March 25, 2023 4:03 pm

ಧರ್ಮ ಅಧರ್ಮದ ಬೇರುಗಳಲ್ಲಿ ಲಿಂಗ ಅಸಮಾನತೆ                                               

ಧರ್ಮ ಅಧರ್ಮದ ಬೇರುಗಳಲ್ಲಿ ಲಿಂಗ ಅಸಮಾನತೆ                                               

  • ಡಾ.ಲೀಲಾಸಂಪಿಗೆ, ಚಿಂತಕರು, ಬರಹಗಾರರು           

ಲಿಂಗ ಅಸಮಾನತೆಯ ಬೇರುಗಳು ಮಹಿಳೆಯರನ್ನು ನೋಡುವ ಈ ವ್ಯವಸ್ಥೆಯ ಮತ್ತು ಅದರ ಮೂಲ ಪ್ರಭಾವದಲ್ಲಿ ಅಡಗಿದೆ.   ಧರ್ಮವೇ ಉಸಿರಾಡುತ್ತಿರುವ ಈ ಭಾರತೀಯ ಸಮಾಜದಲ್ಲಿ ಭಾರತೀಯ ಮನಸ್ಸು ಧಾರ್ಮಿಕವಾದದ್ದು ಹಾಗೂ ಈ  ಪ್ರಶ್ನೆಗೂ ಅದರದ್ದೇ ಚೌಕಟ್ಟಿನಲ್ಲಿ  ಉತ್ತರಗಳನ್ನು ಹುಡುಕಬಾರದೇಕೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು.               ‌‌‌

ಭಾರತದಲ್ಲಿ ಹಿಂದೂ ಧರ್ಮದ ಪ್ರಭಾವವಿದ್ದು ಬಹಳ ಸಹಜವಾಗಿ ‘ಹೆಣ್ಣು’  ಈ ಸ್ಥಿತಿಯಲ್ಲಿದ್ದಾಳೆ ಎಂದು ಭಾವಿಸಬಹುದಾಗಿದೆ. ಹಾಗಿದ್ದರೆ ಈ ಅಸಮಾನತೆಯ ನಿರಂತರತೆಗೆ ಕಾರಣವೇನಿರಬಹುದು ಎಂಬುದರ ಹುಡುಕಾಟದ ಪ್ರಯತ್ನವೂ ಇದಾಗಿದೆ.  ಮಹಿಳಾ ಸಮುದಾಯದ  ಹಿನ್ನೆಲೆಯಲ್ಲಿ ಧರ್ಮಗಳ ದೃಷ್ಟಿಕೋನ ಯಾವುದಿರಬಹುದು ಹಾಗೂ  ಈ ಹಿನ್ನೆಲೆಯಲ್ಲಿ ಲಿಂಗ ಅಸಮಾನತೆಯನ್ನು  ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು ಎಂಬ ಪ್ರಯತ್ನವೂ ಇದಾಗಿದೆ. ಒಟ್ಟಾರೆಯಾಗಿ ಧರ್ಮಗಳು ಮಹಿಳೆಯರನ್ನು ಹೇಗೆ ನೋಡಿವೆ ಎಂಬುದರ ಆಳಕ್ಕೆ ಇಳಿದಾಗ ಮಾತ್ರ ಈ ಅಗಾಧವಾದ  ಅಸಮಾನತೆಯನ್ನು  ಮನನ ಮಾಡಿಕೊಳ್ಳಲು ಸಾಧ್ಯ. 

ಹಿಂದೂ ಧರ್ಮ ಮತ್ತು ಮಹಿಳೆ 

ಹಲವು ಧರ್ಮಗಳ ಅಥವಾ ಅವುಗಳ ಪ್ರಭಾವಗಳ ತಳಪಾಯದಲ್ಲಿ ಸ್ವ ನಿರ್ಮಿಸಿಕೊಂಡಿರುವ ಸಮಾಜಗಳಲ್ಲಿ ಹಿಂದೂ ಧರ್ಮ ತನ್ನ ಪ್ರಾಧಾನ್ಯತೆಯನ್ನು ಮೆರೆದಿದೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿಯೂ ಇಷ್ಟೊಂದು ವಿಶಿಷ್ಟತೆ,  ವಿಭಿನ್ನತೆ ಹೊಂದಿರುವ ನಾಡಿನಲ್ಲೂ ಎಲ್ಲೆಲ್ಲೂ ತನ್ನ ಛಾಪನ್ನು ಒತ್ತಿದೆ. 

ಹಿಂದೂ ಧರ್ಮವು  ತನ್ನ ಪ್ರಭಾವದಿಂದ ಮಹಿಳೆಯನ್ನು ಯಾವ ದೃಷ್ಟಿಯಿಂದ ನೋಡಿದೆ ಎಂದು ವಿಶ್ಲೇಷಿಸಬಹುದಾಗಿದೆ.  ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಹೊಂದಿರುವ ಭಾರತದಂಥ ವ್ಯವಸ್ಥೆಯಲ್ಲಿ ತನ್ನ ಪ್ರಭಾವ ಬೀರಲು ಸಮರ್ಥವಾದ,  ಹೇರಳವಾದ ಅವಕಾಶಗಳಿವೆ.  ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿಸಿ ಅವಳ ವ್ಯಕ್ತಿತ್ವವನ್ನು ಅಡಗಿಸಿದ್ದು ‘ಹಿಂದೂಧರ್ಮ’ ಎನ್ನುವ ಕಟುಸತ್ಯ  ನಮ್ಮೊಂದಿಗಿದೆ.  ಈ ನಿಟ್ಟಿನಲ್ಲಿ ಹಿಂದೂ ಧರ್ಮದಲ್ಲಿ ‘ಮಹಿಳೆ’ ಪರಿಭಾವಿಸಿರುವ ಮೂಲ ಬೇರುಗಳನ್ನು ಹುಡುಕುತ್ತಾ ಹೊರಟಾಗ ಅಲ್ಲಿ ಬಹಳ ಮುಖ್ಯವಾದ ನಾಲ್ಕು ಮಾದರಿಗಳನ್ನು ಕಾಣುತ್ತೇವೆ. 

1) ‘ಬೀಜ ಕ್ಷೇತ್ರ ನ್ಯಾಯಮಾದರಿ 

2) ‘ಪುರುಷ ಪ್ರಕೃತಿ ಮಾದರಿ

3) ‘ಬ್ರಹ್ಮ ಮಾಯಾ ಮಾದರಿ

4) ‘ಶಿವಶಕ್ತಿ ಮಾದರಿ

ಬೀಜ ಕ್ಷೇತ್ರದಂತಹ ಒಂದು ಸಿದ್ಧಾಂತವನ್ನು ಮನು  ಪರಿಕಲ್ಪಿಸುವಾಗಲೇ ಅಂದಿನ ಸಮಾಜದಲ್ಲಿದ್ದ ಮಹಿಳೆಯನ್ನು ಬಲಿತೆಗೆದುಕೊಳ್ಳುವ ಹುನ್ನಾರ ಅದರೊಂದಿಗಿತ್ತು.  ಹಾಗೆಯೇ ಮುಂದುವರಿದ ಹಿಂದೂ ಧರ್ಮವಾದಿಗಳು ಮನುವಿನಷ್ಟೇ ಅಥವಾ ಇನ್ನೂ ವಿಕೃತವಾದಂತಹ ಪೆಡಸು ಮನೋಭಾವ  ಹೊಂದಿದವರಾಗಿದ್ದಾರೆ. ಈ  ಹಿನ್ನೆಲೆಯಲ್ಲಿ ಮೇಲಿನ ಮಾದರಿಗಳನ್ನು ವಿಶ್ಲೇಷಿಸ ಬಹುದಾಗಿದೆ. 

ಬೀಜಕ್ಷೇತ್ರ ನ್ಯಾಯ ಮಾದರಿ

ಮಾತೃ ಪ್ರಾಧಾನ್ಯತೆಯನ್ನು ಹೊಂದಿದ್ದ ಪ್ರಾಚೀನ ಸಮಯದಲ್ಲಿ ‘ಮಹಿಳೆ’ ಹಡೆಯುವುದನ್ನು ಅಂದಿನ ಪುರುಷ ಸಮುದಾಯ ತಮ್ಮ ಪೂರ್ವಜರು ಮತ್ತೆ ಜನ್ಮವೆತ್ತಿ ಬರುತ್ತಿದ್ದಾರೆ ಎಂದು ಭಾವಿಸಿದ್ದರು.  ಸಂತಾನಾಭಿವೃದ್ಧಿಯ ‘ಸಾಮ್ರಾಜ್ಞೆ’ ಹೆಣ್ಣಾಗಿದ್ದಳು. ಆ  ಗೌರವ,  ಮಾನ್ಯತೆ ಹೆಣ್ಣಿಗಿತ್ತು. ಸರಳತೆ ಮತ್ತು ಜೀವನಪ್ರೀತಿಗೆ ಮಾತ್ರ ಸೀಮಿತವಾಗಿದ್ದ ಆ ಸಮುದಾಯ ತಮ್ಮ ಬದುಕಿನ ದಿನಚರಿಯನ್ನು ಪರಸ್ಪರ ಹಂಚಿಕೊಂಡಿದ್ದರು. 

ನಂತರ ಪುರುಷನಿಗೆ ಸಂತಾನಾಭಿವೃದ್ಧಿಯಲ್ಲಿ ತನ್ನ ಪಾತ್ರವೂ ಮುಖ್ಯ ಎಂಬ ಜ್ಞಾನ ಬಂದೊಡನೆ ಅವನ ಇಡೀ ಬದುಕಿನ ಒಂದು ಪೌರುಷಕ್ಕೆ ಶಕ್ತಿ ಬಂದಂತಾಯಿತು. ಅಸ್ತಿತ್ವವೇ ಅಸ್ತವ್ಯಸ್ತವಾಯಿತು. ಈ ‘ಬೀಜ ಕ್ಷೇತ್ರ ನ್ಯಾಯ’ವನ್ನು ಸಮರ್ಥಿಸಲು ಹಿಂದೂ ಧರ್ಮವು ಪುರುಷನ  ಪರವಾಗಿ ನಿಂತು ತಾನೇ ಪುರುಷನಾಗಿ   ವರ್ತಿಸಲು ಆರಂಭಿಸಿತು. ಈ ಪರಿಕಲ್ಪನೆ ಬುಡಕಟ್ಟುಗಳಲ್ಲಿದ್ದ  ಮಾತೃಪ್ರಧಾನ ವ್ಯವಸ್ಥೆಗೆ ಒಂದು ಬಲವಾದ ಪೆಟ್ಟನ್ನು ನೀಡಿ ಅದು ಕ್ರಮೇಣ ಪಿತೃಪ್ರಧಾನ್ಯತೆಗೆ ಹೊರಳುವಂತೆ ಮಾಡಿತು. ಬೀಜ ಕ್ಷೇತ್ರ ನ್ಯಾಯವನ್ನು  ಸಮರ್ಥಿಸುವವರಿಗೆ ಅದು ವೈಜ್ಞಾನಿಕವಾಗಿ ಕಾಣಲು ಸಾಧ್ಯವಾಯಿತು. ಹೆಣ್ಣನ್ನು ಕೀಳಾಗಿ ನೋಡಲೋಸುಗವೇ ಶ್ರೇಣಿಯನ್ನು  ವ್ಯವಸ್ಥಿತವಾಗಿ ನೋಡಲು ಬಳಸಿಕೊಂಡ ಕ್ರಮ ಇದಾಗಿದೆ. 

ತನಗೂ ತನ್ನ ಮಗುವಿಗೆ ಜೈವಿಕ ಸಂಬಂಧವಿರುವುದು ತಿಳಿದ ಕೂಡಲೇ ತನ್ನ ಹೆಂಡತಿ ಇತರರೊಂದಿಗೆ ಲೈಂಗಿಕ ಕ್ರಿಯೆ ಹೊಂದುವುದನ್ನು ನಿಷೇಧಿಸಿದ.  ಕ್ಷೇತ್ರದ ಮಾಲೀಕನಿಗೇ ಕ್ಷೇತ್ರದಿಂದ ಉತ್ಪತ್ತಿಯಾದ ಪ್ರತಿಫಲ ದೊರೆಯತಕ್ಕದ್ದು ಎನ್ನುವ ಸ್ಥಿತಿ ತಲುಪಿದ. 

ಜನಾಂಗದ ಮುಂದುವರಿಕೆ ಮತ್ತು ಅವನ ಆತ್ಮದ ವಿಸ್ತಾರ ಎಂದು ಪರಿಭ್ರಮಿಸಿದ.  ಇದರಲ್ಲಿ ಹೆಣ್ಣು ಒಬ್ಬ ರಕ್ಷಕಳ  ಪಾತ್ರಕ್ಕೆ ಗುರಿಯಾದಳು.  ದೈಹಿಕ-ಮಾನಸಿಕ ನಿಯಂತ್ರಣಕ್ಕೆ ಒಳಪಟ್ಟ ಮಹಿಳೆ ಮಗಳು, ಆದರ್ಶ ಪತ್ನಿ, ಆದರ್ಶ ತಾಯಿ ಮುಂತಾದ ಪಾತ್ರಧಾರಿಯಾದಳು. ಎಲ್ಲಿಯೂ ಅವಳನ್ನು ಮನುಷ್ಯನನ್ನಾಗಿ ನೋಡುವುದಿಲ್ಲ. ಈ ಕರ್ತವ್ಯಗಳನ್ನು ಬಿಟ್ಟರೆ ಉಳಿದ ಅಸ್ತಿತ್ವವೇ ಅವಳಿಗಿಲ್ಲ. 

ಬೀಜ ಕ್ಷೇತ್ರ ನ್ಯಾಯಅವರದ್ದೇ ಒಂದು ವಿಶ್ಲೇಷಣ

ಕೆಟ್ಟ ಬೀಜವನ್ನು ಉತ್ಕೃಷ್ಟವಾದ ಕ್ಷೇತ್ರದಲ್ಲಿ ಹಾಕಿದರೆ ಹೇಗೋ ಹಾಗೆಯೇ ಕೆಟ್ಟ ಕ್ಷೇತ್ರದಲ್ಲಿ ಒಂದು ಒಳ್ಳೆಯ ಬೀಜ ಹಾಕಿದರೂ ಪ್ರಯೋಜನವಿಲ್ಲ. ಯಾವುದೇ ಬೀಜ  ಹಾಕದಿದ್ದರೆ ಅದು ಬರಡು ಭೂಮಿಯಾಗುತ್ತದೆ.  ಯಾವ ಬೀಜ ಬಿತ್ತುತ್ತೇವೋ ಅಂಥಾ ಫಲವನ್ನು ಪಡೆಯುತ್ತೇವೆ ಎನ್ನುವ  ‘ಮನು’ ಅಭಿಪ್ರಾಯದಂತೆ ಬೀಜ ಬಹಳ ಪ್ರಾಮುಖ್ಯ ಎಂಬುದು ಸ್ಥಾಪಿತವಾಯಿತು. 

ಪುರುಷ ಆಸ್ತಿಯ ಒಡೆಯನಾದ. ಹಾಗೆಯೇ ಹೆಣ್ಣಿನ ಒಡೆಯನೂ ಆದ. ಆದ್ದರಿಂದ ಪುರುಷನೇ ಮಾಲೀಕನಾಗಿ,  ಬಂದ ಬೆಳೆಯೆಲ್ಲವೂ  ಅವನಿಗೇ ಸೇರತಕ್ಕದ್ದು ಎಂಬುದು ಅಲಿಖಿತ ನಿಯಮವಾಯಿತು. 

ಮಹಿಳೆ ಒಂದು ಸರಕಾಗಿ ಅಥವಾ ಉಡುಗೊರೆಯಾಗಿ ‘ಕೊಡುವ’  ‘ಸ್ವೀಕರಿಸುವ’ ವಸ್ತುವಾದಳು. ಆಸ್ತಿಯ  ರಕ್ಷಣೆಯಂತೆಯೇ ಹೆಣ್ಣಿನ ರಕ್ಷಣೆಯ ಹೊಣೆಯೂ ಕೂಡ ಪುರುಷನಿಗೆ ಸೇರಿದ್ದು ಎಂದಾಯಿತು.  ತಂದೆ, ಗಂಡ, ಮಗನ ರಕ್ಷಣೆಯ ಪರಿಧಿಯೊಳಗೆ ಹೆಣ್ಣು ಬಂದಳು. 

ಅನುಲೋಮ – ಪ್ರತಿಲೋಮ ವಿವಾಹ ಪದ್ಧತಿಯಲ್ಲೂ  ಸಹ ಬೀಜ ಕ್ಷೇತ್ರ ಸಿದ್ಧಾಂತ ಪ್ರತಿಬಿಂಬಿಸಿತು. ಉನ್ನತ ಜಾತಿಯ ಪುರುಷ – ಕೆಳಜಾತಿ ಹೆಣ್ಣನ್ನು ಮದುವೆಯಾಗಿ ಪಡೆದ ಮಗು ಉನ್ನತ ಜಾತಿಯದ್ದೇ ಆಗುತ್ತದೆ.  ಶೂದ್ರನೊಬ್ಬ – ಬ್ರಾಹ್ಮಣ ಕನ್ಯೆಯನ್ನು ವಿವಾಹವಾದರೂ  ಅವನಿಗೆ ಹುಟ್ಟಿದ ಮಗು ಶೂದ್ರ ಮಗುವೇ  ಆಗುವುದು.  ಆದ್ದರಿಂದ ಹುಟ್ಟು ತಂದೆಯಿಂದ ನಿರ್ಧಾರವಾಗುವುದು,  ಇಂತಹ ಮಾದರಿಗಳಿಗೆ ‘ವರ್ಣಸಂಕರ’ ಅಂತ ಕರೀತಿದ್ರು.  ಮಾನ್ಯತೆ ಇಲ್ಲದಿದ್ದರೂ ಇವು  ನಡೆಯುತ್ತಾ ಇದ್ದವು. 

ತನ್ನ ಹೆಂಡತಿಯಿಂದ ಸಂತಾನ ಆಗದಿದ್ದಾಗ ಪುರುಷ ಬೇರೆ ಹೆಣ್ಣಿನಿಂದ ಮಗು ಪಡೆಯುವುದು ಪ್ರತೀತಿಯಾಯ್ತು.  ಇಪ್ಪತ್ತೊಂದನೇ ಶತಮಾನದ ಈ ಆಧುನಿಕತೆಯ  ಮನಸ್ಸುಗಳು ಹೇಗೆ ಜಡ್ಡುಗಟ್ಟಿವೆ, ಮೌಢ್ಯದಿಂದ ಕೂಡಿವೆ ಎಂಬುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಬೀಜ ಕ್ಷೇತ್ರ  ಸಿದ್ಧಾಂತದಂತಹ  ಅವೈಜ್ಞಾನಿಕವಾದ,  ಅಪರಿಪೂರ್ಣತೆಯ ವಿಚಾರಗಳು ರಕ್ತಗತವಾಗಿ ಜನಾಂಗದಿಂದ ಜನಾಂಗಕ್ಕೆ ಅದೆಷ್ಟು ಸರಾಗವಾಗಿ ಹರಿದು ಬರುತ್ತಿವೆ….  ಇಂದಿಗೂ ಇದೇ ‘ಬೀಜಕ್ಷೇತ್ರ’ ನ್ಯಾಯ ನಮ್ಮ ಬದುಕುಗಳೊಳಗೆ ಜೀವಂತವಾಗಿದೆ ಎನ್ನುವುದನ್ನು ಸಾಬೀತು ಮಾಡುತ್ತಿದೆ. 

ಮಹಿಳೆಯ ಬಗ್ಗೆ ‘ಮನು’ವಿನಂತಹ ಮನಸ್ಸುಗಳು ಅದೆಷ್ಟು ವಿಕೃತವಾಗಿವೆ, ವಿತಂಡವಾಗಿವೆ ಎನ್ನುವುದು  ಬಹಳ ಸ್ಪಷ್ಟ. ಹಾಗೆಯೇ ಹೆಣ್ಣನ್ನು ಒಂದು ಹೊಲವಾಗಿಯೋ, ಸರಕಾಗಿಯೋ, ಭೋಗಕ್ಕೆ ಬಂದಿರುವ ಒಂದು ಪ್ರಾಣಿಯಾಗಿಯೋ ಕಂಡಂತಹ ಮನಸ್ಸುಗಳು ಅದ್ಹೇಗೆ  ವಿಶಾಲ ಮನೋಭಾವದಿಂದ,  ಜೀವಗಳ ಸಂಗಮದಿಂದ,  ಬದುಕಿನ ಪಾಲುದಾರರಾಗಿ,  ಪ್ರಬುದ್ಧವಾಗಿ ಚಿಂತಿಸಲು ಸಾಧ್ಯವಾಗುತ್ತದೆ !

ಪುರುಷನ ಕ್ರೋಮೋಸಂ ನಿಂದ ಒಂದು ಮಗುವಿನ ಲಿಂಗ ನಿರ್ಧರಿತವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಕಣ್ಣೆದುರಿದ್ದರೂ ಪದೇಪದೇ ಹೆಣ್ಣು ಮಕ್ಕಳನ್ನು ಹಡೆಯುವವಳನ್ನು ದೂಷಿಸಿ, ಹೀಯಾಳಿಸಿ ಚಿತ್ರಹಿಂಸೆ ಕೊಡುತ್ತಿರುವ ಮನುವಿನ  ಹರಿಕಾರರು ಇಂದಿಗೂ (ಅತಿ ಅಕ್ಷರ ಕಲಿತವರಾಗಿಯೂ)  ನಮ್ಮ ನಡುವೆ ಇದೇ ಬೀಜಕ್ಷೇತ್ರ ಮನಸ್ಸಿನೊಂದಿಗೆ ಬದುಕುತ್ತಿಲ್ಲವೇ !! 

ಬ್ರಹ್ಮ ಮಾಯಾ ಮಾದರಿ‘  

ಬ್ರಹ್ಮ ಶಾಶ್ವತವಾದದ್ದು, ಸತ್ಯವಾದದ್ದು, ಸರ್ವಶಕ್ತ, ಸರ್ವಾಂತರ್ಯಾಮಿ. ಇನ್ನುಳಿದ ಎಲ್ಲವೂ ಮಾಯೆ. ಬ್ರಹ್ಮನನ್ನುಳಿದು ಯಾವ ಅಸ್ತಿತ್ವಕ್ಕೂ ಪ್ರಧಾನ್ಯತೆಯಿಲ್ಲ. ಅದ್ವೈತದ  ಒಂದು ವಿಶಿಷ್ಟ ಪರಿಕಲ್ಪನೆಯೇ ಬ್ರಹ್ಮಮಾಯ. 

ಮಾಯೆ: ಇದು ಮುಸುಕು. ನಾನು ನನ್ನದು ಎಲ್ಲವೂ ಈ ಮಾಯೆಯಲ್ಲಿರುವವರೆವಿಗೆ ಮಾತ್ರ.   ಬ್ರಹ್ಮನಲ್ಲಿ ಐಕ್ಯವಾಗುವುದು.  ಮಾಯೆಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ.  ಅದೊಂದು ವಸ್ತುವೂ ಅಲ್ಲ.  ಅದು ಕೆಳದರ್ಜೆಯ  ಅಸ್ತಿತ್ವ.  ಮಹಿಳೆಯೂ ಕೂಡ ಇಲ್ಲಿ ಇದೇ ಅಸ್ತಿತ್ವ ಹೊಂದಿರುವುದು.  ಅಂದರೆ ಅವಳ ಅಸ್ತಿತ್ವ ಮತ್ತು ಜೀವನ ಇರುವುದೇ ಪುರುಷನಿಗೋಸ್ಕರ.

ಪುರುಷ ಮತ್ತು ಪ್ರಕೃತಿ ಮಾದರಿ:  

ಪುರುಷ ಮತ್ತು ಪ್ರಕೃತಿ ಎರಡು ಸ್ವತಂತ್ರ ವಸ್ತುಗಳು ಎಂದು ಸಂಖ್ಯಾ ತತ್ವ ಪರಿಗಣಿಸುತ್ತದೆ.  ಆದರೆ ಇವುಗಳ ನೇರ ಗ್ರಹಿಕೆ ಸಾಧ್ಯವಿಲ್ಲ. 

ಪುರುಷ:  ಶಾಶ್ವತವಾಗಿರುವವನು ಪುರುಷ. ಮೂಲ ಸ್ವರೂಪನಾದ ಅವನು ಸ್ಥಾಯೀ ರೂಪನಾಗಿ ಎಲ್ಲರ ವೀಕ್ಷಣೆ ಮಾಡುತ್ತಾನೆ.  ಅವನು ನಿರ್ಗುಣ,  ನೋವು-ನಲಿವುಗಳಿಲ್ಲ.  ತಟಸ್ಥ.  ನಿರಾಸಕ್ತ ಬಂಧನದಿಂದ ಮುಕ್ತನಾಗಿರುತ್ತಾನೆ. 

ಆದರೆ ಸ್ಥಾಯಿ ರೂಪದಿಂದ ಹೊರಬಂದ ದೇಹ ಮತ್ತು ಮನಸ್ಸಿನ ರೂಪದೊಳಗೆ ಅವನು ಪ್ರಕೃತಿಗೆ ಬಂದು ಸೇರುತ್ತಾನೆ.  ಪ್ರಕೃತಿಯೊಂದಿಗೆ ಸುಖ-ದುಃಖ ಅನುಭವಿಸುತ್ತಾನೆ.  ಪ್ರಕೃತಿಯ ಒಡನಾಡಕ್ಕೆ ಬಂದಾಗ ಪುರುಷ ಬೇರೆಯಾಗಿ ಕಾಣುತ್ತಾನೆ.  ದೇಹ ಮತ್ತು ಮನಸ್ಸಿನ ಜೀವಗಳ ರೂಪದಲ್ಲಿ ವೈವಿಧ್ಯಮಯವಾಗಿ ಕಾಣುತ್ತಾನೆ.  

ಪ್ರಕೃತಿಇದಕ್ಕೆ ಪ್ರಜ್ಞೆ ಇಲ್ಲ. ಆದರೂ ಅವಳಿಗೆ ಹುಟ್ಟು-ಸಾವು ಇದೆ.  ಪುರುಷನ ಆನಂದಕ್ಕೋಸ್ಕರ,  ಮುಕ್ತಿಗೋಸ್ಕರ ಪ್ರಕೃತಿ ಕ್ರಿಯಾಶೀಲವಾಗುತ್ತಾಳೆ.  ಪುರುಷ ಪ್ರಕೃತಿಯನ್ನು ತನ್ನ ಸುಖಕ್ಕಾಗಿ ಕ್ರಿಯಾಶೀಲವಾಗಿಸುತ್ತಾನೆ.

ಹಿಂದೂ ಧರ್ಮದ ‘ಬ್ರಹ್ಮ ಮಾಯಾ ಮಾದರಿ’,  ‘ಪುರುಷ ಪ್ರಕೃತಿ ಮಾದರಿ’ ‘ಬೀಜ ಕ್ಷೇತ್ರ ಮಾದರಿ’ ಗಳು ಈ ಸಮಾಜದಲ್ಲಿ ಮಹಿಳೆ ಎಂದೂ  ಒಬ್ಬ ವ್ಯಕ್ತಿಯಾಗಿ ನಿಲ್ಲದಂತೆ ಮಾಡಿವೆ. ಧರ್ಮಾಂಧತೆ ಎಷ್ಟಿದೆಯೆಂದರೆ,  ಅರ್ಧದಷ್ಟಿರುವ ಒಂದು ಸಮುದಾಯವನ್ನು ಅವಲಂಬಿತಳನ್ನಾಗಿಯೋ, ಬಂಧಿತಳನ್ನಾಗಿಯೋ  ಮಾಡುವುದರಿಂದ ಬದುಕುಗಳನ್ನು ಕಟ್ಟುವುದಾದರೂ ಹೇಗೆ??  ಎಂದು ಒಂದರೆಕ್ಷಣ ಕೂಡ  ಆಲೋಚಿಸಿದಂತಿಲ್ಲ.  ಅದರಲ್ಲೂ ಮುಖ್ಯವಾಗಿ ಭೋಗದ ವಸ್ತುವನ್ನಾಗಿಯೇ ಪರಿಗಣಿಸಿರುವುದು ಅಕ್ಷಮ್ಯವಾಗಿದೆ.  ಇಂತಹ ಮನಸ್ಸುಗಳು ಇದೇ ಮನೋಭಾವವನ್ನು ಇರಿಸಿಕೊಂಡು ಶತಶತಮಾನಗಳನ್ನು  ದಾಟುತ್ತಲೇ ಇನ್ನೂ ಧರ್ಮಾಂಧರಾಗಿ ಗಟ್ಟಿಗೊಳ್ಳುತ್ತಿದ್ದಾರೆ.    

Share:

One Response

  1. Thought provkimg analysis of both genders.comparion of past and present.in system of production of progeny.the author needs to be congratulated widely.this article is blend of human behaviour with cogugal confusion.male or female should accepted like other animals

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ