ಬೆಳಗಾವಿ: ಮಹಿಳೆ ಎಂದರೆ ಒಂದು ಶಕ್ತಿ ಇದ್ದ ಹಾಗೆ, ಅವರು ಏನು ಬೇಕಾದರೂ ಸಾಧಿಸಬಹುದು ಎಂದು ಸತೀಶ್ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಅಕಾಡೆಮಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಮಹಿಳಾ ಆಕಾಂಕ್ಷಿಗಳಿಗೆ ಸೈನಿಕ ಮತ್ತು ಪೊಲೀಸ್ ಕಾನ್ಸ್‌ಟೇಬಲ್ 10 ದಿನಗಳ ಉಚಿತ ತರಬೇತಿಯನ್ನು ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಹೂವುಗಳನ್ನು ಅರ್ಪಿಸುವ ಮೂಲಕ ಉದ್ಘಾಟಿಸಿದ ಮಾತಾಡಿದ ಅವರು, ತರಬೇತಿಯ ಸದುಪಯೋಗ ಪಡೆದುಕೊಳ್ಳುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ಕರೆ ನಿಡಿದರು.
ಗೋಕಾಕಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿದ ಸಮಯದಲ್ಲಿ ಮಹಿಳೆಯರಿಗೆ ಎಷ್ಟು ರೀತಿಯ ಕಷ್ಟಗಳು ಎದುರಾಗುತ್ತವೆ, ಅವುಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ಸಂಗತಿ ಗೊತ್ತಾಯಿತು. ಇವೆಲ್ಲವುಗಳ ನಡುವೆ ಮಹಿಳೆಯರೇ ಒಂದು ಶಕ್ತಿ ಇದ್ದಂತೆ, ನಿಮ್ಮ ತಾಯಿ, ಅಕ್ಕತಂಗಿ, ಒಳ್ಳೆಯ ಗೆಳತಿಯಾಗಿ ಅವರು ಇರುತ್ತಾರೆ ಎಂದರು.

ಇಂದಿರಾ ನೂಯಿ, ಕಿರಣ್ ಬೇಡಿ ಮೊದಲಾದವರ ತಮ್ಮತಮ್ಮ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಕಂಡಕ್ಟರ್ ಆಗಿ, ಕೃಷಿ ಕ್ಷೇತ್ರದಲ್ಲಿ ಕೂಡ ಮಹಿಳೆಯರು ದುಡಿಯುತ್ತಿದ್ದಾರೆ. ಅಂತವರಿಂದ ನೀವು ಸ್ಫೂರ್ತಿ ಪಡೆದು ಜೀವನ ರೂಪಿಸಿಕೊಳ್ಳಿ. ತರಬೇತಿಯ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿ, ಮಹಿಳೆಯರು ಇಲ್ಲಿ ಬಂದು ತರಬೇತಿ ಪಡೆಯುತ್ತಿರುವುದಕ್ಕೆ ಬುದ್ಧ, ಬಸವ ಅಂಬೇಡ್ಕರ್ ಅವರ ಸಾಮಾಜಿಕ ಚಳುವಳಿಯೇ ಕಾರಣ. ಅವರು ಮಾಡಿದ ಸಾಮಾಜಿಕ ಕ್ರಾಂತಿಯಿಂದಲೇ ಇಂದು ಭಾರತದಲ್ಲಿ ಮಹಿಳೆಯರು ಮುನ್ನೆಲೆಗೆ ಬರುತ್ತಿದ್ದಾರೆ. ಹೀಗಾಗಿ ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ನಿವೃತ್ತ ಸೈನಿಕ ಸುಭಾಷ್ ನಾಯಕ್, ತರಬೇತಿದಾರರಾದ ರೇಣುಕಾ ವನಕುಂದ್ರೆ, ಸಂತೋಷ್ ಮೆಳವಂಕಿ, ಹನುಮಂತ ನಂದಿ ಶಿಬಿರಾರ್ಥಿಗಳಿಗೆ ಶುಭಕೋರಿದರು. ಜೊತೆಗೆ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಕಾಳಜಿಯುಳ್ಳ ಕೆಲಸಗಳನ್ನು ಪ್ರಶಂಸಿಸಿದರು.