October 1, 2023 8:21 am

ದೇಶಪ್ರೇಮದ ಮುನ್ನುಡಿಗೆ ತಡಕಾಡಿದಾಗ…  

ದೇಶಪ್ರೇಮದ ಮುನ್ನುಡಿಗೆ ತಡಕಾಡಿದಾಗ…                                        

– ಆರ್.ಜಯಕುಮಾರ್, ಹಿರಿಯ ಪತ್ರಕರ್ತರು

ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124(ಎ)  ಬಗ್ಗೆ ಈಗ ದೇಶದಾದ್ಯಂತ ಪರ ವಿರುದ್ಧ ಮಾತುಗಳು ಗಟ್ಟಿಯಾಗಿಯೇ ಕೇಳಿಬರುತ್ತಿವೆ.  ಇದು ಕೇವಲ ‘ದೇಶಪ್ರೇಮ’ದ ಸುತ್ತಲೇ ಗಿರಕಿ ಹೊಡೆದಿದ್ದರೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಅಂದು ಬ್ರಿಟಿಷರ ವಿರುದ್ಧದ ನಮ್ಮ ಪ್ರತಿರೋಧವು ಅವರಿಗೆ ದೇಶದ್ರೋಹ ಎನಿಸಿದರೆ ನಮಗದು ದೇಶಭಕ್ತಿಯ ಸಂಕೇತವಾಗಿತ್ತು.

ಆದರೆ ಈ ಎಲ್ಲಾ ವಿಚಾರಗಳು ಅಷ್ಟು ಸರಳವಾಗಿ ರೈಲು ಕಂಬಿಯ ಮೇಲೆ ಸಾಗುವ ಸರಕುಗಳಲ್ಲ. ದೇಶದ್ರೋಹ, ದೇಶಪ್ರೇಮಗಳೆಂಬ ಕನ್ನಡಿಯೊಳಗೆ ಇಣುಕಿ  ನೋಡಿದರೆ; ಅದರಲ್ಲಿ ನಮ್ಮದೇ ಪ್ರತಿಬಿಂಬಗಳು ಕಾಣದಿದ್ದರೆ ನಮ್ಮ ಆಂತರ್ಯದ ರೋಗಲಕ್ಷಣ ಖಾತ್ರಿಯಾಗುತ್ತದೆ. ಕೇವಲ ಗಡಿ,  ಪ್ರದೇಶ, ಬಾವುಟದಿಂದಲೇ ದೇಶಪ್ರೇಮ  ಅಳೆಯಲು ಸಾಧ್ಯವೇ? ಅದರೊಳಗಿನ ಜನರ ಬದುಕು, ಬವಣೆಗಳು ಇದರೊಳಗಿಲ್ಲವೇ? ಇದೆ ಎನ್ನುತ್ತದೆ ಇತ್ತೀಚಿನ ಅಸ್ಸಾಂ ಮತ್ತು ಮಿಜೋರಾಂ  ರಾಜ್ಯಗಳ ನಡುವಿನ ಗಡಿ ಸಂಘರ್ಷ. 

ಉಭಯ ರಾಜ್ಯಗಳ ಪೊಲೀಸರೇ ತಮ್ಮ ನಾಡಿನ ಗಡಿ ರಕ್ಷಣೆಗೆ ಬಡಿದಾಡಿ ಜೀವ ತೆತ್ತಿರುವುದು ಪರಿಸ್ಥಿತಿಯ ಜಟಿಲತೆಗೆ ಸಾಕ್ಷಿಯಾಗಿದೆ. ದೇಶವೆನ್ನುವಾಗಲೇ ಸ್ಥಳೀಯ ಅಸ್ಮಿತೆಯನ್ನು ನಗಣ್ಯವೆನ್ನಲಾಗದು.    

ಭಾರತದಂತಹ ದೇಶದಲ್ಲಿ ಪ್ರಜಾತಂತ್ರದ ಆಡಳಿತ ವ್ಯವಸ್ಥೆಗೆ ಸಂವಿಧಾನವೆಂಬ ಲಿಖಿತ ಸೂತ್ರವಿರುವಾಗ ಅದನ್ನು ಕ್ಷಣಕ್ಷಣಕ್ಕೂ ಇಲ್ಲಿನ ಸಮಾಜದ ಚಾಲಕ ಶಕ್ತಿ ಕೇಂದ್ರಗಳು ಅರ್ಥೈಸಿಕೊಳ್ಳಬೇಕು. ಸ್ವತಂತ್ರ ಭಾರತ ತನ್ನ ಬೆಳವಣಿಗೆಯ 75 ವರ್ಷಗಳಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ 100 ಜನರನ್ನು ಸಾಕಿ ಸಲುಹಿದೆ ಎಂದು ‘ಹೆಮ್ಮೆ’ ಪಡುವಾಗಲೇ, ಈಗಲೂ ತುತ್ತು ಅನ್ನಕ್ಕಾಗಿ, ಆರೋಗ್ಯ, ಶಿಕ್ಷಣ,  ಉದ್ಯೋಗ, ವಸತಿಗಾಗಿ ಬಹುಪಾಲು ಜನ ಬವಣೆ ಪಡುತ್ತಿರುವುದನ್ನು ಯಾವ ದೇಶಪ್ರೇಮದ ಕನ್ನಡಿಯಲ್ಲಿ ನೋಡಲು ಸಾಧ್ಯ?

ನೆರೆಯ ಇರಾಕಿನಲ್ಲಿ ತೈಲ ಕೊಳ್ಳೆಹೊಡೆಯಲು ಪ್ರವೇಶಿಸಿದ ವಿದೇಶಿ ಸೈನ್ಯಕ್ಕೆ ಯಾವುದೇ ಪ್ರತಿರೋಧ ಎದುರಾಗದಿದ್ದಾಗ ಅಲ್ಲಿನ ಆಡಳಿತ ಪ್ರಭುತ್ವದ ಅಸಾಮರ್ಥ್ಯ ಬಟಾಬಯಲಾಯಿತು. ಇರಾನಿನಲ್ಲಿ ನೇರವಾಗಿ ಇಸ್ಲಾಮಿ ಆಡಳಿತದ ಕ್ರಾಂತಿ ನಡೆದರೂ ಅದು ಬಾಳಲಿಲ್ಲ. ನೆಲ್ಸನ್ ಮಂಡೇಲರಂತಹ ನೆಲಮೂಲದ ನಾಯಕನ ಕನಸಿನಲ್ಲಿ ಅರಳಿದ ಆಫ್ರಿಕಾದಲ್ಲೂ ಸ್ಥಿರತೆ ನೆಲೆಗೊಳ್ಳಲಿಲ್ಲ.  ಸಮತಾವಾದದ ಆಶಯಕ್ಕೆ ಜೀವ ತುಂಬಿದ ಕ್ಯೂಬಾದಲ್ಲಿ ಈಗ ಜನರು ಬೀದಿಗಿಳಿದಿದ್ದಾರೆ. ಎಂದಾಗ ಇದಕ್ಕೆಲ್ಲ ಕಾರಣ ಹುಡುಕಬೇಕಾಗಿದೆ. ಕೇವಲ ಅಧಿಕಾರ ಬದಲಾವಣೆ, ಸ್ವಾತಂತ್ರ್ಯ ಮಾತ್ರದಿಂದಲೇ ಒಂದು ವ್ಯವಸ್ಥೆ, ದೇಶದ ಸಂರಚನೆ ಸ್ಥಿರವಾಗಲು ಸಾಧ್ಯವಿಲ್ಲ. ಜಗಜಟ್ಟಿ ಅಮೆರಿಕದಂತಹ ಪ್ರಭುತ್ವದ ಜಂಘಾಬಲವೇ ಉಡುಗುವ ತೆರದಲ್ಲಿ ಶ್ವೇತ ಭವನದ ಮೇಲೆ ದಾಳಿ ನಡೆಯಿತು.  ಅವರ ವ್ಯಾಪಾರಿ ಗಗನಚುಂಬಿ ಕಟ್ಟಡಗಳೇ ನೆಲಕ್ಕುರುಳಿದವು. ಎಂದಾಗ ಕೇವಲ ಸೇನಾ ಬಲವೇ ಶಕ್ತಿ ಕೇಂದ್ರಗಳಲ್ಲ ಎನ್ನುವುದು ಸಾಬೀತಾಗಿದೆ. ಪರಿಸ್ಥಿತಿ ಹೀಗಿರುವಾಗ ಭಾರತದಂತಹ ದೇಶ ಕೇವಲ ‘ಪ್ರಜಾಪ್ರಭುತ್ವ’ ವೆಂಬ ರಂಗುರಂಗಿನ ಕನ್ನಡಕ ಧರಿಸಿ ಕನಸುಗಳ ಗಾಳಿಪಟ ಹಾರಿಸುವುದರಲ್ಲೇ ಖುಷಿಪಡುವುದು ಕೇವಲ ಭ್ರಮೆಯಾಗುವ ಎಲ್ಲಾ ಅಪಾಯಗಳಿವೆ.                  

ಪ್ರಜಾಪ್ರಭುತ್ವದಲ್ಲಿ ‘ಬಹುತ್ವ’ ಎನ್ನುವುದು ಕೇವಲ ಅಂಕಿ-ಸಂಖ್ಯೆಗಳ ಆಟವೆನ್ನುವ ತರ್ಕಕ್ಕೆ  ಬಂದು ನಿಂತಿದೆ.  ಈ ಕಾರಣಕ್ಕಾಗಿಯೇ ಕೇವಲ ಶೇಕಡಾ 35 ರಷ್ಟು ಜನಪ್ರಿಯ ಮತಗಳ ಜನಬೆಂಬಲ ಪಡೆದ ಪಕ್ಷವೊಂದು  ಮೂರನೇ ಎರಡರಷ್ಟು ಬಹುಮತವನ್ನು ಸಂಖ್ಯೆಗಳ ಮೂಲಕ ಪಡೆದು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ.  ಶೇಕಡಾ 65ರಷ್ಟು ಜನರ ಬೆಂಬಲ ತನಗೆ ಇಲ್ಲವೆನ್ನುವ ಸರಳ ಸತ್ಯವನ್ನು ಅರಿಯದ ಪ್ರಭುತ್ವ ತನ್ನ ಮೂಗಿನ ನೇರವಾದ ಸಿದ್ಧಾಂತ, ನೀತಿಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸುತ್ತದೆ.  ಇದಕ್ಕೆ ಸಂಸತ್ತು ಮೂಕ ಸಾಕ್ಷಿಯಾಗುತ್ತದೆ. ಇದರಿಂದಾಗಿಯೇ ಸಂಸತ್ತು ಕೇವಲ ಸಾಂಕೇತಿಕ ಪ್ರಾತಿನಿಧಿಕ ವೇದಿಕೆಯಾಗಿ ರೂಪಾಂತರಗೊಳ್ಳಲು ದಾರಿಯಾಗಿದೆ.                    ಅರಬ್  ರಾಷ್ಟ್ರದಲ್ಲಿ ರಾಜಪ್ರಭುತ್ವ,  ಚೀನಾದಲ್ಲಿ ಏಕಪಕ್ಷದ ಸರ್ವಾಧಿಕಾರ ಎಂದೆಲ್ಲಾ ಜಗತ್ತನ್ನು ಜಾಲಾಡುವ ನಾವು ನಮ್ಮ ‘ಪ್ರಜಾಪ್ರಭುತ್ವದ’ ವೈಫಲ್ಯವನ್ನು ಗುರುತಿಸುವಲ್ಲಿ ಜಾಣ ಕುರುಡರಾಗುತ್ತೇವೆ.  ಜನ ಮತದಿಂದ ಪ್ರಾಪ್ತವಾದ ಅಧಿಕಾರವೇ ಸರ್ವಾಧಿಕಾರದ ರೂಪು ಪಡೆದು  ವಿಜೃಂಭಿಸಲಾರಂಭಿಸಲಾರಂಭಿಸಿದೆ. ಜನರಿಂದ… ಜನರಿಗಾಗಿ… ಜನರ ಆಡಳಿತವೆನ್ನುವ ಸರಳ ಪ್ರಜಾಪ್ರಭುತ್ವ ಸೂತ್ರ ಪುನರ್ ವ್ಯಾಖ್ಯಾನಕ್ಕೆ ಒಳಪಡಬೇಕಾಗಿದೆ.  ‘ಕೇವಲ ಉತ್ತಮ ಸಂವಿಧಾನ ಒಂದರಿಂದಲೇ ದೇಶದ ಸರ್ವಜನರ ಅಭ್ಯುದಯ ಸಾಧ್ಯವಿಲ್ಲ. ಅದನ್ನು ಜಾರಿಮಾಡುವ ಸರಕಾರದ ಇಚ್ಛಾಶಕ್ತಿ ಇದ್ದರೆ ಮಾತ್ರ ಸಂವಿಧಾನದ ಆಶಯ ನಿಜ ಅರ್ಥದಲ್ಲಿ ಜಾರಿಯಾಗಲು ಸಾಧ್ಯ’ವೆನ್ನುವ ಅಂಬೇಡ್ಕರ್ ಅವರ ಮಾತು ಸದಾ ಸ್ಮರಣೀಯ.        ‌‌   

ಏಕದೇಶ, ಏಕ ಕಾನೂನು ಎಂಬ  ದೇಶಪ್ರೇಮದ ಅಮಲಿನ  ನಡಿಗೆಗೆ ತನ್ನ ಕಾಲಡಿಯ ನೆಲದ ಸಮತಟ್ಟು  ಅರ್ಥವಾಗದಿದ್ದರೆ ಮುಗ್ಗರಿಸುವ ಅಪಾಯ ತಪ್ಪಿಸಲಾಗದು. ಭಾರತವೆಂಬ ಬೃಹತ್  ಒಕ್ಕೂಟ ವ್ಯವಸ್ಥೆ ಬಂಧಿಸಲ್ಪಟ್ಟಿರುವುದು ಪರಸ್ಪರ ಪ್ರಗತಿ,  ಸ್ಥಿರತೆ, ವಿಶ್ವಾಸದ ಮೇಲೆ. ದಿಲ್ಲಿಯ ಕೇಂದ್ರೀಕೃತ ಆಡಳಿತ ಏರಲ್ಪಟ್ಟರೆ ರಾಜ್ಯ ಬೆಸುಗೆ  ಎಂಬ ಗೋಡೆಗಳ  ಇಟ್ಟಿಗೆಗಳು ಉದುರಲಾರಂಭಿಸುತ್ತವೆ. ಈ ಹಿಂದೆ ಗಡಿ, ಭಾಷೆ ತಕರಾರುಗಳಲ್ಲಿ ಇದು ಸಾಬೀತಾಗಿತ್ತು. 

ಈಗ ನೆರೆಯ ಅಸ್ಸಾಂ ಮತ್ತು ಮಿಜೋರಾಂಗಳಲ್ಲಿ ಪರಸ್ಪರ ಭಾರತದ ಪ್ರಜೆಗಳೇ ಬಡಿದಾಡಿ ಗಡಿ ‘ಭದ್ರ’ ಪಡಿಸಿಕೊಳ್ಳುತ್ತಿರುವುದು ಕೇವಲ ಆವೇಶದ ಪ್ರತೀಕವಲ್ಲ.  ಇದು ಒಕ್ಕೂಟದೊಳಗೊಂದು ಸ್ಥಳೀಯತೆಯ ಪ್ರತಿಷ್ಠಾಪನೆಯ ಸಂಘರ್ಷ.  ಇದನ್ನು ‘ಬಹುತ್ವ’ ಭಾರತ ಅರ್ಥೈಸಿಕೊಂಡರೆ ದೇಶದ ಏಕತೆ ಸುಲಲಿತವಾದೀತು.  ಸದೃಢ ಸೋವಿಯತ್ ಒಕ್ಕೂಟ ಇಸ್ಪೀಟ್ ಎಲೆಗಳಂತೆ  ವಿಘಟನೆಗೊಂಡ ಸತ್ಯ ನಮಗೆ ಸದಾ ಎಚ್ಚರಿಸುವ ಗಂಟೆಯಾಗಬೇಕು.   

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು