April 25, 2024 9:00 am

ಮಾನವೀಯತೆ ಮರೆಯಾಗುವ ಹೊತ್ತಿನಲ್ಲಿ ಹಿಡಿಯಬೇಕಿರುವ ಜಾಡು

ಇವನಾರವ ಇವನಾರವ

ಇವನಾರವನೆಂದೆನಿಸದಿರಯ್ಯಾ

ಇವ ನಮ್ಮವ ಇವ ನಮ್ಮವ

ಇವ ನಮ್ಮವನೆಂದೆನಿಸಯ್ಯಾ

ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ

  • ಬಸವಣ್ಣ

1957ರಲ್ಲಿ ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ್ “ಆಧುನಿಕ ಸಂದರ್ಭದಲ್ಲಿ ಜಾತಿಯು ಒಂದು ಹೊಸ ಬಗೆಯ ಸ್ಥಿತ್ಯಂತರಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ”ಎಂದಿದ್ದರು. ತಳಸಮುದಾಯದ ಪರ ಅಧ್ಯಯನಕಾರರು, ಚಿಂತಕರು ಮತ್ತು ಕೆಲವು ಸಮಾಜಶಾಸ್ತ್ರಜ್ಞರು ಎಮ್.ಎನ್.ಶ್ರೀನಿವಾಸ್ ಅವರ ‘ಸಂಸ್ಕೃತೀಕರಣ’ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ತಿರಸ್ಕರಿಸಿದ್ದರು. ಅನೇಕ ಸಂದರ್ಭದಲ್ಲಿ ಕಟುಟೀಕೆಗೆ ಗುರಿ ಮಾಡಿದ್ದರು.

ಆದರೆ ಪ್ರಸ್ತುತ ಮನೆತನದ ಗೌರವ ರಕ್ಷಣೆ, ಧರ್ಮ ಅಥವಾ ಜಾತಿಯ ಮೇಲರಿಮೆಯ ಕಾರಣಕ್ಕಾಗಿ “ಮರ್ಯಾದಾ ಹತ್ಯೆ”ಯ ಹೆಸರಿನಲ್ಲಿ “ಮಾನಗೇಡು ಹತ್ಯೆ”ಗಳು ಅಮಾನವೀಯವಾಗಿ ನಡೆಯುತ್ತಿವೆ. ತಮ್ಮ ಮಕ್ಕಳು ತಮ್ಮ ಜಾತಿಯನ್ನು ಹೊರತುಪಡಿಸಿ ಅನ್ಯ ಜಾತಿಯವರನ್ನು ಮದುವೆಯಾಗುವ ಮೂಲಕ ಅಗೌರವವನ್ನುಂಟು ಮಾಡುತ್ತಿದ್ದಾರೆ ಎಂದು ಯುವಕ ಅಥವಾ ಯುವತಿಯರನ್ನು, ಕೆಲವೊಮ್ಮೆ ಇಬ್ಬರನ್ನೂ ಹತ್ಯೆಗೈಯುವುದು ಹಾಗೂ ಕುಟುಂಬದ ಮರ್ಯಾದೆಗೆ ಧಕ್ಕೆ ತರುವಂತೆ ಕುಟುಂಬದ ಮಹಿಳೆಯರು ನಡೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಿ, ಅದೇ ಕುಟುಂಬದ ಪುರುಷರು ಮಹಿಳೆಯರನ್ನು ಕೊಲ್ಲುವ ಕುಕೃತ್ಯವನ್ನು ಮಾಧ್ಯಮಗಳಲ್ಲಿ ಮರ್ಯಾದಾ ಹತ್ಯೆಯೆಂದು ಕರೆಯಲಾಗುತ್ತಿದೆ. ಮನುಜರನ್ನು ಕೊಲ್ಲುವ ಅಮಾನವೀಯ ನಡೆಗೆ ಮರ್ಯಾದಾ ಹತ್ಯೆ ಎಂಬ ಹೆಸರಿನಿಂದ ಕರೆಯುವುದು ಕೂಡ ಅಕ್ಷಮ್ಯ. ಇಂತಹ ಕೊಲೆಗಳನ್ನು ಮರ್ಯಾದೆಗೇಡು ಹತ್ಯೆ ಎಂದೇ ಕರೆಯಬೇಕು.

ಕುಟುಂಬದವರು ಏರ್ಪಡಿಸಿದ ಮದುವೆಯ ನಿರಾಕರಣೆ, ಅತ್ಯಾಚಾರಕ್ಕೊಳಗಾಗುವುದು, ವಿಚ್ಛೇದನ ನೀಡುವುದು, ವ್ಯಭಿಚಾರಕ್ಕಿಯುವುದು, ಬೇರೆ ಜಾತಿಯ ಯುವಕ ಅಥವಾ ಯುವತಿಯನ್ನು ಪ್ರೀತಿಸುವುದು, ಇವೆಲ್ಲಾ ಮರ್ಯಾದೆಗೇಡು ಹತ್ಯೆಗೆ ಕಾರಣವಾಗುತ್ತಿವೆ.

ಉತ್ತರ ಭಾರತವಂತೂ ಮರ್ಯಾದೆಗೇಡು ಹತ್ಯೆಯ ನೆಲೆಬೀಡಾಗಿದೆ. ಉತ್ತರಾಖಂಡ್, ಪಂಜಾಬ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮೊದಲಾದೆಡೆ ಈ ಹತ್ಯೆಗಳು ನಡೆಯುತ್ತಿವೆ. ಪ್ರೇಮವಿವಾಹ, ಅಂತರ್ಜಾತಿ ವಿವಾಹ, ಅಂತಧರ್ಮೀಯ ವಿವಾಹ ಅಥವಾ ಪ್ರೇಮಾಂಕರದ ಸಮಯದಲ್ಲೂ ಪ್ರೇಮಿಗಳ, ವಧು ಅಥವಾ ವರನ ಹತ್ಯೆ ಮಾಡುವುದು ಕೋಮುವಾದಿಗಳಿಗೆ ಹಾಗೂ ಮತಾಂಧರಿಗೆ ಉದ್ಯೋಗವಾಗಿಬಿಟ್ಟಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವಿರಳವಾಗಿದ್ದವು. ಆದರೆ ಧಾರವಾಡ, ಮೈಸೂರು, ಬೆಂಗಳೂರು, ಮಂಡ್ಯ, ಮದ್ದೂರುಗಳಲ್ಲಿ 2011ರಿಂದ ದಾಖಲಾಗಿರುವ ಪ್ರಕರಣಗಳು ಕರ್ನಾಟಕದ ಮಟ್ಟಿಗೂ ಆತಂಕಕಾರಿಯಾಗಿ ಬೆಳೆಯುತ್ತಿವೆ. ಕರ್ನಾಟಕ ಸರ್ವಧರ್ಮ ಸಮನ್ವಯದ, ಶಾಂತಿಯ ನೆಲೆಬೀಡೆಂದು ಹೆಸರಾಗಿತ್ತು. ವಚನ ಚಳುವಳಿಯ ಸಮಯದಲ್ಲೇ ಅಂತರ್ಜಾತಿ ವಿವಾಹದ ಪ್ರಯತ್ನದ ಮೂಲಕ ಜಾತಿ ವಿನಾಶದ ಪ್ರಯತ್ನ ಆರಂಭವಾಗಿತ್ತು.

ಕುಟುಂಬ ಗೌರವದ ಹೆಸರಿನಲ್ಲಿ ತಮ್ಮ ಕರುಳ ಕುಡಿಗಳನ್ನು ಹತ್ಯೆ ಮಾಡುವುದು ಮಾನವೀಯತೆಯ ಮೇಲೆ ನಡೆಯುತ್ತಿರುವ ಹಲ್ಲೆ. ಕರುಣೆಯ ಹೊನಲು ಹರಿಯಬೇಕಿದ್ದ ಸಂದರ್ಭದಲ್ಲಿ ಜಾತಿದ್ವೇಷದ ಕರಾಳ ನೆರಳು ಬೀಳುತ್ತಿರುವ ಪರಿಣಾಮ ಇಂತಹ ಅಮಾನುಷ ಹತ್ಯೆಗಳಿಗೆ ಕಾರಣ.

ಜಾತಿ, ಅಂತಸ್ತು, ಐಶ್ವರ್ಯ, ವರ್ಣಗಳ ಕಾರಣಕ್ಕೆ ಜಗತ್ತಿನಲ್ಲಿ ರಕ್ತಪಾತ ನಡೆದಿರುವುದು ಹೊಸದಲ್ಲ. ಆದರೆ, ತಮ್ಮ ಮಕ್ಕಳನ್ನೂ ಬೆಂಕಿಗೆ ಅರ್ಪಿಸುವ, ನೇಣು ಕುಣಿಕೆಗೆ ಏರಿಸುವ, ವಿಷವುಣಿಸುವ ಅಚಾತುರ್ಯಗಳು ನಾಗರಿಕ ಸಮಾಜಕ್ಕೆ ಗೌರವ ತರುವಂತಹವಲ್ಲ. ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಪ್ರವೇಶವಾಗುವ ವಿಷಯವನ್ನು ಕೇಳಿ ಹತ್ಯೆ ಮಾಡುತ್ತಿರುವ ಪೋಷಕರೇ ಎಷ್ಟು ಸುಖಿಸಿದ್ದರೋ? ಆದರೆ, ವಯಸ್ಸಿಗೆ ಬಂದ ಮಕ್ಕಳು ಅನ್ಯ ಜಾತಿ, ಧರ್ಮ, ಅಂತಸ್ತಿನವರನ್ನು ಮದುವೆಯಾಗುವುದನ್ನು ಸಹಿಸುತ್ತಿಲ್ಲ. ಇವರು ಬಾಳಿ ಬದುಕಬೇಕಾದ ಮಕ್ಕಳ ಭವ್ಯ ಭವಿಷ್ಯಕ್ಕಿಂತ, ತಮ್ಮ ಜಾತಿ, ಧರ್ಮ, ಅಂತಸ್ತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ.

ಮನುಷ್ಯ ಮೂಲತಃ ಸಂಘಜೀವಿ. ಅದರ ಜತೆಗೆ ಆತ ಉದಾರಿ. ಆದರೆ ಆಧುನಿಕ ಜಗತ್ತಿನಲ್ಲಿ ಶೈಕ್ಷಣಿಕ ತಿಳುವಳಿಕೆಯ ಹೊರತಾಗಿಯೂ ಮನುಷ್ಯಪ್ರೀತಿಯ ಸಂವೇದನೆಗಳಿಗೆ ಬದಲಾಗಿ ಜೀವವಿರೋಧಿಯಾಗಿ ವರ್ತಿಸುವ ಕ್ರಿಯೆ ಹೆಚ್ಚಾಗಿದೆ. ತಮ್ಮ ಸಂತಾನವನ್ನು ವೃದ್ಧಿಸುವ ಮುಂದಿನ ಜನಾಂಗದ ಅಭಿಲಾಷೆಗಳಿಗೆ ಕಿವುಡಾಗುವಷ್ಟು ಮೌಢ್ಯ ಆವರಿಸುತ್ತಿದೆ.

ಬರಬರುತ್ತಾ ಜಾತಿ ಬಲಿಷ್ಠವಾಗುತ್ತಿರುವುದಕ್ಕೆ ಈ ಕೆಟ್ಟ ಉದಾಹರಣೆಗಳು ಸಾಕ್ಷಿಯಾಗಿವೆ. ಬಡವರ, ಕೆಳಜಾತಿಯವರ ಜೊತೆ ಸೌಹಾರ್ದಯುತವಾದ ನಡವಳಿಕೆ, ಸಂಬಂಧ, ಹೊಂದಾಣಿಕೆಗಳ ಬದಲಾಗಿ ಸಮಾಜದಲ್ಲಿ ನಿರಂತರ ಸಂಘರ್ಷ ನಡೆಯುತ್ತಿರುವುದು ದುರಾದೃಷ್ಟಕರ. ಸಂಕರವೆಂಬುದು ಪ್ರಕೃತಿಯಷ್ಟೇ ಸಹಜವಾಗಿದ್ದರೂ ಶುದ್ಧತೆಯ ಅಮಲೇರಿಸಿಕೊಂಡಿರುವ ಆಧುನಿಕ ಮನುಷ್ಯರು ಅವನತಿಯ ಹಾದಿ ಹಿಡಿಯುತ್ತಿದ್ದಾರೆ. ಹಣ, ಕುಲ, ವಿದ್ಯೆ,  ರೂಪ, ಯೌವನ, ಬಲ, ಪರಿವಾರ, ಅಧಿಕಾರಗಳೆಂಬ ಅಷ್ಟಮದಗಳಿಂದ ಅರಿಷಡ್ವರ್ಗಗಳ ಕರಾಳ ಹಿಡಿತಕ್ಕೆ ಸಿಲುಕಿ ದುಷ್ಟರಾಗುತ್ತಿದ್ದಾರೆ. ಅಷ್ಟಮದ ಮತ್ತು ಅರಿಷಡ್ವರ್ಗಗಳಲ್ಲಿ ಯಾವ ಒಂದರ ದಾಳಿಗೆ ಮನುಷ್ಯ ತುತ್ತಾದರೂ ಬದುಕುವುದು ಕಷ್ಟಸಾಧ್ಯ. ಆದರೆ, ಈ ಎಲ್ಲವುಗಳ ಹಿಡಿತದಲ್ಲಿ ಆಧುನಿಕ ಮಾನವರು ಬಂಧಿಯಾಗಿದ್ದಾರೆ. ಇದರ ದುಷ್ಪರಿಣಾಮವನ್ನು ನಾವೀಗ ಕಣ್ಣೆದುರು ಕಾಣುತ್ತಿದ್ದೇವೆ.

ಹುಸಿ ಮರ‍್ಯಾದೆಗೆ ಅಂಜುವ ಬದಲು ಬಂದದ್ದೆಲ್ಲವನ್ನೂ ಗೌರವದಿಂದ ಸ್ವೀಕರಿಸುವ ಉದಾರತೆ ನಮಗಿಂದು ರೂಢಿಯಾಗಬೇಕಿದೆ. ಇದುವರೆಗೆ ನಡೆದ ಇಂತಹ ಹತ್ಯೆಗಳಿಗೆ ಕಾರಣರಾದವರು ಈಗ ಸಮಾಜದಲ್ಲಿ ಅಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗಾದರೆ ಅವರು ಹತ್ಯೆಯ ಮೂಲಕ ಸಾಧಿಸಬೇಕೆಂದಿದ್ದ ಗೌರವ, ಈಗ ಇದ್ದುದಕ್ಕಿಂತ ಪಾತಾಳ ಸೇರಿದಂತಾಗಲಿಲ್ಲವೇ? ಇಂತಹ ಸಾಮಾನ್ಯ ಪ್ರಜ್ಞೆಯಿಂದ ಯೋಚಿಸಬೇಕಾಗಿದೆ. ಆಗ ಇಂತಹ ಹತ್ಯೆಗಳು ನಿಲ್ಲುವ ಸಾಧ್ಯತೆಗಳಿವೆ.

ಮರ್ಯಾದೆಗೇಡು ಹತ್ಯೆಗಳ ಹಿಂದೆ ಕೆಲಸ ಮಾಡುತ್ತಿರುವುದು ಮೂಢನಂಬಿಕೆ. ವೈಚಾರಿಕತೆಯ ಕೊರತೆಯಿಂದ ಅಮಾನವೀಯವಾಗಿ ವರ್ತಿಸಿ, ನೋಡುವವರ ಕಣ್ಣಿಗೆ ಹೀನಾಯವಾಗಿ ಕಾಣುತ್ತೇವೆ ಎಂಬ ಕಾರಣಕ್ಕೆ ಕರುಳ ಕುಡಿಗಳನ್ನು ಕೊಂದೆಸೆಯತೊಡಗಿದ್ದಾರೆ. ಆನಂತರ ಕೂಡ ದುರಂತಕ್ಕೆ ಕೆಲವು ಕುಟುಂಬಗಳು ಬಲಿಯಾಗುತ್ತಿವೆ. ತಾವು ತಮ್ಮ ಗೌರವವನ್ನು ಉಳಿಸಿಕೊಳ್ಳುವ ಸಲುವಾಗಿ ತೆಗೆದುಕೊಂಡ ಬಲಿಯಿಂದಾಗಿ ಸ್ವತಃ ತಾವೂ ಬಲಿಯಾಗುವುದು ತಪ್ಪುವುದಿಲ್ಲವೆಂಬ ವೈಚಾರಿಕ ತಿಳಿವಳಿಕೆ ನಮ್ಮದಾಗಬೇಕಿದೆ.

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು

ಕೊಂದಹರೆಂಬುದನರಿಯದೆ

ಬೆಂದ ಒಡಲ ಹೋಯಿತ್ತು

ಅದಂದೆ ಹುಟ್ಟಿತ್ತು ಅದಂದೆ ಹೊಂದಿತ್ತು

ಕೊಂದವರುಳಿವರೆ ಕೂಡಲಸಂಗಮದೇವಾ

  • ಬಸವಣ್ಣ

ಬಸವಣ್ಣನ ಹಬ್ಬಕ್ಕೆ ತಂದ ಹರಕೆಯ ಕುರಿಯಂತೆ ಮರ್ಯಾದೆಗೇಡು ಹತ್ಯೆ ಮಾಡಿದವರು ಕೂಡ ಕಾಲವಶರಾಗಲೇಬೇಕು. ಜಾತಿ, ಮತ, ಧರ್ಮ, ಆಸ್ತಿ, ಅಂತಸ್ತು, ಐಶ್ವರ್ಯ, ಮೇಲುಕೀಳು ಎಂಬ ಅಹಂಕಾರ, ಕೀಳರಿಮೆಗಳನ್ನು ತೊರೆದು ಪ್ರೀತಿಸಿದ ಯುವ ಜನಾಂಗಕ್ಕೆ ಘನತೆಯಿಂದ ಬದುಕುವ ಅವಕಾಶವನ್ನು ಈ ಸಮಾಜ ಸೃಷ್ಟಿಮಾಡಿಕೊಡಬೇಕು. ಆ ಮೂಲಕ ಭಾರತವನ್ನು ಸಂವಿಧಾನದ ಆಶಯವಾದ ಜಾತ್ಯತೀತ, ಧರ್ಮನಿರಪೇಕ್ಷ ದೇಶವನ್ನಾಗಿಸಲು ಸಾಧ್ಯ.

  • ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ