September 30, 2026 8:29 am

ಪರರ ವಿಚಾರ, ಧರ್ಮಗಳನ್ನು ಸಹಿಸುವುದೇ ನಾವು ಗಳಿಸಬಹುದಾದ ಆಸ್ತಿ

“ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರ ಧರ್ಮಮುಮಂ” ಇದು ಒಂಬತ್ತನೇ ಶತಮಾನದ ನಮ್ಮ ಕನ್ನಡದ ಜೈನ ಕವಿ ಶ್ರೀವಿಜಯ ತನ್ನ ‘ಕವಿರಾಜಮಾರ್ಗ’ ಕೃತಿಯಲ್ಲಿ ನುಡಿದ ಮಾತು. ‘ಕವಿರಾಜಮಾರ್ಗ’ ಕನ್ನಡದ ಆಚಾರ್ಯ ಕೃತಿ. ಕನ್ನಡಿಗರಿಗೆ ಸಾರ್ವಕಾಲಿಕವಾದ ಸ್ವಾಭಿಮಾನ ಹಾಗೂ ಸಹಿಷ್ಣುತೆಯ ಪಾಠವನ್ನು ಹೇಳಿದ, ವಿವೇಕವನ್ನು ಬೋಧಿಸಿದ ಮೇರು ಗ್ರಂಥ.

‘ಕಸವರ’ ಎಂದರೆ ಚಿನ್ನ ಅಥವಾ ಹೊನ್ನು ಅಥವಾ ಸಂಪತ್ತು ಸಂಪದ. ಮನಷ್ಯರಿಗೆ ಹೇಳಿದ ಈ ವಿವೇಕದ ಅರ್ಥವೇನೆಂದರೆ, ಮನುಷ್ಯರಾದವರಿಗೆ ನಿಜವಾದ ಚಿನ್ನ ಯಾವುದೆಂದರೆ ನಮ್ಮ ಮನೆಯ ಸಂದೂಕಗಳಲ್ಲಿ ಭದ್ರವಾಗಿ ಮುಚ್ಚಿಟ್ಟ ಅಥವಾ ನಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಧರಿಸಿದ ಚಿನ್ನ ಬೆಳ್ಳಿ ಮೊದಲಾದವುಗಳಿಂದ ತಯಾರಿಸಿದ ಆಭರಣಗಳಲ್ಲ ಅಥವಾ ಯಾವುದೇ ಬೆಲೆಬಾಳುವ ದ್ರವ್ಯಗಳಲ್ಲ.

ನಿಜವಾದ ‘ಚಿನ್ನ’ ಯಾವುದೆಂದರೆ, ಪರ ಧರ್ಮವನ್ನೂ ಪರರ ವಿಚಾರಗಳನ್ನು ಸೈರಣೆಯಿಂದ ಅಥವಾ ಸಹಿಷ್ಣುತಾಭಾವದಿಂದ ನೋಡುವುದೇ ಆಗಿದೆ. ಹಾಗೆ ನೋಡದಿದ್ದರೆ ‘ಕಸವರ ಕಸಕ್ಕೆ ಸಮಾನ’. ಇದು ಎಂದೆಂದೂ ನಮ್ಮನ್ನು ಎಚ್ಚರದಲ್ಲಿಡುವ ಮಾತು‌.

ನಾವೀಗ ಪರಮತ ದ್ವೇಷ ಪರವಿಚಾರ ತಿರಸ್ಕಾರ ಪರರ ಜೀವನಕ್ರಮ ಪರರ ಭಾಷೆ ಪರರ ಉಡುಗೆ ತೊಡುಗೆ ಸಂತೋಷ ಬದುಕು ಜೀವ ಯಾವುದನ್ನೂ ಗೌರವಿಸುತ್ತಿಲ್ಲ ಸಹಿಸುತ್ತಲೂ ಇಲ್ಲ. ನಿಜವಾಗಲೂ ನಾವು ಕಸವರದಂತೆ ಬದುಕದೇ ಕಸದಂತೆ ಬದುಕುತ್ತಿದ್ದೇವೆ. ನಮ್ಮ ಜೀವನ ನಮ್ಮ ಚಿಂತನೆ ದೇವರು ದೇಗುಲ ಚರ್ಚು ಮಸೀದಿ ಪಾಕಿಸ್ತಾನ ಇಸ್ಲಾಮ್ ಹಿಂದುತ್ವ ಮಿಷನರಿ ಇವುಗಳಾಚೆಗೆ ಯೋಚಿಸುತ್ತಲೇ ಇಲ್ಲ. ಅಲ್ಲಾನ ಭಕ್ತರೂ ರಾಮನ ಭಕ್ತರೂ ಜೀಸಸನ ಭಕ್ತರೂ ಈಶನ ಭಕ್ತರೂ ಎಲ್ಲರೂ ಸೇರಿ ಮಾನವತೆಯ ಗೋರಿ ಕಟ್ಟುತ್ತಿದ್ದೇವೆ ಅಷ್ಟೆ.

ಕೊಲ್ಲುವುದರಿಂದ ಅತ್ಯಾಚಾರ ಮಾಡುವುದರಿಂದ ರಕ್ತ ಮೆತ್ತಿಕೊಂಡು ಜೈ ಶ್ರೀರಾಮ್, ಅಲ್ಲಾ ಹೊ ಅಕ್ಬರ್ ಎನ್ನುವುದರಿಂದ ಜನರ ಬದುಕಿನ ಮೇಲೆ ದಾಳಿ ಮಾಡುವುದರಿಂದ ಭಯ ಹುಟ್ಟಿಸಿ ಅಶಾಂತಿ ಸೃಷ್ಟಿಸಿ ದ್ವೇಷವನ್ನೇ ಧರ್ಮ ಎಂದು ಭ್ರಮಿಸಿಕೊಂಡು ಧರ್ಮ ರಕ್ಷಣೆ ಮಾಡುತ್ತೇವೆನ್ನುವವರು ಅಂತಿಮವಾಗಿ ಮನುಷ್ಯತ್ವದ ಕಗ್ಗೊಲೆ ನಡೆಸುತ್ತಾರಷ್ಟೆ‌. ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳ ನಿಲ್ಲದ ರಕ್ತಪಿಪಾಸು ಗುಣದ ಮೂರ್ತ ರೂಪಗಳಾಗಿ ಹಿಂಸೆಯನ್ನು ಸಂಭ್ರಮಿಸುವ ಪ್ರೇತಗಳಾಗಿ ಕುಣಿಯುತ್ತೇವಷ್ಟೇ‌‌. ಇದರಿಂದ ರಾಮ ಶಿವ ಅಲ್ಲಾಹು ಎಲ್ಲರೂ ನಲುಗುತ್ತಾರೆ. ನಾವು ಆರಾಧಿಸುವ ದೈವ ನಂಬುವ ಧರ್ಮ ಆಚರಣೆಗಳೆಲ್ಲದರ ಅಂತಸ್ಸತ್ವ ಪ್ರೇಮವಾಗಿರದಿದ್ದರೆ ಅಂತಹ ಧರ್ಮವನ್ನು ಸುಡಬೇಕು. ಹಾಗೆ ನೋಡಿದರೆ ಮನುಷ್ಯ ಬದುಕುವುದಕ್ಕೆ ಧರ್ಮದ ಅವಶ್ಯಕತೆಯೇ ಇಲ್ಲ. ಯಾವ ಧರ್ಮಕ್ಕೂ ಸೇರದ ನಾನು ನಾವಾಗಿ ಮನುಷ್ಯರಾಗಿ ಬದುಕಿದರಷ್ಟೇ ಸಾಕು. ಮನುಷ್ಯರನ್ನು ಜೀವಕೋಟಿಯನ್ನು ದಯಾದೃಷ್ಟಿಯಿಂದ ಸಲಹುವ ಉದ್ಧರಿಸುವ ಪ್ರೇಮ ಎಲ್ಲ ಧರ್ಮಗಳನ್ನು ಮೀರಿದ ಜೀವಸತ್ವ.

ಸುಪ್ರಸಿದ್ದ ಉರ್ದೂ ಕವಿ ಮಿರ್ಜಾ ಗಾಲಿಬ್,

ದೇವನೊಬ್ಬನಿದ್ದಾನೆ, ಅದು ನಮ್ಮ ವಿಶ್ವಾಸ

ನಾವು ಎಲ್ಲ ಮತಾಚರಣೆಗಳನ್ನೂ ಪರಿತ್ಯಜಿಸುತ್ತೇವೆ

ಮತಗಳೆಲ್ಲ ಅಳಿದಾಗಲೇ

ಆ ವಿಶ್ವಾಸ ಪರಿಶುದ್ಧವಾಗುತ್ತದೆ.

ಎನ್ನುತ್ತಾನೆ. ಆತ ಮುಂದುವರೆದು ಮತ್ತೊಂದು ಶಾಯರಿಯಲ್ಲಿ,

ದೇವರ ಕರುಣೆ ಹೇಗೆ ಸರ್ವವ್ಯಾಪಿಯಾಗಿದೆ!

ಯಾವ ಧರ್ಮಕ್ಕೂ ಅಂಟಿಕೊಳ್ಳದ,

ಯಾವ ಪಾಪಗಳನ್ನೂ ಮಾಡದ ನಾನು

ಕ್ಷಮಿಸಲ್ಪಟ್ಟಿದ್ದೇನೆ.

ಎನ್ನುತ್ತಾನೆ. ಅವನ ಪ್ರಕಾರ ದೇವನೊಬ್ಬನಿದ್ದಾನೆ ನಿಜ. ನನಗೆ ಆ ದೇವನೆನ್ನುವ ಅಗೋಚರ ಶಕ್ತಿ ಪ್ರೇಮವಲ್ಲದೆ ಕಾರುಣ್ಯವಲ್ಲದೆ ಸಮದೃಷ್ಟಿಯಲ್ಲದೆ ಬೇರಾವುದೂ ಅಲ್ಲ.

ಗಾಲಿಬ್ ಧಾರ್ಮಿಕ ಮೂಢರೇ ಧೂರ್ತರೇ ತುಂಬಿದ್ದ ಸಮಾಜದಲ್ಲಿ ನಿಂತು ಹೇಳಿದ ಮಾತಿದು. ಸ್ಥಾಪಿತ ಧರ್ಮ ವ್ಯವಸ್ಥೆಯನ್ನೇ ನಿರಾಕರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಾನು ಗಾಲಿಬ್ ಆಗಿ ತನ್ನಿಷ್ಟದಂತೆ ಬದುಕಲು ಬಯಸಿದ ಗಾಲಿಬನನ್ನು ಮುಸಲ್ಮಾನ ಎನ್ನಲಾಗದು. ನಾವು ಈ ಸ್ಥಾವರಗಳನ್ನು ಒಡೆಯುತ್ತಾ ಮುಂದೆ ಸಾಗಬೇಕು. ಇದನ್ನೇ ಅಲ್ಲವೇ ನಮ್ಮ ರಸಋಷಿ ಕುವೆಂಪು ಅವರು ‘ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ’ ಬದುಕು ಎಂದು ಮನುಜರಿಗೆ ಕರೆಕೊಟ್ಟದ್ದು? ಅವರು ಪ್ರತಿಪಾದಿಸಿದ ‘ಮನುಜ ಮತ’ ಮನುಷ್ಯನ ಉದ್ಧಾರದ ವೈಜ್ಞಾನಿಕ ಮಾರ್ಗವೇ ಆಗಿದೆ. ಸರ್ವಜ್ಞ ಕವಿ ‘ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕು’ ಎಂದುಬಿಡುತ್ತಾನೆ. ಇಲ್ಲೆಲ್ಲ ಅನುರಣಿಸುವ ಧ್ವನಿ ಯಾವುದು ಎಂದರೆ, ಅದೇ ಪ್ರೇಮಯುತವೂ ಸಹನೀಯವೂ ದಯಾಮಯವೂ ಹಾಗೂ ವೈಜ್ಞಾನಿಕವೂ ಆದ ವಾಸ್ತವೀ ಪ್ರಜ್ಞೆ.

ಈ ಪ್ರೇಮದ ತನಿಹಾಲು ಉಣ್ಣದೇ ಜಾತಿ ಮತಗಳ ಅಂಧಶ್ರದ್ಧೆ ಆ ಹೆಸರಿನಲ್ಲಿ ಸುಳ್ಳು ಪೊಳ್ಳು ದ್ವೇಷ ಅಸೂಯಾ ವಿಚಾರಗಳ ವಿಷ ಉಣ್ಣುತ್ತಿರುವ ನಾವು ಭೂಮಿಯ ಮೇಲೆ ಕ್ಷುದ್ರಶಕ್ತಿಗಳಾಗಿ ಬದುಕುತ್ತಿದ್ದೇವೆ. ನಮ್ಮದು ಸುಖವನ್ನೂ ಸಂತೋಷವನ್ನೂ ನಂಬಿಕೆಗಳನ್ನೂ ಗೌರವವನ್ನೂ ಕಳೆದುಕೊಂಡ ಭಂಡ ಬದುಕಾಗಬಾರದು.

ಎಂದು ನಮ್ಮ ಮನಸೊಳಗೆ ದ್ವೇಷಭಾವಕ್ಕೆ ಜಾಗ ಕೊಡುತ್ತೇವೋ ಅಂದೇ ನಾವು ಅಶಾಂತಿ ಮಡುವಲ್ಲಿ ಬೀಳುತ್ತೇವೆ. ಅಶಾಂತಿ ಮಡುವಲ್ಲಿ ದ್ವೇಷದ ಕೆಸರಲ್ಲಿ ಬಿದ್ದು ಹೊರಳಾಡುವವರ ಕಂಡರೆ ಕನಿಕರವೆನಿಸುತ್ತದೆ. ಮಾನವ ಕುಲವನ್ನು ಉದ್ಧರಿಸಬೇಕಾದುದು ಒಂದೇ. ಅದು ಸಹನಾ ಭಾವ ಪ್ರೇಮ. ಅಂತಹಾ ಸಹಿಕೆಯ ಬಹುದೊಡ್ಡ ತತ್ವಜ್ಞಾನವನ್ನು ಈ ನೆಲದ ಅನೇಕ ದಾರ್ಶನಿಕರು ಮಾನವತಾವಾದಿಗಳು ನಿರಂತರವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. ಅದು ಕವಿರಾಜಮಾರ್ಗಕಾರನಿಂದ ಮೊದಲ್ಗೊಂಡು ಪಂಪನಲ್ಲಿ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನಿಸಿ, ಬಸವನಲ್ಲಿ “ದಯವೇ ಧರ್ಮದ ಮೂಲವೆಂದು” ಅನುರಣಿಸಿ, ಕನಕನಲ್ಲಿ “ಕುಲ ಕುಲ ಕುಲವೆನ್ನದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ?” ಎಂದು ಮನುಷ್ಯನ ಕುಲ ಮೂಲದ ಸತ್ಯದರ್ಶನವಾಗಿ, ಹೀಗೆ ಅನೇಕ ದಾರ್ಶನಿಕ ತತ್ವಜ್ಞಾನಿಗಳ ಮೂಲಕ ನವ ಯುಗದ ದನಿಯಾಗಿ ಮೊಳಗುತ್ತಿದೆ.

ನಾವು ಒಂದು ಧರ್ಮನಿರಪೇಕ್ಷ ಸಮಾಜವನ್ನು ಕಟ್ಟಬೇಕಾಗಿದೆ. ಆ ಸಮಾಜದಲ್ಲಿ ಮಾತ್ರ ನಾವು ಪ್ರಗತಿಹೊಂದಲು ಸಾಧ್ಯ. ಮತ್ತದೆ ಧರ್ಮ ಜಾತಿ ಪಂಥಗಳ ಬಾಲಹಿಡಿದು ಹೊರಟರೆ ಖಂಡಿತಾ ಬಾಳು ಕಸವಾಗುತ್ತದೆ. ಸಮಾಜ ಆ ಕಸದ ತೊಟ್ಟಿಯಾಗುತ್ತದೆ. ನಾವು ಕೊಳೆತ ಕಸದ ತೊಟ್ಟಿಯಲ್ಲಿ ಹೊರಳಾಡುವ ಹುಳಗಳಾಗುತ್ತೇವೆ. ಸತ್ಯವೆಂದರೆ ಮನುಷ್ಯರನ್ನು ಹಾಗೆ ಆಗಿಸಲಾಗುತ್ತಿದೆ ಎಂದರೂ ಸರಿಯೆ. ಹೀಗೆ ಮನುಕುಲದ ವಿಕಾಸಕ್ಕೆ ಮಾರಕವಾದ ಕೆಲವು ಹಿತಾಸಕ್ತಿಗಳು ಮನುಷ್ಯನ ಧರ್ಮನಿರಪೇಕ್ಷ ಬದುಕಿಗೆ ಅಡ್ಡಿಗಾಲಾಗಿವೆ. ಈ ಅಡ್ಡಿಯನ್ನು ಮೀರದೆ ಬೇರೆ ದಾರಿಯಿಲ್ಲ‌.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]