April 19, 2024 10:07 am

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಸೇವಾದಳಕ್ಕೆ ಸಲ್ಲಬೇಕು: ಎಚ್.ಎಸ್.ಚಂದ್ರಶೇಖರ್

ಘಟಪ್ರಭಾದ ರೈಲ್ವೇ ಓವರ್ ಬ್ರಿಡ್ಜ್ ಅನ್ನು ಜಮೀನು ಮಾರಿ ಕಟ್ಟಿಸಿದ ದೇವರಾಜ ಅರಸು

ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಸೇವಾದಳಕ್ಕೆ ಸಲ್ಲಬೇಕು ಎಂದು ಭಾರತ ಸೇವಾದಳದ ರಾಜ್ಯ ದಳಪತಿ ಎಚ್.ಎಸ್.ಚಂದ್ರಶೇಖರ್ ಹೇಳಿದರು.

ಘಟಪ್ರಭಾದ ಎನ್.ಎಸ್.ಹರ್ಡೀಕರ್ ಟ್ರೈನಿಂಗ್ ಸೆಂಟರ್ ನಲ್ಲಿ ನಡೆದ 132ನೇ ಡಾ.ಎನ್.ಎಸ್.ಹರ್ಡೀಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಘಟಪ್ರಭಾದ ರೈಲ್ವೇ ಓವರ್ ಬ್ರಿಡ್ಜ್ ಅನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕಟ್ಟಿಸಿದರು ಎಂದರು.

ಅದರ ಹಿನ್ನೆಲೆಯನ್ನು ವಿವರಿಸಿದ ಅವರು, ಎನ್.ಎಸ್.ಹರ್ಡೀಕರ್ ಅವರು ಶಿಸ್ತು, ಸಮಯಪಾಲನೆಗೆ ಒತ್ತು ನೀಡುತ್ತಿದ್ದ ಘಟನೆಯನ್ನು ನೆನೆದರು. ಒಮ್ಮೆ ಘಟಪ್ರಭಾದ ಕೆ.ಎಚ್.ಐ.ಗೆ ದೇವರಾಜ  ಅರಸು ಅವರು ಬರಬೇಕಿತ್ತು. ಮುಂಜಾನೆ 7:30ಕ್ಕೆ ಬರಬೇಕಿದ್ದ ದೇವರಾಜ ಅರಸರು ಬರುವುದು ತಡವಾಯಿತು. ಸಮಯ ನೋಡಿದ ಹರ್ಡೀಕರ್ ಧ್ವಜಾರೋಹಣ ನೆರವೇರಿಸಿದರು. ಅಷ್ಟರೊಳಗೆ ದೇವರಾಜ ಅರಸರು ಬಂದು ಹರ್ಡೀಕರ್ ಅವರ ಪದತಲದಲ್ಲಿ ಕುಳಿತಿದ್ದರು. ದೇವರಾಜ  ಅರಸರು ಹರ್ಡೀಕರ್ ಅವರನ್ನು ಗುರುಗಳೆಂದೇ ಸಂಬೋಧಿಸುತ್ತಿದ್ದರು. ಆಗ, ಕೋಪಗೊಂಡ ಹರ್ಡೀಕರ್ ಅವರು ದೇವರಾಜ ಅರಸರ ಎದೆಗೆ ಒದ್ದರು. ಈಗಿನಂತೆ ಪರಿಸ್ಥಿತಿ ಇದ್ದರೆ ಹರ್ಡೀಕರ್ ಅವರಿಗೆ ದುಃಸ್ಥಿತಿ ಎದುರಾಗುತ್ತಿತ್ತು ಎಂದರು.

ಅನಂತರ, ದೇವರಾಜ ಅರಸರು ಮಾತನಾಡಿ, ನಾನು ಬರುವುದು ತಡವಾಗಿದ್ದು ಏಕೆ ಎಂದು ವಿವರಿಸಿದರು. ಈಗ ಇರುವ ರೈಲ್ವೇ ಬ್ರಿಡ್ಜ್ ಆಗ ಇರಲಿಲ್ಲ. ತಾವು ಬಂದ ಸಮಯದಲ್ಲಿ ರೈಲ್ವೇ ಗೇಟ್ ಹಾಕಿದ್ದರು. ಅದರಿಂದ ಬರುವುದು ತಡವಾಯಿತು. ಆದರೆ, ಇನ್ನು ಮುಂದೆ ಯಾರಿಗೂ ಹೀಗೆ ವಿಳಂಬವಾಗಬಾರದು ಎಂದು, ತಮ್ಮ ಊರು ಕಲ್ಲಹಳ್ಳಿಯಲ್ಲಿರುವ ಜಮೀನನ್ನು ಮಾರಿ ರೈಲ್ವೇ ಬ್ರಿಡ್ಜ್ ಕಟ್ಟಿಸಿದರು ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ಭಾರತ ಸೇವಾದಳದ ಉಪದಳಪತಿ ಬಸವರಾಜ ಮ ಹಟ್ಟಿಗೌಡರ, ಎನ್.ಎಸ್.ಹರ್ಡೀಕರ್ ಮತ್ತು ಜವಾಹರಲಾಲ್ ನೆಹರೂ ಅವರು ಆತ್ಮೀಯ ಸ್ನೇಹಿತರಾಗಿದ್ದರು. ನೆಹರೂ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಕರ್ನಾಟಕದ ಬಹಳ ಜನರ ಕುರಿತು ಬರೆದಿಲ್ಲ. ಆದರೆ, ಅವರು ಹೇಳಿರುವುದೇನೆಂದರೆ, ನಾನು ಹಿಟ್ಲರ್ ಗೂ ಹೆದರುವುದಿಲ್ಲ. ಆದರೆ, ಎನ್.ಎಸ್.ಹರ್ಡೀಕರ್ ಮತ್ತು ಸುಭಾಷ್ ಚಂದ್ರಬೋಸ್ ಅವರಿಗೆ ಬಹಳ ಗೌರವ ಕೊಡುತ್ತೇನೆ ಮತ್ತು ಅವರ ಸಂಘಟನೆಗಳಿಗೆ ಹೆದರುತ್ತೇನೆ ಎಂದಿದ್ದಾರೆ. ನೆಹರು ಅವರು ಯಾರಿಗೂ ಹೆದರುತ್ತಿರಲಿಲ್ಲ. ಅವರು ಬಲಿಷ್ಠ ನಾಯಕರು. ನಮ್ಮ ದೇಶ ಬಲಿಷ್ಠವಾಗಲು ಅವರ ಕೊಡುಗೆ ಇದೆ ಎಂದರು.

ನೆಹರು ಅವರಿಗೆ ಯಾರಾದರೂ ಏನಾದರೂ ಹೇಳಲು ಹೆದರುತ್ತಿದ್ದರು. ಆದರೆ, ಹರ್ಡೀಕರ್ ಅವರು ಏನು ಹೇಳಬೇಕೋ ಅದನ್ನು ನೆಹರು ಅವರಿಗೆ ನೇರವಾಗಿ ಹೇಳುತ್ತಿದ್ದರು. ಇಂದಿರಾ ಗಾಂಧಿಯವರು ಕಡೆಯವರೆಗೂ ಹರ್ಡೀಕರ್ ಅವರನ್ನು ಕಾಕಾ ಎಂದು ಕರೆಯುತ್ತಿದ್ದರು ಎಂದರು.

ಕೆ.ಎಚ್.ಐ.ಗೆ ಹರ್ಡೀಕರ್ ಅವರನ್ನು ಭೇಟಿಯಾಗಲು ಸಚಿವರು, ಮುಖ್ಯಮಂತ್ರಿಗಳು ಯಾರೇ ಬಂದರೂ, ಬರುವ ಮುನ್ನ ತಮ್ಮ ವಸ್ತ್ರಗಳನ್ನು ಸರಿಪಡಿಸಿಕೊಂಡು ಬರುತ್ತಿದ್ದರು. ಹರ್ಡೀಕರ್ ಅವರು ಹೊರಗೆ ಬರುತ್ತಾರೆ ಎಂದರೆ ಜನರೆಲ್ಲ ಹೆದರುತ್ತಿದ್ದರು ಎಂದರು.

ಮೊದಲು ಧ್ವಜವಂದನೆ ಸಮಯದಲ್ಲಿ ಪೊಲೀಸರು ಬಂದು ಸೆಲ್ಯೂಟ್ ಮಾಡುತ್ತಿದ್ದರು. ಈ ಊರಿಗೆ ಹುಕ್ಕೇರಿ ರಸ್ತೆ ಎಂದು ಹೆಸರಿತ್ತು. 1952ರಲ್ಲಿ ಘಟಪ್ರಭಾ ಎಂದು ಹೆಸರಿಟ್ಟರು. ಈಗಿರುವ ರೈಲ್ವೇ ನಿಲ್ದಾಣಕ್ಕೆ ಘಟಪ್ರಭಾ ಆರ್.ಎಸ್. ಎಂದು ಹೆಸರಿಟ್ಟವರು ಕೂಡ ಹರ್ಡೀಕರ್. ಇವರು ಮನಸು ಮಾಡಿದ್ದರೆ ರಾಷ್ಟ್ರಪತಿಯಾಗುತ್ತಿದ್ದರು. ಆದರೆ, ಅವರು ಅದನ್ನು ಬಯಲಿಸಲಿಲ್ಲ. ಒತ್ತಾಯದಿಂದ ಇವರನ್ನು 2 ಬಾರಿ ರಾಜ್ಯಸಭೆ ಸದಸ್ಯರನ್ನು ಮಾಡಿದರು. ಗಾಂಧಿ, ನೆಹರು ಅವರೊಂದಿಗೆ ಅವರ ಒಡನಾಟವಿತ್ತು ಎಂದು ನೆನೆದರು.

ರಾಜ್ಯಸಭೆ ಸದಸ್ಯರಾದ ಸಮಯದಲ್ಲಿ ಇವರು ಹಾಫ್ ಪ್ಯಾಂಟ್ ಹಾಕಿಕೊಂಡು ಸದನಕ್ಕೆ ಹೋದರು. ಆಗ ಡ್ರೆಸ್ ಕೋಡ್ ವಿವಾದವಾಯಿತು. ಈ ವಿಷಯ ತಿಳಿದ ಹರ್ಡೀಕರ್ ರಾಜೀನಾಮೆ ಕೊಡಲು ಮುಂದಾದರು. ಆದರೆ, ಸ್ವತಃ ನೆಹರೂ ಅವರು ಮನ ಒಲಿಸಿದರು ಎಂದರು.

ಕೆನಡಾದ ಪತ್ರಕರ್ತೆಯೊಬ್ಬರು ತಮ್ಮ ಆಸ್ತಿಯ ಭಾಗದಲ್ಲಿ ಭಾರತದ ದೀನದಲಿತರಿಗೆ, ಬಡವರಿಗೆ ಸಹಾಯ ಮಾಡಲು ಮುಂದಾದರು. ಅವರು ಎನ್.ಎಸ್.ಹರ್ಡೀಕರ್ ಅವರನ್ನು ಭೇಟಿಯಾದರು. ಅವರ ನೆರವು ಪಡೆದು ಘಟಪ್ರಭಾದ ಸುತ್ತಮುತ್ತಲ 25 ಗ್ರಾಮಗಳಿಗೆ ಕೆ.ಎಚ್.ಐ ಸ್ಥಾಪಿಸಿ ನೆರವಾದರು. ಇಂತಹ ಶಕ್ತಿ ಹರ್ಡೀಕರ್ ಅವರಿಗೆ ಇತ್ತು ಎಂದರು.

ಬ್ರಿಟಿಷರನ್ನು ನಡುಗಿಸಿದ ವ್ಯಕ್ತಿ ಎನ್.ಎಸ್.ಹರ್ಡೀಕರ್. 1923ರಿಂದ 1947ರವರೆಗೆ ಎನ್.ಎಸ್.ಹರ್ಡೀಕರ್ ಅವರು ವಹಿಸಿದ ಪಾತ್ರದ ಕುರಿತು ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಪತ್ರಕರ್ತ ಡಾ. ಪ್ರದೀಪ್ ಮಾಲ್ಗುಡಿ ಕರೆ ನೀಡಿದರು.

ಎನ್.ಎಸ್.ಹರ್ಡೀಕರ್ ಅವರ ಚಿಂತನೆಗಳು, ಆಲೋಚನೆಗಳು, ಅವರು ಜನರಿಗೆ ತಲುಪಿದ ಮಾದರಿಗಳನ್ನು ಮತ್ತೆ ಮರು ಅಳವಡಿಸಿಕೊಳ್ಳುವ ಅಗತ್ಯ ಇಂದು ಎದುರಾಗಿದೆ. 1947ಕ್ಕಿಂತ ಹಿಂದೆ ನಾವು ವಿದೇಶಿಯರ ಆಳ್ವಿಕೆಯ ವಿರುದ್ಧ ಹೋರಾಡಬೇಕಿತ್ತು. 2021ನೇ ಇಸವಿಯಲ್ಲಿ ನಾವು ನಮ್ಮ ಜನರ ವಿರುದ್ಧವೇ ಹೋರಾಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

1947ಕ್ಕಿಂತ ಹಿಂದೆ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೆವು. ಇಂದು ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ, ಸಾಮಾಜಿಕ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ಶೈಕ್ಷಣಿಕ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯಕ್ಕಾಗಿ ಕೂಡ ಹೋರಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

ಇಂದು ಆಳುವ ಸರ್ಕಾರಗಳು ಜನರನ್ನು ನಿಕೃಷ್ಟ ಸ್ಥಿತಿಗೆ ದೂಡಿ, ಪ್ರಭುತ್ವಗಳು ಬೆಳೆಯುತ್ತಿವೆ. ಅವರ ಬೆಂಬಲಿಗ ಉದ್ಯಮಿಗಳು, ಅವರನ್ನು ಓಲೈಸುವವರು, ಭಟ್ಟಂಗಿಗಳು ಮಾತ್ರ ಬೆಳೆಯುವಂತಹ ವಾತಾವರಣ ಸೃಷ್ಟಿಯಾಗಿದೆ. 1947ರ ಹಿಂದೆ ಹೇಗೆ ನಾವು ಸ್ವಾತಂತ್ರ್ಯ ಹೋರಾಟ ನಡೆಸಿದ್ದೆವೋ ಅದೇ ಮಾದರಿಯಲ್ಲಿ ಈಗ ಇನ್ನೊಂದು ಚಳವಳಿಯನ್ನು ಕಟ್ಟಲು ಎನ್.ಎಸ್.ಹರ್ಡೀಕರ್ ಅವರ ಹೋರಾಟ ಸ್ಫೂರ್ತಿಯಾಗಬೇಕು ಎಂದರು.

ಹೊರಗಿನವರ ವಿರುದ್ಧ ಹೋರಾಡುವುದು ಸುಲಭ, ಆದರೆ ಈಗ ನಮ್ಮವರ ವಿರುದ್ಧವೇ ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಭುತ್ವಗಳು ಇಂದು ಆತ್ಯಂತಿಕ ಮಟ್ಟದಲ್ಲಿ ಜನರನ್ನು ಶೋಷಿಸಲು ಕಾನೂನುಗಳನ್ನು ರೂಪಿಸುತ್ತಿವೆ. ಉದಾಹರಣೆಗೆ ಎನ್.ಆರ್.ಸಿ., ಸಿಎಎ, ಗೋಹತ್ಯೆ ನಿಷೇಧ ಕಾಯ್ದೆ, ಕೇಂದ್ರ ಸರ್ಕಾರ ರೂಪಿಸಿರುವ ಮೂರು ವಿವಾದಾಸ್ಪದ ಕೃಷಿ ಮಸೂದೆಗಳನ್ನು ನೋಡಬಹುದು. ಇವುಗಳು ಜನರ ಬದುಕನ್ನು ನಿಕೃಷ್ಟ ಸ್ಥಿತಿಗೆ ಇಳಿಸುತ್ತವೆ. ಮೂರು ಕೃಷಿ ಮಸೂದೆಗಳು ದೇಶದ 80 ಕೋಟಿ ಜನರಿಗೆ ನೀಡಲಾಗುತ್ತಿರುವ ಪಡಿತರ ವ್ಯವಸ್ಥೆಯನ್ನು, ರೈತರಿಗೆ ಸಿಗುತ್ತಿರುವ ಕನಿಷ್ಠ ಬೆಂಬಲ ಬೆಲೆ, ಬಡವರ, ದೀನ ದಲಿತರ, ಶೋಷಿತರ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ನಿರ್ಮೂಲನೆ ಮಾಡಲಿವೆ. ಭವಿಷ್ಯದಲ್ಲಿ ಕಾಳಸಂತೆಯ ಮಾರಾಟ ಕಾನೂನುಬದ್ಧವಾಗಲಿದೆ.  ಜೀವನಾವಶ್ಯಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲು ಅವಕಾಶವನ್ನು ನೀಡಲಾಗುತ್ತಿದೆ ಎಂದರು.

ಈಗ ಕೊರೊನಾ ಅವಧಿಯಲ್ಲಿ ಜನರ ಬದುಕು ದುಃಸ್ಥಿತಿಗೆ ಸಿಲುಕಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಂದ್ ಗೆ ಕರೆಕೊಡುವ ಸಂಘಟನೆ ಅಥವಾ ವ್ಯಕ್ತಿ ಬಂದ್ ನಿಂದ ಆಗುವ ನಷ್ಟವನ್ನು ತುಂಬಿಕೊಡಬೇಕು. ಆದರೆ ಜನತಾ ಕರ್ಫ್ಯೂ ಎಂಬಂತಹ ಆಕರ್ಷಕ ಹೆಸರಿನಿಂದ ಸರ್ಕಾರಗಳೇ ಬಂದ್ ಮಾಡುತ್ತಿವೆ. ಜನ ಬೀದಿಗೆ ಬಂದರೆ ಲಾಠಿ ಏಟು ಕೊಡುತ್ತಾರೆ. ಬಲವಂತವಾಗಿ ಬಂದ್ ಮಾಡಿಸುತ್ತಾರೆ. ಜನರ ಆದಾಯಕ್ಕೆ ಕತ್ತರಿ ಹಾಕಿ, ವೆಚ್ಚವನ್ನು ಏರಿಸಿ, ಜನರನ್ನು ಮನೆಯಲ್ಲಿ ಕೂಡಿ ಹಾಕಿ ಬದುಕಿ ಎಂದರೆ ಜನ ಹೇಗೆ ಬದುಕುತ್ತಾರೆ? ಇಂತಹ ದುಃಸ್ಥಿತಿಗೆ ಕಾರಣವಾಗಿರುವ ಸರ್ಕಾರಗಳನ್ನು ನಾವು ಪ್ರಶ್ನಿಸಬೇಕಿದೆ. ಇದಕ್ಕೆ ಎನ್.ಎಸ್.ಹರ್ಡೀಕರ್ ಅವರು ರೂಪಿಸಿದ ಹೋರಾಟ, ಚಳವಳಿ, ಅವರು ಕ್ರಮಿಸಿದ ದಾರಿಗಳು ನಮಗೆಲ್ಲ ಮಾರ್ಗದರ್ಶಕ ಎಂದರು.

ಕಾರ್ಯಕ್ರಮದ ನಿರ್ವಹಿಸಿದ ರಾಮಕೃಷ್ಣ ಪಾನಬುಡೆ, ಎನ್.ಎಸ್.ಹರ್ಡೀಕರ್ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆಸಿದ ಚಳವಳಿಯ ಮಾದರಿಗಳನ್ನು ವಿವರಿಸಿದರು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ