ಸಾಹುಕಾರಿಕೆ ಎಂದರೆ ಸರಳತೆ ಸೌಜನ್ಯ ಕಾರುಣ್ಯ ಪೂರ್ಣದೃಷ್ಠಿ ಮನುಷ್ಯಪ್ರೇಮ ಎಂಬುದನ್ನು ಸತೀಶ್ ಜಾರಕಿಹೊಳಿ ಅವರನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಆ ಕಾರಣಕ್ಕಾಗಿಯೇ ಬೆಳಗಾವಿಯ ಜನತೆ ಜಾತಿ ಭೇದ ಬದಿಗಿಟ್ಟು ಮತಹಾಕಿದ್ದಾರೆ. ಚುನಾವಣೆ ಇರಲಿ ಇಲ್ಲದಿರಲಿ ತನ್ನನ್ನು ಯಾರೆಷ್ಟೇ ಕಟುವಾಗಿ ಟೀಕಿಸಲಿ ಅವಮಾನಕರವಾಗಿ ಮಾತನಾಡಲಿ ಎಲ್ಲರಿಗೂ ಶಾಂತಿಯಿಂದಲೇ ವಿವೇಕಯುತವಾದ ಪ್ರತಿಕ್ರಿಯೆಯನ್ನು ಸಭ್ಯತೆಯ ಎಲ್ಲೆ ಮೀರದೆ ಕೊಡುತ್ತಾರೆ. ಮೌಢ್ಯದ ವಿರುದ್ಧದ ಹೋರಾಟ ಸಮಾನತೆಗಾಗಿ ಹೋರಾಟ ಯಾವುದೇ ಬಗೆಯ ದೌರ್ಜನ್ಯಗಳ ವಿರುದ್ಧ “ಮಾನವಬಂಧುತ್ವ ವೇದಿಕೆ” ಕಟ್ಟಿ ಅದನ್ನು ನಿರಂತರವಾಗಿ ಬೆಳೆಯಿಸಿ ಇವನಾರವ ಇವನಾರವ ಎಂದೆಣಿಸದೆ ಎಲ್ಲರನ್ನೂ ನಮ್ಮವರೆಂದು ಬಂಧುತ್ವವನ್ನು ಬೆಸೆಯುತ್ತಿರುವ ಈ ಕಾಲದ ವಿಶೇಷ ನಾಯಕ.
ರಾಜಕಾರಣ ಲಾಭದ ಸರಕಾಗಿರುವ ಈ ಕಾಲಘಟ್ಟದಲ್ಲಿ, ಪುರೋಹಿತಶಾಹಿ ಬಲಪಂಥೀಯ ಕೋಮುವಾದೀ ಜಾತಿವಾದಿ ಕ್ರಿಮಿಗಳು ಎಲ್ಲೆಡೆ ತುಂಬಿಕೊಂಡು ರಾಜಕೀಯ ಮೌಲ್ಯಗಳೇ ಕುಸಿದುಬಿದ್ದಿರುವ ಈ ಕಾಲಘಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಇಂತವರದ್ದೆಲ್ಲಾ ಏಕಾಂಗಿಹೋರಾಟ. ಮತ್ತೂ ಪ್ರವಾಹದ ವಿರುದ್ಧವೇ ಸೆಣೆಸುವ ಪ್ರವಾಹದಲ್ಲಿ ತನ್ನವರು ತೇಲಿ ಹೋಗಬಾರದು ಕೊಚ್ಚಿಹೋಗಬಾರದು ಎಂದು ರಕ್ಷಣೆಗೆ ನಿಲ್ಲುವ ಅಸಾಧಾರಣ ಸಾಹಸೀ ಹೋರಾಟ.
ಸತೀಶ್ ಜಾರಕಿಹೊಳಿಯವರು ಎಲ್ಲ ವೈಟ್ ಸ್ಕಾಲರ್ ರಾಜಕಾರಣಿಗಳಂತೆ ತಾವೂ ಒಂದು ಸ್ಟಾಂಡರ್ಡ್ ಮೇಂಟೇನ್ ಮಾಡಬಹುದಿತ್ತು. ಆ ಎಲ್ಲಾ ಅವಕಾಶಗಳೂ ಅವರಿಗಿವೆ. ಆದರೆ ತನ್ನ ಕಣ್ಣಮುಂದೆ ಏನೂ ಇಲ್ಲದ ಜನರಿದ್ದಾರಲ್ಲ ತಾನೂ ಅವರಂತೆಯೇ ಅವರೊಟ್ಟಿಗೇ ಅವರಿಗೆ ಅಣಕಿಸದ ಹಾಗೆ ಅವರ ಬಡತನ ದಾರಿದ್ರ್ಯ ಸ್ಥಿತಿಗಳನ್ನು ಅಣಕಿಸದ ಹಾಗಿರಬೇಕು. ಅಂತಿಮವಾಗಿ ಮನುಷ್ಯ ಸರಳವಾಗಿ ಎಲ್ಲರವನಾಗಿ ಬದುಕಿ ಹೋಗಬೇಕೆಂಬ ಸಿದ್ಧಾಂತಕ್ಕೆ ಅದೂ ಹುಟ್ಟುಸಹಜವಾಗಿ ಬಂದ ಗುಣಕ್ಕೆ ಎರವಾಗದೆ ಸಾಗುತ್ತಿದ್ದಾರೆ. ಚುನಾವಣೆ ಎಂದರೆ ಅವರಿಗೆ ಅದೊಂದು ಮಹಾತಂತ್ರ ಕುತಂತ್ರಗಳ ಆರೋಪ ಪ್ರತ್ಯಾರೋಪಗಳ ಜಿದ್ದಾಜಿದ್ದಿನ ಹಗೆತನ ಸಾಧಿಸುವ ಸಾಧನವಲ್ಲ; ಅದೊಂದು ಜನಸೇವೆ ಮಾಡಲು ಸಂವಿಧಾನಬದ್ಧವಾಗಿ ಅವರ ಕೆಲಸ ಮಾಡಲು ಬೇಕಾಗಿರುವ ಒಂದು ಅವಶ್ಯಕತೆ.
ಚುನಾವಣೆ ಗೆದ್ದವರಿಗೆ ಸಿಗುವುದು ‘ಅಧಿಕಾರ’ವಲ್ಲ ಅವಕಾಶ. ಆ ಅವಕಾಶ ವಯಕ್ತಿಕಕ್ಕಲ್ಲ ಜನತೆಗೆ ಸಮಾಜಕ್ಕೆ ದೇಶಕ್ಕೆ ವಿನಿಯೋಗಿಸಲು ಈ ವಿಚಾರದಲ್ಲಿ ನಂಬಿ ಇಟ್ಟುಕೊಂಡ ನಾಯಕ ಸದ್ಯಕ್ಕೆ ಸಿಗುವುದು ಸತೀಶ್ ಜಾರಕಿಹೊಳಿ.
ಒಂದೆಡೆ ನಮ್ಮ ಕ್ಷೇತ್ರವನ್ನು ಬಿಟ್ಟುಹೋಗಬೇಡಿ ಎಂದು ಒತ್ತಾಯಿಸುತ್ತಿದ್ದ ಯಮಕನಮರಡಿಯ ಜನತೆ, ಮತ್ತೊಂದೆಡೆ “ಸತ್ಯಪ್ಪ ಸೌಕಾರ್ರಿಗೆ ಓಟ್ ಹಾಕೋಕೆ ನಮಗೊಂದು ಅವ್ಕಾಶ ಸಿಕ್ಕಿದೆ” ಎಂದು ಅಭಿಮಾನದಿಂದ ಸ್ವಾಗತಿಸುತ್ತಿದ್ದ ಜನ. ಇವರಿಬ್ಬರ ಪ್ರೀತಿ ಅಭಿಮಾನದಲ್ಲಿ ನಾಯಕ ಯಾರೆಡೆಗೆ ಬಾಗಬೇಕು ಎಂದು ಯೋಚಿಸುವುದು ಕಷ್ಟವಾಗಿಬಿಡುತ್ತದೆ.
ಆದರೂ ಒಂದು ಪಕ್ಷ ಅದಕ್ಕೊಂದು ವ್ಯವಸ್ಥೆ ಇರುತ್ತದೆ. ಪಕ್ಷದ ಸದಸ್ಯರು ಅದರ ಮಾತು ಕೇಳಬೇಕಾಗುತ್ತದೆ. ಪಕ್ಷದ ಹೈಕಮಾಂಡ್ ಮತ್ತು ನಾಯಕರ ಒತ್ತಡಕ್ಕೆ ಮಣಿದು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿ, ನಿರೀಕ್ಷಿಸಿದಂತೆ ಬಲವಾದ ಪೈಪೋಟಿ ನೀಡಿ ಅಲ್ಪದರಲ್ಲಿ ಪರಾಜಿತರಾಗಿದ್ದಾರೆ. ಅಸಲಿಗೆ ಇದು ಪರಾಜಯವೇ ಅಲ್ಲ. ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ತುಳಿಯಲು ಹೂಡಿರುವ ಷಡ್ಯಂತ್ರ ಎನ್ನುವ ಮಾತು ಹರಿದಾಡುತ್ತಿತ್ತು. ಅದು ಸತ್ಯವೇ ಆಗಿದ್ದರೆ ಷಡ್ಯಂತ್ರ ಹೂಡಿದ್ದವರಿಗೆ ಸೋಲಾಗಿದೆ. ಹಾಗೂ ಪಕ್ಷದಲ್ಲಿ ಸತೀಶ್ ಜಾರಕಿಹೊಳಿಯವರ ಶಕ್ತಿ ಏನೆಂಬುದು ಸಾಬೀತಾಗಿದೆ. ಎದುರು ಪಕ್ಷದವರ ಅಪಪ್ರಚಾರ ಸೋತಿದೆ. ಜನ ದಶಕಗಳ ಕಾಲ ಕಂಡ ಮನುಷ್ಯನ ಅಂತರಂಗಕ್ಕೆ ಸೋತು ಮತಹಾಕಿದ್ದಾರೆ. ಬಿಜೆಪಿ ಗೆದ್ದರೂ ಬೆದರುವಂತಾಗಿದೆ. ಅವರಿಗೆ ಗೆದ್ದರೂ ಇದು ಸೋಲೇ…
– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು