ಮೈಸೂರು ನಗರದಲ್ಲಿರುವ ನಾರಾಯಣ ಶಾಸ್ತ್ರಿ ರಸ್ತೆ ಬಳಿಯ ಶತಮಾನದ ಸರ್ಕಾರಿ ಶಾಲೆಯನ್ನು ಕಡೆವಿ ಆ ಜಾಗದಲ್ಲಿ ವಿವೇಕಾನಂದ ಸ್ಮಾರಕವನ್ನು ನಿರ್ಮಿಸಲು ರಾಮಕೃಷ್ಣ ಆಶ್ರಮ ಹೊರಟಿದೆ. ಇದಕ್ಕೆ ಸಂಘ ಪರಿವಾರದ ಆಸ್ಥಾನ ವಿದ್ವಾಂಸ ಎಸ್.ಎಲ್.ಭೈರಪ್ಪ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ. ಇದು ಕೇವಲ ಸರ್ಕಾರಿ ಶಾಲೆ ಮಾತ್ರವಲ್ಲ. ಹತ್ತನೇ ಚಾಮರಾಜ ಒಡೆಯರ್ 1893ರಲ್ಲಿ ಆರಂಭಿಸಿದ ದೇಶದಲ್ಲಿ ಪ್ರಥಮ ಬಾಲಕಿಯರ ಶಾಲೆಯೂ ಹೌದು.
ಸ್ವಾಮಿ ವಿವೇಕಾನಂದರು ಅಂದಿನ ಮೈಸೂರು ರಾಜ್ಯ ಅಥವಾ ಸಂಸ್ಥಾನಕ್ಕೆ 1892ರ ನವಂಬರ್ ತಿಂಗಳಲ್ಲಿ ಪ್ರಥಮವಾಗಿ ಭೇಟಿ ನೀಡಿದ್ದರು. ನಾನು ಇತ್ತೀಚೆಗೆ ಆದಿಚುಂಚನಗಿರಿ ವಿ.ವಿ.ಯ. ವಿಕಸನ ಮಾಲಿಕೆಗೆ ಭೈರವಿ ಕೆಂಪೇಗೌಡರ ಕುರಿತು ಕೃತಿ ರಚಿಸಿಕೊಟ್ಟಿದ್ದು ಆ ಕೃತಿಯಲ್ಲಿ ಸ್ವಾಮಿ ವಿವೇಕಾನಂದ ಮತ್ತು ಭೈರವಿ ಕೆಂಪೇಗೌಡರ ಕುರಿತು ಒಂದು ಸುಧೀರ್ಘ ಅಧ್ಯಾಯವನ್ನು ಬರೆದಿದ್ದಾನೆ. ಇವರಿಬ್ಬರ ಒಡನಾಟ ದಾಖಲಿಸಲು ಮೈಸೂರು ಅರಮನೆ ಸಂಗ್ರಹಾಲಯ, ವಿ.ವಿ. ಗ್ರಂಥಾಲಯ ಮತ್ತು ಕೊಲ್ಕತ್ತಾ ನಗರದ ಶ್ಯಾಮ್ ಬಜಾರ್ ಪ್ರದೇಶದಲ್ಲಿರುವ ವಿವೇಕಾನಂದರ ನಿವಾಸ, ಅಲ್ಲಿನ ರಾಮಕೃಷ್ಣ ಆಶ್ರಮ ಮತ್ತು ಕಾಳಿಘಾಟ್ ಸಮೀಪ ಹೂಗ್ಲಿ ನದಿ ದಂಡೆಯಲ್ಲಿರುವ ಹತ್ತನೇ ಚಾಮರಾಜ ಒಡೆಯರ್ ಅವರ ಸಮಾಧಿ ( ಮೈಸೂರು ಗಾರ್ಡನ್) ಇವುಗಳಿಗೆ ಭೇಟಿ ನೀಡಿದ್ದೀನಿ.
ಹದಿನಾರು ಮಂದಿ ರಾಮಕೃಷ್ಣ ಪರಮಹಂಸರ ಶಿಷ್ಯರ ಜೊತೆ ಬೆಂಗಳೂರಿಗೆ ಬಂದಿದ್ದವಿವೇಕಾನಂದರನ್ನು ಅಂದಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಮೈಸೂರು ನಗರಕ್ಕೆ ಆಮಂತ್ರಿಸಿದರು. ಒಟ್ಟು ಹದಿನೈದು ದಿನಗಳ ಕಾಲ ಇದ್ದ ವಿವೇಕಾನಂದರು ಮೊದಲು ಒಂದೆರೆಡು ದಿನ ನಿರಂಜನ ಮಠ ಎಂಬಲ್ಲಿ ವಾಸ್ತವ್ಯ ಹೂಡಿದ್ದರು. ಈಗಿನ ಶಾಲೆಯ ಆವರಣದಲ್ಲಿ ಮಠವಿತ್ತು. ಆದರೆ, ಅಲ್ಲಿನ ವ್ಯವಸ್ಥೆ ನೋಡಿ ಬೇಸರಗೊಂಡ ಶೇಷಾದ್ರಿ ಅಯ್ಯರ್ ತಮ್ಮನಿವಾಸಕ್ಕೆ ಹೊಂದಿಕೊಂಡಂತೆ ಇದ್ದ ಅರಮನೆಯ ಅತಿಥಿ ಗೃಹಕ್ಕೆ ವಿವಾಕಾನಂದರನ್ನು ಕರೆಸಿ ಅಲ್ಲಿಯೇ ಉಳಿಯುವಂತೆ ಮಾಡಿದರು. ಇಲ್ಲಿ ಹಾಕಲಾಗಿರುವ ವಿವೇಕಾನಂದರ ಚಿತ್ರ ಅರಮನೆ ಅತಿಥಿ ಗೃಹದಲ್ಲಿ ತೆಗೆಯಲಾದ ಚಿತ್ರ.


ಹತ್ತನೇ ಚಾಮರಾಜ ಒಡೆಯರ್ ಅತಿಥಿಯಾಗಿದ್ದ ವಿವೇಕಾನಂದರು ಸದ್ವಿದ್ಯಾ ಶಾಲೆಯ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಒಂದು ದೊರೆಗಳ ಜೊತೆ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದಾಗ ದೇವಿಯ ಸನ್ನಿಧಿಯಲ್ಲಿ ಕುಳಿತು ಹಾಡುತ್ತಿದ್ದ ಭೈರವಿ ಕೆಂಪೇಗೌಡರ ಗಾಯನಕ್ಕೆ ವಿವೇಕಾನಂದರು ಮರುಳಾದರು.
ಸ್ವಾಮಿ ವಿವೇಕಾನಂದರು ಕೇವಲ ಹಿಂದೂ ಸನ್ಯಾಸಿ ಮಾತ್ರವಾಗಿರದೆ ಒಳ್ಳೆಯ ಗಾಯಕರಾಗಿದ್ದು. ಜೊತೆಗೆ ತಬಲಾ ವಾದಕರಾಗಿದ್ದರು. ಅರಮನೆಯಲ್ಲಿ ಪ್ರತಿ ದಿನ ಸಂಗೀತ ಕಚೇರಿ ಏಪರ್ಡಿಸುತ್ತಿದ್ದರು. ಒಂದು ದಿನ ಭೈರವಿ ಕೆಂಪೇಗೌಡರ ಕಚೇರಿಯೂ ನಡೆಯಿತು. ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಬ್ಯಾಂಡ್ ಇರುವುದನ್ನು ನೋಡಿ ಸಂತೋಷ ಪಟ್ಟರು. ಅಷ್ಟು ಮಾತ್ರವಲ್ಲದೆ ಪ್ರತಿವರ್ಷ ಈಸ್ಟ್ ಇಂಡಿಯಾ ಕಂಪನಿಯ ಜೊತೆಗೆ ವ್ಯವಹಾರಕ್ಕೆ ಕೊಲ್ಕತ್ತಾ ನಗರಕ್ಕೆ ಬರುವ ದೊರೆಗಳು ಮುಂದಿನ ಬಾರಿ ಬರುವಾಗ ಜೊತೆಯಲ್ಲಿ ಭೈರವಿ ಕೆಂಪೇಗೌಡರನ್ನು ಕರೆತರಬೇಕೆಂದು ಹೇಳಿ ಹೋದರು.
1894ರಲ್ಲಿ ಚಾಮರಾಜ ಒಡೆಯರ್ ಮದ್ರಾಸ್ ಮೂಲಕ ಕೊಲ್ಕತ್ತಾ ನಗರಕ್ಕೆ ಹೋದಾಗ ವಿವೇಕಾನಂದರು ಅಮೇರಿಕಾ ಪ್ರವಾಸ ಹೋಗಿದ್ದರು. ಜೊತೆಯಲ್ಲಿ ಕೆಂಪೇಗೌಡರು ಸಹ ಹೋಗಿದ್ದರು. ಅದೇ ವೇಳೆಗೆ ಚಾಮರಾಜ ಒಡೆಯರ್ ಗಂಟಲು ಬೇನೆ ಕಾಯಿಲೆಗೆ ತುತ್ತಾಗಿ ಕೊಲ್ಕತ್ತಾ ನಗರದಲ್ಲಿ ಮೃತ ಪಟ್ಟರು. ನಂತರ ಈಸ್ಟ್ ಇಂಡಿಯಾ ಕಂಪನಿಯು ರಾಣಿ ಲಕ್ಷ್ಮಮ್ಮಣ್ಣಿ, ಪುತ್ರ ಹಾಗೂ ಬಾಲಕನಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರನ್ನು ನಗರಕ್ಕೆ ಕರೆಸಿಕೊಂಡು ಹೂಗ್ಲಿನದಿ ದಡದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ನಂತರ ಮೈಸೂರು ಸಂಸ್ಥಾನಕ್ಕೆ ಹತ್ತು ಎಕರೆ ಭೂಮಿಯನ್ನು ನೀಡಿ, ಅಮೃತಶಿಲೆಯಲ್ಲಿ ಚಾಮರಾಜ ಒಡೆಯರ ಸಮಾಧಿ ಹಾಗೂ ಸ್ಮಾರಕಗಳನ್ನು ನಿರ್ಮಿಸಲು ಬ್ರಿಟಿಷ್ ಸರ್ಕಾರ ನೆರವಾಯಿತು.
ಒಡೆಯರ್ ಸಾವಿನ ಸುದ್ದಿ ತಿಳಿದ ವಿವೇಕಾನಂದರು ಅಮೇರಿಕದಿಂದ ಪತ್ರ ಬರೆದು ಲಕ್ಷ್ಮಣ್ಣಿಯವರಿಗೆ ಸಂತಾಪ ಸೂಚಿಸಿದರು. ಅದಕ್ಕೂ ಮುನ್ನ ಒಡೆಯರ್ ಅವರಿಗೆ ಮೂರು ಬಾರಿ ಪತ್ರ ಬರೆದು ಮೈಸೂರು ಸಂಸ್ಥಾನದ ಪ್ರಗತಿ ಬಗ್ಗೆ ಕೊಂಡಾಡಿದ್ದರು. ಒಡೆಯರ್ ಸಾವಿನಿಂದ ಧೃತಿಗೆಟ್ಟ ಭೈರವಿ ಕೆಂಪೇಗೌಡರು ವಾಪಸ್ ಮೈಸೂರಿಗೆ ಬಾರದೆ ಹಿಮಾಲಯ ಯಾತ್ರೆ ಹೊರಟರು.
ವಿವೇಕಾನಂದರು ಕೊಲ್ಕತ್ತಾ ನಗರಕ್ಕೆ ಬಂದಿರುವ ಸುದ್ದಿ ತಿಳಿದು ವಾಪಸ್ ಕೊಲ್ಕತ್ತಾ ನಗರದ ಬೇಲೂರು ಮಠಕ್ಕೆ ಬಂದರು. ಕೆಂಪೇಗೌಡರನ್ನು ನಾಲ್ಕು ತಿಂಗಳ ಕಾಲ ತಮ್ಮ ಬಳಿ ಇರಿಸಿಕೊಂಡಿದ್ದ ವಿವೇಕಾನಂದರು, ತಮ್ಮ ವೃದ್ಧ ತಾಯಿಯ ತೀರ್ಥಯಾತ್ರೆಗೆಂದು ಅಸ್ಸಾಂನ ಗೌಹಾತಿ, ತ್ರಿಪುರಾ ಮತ್ತು ಈಗಿನ ಬಾಂಗ್ಲಾದ ಚಿತ್ತಗಾಂಗ್ ಪಟ್ಟಣಗಳಿಗೆ ಭೇಟಿ ನೀಡಿದಾಗ ಜೊತೆಯಲ್ಲಿ ಕೆಂಪೇಗೌಡರನ್ನು ಕರೆದೊಯ್ದು ಅವರ ಸಂಗೀತವನ್ನು ಮನದುಂಬಿ ಆಲಿಸಿದರು.
ಒಮ್ಮೆ ಅಗರ್ತಲಾ ನಗರದಲ್ಲಿ ಬ್ರಿಟಿಷ್ ಅಧಿಕಾರಿಯ ಅತಿಥಿಯಾಗಿ ಉಳಿದುಕೊಂಡಿದ್ದಾಗ, ಗೌಡರ ಸಂಗೀತ ಕೇಳಿ ಆಶ್ಚರ್ಯ ಪಟ್ಟ ಅಧಿಕಾರಿಗೆ ಸ್ವಾಮಿ ವಿವೇಕಾನಂದರು ಭಾರತದ ಬಹುಮುಖಿ ಸಂಸ್ಕೃತಿಯ ವಿಶೇಷವನ್ನು ಮನದಟ್ಟು ಮಾಡಿಕೊಟ್ಟರು. ನಂತರದ ದಿನಗಳಲ್ಲಿ ಗೌಡರು ಕರ್ನಾಟಕಕ್ಕೆ ಬಂದರು. ಇದು ದಾಖಲಾಗಿರುವ ಇತಿಹಾಸದ ಪುಟಗಳು.
ಮೈಸೂರಿಗೆ ವಿವೇಕಾನಂದರು ಭೇಟಿ ನೀಡಿದ ನೆನಪಿಗಾಗಿ ಸ್ಮಾರಕ ನಿರ್ಮಿಸಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ಉಳಿದುಕೊಂಡಿದ್ದರು ಎಂಬ ಕಾರಣಕ್ಕೆ ಶಾಲೆಯನ್ನು ಕೆಡವಿ ಸ್ಮಾರಕ ನಿರ್ಮಿಸಬೇಕೆ? ಬಾಲಕಿಯರ ಶಾಲೆ ಆರಂಭವಾದ ಸುದ್ದಿ ತಿಳಿದು ದೊರೆಗಳಿಗೆ ಪತ್ರ ಬರೆದು ಅಭಿನಂದಿಸಿದ್ದ ವಿವೇಕಾನಂದರು ಈಗ ಬದುಕಿದ್ದರೆ ಶಾಲೆಯ ಉಳಿವಿಗಾಗಿ ಕೈ ಎತ್ತುತ್ತಿದ್ದರು.
ರಾಮಕೃಷ್ಣ ಆಶ್ರಮದವರು ಹಿಂದೂ ಮೂಲಭೂತವಾದಿಗಳೊಂದಿಗೆ ಗುರುತಿಸಿಕೊಳ್ಳದೆ ಮೈಸೂರು ನಗರದಲ್ಲಿ ಬೇರೆಡೆ ಸ್ಮಾರಕ ನಿರ್ಮಿಸಲಿ. ಅಯೋಧ್ಯೆಯ ಬಾಬರಿಮಸೀದಿಯ ಕೆಳಗೆ ರಾಮ ಮಂದಿರ ಇತ್ತು ಎಂದು ಮುವತ್ತು ವರ್ಷ ಬೊಬ್ಬೆ ಹಾಕಿದ ಮೂರ್ಖರಿಗೆ ಅಲ್ಲಿ ಸಿಕ್ಕಿದ್ದು ರಾಮ ಮಂದಿರ ಅವಶೇಷಗಳಲ್ಲ ಸರಯೂ ನದಿಯ ಜಲತಾಣ.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು