September 22, 2023 1:04 am

ಬಂಗಾರದ ಮನುಷ್ಯನ ಜನುಮದಿನ

ಸುಮ್ಮನೆ ಮುತ್ತುರಾಜನ ಗೀತೆಗಳನ್ನ ಕೇಳುತ್ತಾ ಸಿನಿಮಾಗಳನ್ನ ನೋಡುತ್ತಾ ಹೊತ್ತುಗಳೆಯಬೇಕೆನಿಸತ್ತೆ. ನನ್ನನ್ನು ಆವರಿಸಿಕೊಂಡಿರುವ ನಟ. ಈ ನೆಲದ ಜೀವಸತ್ವವನ್ನು ನಟನೆಯಲ್ಲಿ ನಡೆಯಲ್ಲಿ ಉಣಬಡಿಸಿದ ಮೇರು ಮಾನವ.

ಹತ್ತಿಕ್ಕಲು ನಡೆಸಿದ ಮೇಲ್ವರ್ಗೀಯ ಪ್ರಯತ್ನಗಳೆಲ್ಲವನ್ನೂ ಮೀರಿ ಬೆಳೆದ ಜನತೆಯ ರಾಜ. ಈಗಲೂ ರಾಜ್ಕುಮಾರನ ಹೆಸರಿಗೆ ಮಸಿ ಬಳೆಯುವ ಯತ್ನಗಳೇನು ನಿಂತಿಲ್ಲ. ಆದರೆ ಯಾರೊಬ್ಬರೂ ಸುಲಭಕ್ಕೆ ಮಾತನಾಡಲಾಗದಂತೆ ಕಲೆಯ ಕಾಯಕದ ಮೂಲಕವೇ ದಾರ್ಶನಿಕನಂತೆ ಬಾಳಿ ಬದುಕಿ ಬಾಯಿ ಮುಚ್ಚಿಸಿದ ಸನ್ಮಾರ್ಗಿ…

ರಾಜ್ ಸಿನಿಮಾಗಳನ್ನು ನೋಡುವುದ ರೂಢಿ ಮಾಡಿಕೊಂಡರೆ ಮನದ ವಿಕಾರಗಳು ಮರೆಯಾಗುತ್ತವೆ. ನಮ್ಮರಿವಿಗೆ ಬಾರದಂತೆ ನಮ್ಮೊಳಗೊಂದು ಚೈತನ್ಯ, ನಡೆ ನುಡಿಯಲ್ಲಿ ಸಭ್ಯತೆ ನಮ್ರತೆ ಮಾಧುರ್ಯ ಭಾಷೆಯ ಬಳಕೆಯ ಲಾಲಿತ್ಯ ಎಲ್ಲವೂ ತಾನೇ ತಾನಾಗಿ ಬರುತ್ತವೆ. ಹೆಣ್ಣನ್ನು ತಾಯಾಗಿ ತಂಗಿಯಾಗಿ ಅಕ್ಕನಾಗಿ ನಲ್ಲೆಯಾಗಿ ಹೇಗೆ ಪ್ರೇಮಿಸಬಹುದು ನಡೆದುಕೊಳ್ಳಬಹುದು ನಡೆಸಿಕೊಳ್ಳಬಹುದು ಎಂಬ ತಿಳುವಳಿಕೆ ಒಳಗೊಳಗೇ ತಣ್ಣಗೆ ಮೂಡುತ್ತದೆ.

ದಾಂಪತ್ಯದ ಪ್ರೇಮ, ಕುಟುಂಬದೊಂದಿಗಿನ ಮಾನವೀಯ ಸಂಬಂಧಗಳು, ಸಮಾಜದೊಟ್ಟಿಗೆ ಮನುಷ್ಯನ ಸಂಬಂಧಗಳು ಆಡುವ ಮಾತು ವರ್ತಿಸುವ ರೀತಿ ತೋರಬೇಕಾದ ಕಾಳಜಿಗಳು ಹೇಗಿರಬೇಕು ಎಂಥವಿರಬೇಕು ಎಂಬುದನ್ನು ರಾಜ್ ಕುಮಾರರ ಅಭಿನಯ ಅವರ ಚಿತ್ರಕತೆಗಳು ಗೀತ ಸಾಹಿತ್ಯದಿಂದ ಕಲಿಯಬೇಕು.

ರಾಜ್ ಜೀವಿಸಿದ ಜೀವನದ ಸುತ್ತ ಎಲ್ಲಿ ಹುಡುಕಿದರೂ ಬೆದಕಿದರೂ ಸಿಗುವುದು ಆ ಮನುಷ್ಯನ ಮೇಲೆ ಗೌರವ ಹುಟ್ಟಿಸುವ ಸಂಗತಿಗಳೇ. ಎಸ್ ಎಲ್ ಭೈರಪ್ಪನಂಥವರು ನಿರ್ದೇಶಕರಾದ ದೊರೆ ಭಗವಾನರಿಗೆ ತಮ್ಮದೊಂದು ಕಾದಂಬರಿಯನ್ನು ಸಿನಿಮಾ ಮಾಡುವ ಉದ್ಧೇಶಕ್ಕೆ ಅವರಲ್ಲಿ ವಿಚಾರಿಸಲು ಹೋದಾಗ ತಾವು ನಿರ್ದೇಶಿಸಲಿರುವ ಸಿನಿಮಾಕ್ಕೆ ರಾಜ್ಕುಮಾರ್ ಅವರು ನಾಯಕ ಎಂದಾಗ ಭೈರಪ್ಪ ಕನಲಿ “ಆ ರಾಜ್ಕುಮಾರ್ ಒಬ್ಬ ನಟಯೇನ್ರಿ…?” ಎಂದು ಕೇವಲವಾಗಿ ಮಾತನಾಡಿದ್ದರೆಂದು ಭಗವಾನರೇ ಸಂದರ್ಶನವೊಂದರಲ್ಲಿ ಕೇಳಿದ್ದೆ. ಬಹುಶಃ ಈ ಭೈರಪ್ಪ ಯಾರನ್ನಾಗಿದ್ದರೆ ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದರು ಎಂದು ಬೇರೆ ಹೇಳಬೇಕಿಲ್ಲ.

ಭೈರಪ್ಪನಂತ ಮನಸ್ಥಿತಿಯ ನಿರ್ದೇಶಕರು ನಿರ್ಮಾಪಕರು ಇಡೀ ಸಿನಿಮಾರಂಗವನ್ನೇ ತುಂಬಿಕೊಂಡಿದ್ದಾಗ ಶೂದ್ರನೊಬ್ಬ ತನ್ನ ವಿನಯ ಅಸಾಧಾರಣ ಕಲೆಯ ಮೂಲಕವೇ ನಾಡವರ್ಗಳ ಮನ ಗೆದ್ದ. ಈ ಮೇಲ್ಜಾತಿಯ ಕೆಲ ಸಿನಿಮಾ ಮಂದಿಗೆ ರಾಜ್ ಅಕ್ಷಯ ಪಾತ್ರೆಯೇ ಆಗಿದ್ದರು. ಅವರೆಲ್ಲರು ರಾಜರನ್ನು ಉಪಯೋಗಿಸಿಕೊಂಡು ಅಪಾರವಾಗಿ ಲಾಭಗಳಿಸಿಕೊಂಡರು. ರಾಜ್ ಅವರ ಪಾಲಿನ ಚಿನ್ನದ ಗಣಿಯಾಗಿದ್ದರು. ಅಕ್ಷರಶಃ ಮುಗ್ಧರಾಗಿದ್ದ ರಾಜ್ ಹಣದ ಹಪಾಹಪಿಗೆ ಬಿದ್ದವರಲ್ಲ. ತನ್ನ ಸಿನಿಮಾಗಳು ಎಷ್ಟು ಹಣ ಗಳಿಸುತ್ತಿವೆಯೆಂಬ ಬಗ್ಗೆ ಯೋಚಿಸಿದವರಲ್ಲ. ಕಲೆಯೇ ಕಾಯವೆಂದು ದುಡಿಯುತ್ತಿದ್ದ ಬಡವ. ಪಾರ್ವತಮ್ಮ ವರದರಾಜರಂತಹಾ ವ್ಯಕ್ತಿಗಳು ರಾಜ್ ಜೊತೆ ಇರದೇ ಹೋಗಿದ್ದರೆ ಅವರದೇ ಬ್ಯಾನರ್ ಮೂಲಕ ಸಿನಿಮಾಗಳನ್ನು ತರದೇ ಹೋಗಿದ್ದರೆ ರಾಜ್ ರವರ ಆರ್ಥಿಕ ಸ್ಥಿತಿ ಏನಾಗಿರುತ್ತಿತ್ತೋ? ಆ ನಟನ ಅಸಾಧಾರಣ ಕಲೆ ತನ್ನ ಜೇಬು ತುಂಬಿಕೊಂಡದ್ದಕ್ಕಿಂತ ತನ್ನನ್ನು ಬಳಸಿಕೊಂಡವರ ಕಣಜ ತುಂಬಿದ್ದೇ ಹೆಚ್ಚು.

ಇಡೀ ಕನ್ನಡ ಚಿತ್ರರಂಗವನ್ನು ನಾದಮಯಗೊಳಿಸಿದ್ದು ರಾಜ್ ಎಂಬ ಪ್ರತಿಭೆ. ಎಂದೆಂದಿಗೂ ರಾಜ್ ಏಕೆ ಉಳಿಯುತ್ತಾರೆಂದರೆ‌ ಅವರು ಕರುನಾಡಿನ ಜನರ ಹೃದಯ ಸಿಂಹಾಸನದ ಮೇಲೆ ಏರಿ ಕೂತಿಲ್ಲ. ಅವರು ಜನತೆಯ ಮೈಮನಸ್ಸನ್ನು ಆವರಿಸಿಕೊಂಡಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಆವರಿಸಿಕೊಳ್ಳುತ್ತಲೇ ಹೋಗುತ್ತಾರೆ‌. ರಾಜ್ ಎಂಬ ಮೇರು ಪ್ರತಿಭೆ ಇಲ್ಲದೇ ಹೋಗಿದ್ದರೆ ಇಡೀ ಕನ್ನಡಿಗರ ಮನಸ್ಸನ್ನು ನೆರೆಯ ತೆಲುಗು ತಮಿಳು ನಟರು ಆವರಿಸಿಕೊಳ್ಳುತ್ತಿದ್ದರು. ರಾಜ್ ತಾನು ಹೀಗೆಲ್ಲಾ ಆಗಬೇಕೆಂದು ನಟಿಸಿದವರಲ್ಲ. ಕಲೆಯ ಕಾಯಕಕ್ಕಾಗಿ ಬಂದವರು. ತಾನು ಇತಿಹಾಸವಾಗಬೇಕು ತಾನು ಇನ್ನೇನೋ ಆಗಬೇಕು ಎಂದುಕೊಂಡು ಬಂದಿದ್ದರೆ ರಾಜ್ ಬಹುಶಃ ನಮಗೆ ದಕ್ಕುತ್ತಿರಲಿಲ್ಲ. ಕಲಾ ಜೀವನದುದ್ದಕ್ಕೂ ಅವರು ತೋರಿದ ವಿನಯ ವಿನಮ್ರತೆ ಸರಳತೆ ಕಾರುಣ್ಯದ ನಡವಳಿಕೆ ದೊಡ್ಡತನದ ನಡವಳಿಕೆಗಳು ಅನುಕರಣೀಯ ಆದರಣೀಯ. ಈಗಿನ ನಮಗೆಲ್ಲಾ ಬಹುದೊಡ್ಡ ನೀತಿ ಪಾಠ.

ರಾಜರನ್ನು ಇಲ್ಲಿ ಅತ್ಯಂತ ರೊಮ್ಯಾಂಟಿಕ್ ಆಗಿ ವರ್ಣಿಸಬಹುದು ಆದರೆ ಅದರಾಚೆಯ ರಾಜಕುಮಾರನನ್ನು ಮರೆಮಾಚಿದಂತಾಗುತ್ತದೆ.‌..

ಈ ಸನಾದಿ ಅಪ್ಪಣ್ಣನನ್ನು

ಈ ಚೆಂಗುಮಣಿಯನ್ನು

ಈ ಪಂಜೂ….ವನ್ನು

ಈ ಭದ್ರನನ್ನು

ಈ ಬೀರನನ್ನು

ಈ ರಾಜೀವಪ್ಪನನ್ನು

ಈ ಇಮ್ಮಡಿ ಪುಲಿಕೇಶಿಯನ್ನು

ಈ ಕೃಷ್ಣದೇವರಾಯ

ಈ ರಣಧೀರ ಕಂಠೀರವ

ಈ ಹರಿಶ್ಚಂದ್ರ

ಈ ಮಯೂರ

ಈ ಬಬ್ರುವಾಹನನ್ನು ಮೇಲಾಗಿ,

ಈ ಕನಕ ಈ ತುಕಾರಾಮ

ಈ ಬೇಡರ ಕಣ್ಣನನ್ನು ಎಲ್ಲರೂ ಮೈದಾಳಿದ ಮೂರ್ತರೂಪ ಈ ‘ಬಂಗಾರದ ಮನುಷ್ಯ’ನನ್ನು ಏನೇನೆಂದು ಬಣ್ಣಿಸಲಿ?

– ಸುರೇಶ ಎನ್ ಶಿಕಾರಿಪುರ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು