು ಪ್ರಶ್ನಿಸಿಕೊಳ್ಳುವಂತೆ ಮುಂದುವರೆದು ತನ್ನ ಕುಟುಂಬ, ಸಮಾಜ, ಇಡೀ ಶೋಷಣೆಯ ಸಮೂಹವನ್ನೇ ಪ್ರಶ್ನಿಸುವ ಮಟ್ಟಕ್ಕೆ ವಿಸ್ತರಿಸುತ್ತದೆ. ಇಂತಹ ಪ್ರಜ್ಞೆಯನ್ನು ಶೂದ್ರರಿಂದ ಮರೆಮಾಚುವ ಉದ್ದೇಶ ಮನುಸ್ಮೃತಿಯಲ್ಲಿದೆ. ಪ್ರಶ್ನಿಸುವಷ್ಟು ಬುದ್ಧಿಮತ್ತೆಯೇ ಬೆಳೆಯದಂತೆ ಸಮಸ್ತ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ವಂಚಿಸುವುದನ್ನು ಮನುಧರ್ಮ ಶಾಸ್ತ್ರದ ಮೂಲಕ ನೆರವೇರಿಸಲು ಯತ್ನಿಸಲಾಗಿದೆ. ಶಿಕ್ಷಣ ಬಹು ಆಯಾಮವುಳ್ಳ ಆಯುಧ. ಶಿಕ್ಷಣ ಅರಿವು ನೀಡುವಷ್ಟಕ್ಕೇ ಸೀಮಿತವಲ್ಲ. ಜ್ಞಾನ ಪಡೆದ ವ್ಯಕ್ತಿ ಪ್ರಶ್ನಿಸುವುದರ ಜೊತೆಗೆ ವಿವೇಚನೆಯನ್ನು ಕಲಿಯುತ್ತಾನೆ. ಉದ್ಯೋಗ ಹಿಡಿಯುತ್ತಾನೆ. ತನ್ನ ಕುಟುಂಬದವರನ್ನು ಶೋಷಣೆಯಿಂದ ಮೇಲೆತ್ತುತ್ತಾನೆ. ಉದ್ಯೋಗ ಹಿಡಿದರೆ ಅಂತಹವರು ಆರ್ಥಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ಹೊರಬರುತ್ತಾರೆ. ಹೀಗೆ ಹೊರಬಂದವರು ಯಥಾಸ್ಥಿತಿವಾದವನ್ನು ಒಪ್ಪುವುದಿಲ್ಲ. ಗುಲಮಾರು ಸಿಗುವುದಿಲ್ಲ. ಇದೇ ಕಾರಣಕ್ಕೆ ಸಮಸ್ತ ಶೂದ್ರ ಸಮುದಾಯಕ್ಕೆ ಶಿಕ್ಷಣವನ್ನು ನಿರಕಾರಿಸುವ ಅಮಾನವೀಯ ನಡೆಯನ್ನು ಶಾಸ್ತ್ರದ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ಜೊತೆಗೆ ಶೂದ್ರರಿಗೆ ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು ಎಂದು ಕೂಡ ವಿಧಿಸಲಾಗಿದೆ ಹಾಗೂ ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು ಎಂದು ಮನುಧರ್ಮಶಾಸ್ತ್ರ ಶಾಸನ ವಿಧಿಸಿದ ಎಚ್ಚರಿಕೆಯನ್ನು ನೀಡಿದೆ. ಒಟ್ಟಿನಲ್ಲಿ ಶೂದ್ರರು ಬೋಧನೆ, ಧರ್ಮ, ಯಜ್ಞ, ಯಾಗ ಸಂಬಂಧಿ ಒಡೆತನವನ್ನು ಸಮಗ್ರವಾಗಿ ನಿರಾಕರಿಸಲಾಗಿದೆ. ಇದು ಭಾರತೀಯರು ಭಾರತೀಯರನ್ನೇ ನಡೆಸಿಕೊಂಡಿರುವ ಒಂದು ಉದಾಹರಣೆ ಮಾತ್ರ. ಇಂತಹ ಸಾವಿರಾರು ಅಸಮಾನತೆಯ ಉದಾಹರಣೆಗಳು ಇತಿಹಾಸದುದ್ದಕ್ಕು ದಾಖಲಾಗಿವೆ.

“ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ” (ಅ- 4:165) ಎಂಬ ಶಾಪವನ್ನು ಕೊಡಲಾಗಿದೆ. ಇಲ್ಲಿ ಒಂದು ಸಮುದಾಯಕ್ಕೆ ರಕ್ಷಣೆಯನ್ನು ಮತ್ತೊಂದು ಸಮುದಾಯಕ್ಕೆ ಪಾಪಭೀತಿಯನ್ನು ತುಂಬುವ ಯತ್ನವನ್ನು ಮಾಡಲಾಗಿದೆ. ಮೊದಲೇ ಶೂದ್ರರಿಗೆ ಅಕ್ಷರ ನಿರಾಕರಿಸಿ ಪಾಪದ ಭೀತಿಯಲ್ಲಿ ನರಳುವಂತೆ ನಿರ್ದೇಶಿಸಲಾಗಿದೆ. ಸ್ವರ್ಗ, ನರಕಗಳ ಕತೆಗಳನ್ನು ಕಟ್ಟಿ ಅವರನ್ನು ಬಂಧಿಸಿಡಲಾಗಿದೆ. ಅನಂತರ ಬ್ರಾಹ್ಮಣರನ್ನು ವಧಿಸಲು ಮುಂದಾದರೆ ತಾಮಿಸ್ರ ನರಕದಲ್ಲಿ ಬೀಳುತ್ತಾರೆ ಎಂದು ಹೇಳಲಾಗಿದೆ. ತಾಮಿಸ್ರ ಎಂಬುದು ಇಪ್ಪತ್ತೊಂದು ನರಕಗಳ ಪೈಕಿ ಒಂದು. ಇದು ಗಾಢಾಂಧಕಾರ ಹೊಂದಿರುವ ನರಕವೆಂದು ಭಾರತೀಯ ಧಾರ್ಮಿಕ ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಜನರಿಗೆ ನಂಬಿಸಿ ಬ್ರಾಹ್ಮಣರಿಗೆ ರಕ್ಷಣೆಯನ್ನೂ ಉಳಿದವರಿಗೆ ಮೂಢನಂಬಿಕೆಯನ್ನು ಬಿತ್ತಲಾಗಿದೆ.

“ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ” (ಅ-4:166) ಎಂದು ಮನುಸ್ಮೃತಿಯಲ್ಲಿ ಬ್ರಾಹ್ಮಣರಿಗೆ ರಕ್ಷಣೆಯನ್ನು ನೀಡಲಾಗಿದೆ. ಇಲ್ಲಿ ಉದ್ದೇಶಪೂರ್ವಕವಾಗಿ ಯಾರೂ ಯಾರನ್ನೂ ಹೊಡೆಯಬಾರದು ಎಂಬುದನ್ನು ಒಪ್ಪಬಹುದಾದರೂ ಇದೇ ಮಾನದಂಡ ಎಲ್ಲ ಜಾತಿಯವರಿಗೂ ಅನ್ವಯವಾಗಬೇಕಲ್ಲವೇ? ಆದರೆ, ಇಲ್ಲಿ ಬೇಕು ಬೇಕೆಂದೇ ಯಾರಾದರೂ ಕೋಪಗೊಂಡ ಬ್ರಾಹ್ಮಣನಿಗೆ ಹೊಡೆಯದಂತೆ ನಿಷೇಧ ಹೇರಲಾಗಿದೆ. ಇದು ಅಸಮಾನತೆಯ ಮೂಲವಲ್ಲವೇ?

ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ ಯಾಗಗಳಲ್ಲಿ, ಶಾಸ್ತ್ರಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ ಅವುಗಳ ಮಾಂಸದಿಂದ ಪುರೋಡಾಶನವನ್ನು (ಹವಿಸ್ಸನ್ನು) ಮಾಡಿದ್ದರು (ಅ-5:23) ಎಂದು ಇದೇ ಮನುಸ್ಮೃತಿಯಲ್ಲಿ ಉಲ್ಲೇಖಿಸಲಾಗಿದೆ. ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಮಾತ್ರ ಯಜ್ಞ ಮಾಡುವ ಅವಕಾಶವಿರುವುದನ್ನು ಗಮನಿಸಿ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ ಪೈಕಿ ಮೇಲಿನ ಎರಡು ವರ್ಣಗಳಿಗೆ ಮಾತ್ರ ಯಜ್ಞ ಮಾಡುವ ಅವಕಾಶ ನೀಡಲಾಗಿದೆ. ಇನ್ನುಳಿದ ಎರಡು ವರ್ಣಗಳಿಗೆ ಯಜ್ಞದ ಅವಕಾಶ ನಿರಾಕರಿಸಲಾಗಿದೆ. ಇದು ಕೂಡ ಅಸಮಾನತೆಯನ್ನು ಬಿತ್ತುವ ದುರುದ್ದೇಶ ಪೂರಿತ ವಿಧಿ ಮತ್ತು ನಿಷೇಧವಾಗಿದೆ.

ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅ-5:27) ಮತ್ತು ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28) ಹಾಗೂ ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು ಮಾಡುತ್ತಾನೆ (ಅ- 5:42) ಎಂದು ಮನುಸ್ಮೃತಿಯಲ್ಲಿ ಉಲ್ಲೇಖಿಸಲಾಗಿದೆ. ಮೇಲಿನ ಮೂರು ಉಲ್ಲೇಖಗಳಲ್ಲಿ ಸ್ಪಷ್ಟವಾಗಿ ಮಾಂಸಾಹಾರ ಮತ್ತು ಬಲಿಯ ಉದಾಹರಣೆಗಳನ್ನು ನೀಡಲಾಗಿದೆ. ಆದರೆ ಇಂದು ರಾಜ್ಯ ಸರ್ಕಾರ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುವ ವಿಷಯದಲ್ಲಿ ಮಠಾಧಿಪತಿಗಳು ತಕರಾರು ತೆಗೆದಿದ್ದಾರೆ. ಇವರ ಮನುಧರ್ಮಶಾಸ್ತ್ರದಲ್ಲಿಯೇ ಬಲಿ ಮತ್ತು ಮಾಂಸಾಹಾರ ಸೇವನೆಯ ಉಲ್ಲೇಖಗಳನ್ನು ನೀಡಲಾಗಿದೆಯಲ್ಲವೇ? ಆದರೆ, ಇಂದು ಬಹುಸಂಖ್ಯಾತರ ಆಹಾರ ಕ್ರಮದ ಮೇಲೆ ನಿಯಂತ್ರಣ ಹೇರುವುದು ಎಷ್ಟು ಸರಿ ಎಂದು ಕೇಳಿಕೊಳ್ಳಬೇಕಲ್ಲವೇ?  

ಪತಿಯ ನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154) ಎಂದು ಮಹಿಳೆಯರಿಗೆ ಕಾನೂನನ್ನು ಮನುಸ್ಮೃತಿಕಾರ ಹೇರಿದ್ದಾನೆ. ಇಲ್ಲಿ ಮಹಿಳಾ ಸಮಾನತೆಯ ಪ್ರಶ್ನೆ ಎತ್ತಲಾದರೂ ಸಾಧ್ಯವಿದೆಯೇ? ಎಂದು ಆಲೋಚಿಸಬೇಕಿದೆ. ಪತಿ 1. ಕಾಮಾತುನಾಗಿ ಅನ್ಯ ಹೆಣ್ಣಿನ ಮೇಲೆ ಮನಸಿಟ್ಟರೂ, 2. ಗಂಡಸು ದುರ್ಗುಣಿಯಾಗಿದ್ದರೂ ಹೆಂಗಸು ಗಂಡನನ್ನು ದೇವರೆಂದು ಭಾವಿಸಿ ಸೇವೆ ಮಾಡಬೇಕು ಎಂದು ಹೇಳುವುದನ್ನು ಯಾರಾದರು ಕನಿಷ್ಠ ವಿವೇಕ ಇದ್ದವರು ಒಪ್ಪುವ ಸಾಧ್ಯತೆ ಇದೆಯೇ? ಆದರೆ, ಕನಿಷ್ಠ ವಿವೇಚನೆಯೂ ಇಲ್ಲದಂತೆ ಮಹಿಳೆಯರ ಮೇಲೆ ಇವುಗಳನ್ನು ಹೇರಲಾಗಿದೆ.

ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟುಮಾಡುತ್ತದೆ ( ಅ-7:82) ಎಂಬ ಮಾತನ್ನು ಗಮನಿಸಿ. ಇಲ್ಲಿ ಸ್ಪಷ್ಟವಾಗಿ ವಿದ್ಯಾಭ್ಯಾಸ ಬ್ರಾಹ್ಮಣರಿಗೆ ಸೀಮಿತವಾಗಿದ್ದ ಸಂಗತಿ ದಾಖಲಾಗಿದೆ. ಜೊತೆಗೆ ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಇದು ಕೂಡ ಸುಳ್ಳಲ್ಲವೇ? ಮನುಸ್ಮೃತಿಯಲ್ಲಿ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾಗುವ ಕುರಿತ ವಿವರಣೆಗಳು ಮತ್ತು ವಿವರಗಳಿಲ್ಲ. ಆದರೆ, ಈ ಕುರಿತ ಹೇಳಿಕೆಯನ್ನಷ್ಟೇ ನೀಡಲಾಗಿದೆ. ದಾನ ಪಡೆಯುವುದನ್ನು ಕೂಡ ಕಾನೂನುಬದ್ಧವಾಗಿಸಿಕೊಳ್ಳಲಾಗಿದ್ದು, ಕೊಡುವವನು ದಾನ ಕೊಡುವುದರಿಂದಲೇ ಉದ್ಧಾರವಾಗುತ್ತಾನೆ ಎಂದು ಬಿಂಬಿಸುವ ಯತ್ನವನ್ನು ಮೇಲಿನ ಶ್ಲೋಕದಲ್ಲಿ ಮಾಡಲಾಗಿದೆ. ಈ ಮೂಲಕ ದಾನ ಮಾಡಿದರೆ ಉದ್ಧಾರವಾಗುತ್ತಾರೆ ಎಂಬ ಸುಳ್ಳನ್ನು ಬಿತ್ತಲಾಗಿದೆ. ಆದರೆ, ದಾನ ಪಡೆದವರು ಉದ್ಧಾರವಾಗುವುದು ಸತ್ಯವೇ ಹೊರತು, ನಿರಂತರ ದಾನ ಕೊಡುವವರು ಉದ್ಧಾರವಾಗುತ್ತಾರೆಯೇ? ಅವರಿಗೆ ದುಡಿಮೆಯ ಭಾಗ ಬೃಹತ್ ಪ್ರಮಾಣದಲ್ಲಿದ್ದರೆ ದಾನ ಕೊಡಬಹುದು. ಆದರೆ, ಬಡವರು, ತಳಸಮುದಾಯದವರು, ಶೋಷಿತರು ದಾನ ಮಾಡುವುದು ಹೇಗೆ ಸಾಧ್ಯ? ಇಂತಹ ಪ್ರಶ್ನೆಗಳಿಗೆ ಮನುಸ್ಮೃತಿ ಅಪ್ಪಿತಪ್ಪಿ ಕೂಡ ಮುಖಾಮುಖಿಯಾಗದು.

ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21) ಎಂದು ಮನುಸ್ಮೃತಿಯಲ್ಲಿ ಮತ್ತೊಂದು ಸುಳ್ಳಿನ ಕಂತೆಯನ್ನು ಒಟ್ಟಲಾಗಿದೆ. ಇಲ್ಲಿ ಸ್ಪಷ್ಟವಾಗಿ ರಾಜನ ನ್ಯಾಯಸಭೆಯಲ್ಲಿ ಶೂದ್ರರ ಪ್ರವೇಶವನ್ನು ನಿರಾಕರಿಸಲಾಗಿದೆ. ಜೊತೆಗೆ, ಧರ್ಮ ವಿಚಾರದ ಕುರಿತು ವಿಮರ್ಶೆಯನ್ನೂ ಶೂದ್ರರು ಮಾಡುವಂತಿಲ್ಲ ಎಂದು ವಿಧಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಮೀರಿದರೆ ಆ ರಾಜನ ದೇಶ ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ, ರಾಜ ಕಷ್ಟಪಡುತ್ತಾನೆ ಎಂದು ಭಯವನ್ನು ಬಿತ್ತಲಾಗಿದೆ. ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ಚಾಣಾಕ್ಷತೆಯನ್ನು ಇಲ್ಲಿ ಗುರುತಿಸಬಹುದು. 1. ಶೂದ್ರರಿಗೆ ನ್ಯಾಯ, ಧರ್ಮ ಕ್ಷೇತ್ರಗಳಲ್ಲಿ ಪ್ರವೇಶ ನಿರಾಕರಣೆ 2. ರಾಜರು ಶೂದ್ರರಿಂದ ನ್ಯಾಯ ಮತ್ತು ಧರ್ಮಗಳನ್ನು ದೂರ ಇರಿಸುವುದು. ಈ ಮೂಲಕ ಬಹುಸಂಖ್ಯಾತ ಶೂದ್ರ ಸಮುದಾಯಕ್ಕೆ ಅಕ್ಷರ ಜ್ಞಾನವನ್ನು ನಿರಾಕರಿಸುವುದು. ಇದರ ಫಲವನ್ನು ಕೂಡ ಬ್ರಾಹ್ಮಣರು ಅನುಭವಿಸುವುದು ಮತ್ತು ಅದರ ಹೊಣೆ ಕ್ಷತ್ರಿಯರಿಗೆ, ದುಃಸ್ಥಿತಿ ಶೂದ್ರರಿಗೆ ವರ್ಗಾಯಿಸಲ್ಪಟ್ಟಿದೆ. ಅಲ್ಲದೇ, ನಿಯಮವನ್ನು ಜಾರಿಗೆ ತರುವ ಕ್ಷತ್ರಿಯರೊಡನೆ ಶೂದ್ರರು ಕಾದಾಟ ನಡೆಸಬೇಕೇ ಹೊರತು, ನಿಯಮವನ್ನು ಮಾಡಿದ ಮನುವಿನೊಂದಿಗಲ್ಲ. ಇದು ಕೂಡ ಸುಳ್ಳಿನ ಕಂತೆಯಷ್ಟೇ ಅಲ್ಲದೇ, ಮೋಸದ ಜಾಲವಾಗಿದೆ.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ