ಕೋಮುವಾದಿ ಮನಸ್ಥಿತಿ ಮತ್ತು ಚರಿತ್ರೆಯಲ್ಲಿ ಅವಿತ ಸತ್ಯಗಳು
- ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು
ಐತಿಹಾಸಿಕ ಸ್ಮಾರಕಗಳ ಮುಂದೆಲ್ಲಾ ದೇಶೀ – ವಿದೇಶಿ ಪ್ರವಾಸಿಗಳಿಗೆ ಹಾಗೂ ಎಳೆ ಮುಗ್ಧ ಮನಸಿನ ವಿದ್ಯಾರ್ಥಿ ಯುವ ಜನರಿಗೆ ಬಹುತೇಕ ಒಂದು ನಿರ್ದಿಷ್ಟ ಕೋಮನ್ನು ಉದ್ದೇಶಿಸಿದ ದ್ವೇಷದ ಕಟ್ಟು ಕತೆಗಳನ್ನು, ಅರ್ಧ ಸತ್ಯಗಳನ್ನು ಸತ್ಯವೇ ಎಂಬಂತೆ ಮತ್ತಷ್ಟು ಬಣ್ಣ ಕಟ್ಟಿ ಗೈಡ್ ಮಾಡಲಾಗುತ್ತದೆ. ಪ್ರಾಚೀನ ದೇವಾಲಯದ ಒಂದು ಕಂಬವೋ ಶಿಲ್ಪವೋ ಒಡೆದಿದ್ದರೆ ಸ್ವಲ್ಪವೆಲ್ಲಾದರೂ ಶಿಥಿಲಗೊಂಡಿದ್ದರೆ ಅದು ಘಜ್ನಿಯೋ ಖಿಲ್ಜಿಯೋ ಔರಂಗಜೇಬನೋ ಇಲ್ಲವೇ ಟಿಪೂ ಸುಲ್ತಾನನೋ ಖುದ್ದಾಗಿ ತನ್ನ ಖಡ್ಗದಿಂದಲೇ ಮಾಡಿದ ದಾಳಿ ಎಂಬಂತೆ ಬಣ್ಣಿಸಲಾಗುತ್ತದೆ. ಅಂತಿಮವಾಗಿ ಇದು ಸಮುದಾಯ ಅಥವಾ ಜನಾಂಗವೊಂದನ್ನು ದುಷ್ಟರು ಕ್ರೂರಿಗಳು ರಾಕ್ಷಸರು ಎಂದು ಚಿತ್ರಿಸಲು ನೆರವಾಗುವ ಅತ್ಯಂತ ಸುಲಭದ ಮಾರ್ಗ.
ಬಹುತೇಕ ಪ್ರವಾಸಿಗಳಿಗೆ ತಾವು ಪ್ರವಾಸ ಹೋಗಿರುವ ಸ್ಮಾರಕ ಅಥವಾ ಪ್ರದೇಶದ ಚಿಕ್ಕ ಚಾರಿತ್ರಿಕ ಪರಿಚಯವೂ ಇರುವುದಿಲ್ಲ. ಸ್ಮಾರಕದ ಮುಂದೆ ಗೈಡ್ ಊದುವ ಇತಿಹಾಸದ ಪಾಠವನ್ನು ಕಾನ್ವೆಂಟ್ ಮಕ್ಕಳಂತೆ ಕಣ್ಣಗಲಿಸಿ ಕಿವಿ ನಿಮಿರಿಸಿ ಕೇಳುತ್ತಾರೆ. ಆಶ್ಚರ್ಯ ನಿಟ್ಟುಸಿರು ವಿಷಾದ ಸಿಟ್ಟು ದ್ವೇಷ ಧರ್ಮಾಭಿಮಾನ ಧರ್ಮಾಂಧತೆ ಎಲ್ಲವನ್ನೂ ನೂರು ರೂಪಾಯಿ ಫೀಜು ಕೊಟ್ಟು ಎದೆಯ ಖಾಲಿ ಬ್ಯಾಗಿನಲ್ಲಿ ತುಂಬಿಟ್ಟುಕೊಂಡು ಹೊರಬರುತ್ತಾರೆ. ಹಾಗೆ ತುಂಬಿಟ್ಟುಕೊಂಡದ್ದು ಕೊಳೆತು ನಾರಲು ಆರಂಭಿಸುತ್ತದೆ, ವಾಸನೆ ಹೊರಬರಲೇಬೇಕು, ಅದು ಸಿಎಎ, ಎನ್.ರ್.ಸಿ., ಕಾಶ್ಮೀರ ಸಮಸ್ಯೆ ಪಾಕಿಸ್ತಾನದ ಹೆಸರು ಯುದ್ಧ ಚುನಾವಣೆ ರಾಮ ಮಂದಿರ ಗೋವು ಮೊದಲಾದ ಸಂದರ್ಭಗಳಲ್ಲಿ ಹೊರಹೊಮ್ಮಿ ದೇಶಾದ್ಯಂತ ಘಾಟು ಎಬ್ಬಿಸುತ್ತದೆ. ಈ ನಡುವೆ ಮತಾಂಧತೆಯ ಮೂಸೆಯಲ್ಲಿ ಉದ್ರೇಕದ ಭಾಷಣ ಬಿಗಿಯುವ ಕೇಸರೀ ಭಾಷಣಕಾರರ ಟೊಳ್ಳು ವಿಚಾರಗಳು ಅವರು ಬರೆದ ಬರಿಬೆತ್ತಲೆ ಪುಸ್ತಕಗಳೂ ಲಜ್ಜೆಬಿಟ್ಟು ಹೆಜ್ಜೆ ಹಾಕುತ್ತಾ ಅರಚುವ ನಕಲಿ ಇತಿಹಾಸ ಪಂಡಿತರ ವಿಷಭಾಷಣಗಳೂ ಸೇರಿಕೊಂಡು ಸಾಮಾನ್ಯ ಜನತೆಯ ಮಿದುಳು ಕಲಸುಮೇಲೋಗರವಾಗಿ ಹೋಗಿದೆ.
ಜನ ತಮ್ಮ ಹಳ್ಳಿಯ ಹಳೆಯ ಕಾಲದ ಶಿವನದ್ದೋ ರಾಮನದ್ದೋ ಬಸವಣ್ಣನದ್ದೋ ಗುಡಿ ಶಿಥಿಲಗೊಂಡಿದ್ದರೆ ಅದು ಸಾಬರದ್ದೇ ಕೆಲಸ ಎಂದು ಯಾವುದೇ ಪೂರ್ವಾಪರ ಯೋಚನೆ ಇಲ್ಲದೆ ಪ್ರಜ್ಞೆ ಇಲ್ಲದೆ ಸಾಕ್ಷಿ ಇಲ್ಲದೆ ಅಪಾರಧಿ ಸ್ಥಾನದಲ್ಲಿ ಸಾಬರನ್ನು ತಂದು ನಿಲ್ಲಿಸಿಬಿಡುತ್ತಾರೆ. ಈ ಕತೆಗಳಿಗೆ ಮತ್ತಷ್ಟು ತುಪ್ಪ ಸುರಿಯುವ ಕ್ರಿಮಿಗಳು ಹಳ್ಳಿ ಹಳ್ಳಿಗಳಲ್ಲಿ ಊರೂರುಗಳಲ್ಲಿ ಬೆಕ್ಕಿನಂತೆ ಜಪ್ಪುಹಾಕಿಕೊಂಡು ಈಗಾಗಲೇ ಕೂತುಬಿಟ್ಟಿವೆ. ನಮ್ಮ ಜನಕ್ಕೆ ಒಂದು ಸಾವಿರಾರು ವರ್ಷದ ಇಲ್ಲವೇ ಶತಮಾನಗಳಷ್ಟು ಹಳೆಯ ಕಟ್ಟಡ ಮಳೆ ಗಾಳಿ ಬಿಸಿಲು ಪ್ರವಾಹಕ್ಕೆ ಸಿಲುಕಿ, ಜನರು ಊರು ಬಿಟ್ಟು ಗುಳೇ ಹೋಗಿ, ಆರಾಧನೆ ನಿತ್ತು, ಮರಗಿಡ ಬಳ್ಳಿ ಲಂಟಾನು ಬೆಳೆದು ಕಾಲಕ್ರಮೇಣ ನೆಲಕಚ್ಚಿರುತ್ತದೆ, ಮಣ್ಣುಗೂಡಿರುತ್ತದೆ ಎಂಬ ಸತ್ಯವೂ ಗೊತ್ತಿರುವುದಿಲ್ಲ. ಶೈಥಿಲ್ಯದ ಕಾರಣವನ್ನು ಸುಲಭವಾಗಿ ಸಾಬರ ಕೊರಳಿಗೆ ನೇತುಹಾಕಿಬಿಡುತ್ತಾರೆ. ಇದು ನಮ್ಮ ದೇಶದ ವಾಸ್ತವ ಸ್ಥಿತಿ ಮತ್ತು ದುರಂತ.
ವಿಜಯನಗರದ ರಾಜಧಾನಿ ಹಂಪಿ ಹಾಳಾದದ್ದು ತಾಳಿಕೋಟೆ ಯುದ್ಧದ ಬಳಿಕ ಎಂಬುದು ನಿರ್ವಿವಾದ. ಆದರೆ ಅಷ್ಟನ್ನೂ ಬಹಮನಿ ಸುಲ್ತಾನರೇ ಎಸಗಿದರೇ ಎಂಬುದನ್ನಿಲ್ಲಿ ವಿಚಾರ ಮಾಡಬೇಕು. ತಾಳಿಕೋಟೆಯಿಂದ ಬಹಮನ್ನರ ಸೈನ್ಯ ಹಂಪಿಗೆ ದಾಳಿ ಇಡುವ ಮುನ್ನವೇ ಹಂಪಿಯ ನಿವಾಸಿಗಳೇ ಸಾಧ್ಯವಾದಷ್ಟು ತಮ್ಮ ಹಂಪಿಯನ್ನೇ ಕೊಳ್ಳೆ ಹೊಡೆದು ಊರು ಬಿಟ್ಟರೆಂಬುದಾಗಿ ಹೇಳಲಾಗಿದೆ. ಮಾತ್ರವಲ್ಲ ಅರಮನೆಯ ಜನಕ್ಕಾಗಲೀ ಕೋಟೆ ಕಾವಲಿನ ಸೈನಿಕರಿಗಾಗಲೀ ಇದನ್ನು ತಡೆಯಲು ಆಗಲೇ ಇಲ್ಲ. ಊರು ಕೊಳ್ಳೆಯಲ್ಲಿ ಸೈನಿಕರೂ ಪಾಲ್ಗೊಂಡಿರಬಹುದು. ಬಹಮನ್ನರ ಸೈನ್ಯ ಹಂಪಿಗೆ ದಾಳಿ ಇಟ್ಟು ಧ್ವಂಸ ಮಾಡುವ ಹೊತ್ತಿಗೆ ಅಲ್ಲಿಯವರೇ ಹಂಪಿಯನ್ನು ಅಸ್ತವ್ಯಸ್ತಗೊಳಿಸಿರಲಿಕ್ಕೆ ಸಾಕು. ಬಹು ಮುಖ್ಯವಾಗಿ ಗಮನಿಸಬಹುದಾದ ಸಂಗತಿಯೆಂದರೆ ಹಂಪಿಯ ಶೈವ ಸ್ಮಾರಕಗಳು ಬಹುತೇಕ ಈಗಲೂ ಸುಸ್ಥಿತಿಯಲ್ಲಿದ್ದು, ಈಗಲೂ ಅಲ್ಲಿ ದೊಡ್ಡ ಪ್ರಮಾಣದ ಆರಾಧನೆ ನಡೆಯುತ್ತಲೇ ಇದೆ. ಹಾಗಾದರೆ ಬಹಮನ್ನರು ಶೈವ ದೇವಾಲಯಗಳನ್ನೇಕೆ ಹಾಗೇ ಬಿಟ್ಟರು ಎಂಬ ಪ್ರಶ್ನೆ ಯಾರಿಗೂ ಏಳುವುದಿಲ್ಲ. ಹಂಪಿಯಲ್ಲಿ ವೈಷ್ಣವ ಮತ್ತು ಶೈವರ ನಡುವೆ ಇದ್ದ ಅಂತಃಕಲಹದ ಪರಿಣಾಮ ಹಾಗೂ ಪ್ರಭುತ್ವವು ಶೈವವನ್ನು ಉದಾಸೀನ ಮಾಡಿ ವೈಷ್ಣವರನ್ನು ವಿಜೃಂಭಿಸಿದ್ದರ ಫಲ ಇದಾಗಿದೆ. ಅಷ್ಟಾಗಿಯೂ ಬಹಮನ್ನರ ಸೈನ್ಯದಲ್ಲಿ ಮುಸ್ಲಿಮ್ ಯೋಧರೇ ತುಂಬಿದ್ದರೇ? ಖಂಡಿತಾ ಇಲ್ಲ ತಾಳಿಕೋಟೆ ಯುದ್ಧದಲ್ಲಿ ಬಹಮನಿಗಳ ಜೊತೆ ಮರಾಠ ಸರದಾರರು ಅನೇಕರು ಇದ್ದರು. ಬಹುಸಂಖ್ಯಾತ ಹಿಂದೂಗಳಿರುವ ದೇಶದ ಮುಸ್ಲಿಮ್ ರಾಜನ ಸೈನ್ಯದಲ್ಲಿ ಕೇವಲ ಮುಸ್ಲಿಮ್ ಯೋಧರೇ ಇದ್ದರು ಹಿಂದೂ ರಾಜನ ಸೈನ್ಯದಲ್ಲಿ ಬರೀ ಹಿಂದೂಗಳೇ ಇದ್ದರೆಂಬುದನ್ನು ನಾನಂತೂ ಒಪ್ಪುವುದಿಲ್ಲ. ರಾಬರ್ಟ್ ಸಿವೆಲ್ ಎಂಬ ಬ್ರಿಟಿಷ್ ವಿದ್ವಾಂಸ ಒಂದೂವರೆ ಶತಮಾನದಷ್ಟು ಹಿಂದೆಯೇ ಹಂಪಿಯ ಸ್ಮಾರಕಗಳ ಚಿತ್ರಗಳನ್ನು ತೆಗೆದ ಆ ಚಿತ್ರಗಳಲ್ಲಿ ಬಹುತೇಕ ಸ್ಮಾರಕಗಳು ಸುಸ್ಥಿಯಲ್ಲೇ ಇದ್ದು ಆನಂತರ ಶಿಥಿಲಗೊಂಡ ಸಾಕ್ಷಿಗಳಿವೆ. ಹೀಗಿರುವಾಗ ಹಂಪಿಯ ನಾಶದ ಶತಮಾನಗಳ ಅವಧಿಯನ್ನು ಒಂದು ಜನಾಂಗ ಅಥವಾ ಮುಸ್ಲಿಮ್ ರಾಜರು ಕಾರಣ ಎಂದಷ್ಟೇ ಭಾವಿಸುವುದು ಮೂರ್ಖತನ ಮಾತ್ರವಲ್ಲ ಇದೊಂದು ವ್ಯವಸ್ಥಿತ ಸಂಚು. ಹಂಪಿಗೆ ಹೋದ ಬಹುತೇಕರು ವಿಚಾರಿಸಿ ನೋಡದೇ ಈ ವಿಷವನ್ನೇ ತುಂಬಿಕೊಂಡು ಹೊರಬರುತ್ತಾರೆ. ಏಕೆಂದರೆ ಶಿಕ್ಷಣದ ಕಲಿಕೆಯ ಹಂತದಲ್ಲೇ ಅಂತಹ ಪೇಲವವಾದ ಇತಿಹಾಸದ ಪಾಠಗಳನ್ನು ಕಲಿಸಲಾಗಿರುತ್ತದೆ. ಕೆಲವರಿಗೆ ಅದೂ ಇಲ್ಲ.
ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮ್ ದೊರೆಗಳು ಇಲ್ಲಿನ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿಲ್ಲವೆಂದು ನಾನು ಸಾರಾಸಗಟಾಗಿ ತಳ್ಳಿ ಹಾಕಲಾರೆ. ಅದು ಧಾರ್ಮಿಕ ಕಾರಣಕ್ಕಿಂತ ಸಂಪತ್ತಿನ ಕೊಳ್ಳೆ ಹೊಡೆಯುವ ಕಾರಣವೇ ಆಗಿದ್ದಿತು. ಹಿಂದೂ ದೇವಾಲಯಗಳು ಅದರಲ್ಲೂ ವೈಷ್ಣವ ದೇವಾಲಯಗಳು ಸಂಪತ್ತಿನ ಖಜಾನೆಗಳಾಗಿದ್ದವು. ರಾಜತ್ವದ ಕಾಲದಲ್ಲಿ ಯುದ್ಧದ ಮುಖ್ಯ ಉದ್ದೇಶಗಳಲ್ಲಿ ಕೊಳ್ಳೆ ಹೊಡೆಯುವುದೂ ಸೇರಿದ್ದಿತು. ಇದು ಕೇವಲ ಮುಸ್ಲಿಮ್ ರಾಜರ ಕೆಲಸವಾಗಿರಲಿಲ್ಲ ಅಥವಾ ನೀತಿಯಾಗಿರಲಿಲ್ಲ. ಕಾಶ್ಮೀರದ ಹಿಂದೂ ರಾಜ ಶ್ರೀಹರ್ಷನ ಯುದ್ಧ ನೀತಿಗಳಲ್ಲಿ ದೇವಾಲಯಗಳ ಮೇಲಿನ ದಾಳಿಯೂ ಕೊಳ್ಳೆಯೂ ಬಹುಮುಖ್ಯ ನೀತಿಯಾಗಿತ್ತು. ಅವನ ಸೇನೆಯಲ್ಲಿ ದೈವಮೂಲೋತ್ಪಾಟನಾ ಪಡೆಯೂ ಇತ್ತು. ದಾಳಿ ಎಂದಮೇಲೆ ಧ್ವಂಸ ಕಟ್ಟಿಟ್ಟ ಬುತ್ತಿ ಎಂದು ಬೇರೆ ಹೇಳಬೇಕಿಲ್ಲ. ಶ್ರೀಹರ್ಷ ದೇವಾಲಯಗಳ ಮೇಲೆ ದಾಳಿ ಮಾಡಿಸುತ್ತಿದ್ದುದೂ ಸಂಪತ್ತಿನ ಕೊಳ್ಳೆಗಾಗಿಯೇ. ವಿಜಯ ನಗರದ ಸೇನೆ ಬಹಮನ್ನರ ಮೇಲೆ ದಾಳಿಗೆ ಹೊರಟಾಗ ದಾರಿ ನಡುವೆ ಸಿಗುತ್ತಿದ್ದ ಅವರ ಮಸೀದಿಗಳಲ್ಲಿ ತಮ್ಮ ಕುದುರೆ ಕತ್ತೆ ಮೊದಲಾದ ಪ್ರಾಣಿಗಳನ್ನು ಕಟ್ಟಿ ಅಲ್ಲಿ ಮಲಿನಗೊಳಿಸಿ ಹೋಗುತ್ತಿದ್ದರೆಂದು ವಿದೇಶಿ ಪ್ರವಾಸಿಗನೊಬ್ಬ ಹೇಳುತ್ತಾನೆ. ಮರಾಠಾ ಪೇಶ್ವೆಗಳೂ ಶೃಂಗೇರಿಯ ಶಾರದಾ ಮಂದಿರದ ಮೇಲೆ ಮಾಡಿದ್ದು ಇದೇ ಮಾದರಿಯ ದಾಳಿಯನ್ನೇ ಹಾಗೂ ಕರ್ನಾಟಕದ ಐವತ್ತು ಪಟ್ಟಣಗಳ ಮೇಲೆ ನಡೆಸಿದ ವಿದ್ವಂಸಕ ದಾಳಿ ಧ್ವಂಸ ಕೊಲೆಗಡುಕತನ ಅತ್ಯಾಚಾರಗಳಿಗೆ ಲೆಕ್ಕವಿರಲಿಲ್ಲ. ಇದನ್ನೆಲ್ಲಾ ಬುಕಾನನ್ ಕೂಡಾ ದಾಖಲಿಸುತ್ತಾನೆ. ಮರಾಠಾ ಪೇಶ್ವೆಗಳು ಹಿಂದೂ ಧರ್ಮ ರಕ್ಷಣೆಯ ಹೆಸರಲ್ಲಿ ಹಿಂದೂಗಳನ್ನೇನು ಹಿಂಸಿಸದೇ ಬಿಟ್ಟಿಲ್ಲ. ಅವರ ಸೇನಾನಿಗಳಾದ ಪರಶುರಾಮ ಬಾಹು ಮತ್ತು ಬಲವಂತರಾವ್ ಮೆಹಂದಳೆಯರ ದಾಳಿಗೆ ಶಾರದಾ ದೇವಿಯ ವಿಗ್ರಹವೂ ಉಳಿಯಲಿಲ್ಲ. ಸ್ವಾಮೀಜಿ ಶೃಂಗೇರಿ ಬಿಟ್ಟು ಓಡಿಹೋಗಬೇಕಾಯಿತು. ಅದನ್ನು ಉಳಿಸಿದಾತ ಬೆಳೆಸಿದಾತ ಮುಸ್ಲಿಮ್ ರಾಜ ಟಿಪ್ಪೂ ಸುಲ್ತಾನ. ಕೆದಕುತ್ತಾ ಹೋದಂತೆ ಚರಿತ್ರೆಯಲ್ಲಿ ತೆರೆದುಕೊಳ್ಳುವ ಸತ್ಯಗಳೇ ಬೇರೆ. ಜನರ ಮನಸಿನಲ್ಲಿ ತುಂಬಿಕೊಂಡಿರುವ ವಿಚಾರಗಳೇ ಬೇರೆ.
ಬಾಬರೀ ಮಸೀದಿ ಇದ್ದ ಸ್ಥಳದಲ್ಲಿ ಹಿಂದೆ ರಾಮ ಮಂದಿರವಿತ್ತು ಎಂಬುದಕ್ಕೆ ನಂಬಲರ್ಹ ಸಾಕ್ಷಿಗಳೇ ಇಲ್ಲ. ತಾಜಮಹಲಿನ ಸ್ಥಳದಲ್ಲಿ ತೇಜೋ ಮಹಲ್ ಇತ್ತು ಶಿವಾಲಯವಿತ್ತು ಎಂಬ ಹಸಿ ಸುಳ್ಳುಗಳೇ ವಿಜೃಂಭಿಸುತ್ತವೆ ಮಾತ್ರವಲ್ಲ ನಮ್ಮ ದೇಶದಲ್ಲಿ ಒಂದು ಮತಾಂಧ ಸ್ಮಾರಕಭಂಜಕ ಸೇನಾಪಡೆಯೇ ಹುಟ್ಟಿಕೊಂಡುಬಿಟ್ಟಿದೆ. ನಾವು ಒಡೆಯುವ ಸಂಸ್ಕೃತಿಯನ್ನು ಬೆಂಬಲಿಸುತ್ತಿದ್ದೇವೆ. ಮತ್ತು ಸ್ಮಾರಕಗಳು ಒಡೆದುಹೋದುದರ ಬಗೆಗೆ ರಾಜ್ಯಗಳು ನಾಶವಾದುದರ ಬಗೆಗೆ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಯೋಚಿಸುತ್ತಿದ್ದೇವೆ ನಮ್ಮ ಸೋಲು ನಮ್ಮ ಭಾರತೀಯ ಸಂಸ್ಕೃತಿಯ ಅಳಿವು ಇರುವುದು ಇಲ್ಲೇ.
ಶಿವಾಜಿಯನ್ನು ಹಿಂದುತ್ವದ ಮುಖವಾಣಿಯಾಗಿಸಿ ಅವನ ಹೆಸರಿನ ಬಲದ ಮೇಲೆ ಮತಗಳಿಕೆ ಮಾಡಿ ಅಧಿಕಾರಕ್ಕೆ ಏರುತ್ತಿರುವ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಶಿವಾಜಿ ಯುದ್ಧ, ದಂಡಯಾತ್ರೆಯ ಕಾಲದಲ್ಲಿ ಯಾವುದೇ ಕಾರಣಕ್ಕೂ ಅನ್ಯಮತೀಯರ ಸ್ಮಾರಕಗಳು ಮತ್ತು ಪವಿತ್ರ ಗ್ರಂಥಗಳ ಮೇಲೆ ದಾಳಿ ಹಾನಿ ಮತ್ತು ಅಪಚಾರದಂತಹ ಕುಕೃತ್ಯಗಳನ್ನು ಮಾಡದಂತೆ ಆದೇಶಿಸಿದ್ದ ಎಂಬುದನ್ನು ಹೇಳುವುದೇ ಇಲ್ಲ. ಮಾತ್ರವಲ್ಲ ಶಿವಾಜಿಯ ತಂದೆ ಷಹಾಜಿಯೇ ಬಹಮನ್ ಸುಲ್ತಾನರ ಸೇನಾಧಿಕಾರಿಯಾಗಿದ್ದ ಮಾತ್ರವಲ್ಲ; ಬಹಮನ್ನರು ಷಹಾಜಿಗೆ ಬೆಂಗಳೂರಿನ ಜಹಗೀರುದಾರನನ್ನಾಗಿ ನೇಮಿಸಿದ್ದರು. ಇಕ್ಕೇರಿಯ ಮೇಲೆ ನಡೆದ ದಾಳಿ ಮತ್ತು ವಿಜಯದ ಫಲವಾಗಿ ಷಹಾಜಿಗೆ ಈ ಉನ್ನತ ಅಧಿಕಾರ ಲಭಿಸಿದ್ದಿತು. ಶಿವಾಜಿಯನ್ನು ಅಫಜಲ್ ಖಾನ್ ಕೊಲ್ಲಲು ಯತ್ನಿಸಿದಾಗ ಶಿವಾಜಿಯ ರಕ್ಷಣೆಗೆ ಧಾವಿಸಿದವನು ಶಿವಾಜಿಯ ಒಬ್ಬ ಮುಸ್ಲಿಮ್ ಅಂಗರಕ್ಷಕ ಮಾತ್ರವಲ್ಲ ಔರಂಗಜೇಬ ಶಿವಾಜಿಯನ್ನು ಕಾರಾಗೃಹದಲ್ಲಿ ಇಟ್ಟಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಬಂದದ್ದು ಮುಸ್ಲಿಮರ ಸಹಾಯದಿಂದಲೇ. ಇದೇ ಬಹಮನಿಗಳು ಕರ್ನಾಟಕದ ಕೆಳದಿ ಮತ್ತು ಮೈಸೂರು ಸಂಸ್ಥಾನಗಳ ಮೇಲೆ ನಡೆಸಿದ ದಾಳಿಯಲ್ಲಿ ವೇದೋಜಿ, ಶಹಾಜಿ, ಸಖಾಜಿ, ರಾಘವ ಪಂಡಿತರೆಂಬ ಮರಾಠಾ ಮುಖ್ಯರೂ ಇದ್ದರು. ಬಿಜಾಪುರದವರ ಜೊತೆ ಅತ್ಯಂತ ನಿಕಟ ಸಂಬಂಧ ಇರಿಸಿಕೊಂಡಿದ್ದ ಬಸವಾಪಟ್ಟಣದ ಹನುಮಪ್ಪ ನಾಯಕ ಅಥವಾ ಕೆಂಗೇಂದ್ರ ಈ ಎರಡೂ ದಾಳಿಗಳಲ್ಲಿ ರಣದುಲ್ಲಾಖಾನನ ಜೊತೆಗಿದ್ದನಲ್ಲದೇ ಹರಪನಹಳ್ಳಿ, ಕನಕಗಿರಿ, ಸೊಂಡೂರು, ಉಜ್ಜಿನಿ, ರಾಯದುರ್ಗ, ಹಟ್ಟಿ, ದೊಡ್ಡೇರಿ, ಕುಂದುರುಪೆ, ಹಿರಿಯೂರು, ಚಿಕ್ಕನಾಯಕನ ಹಳ್ಳಿ, ತುರುಗೆರೆ, ನರಸಿಂಹಪುರ ಮೊದಲಾದ ಅರಸರು ಪಾಳೆಪಟ್ಟುಗಳನ್ನು ಸಂಘಟಿಸಿ ಮುಸ್ಲಿಮರ ಸೈನ್ಯಕ್ಕೆ ಕೂಡಿಸಿದವನೂ ಇವನೇ. ಇತಿಹಾಸ ಹೀಗಿರುತ್ತದೆ. ಅಲ್ಲಿ ಪ್ರಭುತ್ವಗಳಿಗೆ ಧರ್ಮಕ್ಕಿಂತ ರಾಜಕಾರಣ ವಿಸ್ತರಣೆ ಸಂಪತ್ತು ಅಧಿಕಾರ ಮುಖ್ಯವಾಗಿರುತ್ತದೆ. ಇದಾವುದೇ ಆಳವಾದ ಅರಿವು ಪ್ರವಾಸಿಗೂ ಇರುವುದಿಲ್ಲ. ಪ್ರವಾಸಿಗಳಿಗೆ ಸ್ಮಾರಕವನ್ನು ಪರಿಚಯಿಸುವ ಮಾರ್ಗದರ್ಶಕರಿಗೂ ಇರುವುದಿಲ್ಲ. ಇವರೆಲ್ಲರೂ ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟಿಸಿದ ಪ್ರಚೋದಕ ಸುಳ್ಳುಗಳಿಂದ ಪ್ರಭಾವಿತರಾಗಿರುತ್ತಾರೆ. ಇಲ್ಲಿ ಪಾರದರ್ಶಕತೆ ವಿಮರ್ಶೆ ವಿವೇಚನೆಗಳಿಗೆ ಅವಕಾಶವೇ ಇರುವುದಿಲ್ಲ.
ಬಿಜಾಪುರದ ಆದಿಲ್ ಷಹನನ್ನು ಜನತೆ ಜಗದ್ಗುರು ಎಂದೇ ಕರೆದಿದ್ದಾರೆ. ಆತ ಒಬ್ಬ ಸೂಫಿಯಾಗಿದ್ದ. ಆತ ತನ್ನ ‘ಕಿತಾಬ್ ಎ ನೌರಸ್’ ಕೃತಿಯಲ್ಲಿ ಹಿಂದೂ ದೇವತೆಗಳಾದ ಶಾರದೆ ಮತ್ತು ಗಣೇಶರನ್ನು ಮನಸಾರೆ ಸ್ತುತಿಸಿದ್ದಾನೆ. ತನ್ನ ಕೋಟೆಯಲ್ಲಿ ಶಾರದಾ ಮಂದಿರವನ್ನೂ ಕಟ್ಟಿಸಿದ್ದನಂತೆ. ಸಂಗೀತಗಾರರಿಗಾಗಿ ನವರಸಪುರವನ್ನೇ ನಿರ್ಮಿಸಿದ. ಅಸಲಿಗೆ ಇವು ಇಸ್ಲಾಮಿನ ತದ್ವಿರುದ್ಧದ ನಿಲುವುಗಳಾಗಿದ್ದವು.
ಬಹಮನ್ನರ ಎರಡನೇ ಇಬ್ರಾಹಿಂ ಆದಿಲ್ ಷಹ ರಣದುಲ್ಲಾಖಾನನ ನೇತೃತ್ವದಲ್ಲಿ ಕೆಳದಿಯರ ಇಕ್ಕೇರಿಯ ಮೇಲೆ ದಾಳಿ ಮಾಡಿಸಿ ಇಕ್ಕೇರಿಯನ್ನು ಕೊಳ್ಳೆ ಹೊಡೆದರೂ ಅಲ್ಲಿಯ ಇಂಡೋ ಇಸ್ಲಾಮಿಕ್ ಶೈಲಿಯ ಅಘೋರೇಶ್ವರ ದೇವಾಲಯ ಈಗಲೂ ಸುಸ್ಥಿತಿಯಲ್ಲಿ ಉಳಿದದ್ದಾದರೂ ಹೇಗೆ? ಯಾವುದೇ ಯುದ್ಧ ದಂಡಯಾತ್ರೆಗಳು ದಾಳಿಗಳು ನಡೆಯುತ್ತಿದ್ದುದು ಹೆಚ್ಚಿನ ಪಾಲು ವೈರಿ ರಾಜ್ಯದ ರಾಜಧಾನಿಯನ್ನು ಕೇಂದ್ರೀಕರಿಸಿಕೊಂಡು. ರಾಜಧಾನಿಗಳ ಮೇಲೆ ದಾಳಿಯಾದಾಗಲೆಲ್ಲಾ ಅಲ್ಲಿ ನಿರ್ಮಿಸಲಾಗಿರುತ್ತಿದ್ದ ಕೋಟೆ ಅರಮನೆ ದೇವಾಲಯ ಇಲ್ಲವೇ ಮಸೀದಿ ಮಠ ಮೊದಲಾದವು ದಾಳಿಗೀಡಾಗುತ್ತಿದ್ದದ್ದು ಸಹಜವಾಗಿತ್ತು. ರಾಜಧಾನಿಯಿಂದ ಹೊರಗಿದ್ದ ಸ್ಥಾವರಗಳ ಮೇಲೆ ನಡೆದಿರುವ ದಾಳಿಗಳ ಪ್ರಮಾಣ ಕಡಿಮೆ. ಆಗಿಲ್ಲವೆಂದು ಹೇಳಲಾಗದು. ದೋರಸಮುದ್ರ ಹಂಪಿ ಇಕ್ಕೇರಿ ಬಿಜಾಪುರ ಬೀದರ್ ಕಲ್ಬುರ್ಗಿ ಇವೆಲ್ಲಾ ರಾಜಧಾನಿಗಳೇ ಆಗಿದ್ದವು.
ಈ ದಾಳಿ ಕೊಳ್ಳೆ ದ್ವಂಸ ಒತ್ತಟ್ಟಿಗಿರಲಿ. ಚರಿತ್ರೆಯಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟ ಹಿಂದೂ ರಾಜರಿದ್ದಾರೆ. ವಿಜಯನಗರದ ಅರಸರು ಮುಸ್ಲಿಮರಿಗಾಗಿ ಮಸೀದಿ ದರ್ಗಾ ನಮಾಜುಕಟ್ಟೆಗಳನ್ನು ಕಟ್ಟಲು ಧಾರಾಳವಾಗಿ ಅವಕಾಶ ನೀಡಿದ್ದಾರೆ. ಕೆಳದಿಯ ಅರಸರು ಕವಲೇದುರ್ಗದಲ್ಲಿ ಆನಂದಪುರದಲ್ಲಿ ಮುಸ್ಲಿಮರಿಗೆ ಮಸೀದಿಯನ್ನು ಕಟ್ಟಿಸಿಕೊಟ್ಟರಲ್ಲದೆ ಆ ಮಸೀದಿಗೆ ದತ್ತಿ ನೀಡಿದ ದಾಖಲೆಗಳಿವೆ.
ಹೈದರಾಲಿ ಮತ್ತು ಟಿಪ್ಪೂ ಸುಲ್ತಾನರು ಶ್ರೀರಂಗಪಟ್ಟಣ ನಂಜನಗೂಡು, ಮೇಲುಕೋಟೆ, ತಂಜಾವೂರು, ಮೈಸೂರು, ಗುರುವಾಯೂರು, ಚೇಲಾಂಬರ, ನೀಲೇಶ್ವರ, ಶೃಂಗೇರಿ ಮೊದಲಾದ ದೇವಾಲಯಗಳಿಗೆ ಧಾರಾಳವಾಗಿ ನೀಡಿದ ದಾನ ದತ್ತಿ ಕೊಡುಗೆ ಮೊದಲಾದವುಗಳ ಪಟ್ಟಿ ದೊಡ್ಡದಿದೆ. ಟಿಪ್ಪೂ ತನ್ನ ರಾಜ್ಯದಾದ್ಯಂತ ಅನೇಕ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನ ಹೆಸರಲ್ಲಿ ಸಲಾಮಿ ಪೂಜೆ ನಡೆಯುವಂತೆಯೂ ಮಾಡಿದ್ದಾನೆ. ಹೈದರಾಲಿಯು ಶ್ರೀರಂಗಪಟ್ಟಣದ ಕೋಟೆಯಲ್ಲಿನ ಖದೀಂ ಮದ್ದಿನ ಮನೆಗೆ ಬೆಂಕಿಬಿದ್ದು ರಂಗನಾಥಸ್ವಾಮಿಯ ದೇವಾಲಯ ಭಾಗಶಃ ಧ್ವಂಸವಾದಾಗ ಒಂದೇ ತಿಂಗಳಿನಲ್ಲಿ ಹಾಳಾದ ಭಾಗವನ್ನು ಕಟ್ಟಿಸಿಕೊಟ್ಟಿದ್ದಾನೆ. ದೇಶದ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದವರು ಅತೀ ಹೆಚ್ಚು ಮುಸ್ಲಿಮರೇ. ನಾವು ಈ ಕಟ್ಟುವ ಹೊಂದಿಕೊಂಡು ಹೋಗುವ ಪರಧರ್ಮವನ್ನು ಗೌರವಿಸುವ ರಕ್ಷಿಸುವ ಪ್ರೋತ್ಸಾಹಿಸುವ ಚಾರಿತ್ರಿಕ ಸತ್ಯಗಳನ್ನು ಬದಿಗೊತ್ತಿ ಬರೀ ಕೆಡವಿದ್ದು ದೋಚಿದ್ದು ನಾಶಮಾಡಿದ್ದರ ಹಿಂದೆಯೇ ಹೋಗಿ ಬರೀ ದ್ವೇಷವನ್ನಷ್ಟೇ ಬೆಳಿಸಿಕೊಳ್ಳುತ್ತಿದ್ದೇವೆ. ಇವನ್ನೇ ಮುಗ್ಧ ಜನರ ಮನಸಲ್ಲಿ ಬಿತ್ತಲಾಗುತ್ತಿದೆ. ಸೂಫಿಗಳ ದರ್ಗಾದಲ್ಲಿ ಸಾಧು ಸಂತ ಸಿದ್ಧರ ಮಠ ಮಂದಿರಗಳಲ್ಲಿ ಅಲ್ಲಾಹು ಈಶ್ವರ ಒಂದಾಗಿ ಸಮಾವೇಶಗೊಂಡು ಮನುಷ್ಯರೆಲ್ಲರೂ ಒಂದೇ ಎಂದು ಕೈ ಬೀಸಿ ಕರೆಯುತ್ತಿರುವುದು ಯಾರಿಗೂ ಕೇಳಿಸುತ್ತಿಲ್ಲ.
ಜನಾಂಗವೊಂದರ ಬಗ್ಗೆ ಎಗ್ಗಿಲ್ಲದೇ ನಡೆಯುತ್ತಿರುವ ಈ ಅಪಪ್ರಚಾರದಿಂದ ಭಾರತದ ಬಹುಜನರನ್ನು ಒಡೆದು ಅಲ್ಪಸಂಖ್ಯಾತ ಆರ್ಯನ್ ಮನುವಾದಿಗಳ ಸಂಘ ಮಾತ್ರ ಅಧಿಕಾರ, ಸಂಪತ್ತು, ಸೌಲತ್ತು ಎಲ್ಲವನ್ನೂ ಸಾಧಿಸಿ ದೇಶದ ಸರ್ವ ಶೂದ್ರರನ್ನೂ ವ್ಯವಸ್ಥಿತವಾಗಿ ಮೂರ್ಖರನ್ನಾಗಿಸಿದೆ. ಹಾಗೆ ಮೂರ್ಖರರಾದವರ ಹುಂಬತನ ಮತ್ತು ಮೌಢ್ಯದ ಬಂಡವಾಳದಿಂದ ಅಧಿಕಾರ ಸ್ಥಾಪಿಸಲಾಗಿದೆ. ಇದೊಂಥರಾ ಒಡೆದಾಳುವ ನೀತಿ. ಜಗತ್ತಿನ ಯಾವುದೇ ಬುದ್ಧಿವಂತ ವರ್ಗ ತನ್ನ ದೇಶದ ಶೂದ್ರರನ್ನು ಹೀಗೆಯೇ ಒಡೆದಾಳುತ್ತಿರುತ್ತದೆ. ಹೀಗೆ ಒಡೆದಾಳಲು ಜನರ ಇತಿಹಾಸದ ನೈಜ ತಿಳುವಳಿಕೆಗಳಿಲ್ಲದ ಸ್ಥಿತಿಯನ್ನು ಬಳಸಿಕೊಂಡು ತಿರುಚಿದ ಕತೆಗಳನ್ನು ಸತ್ಯವೆಂದು ನಯವಾಗಿ ನಂಬಿಸಲಾಗುತ್ತದೆ. ಒಂದು ಸಂಸ್ಕೃತಿಯ ಗತವೈಭವವನ್ನು ಹೇಳುವ ಜೊತೆ ಜೊತೆಗೆ ಆ ಸಂಸ್ಕೃತಿಯ ಎದುರಿರುವ ಮತ್ತೊಂದು ಧರ್ಮ ಸಂಸ್ಕೃತಿಯನ್ನು ದುಷ್ಟ ಆಕ್ರಮಣಕಾರಿ ಎಂದೆಲ್ಲಾ ಚಿತ್ರಿಸಲಾಗುತ್ತದೆ. ಇಸ್ಲಾಮಿಗಾಗಲೀ ಅಥವಾ ಅದರ ಅನುಯಾಯಿಗಳಾದ ಮುಸ್ಲಿಮರಿಗಾಗಲೀ ಈಗ ಜಗತ್ತಿನಾದ್ಯಂತ ಎದುರಾಗಿರುವ ಜಾಗತಿಕ ಆತಂಕ ಇದೇ ಕುತಂತ್ರದಿಂದ ಸೃಷ್ಟಿಯಾದದ್ದು. ಯಾವತ್ತೂ ಈ ಕುತಂತ್ರ ಅಲ್ಪಸಂಖ್ಯಾತರಾದ ಬುದ್ಧಿವಂತ ಪುರೋಹಿತ ವರ್ಗವು ತನ್ನ ರಕ್ಷಣೆ ಮತ್ತು ಸುಖಕ್ಕಾಗಿ ಹೂಡಿದ ಕುತಂತ್ರವಾಗಿರುತ್ತದೆ ಎಂಬುದು ಸಾಮಾನ್ಯ ಜನಕ್ಕೆ ಅರ್ಥವಾಗುವುದು ಸುಲಭವಲ್ಲ. ಇದೇ ಇಂದು ನಮ್ಮ ದೇಶವನ್ನು ಇಷ್ಟರ ಮಟ್ಟಿಗಿನ ಅಧೋಗತಿಗೆ ತಳ್ಳಿದೆ. ಧರ್ಮದ್ವೇಷದ ಕೊಪ್ಪರಿಗೆಯಲ್ಲಿ ದುಡಿಯುವ ವರ್ಗಗಳನ್ನು ಕುದಿಸಲಾಗುತ್ತಿದೆ.
One Response
ಜೈ ಭೀಮ್ ಸರ್