March 25, 2023 5:02 pm

ಕನ್ನಡ ಎತ್ತ ಸಾಗುತ್ತಿದೆ? ಕನ್ನಡಿಗರ ಪರಿಸ್ಥಿತಿ ಏನು?

ಕನ್ನಡ ಎತ್ತ ಸಾಗುತ್ತಿದೆ? ಕನ್ನಡಿಗರ ಪರಿಸ್ಥಿತಿ ಏನು?

  • ಡಾ. ಪ್ರದೀಪ್ ಎಲ್ ಮಾಲ್ಗುಡಿ, ಸಂಶೋಧಕ

ಭಾರತದಲ್ಲಿ ಪ್ರಾದೇಶಿಕ ಭಾಷೆಗಳು ಉಳಿಯುವ ಸಾಧ್ಯತೆಗಳು ಮಸುಕಾಗುತ್ತಿವೆ. ತಮಿಳು, ಕನ್ನಡ, ತೆಲುಗು ಭಾಷೆಗಳಿಗೆ ಶಾಸ್ತಿçÃಯ ಭಾಷೆಯ ಸ್ಥಾನ ಸಿಕ್ಕ ನಂತರ, ನಿಜಕ್ಕೂ ಭಾಷೆಗಳೆಲ್ಲವೂ ಶಾಸ್ತ್ರೀಯ ಭಾಷೆಗಳಾಗಿಬಿಡುತ್ತವೆಯೇ? ಎಂಬ ಅನುಮಾನ ಬಲವಾಗುತ್ತಿದೆ. ಶಾಸ್ತ್ರೀಯ ಭಾಷೆಯೆಂದರೆ ಇನ್ನೊಂದು ಅರ್ಥ ಮೃತ ಭಾಷೆ! ದಿನದಿಂದ ದಿನಕ್ಕೆ ವ್ಯಾವಹಾರಿಕ ಮೋಹಕ್ಕೆ ಮಾನವ ಸಂಕುಲ ಒಳಗಾಗಿದೆ. ಉಪಭೋಗಿ ಸಂಸ್ಕಾರದ ದೀಕ್ಷೆ ಇಂದು ಎಲ್ಲವನ್ನೂ ಆರ್ಥಿಕ ಲಾಭದ ದೃಷ್ಟಿಯಿಂದ ಪರಿಗಣಿಸುವುದನ್ನು ಕಲಿಸಿದೆ. ಇದರ ಪರಿಣಾಮದಿಂದ ಇದುವರೆಗಿನ ಮಾನವ ಮಹೋನ್ನತ ಸಾಧನೆಗಳು ಹಿನ್ನೆಲೆಗೆ ಸರಿಯುತ್ತಿವೆ. ಕರ್ನಾಟಕದ ಜನರನ್ನು ಸರ್ವಧರ್ಮ ಸಹಿಷ್ಣುಗಳು, ವೀರರು, ಕಲಿಗಳು, ತ್ಯಾಗಿಗಳು, ಶರಣಾಗತ ರಕ್ಷಕರು ಇತ್ಯಾದಿಯಾಗಿ ಇಂದಿಗೂ ಇತಿಹಾಸದ ಪಾಠಗಳಲ್ಲಿ ಹೇಳಿಕೊಡಲಾಗುತ್ತಿದೆ. ಆದರೆ ಒಂದು ಕಾಲಕ್ಕೆ ಇದ್ದ ಕನ್ನಡ ನಾಡಿನ ವೈಶಾಲ್ಯತೆ ಏಕೀಕರಣದ ನಂತರ ಕುಬ್ಜಗೊಂಡಿದೆ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಕ್ಷೇತ್ರವೂ ಕುಗ್ಗಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಕನ್ನಡದ ಆತಂಕಗಳು ಕಡಿಮೆಯಾಗಬೇಕಿತ್ತು. ಆದರೆ ಇಂದು ಈ ಆತಂಕ ಹೆಚ್ಚಾಗುತ್ತಿದೆ. ನಗರ ಹಳ್ಳಿಗಳಿಂದಲೂ ದಿನದಿಂದ ದಿನಕ್ಕೆ ಕನ್ನಡೇತರರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚುವ, ಸ್ಥಳಾಂತರಿಸುವ, ಸಂಯೋಜಿಸುವ ಕನ್ನಡ ವಿರೋಧಿ ಕೆಲಸಗಳನ್ನು ಸರ್ಕಾರವೇ ಮುಂದೆ ನಿಂತು ಮಾಡುತ್ತಿದೆ. ಆಡಳಿತದಲ್ಲಿ ಕನ್ನಡ ಜಾರಿ ಎಂದು ಪ್ರತಿ ಸರ್ಕಾರಗಳೂ ಸುಳ್ಳು ಹೇಳುತ್ತಿವೆ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ತರಲು ಇದುವರೆಗೆ ಸಾಧ್ಯವಾಗಿಲ್ಲ. ಮಧ್ಯಮ ಹಾಗೂ ಮೇಲು ವರ್ಗದ ಕುಟುಂಬಗಳು ಕನ್ನಡ ಹಾಗೂ ಸರ್ಕಾರಿ ಶಾಲೆಗಳೆರಡರಿಂದಲೂ ದೂರವಾಗುತ್ತಿವೆ. ಇಂತಹ ಸಮಸ್ಯೆಗಳತ್ತ ಕನ್ನಡದ ಸರ್ವತೋಮುಖ ಬೆಳವಣಿಗೆಯ ಉದ್ದೇಶಗಳಿಂದ ಸ್ಥಾಪನೆಯಾಗಿರುವ ವಿವಿಧ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಪ್ರಾಧಿಕಾರಗಳು ಹಾಗೂ ಸರ್ಕಾರೇತರ ಸಂಘ-ಸAಸ್ಥೆಗಳು-ಸAಘಟನೆಗಳು ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.

ಅಕಾಡೆಮಿ ಹಾಗೂ ವಿಶ್ವವಿದ್ಯಾಲಯಗಳು

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ, ಅನುವಾದ ಅಕಾಡೆಮಿ ಇತ್ಯಾದಿಗಳನ್ನು ಸ್ಥಾಪಿಸಿದೆ. ಕರ್ನಾಟಕ ಸರ್ಕಾರವು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಗಳ ಏಳ್ಗೆಗಾಗಿ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ. ಅನುದಾನವನ್ನು ಬಳಸುತ್ತಿರುವ ಈ ಎಲ್ಲ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪಸರಿಸುತ್ತಿವೆ? ಅಥವಾ ಕರ್ನಾಟಕದಲ್ಲಿ ಕನ್ನಡವನ್ನು ಸದೃಢಗೊಳಿಸಲು ಕಾರ್ಯೋನ್ಮುಖವಾಗಿವೆ? ಎಂಬ ಪ್ರಶ್ನೆ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ. ಏಕೆಂದರೆ, ಕರ್ನಾಟಕದ ನಾಡು, ನುಡಿ, ಗಡಿ ಹಾಗೂ ಜಲದ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ. ಏಕೀಕರಣಕ್ಕಾಗಿ ಹೋರಾಡಿ, ಏಕೀಕರಣಗೊಂಡ ಐದು ದಶಕಗಳ ನಂತರ ಉತ್ತರ ಕರ್ನಾಟಕದ ಕೆಲವು ರಾಜಕಾರಣಿಗಳು ಪ್ರತ್ಯೇಕ ರಾಜ್ಯದ ಕೂಗನ್ನು ಪದೇಪದೇ ಎತ್ತುತ್ತಿದ್ದಾರೆ.  

ಅಕಾಡೆಮಿ, ಪ್ರಾಧಿಕಾರಗಳು ವಿಚಾರ ಸಂಕಿರಣಗಳ ಆಯೋಜನೆ, ಪುಸ್ತಕ ಪ್ರಕಟಣೆಗೆ ಕೊಟ್ಟಷ್ಟು ಒತ್ತನ್ನು ಕನ್ನಡ ಪರವಾದ ನೀತಿ, ನಿಯಮಗಳ ರೂಪಣೆಯತ್ತ ಗಮನ ಹರಿಸುತ್ತಿಲ್ಲ. ಅನುವಾದ ಅಕಾಡೆಮಿಯಲ್ಲಿ ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳ ಮರುಮುದ್ರಣಕ್ಕೆ ನೀಡಿದಷ್ಟು ಒತ್ತನ್ನು ಹೊಸ ಅನುವಾದಕರ ಸೃಷ್ಟಿಗೆ ನೀಡಿರಲಿಲ್ಲ. (ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಕೆ. ವಿ. ನಾರಾಯಣ ಅವರು ಅಧ್ಯಕ್ಷರಾದ ನಂತರ ಕೆಲವು ಮಹತ್ವದ ಕೆಲಸಗಳು ನಡೆದವು.) ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ೩೭೧ಜೆ ಕಲಂ ಜಾರಿಯಲ್ಲಿ ಇವುಗಳ ಪಾತ್ರ ಎಳ್ಳಷ್ಟೂ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಇದಕ್ಕೆ ಸರ್ಕಾರದ ಅಧೀನದಲ್ಲಿ ಇವುಗಳು ಕಾರ್ಯ ನಿರ್ವಹಿಸುತ್ತಿರುವುದೇ ದೊಡ್ಡ ತೊಡಕು. ಏಕೆಂದರೆ, ಇದಕ್ಕೆ ನೇಮಕವಾಗುವುದೂ ಸರ್ಕಾರದಿಂದ, ಅನುದಾನ ನೀಡುವುದೂ ಸರ್ಕಾರ. ಆದ್ದರಿಂದ ಇಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರುವುದಕ್ಕೆ ಮುಖ್ಯ ಕಾರಣವೆನ್ನಬಹುದು.

ಕರ್ನಾಟಕದ ಹೊರಗಿರುವ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿನ ಸಹ, ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯದೊಳಗಿರುವ ಅನೇಕ ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದಕ್ಕಿಂಥ ಭಿನ್ನವಾಗಿಲ್ಲ. ಶಾಸ್ತ್ರೀಯ ಸ್ಥಾನ ಲಭಿಸಿದ ನಂತರ ಇಂತಹ ವಿಶ್ವವಿದ್ಯಾಲಯಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡಲಾಗಿದೆ. ಆದರೆ ಈ ಅನುದಾನ ಬಳಕೆಯಾಗಿರುವುದು ಯಾವ ಉದ್ದೇಶಕ್ಕೆ ಎಂದು ಕೇಳಿದರೆ ಅದಕ್ಕೆ ಸ್ಪಷ್ಟ ಹಾಗೂ ಸಮಾಧಾನಕರ ಉತ್ತರ ಸಿಗಲಾರದು.

ಕನ್ನಡ ಬಲ್ಲವರಿಗೆ ಕೆಲಸವಿಲ್ಲ

ಕನ್ನಡ ಮಾಧ್ಯಮದಲ್ಲಿ ಓದಿರುವ ಮಾನವಿಕ ವಿಜ್ಞಾನ, ಕಲಾ ಸ್ನಾತಕ ಪದವೀಧರರ ಸಮಸ್ಯೆಯನ್ನು ಕೇಳುವವರೆ ಇಲ್ಲ. ವ್ಯಾವಹಾರಿಕ ಕಾರಣದಿಂದ ಇಡೀ ಸಮುದಾಯ ಕಲಾ ವಿಷಯಗಳತ್ತ ಆಸಕ್ತಿ ತೋರುತ್ತಿಲ್ಲ. ಜತೆಗೆ ಪದವಿ ಹಂತದಲ್ಲಿ ಕಲಾ ವಿಷಯ ಮಾಯವಾಗುತ್ತಿದೆ. ಇತಿಹಾಸ, ಸಮಾಜಶಾಸ್ತç, ರಾಜ್ಯಶಾಸ್ತç, ಅರ್ಥಶಾಸ್ತç, ಮಾನವಶಾಸ್ತç, ಕನ್ನಡ, ಹಿಂದಿ ವಿಷಯಗಳ ಸ್ನಾತಕೋತ್ತರ ಪದವಿ ಪಡೆದವರು ಔದ್ಯೋಗಿಕ ಅಭದ್ರತೆಯಿಂದ ನರಳುತ್ತಿದ್ದಾರೆ. ಏಕೆಂದರೆ ಶಿಕ್ಷಣದ ವಾಣಿಜ್ಯೀಕರಣದಿಂದಾಗಿ ಈ ಕಲಾ ಹಾಗೂ ಭಾಷಾ ವಿಷಯಗಳ ಕಡೆಗೆ ಶಿಕ್ಷಣ ಸಂಸ್ಥೆಗಳು ನಕಾರಾತ್ಮಕ ಭಾವನೆಗಳನ್ನು ತಳೆದಿವೆ. ಇದರಿಂದಾಗಿ ಸಮಾಜ ವಿಜ್ಞಾನಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದಿರುವವರು ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆದವರು ನಿರುದ್ಯೋಗಿಗಳಾಗುತ್ತಿದ್ದಾರೆ.

ಇತ್ತೀಚೆಗೆ ಬಿ.ಎ., ಬಿ.ಎಸ್‌ಸಿ., ಬಿ.ಸಿ.ಎ., ಬಿ.ಕಾಂ., ಬಿ.ಬಿ.ಎಂ., ಮೊದಲಾದ ಪದವಿಗಳಿಗೆ ಕೆಲವು ವಿಶ್ವವಿದ್ಯಾಲಯಗಳು ಭಾಷಾ ವಿಷಯದಲ್ಲಿ ಏಕಪಠ್ಯವನ್ನು (ಎಲ್ಲ ಪದವಿಗಳಿಗೂ ಒಂದೇ ಕನ್ನಡ ಪಠ್ಯ ಬೋಧನೆ) ಜಾರಿಗೆ ತಂದಿವೆ. ಇದರ ಹಿಂದೆ ಖಾಸಗಿ ಕಾಲೇಜುಗಳ ಒತ್ತಡ ಇರುವ ಅನುಮಾನವಿದೆ. ಏಕೆಂದರೆ ಇದರ ಲಾಭ ಖಾಸಗಿ ಕಾಲೇಜು ಮಾಲೀಕರಿಗೆ ಆಗುತ್ತದೆ. ಬಹುತೇಕ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಒಡೆತನ ಸಕ್ರಿಯ ರಾಜಕಾರಣಿಗಳು, ಮಠಾಧೀಶರು ಹಾಗೂ ಉದ್ಯಮಿಗಳ ಹಿಡಿತದಲ್ಲಿದೆ. ಎಲ್ಲ ಪದವಿ ಹಂತದ ಭಾಷಾಪಠ್ಯಗಳೂ ಒಂದೇ ಇದ್ದರೆ ಅವರಿಗೆ ಹೆಚ್ಚುವರಿ ಭಾಷಾ ಉಪನ್ಯಾಸಕರ ನೇಮಕಾತಿ ತಪ್ಪುತ್ತದೆ. ಅಲ್ಲದೆ ಎಲ್ಲ ಕನ್ನಡ ತರಗತಿಗಳನ್ನು ಕಂಬೈAಡ್ ಮಾಡಿಸಿ, ಸಿಲಬಸ್ ಮುಗಿಸುವ ಹುನ್ನಾರಗಳು ನಡೆಯುತ್ತಿವೆ.

ಇತ್ತೀಚೆಗೆ ಕೇಂದ್ರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯ ಅಡಿಯಲ್ಲಿ ಕೂಡ ಕನ್ನಡ ಭಾಷೆಯ ಬೋಧನೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ಈಗಿನ ಹೊಸ ಪದ್ಧತಿಯ ಪ್ರಕಾರ ಪದವಿ ತರಗತಿಗಳಿಗೆ 4 ವರ್ಷಗಳನ್ನು ನಿಗದಿ ಮಾಡಲಾಗಿದ್ದು, ಭಾಷಾ ಬೋಧನೆಯ ವಿಷಯ ಕೇವಲ 2 ವರ್ಷಗಳಿಗೆ ಸೀಮಿತವಾಗಿದೆ. ಇಷ್ಟು ದಿನ 3 ವರ್ಷ ಇದ್ದ ಪದವಿ ತರಗತಿಗಳಲ್ಲಿ 2 ವರ್ಷ ಭಾಷಾ ಬೋಧನೆಯ ಅವಕಾಶವಿತ್ತು. ಇದೀಗ 4 ವರ್ಷಗಳ ಕೋರ್ಸ್ ನಲ್ಲಿ ಕೇವಲ 2 ವರ್ಷಕ್ಕೆ ಭಾಷಾ ಬೊಧನೆಯನ್ನು ಸೀಮಿತಗೊಳಿಸಲಾಗಿದೆ. ಜೊತೆಗೆ ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣ ಕ್ಷೇತ್ರದ ಮೇಲೆ ಒಕ್ಕೂಟ ಸರ್ಕಾರ ಹಿಡಿತ ಸಾಧಿಸಿದೆ.

ಈಗಾಗಲೇ ಕನ್ನಡ ಎಂ.ಎ., ಪದವೀಧರರನ್ನು ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಮೂರು ಅಥವಾ ಆರು ತಿಂಗಳಿಗೆ ಒಮ್ಮೆ ವೇತನ ಸಂದಾಯವಾಗುತ್ತಿದೆ. ಖಾಸಗಿ ಪದವಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಕನ್ನಡೇತರ ವಿಷಯ ಹಾಗೂ ಭಾಷೆಗಳಿಗಿಂಥ, ಕನ್ನಡ ಉಪನ್ಯಾಸಕರಿಗೆ ಅತ್ಯಂತ ಕಡಿಮೆ ವೇತನವನ್ನು ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕಾಲೇಜುಗಳಲ್ಲಿ ೮,೦೦೦ – ೧೫,೦೦೦ ಕೂಲಿಯನ್ನು ನೀಡುತ್ತಿದ್ದಾರೆ. ಕೊರೊನಾ ನಂತರದ ಸಮಯದಲ್ಲಿ ಇವರ ಗೋಳನ್ನು ಕೇಳುವವರೇ ಇಲ್ಲವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರೆಕಾಲಿಕ ಉಪನ್ಯಾಸಕರ ಗೋಳನ್ನು ಕೇಳುವವರೇ ಇಲ್ಲ.

ಬೆಂಗಳೂರಿನ ಅನೇಕ ಕಾಲೇಜುಗಳಲ್ಲಿ ಸೆಮಿಸ್ಟರ್‌ನ ಕನ್ನಡ ತರಗತಿಗಳನ್ನು ಒಂದು ತಿಂಗಳಿಗೆ ಇಂತಿಷ್ಟು ಎಂದು ಗುತ್ತಿಗೆ ಆಧಾರದಲ್ಲಿ ನಡೆಸುವ ಕಾಲೇಜುಗಳೂ ಅಸ್ತಿತ್ವದಲ್ಲಿವೆ. ಪಿಯುಸಿ ಕಾಲೇಜುಗಳಲ್ಲಿ ನವೆಂಬರ್ – ಡಿಸೆಂಬರ್ ತಿಂಗಳೊಳಗೆ ಕನ್ನಡ ತರಗತಿಗಳನ್ನು ಮುಗಿಸಿಕೊಡಬೇಕೆಂಬ ಅಲಿಖಿತ ನಿಯಮವನ್ನು ಅನೇಕ ಕಾಲೇಜುಗಳಲ್ಲಿ ಜಾರಿಗೆ ತರಲಾಗಿದೆ. ನಂತರ ಈ ಉಪನ್ಯಾಸಕರು ಜೂನ್ ಅಥವಾ ಜುಲೈವರೆಗೆ ನಿರುದ್ಯೋಗಿಗಳಾಗಿರುತ್ತಾರೆ. ಇದನ್ನು ಪ್ರತಿಭಟಿಸಿದರೆ, ತಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಈ ಅನ್ಯಾಯವನ್ನು ಯಾರೂ ಪ್ರತಿಭಟಿಸಲು ಮುಂದೆ ಬರುತ್ತಿಲ್ಲ. ಕನ್ನಡ ಭಾಷೆಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಅತ್ಯಂತ ಕೀಳಾಗಿ ಪರಿಗಣಿಸಿವೆ. ನಾಮಕಾವಸ್ಥೆಗೆ ಕನ್ನಡ ಬೋಧನೆಗೆ ಅವಕಾಶ ನೀಡಲಾಗುತ್ತಿದೆ. ಕನ್ನಡ ಎಂ.ಎ., ಪದವೀಧರರಲ್ಲಿ ಈ ಬಗೆಯ ಸಂಸ್ಥೆಗಳು ಕೀಳರಿಮೆಯನ್ನು ಹುಟ್ಟಿಸುತ್ತಿವೆ.

ಕೆಲವು ವರ್ಷಗಳ ಹಿಂದೆ ಕನ್ನಡಕ್ಕೆ ಮರ್ಮಾಘಾತಕವಾದ ಎರಡು ತೀರ್ಪುಗಳು ಹೊರಬಿದ್ದಿವೆ. ಕನ್ನಡ ಭಾಷಾಮಾಧ್ಯಮದ ಕುರಿತು ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ ಸಾಧಿಸಿದೆ. ಜತೆಗೆ ಕನ್ನಡ ನಾಮಫಲಕಗಳ ಜಾರಿ ನಿಯಮದಲ್ಲೂ ಇದು ಮುಂದುವರೆದು, ಹೈಕೋರ್ಟ್ ನಲ್ಲೂ ಹಿನ್ನಡೆ ಅನುಭವಿಸಿದೆ. ಇಲ್ಲಿ ಖಾಸಗಿಯವರ ಒತ್ತಡಗಳ ಪರಿಣಾಮ ಎದ್ದು ಕಾಣುತ್ತಿದೆ. ಸರ್ಕಾರಗಳ ನೀತಿನಿಯಮಗಳನ್ನು ಪಾಲಿಸಲು ಇವರಿಗೆ ಇಷ್ಟವಿಲ್ಲ. ಕನ್ನಡಕ್ಕಿಂತ ಇಂಗ್ಲಿಷ್ ಹೆಸರಿನಲ್ಲಿ ಹಣ ಮಾಡುವುದು ಸುಲಭ. ಈ ದಾರಿಗೆ ಅವರು ಬೇಕಾದ ಸಾಕ್ಷ್ಯಾಧಾರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ಅವರ ಎದುರು ಸರ್ಕಾರ ಸೋತು ಮಂಡಿಯೂರುತ್ತದೆ. ಈ ಕುರಿತು ನಾಡಿನ ಚಿಂತಕರು, ವಿದ್ವಾಂಸರು, ಕನ್ನಡ ಅಧ್ಯಾಪಕರು, ಕನ್ನಡಪರ ಹೋರಾಟಗಾರರು, ಕನ್ನಡದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಇಷ್ಟು ದಿನಗಳಿಗಿಂತ ಭಿನ್ನವಾಗಿ ಆಲೋಚಿಸಿ ಕ್ರಿಯಾಶೀಲವಾಗಬೇಕಿದೆ.

ಇವೆಲ್ಲದರ ನಡುವೆ ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ, ಮಾಧ್ಯಮಿಕ ಶಾಲಾ ತರಗತಿಗಳ ಶಿಕ್ಷಣ ಆರಂಭವಾಗಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಮಾಲ್, ಬಸ್, ರೈಲು, ಮೆಟ್ರೋ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಹಿಂದೇಟು ಹಾಕುತ್ತಿದೆ. ಇಲ್ಲಿ ಕನ್ನಡಿಗರು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಗಮನಿಸಬೇಕಿದೆ. ಕೆಲವು ಅಧ್ಯಯನ ವರದಿಗಳ ಪ್ರಕಾರ ಕೊರೋನೋತ್ತರದಲ್ಲಿ ಶೇ. 35ಕ್ಕಿಂತ ಹೆಚ್ಚಿನ ಮಕ್ಕಳು ಖಾಯಂ ಡ್ರಾಪ್ ಔಟ್ ಆಗಲಿದ್ದಾರೆ. ಅವರ ಭವಿಷ್ಯವೇನು? ಎಂಬ ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕಿದೆ. ನಮ್ಮ ಮುಂದಿನ ಜನಾಂಗವನ್ನು ಶಿಕ್ಷಣ ವಂಚಿತರನ್ನಾಗಿಸಿದ “ಶಾಪ”ವನ್ನು ನಾವೆಲ್ಲ ಹೊರಬೇಕಿದೆ. ಭವಿಷ್ಯದಲ್ಲಿ ಇದು ಬಾಲ ಕಾರ್ಮಿಕರನ್ನು, ಬಾಲ್ಯವಿವಾಹಗಳನ್ನು ಉತ್ತೇಜಿಸುತ್ತದೆ. ಇಷ್ಟೇ ಅಲ್ಲದೇ ಗಂಭೀರವಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ವೈಯಕ್ತಿಕವಾದ ಒಂದು ಉದಾಹರಣೆಯನ್ನು ಕೊಡಬಹುದು ಎನಿಸುತ್ತದೆ. ನನ್ನ ಮನೆಯಲ್ಲಿ ಇಬ್ಬರು ಪಿಎಚ್.ಡಿ., ಪೂರೈಸಿರುವವರು ಇದ್ದೇವೆ. ಆದರೆ, ನಮ್ಮಿಬ್ಬರಿಂದ ನಮ್ಮ ಮಗನಿಗೆ ದಿನನಿತ್ಯ ಓದು, ಬರಹ ಮಾಡಿಸಲು ಸಾಧ್ಯವಾಗುತ್ತಿಲ್ಲ. ಅಕ್ಷರ ಜ್ಞಾನದ ಕೊರತೆ ಇರುವವರ ಪರಿಸ್ಥಿತಿ ಯಾವ ಮಟ್ಟದಲ್ಲಿರಬಹುದು ಎಂದು ನಾವೆಲ್ಲ ಆಲೋಚಿಸಬೇಕಲ್ಲವೇ?   

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ