April 20, 2024 10:54 am

ಬಿಟ್ಟಿ ಇಂಟರ್ ನೆಟ್ ಕೊಟ್ಟರೆ ಜನ ದೇಶಪ್ರೇಮಿಗಳಾಗುತ್ತಾರೆಯೇ?

“ಕೇಂದ್ರ ಸರ್ಕಾರ ಜನತೆಗೆ ಉಚಿತ ಪಡಿತರ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದು ದೇಶಕ್ಕೆ ಗಂಡಾಂತರವಾಗಿದ್ದು, ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಜಯ ಸಂಕೇಶ್ವರ ಅವರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ” ವರದಿಯಾಗಿದೆ. ಇದು ಯಥಾಸ್ಥಿತಿವಾದಿಗಳು, ಊಳಿಗಮಾನ್ಯ ಮನಃಸ್ಥಿತಿಯ ಜನರು ಹೇಗೆ ಯೋಚಿಸುತ್ತಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಮೊದಲನೆಯದಾಗಿ, ವಿಜಯ ಸಂಕೇಶ್ವರ ಅವರು ಕೊರೊನಾವನ್ನು ದೇಶದೊಳಕ್ಕೆ ತಂದುಕೊಳ್ಳಲು ಕಾರಣರಾದವರು ಯಾರು? ಆ ಅವಧಿಯಲ್ಲಿ ಆಳುವ ಸರ್ಕಾರ ಏನು ಮಾಡುತ್ತಿತ್ತು ಎಂಬ ಸಂಗತಿಯನ್ನು ದೇಶದ ಜನತೆಗೆ ವಿವರಿಸಬೇಕು. ಎರಡನೆಯದಾಗಿ, ಕೊರೊನಾವನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದ್ದನ್ನು ಸಂಕೇಶ್ವರ ಅವರು ಪ್ರಶ್ನಿಸಬೇಕು. ಮೂರನೆಯದಾಗಿ, ಬಡವರಿಗೆ ಉಚಿತವಾಗಿ ಪಡಿತರವನ್ನು ಕೊಟ್ಟರೆ ಅವರು ಹೇಗೆ ಗಂಡಾಂತರಕಾರಿ ಶಕ್ತಿಗಳಾಗಿ ಪರಿವರ್ತನೆಯಾಗುತ್ತಾರೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳನ್ನು ಕೊಡಬೇಕು. ಇಲ್ಲವಾದಲ್ಲಿ ದೇಶದ 80 ಕೋಟಿ ಜನರ ಕ್ಷಮೆ ಕೋರಬೇಕು. ನಾಲ್ಕನೆಯದಾಗಿ, ಇದೇ ದೇಶದಲ್ಲಿ ಉಚಿತವಾಗಿ ಇಂಟರ್ ನೆಟ್ ಕೊಟ್ಟ ಸಮಯದಲ್ಲಿ, ಆನ್ ಲೈನ್ ಆಪ್ ಗಳಲ್ಲಿ, ಐಷಾರಾಮಿ ಮಾಲ್ ಗಳಲ್ಲಿ, ಹಣದ ವಹಿವಾಟು ನಡೆಸುವ ವಿವಿಧ ಆಪ್ ಗಳಲ್ಲಿ ವಿವಿಧ ಆಫರ್ ಗಳನ್ನು ನೀಡುವ ಸಮಯದಲ್ಲಿ ಇದೇ ಸಂಕೇಶ್ವರ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.

ದೇಶದಲ್ಲಿ ಕೇಂದ್ರ ಸರ್ಕಾರ ಬೆಂಬಲಿತ ಉದ್ಯಮಿಯ ಸಂಸ್ಥೆಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಹೊಸದಾಗಿ ಮಾರುಕಟ್ಟೆಗೆ ಬಂದ ಟೆಲಿಕಾಂ ಕಂಪನಿಯೊಂದು ಬಿಟ್ಟಿ ಇಂಟರ್ ನೆಟ್ ಕೊಟ್ಟಾಗ ಕರುಳು ಚುರ್ ಎನ್ನದ ವಿಜಯ ಸಂಕೇಶ್ವರ ಅವರಿಗೆ, ಎರಡು ತಿಂಗಳು ಉಚಿತ ಪಡಿತರ ಕೊಡುತ್ತೇನೆ ಎಂದಾಗ ಚುರ್ ಎನ್ನುವುದು ಏಕೆ?

ಬಿಟ್ಟಿ ಇಂಟರ್ ನೆಟ್ ಕೊಟ್ಟರೆ ದೇಶದ ಜನ ಇವರ ವಿಜಯವಾಣಿ, ವಿ.ಆರ್.ಎಲ್. ಸಂಸ್ಥೆಗಳಿಗೆ ಕೆಲಸ ಮಾಡಲು ಬರುತ್ತಾರೆ. 2 ತಿಂಗಳು ಉಚಿತವಾಗಿ ಪಡಿತರ ಕೊಟ್ಟರೆ ಮಾಡುತ್ತಿರುವ ಕೆಲಸ ಬಿಟ್ಟು ಮನೆ ಸೇರಿಕೊಳ್ಳುತ್ತಾರೆ ಎನ್ನುವುದಕ್ಕೆ ಖಚಿತ ದಾಖಲೆಗಳನ್ನು ಅವರು ಕೊಡಬೇಕು.

ವಾಸ್ತವದಲ್ಲಿ ಬಿಟ್ಟಿ ಇಂಟರ್ ನೆಟ್ ಕೊಟ್ಟ ಮೇಲೆ ದೇಶದಲ್ಲಿ ಬೆಟ್ಟಿಂಗ್ ಜಾಲ, ಆನ್ ಲೈನ್ ಬೆಟ್ಟಿಂಗ್, ಅತ್ಯಾಚಾರ ಇತ್ಯಾದಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಜನ ನೆಮ್ಮದಿಯಾಗಿ ಹೊಟ್ಟೆತುಂಬ ಊಟ ಮಾಡಲಿ, ನೆಮ್ಮದಿಯಿಂದ ಇರಲಿ ಎಂಬ ಕಾರಣಕ್ಕೆ ಅನ್ನಭಾಗ್ಯ ಮತ್ತು 5 ರೂ.ಗೆ ಉಪಾಹಾರ, 10 ರೂ.ಗೆ ಊಟ ಕೊಟ್ಟಾಗ ಇಂತಹ ಸಮಸ್ಯೆಗಳು ಎದುರಾಗಿಲ್ಲ.

ಅನ್ನಭಾಗ್ಯ, ಉಚಿತ ಪಡಿತರ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳು ಈ ದೇಶದ ಮೇಲ್ಜಾತಿ, ಮೇಲ್ವರ್ಗದವರ ಕೆಂಗಣ್ಣಿಗೆ ಮೊದಲು ಗುರಿಯಾಗುತ್ತವೆ. ಅವರು ಇವುಗಳ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಾರೆ. ಏಕೆಂದರೆ, ಇವರಿಗೆ ಜನ ತಮ್ಮ ಬಳಿ ಬಂದು ಭಿಕ್ಷುಕರ ರೀತಿಯಲ್ಲಿ ಕೈಕಟ್ಟಿ, ಮಂಡಿಯೂರಿ ನಿಲ್ಲಬೇಕು. ಶೂದ್ರ, ದಲಿತ, ಶೋಷಿತ ಸಮುದಾಯದ ಜನ ಇವರ ಬಳಿ ಅಲೆದಾಡಬೇಕು. ಆಗಲೇ ಇವರ ಶ್ರೀಮಂತಿಕೆ, ಘನತೆ, ಐಶ್ವರ್ಯಗಳಿಗೆ ಒಂದು ಬೆಲೆ. ಬಡವರು ಗರ್ವದಿಂದ ತಲೆ ಎತ್ತಿ ದುಡಿದು ತಿಂದರೆ, ಈ ಮೇಲ್ವರ್ಗದವರಿಗೆ ತಿಂದ ಕೂಳು ಜೀರ್ಣವಾಗುವುದಿಲ್ಲ. ಇಷ್ಟು ವರ್ಷಗಳ ಕಾಲ ಇದೇ ರೀತಿಯ ಮನಃಸ್ಥಿತಿಯಲ್ಲೇ ಇವರು ಇದ್ದಾರೆ. ಇನ್ನು ಮುಂದೆ ಕೂಡ  ಅವರ ಇಂತಹ ನೀಚ ಮನಃಸ್ಥಿತಿಯಿಂದ ದೂರವಾಗಲಲಾರರು.

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಉಚಿತ ಪಡಿತರಗಳು ನಿಜಕ್ಕೂ ಜನರಿಗೆ ಅನುಕೂಲ ಮಾಡಿಕೊಟ್ಟಿವೆ. ಆದರೆ, ತಥಾಕಥಿತ ಕಥೆಗಳಂತಲ್ಲ. ಕುಟುಂಬಕ್ಕೆ ಅನ್ನಭಾಗ್ಯ ಸಿಕ್ಕ ತಕ್ಷಣ ಮುಗಿಯಿತೇ? 1 ಲೀಟರ್ ಅಡುಗೆ ಎಣ್ಣೆ ಬೆಲೆ 165 ರೂ., 1 ಲೀಟರ್ ಪೆಟ್ರೋಲ್ 93 ರೂ., ಅಡುಗೆ ಅನಿಲದ 1 ಸಿಲಿಂಡರ್ ಬೆಲೆ 820 ರೂ., ಗಳಿಗೆ ಏರಿಕೆಯಾಗಿದೆ. ಉಳಿದಂತೆ ಸೊಪ್ಪು, ತರಕಾರಿ, ಬೇಳೆಕಾಳು, ಹಾಲು, ಮೊಟ್ಟೆ, ಚಿಕನ್, ಮಟನ್ ಇತ್ಯಾದಿಗಳ ಬೆಲೆಗಳಲ್ಲಿ ಕೂಡ ಏರಿಕೆಯಾಗಿದೆ. ಪಡಿತರ ಕೊಟ್ಟರೆ ಇನ್ನುಳಿದವನ್ನು ಕೊಳ್ಳಬೇಕೋ ಬೇಡವೋ? ಇದಕ್ಕೆಲ್ಲ ಅಗತ್ಯವಿರುವ ಹಣವನ್ನು ವಿಜಯ ಸಂಕೇಶ್ವರ ಅವರು ತಮ್ಮ ಸಂಸ್ಥೆಯಲ್ಲಿ ದುಡಿದ ಹಣದಿಂದ ಆರ್.ಟಿ.ಜಿ.ಎಸ್. ಮೂಲಕ ದೇಶದ 80 ಕೋಟಿ ಜನರಿಗೆ ಹಣವನ್ನು ವರ್ಗಾಯಿಸುತ್ತಾರೆಯೇ?

ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ದೇಶದ ಅಸಂಘಟಿತ ವಲಯದ ದುಡಿಯುವ ಜನರನ್ನು ಮನೆಯಲ್ಲಿ ಬಲವಂತವಾಗಿ ಕೂಡಿಹಾಕಲಾಯಿತು. ಇಂತಹ ಸಮಯದಲ್ಲಿ ಬೀದಿಬದಿ ಹೂ, ಹಣ್ಣು, ತರಕಾರಿ, ಬುಟ್ಟಿ, ಪಾನಿಪುರಿ, ಇತರೆ ತಿಂಡಿಗಳನ್ನು ಮಾರಿ ಬದುಕುತ್ತಿದ್ದ ಜನ ಮತ್ತು ಇಂತಹ ಇನ್ನಿತರ ಜನರಿಗೆ ದುಡಿಮೆಯ ಅವಕಾಶವನ್ನೇ ಸರ್ಕಾರ ನಿರಾಕರಿಸಿತ್ತಲ್ಲವೇ? ಸರ್ಕಾರದ ಕೆಲಸ ಕೇವಲ ನೀತಿ ರೂಪಿಸುವುದಲ್ಲ; ಜನರಿಗೆ ಆರೋಗ್ಯ, ವಸತಿ, ಶಿಕ್ಷಣ, ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಇದರ ಭಾಗವಾಗಿ ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ಇದಕ್ಕೂ ತಕರಾರು ತೆಗೆಯುವವರು ಬಿಟ್ಟಿ ಇಂಟರ್ ನೆಟ್ ಕೊಟ್ಟದ್ದನ್ನೇಕೆ ವಿರೋಧಿಸುವುದಿಲ್ಲ?

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳಲ್ಲಿ ಏನೇ ಕೊರತೆಗಳಿರಲಿ. ಅವು ಜನೋಪಯೋಗಿ ಕಾರ್ಯಕ್ರಮಗಳು. ನನ್ನದೇ ಒಂದು ಉದಾಹರಣೆ ಇದೆ. ನಾನು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದವನು. ಹುಟ್ಟಿದ ಊರನ್ನು ತೊರೆದು ಬೆಂಗಳೂರು ಸೇರಿ 20 ವರ್ಷಗಳಾಗಿವೆ. ಈ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾಗುವ ಮುನ್ನ ನನ್ನೂರಿಗೆ ಹೋದ ಸಮಯದಲ್ಲಿ ಚಹಾ ಕುಡಿಸು, ತಿಂಡಿ ಕೊಡಿಸು, ಖರ್ಚಿಗೆ ಕೊಡು ಎಂದು ಕೇಳುವ ಜನರನ್ನು ನೋಡುತ್ತಿದ್ದೆ. ಆದರೆ, 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ಇಂತಹ ಪರಿಸ್ಥಿತಿ ಇಲ್ಲ. ಜನ ಸರ್ಕಾರ ಜಾರಿಗೆ ತಂದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಗೌರವದಿಂದ, ಗರ್ವದಿಂದ ಮತ್ತು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಇದರ ಜೊತೆಗೆ, ಮಕ್ಕಳಿಗೆ ಶಿಕ್ಷಣ, ಕುಟುಂಬದವರ ಆರೋಗ್ಯ, ಪ್ರವಾಸ, ಹಬ್ಬ, ಜಾತ್ರೆ, ಸಾವು, ನೋವು ಇತ್ಯಾದಿಗಳಿಗೆ ಬಡವರು ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ. ಉಚಿತ ಪಡಿತರ ಕೊಟ್ಟ ತಕ್ಷಣ ಅವರು ಸೋಮಾರಿಗಳಾಗುತ್ತಾರೆ ಎಂಬ ಇಂತಹ ಅವೈಜ್ಞಾನಿಕ, ಅತಾರ್ಕಿಕ, ಜೀವವಿರೋಧಿ ಹೇಳಿಕೆಗಳನ್ನು ಮಾನವಂತರೆಲ್ಲ ಖಂಡಿಸಬೇಕು.

ಬಸವಣ್ಣ ದಾಸೋಹ ಪರಿಕಲ್ಪನೆಯ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾನೆ. ಲಿಂಗಾಯತ ಸಮುದಾಯದಿಂದ ಬಂದವರು ಈ ರೀತಿಯ ಹೇಳಿಕೆ ನೀಡುವುದು ಬಸವದ್ರೋಹ ಮತ್ತು ಲಿಂಗಾಯತ ತತ್ವಕ್ಕೆ ಸಂಪೂರ್ಣ ವಿರುದ್ಧವಾದುದು. ವಿಜಯ ಸಂಕೇಶ್ವರ ಅವರ ಹೇಳಿಕೆಯನ್ನು ನೈಜ ಬಸವಾನುಯಾಯಿಗಳು ಖಂಡಿತ ಸಮರ್ಥಿಸಲಾರರು.

ಮೇಲ್ಜಾತಿಯವರಿಗೆ ತಳಸಮುದಾಯದ ಜನರು ಗೌರವದಿಂದ, ಗರ್ವದಿಂದ ಮತ್ತು ಸ್ವಾವಲಂಬಿ ಜೀವನ ನಡೆಸುವುದು ಇಷ್ಟವಿಲ್ಲ. ಆದ್ದರಿಂದಲೇ ಜನರಲ್ಲಿ ಬಿಟ್ಟಿ ಅಕ್ಕಿಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ ಎಂಬ ಕಥೆಯನ್ನು ಹಬ್ಬಿಸುತ್ತಾರೆ. ಅದು ಎಲ್ಲರಲ್ಲೂ ಹಬ್ಬಿ ಕಡೆಗೆ ಜನಾಭಿಪ್ರಾಯವೇ ರೂಪುಗೊಳ್ಳುತ್ತದೆ. ಇವರು ಹೇಳುವುದು ನಿಜವೇ ಆಗಿದ್ದರೆ, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಗೌತಮ್ ಅದಾನಿ, ಮಿತ್ತಲ್, ಟಾಟಾ, ಬಿರ್ಲಾ, ಅಜೀಂ ಪ್ರೇಂಜಿ, ಸ್ವತಃ ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಮೊದಲಾದವರು ಯಾಕೆ ಇದುವರೆಗೂ ಸೋಮಾರಿಗಳಾಗಿಲ್ಲ? ಏಕೆಂದರೆ, ಇನ್ನೂ 10 ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿಯನ್ನು ಇವರು ಗಳಿಸಿದ್ದಾರೆ. ಆದರೂ ಇವರ ಉದ್ಯಮ ಸಾಮ್ರಾಜ್ಯ ವಿಸ್ತರಣೆ ನಿಂತಿಲ್ಲ. ಅದೇ ದೇಶದ ಬಡವರಿಗೆ ಉಚಿತ ಪಡಿತರ ಕೊಟ್ಟರೆ ಅವರು ಸೋಮಾರಿಗಳಾಗುವುದು, ದೇಶಕ್ಕೆ ಗಂಡಾಂತರವಾಗುವುದು ಹೇಗೆ? ಇದಕ್ಕೆ ವಿಜಯ ಸಂಕೇಶ್ವರ ಅವರು ಸ್ಪಷ್ಟೀಕರಣ ನೀಡಬೇಕು.

  • ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ