March 25, 2023 5:25 pm

ಜನತೆಯ ಶತೃ ಮತ್ತು ಜನಪರರ ಆಯ್ಕೆ ಬೆಳಗಾವಿ ಜನತೆಯ ಮುಂದಿದೆ

ರಾಜಕಾರಣವೆಂದರೆ ಕೆಂಡಕಾರುವ ಭಾಷಣ, ವಿರೋಧಿಗಳ ಚಾರಿತ್ರ್ಯ ಹನನ, ವೈಯಕ್ತಿಕ ತೇಜೋವಧೆ, ಕುಚೋದ್ಯ, ಕುಯುಕ್ತಿ, ವ್ಯಂಗ್ಯ, ಹಣ, ಹೆಂಡ, ಸ್ವಜನರ ಓಲೈಕೆ, ಧರ್ಮಗಳ ನಡುವೆ ಜನರನ್ನು ಎತ್ತಿಕಟ್ಟುವ ಕೆಲಸ ಎಂಬಂತಹ ದುಃಸ್ಥಿತಿ ಕಂಡುಬರುತ್ತಿದೆ. ಇಂತಹ ಕೆಟ್ಟ ಕಾಲದಲ್ಲಿ ಇವೆಲ್ಲವನ್ನೂ ಬಿಟ್ಟು ಮತ್ತೊಂದು ರೀತಿಯಲ್ಲಿ ಸದ್ಯಕ್ಕೆ ಒಂದು ಕ್ಷೇತ್ರದ ಚುನಾವಣೆಯನ್ನು ಒಬ್ಬ ವ್ಯಕ್ತಿ ನಡೆಸುತ್ತಿದ್ದಾರೆ. ಅದನ್ನು ಸಾಧ್ಯವಾಗಿಸಿರುವುದು ಯಮಕನಮರಡಿ ಶಾಸಕ, ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ.

ಹೌದು, ಬೆಳಗಾವಿ ಲೋಕಸಭೆಗೆ ಉಪಚುನಾವಣೆ ನಡೆಯುತ್ತಿದೆ. ದೇಶದಲ್ಲಿ ಕೊರೊನಾವನ್ನು ಪ್ರವೇಶಿಸಲು ಎಲ್ಲ ಅವಕಾಶಗಳನ್ನು ತೆರೆದಿಟ್ಟು, ತಮ್ಮ ಪಕ್ಷದ ಉದ್ಧಾರಕ್ಕಾಗಿ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಕೇಂದ್ರ ಸರ್ಕಾರ ಕಡೆಗೆ ಲಾಕ್ ಡೌನ್ ಘೋಷಣೆ ಮಾಡಿತ್ತು. ಒಮ್ಮೆ ಹಿಂದಕ್ಕೆ ತಿರುಗಿ ನೋಡಿ. ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಕೆಡವಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವವರೆಗೆ ಲಾಕ್ ಡೌನ್ ಘೋಷಣೆಯಾಗಲಿಲ್ಲ.

ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಗುಜರಾತ್ ಗೆ ಕರೆಸಿ, ಗುಜರಾತ್ ನ ಕೊಳಕು ಅವರ ಕಣ್ಣಿಗೆ ಕಾಣಬಾರದು ಎಂಬ ಕಾರಣಕ್ಕೆ ಗೋಡೆ ಕಟ್ಟಿಸಿ, ಅಮೆರಿಕ ಚುನಾವಣೆಗಾಗಿ ಭಾರತದಲ್ಲಿ ಪ್ರಚಾರ ನಡೆಸಲು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ನಡೆಸುವವರೆಗೆ ಲಾಕ್ ಡೌನ್ ಘೋಷಣೆಯಾಗಲಿಲ್ಲ.

ಇವೆಲ್ಲ ಮುಗಿದಮೇಲೆ ತರಾತುರಿಯಲ್ಲಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಯಿತು. ಬಂಧುಗಳೇ, ಒಮ್ಮೆ ನೀವು ಪ್ರಧಾನಿ ಸ್ಥಾನದಲ್ಲಿ ನಿಂತು ಲಾಕ್ ಡೌನ್ ಘೋಷಣೆಯಾದ ಸಮಯ ಮತ್ತು ರೀತಿಯನ್ನು ಆಲೋಚಿಸಿ. ಒಂದು ವೇಳೆ ನೀವೇ ಪ್ರಧಾನಿಯಾಗಿದ್ದರೆ, ಹೀಗೆ 8 ಗಂಟೆಗೆ ಭಾಷಣ ಮಾಡಿ, 12 ಗಂಟೆಯಿಂದ ಲಾಕ್ ಡೌನ್ ಘೋಷಿಸುತ್ತಿದ್ದಿರಾ?

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಕಾರಣಕ್ಕೆ ಜನ ಹೊರಗಡೆ ಇರುತ್ತಾರೆ. ಇಂತಹ ಜನ ಕೇವಲ 4 ಗಂಟೆಯ ಒಳಗೆ ಮನೆ ತಲುಪುವುದು ಹೇಗೆ ಸಾಧ್ಯ? ಎಂಬ ಸಣ್ಣ ಪ್ರಶ್ನೆಯನ್ನು ಈ ದೇಶವನ್ನು ಆಳುವ ಪ್ರಧಾನಿ ಕೇಳಿಕೊಳ್ಳಲಿಲ್ಲ. ಲಾಕ್ ಡೌನ್ ವೇಳೆ ಎಲ್ಲವೂ ಬಂದ್ ಆದವು. ಆಗ ಅನೇಕ ಕಾರಣಕ್ಕೆ ಹೊರಗಡೆ ಇದ್ದ ನಾಗರಿಕರು ಬದುಕುವುದು ಹೇಗೆ ಎಂಬ ಸಾಮಾನ್ಯ ಪ್ರಶ್ನೆ ಕೇಂದ್ರ ಸರ್ಕಾರಕ್ಕೆ ಏಳಲೇ ಇಲ್ಲ.

ಮುಂದಿನದು ರಣಭೀಕರ ದೃಶ್ಯ. ದೇಶದ ಜನ ಸಾವಿರಾರು ಕಿ.ಮೀ. ನಡೆದುನಡೆದು ಮನೆತಲುಪಲು ಹೆಣಗಿದರು. ಗುರಿ ತಲುಪಲಾಗದೆ ನೂರಾರು ಜನ ಹೆಣವಾದರು. ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ನಡೆಸಿದ ದುರುದ್ಧೇಶಪೂರಿತ ಮಾರಣಹೋಮ.

ಜನತೆಯ ಶತೃ ಸರ್ಕಾರ, ರಾಜಕಾರಣ ಮಾತ್ರ ಇಂತಹ ಹತ್ಯೆಗೆ ಹೇಸುವುದಿಲ್ಲ. ಬಡವರಿಗೆ ನೀರು, ನೆರಳು, ವಸತಿ, ಸಾರಿಗೆ ಸೌಕರ್ಯ ಸಿಗದಂತೆ ಅವೈಜ್ಞಾನಿಕ ಲಾಕ್ ಡೌನ್ ಘೋಷಣೆ ಮಾಡಿದ್ದೇ ಈ ಸರ್ಕಾರದ ಕ್ರೂರ ಮನಸ್ಥಿತಿಗೆ ಒಂದು ಉದಾಹರಣೆ. ಇದರಿಂದಾಗಿ ಬಡವರು, ದೀನರು, ದಲಿತರು, ಶೋಷಿತರು ಬಲಿಯಾದದ್ದು ಒಂದು ಹಂತ.

ಇನ್ನೊಂದು ಹಂತದಲ್ಲಿ ಜನರನ್ನು ತಿಂಗಳುಗಟ್ಟಲೆ ಮನೆಯಲ್ಲಿ ಕೂಡಿ ಹಾಕಿ ಅವರನ್ನು ದುಡಿಯದಂತೆ ಮಾಡಿದ ಕೀರ್ತಿ ಕೂಡ ಕೇಂದ್ರ ಸರ್ಕಾರ ಮತ್ತು ಪ್ರಧಾನಿಗೆ ಸಲ್ಲಬೇಕು. ಆ ಮೂಲಕ ಕೊರೊನಾವನ್ನು ದೇಶದೊಳಕ್ಕೆ ಬರಮಾಡಿಕೊಂಡು, ಅನಂತರ ತನ್ನ ತಪ್ಪು ನಿರ್ಧಾರದ ದುರಂತವನ್ನು ದೇಶದ ಜನರ ಮೇಲೆ ಹೇರಲಾಗಿತ್ತು.

ಕೊರೊನಾ ಪ್ರವೇಶಿಸುವ ಮುನ್ನ ರಾಹುಲ್ ಗಾಂಧಿ ಒಂದು ಕಿವಿಮಾತನ್ನು ಕೇಂದ್ರ ಸರ್ಕಾರಕ್ಕೆ ಹೇಳಿದ್ದರು. 2006ರ ಸುನಾಮಿ ಹೊಡೆತದ ಉದಾಹರಣೆ ನೀಡಿದ್ದ ರಾಹುಲ್ ಗಾಂಧಿ, ಜನ ಸಮುದ್ರದಲ್ಲಿ ನೀರು ಖಾಲಿಯಾದಾಗ ಮೀನು ಆರಿಸಲು ಮುಂದಾದರು. ಆದರೆ, ಖಾಲಿಯಾದ ನೀರು ಮತ್ತೆ ಬರುವುದರತ್ತ ಅವರ ಗಮನವಿರಲಿಲ್ಲ. ಕೊರೊನಾದಿಂದ ಎದುರಾಗುವ ಆರ್ಥಿಕ ಸುನಾಮಿ ಕಡೆಗೆ ಗಮನ ನೀಡಬೇಕು ಎಂಬುದು ಅವರ ಸಲಹೆಯಾಗಿತ್ತು. ಆದರೆ, ಕೇಂದ್ರ ಸರ್ಕಾರ, ಮಾಧ್ಯಮಗಳು ಹೊಣೆಗೇಡಿಗಳಾಗಿ ವರ್ತಿಸಿದವು.

ಅನಂತರ ದೇಶದ ಜಿಡಿಪಿ – 23.8ಕ್ಕೆ ಕುಸಿಯಿತು. ಕೋಟ್ಯಂತರ ಉದ್ಯಮಗಳು ಬೀಗಹಾಕಿದವು. ಆದರೆ, ಅದಾನಿ ಮತ್ತು ಅಂಬಾನಿಯರು ಏಷ್ಯಾದ ಅತ್ಯಂತ ಶ್ರೀಮಂತರಾದರು. ದೇಶದ 135 ಕೋಟಿ ಜನ ಸಂಕಷ್ಟಕ್ಕೆ ಸಿಲುಕಿದರೆ, ಇಬ್ಬರು ಸಿರಿವಂತರಾದರು. ಒಮ್ಮೆ ಆಲೋಚಿಸಿ, ನಮ್ಮ ಉದ್ಯೋಗ ಕಿತ್ತುಕೊಂಡು ಮನೆಯಲ್ಲಿ ಕೂಡಿಹಾಕಿದಾಗ ನಮ್ಮ ಮೊಬೈಲ್ ರಿಚಾರ್ಜ್, ಕೇಬಲ್, ಡಿಶ್ ರಿಚಾರ್ಜ್ ಮಾಡಿಸಲೇಬೇಕಿತ್ತು. ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಉಚಿತ ಸೇವೆ ಕೊಡಿಸಲು ಮುಂದಾಗಲಿಲ್ಲ. ಅಲ್ಲದೇ, ಲಾಕ್ ಡೌನ್ ಅವಧಿಯಲ್ಲಿ ಹೃದ್ಯೋಗ, ಡಯಾಲಿಸಿಸ್, ಅಧಿಕ ರಕ್ತದ ಒತ್ತಡ, ಸಕ್ಕರೆ ರೋಗ ಇದ್ದ ರೋಗಿಗಳಿಗೆ ಮತ್ತು ವಯೋವೃದ್ಧರಿಗೆ ಚಿಕಿತ್ಸೆ ಸಿಗಲಿಲ್ಲ. ಇಂತಹ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಜನರನ್ನು ದೂಡಿತು.

ಇದಕ್ಕೂ ಮುನ್ನ ಎನ್.ಡಿ.ಎ.ಯ ಮೊದಲನೇ ಅವಧಿಯಲ್ಲಿ ಒಂದೆಡೆ ಅವೈಜ್ಞಾನಿಕ ನೋಟು ನಿಷೇಧ ಮತ್ತು ಜಿ ಎಸ್ ಟಿ ಜಾರಿ, ಅನಂತರದ ನಿರುದ್ಯೋಗದ ಏರಿಕೆ, ಬೆಲೆ ಏರಿಕೆಯ ನಿಯಂತ್ರಣದಲ್ಲಿ ಸರ್ಕಾರ ಸೋತಿತ್ತು. ಆದರೂ ಪುಲ್ವಾಮ ಹೆಸರಲ್ಲಿ 2ನೇ ಅವಧಿಗೆ ಚುನಾವಣಾ ಆಯೋಗದ ಎಲ್ಲ ನೀತಿ, ನಿರ್ದೇಶನಗಳನ್ನು ಮೀರಿ ಅಧಿಕಾರಕ್ಕೆ ಬಂದಿತ್ತು.

ಬಂದ ನಂತರ ಜನವಿರೋಧಿ ಕಾಯ್ದೆಗಳಾದ ಸಿಎಎ, ವಿವಾದಾಸ್ಪದ ಮೂರು ಕೃಷಿ ಮಸೂದೆಗಳು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಪಿಎಂಸಿ ಮಸೂದೆ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆ, ಭೂಮಿತಿ ಕಾಯ್ದೆಗೆ ತಂದ ತಿದ್ದುಪಡಿಗಳು ಜನರನ್ನು ಆತ್ಯಂತಿಕ ಮಟ್ಟದಲ್ಲಿ ಬೀದಿಗೆ ತಳ್ಳುವ ವ್ಯವಸ್ಥಿತ ಹುನ್ನಾರಗಳಾಗಿದ್ದವು.

ಕೃಷಿ ಮಸೂದೆಗಳಿಗೆ 2020ರ ಜೂನ್ ತಿಂಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಅನಂತರ ನಡೆದ ಸಂಸತ್ ಅಧಿವೇಶನದಲ್ಲಿ ಯಾವುದೇ ಚರ್ಚೆ ಇಲ್ಲದೆ ಮಸೂದೆಗಳಿಗೆ ಅಂಗೀಕಾರ ಪಡೆಯಲಾಯಿತು. ಅನಂತರ ರೈತ ಹೋರಾಟಗಾರರು ದೆಹಲಿ ಗಡಿಯಲ್ಲಿ ಬೀಡುಬಿಟ್ಟು ಕೇಂದ್ರದ ವಿರುದ್ಧ ಐತಿಹಾಸಿಕ ಹೋರಾಟ ಆರಂಭಿಸಿದರು. ಮೂರು ಮಸೂದೆಗಳು ರೈತರನ್ನು ಮತ್ತು ದೇಶದ ಜನರನ್ನು ಒಟ್ಟಿಗೆ ಬಡವರು, ನಿರ್ಗತಿಕರನ್ನಾಗಿಸುವ ಹುನ್ನಾರ. ಇದರ ಹಿಂದೆ ರೈತರಿಗೆ ಸಿಗುತ್ತಿರುವ ಕನಿಷ್ಠ ಬೆಂಬಲ ಬೆಲೆ, ಪಡಿತರ ಆಹಾರ, ಬಡವರು ಮತ್ತು ಶೋಷಿತರ ಮಕ್ಕಳಿಗೆ ಸಿಗುತ್ತಿರುವ ಮಧ್ಯಾಹ್ನದ ಬಿಸಿಯೂಟ ರದ್ದು ಮೊದಲಾದ ಜನವಿರೋಧಿ ಕಾರ್ಯಸೂಚಿಯಾಗಿವೆ. ಜೊತೆಗೆ, ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಒಪ್ಪಂದ ಕೃಷಿ ಮತ್ತು ಕಾಳಸಂತೆಗೆ ಅಧಿಕೃತ ಅಂಗೀಕಾರ ನೀಡುವ ಅಗತ್ಯ ಸರಕು ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತು.

ಇವುಗಳ ವಿರುದ್ಧ ಚಳಿಯಲ್ಲಿ ಹೋರಾಟ ಆರಂಭಿಸಿದ ರೈತರು, ಇದೀಗ ರಣಬಿಸಿಲಿನ ಅವಧಿಯಲ್ಲಿ ಕೂಡ ಮನೆಗೆ ಮರಳದೆ ಹೋರಾಟ ನಡೆಸುತ್ತಿದ್ದಾರೆ. 250ಕ್ಕೂ ಹೆಚ್ಚು ರೈತರು ಹೋರಾಟದ ಸ್ಥಳದಲ್ಲೇ ಬಲಿಯಾಗಿದ್ದಾರೆ. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಜಾರಿಗೆ ತದೇ ತರುವುದಾಗಿ ಹೇಳುತ್ತಿದೆ. ರೈತರ ಹೋರಾಟ ವಿಷಯದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ನಲ್ಲಿ, ಸದನದಲ್ಲಿ, ಮಾಧ್ಯಮಗಳ ಮುಂದೆ ಬಿಜೆಪಿ ಮತ್ತು ಅದರ ನಾಯಕರು ದೇಶದ ರೈತರು ಮಸೂದೆಗಳ ಪರವಾಗಿದ್ದಾರೆ ಎಂದು ಸುಳ್ಳು ಹೇಳಿದೆ. ಆದರೆ, ಜನವರಿ 26, 2021ರಂದು ದೇಶದ 17 ರಾಜ್ಯಗಳಲ್ಲಿ ಕೇಂದ್ರದ ಕರಾಳ ಮಸೂದೆಗಳ ವಿರುದ್ಧ ರೈತರು ಹೋರಾಡಿದ್ದಾರೆ. ಅನಂತರ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೆರಿ ಮತ್ತು ಉಪಚುನಾವಣೆಗಳು ನಡೆಯುತ್ತಿರುವ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ರೈತರ ಹೋರಾಟಗಾರರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮುಂದುವರಿಸಿದ್ದಾರೆ.

ಬೆಳಗಾವಿ ಉಪಚುನಾವಣೆ ಈ ಎಲ್ಲ ಬೆಳವಣಿಗೆಗಳಿಂದ ಮಹತ್ವ ಪಡೆದುಕೊಂಡಿದೆ. ಏಕೆಂದರೆ, ದೇಶದ ಜನರ ವಿರುದ್ಧ ಕಾಯ್ದೆಗಳನ್ನು ರೂಪಿಸಿರುವ ಕೇಂದ್ರ ಸರ್ಕಾರ, ಜನರ ಪ್ರತಿಭಟನೆಯನ್ನು ಪರಿಗಣಿಸುತ್ತಿಲ್ಲ. ಬದಲಾಗಿ ದೇಶದ ಜನ ಮಸೂದೆಗಳ ಪರವಾಗಿದ್ದಾರೆ ಎಂದು ಸುಳ್ಳು ಹೇಳುತ್ತಿದೆ.

ದುರಂತವೆಂದರೆ, ಸತ್ಯದ ತಲೆಯ ಮೇಲೆ ಹೊಡೆದಂತೆ ಲೋಕಸಭೆ, ರಾಜ್ಯಸಭೆಯಲ್ಲಿ, ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ, ಮಾಧ್ಯಮಗಳ ಮುಂದೆ ಬಿಜೆಪಿ, ಕೇಂದ್ರ ಸರ್ಕಾರ, ಸ್ವತಃ ಪ್ರಧಾನಿ ನರೇಂದ್ರ ಮೋದಿ ವಿವಾದಾಸ್ಪದ ಮಸೂದೆಗಳ ಪರವಾಗಿ ದೇಶದ ಜನರಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ಬಿಜೆಪಿ ಬೆಳಗಾವಿ ಲೋಕಸಭೆ, ಬಸವಕಲ್ಯಾಣ, ಮಸ್ಕಿ, ವಿವಿಧ ರಾಜ್ಯಗಳಲ್ಲಿ ಗೆದ್ದರೆ ಜನ ಕೇಂದ್ರ ರೂಪಿಸಿರುವ ಜನವಿರೋಧಿ ಮಸೂದೆಗಳ  ಪರವಾಗಿದ್ದಾರೆ ಎಂಬ ಸುಳ್ಳಿಗೆ ಬಲ ಸಿಕ್ಕಂತಾಗುತ್ತದೆ. ತನ್ನ ಗೆಲುವನ್ನೇ ಆಧರಿಸಿ ಬಿಜೆಪಿ ಖಂಡಿತವಾಗಿ ಜನರ ಬದುಕನ್ನು ದುರ್ಭರಗೊಳಿಸುವ ಮಸೂದೆಗಳ ಪರ ಜನಾದೇಶ ಸಿಕ್ಕಿದೆ ಎಂದು ಹೇಳತೊಡಗುತ್ತದೆ. ಆದ್ದರಿಂದ ಬಿಜೆಪಿ ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಗೆದ್ದರೆ ಅದು ಜನರ ಪಾಲಿಗೆ ದುರಂತದ ಮುನ್ನುಡಿಯಾಗುತ್ತದೆ.

ಇನ್ನು ಬಿಜೆಪಿ ಮಾಡುತ್ತಿರುವ ಕುತಂತ್ರ, ಅವಮಾನಗಳಿಗೆ ಬೆಳಗಾವಿ ಉಪಚುನಾವಣೆಯಲ್ಲಿ ಅತ್ಯಂತ ಸಂಯಮದಿಂದ ಸತೀಶ್ ಜಾರಕಿಹೊಳಿಯವರು ಪ್ರತಿಕ್ರಿಯಿಸುತ್ತಿದ್ದಾರೆ. ನಿರ್ದಿಷ್ಟ ಜಾತಿ, ಧರ್ಮ, ಲಿಂಗ ಇತ್ಯಾದಿಗಳನ್ನು ಓಲೈಸದೆ, ಹಣ, ಹೆಂಡ ಹಂಚದೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿಯವರು, ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅವರು ಹಾಕಿಕೊಟ್ಟ ಜನಪರ ಚಿಂತನೆಯ ತಳಹದಿಯನ್ನು ಭದ್ರಪಡಿಸಲು ನಿರಂತರವಾಗಿ ಧೃಡವಾದ ಹೆಜ್ಜೆಯನ್ನು ಇಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏಪ್ರಿಲ್ 17, 2021ರಂದು ನಡೆಯುವ ಚುನಾವಣೆಯಲ್ಲಿ ಆಡಳಿತ ಪಕ್ಷ ಸೋಲಬೇಕು ಮತ್ತು ಸತೀಶ್ ಜಾರಕಿಹೊಳಿಯವರಂತಹ ಸೈದ್ಧಾಂತಿಕ ಖಚಿತತೆ ಇರುವ ವ್ಯಕ್ತಿ ಗೆಲ್ಲಬೇಕು.

ಮೂರು ವಿವಾದಾತ್ಮಕ ಕೃಷಿ ಮಸೂದೆಗಳು ಜಾರಿಯಾದರೆ, ಕೇವಲ ಮುಸ್ಲಿಮರಿಗೆ, ದಲಿತರಿಗೆ ಮಾತ್ರ ಸಮಸ್ಯೆಯಾಗದು. ಬದಲಾಗಿ ಲಿಂಗಾಯತ, ಒಕ್ಕಲಿಗರು, ಕುರುಬರು ಸೇರಿದಂತೆ ಎಲ್ಲ ಜಾತಿಯ ಜನರಿಗೆ ಇದರ ಬಿಸಿ ತಟ್ಟುತ್ತದೆ. ಅನ್ನಭಾಗ್ಯ, ಮಧ್ಯಾಹ್ನದ ಬಿಸಿಯೂಟ ಮೊದಲಾದ ಯೋಜನೆಗಳು ಎಲ್ಲ ಜಾತಿಯ ಬಡವರಿಗೆ ಸಿಗುತ್ತಿವೆ. ಆದರೆ, ಕೇಂದ್ರದ ಇವುಗಳಿಗೆ ತಡೆಯೊಡ್ಡಲು ಕಾಯ್ದೆಗಳನ್ನು ರೂಪಿಸಿದೆ. ಆದ್ದರಿಂದ ನಿರ್ಣಾಯಕ ಹೋರಾಟದಲ್ಲಿ ಬೆಳಗಾವಿ ದಿಕ್ಸೂಚಿಯಾಗಿ ಕೆಲಸ ಮಾಡಬೇಕಿದೆ.

1924ರಲ್ಲಿ ಮಹಾತ್ಮ ಗಾಂಧಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅನಂತರ ಸ್ವಾತಂತ್ರ್ಯ ಹೋರಾಟದ ತೀವ್ರತೆ ಹೆಚ್ಚಿತು. ಎರಡನೇ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಬೆಳಗಾವಿಯ ಜನತೆಗೆ ಮತ್ತೊಂದು ಬಾರಿ ಮುನ್ನುಡಿ ಬರೆಯಲು ಅವಕಾಶವಿದೆ.

ಇದೀಗ ದೇಶದ ದಿಕ್ಕು ಬದಲಿಸುವ ಚೆಂಡು ಬೆಳಗಾವಿ ಕ್ಷೇತ್ರದ ಮತದಾರರಲ್ಲಿದೆ. ಇವರು ಯಾವುದೇ ಅಂಕೆ, ಶಂಕೆ, ಆಮಿಶ, ಜಾತಿ, ಧರ್ಮ, ಪಕ್ಷ, ಸಿದ್ಧಾಂತ, ಕನಿಕರಗಳಿಗೆ ಒಳಗಾಗದೆ ಜನಪರ ಕೆಲಸಕ್ಕಾಗಿ ಮತ ನೀಡಬೇಕಿದೆ.  

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ   

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ