ಮಂಗನ ಬಳ್ಳಿ (ಅಮೃತ ಬಳ್ಳಿ) ಕೊರೋನಾಕ್ಕೆ ಔಷಧ ಎಂದು ಅಪ್ಪಿತಪ್ಪಿಯೂ ಹೇಳಲಾರೆ. ಆದ್ರೆ ಇದರ ದಂಟು ಎಲೆಯಿಂದ ತಯಾರಿಸಿದ ಕಷಾಯ ಮಾತ್ರ ಅತ್ಯಂತ ಉಪಕಾರಿ.
ಎಷ್ಟೋ ಸಲ ಜ್ವರ ಬಂದಾಗ ಕೆಮ್ಮು ಆವರಿಸಿದಾಗ ಇದರ ದಂಟನ್ನು ಜಜ್ಜಿ ನೀರಿನಲ್ಲಿ ಅರ್ಧಕ್ಕರ್ಧ ಬತ್ತುವವರೆಗೂ ಕುದಿಸಿ ಕುಡಿದಿದ್ದೇನೆ. ಯಾವ ಇಂಗ್ಲಿಷ್ ಮೆಡಿಸಿನ್ ಕೂಡ ಇದರ ಮುಂದೆ ಲೊಳಲೊಟ್ಟೆ ಎನಿಸುವ ಹಾಗೆ ಜ್ವರ ಕೆಮ್ಮು ನನ್ನ ಮೈ ಬಿಟ್ಟು ಓಡಿ ಹೋದದ್ದಿದೆ.
ಬೆಳಗ್ಗೆ ಕಾಲಿ ಹೊಟ್ಟೆಗೇ ತೆಗೆದುಕೊಳ್ಳಬೇಕು. ನೈಸರ್ಗಿಕವಾಗಿ ಬಂದ ವ್ಯಾಧಿಯನ್ನು ನೈಸರ್ಗಿಕವಾಗೇ ಕಿತ್ತೋಡಿಸುತ್ತದೆ, ಉಲ್ಲಾಸದ ಅನುಭವ ಕೊಡುತ್ತದೆ. ಬಳಸಿದರೆ ಉತ್ತಮ. ಆದರೆ ಕೊರೋನಾಕ್ಕೇ ಇದು ಔಷಧ ಎಂದು ಮಾತ್ರ ಭಾವಿಸಬೇಡಿ. ಈ ದುರಿತ ಕಾಲದಲ್ಲಿ ಅಗತ್ಯವಾಗಿ ಸೇವಿಸಿದರೆ ಒಳಿತೆಂದು ಮಾತ್ರ ಹೇಳಬಲ್ಲೆ.
ಇದನ್ನ ಅಮೃತ ಬಳ್ಳಿ ಎಂದು ಸಂಸ್ಕೃತದಲ್ಲಿ ಕರೀತಾರೆ. ಅ-ಮೃತ ಅಂದರೆ ಸಾಯಲಾರದ್ದು. ಸಾವಿಲ್ಲದ್ದು ಅಂದರೆ ಈ ಬಳ್ಳಿ ಕಿತ್ತು ತಂದು ಮಣ್ಣಿನಲ್ಲಿ ಊರುವುದು ಬೇಡ, ಎಸೆದರೂ ಸಾಕು ಅಲ್ಲೇ ಚಿಗುರುತ್ತದೆ. ಕಿತ್ತು ತಂದ ಬಳ್ಳಿ ದೀರ್ಘಕಾಲ ಸಾಯದೇ ಹಾಗೇ ಇರುತ್ತದೆ. ಇದು ಅಮೃತ ಬಳ್ಳಿಯ ತಾತ್ಪರ್ಯ.
ಅಮೃತ ಎಂದರೆ ಅಮೃತವೇ ಸಾಯುವವನನ್ನೂ ಬದುಕಿಸಬಲ್ಲದು ಎಂಬ ಜನನಂಬಿಕೆ. ಮುಸಿಯಾ (ಲಂಗೂರ್) ಗಳು ಈ ಸೊಪ್ಪನ್ನು ಅತ್ಯಂತ ಆಸೆಯಿಂದ ತಿನ್ನುತ್ತವೆ. ಇದರದ್ದು ಕಹಿಯಾದ ರಸ. ಆದರೆ ಜೀವಕ್ಕೆ ಸಿಹಿ.
ಇದಕ್ಕೆ ಮಂಗನ ಬಳ್ಳಿ ಎಂದು ಜನಪದರು ಕರೀತಾರೆ. ಈ ಹೆಸರು ಬರಲು ಕಾರಣ ಇದರ ದಂಟಿನುದ್ದಕ್ಕೂ ಮಂಗನ ಬಾಲದ ರೀತಿ ಬೇರುಗಳು ಇಳಿಬೀಳುತ್ತವೆ ಅವು ನೆಲಕ್ಕೆ ತಾಗಿ ಅಲ್ಲಿಂದಲೇ ಹೊಸಬೇರು ಬಿಟ್ಟು ಬಳ್ಳಿಗೆ ಆಹಾರ ಒದಗಿಸುತ್ತದಲ್ಲದೆ ಬಳ್ಳಿಯನ್ನು ಉದ್ದುದ್ದಕ್ಕೆ ಹಬ್ಬಲು ಸಹಕರಿಸುತ್ತದೆ. ಮಂಗನ ಬಾಲದಂತಹಾ ಬೇರುಗಳನ್ನು ಇಳಿಸುವ ಕಾರಣ ಅಥವಾ ಮಂಗಗಳು ಆಸೆಯಿಂದ ತಿನ್ನುವ ಕಾರಣ ಇದು ಮಂಗನ ಬಳ್ಳಿ.
ಮನುಷ್ಯರಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ ಮಂಗಬಾವು ಎಂಬ ಗಂಟಲು ಭಾಗದಲ್ಲಿ ಉಬ್ಬುವ ಒಂದು ಮಾರಿ (ರೋಗ) ಉಂಟಾಗುತ್ತದೆ. ಅದಕ್ಕೆ ಇದರ ಬಾಲದಂತಾ ಆ ಎಳೆಗಳನ್ನ ತಂದು ಕಟ್ಟುತ್ತಾರೆ. ಮಂಗಬಾವಿಗೂ ಮಂಗನಿಗೂ ಏನು ಸಂಬಂಧವೋ ಗೊತ್ತಿಲ್ಲ. ಜನ ಮಂಗಗಳ ಬಾಲದ ರೀತಿಯ ಬೇರನ್ನೂ ಮಂಗಗಳು ಆಸೆಯಿಂದ ತಿನ್ನುವುದನ್ನೂ ನೋಡಿಯೇ ಇದರಲ್ಲಿ ಔಷಧವಿದೆಯೆಂದು ನಂಬಿರಲಿಕ್ಕೆ ಸಾಕು.
ಅಂದಹಾಗೆ ಇದರ ಸಸ್ಯಶಾಸ್ತ್ರೀಯ ಹೆಸರು ಮೆನಿಸ್ಪರ್ಮೇಶಿಯೆ. ಹಳದಿ ಬಣ್ಣದ ಹೂಗುಗುಚ್ಛಗಳು ಹೇರಳವಾಗಿ ಬಿಡುವ ಇದು ಕೆಂಪು ಹಣ್ಣುಗಳನ್ನು ಬಿಡುತ್ತದೆ. ಬೇಲಿ ಗಿಡಗಂಟೆಗಳು ಎಲ್ಲೆಂದರಲ್ಲಿ ಪುಷ್ಕಳವಾಗಿ ಇದು ಹಬ್ಬಿ ಬೆಳೆಯುತ್ತದೆ. ಮನೆ ಮಹಡಿಗಳಲ್ಲಿ ಮಣ್ಣಿನ ಪಾಟಿನಲ್ಲೂ ಬೆಳೆಸಬಹುದು. ಹಚ್ಚಹಸುರಿನ ಎಲೆಗಳಿಂದ ಮನೆಯ ಸೌಂದರ್ವನ್ನೂ ಹೆಚ್ಚಿಸುತ್ತದೆ.
ಹೇರಳವಾದ ಲವ್ ಮಾರ್ಕ್ ಎಲೆಗಳನ್ನು ಬಳ್ಳಿಯ ತುಂಬಾ ಚೆಲ್ಲುತ್ತದೆ. ಬಳ್ಳಿಯ ಎಲೆ ಬೇರು ಹಣ್ಣು ಎಲ್ಲವೂ ಅಮೃತವೇ…
- ಸುರೇಶ್ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು